Sunday, 12 February 2017

ಬೇಂದ್ರೆ - ಯರ್ಮುಂಜ ಎರಡು ಪದ್ಯಗಳು

ಯಾಕೆ ಕಾಡುತ್ತವೆ ಈ ಕವನಗಳು? ಅರಳಿಸುತ್ತಾ, ಯೋಚನೆಗೆ ಹಚ್ಚುತ್ತಾ, ಮೈಮರೆಸುತ್ತಾ, ನೋಯಿಸುತ್ತಾ, ಬೇಯಿಸುತ್ತಾ.... ಕಾಡುತ್ತಲೇ ಕಾಡುತ್ತಲೇ...  ಇವುಗಳನ್ನು ನಾನು ಮತ್ತೆ  ಕೈಗೆತ್ತಿಕೊಳ್ಳುವಂತೆ ಮಾಡುತ್ತವೆ. ಮತ್ತೆ ಓದುತ್ತೇನೆ, ಮತ್ತೆ ಮತ್ತೆ ಓದುತ್ತೇನೆ. ಮಗು ಅದೆಷ್ಟೇ ಹಟ ಮಾಡಿದರೂ, ದಣಿಸಿದರೂ ಆಪ್ಯಾಯವಾಗಿ ಕೈಗೆತ್ತಿಕೊಳ್ಳುವ ಅಮ್ಮನಂತೆ, ಅಮ್ಮ ಎಷ್ಟೇ ಬೈದರೂ, ತಳ್ಳಿದರೂ ಮತ್ತೆ ಅಮ್ಮನನ್ನು ಅಪ್ಪುವ ಮಗುವಂತೆ.

ಉತ್ಕಟ ಪ್ರೀತಿಯ ಹುಡುಕಾಟದ ಪದ್ಯಗಳೆಷ್ಟಿರಬಹುದು. ಬಯಸಿದ ಜೀವ ದಕ್ಕದೇ ಹೋದದ್ದು .. ಒಲಿದ ಜೀವ ದೂರಾಗಿ ನಿಂತದ್ದು... ಅಭೇದ್ಯ ಎನ್ನಿಸಿದ ಸಂಬಂಧವಿದ್ದ ಜೀವ ಕಣ್ಮರೆಯಾಗಿ ಹೋದದ್ದು ..
ನೂರಾರು? ಸಾವಿರಾರು? ಲಕ್ಷಾಂತರ?
ಇರಬಹುದೇನೋ.. ಹುಡುಕಾಟವೇ ಹಾಗೆ.. ಅದರಲ್ಲೂ ಪ್ರೀತಿಯ..ಪ್ರೀತಿಸಿದವನ..ಪ್ರೀತಿಸಿದವಳ ಹುಡುಕಾಟ ಅನವರತ... ಯಾರ ವಿರೋಧವನ್ನೂ ಲೆಕ್ಕಿಸದೇ.. ಎಲ್ಲ ಕಟ್ಟುಪಾಡುಗಳನ್ನೂ ಮೀರಲೆತ್ನಿಸುತ್ತಾ..
ಮೀರಲಾಗದೇ.. ಮೀರದಿರಲಾಗದೇ..

ಬಾರದಿರುವ ಪ್ರೇಮಿಯನ್ನು ಹುಡುಕುವ ಪದ್ಯಗಳಲ್ಲಿ ಥಟ್ಟನೆ ನೆನಪಾಗುವ ಪದ್ಯವೆಂದರೆ ಬೇಂದ್ರೆಯವರ ಇನ್ನೂ ಯಾಕ ಬರಲಿಲ್ಲವ್ವ . ಅದೊಂದು ಗತಿಸಿಹೋದ ಪ್ರಿಯಕರನ ನೆನಪಲ್ಲಿ ಪ್ರೇಯಸಿಯೊಬ್ಬಳು ಮಾಡುವ ಆಕ್ರಂದನದಂತೆ ಒಂದು ನಾಟಕಕ್ಕಾಗಿ ಬರೆದಿದ್ದಾರೆಂದು,ವೇಶ್ಯೆಯೊಬ್ಬಳು ತನ್ನ ಶ್ರೀಮಂತ ಗಿರಾಕಿ ಕೈ ತಪ್ಪಿ ಹೋಗಿದ್ದಕ್ಕೆ ಚಿಂತಿಸುತ್ತಾ ಗೋಳಾಡುತ್ತಿರುವ ಪದ್ಯವೆಂದೂ  ಕೆಲವರು ವಾದಿಸುತ್ತಿದ್ದುದನ್ನು ಕೇಳುವ ಹೊತ್ತಿಗಾಗಲೇ ನಾನು ಕುರ್ತಕೋಟಿಯವರ ವಿಮರ್ಶೆ ಓದಿದ್ದೆ. ಎಷ್ಟೇ ಪ್ರಯತ್ನಿಸಿದರೂ ಇಂದಿಗೂ ಆ ಪದ್ಯವನ್ನು ಅವರ ವಿಮರ್ಶೆಯ ಪ್ರಭಾವದಿಂದ ತಪ್ಪಿಸಿಕೊಂಡು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಲು ನನಗೆ ಸಾಧ್ಯವೇ ಆಗಿಲ್ಲ.

ಆ ಕವನದಲ್ಲಿ ಎಲ್ಲವನ್ನೂ ಅವಳೇ ಹೇಳುತ್ತಾ ಹೋಗುತ್ತಾಳೆ. ಅವನ ಮೋಹ, ಅವಳ ಪ್ರೇಮ..ಈ ಕವನದ ಮೊದಲ ಸಾಲಲ್ಲೇ .. . ಅವನೊಬ್ಬ ಬಂದಿಲ್ಲ .. ಅವಳು ಅವನಿಗಾಗಿ ಕಾಯುತ್ತಿದ್ದಾಳೆ .. ಪ್ರಶ್ನಿಸುತ್ತಿದ್ದಾಳೆ .. ಇನ್ನೂ ಎಂಬ ಪದದಲ್ಲೇ ಅವನ ಬರುವಿಕೆಯ ಕುರಿತ ಅವಳ ತಳಮಳ ಕಾತುರ ಹಂಬಲದ ಸ್ಪಷ್ಟ ಚಿತ್ರಣ ..  ಅವನು ಮೊದಲು ಅಲ್ಲಿಗೆ ಬಂದವನು.. ಅವಳನ್ನು ಭೇಟಿ ಮಾಡಿದವನು, ಅವನ ಬರುವಿಕೆಗಾಗಿ ಅವಳನ್ನು ಕಾಯುವಂತೆ ಮಾಡಿದವನು.. ಅಷ್ಟೇ ಅಲ್ಲ ,

ಅವನು ಅವಳೂರಿನವನಲ್ಲ .. ಹುಬ್ಬಳ್ಳಿಯವನು. ಅವಳದ್ದೂ ಹುಬ್ಬಳ್ಳಿಯೇ ಆಗಿದ್ದರೆ ಅವಳು ಅವನನ್ನು ಹಾಗೆ ಕರೆಯುತ್ತಿರಲಿಲ್ಲ. ಅವಳೂರಿನವನಲ್ಲದವನಿಗಾಗಿ ಅವಳು ಕಾಯುತ್ತಿದ್ದಾಳೆ .. ಅವನು ಬರುತ್ತಾನೆಂಬ ನಿರೀಕ್ಷೆಯೇಕೆ? ಎರಡನೆಯ ಸಾಲು ಉತ್ತರವೀಯುತ್ತದೆ ... ಅವನು ಬರೀ ಒಮ್ಮೆ ಮಾತ್ರ ಸಿಕ್ಕವನಲ್ಲ ಅವಳಿಗೆ. ವಾರದಲ್ಲಿ ಮೂರು ಬಾರಿ ಇವಳಿದ್ದಲ್ಲಿಗೆ ಬಂದವನು !

ಮೊದಲ ಎರಡು ಸಾಲಿನಲ್ಲಿ ಹೀಗೆ ಬೇಂದ್ರೆ ಅದೆಷ್ಟು ವಿವರಗಳನ್ನು ಕಟ್ಟಿಕೊಡುತ್ತಾರೆ ನೋಡಿ. ಅವನು ಬೇರೆ ಊರಿನವನು.. ಮೊದಲು ಅವಳ ಬಳಿ ಬಂದು ಅವಳನ್ನು ಅವನಿಗಾಗಿ ಕಾಯುವಂತೆ ಮಾಡಿದವನು. ಅವನು ಅವಳವನಲ್ಲ.  ವಾರದಲ್ಲಿ ಮೂರು ಬಾರಿ ಮಾತ್ರ ಬರುವ ನಲ್ಲ. ಉಳಿದ ದಿನಗಳ ಬಗ್ಗೆ ಅವಳೇನೂ ಹೇಳುವುದಿಲ್ಲ. ಅವಳೊಂದಿಗೆ ಪ್ರತಿದಿನ ಇರುವವನಲ್ಲ, ಬದುಕು ಹಂಚಿಕೊಂಡವನಲ್ಲ,  ಅವನಿನ್ನೂ ಬಂದಿಲ್ಲ !
 ಅವನೊಬ್ಬ ರಸಿಕ, ಒಳ್ಳೆಯ ದಿರಿಸು ಧರಿಸಿದವ.. ತುಂಬು ಮೀಸೆಯ ಮೋಹನಾಂಗ.. ಮಾತು ಮಾತಿಗೂ ನಗಿಸಿದವ .. ಕಚಗುಳಿಯಿಟ್ಟಂತೆ ಏನೋ ಅಂದ ಮಾತಿಗೆ ಮತ್ತಿನ್ನೇನೋ ಕಟ್ಟಿ ಪುಳಕ ಗೊಳಿಸಿದವ..ರಮಿಸಿದವ ...ಅವಳಿಗಾಗಿ ಹಾಡುವವ ... ಇನ್ನೂ ಬಂದಿಲ್ಲ.

ಇವಳೊಬ್ಬ ಜೋಗತಿ . ದೇವರಿಗೆ ಬಿಟ್ಟವಳು..ಇವನು ಬಂದಿದ್ದಾನೆ .. ಇವನೂ ಕೇವಲ ಕತ್ತಲ ವ್ಯವಹಾರ ಬಯಸಿ ಬಂದವನಲ್ಲ.. ಅವಳ ಮೇಲೆ ಅವನಿಗೂ ಮೋಹ .. ಅವನಿಗೆ ಇವಳು ಮೊದಲನೆಯವಳಲ್ಲ .. ಇವಳಿಗೆ ಅವನು ? ಗೊತ್ತಿಲ್ಲ.. ಅವನು ಕಸಬಿಯರನ್ನು ಬಸವಿಯರನ್ನು ದಾಟಿ ಬಂದಿದ್ದಾನೆ.... ಆ ಪಯಣದಲ್ಲಿ ಇವಳು ಸಿಕ್ಕಿದ್ದಾಳೆ.. ಜೋಗತಿಯರಿಗೆ ಮೂಗುತಿಯಂತಹಾ ಅವಳು ಅವನಿಗಿಷ್ಟವಾಗಿದ್ದಾಳೆ.. ಹಾಗಾಗಿಯೇ ವಾರದಲ್ಲಿ ಮೂರು ಬಾರಿ ಬಂದಿದ್ದಾನೆ... ಈಗ ಬರುತ್ತಿಲ್ಲ..!

ಇರು ಎಂದರೆ ಎದ್ದು ಹೊರಟವನು .. ಇವಳ ಮೊಗ ಬಾಡಿದೊಡನೆ ಇದ್ದು ರಮಿಸಿದವನು .. ಬೆರಳಿಗುಂಗುರವಿಟ್ಟು ಮೂಗಿಗೆ ನತ್ತಿಟ್ಟವನು.. ಜನ್ಮಜನ್ಮಕ್ಕೂ ಗೆಳೆಯನಾಗಿ ಬರುತ್ತೇನೆಂದವನು .. ಹುಟ್ಟಿನಿಂದಲೇ ನಗುಮೊಗ ಹೊತ್ತವನು ಈ ಗೆಳತಿಯನ್ನು ಎದೆಯ ಮೇಲಿಟ್ಟುಕೊಂಡವನು.... ಬಂದಿಲ್ಲ.. ಬರುತ್ತಿಲ್ಲ..!

ಏಕೆ ಬರುತ್ತಾನೆ .. ಬರುವುದಿಲ್ಲ ಅವನು.. ಕಸಭೆಯರನ್ನು ಬಸವಿಯರನ್ನು ಬಿಟ್ಟು ಬಂದವನು ಇವಳನ್ನೂ ಬಿಟ್ಟು ಮುಂದೆ ಸಾಗಿದ್ದಾನೆ. ಇವಳು ಅವನ ಡೆಸ್ಟಿನೇಷನ್ ಅಲ್ಲ. ಪಯಣದ ಭಾಗ... ಪಯಣದಲ್ಲಿ ಸಿಕ್ಕ ರಮ್ಯತಾಣ.. ಇವಳ ರೀತಿ ಪ್ರೀತಿ ಅವನಿಗೂ ಇಷ್ಟವಾಗಿದೆ. ಅವಳಿಗೇನು ಬೇಕೆಂದೂ ಇವನಿಗರಿವಿದೆ. ಅದನ್ನೆಲ್ಲ ಬಹಳ ಚಾಣಾಕ್ಷತೆಯಿಂದ ಮಾಡಿದ್ದಾನೆ.ಅವಳಿಗೆ ಗರತಿಯಾಗುವ ಆಸೆಯಿತ್ತಾ . ಇವನ ಸತಿಯಾಗುವ ಬಯಕೆ?? ಬ್ಯಾಳಿ ಮಣಿ ಬೇಕೇ ಎಂದು ಕೇಳಿದ್ದಾನೆ. ಜೋಗತಿಯರ ಕೊರಳಲ್ಲಿ ತಾಳಿಮಣಿ ಮಾತ್ರವಿರುತ್ತದೆ..ಪತ್ನಿಗಿರುವ ಬ್ಯಾಳಿ ಮಣಿ ಇರುವುದಿಲ್ಲ.. ಹಿಡಿಯಲ್ಲಿ ರೊಕ್ಕ ತೆಗೆದು ಕೊಡುವವನಂತೆ ನಟಿಸಿದ್ದಾನೆ.. ಅವಳು ಕೈ ಚಾಚಿದಾಗ ಕೈ ಹಿಡಿದಿದ್ದಾನೆ.. ಅದನ್ನವಳು ದೂರೆಂಬಂತೆ ಹೇಳುತ್ತಿಲ್ಲ.. ರೊಕ್ಕ ಸಿಗದಿದ್ದರೆ ಬಗ್ಗೆ ಖೇದವಿಲ್ಲ. ಅವನು ಕೈ ಹಿಡಿದಿದ್ದರ ಬಗ್ಗೆ ಪುಳಕವಿದೆ .. ಅದೆಲ್ಲವನ್ನೂ ಅವಳು ಅವನೆಷ್ಟು ತನ್ನನ್ನು ಪ್ರೀತಿಸುತ್ತಿದ್ದ ಎಂಬ ಚಿತ್ರಣ ಕಟ್ಟಿಕೊಡಲು ಹೇಳುತ್ತಿದ್ದಾಳೆ. ಅವಳಿಗೆ ಅವನ ಪ್ರೀತಿಯ ಬಗ್ಗೆ ಅನುಮಾನವೇ ಇಲ್ಲ.. ಚಹಾದ ಜೋಡಿ ಚೂಡದಂಗ ಎಂಬ ಉಪಮೆ ಅವನ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅವನ ಬಳಿ ಚಹಾ ಇದೆ. ಇವಳು ಚೂಡಾ ಅಷ್ಟೇ. ಚಹಾಕ್ಕೆ ಚೂಡಾ ಇದ್ದರೆ ಸೊಗಸೇ .. ಇಲ್ಲದಿದ್ದರೂ ನಷ್ಟವೇನೂ ಇಲ್ಲ. ಅಗತ್ಯದ್ದಲ್ಲ . ಅನಿವಾರ್ಯವಲ್ಲ .. ಅಭೇದ್ಯವೂ ಅಲ್ಲ ! ..  ಆದರೆ ಅವಳಿಗೆ ಅವನು ಎದೆಯಲ್ಲಿ ನೆಟ್ಟುಬಿಟ್ಟಿದ್ದಾನೆ  ಕಣ್ಣಿರದೆ ಅಸ್ತಿತ್ವದಲ್ಲೇ ಇರದ ಕಣ್ಣಿನೊಳಗಿನ ಗೊಂಬೆಯಂತೆ!!!. ಬೆರಳಿಗೆ ಉಂಗುರವಿಟ್ಟವನು, ಮೂಗುಬೊಟ್ಟಿಟ್ಟವನು, ಜೋಗತೇರಿಗೆ ಮೂಗುತಿ ಇದ್ದಂತೆ ನನಗೆ ನೀನು ಅಂದವನು.. ಒಂದು ದಿನ ಬರುವುದನ್ನೇ ನಿಲ್ಲಿಸಿಬಿಡುತ್ತಾನೆ. ವಾರದಲ್ಲಿ ಮೂರು ದಿನ ಬರುತ್ತಿದ್ದವನಿಗೆ ಮತ್ತೆ ಬರುವ ಅಗತ್ಯ ಕಾಣುವುದಿಲ್ಲ. ಅಷ್ಟಕ್ಕೂ ಅವನು ಕಳೆದುಕೊಂಡದ್ದಾದರೂ ಏನು? ಉಂಗುರ, ಮೂಗುಬೊಟ್ಟು!!

ಇಲ್ಲಿ ಅವನು ಬರುವುದು ಯಾರಿಗೂ ಗೊತ್ತಿಲ್ಲದ್ದೇನಲ್ಲ.. ಅವಳು ಅನುಭವಿಸುವ ವೇದನೆ ಯಾರಿಂದಲೂ ಅವಳು ಮುಚ್ಚಿಡುತ್ತಲೂ ಇಲ್ಲ. ಅವಳಿಗಿದರ ಪರಿವೆಯೇ ಇಲ್ಲ. ಪ್ರೀತಿಯ ಪರಾಕಾಷ್ಟೆಯ ಅಮಲಿನಲ್ಲಿ ಅವಳಿಗೆ ಯಾರೂ ಕಾಣುತ್ತಿಲ್ಲ.
ಅವಳ ಆರ್ತತೆ ನೋವು..ಸಂಕಟ.. ಬಯಸಿ ಸಿಕ್ಕವನು... ಯಾಕೆ ಬರುತ್ತಿಲ್ಲ.ಎಂಬುದೂ ತಿಳಿಯದ ಹೆಣ್ಣು ಅವನನ್ನು ಹುಡುಕುತ್ತಾ ಬೀದಿಗಿಳಿಯುತ್ತಾಳೆ..ಗೆಳತಿಯರ ಬಳಿ ಅಂಗಲಾಚುತ್ತಾಳೆ.. ಎಲ್ಲಿದ್ದಾನೆ ..ಎಲ್ಲಿದ್ದಾನೆ ಎಂಬ ಹಾದಿಬೀದಿಗಿಳಿದು ಹುಡುಕುವ ಆರ್ತತೆ .. ಪದ್ಯ ಮುಗಿಸಿ ಕೆಳಗಿಡುವಾಗ ಕಣ್ಣಲ್ಲೆರಡು ಹನಿ.. ಹುಬ್ಬಳ್ಳಿಯವನನ್ನು ಎಳೆದೊಯ್ದು ಅವಳ ಮುಂದೆ ನಿಲ್ಲಿಸುವ ಹಂಬಲ.

 ಕಂಬನಿ ಆರುವ ಮುನ್ನ ಇಲ್ಲಿ ಇನ್ನೊಂದು ಪದ್ಯವಿದೆ ನೋಡಿ.

ಯಾರಿಲ್ಲಿಗೆ ಬಂದರು ಕಳೆದಿರುಳು
ಏ ಗಾಳಿ,
ಆ ಕಥೆಯನೊರೆದು ಮುಂದಕೆ ತೆರಳು

ಮೊದಲೇ ಕವಿ ಹೇಳಿಬಿಡುತ್ತಾನೆ.. ಇಲ್ಲೊಂದು ಕಥೆಯಿದೆ .. ಅದೂ ಅಂತಿಂಥಾ ಕಥೆಯಲ್ಲ.. ಹಿಂದಿನ ರಾತ್ರಿಯ ಕತೆ.. ರಾತ್ರಿಯಲ್ಲಿ ಯಾರೋ ಬಂದ ಕತೆ.. ಅವಳೊಂದಿಗಿದ್ದ ಕತೆ..
ಆ ಕತೆಯನ್ನು ಕೇಳಬೇಕಿದೆ.. ಹೇಳಬೇಕಾಗಿರುವುದು ಅವನೋ ಅವಳೋ ಇಬ್ಬರೂ ಅಲ್ಲ.. ಆ ಪ್ರಶ್ನೆ ಕೇಳುತ್ತಿರುವುದು ಅವಳಾ ... ಸ್ಪಷ್ಟವಿಲ್ಲ.. ಉತ್ತರಿಸಬೇಕಾಗಿರುವುದು ಗಾಳಿ.. ಅದೊಂದೇ ಹಿಂದಿನ ರಾತ್ರಿಯ ಎಲ್ಲಕ್ಕೂ ಸಾಕ್ಷಿಯಾಗಿರುವುದು. ಅದೊಂದೇ ಅವರಿಬ್ಬರನ್ನೂ ಬಳಸಿ..ಪ್ರತಿಕ್ಷಣದ ಮಿಡಿತವನ್ನು ಅನುಭವಿಸಿ ತಣ್ಣಗೆ ಮೌನವಾಗಿರುವುದು. ಅದೀಗ ತುಟಿಬಿಚ್ಚಬೇಕಿದೆ..ಮೌನ ಮುರಿಯಬೇಕಿದೆ. ಹಾಗೆಂದೇ ಕವಿ ಕೇಳುತ್ತಿದ್ದಾನೆ ಏ ಗಾಳಿ ಆ ಕಥೆಯನೊರೆದು ಮುಂದೆ ತೆರಳು.

ಅಲ್ಲಿ ನಸುಕಿನ ಬೆಳಕಿದೆ.... ಬಳಲಿಕೆಯಿದೆ..... ಅಲ್ಲಿ ಸಂಭ್ರಮವಿದೆ.. ಶೋಕವಿದೆ.. ತಲ್ಲಣ ಮಡುಗಟ್ಟಿದೆ... ಸುಪ್ತ ಪುಳಕವಿದೆ.. ಅಲ್ಲೀನಿದೆ ಏನಿಲ್ಲ? ಅಲ್ಲೇನಾಯಿತು.. ಅವನು ಬರಿದೇ ಬಂದು ಹೋದನಾ? ಯಾಕೆ ಬಂದ? ಬಂದವನು ಅವಳ ಕಿವಿಯಲ್ಲಿ ಪಿಸುಗುಟ್ಟಿದ್ದು ಮಾತ್ರವಾ? ಅದೊಂದಕ್ಕೇ ಅವಳನ್ನಿಷ್ಟು ಬೇಯಿಸುವ ಶಕ್ತಿಯಿದೆಯಾ?

ಮೈ ಗದಗುಟ್ಟುತ್ತಿದೆ..ಮುಖ ಕಣ್ಣೀರಿನಲ್ಲಿ ತೊಯ್ದಿದೆ.. ಹಾಗಿದ್ದರೆ ಅದು ಅವಳಿಗೆ ಯಾತನೆ ನೀಡಿದ ರಾತ್ರಿಯಾ? ಹಾಗೆಂದು ತೀರ್ಮಾನಿಸುವ ಮುನ್ನವೇ ಮುಂದಿನ ಸಾಲು. ಯಾರೂ ಕಾಣದ ಮರೆಯಲ್ಲಿ ಕುಲುಕುಲು ಎನುವ ಮೆಲುನಗೆಯ ನೊರೆ.. ಗುನುಗುನಿಸುತ್ತಲೆ ಇರುವ ನಿನ್ನೆಯ ಹಾಡಿನ ದನಿ!! ಅದೊಂದು ಮಧುರ ಯಾತನೆ.. ಯಾರೂ ಕಾಣದಂತೆ ಮುಚ್ಚಿಟ್ಟುಕೊಳ್ಳುವ ದಿವ್ಯ ಅನುಭವ. ಕಣ್ಣೀರು ಬರುತ್ತಿರುವುದು ಆ ರಾತ್ರಿ ಸಂಭವಿಸಿದ ಘಟನೆಗಾ? ಅಥವಾ ಆ ದಿವ್ಯ ರಾತ್ರಿ ಕಳೆದೇ ಹೋಯಿತೆಂಬ ತುಮುಲಕ್ಕಾ??

ಎಷ್ಟು ಪ್ರಶ್ನೆಗಳು.. ಉತ್ತರಿಸುವವರಾರು...ಕಂಡವರಾರು.. ಯಾರನ್ನು ಕೇಳುವುದು? ಅಲ್ಲಿ ನೋಡಿಯೂ ನೋಡದಂತೆ ಪರಸ್ಪರ ಕೂಕಾಟವಾಡುತ್ತಿರುವುದು ಮರಗಳು.. ಹಿಂದಿನ ರಾತ್ರಿ ಕಂಡದ್ದನ್ನು ನೆನೆದು ಒಂದನ್ನೊಂದು ನೋಡಿಕೊಳ್ಳಲೇ ಸಂಕೋಚ ಪಡುವಂತೆ  .  ಕಂಡ ಭೂಮಿಗೆ ಮೈಮರೆವು.. ಹಿಂದಿನ ದಿನದ ಗುಂಗಲ್ಲೇ ಮೈಮರೆತು ನಿಂತವು ಗಿಡಮರಗಳು. ಅಸಹಾಯಕ ಕವಿ ಯಾರನ್ನು ಕರೆಯುತ್ತಾನೆ? ಮೈ ಸವರಿದ ತಂಗಾಳಿಯ ನೇವರಿಕೆ ಅವನನ್ನು ಸಂತೈಸುತ್ತಿದೆ ಹಾಗಾಗಿಯೇ ಗಾಳಿಯನ್ನು ಕೇಳುತ್ತಿದ್ದಾನೆ.. ಏ ಗಾಳಿ ಆ ಕಥೆಯನೊರೆದು ಮುಂದೆ ತೆರಳು...

ಇದಿಷ್ಟೇ ಪ್ರಶ್ನೆಗಳಲ್ಲ.. ಅವನೊಬ್ಬ ಅಲ್ಲಿ ಬಂದಿದ್ದಾನೆ.. ರಾತ್ರಿಯ ಕತ್ತಲಲ್ಲಿ.. ಅದೂ ಪೂರ್ಣ ಕತ್ತಲಲ್ಲ ಅಲ್ಲಿ ಬೆಳದಿಂಗಳಿದೆ.. ತುಸು ತೋರುವ ತೋರದಂತಿರವ ಬೆಳದಿಂಗಳು.. ಅಲ್ಲೊಂದು ರಮ್ಯ ಲೋಕ ಸೃಷ್ಟಿಯಾಗಿದೆ.. ಅದು ಏಕ ಕಾಲಕ್ಕೆ ಅವಳಲ್ಲಿ ಮೆಲುನಗೆಯನ್ನೂ ಕಣ್ಣೀರನ್ನೂ ಸೃಷ್ಟಿಸಬಲ್ಲದ್ದಾಗಿದೆ. ಅಂಥಾ ಮಾರ್ದವ ಕಥೆಯನ್ನು ಯಾರಿಂದಾದರೂ ಕೇಳಬೇಕಿದೆ.. ಗಾಳಿಯಲ್ಲದೇ ಮತ್ತಾರು ಅದನ್ನು ಒರೆಯುವವರು?

ನೆನೆದು ನೆನೆದು ಪುಳಕಗೊಂಡಿದ್ದು ಅವನ ಮೈಯಾ ಅವಳದಾ? ಹೇಳಲಾರದೇ ದ್ವನಿ ನಡುಗುತ್ತಿರುವುದು ಯಾರದು? ತನ್ನದೇ ಅನುಭವವೆಂಬಂತೆ ಚಿತ್ರಿಸಿದ ಕವಿಯ ಸ್ವಂತ ಅನುಭವವಾ? ಏನಾಯಿತೆಂದು ನೆನಪಿದೆ.. ಏನಾಯಿತೆಂಬ ಪೂರ್ಣ ಅರಿವಿಲ್ಲದ ಸ್ಮೃತಿ ವಿಸ್ಮೃತಿ..... ಏನೂ ಅರಿಯದ ಮುಗ್ಧೆಯ ಕಿವಿಯಲ್ಲಿ ಪಿಸುನುಡಿದು ನಡೆದವನಾರು?

ಅವಳ ಕಿವಿಯಲ್ಲಿ ಪಿಸುಗುಟ್ಟಲು ಅವನು ರಾತ್ರಿಯನ್ನೇಕೆ ಆರಿಸಿಕೊಂಡ ? ಹಗಲು ಬರಬಹುದಿತ್ತಲ್ಲ. ಅವನು ಬಂದ ಮಾತ್ರಕ್ಕೆ ಅವಳು ಅವನನ್ನೇಕೆ ಭೇಟಿಯಾದಳು? ಅವಳು ಮನಸ್ಸು ಮಾಡದಿದ್ದರೆ ಅವಳನ್ನು ಅವನು ಆ ರಾತ್ರಿಯಲ್ಲಿ ಭೇಟಿ ಮಾಡಲು ಸಾಧ್ಯವಿಲ್ಲ.. ಅವಳಿಗೆ ಅವನು ಬರುವುದು ಗೊತ್ತಿರಬೇಕು.. ಅವಳಿಗೆ ಅವನು ಬರುವುದು ಬೇಕಿರಬೇಕು.. ಅವಳು ತಾನಿದ್ದ ಸ್ಥಳದಿಂದ ಅವನೆಡೆಗೆ  ಬರಬೇಕು. ಅವಳರಿವಿಲ್ಲದಂತೆ ಬಂದವನಲ್ಲ ಅವನು. ಹಾಗಾದರೆ ಬೆಳದಿಂಗಳ ರಾತ್ರಿಯಲ್ಲಿ ಅವಳನ್ನು ಭೇಟಿ ಮಾಡಿದವ ಹಗಲಲ್ಲಿ ಏಕೆ ಉಳಿಯಲಿಲ್ಲ?

ಅವರಿಗೆ ಬೇಕಿತ್ತೋ ಬೇಡವೋ ಬೆಳಕಾಗುತ್ತಿದೆ.. ಮೂಡಲದ ಹಣೆ ಕೆಂಪು ಕೆಂಪು. ಮೈ ಸವರುವ ತಂಗಾಳಿ.. ನಸುಕಿನ ಬೆಳಕು.. ಎಷ್ಟು ರಮ್ಯ.. ನಸುಕು ಎಂದಿಗೂ ಉತ್ಸಾಹದ ಹೊತ್ತು.. ಪ್ರಫುಲ್ಲತೆಯ ಹೊತ್ತು.. ನಿದ್ರೆ ಕಳೆದು ಮೈ ಹಗುರಾಗುವ ಹೊತ್ತು.. ಆದರೆ ಅಲ್ಲಿ?? ಬಳಲಿಕೆಯಿದೆ.. ಅವನೊಂದಿಗೆ ನಿದ್ರೆಯಿಲ್ಲದೆ ಆ ರಾತ್ರಿ ಕಳೆದಿದ್ದಕ್ಕೆ ಅವಳಿಗೆ ಬಳಲಿಕೆಯಾ? ಅವನು ಬಂದು ಹೋದ ನೆನಪು ಅವಳಲ್ಲಿ ಹುರುಪು ತುಂಬಬೇಕಿತ್ತು.. ಉಲ್ಲಾಸದ ಹೆಜ್ಜೆಯಿಡಿಸಬೇಕಿತ್ತು.. ಇಲ್ಲಿ ಅದನ್ನು ಕವಿ ಹೇಳುತ್ತಿಲ್ಲ. ಅಲ್ಲಿ ಬಳಲಿಕೆಯಿದೆ.. ಅಂದರೆ ಅಲ್ಲಿ ಆ ಬೆಳದಿಂಗಳ ರಾತ್ರಿಯಲ್ಲಿ ಅವರಿಬ್ಬರ ಸಮಾಗಮ ನಡೆದೇ ಹೋಯಿತಾ? ಅಲ್ಲಿ ಅವರಿಬ್ಬರೂ ಒಂದಾದರಾ? ಹಾಗಿದ್ದರೂ ಅದು ಅವಳಲ್ಲಿ ಪುಳಕದ ಜೊತೆಜೊತೆಗೆ ಕಣ್ಣೀರನ್ನೇಕೆ ತಂದಿದೆ.

ಅಥವಾ ಆ ನಸುಕಿನ ಬೆಳಕು ಮತ್ತೇನನ್ನೋ ಹೇಳುತ್ತಿದೆಯಾ? ಆ ಕತ್ತಲಿನ ರಾತ್ರಿ ಎಂಬುದು ಅವಳ ಬದುಕಿನ ಸ್ಥಿತಿಯನ್ನು ಬಿಂಬಿಸುತ್ತಿದೆಯಾ? ಅವಳ ಕತ್ತಲ ಬದುಕಿನಲ್ಲಿ ಅವನ ಆಗಮನ ಪಿಸುಗುಟ್ಟುವಿಕೆ ಬೆಳದಿಂಗಳು ಮೂಡಿಸಿತಾ? ಆ ಬೆಳದಿಂಗಳ ರಾತ್ರಿಯಲ್ಲಿ ಅವನು ಅವಳ ಹೃದಯಕ್ಕೆ ತಂಪೆರೆದನಾ? ಅವನ ಹೆಸರು ಕೊರೆದನಾ? ನಸುಗತ್ತಲಿನಲ್ಲಿ ಅವಳ ಕತ್ತಲ ಬದುಕಿನ ಅರೆಕೊರೆ ಕಳೆದನಾ? ಆ ಪ್ರೀತಿ ಬೆಳಗಾದ ಕೂಡಲೇ ಕಾಣಬಾರದ್ದಾ? ಬೆಳಗಾಗಿದ್ದೇ ಅವಳ ಬಳಲಿಕೆಗೆ ಕಾರಣವಾ? ಮೈ ಗದಗುಟ್ಟತೊಡಗಿದ್ದು ಬೆಳಕಿನ ದೈನಂದಿನ ಜೀವನದಲ್ಲಿ ಯಾರಿಗಾದರೂ ತಿಳಿದೀತೆಂಬ ಬೆದರಿಕೆಗಾ? ಯಾರೂ ಕಾಣದ ಮರೆಯೊಳಗೆ ಅವನ ನೆನಪು.. ನೆನಪು ತಂದ ಮೆಲುನಗೆಯ ನೊರೆ.. ಗುನುಗುನಿಸುವಂತೆ ಆವರಿಸಿದ ಅವನ ಪ್ರೀತಿ...

ಅದು ಪ್ರೀತಿಯೇ.. ಕಣ್ಣೀರು ಪುಳಕ ಎರಡನ್ನೂ ಒಟ್ಟೊಟ್ಟಿಗೆ ತಂದ ಪ್ರೀತಿ.. ಸುಪ್ತ..ಗುಪ್ತ ಪ್ರೀತಿ. ಇಷ್ಟೊಂದು ತಲ್ಲಣ ಇವಳು ಅನುಭವಿಸುತ್ತಿರುವ ಸಮಯದಲ್ಲಿ ಅವನೇನು ಮಾಡುತ್ತಿದ್ದಾನೆ? ಅವನೆಲ್ಲಿಗೆ ಹೋಗಿದ್ದಾನೆ? ದೂರದಲ್ಲಿ ನಿಂತು ಮೌನವಾಗಿ ಪ್ರೀತಿಸುತ್ತಿದ್ದಾನಾ? ಇವಳಿಗಾಗಿ ಹಂಬಲಿಸುತ್ತಿದ್ದಾನಾ? ಹಗಲಲ್ಲಿ ಬರಲಾಗದ.. ಅವಳ ಕಣ್ಣೊರೆಸಲಾಗದ ತನ್ನ ದುಸ್ಥಿತಿಗೆ ತಾನೇ ನೋಯುತ್ತಿದ್ದಾನಾ? ಯಾರೋ ಮೋಹನ ಯಾವ ರಾಧೆಗೊ ಎಂಬಂತೆ ಪರಿತಪಿಸುತ್ತಿದ್ದಾನಾ? ಅವನೇಕೆ ಬರಬಾರದೀಗ... ಗಾಳಿ ತುಟಿ ಬಿಚ್ಚುತ್ತಿಲ್ಲ....

ಆ ನಸುಕಿನ ಬೆಳಕು ಮತ್ತಿನ್ನೇನೇನೋ ಸೂಚಿಸುತ್ತಿದೆಯಾ.. ಹಿಂದಿನ ರಾತ್ರಿ ನಡೆದಿದ್ದು ನಡೆಯಬಾರದಿತ್ತು ಎಂದು ಅರಿವಾದ ಬೆಳಕಾ? ಅದಾಗಬಾರದಿತ್ತು ಎಂಬ ಕಾರಣಕ್ಕೆ ಬಳಲಿಕೆಯಾ? ನಡೆಯಬಾರದ್ದು ಆಗಬಾರದ್ದು ಎಂದರೆ ಅವನು ಅವಳಿಗೆ ಪರಪುರುಷನಾ? ಆ ಘಳಿಗೆ ಅವರಿಬ್ಬರ ಕೈ ಮೀರಿದ್ದಾ? ಆ ಘಳಿಗೆ ಅವಳ ಬರಡು ಬದುಕಿನಲ್ಲಿ ಅವಳು ವಿಧಿಯಿಂದ ಕಸಿದ ಸುವರ್ಣ ಘಳಿಗೆಯಾ? ಸಂಭವಿಸಬಾರದಿತ್ತು.. ಅವನು ಬರಬಾರದಿತ್ತು ಎಂಬಲ್ಲೇ ಅವನಿದ್ದ ಕ್ಷಣಗಳ ನೆನಪು ಗುನುಗುನಿಸುವ ಆವರಿಸಿದ ಸುಖದ ಅಮಲೂ ಇದೆಯಾ? ಹಾಗಾಗಿಯೇ ಈ ಪುಳಕ ನಡುಕಗಳೆರಡೂ ಒಟ್ಟೊಟ್ಟಿಗೆ ಕಾಡುತ್ತಿದೆಯಾ?

ಗಾಳಿಯ ಮುಂದೆ ಗೋಗರೆಯುವವನ ಸ್ಥಿತಿ ಓದುಗನದೂ ಆಗಿ ಬಿಡುತ್ತದೆ. ಆ ಗಾಳಿ ಬಂದು ಕಥೆ ಹೇಳಬಾರದೇ ಎಂದು ಹಂಬಲಿಸುತ್ತಾನೆ. ಎಷ್ಟೆಲ್ಲಾ ಪ್ರಶ್ನೆಗಳು.. ಪ್ರತೀ ಪ್ರಶ್ನೆಯಲ್ಲೂ ಎಷ್ಟೆಲ್ಲಾ ಮುಚ್ಚಿಟ್ಟ ವಿವರಗಳು.. ಉತ್ತರ ದೊರಕಿಯೂ ದೊರಕದಂತೆ.. ದೊರಕದೆಯೂ ದೊರಕಿದಂತೆ.. ಉತ್ತರವನ್ನು ಕವಿತೆಯಾಗಲೀ ಗಾಳಿಯಾಗಲೀ ಹೇಳುವುದೇ ಇಲ್ಲ...

(ಇನ್ನೊಂದು ರೀತಿಯಲ್ಲಿ ಈ ಕವನವನ್ನು ವಿಶ್ಲೇಷಿಸಿದ್ದು ಓದಿದ್ದೆ. ಕವಿ ಕ್ಷಯದಿಂದ ಬಳಲಿ ಅತೀ ಸಣ್ಣ ವಯಸ್ಸಿನಲ್ಲಿ ಮರಣವನ್ನಪ್ಪಿದ್ದರಿಂದ ಅವರಿಗೆ ದೊರೆತ ಸಾವಿನ ಮುನ್ಸೂಚನೆ ಈ ಪಿಸು ನುಡಿ . ಅದರ ಕುರಿತು ಈ ತೊಳಲಾಟ.. ಸಾವಿನ ಸಿದ್ಧತೆ... ನಸುಕಿನ ಬೆಳಕಿನಲ್ಲಿ ಬಳಲಿಕೆಯೆಂದರೆ ಬದುಕ ಮುಂಜಾವಿನಲ್ಲೇ ಸಾವಿನ ನೆರಳು....  ಇದ್ದಿರಬಹುದೇನೋ.. ಆದರೆ ನನಗೆ ಈ ಕಲ್ಪನೆ ಒಪ್ಪಿಗೆಯಾಗಲೇ ಇಲ್ಲ. ಸಾವಿನ ಮುನ್ಸೂಚನೆ ಕೊಡುವುದು ಶೋಕವನ್ನು ಅದರ ನಂತರ ನಿರ್ಲಿಪ್ತತೆಯನ್ನು.. ಪುಳಕವನ್ನಲ್ಲ.. ಗುನುಗುನಿಸುವಂತೆ ಮಾಡುವ ಮೆಲುನಗೆಯ ನೊರೆಯನ್ನಲ್ಲ.. ಎಷ್ಟೇ ಸಮಾಧಾನ ಚಿತ್ತದಿಂದ ಎದುರಿಸುತ್ತೇನೆಂದರೂ ಗುಟ್ಟಾಗಿ ಯಾರಿಗೂ ಕಾಣದಂತೆ ಮುಗುಳುನಗೆಯನ್ನು ಮೂಡಿಸುವುದಿಲ್ಲ.. ಹೀಗಾಗಿಯೇ ನನಗೆ ಈ ಪದ್ಯ ಸಾವಿನ ಕುರಿತಾದ್ದು ಎನ್ನಿಸಲಿಲ್ಲ )
ಜನ್ಮಜನ್ಮಕ್ಕೆ ಗೆಳೆಯನಾಗಿ ಬರುತ್ತೇನೆಂದವನು, ತಾಳಿ ಮಣಿಗೆ ಬ್ಯಾಳಿ ಮಣಿ ಬೇಕೇ ಎಂದು ರೇಗಿಸುವವನು ಈ ಜನ್ಮದಲ್ಲೇ ಬರುವುದನ್ನು ನಿಲ್ಲಿಸಿ ಬಿಟ್ಟಾಗ  ವಾರಕ್ಕೆ ಮೂರು ಬಾರಿ ಬರುತ್ತಿದ್ದ ನಲ್ಲನನ್ನು ಹುಡುಕಲು ಬೀದಿಗಿಳಿಯುವ ಬೇಂದ್ರೆಯವರ ಕವನದ ನಾಯಕಿ, ಯಾರೊಂದಿಗೂ ಗುಟ್ಟು ಹಂಚಿಕೊಳ್ಳಲಾಗದೆ ಮೌನವಾಗಿ ಕಣ್ಣೀರು ಮಿಡಿಯುತ್ತಾ ರೋಮಾಂಚನಗೊಳ್ಳುತ್ತಾ ನಡುಗುತ್ತಾ ಬೆದರುತ್ತಾ ಮರೆಯಲ್ಲಿ ಮೈ ಮರೆಯುವ ಯರ್ಮುಂಜರ ನಾಯಕಿ..

ಒಬ್ಬಳು ತನ್ನ ಪ್ರೀತಿಯ ಸಣ್ಣಪುಟ್ಟ ವಿವರಗಳನ್ನೂ ಮರೆಯದೆ ಕಡೆಗಣಿಸದೆ ಜೋಪಾನವಾಗಿ ಕಾಪಿಟ್ಟು ಒಂದೊಂದನ್ನೂ ಕಣ್ಣೀರಲ್ಲಿ ತೋಯಿಸುತ್ತಾ ಪುಳಕಗೊಳ್ಳುತ್ತಾ ತನ್ನ ಮಾಯೆಯೊಳಗೇ ತಾನು ಸಿಲುಕುವ ಪ್ರೇಮಿ, ಮತ್ತೊಬ್ಬಳು ನಡೆದುದಾವುದನ್ನೂ ನೆನಪಿಟ್ಟು ಕೊಳ್ಳಲೂ ಆಗದಷ್ಟು ಪರವಶಳಾಗಿ ಮುಂದೆಂದೂ ಅದು ಸಿಕ್ಕಲಾರದೇನೋ ಎಂಬ ಭಾವದಡಿಯಲ್ಲೂ  ತನ್ನನ್ನು ತಾನೇ ಮೈಮರೆಯಬಲ್ಲ ಪ್ರೇಮಿ.   ಅವಳದ್ದು ದ್ವೈತ .. ಇವಳು ಅದ್ವೈತ.....

ಕಾಡುತ್ತಲೇ ಇರುವ ವಿರಹದ ಎರಡು ಮುಖಗಳು. !!

No comments:

Post a Comment