Thursday, 6 July 2017

ಚೊಕ್ಕಾಡಿಯೆಂಬ ಚಕ್ಕಡಿಯಲ್ಲಿ ಕುಳಿತು.

ಯಾರೋ ಬರುತ್ತಾರೆಂದು ಸುಮ್ಮನೆ ಕಾದೆ - ಕಾಯುತ್ತಿದ್ದಾರೆ ... ಯಾರೋ ಬರುತ್ತಾರೆ ಎಂಬ ತುಡಿತವಿದೆ. ಅದು ಯಾರು? ಅವರೇಕೆ ಬರಬೇಕು? ಇವರು ಕಾಯುತ್ತಿದ್ದಾರೆಂದು ಅವರಿಗೆ ಗೊತ್ತಿದೆಯಾ? ಬರುತ್ತೇನೆಂದು ಅವರು ಹೇಳಿದ್ದಾರಾ? ಕಾಯುತ್ತಿದ್ದಾರೆಂದರೆ ಅವರ ಬರುವಿಕೆ ಇವರಿಗೆ ಅವಶ್ಯಕವಿರಲೇ ಬೇಕು. ಹಾಗಾಗಿಯೇ ಈ ಕಾಯುವಿಕೆ.. ಆದರೆ ಮುಂದಿನ ಮಾತು ಸುಮ್ಮನೆ ಕಾದೆ. ಎರಡು ಪದದಲ್ಲಿ ಹೆಪ್ಪುಗಟ್ಟಿದ ವಿಷಾದ ಅವರು ಬರಲಿಲ್ಲವೆಂದು ಉಸುರುತ್ತದೆ. 
ಅವರು ಬಾರದ ವಿಷಾದ ಇವರಿಗೆ ... ಇವರಿಗಷ್ಟೇ   ಬರುವವರು ಬರುತ್ತಲೇ ಇದ್ದಾರೆ., ಹೋಗುವವರು ಹೋಗುತ್ತಲೇ.. ಜೀಪು ಕಾರುಗಳ ಗದ್ದಲ ಗೊಂದಲದಲ್ಲಿ ಧೂಳು ಹೊದ್ದ ಬದುಕ ಫೈಲುಗಳು !! .. ಬರುವವರು ಯಾರೆಂದು ಇವರಿಗೂ ಸ್ಪಷ್ಟವಿಲ್ಲ. ಅಧಿಕಾರಿ? ಅವತಾರ ಪುರುಷ? ಪೊರೆವ ತಂದೆ? ಮಾಯಾದಂಡ ಹಿಡಿದ ದೇವತೆ?  ಇರಬಹುದು ಇವರಲ್ಲಿ ಯಾರಾದರೊಬ್ಬ.. ಅಥವಾ ಎಲ್ಲವೂ ಒಬ್ಬನೇ ಆಗಿರುವವ.. ಕಾಯುತ್ತಲೇ ಇದ್ದಾರೆ..ಕೈಗಳಲ್ಲಿ ಕುಣಿವ ಪುಷ್ಪಹಾರಗಳು ಬಾಡಿಹೋಗಿವೆ, ... ಟ್ರೇ ಗಳಲ್ಲಿ ನಿರೀಕ್ಷೆಯಲ್ಲಿ ಕುಳಿತ ತಿಂಡಿ ತಿನಿಸುಗಳು ಹಳಸಿಯಾಗಿದೆ..... ಫೈಲು ಮುಚ್ಚಿಕೊಂಡಿದೆ.. ಯಾರು ಬರುವರೆಂದು ಕೊನೆಗೂ ಗೊತ್ತಾಗದ ನಿರೀಕ್ಷೆ .. ಇವರಿರಬಹುದಾ ಎಂದು ಹುಡುಕುವ ಆತಂಕ .. ಇವರಲ್ಲ .. ಅವರೂ ಅಲ್ಲ.. ಬರುತ್ತೇನೆ ಎಂದವರು ಕಡೆಗೂ ಬಾರಲೇ ಇಲ್ಲ.  ಅಂದರೆ ಬರುತ್ತೇನೆಂದವರನ್ನು ಇವರು ನೋಡಿಲ್ಲ, ಬರುವವರ ಬಗ್ಗೆ ಒಂದು ದಟ್ಟ ಭರವಸೆಇತ್ತಲ್ಲಾ ಅದು ಎಲ್ಲಿಂದ ಬಂದಿದ್ದು ? ಹೇಗೆ ಮೂಡಿದ್ದು ? ಕೊನೆಯ ಸಾಲುಗಳು ಬೆಚ್ಚಿ ಬೀಳಿಸುತ್ತವೆ. 
"ಕತ್ತಲ ಕೋಣೆಯಲ್ಲಿ 
ಸುಮ್ಮನೆ ಕಾದೆ -
ನಿಮ್ಮ ಹಾಗೆ ." 
ಕತ್ತಲಾಗಿದೆ ಅಂದರೆ ಕಾಯುವಿಕೆ ಮುಗಿದಿದೆ, ಇನ್ನು ಬರುವುದಿಲ್ಲ ಎಂಬ ಅರಿವೂ ಇದೆ.. 'ಸುಮ್ಮನೆ' ಕಾದೆ ಎಂಬ ಸಾಲಿನಲ್ಲಿ ಬರುವುದಿಲ್ಲ ಎಂದು ಗೊತ್ತಿದ್ದರೂ ಕಾದೆ ಎಂಬ ಭಾವವಿದೆಯಾ ? ಕಾದಿದ್ದು ವ್ಯರ್ಥ ಎಂಬ ಭಾವವಾ? ಕಡೆಯ ಶಾಕ್ ತಾಗುವುದು ನಿಮ್ಮ ಹಾಗೆ ಎಂಬ ಸಾಲಿನಲ್ಲಿ. ಅರೆರೆ ನಾವು ಕಾದದ್ದು ನಿಮಗೆ ಹೇಗೆ ಗೊತ್ತು ಎಂದು ಕೇಳುವ ಮುನ್ನವೇ ಎಲ್ಲರ ಬದುಕೂ ಹೀಗೆ ಅಲ್ಲವಾ ಎನ್ನಿಸಿಬಿಡುತ್ತದೆ ..  ಬದುಕೇ ಹಾಗೆ .. ಒಮ್ಮೊಮ್ಮೆ ಯಾರೂ ಬರುತ್ತೇವೆಂದು ಭರವಸೆ ಕೊಡದಿದ್ದರೂ ಕಾಯುತ್ತೇವೆ.... ಸುಖಾಸುಮ್ಮನೆ .. !!
ದಿನ ಹೀಗೆ ಜಾರಿ ಹೋಗಿದೆಯಲ್ಲಿ ಅವರು ಬರೆವ ಸಾಲುಗಳು 
'ಅರಳಿ ಅನೇಕ ಹೂಗಳು ಬರಿದೆ ಕಾದಿವೆ 
ಹಿಮದ ಕಟೋರ ಕೈಯಲಿ ನರಳಿ ಕೆಡೆದಿವೆ.' ದುಗುಡ ನಿಧಾನವಾಗಿ ಬೆಳೆದು ಬಾಳ ಮುಸುಕಿ ಕನಸು ಮಾಸಿಹೋಗಿದೆ ಕಾಯುತ್ತಲೇ ....  
ಕಾಯುವುದೆಂದರೆ ಯಾರೋ ಬರಲಿ ಎಂದಲ್ಲ , ಬರುತ್ತಾರೆ ಎಂದೂ ಅಲ್ಲ, ರಾಧೆ ಮಾಧವನಿಗೆ ಕಾದಂತೆ... ಅಕ್ಕ ತನ್ನ ಮಲ್ಲಿಕಾರ್ಜುನನಿಗಾಗಿ ಹಂಬಲಿಸಿದಂತೆ.. ಬಾರನೆಂಬುದು ಅರಿತಿದ್ದರೂ ಕಾಯುವ ಅನುಭೂತಿಗಾಗಿ ಕಾದಂತೆ ..
ಕಾಯುವಿಕೆಯನ್ನೂ ಅದ್ಭುತವೆಂಬಂತೆ ತೋರಿಸಿಕೊಟ್ಟವರು ಚೊಕ್ಕಾಡಿಯವರು. ಕಾಯುತ್ತಲೇ ....
.
ಅವರ ಪದ್ಯಗಳಲ್ಲಿ ಹೀಗೇ ಎಷ್ಟೋ ಬಾರಿ ಕಳೆದು ಹೋಗಿದ್ದೇನೆ . ಮೀನಿನ ಹೆಜ್ಜೆ ಕವನವನ್ನೇ ನೋಡಿ..

ನೀರಿನಲಿ ಮೀನಿನ ಹೆಜ್ಜೆ ಹುಡುಕುತ್ತ ಹೊರಟವರು
ತಿಳಿದಿರಬೇಕು-ಮೀನು ಹಾಗೂ ನೀರ ಅಂಟಿರದ ನಂಟು.
ಮೀನಿಗೋ ಇಡಿ ದೇಹವೇ ಪಾದ,ನೀರಿಗಿದೆ
ಯಾವುದೇ ಬಂಧನವಿರದ ಸಂಬಂಧ.ಎರಡೂ ಜತೆಗೆ
ಸಾಗುತ್ತ ,ಬೇರೆಯಾಗುತ್ತ, ಇದ್ದೂ ಇರದಂತೆ ಬಾಳುವವು.

ಇಡಿ ದೇಹ ಹೆಜ್ಜೆಯಂತೂರಿ ಸಾಗುವ ಮೀನು
ಆ ಗುರುತನೊಡನೆಯೇ ಒರೆಸಿ ಹಾಕುವ ನೀರು
ಮೀನ ಕಣ್ಣಿನ ಬೆಳಕು ನೀರನ್ನು ಬೆಳಗುತ್ತ
ನೀರು ಆ ಕಂಗಳಿಗೆ ಜೀವವನು ಊಡುತ್ತ
ಗುರುತಿರದೆ ಬಾಳಿ ,ಆಗುವುವು ಜೀವನ್ಮುಕ್ತ.
ಪಾತ್ರವನ್ನಾಧರಿಸಿ ಇರುವ ನೀರಿನ ಒಳಗೆ
ಆಳ ಅಗಲಗಳ ಅರಿತಿರುವ  ಮೀನಿನ ನಡಿಗೆ,
ನೀರಿನ ಚಲನೆ,ಘನವಾಗಿ ಸ್ಥಿರಚಿತ್ರವಾದಾಗ
ಹಿಡಿದಿಡಲೂ ಬಹುದು ಮೀನಿನ ಹೆಜ್ಜೆ ಗುರುತಾಗ!

ಮೀನಿನ ಹೆಜ್ಜೆ ಹುಡುಕಹೊರಟವರಿಗೆ ನೀರು ಮೀನಿನ ಅಂಟಿರದ ನಂಟು ಗೊತ್ತಿರಬೇಕು. ನಂಟು ಎಂಬ ಪದದಲ್ಲೇ ಅಂಟಿಸಿಕೊಳ್ಳುವಿಕೆಯನ್ನು ಗುರುತಿಸುವಷ್ಟರಲ್ಲೇ ಅಂಟಿರದ ನಂಟು ಎಂದುಬಿಡುತ್ತಾರೆ. ದೇಹವನ್ನೇ ಪಾದ ಮಾಡಿ ನಡೆವ ಮೀನು.. ಅದು ನಡೆದ ಹೆಜ್ಜೆ ಗುರುತನ್ನು ಅಳಿಸುತ್ತಾ ಬರುವ ನೀರು ಜೊತೆಗಿದ್ದೂ ಇಲ್ಲದಂತೆ, ಇಲ್ಲದೆಯೂ ಇದ್ದಂತೆ. ಯಾವುದೇ ಬಂಧನವಿರದ ಸಂಬಂಧವದು. ನೀರ ಬೆಳಗುವ ಮೀನ ಕಣ್ಣು, ಜೀವವೂಡುವ ನೀರು ತಾವು ಹಾಗೆ ಪರಸ್ಪರವೆಂದು ಅರಿವಿಲ್ಲದೆ, ಗುರುತಿರದೆ ಜೊತೆಜೊತೆಗೇ ಬಾಳಿ ಜೀವನ್ಮುಕ್ತರಾಗುವ ಪರಿ ...
ಇಲ್ಲಿ ಮತ್ತೊಂದು ಕವನವಿದೆ ನೋಡಿ. 

ಹಾರಿಹೋಗುತ್ತವೆ ಹಕ್ಕಿಗಳು ನಸುಕಿನಲ್ಲೇ ಗಾಳಿ ಬೀದಿಯಲಿ
ಜಗತ್ತನ್ನೇ ಆವರಿಸಿಕೊಳ್ಳುತ್ತ
ಮರಮಾತ್ರ ಅಲ್ಲೇ ನಿಂತಿರುತ್ತದೆ ನೆಲದಲ್ಲಿ ಕಾಲೂರಿ-ದಿಗಂತದತ್ತ
ಕೊಂಬೆ ರೆಂಬೆಗಳ ಚಾಚಿ ಜಗವನ್ನು ಒಳಗೊಳ್ಳುತ್ತ.

ಸಂಜೆ ಹಿಂದಿರುಗಿದ ಹಕ್ಕಿಗಳು ತೂಗುಹಾಕುತ್ತವೆ ಮರಕ್ಕೆ ತಮ್ಮ
ಹಾಡುಗಳನ್ನು:ನೆಲಮುಗಿಲನೊಳಗೊಂಡ ಜಗದ ಪಾಡುಗಳನ್ನು.
ಬೆಳಗೆದ್ದು ನೋಡಿದರೆ,ಮರವೋ--ಕಣ್ಣು ಮಿಟುಕಿಸುತ್ತದೆ,ಮೈತುಂಬಿರುವ
ಹೊಸ ಚಿಗುರು ಹೂವು ಹಣ್ಣುಗಳ ಕಣ್ಣುಗಳನ್ನು.

ಯಾರವಿವು?ಹಕ್ಕಿಗಳ ಕೊಡುಗೆಗಳ ರೂಪಾಂತರವೆ ಅಥವಾ ಮರವು
ನೆಲದಿಂದ ಪಡೆದದ್ದೆ? ಯಾವುದೂ ಸರಿಯಿರಬಹುದು.,ಇಲ್ಲದಿರಬಹುದು
ಮರದಲ್ಲೋ ಹಕ್ಕಿಗಳ ಹೆಜ್ಜೆ ಗುರುತುಗಳಿಲ್ಲ, ,ಹಕ್ಕಿಗಳಲೂ
ಮರದ ಯಾವುದೇ ನೆನವರಿಕೆ ಉಳಿದಂತಿಲ್ಲ.

ಕವಿದ ಕತ್ತಲಲೆ ವರ್ಗಾವಣೆ ಗೊಂಡವೇ-ಹಕ್ಕಿಗಳ
ಮರದ ಗಳಿಕೆಗಳು ಮುಟ್ಟಿಯೂ ಮುಟ್ಟದ ರೀತಿಯಲ್ಲಿ?
ಹಕ್ಕಿಗಳು ಹಾಗೂ ಮರ ಮಾತ್ರ ಸುಮ್ಮನೇ ನಿದ್ದೆ ಹೋಗುತ್ತವೆ
ರಾತ್ರಿ--ಮಾತಿರದೆ,ಯಾವುದೇ ಗೊಡವೆಯೇ ಇರದ ರೀತಿಯಲ್ಲಿ.

ಕನಸಿನ ಅನೂಹ್ಯ ಓಣಿಗಳಲ್ಲಿ ಹಕ್ಕಿಗಳಿಗೋ--ಮರದ ಘನತೆ,ಮರಕ್ಕೆ
ಹಕ್ಕಿಗಳ ಲವಲವಿಕೆ ದಕ್ಕಿ ಅದಲು ಬದಲಾದಂತಿದೆ.
ನಿಂತವರು ಅಲೆದಂತೆ,ಅಲೆದವರು ನಿಂತಂತೆ.ಈಗ ಹಕ್ಕಿಗಳಿಗಿಲ್ಲ
ಮರದ ಹಂಗು:ಮರಕ್ಕಿಲ್ಲ ಹಕ್ಕಿಗಳ ಹಂಗು.

ಜಗತ್ತಿಗೆ ಹಾರುವ ಹಕ್ಕಿಗಳು ಆಗಸದ ವಿಸ್ತಾರದ ಜೊತೆಜೊತೆಗೇ ತಮ್ಮ ಹಾರುವಿಕೆಯ ವಿಸ್ತಾರವನ್ನೂ ಸೂಚಿಸಿ , ಜಗವನ್ನೇ ಆವರಿಸುವಂತೆ ಕೈ ಚಾಚಿ ತನ್ನೊಳಗೆ ಎಳೆದುಕೊಳ್ಳುವಂತೆ ನಿಂತ ಮರದಲ್ಲಿ ನೆಲದ ಒಳಗೊಳ್ಳುವಿಕೆಯ ಬೇರಬಲ. ಹಕ್ಕಿ ಹಾರಿದ ಮೇಲೆ ಮರದ ಮೇಲೆ ಹಕ್ಕಿಯ ಹೆಜ್ಜೆ ಗುರುತಿಲ್ಲ ... ಹಕ್ಕಿಗಳ ರೆಕ್ಕೆಗಳಿಗೆ ಮರದ ನೆನಪಿಲ್ಲ. ಸಂಭ್ರಮದಲ್ಲೋ, ನೋವೆಲ್ಲೋ, ಹಸಿವಲ್ಲೋ, ಜಗವ ಒಳಗೊಳ್ಳುವ ಆತುರದಲ್ಲೋ ಹಾರಿದ ಹಕ್ಕಿ ಮತ್ತೆ ಮರದ ಮಡಿಲಿಗೆ ಹಿಂತಿರುಗಬೇಕು, ತನ್ನೆಲ್ಲ ದುಗುಡಗಳನ್ನು, ನಗುವನ್ನು, ಹಾಡುಗಳನ್ನೂ ಮರಕ್ಕೆ ನೇತು ಹಾಕಬೇಕು, ನಿಶ್ಚಿಂತೆಯಿಂದ ಮಲಗಬೇಕು. ಹಕ್ಕಿಗಳ ಸದ್ದುಸುದ್ದಿಯಿಲ್ಲದೆ ಹಗಲು ಕಳೆದ ಮರ  ಹೊಸ ಚಿಗುರು, ಹಣ್ಣು, ಹೂವುಗಳನ್ನು ಅರಳಿಸಬೇಕು. ಮತ್ತೆ ಹಾರುವ ಹಕ್ಕಿಗಳಲ್ಲಿ ಮರದ ಯಾವುದೇ ನೆನವರಿಕೆ ಉಳಿದಂತಿಲ್ಲ, ಹಾರಿದ ಹಕ್ಕಿಗಳ ಹೆಜ್ಜೆ ಗುರುತು ಮರದಲ್ಲೂ . ಹಾರಿದ ಹಕ್ಕಿಯ ರೆಕ್ಕೆ ಬಲಕ್ಕೆ ಮರದ ಮಡಿಲೂ ಕಾರಣವಲ್ಲವಾ? ಚಿಗುರಿದ ಅರಳಿದ ಮರದ ಸೊಬಗಿಗೆ ಕೇವಲ ಬೇರು ಬಲ ಮಾತ್ರ ಕಾರಣವಾ ? ಕವಿದ ಕತ್ತಲಲ್ಲಿ ಅವೆರಡರ ಗಳಿಕೆಗಳೂ ಬದಲಾಗಿರಬಹುದೇ ಮುಟ್ಟಿಯೂ ಮುಟ್ಟದ ರೀತಿಯಲ್ಲಿ, ಮಾತಿರದೆ, ಯಾವುದೇ ಗೊಡವೆಯಿರದೆ ಸುಮ್ಮನೆ ನಿದ್ರೆ ಹೋದ ರೀತಿಯಲ್ಲಿ ಎಂಬ ಕವಿಯ ಸಾಲು ಮೈ ನವಿರೇಳಿಸುತ್ತದೆ.  ' ನಿಂತವರು ಅಲೆದಂತೆ, ಅಲೆದವರು ನಿಂತಂತೆ' 
ಈ ಪದ್ಯವನ್ನು ಓದಿ Sindhu ಹೇಳಿದ ಮಾತು ನೆನಪಾಗುತ್ತಿದೆ 

"ನೆಲಮುಗಿಲುಗಳನ್ನೊಳಗೊಂಡ ಜಗದ ಪಾಡು ಮರಕ್ಕೆ ತೂಗು ಹಾಕುವ ಹಕ್ಕಿ ಸಂಕುಲಕ್ಕೆ ಗೊತ್ತು ಗೂಡಿಗೆ ಮಲಗಲಷ್ಟೆ ಜಾಗವಿದೆ. ಜಂಝಡಗಳನ್ನ ಹೊರಗಿಟ್ಟು ಮಲಗು ಅಂತ.

ಪಾಡನುಂಡು ಹೂಚಿಗುರು, ಕಾಯಿ, ಹಣ್ಣಾಗಿಸುವ ಮರ ಇಂಗಾಲವುಂಡು ಆಮ್ಲಜನಕ ಸುರಿಸಿದ ಹಾಗೆ.. ಈ ರೀತಿ ಇರಲಿಕ್ಕೆ ಮರಕ್ಕೆ ಮತ್ತು ಅಮ್ಮನಿಗೆ ಮಾತ್ರ ಸಾಧ್ಯವೇನೋ.

ಮರದಲ್ಲೋ ಹಕ್ಕಿಗಳ ಹೆಜ್ಜೆಗುರುತಿಲ್ಲ.. ಆದರೂ ಉಂಡ ಲವಲವಿಕೆ ಮರೆತಿಲ್ಲ.

ಹಕ್ಕಿಗಳು ಮರದ ಸ್ಥಾವರ ಬಿಟ್ಟು ಹಾರಿಯೂ ಮರೆತು ಹಾರಿಯೂ.. ಕೊನೆಗೆ ಮರಳುವುದು ಗೂಡಿಗೇ.

ಏನೆಲ್ಲ ನೋವುಗಳ ಹೊತ್ತು ಹೊರಬಿದ್ದವರು ಮತ್ತೆ ಸಂಜೆ ಮನೆಗೇ. ವಿಷಾದಗಳಲ್ಲೆ ಸ್ಥಾಯಿಯಾಗಿಯೂ ನಗು ನಗುತ್ತಿರುವುದೆ ಬದುಕಲ್ಲವೆ ಅನಿಸುತ್ತಿದೆ ಈಗ. ವಿಷಾದಗಳು ಇರುವುದು ತುಟಿಯ ಮೇಲೆ ತುಂಟ ಕಿರುನಗೆಯನ್ನ ಚಿಮ್ಮಿಸಲಿಕ್ಕಿರಬಹುದೆ? ನೋವನುಂಡ ಬಗೆಗೆ ಮಾತ್ರ ನಗಲು ಗೊತ್ತಾಗಬಹುದೆ?

ಹಕ್ಕಿಯೇ ಮರವಾದಾಗ ಮರಕೆ ರೆಕ್ಕೆ ಮೂಡಿ..ರೆಕ್ಕೆಯಂಚಲ್ಲಿ ಗೊಂಚಲು ಗೊಂಚಲು ಹೂ ಹಣ್ಣು ಕಾಯ್ ತೂಗಿ.. ಬೀಸಿದ ರೆಕ್ಕೆಗೆ ಮರದ ನೆರಳು ಅಲ್ಲಾಡಿ.. ಕೆಳಗೆ ಕೂತವರಿಗೆ ತಂಗಾಳಿ." 

ಇದು ಕಾಯುವಿಕೆಯಿಲ್ಲದ ಬಂಧ, ನಿರೀಕ್ಷೆಗಳಿಲ್ಲದ ಅನುಬಂಧ... ಸಂಬಂಧಗಳು ಇರಬೇಕಾದ್ದು ಹೀಗಾ? ಗೊತ್ತಿಲ್ಲ... ನಿಮ್ಮ ಕವನಗಳು ಕೈ ದೀವಿಗೆಯಂತೆ ಹೆಜ್ಜೆಯಿಡುವಾಗೆಲ್ಲಾ ಬೆಳಕು... ಹಿತವಾದ ಬೆಳಕು.. 

ಈ ಬೆಳಕಿಗೊಂದು ನಮನ.
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು Chokkady ಸರ್.
ನಿಮ್ಮ ಹಾರೈಕೆ ನಮಗಿರಲಿ.
"Heard melodies are sweet, but those unheard  are sweeter"
  
"ಅಮ್ಮಾ ತಾಯಿ .. ಅವನು ಬರೆದಿದ್ದು ಬಹಳಾ ಚೆನ್ನಾಗಿದೆ .. ಬರೀದೆ ಇದ್ದಿದ್ರೆ ಇನ್ನೂ ಚೆನ್ನಾಗಿರ್ತಿತ್ತು.. ನಮಗೆ ಈ ಪದ್ಯ ಉರು ಹೊಡೆಯೋ ಕಷ್ಟ ತಪ್ತಿತ್ತು.. ನಮ್ಮ ಕಷ್ಟ ನಮ್ಮದು .. ನಿಂಗೆ ದೊಡ್ಡ ನಮಸ್ಕಾರ "  ಕೀಟ್ಸ್ ಹೇಳಿದ ಮಾತನ್ನು ಉದಾಹರಣೆ ಕೊಡುತ್ತಲೇ ಅವರೆಲ್ಲ ಎಗರಿ ಬಿದ್ದರು . ನಾನು ಮತ್ತದೇ ಅಸಹಾಯಕತೆಯಲ್ಲಿ ಒದ್ದಾಡುತ್ತಿದ್ದೆ... ಅವರಿಗೆಲ್ಲಾ ಕೀಟ್ಸ್ ಏಕೆ ನಮಗೆ ಬೇಕು, ಕುಮಾರವ್ಯಾಸ ಹೇಗೆ ಅರಳಿಸಬಲ್ಲ, ಕಾವ್ಯ ಬದುಕಿಗೆ ಏಕೆ ಬೇಕು ... ಹೇಳಲಾಗದ ಹೇಳದೆ ಇರಲೂ ಆಗದ ಸಂಕಟ ... 
ನಸುಕಿಗೂ ಮುನ್ನ ಎದ್ದು ಬಾಗಿಲು ಸಾರಿಸಿ ರಂಗೋಲಿಯಿಟ್ಟು ಕೊಟ್ಟಿಗೆ ಕೆಲಸ, ಹೊಲದ ಸಣ್ಣಪುಟ್ಟ ಕೆಲಸ ಮುಗಿಸಿ ಸ್ನಾನ ಮಾಡಲೂ ಪುರುಸೊತ್ತಿಲ್ಲದೆ ಹಾಗೆಹಾಗೇ ಶಾಲೆಗೇ ಓಡಿಬರುತ್ತಿದ್ದವರು ಅವರು. ಪ್ರತಿನಿತ್ಯ ತಲೆ ಬಾಚಿಕೊಳ್ಳುತ್ತಿದ್ದವರೂ ಕಡಿಮೆ. ಒಂದಿಬ್ಬರು ಹುಟ್ಟಿದಾಗಿನಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಿಯೇ ಇಲ್ಲವೇನೋ ಎಂಬಂತೆಯೇ ಬರುತ್ತಿದ್ದರು. ಈ ಯಾವ ಅಂಶಗಳ ಬಗ್ಗೆ ಅವರಿಗೆ ಕಿಂಚಿತ್ತೂ ಕೀಳರಿಮೆಯಿರಲೇ ಇಲ್ಲ. ಅವೆಲ್ಲವೂ ಅತ್ಯಂತ ಸಹಜವೆಂಬಂತೆ ಇರಬೇಕಾದ್ದೇ ಹಾಗೆಂಬಂತೆ ಇರುತ್ತಾ ನೀವು ದಿನಾ ಸ್ನಾನ ಮಾಡ್ತೀರಾ ಎಂದು ಆಶ್ಚರ್ಯ ಚಕಿತರಾಗಿ ಕೇಳುತ್ತಿದ್ದವರಿಗೆ ಕಾವ್ಯ ಏಕೆ ಬೇಕು ಎಂದು ನಾನು ಕಲಿಸಿಕೊಡಲು ಹೆಣಗುತ್ತಿದ್ದೆ. ಅವರೆಲ್ಲರಿಗೂ ಪ್ರತಿದಿನ ಗೇಲಿಯ ವಸ್ತುವಾಗಿದ್ದೆನೇನೋ ಎಂದು ಈಗ ಅನ್ನಿಸುತ್ತದೆ.

ಅವತ್ತೊಂದು ದಿನ ಎಂದಿನಂತೆ ಅಣ್ಣ ಪುಸ್ತಕವನ್ನು ಮುಂದಿಟ್ಟುಕೊಂಡು ಗದುಗಿನ ಭಾರತ ಓದುತ್ತಿದ್ದರು. ತಲ್ಲೀನಳಾಗಿದ್ದೆ ಎಂದಿನಂತೆ. ಹೊರಗಡೆ ಮಳೆ .. ಒಂದು ಕ್ಷಣ ಕಣ್ಣು ಕೋರೈಸುವಂತೆ ಮಿಂಚು .. ಮಿಂಚಿನ ಹಿಂದೆಯೇ ಕವಿದ ಕತ್ತಲು. ಕರೆಂಟು ಹೋಗಿತ್ತು. ಇನ್ನು ಮುಗಿಯಿತು ವಾಚನ ಎಂದುಕೊಳ್ಳುತ್ತಿದ್ದವಳನ್ನು ಚಕಿತಗೊಳಿಸಿದ್ದು ಅಣ್ಣನ ಮುಂದುವರಿದ ಗಮಕ ವಾಚನ. ಪುಸ್ತಕ ಇಲ್ಲದಿರುವುದು ಅವರಿಗೆ ಕೊರತೆಯೇ ಅಲ್ಲವೆಂದು  ಅವರು ಮುಂದಿನ ಅರ್ಧ ಗಂಟೆಯಲ್ಲಿ ನಿರೂಪಿಸಿಬಿಟ್ಟಿದ್ದರು. ಅವರಂತೆಯೇ ಪುಸ್ತಕ ನೋಡದೆ ಪದ್ಯಗಳನ್ನು ಓದುವ ಹಂಬಲ. ಕೇಳು ಜನಮೇಜಯ ಧರಿತ್ರೀಪಾಲ ಎಂಬುದು ಹುಟ್ಟಿದಾಗಿನಿಂದ ಕೇಳಿಕೊಂಡು ಬಂದಿದ್ದ ಶಬ್ದ ಗುಚ್ಛ . ಹೇಳಿಕೇಳಿ ಕುಮಾರವ್ಯಾಸ ರೂಪಕ ಚಕ್ರವರ್ತಿ. ಅವನು ಹಗೆಗಳ ಹಿಂಡಿದನು ಮನದೊಳಗೆ ಅಂದಾಗ ಪುಳಕ .. ಅಂತಹಾ ಪುಳಕಗಳ ಜೊತೆಜೊತೆಗೆ ಅಂಗಳದಲ್ಲಿ ಚಾಪೆ ಹಾಕಿ ಅಣ್ಣ ಹೇಳುತ್ತಿದ್ದ ಕಥೆಗಳನ್ನೆಲ್ಲಾ ಕೇಳುತ್ತಿದ್ದ ನಾನು ಅವೆಲ್ಲವನ್ನೂ ಮರುದಿನ ಶಾಲೆಯಲ್ಲಿ ಸಿಕ್ಕ ಗೆಳತಿಯರನ್ನು ಎದುರಿಗೆ ಕೂಡಿಸಿಕೊಂಡು ಅವರಿಗೆ ಒಪ್ಪಿಸುತ್ತಿದ್ದೆ. ಎಲ್ಲರಿಗೂ ಕಥೆ ಕೇಳುವ ಉತ್ಸಾಹವಿತ್ತೇ ಹೊರತು ಕಾವ್ಯದ ಕುರಿತು ಒಂದಿಷ್ಟೂ ಕುತೂಹಲವಿರಲಿಲ್ಲ. ಮಾತೆತ್ತಿದರೆ ಪದ್ಯಗಳ ಸಾಲುಗಳನ್ನು ಹೇಳುವುದು ಮೈಗೂಡಿ ಹೋಗಿತ್ತು.  
ಯಾಕೆ ಹಾಗಾಡುತ್ತಿದ್ದೆ ನಾನು.. ನನ್ನ ಪಾಂಡಿತ್ಯ ಪ್ರದರ್ಶನಕ್ಕಾ... ಅವರೂ ಕಾವ್ಯವನ್ನು ಆಸ್ವಾದಿಸಲಿ ಎಂದಾ .. ಅಥವಾ ಅವರಲ್ಲಿ ಬಹುತೇಕರು ಶ್ರಮಜೀವಿಗಳು.. ನಾನು ಓದುತ್ತಿರುವುದು ಅಪ್ರಯೋಜಕವಲ್ಲ ಎಂದು ಮನವರಿಕೆ ಮಾಡಿಕೊಡುವುದಕ್ಕಾ.. 
ಒಂದು ದಿನ ಹೀಗೆ ನನ್ನ ಕಾವ್ಯಾಟೋಪ ಮುಂದುವರೆದಿತ್ತು.. ಒಬ್ಬಳು ಏನೋ ನೆನಪಾದವಳಂತೆ ಒಂದು ಚೀಟಿ ತೆಗೆದು ಕೊಟ್ಟಳು.. ಅವಳು ಕೊಟ್ಟ ಚೀಟಿ ಓದಿದ ನನಗೆ ದೊಡ್ಡ ಶಾಕ್. ಚೆಂದದ ಪದ್ಯ . ಅದೇ ಶಾಲೆಯಲ್ಲೇ ನನ್ನಣ್ಣ ಇದ್ದಿದ್ದರಿಂದ ಅವರಿಗೆ ಅದನ್ನೊಪ್ಪಿಸಿ ತರಗತಿಗೆ ಹೋದೆವು. ಸಂಜೆ ಅವಳಣ್ಣ ನಮ್ಮನೆ ಮುಂದೆ ಹಾಜರ್. ಅಣ್ಣ ಕವನದ ಬಗ್ಗೆ ಹೊಗಳುತ್ತಿದ್ದರು. ಅವನು ಸಂಕೋಚದಿಂದಲೇ ತಲೆ ತಗ್ಗಿಸಿ ನಿಂತಿದ್ದ. ಅವನ ತಂದೆ ಹಿಂದಿನ ವರ್ಷವಷ್ಟೇ ಇಲ್ಲವಾಗಿದ್ದರು. ನಮ್ಮ ಮನೆಯ ಪಕ್ಕದ ತೋಟದಲ್ಲೇ ಕೆಲಸಕ್ಕೆ ಬರುತ್ತಿದ್ದ. ಬಿಡುವಿದ್ದಾಗ ನಾನು ಅವನ ತಂಗಿಗೆ ಕೊಟ್ಟಿದ್ದ  ನರಸಿಂಹ ಸ್ವಾಮಿ ಪದ್ಯಗಳನ್ನು ಓದುತ್ತಿದ್ದನಂತೆ. ಟಿ.ವಿ., ಮೊಬೈಲ್ ಇಲ್ಲದ ಕಾಲವದು.ರಾತ್ರಿ ಊಟ ಮಾಡಿ ಬಂದು ಅಂಗಳದ ಒಂದು ಮೂಲೆಯಲ್ಲಿ ಕೂತು  ಅಣ್ಣ ಹೇಳುತ್ತಿದ್ದ ಕಥೆಗಳನ್ನೆಲ್ಲ ಕೇಳುತ್ತಿದ್ದನಂತೆ. ಅವನಿಗೆ ಇವೆಲ್ಲವೂ ದುಡಿಮೆಯ ಶ್ರಮ ನೀಗಿಸುತ್ತಿದ್ದವೇನೋ. ಪ್ರತಿದಿನ ರಾತ್ರಿ ಬಂದು  ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದ ಅವನನ್ನು ನೋಡಿದ್ದರೂ ನಾವು ಅಷ್ಟು ಗಮನ ಕೊಟ್ಟಿರಲಿಲ್ಲ. ಹಾಗೆ ಒಂದಿಬ್ಬರು ಬಂದು ಕುಳಿತುಕೊಳ್ಳುತ್ತಿದ್ದರು. ಅಣ್ಣನಿಗೆ ಸಂಭ್ರಮಾಶ್ಚರ್ಯ. ಅಂದಿನಿಂದ ಅಣ್ಣ ಅವನನ್ನೂ ಉದ್ದೇಶಿಸಿ ಕಥೆ ಹೇಳಲಾರಂಭಿಸಿದರು.

 ನಾವು ಆ ಊರಿನಲ್ಲಿ ಇರುವಷ್ಟು ದಿನವೂ ಅಣ್ಣ ಅವನಿಗೆ ಪದ್ಯಗಳ ಬಗ್ಗೆ, ರೂಪಕಗಳ ಬಗ್ಗೆ ಹೇಳುತ್ತಲೇ ಇದ್ದರು. ಮೊನ್ನೆ ಮೊನ್ನೆ ನಾನು ಆ ಊರಿಗೆ ಹೋದಾಗ ಸಿಕ್ಕವನನ್ನು ಇದರ ಬಗ್ಗೆ ಕೇಳಿದೆ. ಅವನು ಪದ್ಯ ಬರೆಯುವುದನ್ನು ಮಾತ್ರ ಬಿಟ್ಟಿದ್ದ. ಓದುವುದನ್ನು ನಿಲ್ಲಿಸಿರಲಿಲ್ಲ. ತುಂಬಾ ಓದಿಕೊಂಡಿದ್ದ. ಬರೆಯಬಾರದೇಕೆ ಎಂದಾಗ ಅವನು ಹೇಳಿದ್ದು . ಸಮಯ ಸಿಗೋಲ್ಲ .. ಓದೋದ್ರಿಂದ ದಿನದ ಕಷ್ಟ ಗೊತ್ತಾಗೊಲ್ಲ..ಓದದೇ ಇರೋಕೆ ಆಗೋಲ್ಲ. ಬೇಂದ್ರೆಯವರ ಕುಣಿಯೋಣು ಬಾರಾ ಪದ್ಯದ ಬಗ್ಗೆ ಅವನ ಮಾತುಗಳನ್ನು ಕೇಳಿದಾಗ ನನಗೇಕೆ ಹೊಳೆದಿರಲಿಲ್ಲ ಈ ಅಂಶ ಅನ್ನಿಸಿ ಹೋಯಿತು. ಅವನು ಹುಟ್ಟುತ್ತಲೇ ಕಾವ್ಯ ಓದಿಕೊಂಡು ಬಂದವನೇನಲ್ಲ. ತುಂಬಾ ಓದಿದವನೂ ಅಲ್ಲ.ಬಡತನದ ಬವಣೆಯ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಲು ಕಾವ್ಯವನ್ನು ಆಧರಿಸಿದ್ದ.   ಕಾವ್ಯ ಅವನ ಬದುಕಾಗಿಬಿಟ್ಟಿತ್ತು. ಕುಮಾರವ್ಯಾಸನನ್ನೂ ಓದಿಕೊಂಡು ಬಿಟ್ಟಿದ್ದ. ಒಮ್ಮೆ ಕಾವ್ಯ ಒಳಹೊಕ್ಕರೆ ಹೇಗೆ ಆವರಿಸಿಕೊಳ್ಳುತ್ತದೆ ಎಂಬುದಕ್ಕೆ ಅವನೊಂದು ಜೀವಂತ ಉದಾಹರಣೆಯಾಗಿದ್ದ. 
ಹಿಂದಿನ ಕಾಲದ ದಿನಗಳ ಬಗ್ಗೆ ಓದಿದ್ದು ನೆನಪಾಗುತ್ತಿದೆ. ಬೆಳಬೆಳಗಿನಲ್ಲಿ ಹಾಡುತ್ತಿದ್ದ ಜಾನಪದ ಗೀತೆಗಳು, ಬೀಸುವ ಪದಗಳು , ನೆಟ್ಟಿ ಮಾಡುವಾಗ ಹಾಡಿಕೊಳ್ಳುತ್ತಿದ್ದ ಪದಗಳು ಇವೆಲ್ಲವೂ  ಇಂತಹುದೇ ಶ್ರಮದ ದುಡಿಮೆಗೆ ನೇವರಿಕೆಯಾಗಿತ್ತಾ . ಹಗಲೆಲ್ಲಾ ದುಡಿದು ಮನೆಗೆ ಬಂದು ಸಂಜೆ ಹರಿಕಥೆ, ಗಮಕ , ಯಕ್ಷಗಾನ, ನಾಟಕ ಇಂತಹವುಗಳಲ್ಲಿ ಮೈ ಮರೆಯುತ್ತಿದ್ದುದು ಬದುಕನ್ನು ಸಹನೀಯವನ್ನಾಗಿಸಿಕೊಳ್ಳಲೆಂದಾ? ಕಾವ್ಯವೆಂಬುದು ಈ ಎಲ್ಲಾ ಪ್ರಕಾರಗಳಲ್ಲೂ ಹಂಚಿಹೋಗಿರುವುದು ಅದು ಬದುಕಿಗೆಷ್ಟು ಪ್ರಸ್ತುತ, ಅವಶ್ಯಕ ಎಂದು ಸೂಚಿಸುತ್ತಿದೆಯಾ?

ಮೊನ್ನೆ ಮೊನ್ನೆಯಷ್ಟೇ ಅಡಿಗರ ಕವನಗಳು ಅರ್ಥವಾಗುವುದಿಲ್ಲ... ಅದರ ಬಗ್ಗೆ ಒಂದಿಷ್ಟು ಹೇಳಿ ಎಂದೊಬ್ಬರು ಕೇಳಿದರು. ಒಂದು ಪ್ರವೇಶಿಕೆ ಕಾವ್ಯಕ್ಕೆ ಅಗತ್ಯವೂ ಹೌದಾದರೂ ಕಾವ್ಯೋಪಾಸನೆ ಅದೊಂದು ಮನಸ್ಥಿತಿ. ಅರ್ಥ ಮಾಡಿಕೊಳ್ಳುತ್ತಾ ಆಸ್ವಾದಿಸುವ  ಪಯಣ. ಅಲ್ಲಿ ಪಯಣ ಮಾತ್ರ ಮುಖ್ಯ. ಗಮ್ಯ ನಗಣ್ಯ. ಹಿಂದೊಮ್ಮೆ ಒಬ್ಬರು ಹೇಳಿದ್ದರು ಸರಳವಾಗಿ ಅರ್ಥವಾಗದ ಯಾವುದನ್ನಾದರೂ ನಾವು ಓದಬೇಕೇಕೆ ಎಂದು. ಕಾವ್ಯ ನಮ್ಮ ಜೀವನಕ್ಕೇಕೆ ಬೇಕು ಅದನ್ನು ಓದುವ ಅನಿವಾರ್ಯತೆಯ ಕುರಿತು ಈಗಲೂ ಅಂತಹವರಿಗೆ ಮನದಟ್ಟು ಮಾಡಲಾಗುವುದಿಲ್ಲ ಜೊತೆಗೆ ಮಾಡುವುದೂ ಅನಿವಾರ್ಯವೇನಲ್ಲ ಎಂಬ ಅರಿವೂ.
 
ಕಾವ್ಯಾಸಕ್ತ ಮನಸ್ಸುಗಳು ಈಗಲೂ ಮೂಲೆಯಲ್ಲಿ ಕೂತಾದರೂ ಸರಿ ತಲ್ಲೀನವಾಗಿ ಕಾವ್ಯವನ್ನು ಆಸ್ವಾದಿಸುತ್ತಲೇ ಇರುತ್ತವೆ.ಬದುಕಿನ ತಲ್ಲಣಗಳನ್ನು ತನ್ಮೂಲಕ ಹಗುರವಾಗಿಸಿಕೊಳ್ಳುತ್ತಲೇ ಇರುತ್ತವೆ.

dhyana

ತೀರಾ ಇತ್ತೀಚಿಗೆ ಒಬ್ಬರು ಕೇಳಿದರು. ನೀವು ಧ್ಯಾನಸ್ಥರಾಗಿ ಕುಮಾರವ್ಯಾಸನನ್ನು ಓದಬಲ್ಲಿರಾ? ಹೊರಗಿನ ವಿಷಯಗಳು ಬಾಧಿಸುವುದಿಲ್ಲವೇ ? ಅಂತಹಾ ಧ್ಯಾನದ ಸ್ಥಿತಿಯನ್ನು ನೀವು ತಲುಪಿದ್ದೀರಾ ನಿಮ್ಮ ಓದಿನಲ್ಲಿ ?  ಒಂದಿಷ್ಟು ಹೊತ್ತು ನನಗೆ ಏನು ಹೇಳಬೇಕೋ ತೋಚಲೇ ಇಲ್ಲ. ಧ್ಯಾನಸ್ಥರಾಗಿ ಓದುವುದು ಎನ್ನುವುದು ಸಹಜವಾಗಿ ಹೇಳುವ ಮಾತಾಗಿ ಬಿಟ್ಟಿದೆಯಲ್ಲಾ ಎಂದೆನಿಸಿತು. ಪರಿಭಾಷೆಗಳನ್ನು ಉಪಯೋಗಿಸುವಾಗ ಎಷ್ಟು ಎಚ್ಚರ ಬೇಕಲ್ಲವಾ ಎನ್ನಿಸಿಬಿಟ್ಟಿತು.ಅವರು ಕೇಳಿದ್ದರಲ್ಲಿ ತಪ್ಪೇನಿರಲಿಲ್ಲ. ಧ್ಯಾನವೆಂಬ ಪದ ಕಿವಿಗೆ ಬಿದ್ದೊಡನೆ ನನ್ನ ಮನಸ್ಸು ಎಲ್ಲೋ ಎಲ್ಲೆಲ್ಲೋ ಓಡತೊಡಗಿತು. ಈ ವಿಷಯಕ್ಕೆ ಸಂಬಂಧಿಸಿದ್ದೋ ಇಲ್ಲವೋ ಎಂಬ ಅರಿವೂ ಇಲ್ಲದಂತೆ....  ಇಷ್ಟಕ್ಕೂ ಧ್ಯಾನವೆಂದರೆ......

ಮನುಷ್ಯನ ಉತ್ಪಾದನಾ ಘಟಕಗಳು ಮೂರು. ದೇಹ, ಮನಸ್ಸು ಮತ್ತು ಪ್ರಜ್ಞೆ ಅಥವಾ ಬುದ್ಧಿ. ಮನುಷ್ಯ ಹುಟ್ಟಿದಂದಿನಿಂದ ಸಾವು ಎನ್ನುವ ಪ್ರಕ್ರಿಯೆ ಅವನ ದೇಹದೊಳಗೆ ಪ್ರತಿದಿನ ಪ್ರತಿಕ್ಷಣ ನಿರಂತರವಾಗಿ ನಡೆದಿರುತ್ತದೆ. ಸಾವಿನ ಬಿಂದುವಿನೆಡೆಗೆ ನಿರಂತರವಾಗಿ ನಡೆಯುತ್ತಿರುವ ದೇಹದೊಳಗಿರುವ ಮನಸ್ಸು, ಪ್ರಜ್ಞೆ, ಜೀವಗಳು ಸುಖವಾಗಿ ಇರಲು ಸಾಧ್ಯವಿಲ್ಲ. ಹೆಚ್ಚೆಂದರೆ ಅವನ ದೈನಂದಿನ ಅರ್ಥ ಕಾಮಗಳಲ್ಲಿ ಅದನ್ನು ಮರೆತಿರುತ್ತಾನಷ್ಟೆ. ಪ್ರಜ್ಞೆ ಅಥವಾ ಯೋಚಿಸುವ ಶಕ್ತಿಯನ್ನು ಹೊಂದಿರದ ಪ್ರಾಣಿಗಳನ್ನು ಈ ದುಃಖ ಕಾಡುವುದೇ ಇಲ್ಲ.  ಮಾನವ ಮೂಲಭೂತವಾಗಿ   ಎದುರಿಸಿಕೊಂಡು ಬಂದಿರುವ ಅನಾದಿ ಅನಂತ ಪ್ರಶ್ನೆಯೆಂದರೆ ಇಂತಹ ದುಃಖಮಯವಿರುವ ಜೀವನದ ದುಃಖವನ್ನು ಆತ್ಯಂತಿಕವಾಗಿ, ಶಾಶ್ವತವಾಗಿ ಹೇಗೆ ಕೊನೆಗಾಣಿಸಬಹುದು ಎಂಬುದೇ. ಇದು ಮೇಲ್ನೋಟಕ್ಕೆ ಕಾಣುವ ಯಾವ ಬದಲಾವಣೆಯಿಂದಲೂ ಸಾಧ್ಯವಿಲ್ಲ. ಸಮಾಜದ ಬದಲಾವಣೆಯಿಂದ ಸಾಧ್ಯವಿಲ್ಲ, ಆಳುವ ಸರ್ಕಾರದ ಬದಲಾವಣೆಯಿಂದ ಸಾಧ್ಯವಿಲ್ಲ. ಒಂದು ಅತ್ಯುತ್ತಮ ಸರ್ಕಾರ ಬಂದಾಗಲೂ ಆತನ ಜೀವನ ಹಾಗೆಯೇ ಇರುತ್ತದೆ. ಇದು ವೈಯಕ್ತಿಕ ಮಟ್ಟದಲ್ಲಿಯೇ ಆಗಬೇಕಾದ ಬದಲಾವಣೆ. ಅದನ್ನು ಸಾಧಿಸಿಕೊಳ್ಳಲು ಆತ ನೂರು ವಿಷಯ ವಸ್ತುಗಳ ಮೊರೆ ಹೋಗುತ್ತಿರುತ್ತಾನೆ.

ದೇಹ, ಮನಸ್ಸು, ಪ್ರಜ್ಞೆ ಈ ಮೂರನ್ನೂ ಬಳಸಿಕೊಂಡು ಅಂದರೆ ಒಂದನ್ನು ಕೇಂದ್ರವಾಗಿಟ್ಟುಕೊಂಡು ಇನ್ನೆರಡನ್ನು ಅದರ ಅಧೀನವಾಗಿಟ್ಟು ಇದನ್ನು ಸಾಧಿಸಬೇಕಾಗುತ್ತದೆ. ವೇದ, ಉಪನಿಷತ್ತು, ಪುರಾಣ, ಬ್ರಹ್ಮಸೂತ್ರ, ಭಗವದ್ಗೀತೆಗಳಲ್ಲಿ ಈ ವಿವರಣೆಗಳಿವೆ. ಮತ್ತು ನಾವು ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವುದು ಐಚ್ಛಿಕವಾದುದೂ ಅಲ್ಲ. ಅವರವರ ಸ್ವಭಾವಕ್ಕೆ ಅನುಗುಣವಾಗಿ, ಸ್ವಧರ್ಮಕ್ಕೆ ಅನುಗುಣವಾಗಿ ಮಾರ್ಗಗಳೂ ಸಿದ್ಧವಿರುತ್ತವೆ. ಇದೊಂದು ನಿರಂತರ ಹುಡುಕಾಟ. ಪೂರ್ವಾರ್ಧದ ಹುಡುಕಾಟಕ್ಕೆ ಜೀವಾಚ್ಛಾದಿತ ಹಂತವೆಂದರೆ, ಉತ್ತರಾರ್ಧಕ್ಕೆ ಪರಮಾಚ್ಛಾದಿತ ಹಂತವೆನ್ನಬಹುದು. 

ದೇಹವನ್ನು ಕೇಂದ್ರವಾಗಿಸಿಕೊಂಡು ಮನಸ್ಸು ಮತ್ತು ಪ್ರಜ್ಞೆಯನ್ನು ಅದಕ್ಕೆ ಅಧೀನವಾಗಿಸಿ ಮಾಡುವ ದುಃಖ ನಿವಾರಣೆಯ ಮಾರ್ಗ "ತಂತ್ರ" ಅಥವಾ "ತಾಂತ್ರಿಕ"ವಾಗುತ್ತದೆ. ಮನಸ್ಸನ್ನು ಕೇಂದ್ರವಾಗಿಸಿ ದೇಹ ಮತ್ತು ಪ್ರಜ್ಞೆಯನ್ನು ಅದಕ್ಕೆ ಅಧೀನವಾಗಿಸುವ ಮಾರ್ಗ "ಭಕ್ತಿ"ಯಾಗುತ್ತದೆ. ಪ್ರಜ್ಞೆಯನ್ನು ಕೇಂದ್ರವಾಗಿಸಿ ದೇಹ ಮನಸ್ಸುಗಳನ್ನು ಅದಕ್ಕೆ ಅಧೀನ ಮಾಡಿಕೊಂಡು ಮುನ್ನಡೆಯುವ ಮಾರ್ಗ "ಧ್ಯಾನ'ವಾಗುತ್ತದೆ . ಈ ಮೂರೂ ವಿಧಾನಗಳಲ್ಲೂ ಧ್ಯಾನದ ಶಕ್ತಿ ಬಹಳ ಪ್ರಬಲವಾದುದು.. ಅಂತಹಾ ಧ್ಯಾನದ ಮಾರ್ಗವನ್ನು ಆರಿಸಿಕೊಂಡವನ ಕೀಲಿಕೆ ಧ್ಯಾನದ ವಿಷಯದ ಜೊತೆಗೆ ಅದೆಷ್ಟು ಗಾಢವಾಗಿರಬೇಕೆಂದರೆ ಜಗತ್ತನ್ನೇ ಮರೆಯುವಷ್ಟು. 

ಅದು ಅಷ್ಟು ಸುಲಭವಾಗಿ ಸಾಮಾನ್ಯರಿಗೆ ಸಿದ್ಧಿಸುವುದೂ ಇಲ್ಲ. ಒಂದು ವೇಳೆ ಧ್ಯಾನ ಸಿದ್ಧಿಸಿದ್ದೇ ಆದರೆ ಅವನ ಮೇಲೆ ತಂತ್ರ ಮತ್ತು ಭಕ್ತಿಗಳು ಯಾವ ಪರಿಣಾಮವನ್ನೂ ಬೀರುವುದೇ ಇಲ್ಲ. ಇಂತಹಾ ಧ್ಯಾನದ ಮಟ್ಟವನ್ನು ಮುಟ್ಟಿದ ಮೇಲೆ ಆತ ಹಿಂತಿರುಗಿ ಬರುವುದೂ ಬಹಳ ಕಷ್ಟ. ಅಂತಹವರ ಜೊತೆ ಹೊಂದಿಕೊಳ್ಳಲು ಸಾಮಾನ್ಯನಿಗೆ ಹೇಗೆ ಕಷ್ಟವೋ ಅವರಿಗೂ ಜಗತ್ತಿಗೆ ಹೊಂದಿಕೊಳ್ಳವುದು ಅಷ್ಟೇ ಕಷ್ಟವಾಗಿಬಿಡುತ್ತದೆ. ಧ್ಯಾನಸ್ಥರಾಗಿ ಪ್ರೀತಿಸಿದವರನ್ನೇ ನೋಡಿ ಅವರಿಗೆ ಅದರಿಂದ ಹೊರಬರಲು ಆಗುವುದೇ ಇಲ್ಲ. ಯಾರಾದರೂ ಮಧ್ಯದಲ್ಲೇ ತೊರೆದರೆ ಅರೆ ಹುಚ್ಚರಂತಾಗಿಬಿಡುತ್ತಾರೆ.

ಬುದ್ಧನ ದಾರಿಯನ್ನೇ ನೋಡಿ. ಧ್ಯಾನ ಮಾರ್ಗ ಹಿಡಿಯಲು ಜನರಿಗೆ ಸಂದೇಶವಿತ್ತ ಬುದ್ಧ ಹೇಳಿದ್ದಾದಾದರೂ ಏನು? " ಜೀವನ ದುಃಖಮಯವಿದೆ, ಇದರಲ್ಲಿ ಚಿಂತನೆಗಳ ಮೂಲಕ ಧ್ಯಾನಕ್ಕೇರಬೇಕು, ಆಸೆಗಳು ನಿರ್ವಿಷಯವಾಗಬೇಕು ಅಥವಾ ದುಃಖ ನಿವಾರಣೆಯಾಗಬೇಕು ". ಸರಿಯಾಗಿಯೇ ಇದೆ. ಬುದ್ಧನಿಗೆ ಸಾಧ್ಯವೂ ಆಯಿತು. ಅವನು ಮರೆತಿದ್ದೆನು? ತಾನು ಹೇಳುವ ಧ್ಯಾನ ಮಾರ್ಗ ಸಾರ್ವಜನಿಕ ಮಾರ್ಗವಲ್ಲ, ಅದು ಕೆಲವರಿಗೆ ಮಾತ್ರ ದಕ್ಕುವ ಮಾರ್ಗ. ಅದು ಶಾಶ್ವತ ಪರಿಹಾರವಾಗಲಾರದು ಎಂಬುದನ್ನೇ ಅವನು ಮರೆತಿದ್ದಾ ? 

ದೇಹವನ್ನು ಕೇಂದ್ರವನ್ನಾಗಿಸಿ ಮನಸ್ಸು, ಪ್ರಜ್ಞೆಯನ್ನು ಅದಕ್ಕೆ ಅಧೀನವನ್ನಾಗಿಸಿ ಸಾಗುವ ಮಾರ್ಗ ತಂತ್ರ. ರಜನೀಶ್ ರಂಥಹವರು ಹಿಡಿದ ಮಾರ್ಗ. ಒಂದು ಆರೋಗ್ಯ ಪೂರ್ಣ ತಾಂತ್ರಿಕತೆಯನ್ನು ಎಲ್ಲರೂ ಇಟ್ಟುಕೊಳ್ಳಲು ಸಾಧ್ಯವಾ ಎಂಬುದೇ ಮೊಟ್ಟಮೊದಲು ಎದುರಾಗುವ ಅನುಮಾನ. ಯಾವ ವಿಷಯವನ್ನೂ ಗಹನವಾಗಿ ತೆಗೆದುಕೊಳ್ಳದ ಇಂದಿನ ಜಗತ್ತಿನಲ್ಲಿ ತಾಂತ್ರಿಕ ಎಂದ ಕೂಡಲೇ ವಿಕೃತಿಯಾಗುವ ಸಂಭವವೇ ಹೆಚ್ಚು. ಹೀಗಾಗಿ ತಂತ್ರ ಮತ್ತು ಧ್ಯಾನಗಳು ಯಾವ ಕಾಲಕ್ಕೂ ಅಪಾಯಕಾರಿ ಮಾರ್ಗಗಳು ಮತ್ತು ಕಠಿಣ ಮಾರ್ಗಗಳು. 

ಭಕ್ತಿಯೊಂದೇ ಮುಖ್ಯವಾದ ಮಾರ್ಗ... ಎಲ್ಲರಿಗೂ ದಕ್ಕಬಹುದಾದ ಮಾರ್ಗ. 

ಸಾಹಿತ್ಯದ ಸಂವಹನ ಮತ್ತು ವಿಮರ್ಶೆಯ ಚೌಕಟ್ಟಿನಲ್ಲಿ ಈ ಪರಿಭಾಷೆಗಳನ್ನು ಬಳಸಬಹುದಾದರೆ ಒಂದು ಕೃತಿಯ ಒಳಗೆ ಅದರ ತಾಂತ್ರಿಕ ಪರಿಣತಿಯನ್ನು ಅಷ್ಟೇ ನೋಡಿ ತಾಂತ್ರಿಕವಾಗಿ ಬೆನ್ನು ಹತ್ತಿದರೆ ಆ ಕೃತಿ ನಮಗೆ ದಕ್ಕುವುದೇ ಇಲ್ಲ. ಅಥವಾ ಪ್ರಜ್ಞಾಪೂರ್ವಕವಾಗಿ ಅದರ ವೈಚಾರಿಕತೆ ಏನನ್ನು ಹೇಳುತ್ತದೆ, ಅದರ ಹಿಂದೆ ಯಾವ ವಾದಗಳಿವೆ ಎಂದು ಬೆನ್ನಟ್ಟಿದರೂ ಕೃತಿ ದಕ್ಕಲಾರದು. ರಸ ಸಿದ್ಧಾಂತವಿರುವುದೇ ಅದಕ್ಕಾಗಿ .. ಓದುಗ ಮೊದಲು ಕೃತಿಯ ರಸದಲ್ಲಿ ಮುಳುಗಬೇಕು. ಆ ಕೃತಿಯೂ ಕೂಡಾ ತನ್ನಲ್ಲಿ ಓದುಗನನ್ನು ಮುಳುಗಿಸಿಕೊಳ್ಳುವ ಅರ್ಹತೆಯುಳ್ಳದ್ದಾಗಿರಬೇಕು.. ಒಂದು ರಸ ಕೃತಿ ಸೃಷ್ಟಿಯಾಗುವ ಭುವನದ ಭಾಗ್ಯಕ್ಕಿಂತ ಸೃಷ್ಟ ಕೃತಿಗೂ ಓದುಗನ ಮನಸ್ಸಿಗೂ ಒಂದು ಯೋಗ್ಯ ಸಂವಹನ ಉಂಟಾಗಿ ಅಲ್ಲೊಂದು ಹೊಸ ಅರಿವು, ಹೊಸ ಪುಳಕ ಸ್ಫೋಟವಾಗುವುದೇ ಭುವನದ ಭಾಗ್ಯ. ಈ ಅರ್ಥದಲ್ಲಿ ಧ್ಯಾನಸ್ಥರಾಗುವುದೆಂದರೆ ಮೊದಲು ರಸದೊಳಗೆ ಮುಳುಗಿ ನಂತರ ಆ ಕೃತಿ ಕೊಡುವ ಅರಿವುಗಳನ್ನು ಧ್ಯಾನಸ್ಥರಾಗಿ ಪರಿಶೀಲಿಸುವುದು. 

ಕುಮಾರವ್ಯಾಸನನ್ನು ಧ್ಯಾನಸ್ಥಳಾಗಿ ಓದಬಲ್ಲೆನಾ ? ಮೊದಲು ಮುಳುಗಬೇಕಿದೆ ಅದರ ರಸದಲ್ಲಿ .. ಇನ್ನೂ ಇನ್ನೂ . ನಂತರವಷ್ಟೇ ಧ್ಯಾನ... ಹಾಗೊಂದು ದಿನಕ್ಕಾಗಿ ಎದುರು ನೋಡುತ್ತಲೇ......