Thursday, 29 March 2018

ದೊಡ್ಡವರಾದ ಮೇಲೆ ...






" ದೊಡ್ಡೋರಾದಮೇಲೆ ಯಾರ್ಯಾರು ಏನೇನಾಗ್ತೀರಾ ಹೇಳ್ಬೇಕಪ್ಪ ಒಬ್ಬೊಬ್ರೇ ".. ನಮಗಿಂತ ಒಂದೈದು ವರ್ಷ ದೊಡ್ಡವನಾದ ಗುಂಡ ಇದ್ದಕ್ಕಿದ್ದಂತೆ ಈ ಪ್ರಶ್ನೆ ನಮ್ಮ ಮುಂದಿಟ್ಟಾಗ ದೊಡ್ಡವರಾಗುವ ಕಲ್ಪನೆಯೇ ಇಲ್ಲದೆ ಆಟವಾಡುತ್ತಿದ್ದ ನಾವು ಕಕ್ಕಾಬಿಕ್ಕಿಯಾದೆವು. ಇನ್ನೂ ಪ್ರೈಮರಿ ಹಂತದ ಎರಡನೆಯ ವರ್ಷದಲ್ಲಿದ್ದ ನಾವೊಂದಿಬ್ಬರು ಏನು ಹೇಳಬೇಕೆಂದು ಯೋಚಿಸುವ ಮೊದಲೇ  .. " ನಾನು ಉದಯ ಬಸ್ ಡ್ರೈವರ್ ಆಗ್ತೀನಿ " ರಾಘು ದೃಢ ವಿಶ್ವಾಸದಿಂದ ಹೇಳಿದ. ಹಿಂದಿನ ದಿನವಷ್ಟೇ ನಮ್ಮಿಬ್ಬರ ಮನೆಯವರು ಚಿತ್ರದುರ್ಗಕ್ಕೆ ಹೋಗಿ ಬಂದಿದ್ದರಿಂದ ಉದಯ ಬಸ್ಸಿನಲ್ಲಿ ಡ್ರೈವರ್ ಮುಂದಿನ ಸೀಟಿನಲ್ಲೇ ಕುಳಿತು ಬಿಟ್ಟ ಕಣ್ಣು ಬಿಟ್ಟುಕೊಂಡು ಡ್ರೈವಿಂಗ್ ನೋಡುತ್ತಾ ಕುಳಿತಿದ್ದ ರಾಘುವಿಗೆ ಅವನು ದೊಡ್ಡ ಹೀರೋ ತರಹ ಕಾಣಿಸಿದ್ದ. ಫಸ್ಟ್ ಎಂದರೆ ದೊಡ್ಡದು ಎಂದುಕೊಂಡಿದ್ದ ನಾವು ಡ್ರೈವರ್ ವೇಗವಾಗಿ ಓಡಿಸುತ್ತಿದ್ದಾಗ ಫಸ್ಟ್ ಗೇರ್ ಎಂದೂ .. ಮೆಲ್ಲಗೆ ಓಡಿಸುವಾಗ ನಾಲ್ಕನೇ ಗೇರ್ ಎಂದೂ ಉದ್ಗಾರ ಎತ್ತುತ್ತಾ ಆ ಡ್ರೈವರ್ಗೆ ಉಚಿತ ಮನರಂಜನೆ ಒದಗಿಸುತ್ತಾ ಕುಳಿತಿದ್ದೆವು. ನನಗೂ ಅದನ್ನೇ ಹೇಳುವ ಆಸೆಯಾಗಿತ್ತಾದರೂ ಹುಡುಗಿಯರು ಅದನ್ನೆಲ್ಲ ಮಾಡಬಾರದೇನೋ ಎಂಬ ಸಂಶಯ ಬಂದು ತೆಪ್ಪಗೆ ಕುಳಿತೆ. ನನ್ನ ತಮ್ಮನ ಸರದಿ ಬಂದಾಗ ಅವನು ನಿಶ್ಚಿಂತೆಯಿಂದ ನಾನು ಓಂಕಾರಪ್ಪನ ಅಂಗಡಿ ಇಡುತ್ತೇನೆ ಎಂದು ಘೋಷಿಸಿದ. ಮೊದಮೊದಲು ರಂಗಪ್ಪನ ಅಂಗಡಿಯ ಬಗ್ಗೆ ಒಲವು ಇಟ್ಟುಕೊಂಡಿದ್ದವನು ಇತ್ತೀಚಿಗೆ ಪ್ಯಾರಿಸ್ ಚಾಕಲೇಟ್ ಮಾರುತ್ತಿದ್ದ ಓಂಕಾರಪ್ಪನ ಅಂಗಡಿಗೆ ಮಾರು ಹೋಗಿದ್ದ. 

ಒಬ್ಬೊಬ್ಬರೇ ಹೇಳುವುದನ್ನು ಬಾಯಿಬಿಟ್ಟುಕೊಂಡು ಕೇಳುತ್ತಾ ಕೂತಿದ್ದ ನನಗೆ ನನ್ನ ಸರದಿ ಬಂದಾಗ ಏನು ಹೇಳುವುದೆಂದು ಅರ್ಥವಾಗದೆ ಯಾವುದು ಒಳ್ಳೆಯದು ಎಂದು ಯೋಚಿಸಲಾರಂಭಿಸಿದೆ. " ಅದೆಲ್ಲ ಗೊತ್ತಿಲ್ಲ, ಬೇಗಬೇಗ ಹೇಳ್ಬೇಕು .. ಯೋಚ್ನೆ ಮಾಡಾಂಗಿಲ್ಲ ", "ಒಳ್ಳೇದು ಹುಡುಕ್ತಿದ್ದಾಳೆ ಹೇಳಕ್ಕೆ" ಎಂದೆಲ್ಲ ಅವರೆಲ್ಲರೂ ರೇಗಲಾರಂಭಿಸಿದ ಮೇಲೆ ನಿರುಪಾಯಳಾಗಿ " ನಾನು ಟಿ ಸಿ ಹೆಚ್ ಮಾಡಿ ಟೀಚರ್ ಆಗ್ತೀನಿ " ಎಂದು ಅಳುಮೋರೆಯಿಂದಲೇ ಉತ್ತರಿಸಿದೆ. ಆಶ್ರಮದಲ್ಲಿ ಇದ್ದ ಟಿ ಸಿ ಹೆಚ್ ಕಾಲೇಜಿನ ಬಿಳಿ ಸೀರೆ ಉಡುವ ಹುಡುಗಿಯರನ್ನು ಪ್ರತಿದಿನ ನೋಡುತ್ತಿದ್ದರಿಂದ ಅವರಿಗೆ ನನ್ನ ಉತ್ತರ ಅಂತಹ ಮಹತ್ವದ್ದೇನಲ್ಲ ಎನ್ನಿಸಿ ಸಮಾಧಾನವಾಯಿತು. ಕತ್ತಲಾಗುತ್ತ ಬಂದಿದ್ದರಿಂದ ಆ ಸಭೆ ಅಲ್ಲಿಗೆ ಮುಕ್ತಾಯವಾಯಿತು. ಅಂದಿನಿಂದ ಆಶ್ರಮದ ಮಕ್ಕಳೆಲ್ಲರೂ ಆಟವಾಡಿದ ನಂತರ ದೊಡ್ಡವರಾದ ಮೇಲಿನ ಮಾತುಗಳು ಆಗಾಗ್ಗೆ ಬರಲಾರಂಭಿಸಿದವು.

 

ಆಶ್ರಮ ಊರಿಗೆ ಹೊಂದಿಕೊಂಡೇ ಇತ್ತಾದರೂ ನಾವು ಆಶ್ರಮದಿಂದ ಹೊರಗೆ ಕಾಲಿಟ್ಟವರೇ ಅಲ್ಲ . ಆ ಊರಿನ ಜಗತ್ತು ನಮಗೆಲ್ಲ ಪರಿಚಯವಾಗುತ್ತಿದ್ದುದು ಆಶ್ರಮದೊಳಗೆ ಪ್ರೈಮರಿ ಶಾಲೆ ಇಲ್ಲದ್ದರಿಂದ ಅನಿವಾರ್ಯವಾಗಿ ಊರೊಳಗೆ ಇದ್ದ ಶಾಲೆಗೆ ಹೋಗುವ ಸಮಯದಲ್ಲಿ ಮಾತ್ರ. ಊರಿನ ಮಕ್ಕಳೂ ಆಶ್ರಮಕ್ಕೆ ಬರುತ್ತಿರಲಿಲ್ಲ. ನಾವು ಶಾಲೆಯಿಂದ ಮನೆಗೆ ಬರುವಾಗಲೇ ಒಂದು ಕಾಲೆತ್ತಿ ಹೊರಗಿಟ್ಟುಕೊಂಡೇ ಬರುತ್ತಿದ್ದೆವು. ಮನೆಗೆ ಬಂದವರೇ ಬ್ಯಾಗು ಬಿಸಾಕಿ ಮಕ್ಕಳ ರಾಜ್ಯಕ್ಕೆ ಓಡುತ್ತಿದ್ದೆವು.. ಅಲ್ಲಿದ್ದ ಜಾರು ಬಂಡೆ, ಜೋಕಾಲಿಗಳು, ಏತಮಣೆ, ಒಂದೆಡೆ ಹಾಕಿದ್ದ ಮರಳು ರಾಶಿ ಎಲ್ಲವೂ ನಮ್ಮ ಆಕರ್ಷಣೆಯ ಕೇಂದ್ರಗಳು. ಆಟ ಆಡುವಷ್ಟೂ ಅಡಿ ಕತ್ತಲು ಮೆಲ್ಲಗೆ ಆವರಿಸುತ್ತಿದ್ದಂತೆ ನಮ್ಮ ನಮ್ಮ ಮನೆಯಿಂದ ಬುಲಾವ್ ಬರುತ್ತಿತ್ತು. ಒಲ್ಲದ ಮನಸ್ಸಿನಿಂದ ಮನೆಗೆ ಹೋಗಿ ಕೈಕಾಲು ತೊಳೆದು ಓದಲು ಕೂಡುವಾಗ ಯಮಯಾತನೆ. ಸಂಕಟ .ರಾತ್ರಿ ಒಂಬತ್ತರವರೆಗೂ ಆಟವಾಡಲು ನಾವು ಸಿದ್ಧರಿದ್ದರೂ ದೊಡ್ಡವರಿಗೆ ನಮ್ಮ ಆಸೆಯ ಬಗ್ಗೆ  ಕಿಂಚಿತ್ತೂ ಯೋಚಿಸುವ ಔದಾರ್ಯವೂ ಇರಲಿಲ್ಲ.. ಓದು ಓದು ಎಂದು ನಮ್ಮನ್ನು ರುಬ್ಬುವುದರಲ್ಲೇ ಅವರು ಅವ್ಯಕ್ತ ಆನಂದ ಅನುಭವಿಸುತ್ತಿದ್ದರು. 


ಸ್ವಲ್ಪ ದಿನ ಕಳೆದಂತೆ ರಾಘು ಉದಯ ಬಸ್ ಡ್ರೈವರ್ ಆಗುವ ಆಸೆಗಿಂತ ಎಸ್ ಬಿ ಬಸ್ ಡ್ರೈವರ್ ಆಗೋದೇ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದಿದ್ದ .. ನನ್ನ ತಮ್ಮ ದಪ್ಪ ದಪ್ಪ ಪುಸ್ತಕ ಯಾರು ಓದ್ತಾರೆ .. ಸಿ ಪಿ ಎಡ್ ಮಾಡಿದ್ರೆ ದಿನಾ ಆಟ ಆಡ್ತಿರಬಹುದು ಎಂದು ಕನಸು ಕಾಣುತ್ತಿದ್ದ.. ಯಾವ ಕನಸೂ ಕಾಣಲಾರದಷ್ಟು ಚಿಕ್ಕವನಾಗಿದ್ದ ವಚ್ಚಿಯನ್ನು ನಾವೇ ಎರಡು ಕೆಲಸ ಊಹಿಸಿಕೊಂಡು ಎರಡು  ಬೆರಳಲ್ಲಿ  ಒಂದು ಬೆರಳು ಮುಟ್ಟು ಎಂದು ಮುಟ್ಟಿಸಿ ಅವನ ಭವಿಷ್ಯದ ಕೆಲಸ ಅವನಿಗೆ ಒಪ್ಪಿಸಿ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದೆವು. ಅಷ್ಟರಲ್ಲೇ ಆ ಊರಿನಲ್ಲಿ ಜಿತೇಂದ್ರಿಯ ಬೇಕರಿ ಎಂಬ ಹೊಸ ಆಕರ್ಷಣೆ ಶುರುವಾಗಿತ್ತು .. ಎಲ್ಲರೂ ಶಾಲೆಗೆ ಹೋಗುವ ದಾರಿಯಲ್ಲೇ ಅದು ಇತ್ತಾದ್ದರಿಂದ ಅದರ ಮುಂದೆ ಐದು ನಿಮಿಷ ನಿಂತು ಅಲ್ಲಿ ಗಾಜಿನ ಕಪಾಟಿನಲ್ಲಿಟ್ಟಿದ್ದ ಬ್ರೆಡ್ಡು , ಬನ್ನು, ಕೇಕುಗಳನ್ನೆಲ್ಲ ಅವುಗಳ ಹೆಸರು ಹಿಡಿದು ಗುರುತಿಸಿ ಸಂಭ್ರಮ ಪಡುತ್ತಾ ಹೋಗುತ್ತಿದ್ದೆವು. ನನ್ನ ತಮ್ಮನ ಗುರಿ ಮತ್ತೆ ಬದಲಾಗಿತ್ತು. ನಾನು ದೊಡ್ಡೋನಾದಮೇಲೆ ಜಿತೇಂದ್ರಿಯ ಬೇಕರಿಯನ್ನೇ ಇಡೋದು ಅಂತ ಬೇಕರಿ  ಬಂದ ಸಂಜೆಯೇ ಘೋಷಿಸಿ ಮತ್ಯಾರೂ ಆ ಕೆಲಸದ ಕಡೆ ಆಸೆ ಪಡಬಾರದೆಂದು ಹೇಳಿಬಿಟ್ಟ. ಅನಿರೀಕ್ಷಿತವಾಗಿ ಅವನಿಗೆ ಹೊಡೆದ ಬಂಪರ್ ಲಾಟರಿಯ ಬಗ್ಗೆ ಹೊಟ್ಟೆಯುರಿದು ಹೋಯಿತು ಎಲ್ಲರಿಗೂ.


ಅವತ್ತೊಂದು ದಿನ ಶಾಲೆಯಲ್ಲಿ ಸರೋಜಮ್ಮ ಟೀಚರ್ ಬಂದಿರಲಿಲ್ಲದ ಪ್ರಯುಕ್ತ ಎಲ್ಲರೂ ಸಾಧ್ಯವಾದಷ್ಟೂ ಗಲಾಟೆ ಮಾಡುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದ ಹಾಗೆ ನನಗೆ ಇವರೆಲ್ಲ ಮುಂದೆ ಏನಾಗುತ್ತಾರೆ ಎಂದು ಕೇಳುವ ಹುಕಿ ಬಂತು. ಪಕ್ಕದಲ್ಲಿದ್ದ ಒಂದಿಷ್ಟು ಗೆಳತಿಯರ ಬಳಿ ಈ ಪ್ರಶ್ನೆ ಕೇಳಿಯೇ ಬಿಟ್ಟೆ. ಮೊದಲದಿನ ನಾನು ಕಕ್ಕಾಬಿಕ್ಕಿಯಾದಂತೆ ಇವರೂ ಯೋಚಿಸಲಾರಂಭಿಸಿದರು . ನನ್ನ ಮೇಲೆ ಆಶ್ರಮದ ಮಕ್ಕಳು ಮಾಡಿದ ದಬ್ಬಾಳಿಕೆಗಳನ್ನೆಲ್ಲ ಯಥಾನುಶಕ್ತಿ ನಾನು ಮಾಡಲಾರಂಭಿಸಿದೆ. ಬೇಗ ಹೇಳ್ಬೇಕು .. ಯೋಚ್ನೆ ಮಾಡಿ ಒಳ್ಳೆ ಕೆಲಸ ಹುಡುಕೊಂಗಿಲ್ಲ .. ಎಂದೆಲ್ಲಾ ಪೀಡಿಸಿದೆ. ನನ್ನ ಪೀಡನೆಯ ಬಗ್ಗೆ ಎಳ್ಳಷ್ಟೂ ಗಮನ ಕೊಡದೆ ಅವರವರೊಳಗೆ ಮಾತಾಡಿಕೊಳ್ಳತೊಡಗಿದರು. ಇನ್ನೇನಾಗದು ಅಡುಗೆ ಮಾಡಬೇಕಾಯಿತದೆ.. ನಮ್ಮಕ್ಕ ಅದ್ನೇ ಮಾಡ್ತಿರದು ಎಂದು ಸಾಕಮ್ಮ ಘೋಷಿಸಿದಳು. ನಿಮ್ಮಮ್ಮ ಅಡುಗೆ ಮಾಡಲ್ವಾ ಎಂದು ಕೇಳಿದಾಗ ನಮ್ಮಕ್ಕಗೆ ಮದ್ವೆ ಆತು.. ಅಂದುಬಿಟ್ಟಳು. ದೊಡ್ಡವರಾದ್ಮೇಲೆ ಹುಣಸೆಕಾಯಿ ಕುಯ್ಯೋಷ್ಟು ಕೈ ಉದ್ದ ಆಗಿರುತ್ತೆ .. ಬೇಗ ಕಿತ್ಕಂಡು ಭೈರನ ಕೈಗೆ ಸಿಕ್ದೆ ವಾಟ ಹ್ವಡೀಬಹದು ಎಂದೊಬ್ಬಳು ಹೇಳಿದಾಗ ಅದು ಕೆಲಸವಲ್ಲ ಎಂದು ಹೇಗೆ ಹೇಳಬೇಕೋ ಅರ್ಥವಾಗದೆ ಕಣ್ಣು ಕಣ್ಣು ಬಿಡಲಾರಂಭಿಸಿದೆ. ಇದ್ಯಾವದೂ ಕೆಲಸ ಅಲ್ಲ ಅಂತ ನಾನು ಗೋಳಾಡುವಾಗ ಒಬ್ಬಳು ನೀನೇನ್ಮಾಡ್ತೀಯಾ ಎಂದು ಒಬ್ಬಳು ಪ್ರಶ್ನೆ ಹಾಕಿ ನನ್ನನ್ನು ಬದುಕಿಸಿಬಿಟ್ಟಳು. ಆಶ್ರಮದಲ್ಲಿ ನನಗೆ ಬಿಳೀಸೀರೆ ಪಟ್ಟ ಕಟ್ಟಿದ್ದರಿಂದ ಟಿ.ಸಿ.ಹೆಚ್ ಹೇಳಲು ನನಗಿಷ್ಟವಾಗಲಿಲ್ಲ .. ಹೊಸದಾಗಿ ಬಂದ  ಡಾಕ್ಟರ್ ನೆನಪಾಗಿ ನಾನು ದೊಡ್ಡೋಳಾದ್ಮೇಲೆ ಡಾಕ್ಟರ್ ಆಗ್ತೀನಿ ಎಂದು ಹೇಳಿ ಕೆಲಸ ಎಂದರೆ ಏನು ಅಂತ ಅವರಿಗೆಲ್ಲಾ ಅರ್ಥ ಮಾಡಿಸಿದೆನೆಂದು ಬೀಗುತ್ತಾ ಕುಳಿತೆ. 


ಕಡೆಯ ಪಿರಿಯಡ್ ಎಲ್ಲರನ್ನೂ ಆಟಕ್ಕೆ ಬಿಟ್ಟಿದ್ದರಿಂದ ಹೊರಗಡೆ ಆಟದ ಮೈದಾನದಲ್ಲಿ ಕುಳಿತು ಚರ್ಚಿಸಲಾರಂಭಿಸಿದೆವು. ಜೊತೆಗೆ ಬೇರೆ ತರಗತಿಯವರೂ ಸೇರಿದರು.   ಸೀನಿಯರ್ ಹುಡುಗಿಯರಲ್ಲೊಬ್ಬಳು   ಅಲ್ಲೇ ನಿಂತು ನಮ್ಮ ಮಾತು ಕೇಳುತ್ತಿದ್ದವಳು  "ನಾನೂ ಡಾಕ್ಟ್ರಾಯ್ತೀನಿ.  ನಮ್ಮಪ್ಪ ಹೇಳೈತೆ ಓದುಸ್ತಾರಂತೆ ನನ್ನ. ನಿಮ್ಮಪ್ಪ ಓದುಸ್ತುತಾ ? " ಇದ್ಯಾವ್ದೋ ಹೊಸಾ ಕ್ಯಾರೆಕ್ಟರ್ ಎಂಟ್ರಿ ಆಗಿದ್ದು ನನ್ನ ತಲೆ ಕೆಡಿಸಿತು.ಅಪ್ಪ ಅಂದ್ರೆ ಅಂತ ಮರು ಪ್ರಶ್ನೆ ಹಾಕಿದೆ. ಅಪ್ಪ ಅಂದ್ರೆ ಅಪ್ಪ .. ನಮ್ಮನೆಗೆ ನಮ್ಮವ್ವ ಅಪ್ಪ ಇದಾರೆ .. ನಿಮ್ಮನೆಗೆ ಇಲ್ವಾ ಅಂತ ಮತ್ತೆ ಪ್ರಶ್ನೆ ಬಂತು. ನಮ್ಮನೇಲಿ ನಮ್ಮಮ್ಮ ಅಣ್ಣ ಅಕ್ಕ ತಮ್ಮ ಇದಾರೆ ಎಂದು ಉತ್ತರಿಸಿದ ಕೂಡಲೇ ಒಬ್ಬಳು ಹಂಗಾರೆ ನಿಂಗೆ ಅಪ್ಪ ಇಲ್ವಾ ಎಂದು ಥಟ್ಟನೆ ಕೇಳಿದಳು. ಇಷ್ಟರಲ್ಲೇ ಆ ಸೀನಿಯರ್ ಹುಡುಗಿಯರ ಆತಂಕದ ಪ್ರಶ್ನೆಯಿಂದ ಏನೋ ಅನಾಹುತ ಆಗಿದೆ ಅನ್ನಿಸತೊಡಗಿತ್ತು .. ನಂಗೆ ಅಪ್ಪ ಇಲ್ಲ ಎಂದು ಅಳುಮುಖದಲ್ಲೇ ಉತ್ತರಿಸಿದೆ. ಇವಳಿಗೆ ಅಪ್ಪ ಇಲ್ವಂತೆ ಎಂಬ ಮಾತು ಆ ಹುಡುಗಿಯರ ಅನುಕಂಪದ ನೋಟಗಳು ನಂಗೇನೋ ಇರಬೇಕಾಗಿದ್ದು ಇಲ್ಲ ಅನ್ನುವಷ್ಟು ಮಾತ್ರ ಅರ್ಥವಾಗಿ ಜೋರಾಗಿ ಅಳಲಾರಂಭಿಸಿದೆ. ತಕ್ಷಣ ನನ್ನ ಸುತ್ತ ಇದ್ದವರಲ್ಲೊಬ್ಬಳು ಅವಳ ಕೈಚೀಲದಿಂದ ಹುರಿದ ಹುಣಸೆಬೀಜ ತೆಗೆದು ಕೊಟ್ಟಳು .. ಅದನ್ನು ನೋಡಿ ಮತ್ತೊಬ್ಬಳು ಅಮಟೆಕಾಯಿ ಉಪ್ಪಿನಕಾಯಿಯ ತೊಳೆದು ತಂದಿದ್ದ ಹೋಳೊಂದನ್ನು ನನ್ನ ಕೈಗಿತ್ತಳು.. ಅದನ್ನು ನೋಡಿ ನನಗೆ ಅಪ್ಪನಿಲ್ಲವೆಂಬ ವಿಷಯವೇ ಮರೆತು ಹೋಗಿ ಕಣ್ಣೊರೆಸಿಕೊಂಡು ಉಪ್ಪಿನಕಾಯಿಯ ಹೋಳು ತಿಂದು ಹುಣಸೆಬೀಜ ಬಾಯಾಡಿಸುತ್ತಾ  ನೋಡಿದರೆ ಅಮ್ಮ ಬೈಯ್ಯುತ್ತಾರೆಂದು ದಾರಿಯಲ್ಲೇ ಅಲ್ಲಲ್ಲಿ ನಿಂತು ಅದನ್ನು ಪೂರ್ತಿ ತಿಂದು ನಿಧಾನವಾಗಿ ಮನೆಗೆ ಬಂದೆ. 


ಅಷ್ಟರಲ್ಲಿ ದೊಡ್ಡ ಅನಾಹುತವೇ ನಡೆದುಹೋಗಿತ್ತು. ರಾಘು, ರಾಜ ಇಬ್ಬರೂ ಜೋಕಾಲಿಗಳನ್ನು ಆಕ್ರಮಿಸಿಕೊಂಡು ಬಿಟ್ಟಿದ್ದರು. ಬ್ಯಾಗು ಬಿಸಾಕಿ ಅವರಿಬ್ಬರ ಹತ್ತಿರ ಓಡಿದೆ.. ಜೋಕಾಲಿ ಬಿಟ್ಟಿಳಿಯಲು ಬೇಡಿಕೊಂಡರೂ ಅವರಿಬ್ಬರೂ ಕರಗಲಿಲ್ಲ ..ನನ್ನಂತಹ ಅಪ್ಪನಿಲ್ಲದ ಹುಡುಗಿಯನ್ನು ಇವರಿಬ್ಬರೂ ಹೇಗೆ ಗೋಳಾಡಿಸುತ್ತಿದ್ದಾರೆ ಎಂದು ಸಂಕಟ ಶುರುವಾಯಿತು. ಅದನ್ನೇ ಹೇಳಹೊರಟವಳಿಗೆ ಥಟ್ಟನೆ ನೆನಪಾಗಿದ್ದು  ರಾಘುವಿನ ಮನೆಯಲ್ಲೂ ಅಪ್ಪ ಇಲ್ಲವೆಂಬುದು.. ಅವನೊಬ್ಬನೇ ಅಲ್ಲ ಆಶ್ರಮದಲ್ಲಿ ಯಾರ ಮನೆಯಲ್ಲೂ ಅಪ್ಪನಿರಲಿಲ್ಲ.. ಎಲ್ಲರಿಗೂ ಅಣ್ಣನೇ ಇರುವುದೆಂಬುದು ಅರಿವಿಗೆ ಬಂದು ಆಶ್ರಮದ ಎಲ್ಲ ಮಕ್ಕಳೂ ಪಾಪ ಎನ್ನಿಸತೊಡಗಿತು .. ಈ ಆಶ್ರಮದಲ್ಲಿ ನನಗೆ ಯಾರೂ ಈ ಬಗ್ಗೆ ಅನುಕಂಪ ತೋರಿಸುವುದಿಲ್ಲವೆಂದು ಖಚಿತವಾಗಿ ತೆಪ್ಪಗೆ ಜಾರುವ ಬಂಡೆಯತ್ತ ಪಯಣ ಬೆಳೆಸಿದೆ. ಶಾಲೆಯಲ್ಲಿ ಮಾತ್ರ ನನ್ನ ದರ್ಬಾರು ಮುಂದುವರೆದಿತ್ತು. 


ಆಶ್ರಮದಲ್ಲಿ ಏನೇ ಇದ್ದರೂ ಶಾಲೆಯಲ್ಲಿ ಮಾತ್ರ ನನ್ನ ಬಗ್ಗೆ ಅನುಕಂಪದ ಅಲೆಯೊಂದು ಹಾಗೆ ಇತ್ತು. ಒಂದು ದಿನ ಒಬ್ಬಳ ಕೈಯಲ್ಲಿ ಬನ್ ನೋಡಿ ಅವಳ ಬಳಿ ಹೋಗಿ ಒಂದು ಚೂರು ಕೊಡುವಂತೆ ಕೇಳಿದೆ . ಅವಳು ಸಾಧ್ಯವೇ ಇಲ್ಲ ಎಂದು ನಿರಾಕರಿಸಿ ನನಗೆ ಬೆನ್ನು ಮಾಡಿ ನಿಂತು ತಿನ್ನತೊಡಗಿದಳು. " ನಂಗೆ ಅಪ್ಪ ಇಲ್ಲ ಗೊತ್ತಾ' ಎಂದು ನನ್ನ ಮಾಮೂಲಿ ಅಸ್ತ್ರ ಪ್ರಯೋಗಿಸಿದೆ. "ನಂಗೆ ಅವ್ವನೂ ಇಲ್ಲ . ಹೋಗೆ ಅತ್ಲಗೆ " ಎಂದು ಹೆಚ್ಚುಕಡಿಮೆ ಕಿರುಚಿದಾಗ ಇನ್ನು ಇವಳು ಕೊಡುವುದಿಲ್ಲ ಎಂದು ಖಚಿತವಾಗಿ ತಣ್ಣಗೆ ಬಂದು ನನ್ನ ಜಾಗದಲ್ಲಿ ಕುಳಿತುಕೊಂಡೆ. ಇಂತಹಾ ಒಂದೆರಡು ಘಟನೆಗಳನ್ನು ಹೊರತು ಪಡಿಸಿದರೆ ಮಿಕ್ಕೆಲ್ಲ ಸಮಯದಲ್ಲೂ ನಾನು ಕೇಳಿದ್ದಕ್ಕೆ ತೀರಾ ಮೋಸವಾಗುತ್ತಿರಲಿಲ್ಲ. ಆಗಾಗ ಸಿಗುತ್ತಿದ್ದ ಹುರಿದ ಹುಣಸೆ ಬೀಜ, ದೋರು ಹುಣಸೆಕಾಯಿ, ಉಪ್ಪಿನಕಾಯಿ ಹೋಳುಗಳು, ಮತ್ತೂ ಅದೃಷ್ಟ ಚೆನ್ನಾಗಿದ್ದರೆ ಪೆಪ್ಪೆರ್ಮಿಂಟ್ .. ಈ ಎಲ್ಲ ಸೌಭಾಗ್ಯಕ್ಕೂ ಒಂದು ಕೊನೆಯ ದಿನ ಬಂದೆ ಬಿಟ್ಟಿತು. 


ಅವತ್ತೊಂದು ದಿನ ಶಾಲೆಯಲ್ಲಿ ಅದೇನೋ ಇನ್ಸ್ಪೆಕ್ಷನ್ . ಬಂದವರು ಎಲ್ಲರ ಮಾಹಿತಿ ಸಂಗ್ರಹಿಸುತ್ತಿದ್ದರು. ನನ್ನ ಸರದಿ ಬಂದಾಗ ಯಥಾಪ್ರಕಾರ ನಾನು ಅಪ್ಪನಿಲ್ಲ ಎಂದೆ. ಅದೇ ಸಮಯಕ್ಕೆ ಸರಿಯಾಗಿ ನಮ್ಮ ಹೆಡ್ ಮಾಸ್ಟರ್ ಅಲ್ಲಿಗೆ ಬಂದವರು ನನ್ನ ಮಾತಿಗೆ ಕೊಂಚ ಗಾಬರಿಯಾಗಿ ಪಕ್ಕದ ತರಗತಿಯಲ್ಲಿದ್ದ ನಾಗರತ್ನಮ್ಮ ಮೇಡಂನ ಕರೆದರು. " ನೋಡಿ.. ಈ ತಾಯಿ ಅಪ್ಪ ಇಲ್ಲ ಅಂತಿದಾಳೆ . ಇವರಪ್ಪ ಇಲ್ಲವ್ರಾ ? " ನಾಗರತ್ನಮ್ಮ ಮೇಡಂಗೆ ಈ ಪ್ರಶ್ನೆ ವಿಪರೀತ ಕಿರಿಕಿರಿಯಾಗಿ " ಇಲ್ದೆ ಏನು ? ಗುಂಡುಕಲ್ಲಂಗೆ ಇದಾನೆ ಇವಳಪ್ಪ " ಎಂದವರೇ ನನ್ನ ಕಡೆ ತಿರುಗಿ " ಯಾಕೇ ಸುಳ್ಳು ಹೇಳದು , ನಿಮ್ಮಪ್ಪನ ಹತ್ರ ಮೂರು ಹೊತ್ತೂ ಕಥೆ ಕಥೆ ಅಂತ ಗೋಳು ಹೊಯಿಕೋತಿರ್ತೀಯ.. ತಡಿ ನಿಮ್ಮಪ್ಪಂಗೆ ಹೇಳ್ತೀನಿ " ಎಂದು ಜೋರು ಮಾಡಿದರು. 


ಅಕ್ಕಪಕ್ಕದ ಹುಡುಗಿಯರೆಲ್ಲ ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದುದು  ಅವ್ರು ಇಷ್ಟು ದಿನ ಕೊಟ್ಟಿದ್ದನ್ನೆಲ್ಲ ಎಲ್ಲಿ ವಾಪಸ್ ಕೇಳುತ್ತಾರೋ ಎಂಬ ಹೆದರಿಕೆ ನನ್ನಲ್ಲಿ  ಹುಟ್ಟಿಹಾಕಿತ್ತು. ಜೊತೆಗೆ ನಾನು ಸುಳ್ಳು ಹೇಳುತ್ತಿಲ್ಲ ಎಂದು ಇವರಿಗೆಲ್ಲ ಹೇಗೆ ಹೇಳುವುದು .. ಅಣ್ಣ ಯಾವಾಗಲೂ ಸುಳ್ಳು ಹೇಳಬಾರದು ಎನ್ನುತ್ತಿದ್ದುದರಿಂದ ಇವರು ಹೋಗಿ ಅವರ ಬಳಿ ನಾನು ಸುಳ್ಳು ಹೇಳಿದೆ ಎಂದು ನಂಬಿಸಿಬಿಟ್ಟರೆ ? " ಇಲ್ಲ ನಂಗಪ್ಪ ಇಲ್ಲ.. ನಂಗೆ ದಿನಾ ಕಥೆ ಹೇಳದು ನಮ್ಮಣ್ಣ "  ಎಂದು ಜೋರಾಗಿ ಅಳಲಾರಂಭಿಸಿದೆ.


ನಾಗರತ್ನಮ್ಮನವರು ಜೋರಾಗಿ ನಕ್ಕುಬಿಟ್ಟರು..  . ಅವರು ಹೆಡ್ ಮಾಸ್ಟರ್ ಕಡೆ ತಿರುಗಿ " ಅಯ್ಯ.. ಈ ಕಡೆ ಬ್ರಾಹ್ಮಣರೆಲ್ಲ ಅಪ್ಪನಿಗೆ ಅಣ್ಣ ಅಣ್ಣ ಅಂತ ಕರೀತಾರೆ ಮೇಷ್ಟ್ರೇ .. ಅದಕ್ಕೆ ಇದು ತನಗೆ ಅಪ್ಪ ಇಲ್ಲ ಅಂತಿದೆ. ಈ ದಡ್ಡ ಶಿಖಾಮಣಿಗೆ ಆ ಅಣ್ಣನೇ ಇವರಪ್ಪ ಅಂತ ಗೊತ್ತಿಲ್ಲ .. ಬರ್ಕಳಿ.. ಇವಳಿಗೆ ಅಪ್ಪ ಇದಾರೆ " ಅನ್ನುತ್ತಲೇ ನನ್ನ ತಲೆಯ ಮೇಲೊಂದು ಮೊಟಕಿದರು. ನಂಗೆ ಅಪ್ಪ ಇದ್ದಾರೆ ಎಂದು ಖುಷಿ ಪಡುವ ಹೊತ್ತಲ್ಲೇ ಮಿಕ್ಕ ಸೌಲಭ್ಯಗಳು ಜಾರಿ ಹೋಗುತ್ತಿವೆಯಲ್ಲಾ ಎಂಬ ಸಂಕಟದಲ್ಲೇ ತೆಪ್ಪಗೆ ಕುಳಿತೆ. ಸಂಜೆ ನನ್ನೊಡನೆ ಮನೆಗೆ ಬಂದ ನಾಗರತ್ನಮ್ಮನವರು " ನೋಡೇ ರಮಾ, ಅಪ್ಪನಿಗೆ ಅಣ್ಣ ಅಂತ ಕರೆದು ತನಗೆ ಅಪ್ಪನೇ ಇಲ್ಲ ಅಂತ ಊರ ತುಂಬಾ ಹೇಳ್ಕೊಂಡು ತಿರುಗ್ತಿದೆ ಇದು. ಇದಕ್ಕೆ  ಅಪ್ಪನೇ ಅಣ್ಣ ಅಂತ ಹೇಳ್ಕೊಡು " ಎಂದಾಗ ಹೊಡೆತ ನಿರೀಕ್ಷಿಸುತ್ತಾ ಅಳುಮೋರೆ ಹೊತ್ತು ನಿಂತಿದ್ದ ನನಗೆ ಅಣ್ಣ ಬಂದು ತಬ್ಬಿ ಮುತ್ತಿಟ್ಟಾಗ ನಿರಾಳ .. ಅಣ್ಣ ತಪ್ಪು ತಿಳಿದುಕೊಳ್ಳಲಿಲ್ಲವೆಂಬ ನೆಮ್ಮದಿಯೊಂದಿಗೆ  ಮತ್ತೆ ಆಟವಾಡಲು ಹೊರಗೆ ಹಾರಿದೆ ದೊಡ್ಡವಳಾದ ಮೇಲೆ ಏನಾಗುತ್ತೇನೆಂದು ಮಾತನಾಡಲು. 

ಅಡಿಗಡಿಗೆ ಅಡಿಗರು








ಅನ್ಯರೊರೆದುದನೆ ಒರೆಯಬೇಕಾಗಿದೆ.. ಅಡಿಗರ ಬಗ್ಗೆ ಹೇಳಲು ಉಳಿದದ್ದೇನಿದೆ?  ಎಲ್ಲ ಬರೆದಿಟ್ಟ ಅಡಿಗರ ಕುರಿತ ಮಾತುಗಳನ್ನೇ ಮತ್ತೆ ಬರೆಯಬೇಕೇನೋ ಎಂಬ ಅನುಮಾನದಲ್ಲಿ ಕೂಡಾ...  ಅಡಿಗರೂ ಕನ್ನಡ ಕಾವ್ಯ ಜಗತ್ತನ್ನು ಪ್ರವೇಶಿಸುವಾಗ ಇದ್ದ ಪರಿಸ್ಥಿತಿ ಹಾಗೆ ಇತ್ತಲ್ಲವಾ? ಬರೆಯಲೇನೂ ಉಳಿದಿರದ ನವೋದಯ !! ಅಡಿಗರ ಕನ್ನಡ ಕಾವ್ಯ ಜಗತ್ತನ್ನು ಪ್ರವೇಶಿಸುವಾಗಿದ್ದ ಪರಿಸ್ಥಿತಿ ಅವಲೋಕಿಸಿದರೆ ಹಿಂದಿನ ಕನ್ನಡ ಕಾವ್ಯ ತನ್ನ ಸಹಜ ಸಾವನ್ನು ಅಪ್ಪುವತ್ತ ಸಾಗಿತ್ತೇನೋ ನಿಜವೇ. ( ಸಾಹಿತ್ಯ ಪರಂಪರೆಗಳ ಸಾವು ಅಸಹಜವೂ ಒಮ್ಮೆಮ್ಮೆ ಆಗಬಹುದಾದರೂ ನವೋದಯದ ಸಾವು ಸಹಜವಾಗಿಯೇ ಸಂಭವಿಸುವ ಹಾದಿಯಲ್ಲಿತ್ತು. ಅಡಿಗರು ಆ ಸಾವನ್ನು ಸ್ವಲ್ಪ ಕಾಲ ಮುಂದೂಡಿದರು ಕೂಡಾ. ಅಡಿಗರಲ್ಲಿರುವ ಬಹಳ ದೊಡ್ಡ ಗುಣ ಅವರ ಪ್ರಾಮಾಣಿಕತೆ.. ಅದು ತನ್ನ ಬಗ್ಗೆ ತನಗಿದ್ದ ಪ್ರಾಮಾಣಿಕತೆ..   ಅವರ ಕಾವ್ಯವನ್ನು ಬಹಳ ಮುಖ್ಯವಾಗಿ ಪೂರ್ವಾರ್ಧದ ಕಾವ್ಯ ಮತ್ತು ಉತ್ತರಾರ್ಧದ ಕಾವ್ಯ ಎಂದು ಸ್ಪಷ್ಟವಾಗಿ ವಿಂಗಡಿಸಿಕೊಳ್ಳಬಹುದಾದರೆ ಪೂರ್ವಾರ್ಧದ ಕಾವ್ಯವನ್ನು ಆರೋಹಣವೆಂದೂ ಉತ್ತರಾರ್ಧವನ್ನು ಅವರೋಹಣವೆಂದೂ ಕರೆಯಬಹುದು.. ಅವರೋಹಣವೆಂದರೆ ಇಳಿಕೆಯಲ್ಲ ..ಮಾಗುವಿಕೆ.. ಮಾಗುವಿಕೆಯ ಸಾಗುವಿಕೆ. ಪುತಿನ , ಬೇಂದ್ರೆಯಂತಹ ಒಂದಿಬ್ಬರು ಕವಿಗಳನ್ನು ಹೊರತುಪಡಿಸಿ ಅಡಿಗರು ಮಿಕ್ಕೆಲ್ಲರ ಕಾವ್ಯವನ್ನು ಸಾವಿನತ್ತ ಮೊಗ ಮಾಡಿರುವ ಕಾವ್ಯ ಎಂದೇ ಪರಿಗಣಿಸಿದ್ದರು. ಆರೋಹಣದಲ್ಲಿ ಶ್ರಮವಿರುತ್ತದೆ .. ಸಂಕಟವಿರುತ್ತದೆ .. ದಾರಿಯ ಹುಡುಕಾಟವಿರುತ್ತದೆ.  ದೇಹ ಮನಸ್ಸು ಬಳಲಿ ಬೆಂಡಾಗುತ್ತದೆ .. ದಣಿಯುತ್ತದೆ... ದಣಿದ ಅಸಹಾಯಕತೆಗೆ ಸಿಟ್ಟು ಉಕ್ಕುತ್ತದೆ.. ಈ ಆರೋಹಣದ ಶೃಂಗ ಅಡಿಗರ ಕಾವ್ಯದಲ್ಲಿ ಭೂಮಿಗೀತ ಮತ್ತು ಹಿಮಗಿರಿಯ ಕಂದರ .. ನಂತರ ಆರೋಹಣ ಇರಲಿಲ್ಲವಾ ? ಅವರಿಗೆ ಗುರಿ ದಕ್ಕಿಬಿಟ್ಟಿತಾ ಎಂದರೆ ದಕ್ಕಿದ್ದು ಗುರಿಯಲ್ಲ.. ಸಾಗುವ ಸಾಗಬೇಕಾಗಿರುವ ತಲ್ಲಣದ ಹಾದಿ. ಅವರ ಹಿಮಗಿರಿಯ ಕಂದರದಲ್ಲಿ ಆ ಎತ್ತರವೇರ ಹೊರಟ ಅಡಿಗರ ಮುಂದಿದ್ದ ಸಮಸ್ಯೆ ಆಧುನಿಕತೆಯ ಒಳಗೆ ಇರುವ ಮೂಲಭೂತ ಸಮಸ್ಯೆಯೂ ಹೌದು. ಎತ್ತರ ಎಂಬುದು ಯಾವ ಕಾಲಕ್ಕೂ ಗೌರವಿಸಬೇಕಾದ ಮೌಲ್ಯವೇ ಆಗಿದ್ದರೂ ಆ ಎತ್ತರ ಸ್ಥಿರವಾಗಿಯೂ ಇರಬೇಕೆನ್ನುವುದು. ಇಂದು ಎತ್ತರ ಕಂಡಿದ್ದು ನಾಳೆ ಕಿರಿದಾಗಿ ಕಾಣಬಾರದು.. ಇಂದು ಕಿರಿದಾಗಿ ಕಂಡದ್ದು ನಾಳೆ ಎತ್ತರ ಅನ್ನಿಸಲಾರಂಭಿಸಿದರೆ ಅಥವಾ ನಿನ್ನೆ ಕಂಡಿದ್ದ ಎತ್ತರದ ಅಸ್ತಿತ್ವವೇ ಇಂದು ಇಲ್ಲವೆನಿಸಿಬಿಟ್ಟರೆ ಸಾಧಕನ ಹಾದಿ ತಬ್ಬಿಬ್ಬಾಗಿ ಬಿಡುತ್ತದೆ. ಎತ್ತರದ ಹಿಂದಿನ ಗೌರವ, ಎತ್ತರವನ್ನು ತಲುಪುವ ಹಂಬಲ, ಎತ್ತರದ ಮಹತ್ವ ಎಲ್ಲವೂ ಗೊತ್ತಿದ್ದೂ ಎತ್ತರವನ್ನು ಮುಟ್ಟಲು ಹೋಗುವ ಮಾರ್ಗವೂ ಅಸ್ಥಿರ.. ಎತ್ತರ ಯಾವುದು ಎನ್ನುವುದನ್ನು ಕುರಿತ ಪರಿಕಲ್ಪನೆಯೂ ಅಸ್ಥಿರ ಎನ್ನಿಸಿಬಿಟ್ಟರೆ ಸಾಧಕ ತಬ್ಬಿಬ್ಬಾಗಿ ಬಿಡುತ್ತಾನೆ. ಕೊನೆಗೆ ಉಳಿಯಬೇಕಾದ್ದು ಗಟ್ಟಿಯಾದ ಮೌಲ್ಯ.. ಇಲ್ಲಿ ಹಿಮಗಿರಿಯೆಂದರೆ ಹಿಮಾಲಯವೇ ಆಗಬೇಕಿಲ್ಲ.. ಕರಗುವ ಗುಣವುಳ್ಳ ಎತ್ತರವೂ ಆಗಬಹುದು ..ಜೊತೆಗೆ ತಾನೇರುವೆತ್ತರಕ್ಕೆ ಏರ ಹೊರಟಾಗ ತುಸು ಕಾಲು ಜಾರಿದರೂ ಕಂದರಕ್ಕೆ ಬೀಳುವ ಅಪಾಯ... ಹಾಗಾಗಿಯೇ ಅವರು ಹಿಮಗಿರಿಯ ಕಂದರದತ್ತ ಹೊರಡುವ ರೈಲನ್ನು ಹತ್ತಿಸಲಾರರು. ಗಟ್ಟಿಯಾಗಬೇಕೆಂಬುದು ಅಡಿಗರ ಯಾವತ್ತಿನ ಹಠ.. ದಾರಿ ಗಟ್ಟಿಯಿರಬೇಕು.. ಗುರಿ ಗಟ್ಟಿಯಿರಬೇಕು.. ಹೋಗುವ ಸಂಕಲ್ಪ ಗಟ್ಟಿಯಿರಬೇಕು.. ಇದರ ಕುರಿತು ಅಡಿಗರು ಪಟ್ಟ ಶ್ರಮ ಎದುರಿಸಿದ ಸವಾಲು .. ಪಟ್ಟ ಸಂಕಷ್ಟ ಯಾವ ಕವಿಯೂ ಪಡಲಿಲ್ಲ. ಹಿಮಗಿರಿಯ ಕಂದರದಲ್ಲಿ ಅವರು ಆ ಎತ್ತರವನ್ನು ಕಾಣುತ್ತಾರೆ ಜೊತೆಜೊತೆಗೆ ಅದು ಸ್ಥಿರವಲ್ಲವೆಂಬ ತಲ್ಲಣವನ್ನೂ .. ಅಲ್ಲಿ ದಕ್ಕುವ ತಂಪಿನೊಡನೆ ಕರಗುವ ಗುಣವುಳ್ಳ ಹಿಮವನ್ನು ಕರಾಗಬಹುದಾದ ಮೌಲ್ಯಗಳ ಜೊತೆಗೆ ಸಮೀಕರಿಸಿಕೊಂಡರಾ ಅಡಿಗರು?   ತನ್ನ ಅನುಭವಗಳೇ ತನ್ನನ್ನು ಗಟ್ಟಿಯಾಗಿಸುವುದೆಂದು ಅರಿತಿದ್ದ ಅಡಿಗರು ಅನುಭವವನ್ನೇ ಬಗೆಯುತ್ತಾ ಆ ಎತ್ತರ ತಲುಪಹೊರಟಿದ್ದು ಈಗ ಕೇಳುವುದಕ್ಕೆ ಬಹಳ ಸಾಮಾನ್ಯವಾದ ಸಂಗತಿಯಂತೆ ಕಾಣುತ್ತದೆ.. ಆ ದಾರಿಯಲ್ಲಿ ಕ್ರಮಿಸಿದ್ದು ಸಾಮಾನ್ಯವಲ್ಲವೇ ಅಲ್ಲ. 

ಇಷ್ಟಕ್ಕೂ ಅನುಭವದ ಅರ್ಥ ರೂಪುಗೊಳ್ಳುವುದಾದರೂ ಎಲ್ಲಿ? ಕಾಲಿಗೊಂದು ಮುಳ್ಳು ಚುಚ್ಚಿದರೆ ಗಾಯ.. ಯಾರಾದರೂ ಕೆನ್ನೆಗೆ ಹೊಡೆದಾಗ ಪೆಟ್ಟು ಇಂತಹವುಗಳು ಘಟನೆಗಳೇ. ಅದರಿಂದ ಉದ್ಭವವಾಗುವ ನೋವು.. ಮತ್ತು ಅವಮಾನಗಳು ಅನುಭವ ಎನ್ನುತ್ತಾ ನಮ್ಮ ಜೀವನದ ಯಾವುದೇ ಅನುಭವವಾಗುವುದು ಇನ್ನೊಬ್ಬರಿಂದಲೋ.. ಇನ್ನೊಂದು ಜಗತ್ತಿನಿಂದಲೋ ಹೊರಗಿನಿಂದೆ ಆಗಿರುತ್ತದೆ ಎಂದುಕೊಂಡುಬಿಡುತ್ತೇವೆ. ಆದರೆ ಅನುಭವ ಹಾಗೆ ರೂಪುಗೊಳ್ಳುವುದೇ ಇಲ್ಲ. ಹೇಗೆ ಕಬ್ಬು ಸಕ್ಕರೆ ಕಾರ್ಖಾನೆಗೆ ಕಚ್ಚಾವಸ್ತುವಾಗಿ ಬಂದುಬೀಳುತ್ತದೆಯೋ ಹಾಗೆಯೇ ಹೊರಗಿನ ಎಲ್ಲ ಘಟನೆಗಳೂ ಕಚ್ಚಾವಸ್ತುವಾಗಿ ನಮ್ಮೊಳಗಿನ ಸುಪ್ತ ಮನಸ್ಸಿಗೆ ಬಂದು ಬೀಳುತ್ತದೆ. ದೇಹ, ಬುದ್ಧಿ ಮನಸ್ಸು ಈ ತ್ರಿಪುಟಿಎಂಬ ನಿಜವಾದ ಕಾರ್ಖಾನೆಯೊಳಗೆ ಹೊರಗಿನಿಂದ ಬಂದು ಬೀಳುವ ಮಾತು, ಘಟನೆ, ದೃಶ್ಯ, ಸ್ಪರ್ಶ ಎಲ್ಲವೂ ಸಂಸ್ಕರಿತಗೊಂಡು ನಮ್ಮ ಅರಿವಿನೊಳಗೆ ಮೂಡುವ ಪ್ರಕ್ರಿಯೆ ನಿಜವಾದ ಅನುಭವ. ಅಂದರೆ ಅನುಭವವನ್ನು ರೂಪಿಸುವ ಅಂಶ ಒಳಗಿದೆಯೇ ಹೊರತು ಹೊರಗಿಲ್ಲ. ಇದು ಅಷ್ಟು ಸುಲಭಕ್ಕೆ ದಕ್ಕುವ ವಿಷಯವೂ ಅಲ್ಲ.. ಸಾಕಷ್ಟು ಆಧುನಿಕರೂ,, ಪಾಶ್ಚತ್ಯವನ್ನು ಓದಿಕೊಂಡಿದ್ದವರೂ .. ಸಂಸ್ಕೃತವನ್ನು ಅಭ್ಯಸಿಸಿದವರೂ ಆಗಿದ್ದೂ  ಈ ಘಟನೆಗಳು ರೂಪಿಸಿದ ಅನುಭವದ ಮೂಲ  ಹೊರಗಿನದೋ  ಒಳಗಿನದೋ ಎಂದು ಅರಿಯಲು ಅಡಿಗರು ಪಟ್ಟಷ್ಟು ಸಂಕಟ ಮತ್ತಾವ ಕವಿಯೂ ಪಟ್ಟಿಲ್ಲ. ಅವರ ಪೂರ್ವಾರ್ಧದ ಕವಿತೆಗಳಿಗಿಂತ ಉತ್ತರಾರ್ಧದ ಕವಿತೆಗಳಲ್ಲಿ ಈ ತಲ್ಲಣ , ಹುಡುಕಾಟ ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. 

ಗಾಂಧಿ ಕೊಲೆಯ ನಂತರ ಆ ಕೊಲೆ ಈ ದೇಶದ ರಾಜಕಾರಣವನ್ನು ಎಷ್ಟು ಛಿನ್ನಛಿನ್ನವಾಗಿಸಿತು ಎನ್ನುವುದನ್ನು ಗಮನಿಸುತ್ತಲೇ ಗಾಂಧಿಯ ಕೊಲೆಯ ಅನುಭವ ತನ್ನೊಳಗೆ ಹುಟ್ಟಿಸಿದ ಅನುಭವವೋ ಅಥವಾ ಇಡೀ ದೇಶದಲ್ಲಿ ಗಾಂಧಿಯ ಕೊಲೆಗೆ ಒಂದು ಸಮೂಹ ರೂಪಿಸಿದ ಅರ್ಥವೋ .. ಯಾವ ಅನುಭವ ಮುಖ್ಯ ಯಾವುದು ಪ್ರಾಮಾಣಿಕ ಎನ್ನುವಾಗ ಅಡಿಗರು ಕೊನೆಗೆ ಹೇಳುವುದು ಗಾಂಧಿಯ ಕುರಿತು.. ಗಾಂಧಿಯ ಕೊಲೆಯ ಕುರಿತು ತನಗೇನನ್ನಿಸಿತೋ ಅದಷ್ಟೇ ಸತ್ಯ. ತನ್ನೊಳಗೆ ಗಾಂಧಿಕೊಲೆ ರೂಪಿಸಿದ ಅನುಭವ ಮಾತ್ರ ತನ್ನ ಅನುಭವ, ಅನುಭವವೆನ್ನುವುದು ಘಟನೆಯ ಮೇಲೆ ತಾನು ಹೇರಿದ ತನ್ನ ಸ್ವಂತ ಭಾವ .. ಅನುಭವವನ್ನು ರೂಪಿಸುವವರು ತಾವೇ ಆಗಿದ್ದರಿಂದ ಆ ಅನುಭವ ಕೊಡುವ ಸುಖ ದುಃಖ ಎಲ್ಲವೂ ತಮ್ಮತಮ್ಮ ಜವಾಬ್ದಾರಿಯೇ. ಹೀಗಾಗಿಯೇ ಅಡಿಗರು "ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ" ಎಂದರೆ ಅದು ಅತ್ಯಂತ ಪ್ರಾಮಾಣಿಕವೆನ್ನಿಸುತ್ತದೆ. 

ಇದನ್ನು ನವೋದಯದಲ್ಲಿ ಬೇಂದ್ರೆಯವರೂ ಮಾಡಿದ್ದರೂ ಅವರಲ್ಲಿ ಆಧುನಿಕತೆಯ ತೊಳಲಾಟವಿರಲಿಲ್ಲ. ಅವರ ಆಶಯ ಪ್ರಜ್ಞೆಯಿಂದ ಅದೆಲ್ಲವನ್ನೂ ಅರಿತಂತಿದ್ದ ಬೇಂದ್ರೆಯವರ ಶ್ರದ್ಧೆ ಅವರಿಗೆ ಮರಾಠಿ ಸಂತರಿಂದ, ಜ್ಞಾನೇಶ್ವರಿ, ವೇದ ಉಪನಿಷತ್ತುಗಳಿಂದ, ದಾಸಬೋಧಗಳಿಂದ ಪರಂಪರಾನುಗತವಾಗಿಯೇ ದಕ್ಕಿತ್ತು. " ಕಡ್ಡಿ ಅಲುಗದು ಅಕಸ್ಮಾತ್ಯದಿಂದ..ಹುತ್ತ ಉರುಳೀತೇನು ಗುಂಡಿನಿಂದ " ಎಂದು ಬರೆಯುವ ಬೇಂದ್ರೆಗಿದ್ದ ಖಚಿತ ನಂಬಿಕೆ ಆ ಆಧುನಿಕತೆಯನ್ನು ಎದುರಿಸಬೇಕಾದ ಅನಿವಾರ್ಯತೆ ಇಲ್ಲದ ಕಾಲಘಟ್ಟದಿಂದಲೂ ಬಂದಿರಬಹುದು. ಇಬ್ಬರೂ ಆ ದಾರಿಯಲ್ಲಿ ಕ್ಯೂ ನಿಂತವರೇ. ರೇಡಿಯೋ ಬಂದಾಗ ನಮ್ಮ ಮೌಲ್ಯಗಳು ನಾಶವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದ ಬೇಂದ್ರೆಯವರಿಗಿಂತ ಅಡಿಗರು ಎದುರಿಸಿದ್ದ ಕಾಲ ಮತ್ತೂ ಆಧುನಿಕವಾಗಿತ್ತು. ಒಮ್ಮೆ ಸೋಲಾಪುರದಲ್ಲಿ ಬೇಂದ್ರೆಯವರು ಮಾಡಿದ ಮರಾಠಿ ಭಾಷಣದಲ್ಲಿ " ಮುಂದೊಮ್ಮೆ ತಾನು ಕವಿಯಾಗಿಯೇ ಹುಟ್ಟುತ್ತೇನಾದರೂ ಮೊದಲು ಜ್ಯೋತಿಷಿಯಾಗಿ ತಾರಾಗಣಗಳನ್ನು ತಿದ್ದಿ ಭೂಮಿಯನ್ನು ಸ್ವಚ್ಛಮಾಡಿ ನಂತರ ಕವಿಯಾಗುತ್ತೇನೆ " ಎಂಬ ಮಾತು ಗಮನಾರ್ಹ. ಶ್ರದ್ಧೆಯ ಜೊತೆಜೊತೆಗೆ ಅವರಲ್ಲಿಯೂ ತಲ್ಲಣವಿತ್ತು. ಒಂದು ಬಿಂದುವಿನಿಂದ ಮತ್ತೊಂದು ಬಿಂದುವಿನೆಡೆಗೆ ಹೊರಟಾಗ ತಾವು ನಿಂತ ಬಿಂದು, ತಲುಪಬೇಕಾದ ದಾರಿ.. ಇನ್ನೊಂದು ಬಿಂದುವಿಗೆ ತಲುಪಿದಾಗ ಆಗುವ ಅನುಭವ .. ಈ ಖಾಚಿತ್ಯ ಬೇಂದ್ರೆಯವರಿಗಿದ್ದ ಹಾಗೆ ಅಡಿಗರಿಗಿರಲಿಲ್ಲ ಎನ್ನುವವರು ಅಡಿಗರು ಎದುರಿಸಿದ ಕಾಲಘಟ್ಟವನ್ನು  ಬಹಳ ಮುಖ್ಯವಾಗಿ ಪರಿಗಣಿಸಬೇಕು. ಅವರೆದುರಿಸಿದ್ದು ತಮ್ಮ ತಾಯಿಯನ್ನೇ ತಾವು ನಂಬಬೇಕೋ ಬೇಡವೋ ಎಂಬಷ್ಟು ಕ್ರೂರಿಯಾಗಿದ್ದ ಕಾಲ. 

ಅವರ ಉತ್ತರಾರ್ಧದ ಕಾವ್ಯದಲ್ಲಿ ಈ ಎಲ್ಲ ಅಂಶಗಳಿವೆ. ಜೀವನವನ್ನು ಕೇವಲ ವರ್ತಮಾನದ ಹಿನ್ನೆಲೆಯಲ್ಲಿ ಅಷ್ಟೇ ಅರ್ಥಮಾಡಿಕೊಳ್ಳಹೊರಡದೆ ಇಡೀ ಬ್ರಹ್ಮಾಂಡದ ಆದಿ ಅನಂತದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳುವತ್ತ ಪಯಣ ಹೊರಟವರು ಅಡಿಗರು. ಅವರ ನೀ ಬಳಿಯೊಳಿರುವಾಗ್ಗೆ ಎಂಬ ಕವಿತೆ ಅವರ ಉತ್ತರಾರ್ಧದ ಅಷ್ಟೂ ಪ್ರಕ್ರಿಯೆಯನ್ನೂ ಒಂದೇ ಪದ್ಯದಲ್ಲಿ ಒಳಗೊಂಡ ಕವಿತೆ . ಬಡಿದಿಷ್ಟ ದೇವತಾವಿಗ್ರಹಕ್ಕೊಗ್ಗಿಸುವ ಅಸಲು ಕಸುಬಿನಿಂದ ಆರಂಭಿಸಿದ ಅಡಿಗರು " ಹೃದಯ ಮಧ್ಯವೇ ರೂಪು ತಳೆವ ತ್ರಿಜಯೆಗಳಸಂಖ್ಯಕ್ಕೆ ಗುರಿಮುರಿತಣಿವು ತರುವ ಪರಿಧಿಯ ಸಾಮತೇಜಸ್ಸೇ, ನಮಸ್ಕಾರ " ಎನ್ನುವಲ್ಲಿ ಬಂದು ನಿಲ್ಲತ್ತಾರೆ. ಅಸಲು ಕಸುಬನ್ನು ಮಾಡುತ್ತಾ ಬಂದು ಅದು ಫಲಿತವಾದದ್ದೆಲ್ಲಿ ಎಂದರೆ ಸಾಮ ತೇಜಸ್ಸಿಗೆ ನಮಸ್ಕಾರ ಮಾಡುವ ಮಣಿತದಲ್ಲಿ. ..!!. ಅನುಭವ ಪಕ್ವವಾಗಿದ್ದು ಹಾಗೆ... ಮಣಿದ ಅಡಿಗರ ಸ್ಮರಿಸುತ್ತಾ ... ಆ ಮಣಿತದತ್ತ ಕ್ರಮಿಸುತ್ತಾ .... ಅಡಿಗರಿಗೊಮ್ಮೆ ನಮಸ್ಕಾರ ...

ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ





ಅವಳಿಗೇಕೋ ಎಲ್ಲವೂ ನೆನಪಾಗುತ್ತಿದೆ. ಅವನು ಅವಳ ಜೀವನದಲ್ಲಿ ಬಂದು ಹತ್ತು ವಸಂತಗಳು !!  ಅವನು ಬಂದದ್ದೇ ವಸಂತದಂತೆ.. ಅವಳ ಬದುಕಿನ ವಸಂತವಾಗಿ... ಮತ್ತೂರ ತೇರಿನ ದಿನ ಕಂಡವನು .. ಅವಳ ಅತ್ತಿತ್ತ ಸುಳಿದವನು . ಅವಳು ಕರೆಯಲೆಂದು ಹಂಬಲಿಸಿದವನು .. ಅವಳ ಪತಿ, ಅವಳ ನಲ್ಲ . ಅವರಿಬ್ಬರ ಬದುಕಿಗೀಗ ಹತ್ತು ವರ್ಷಗಳು. 


ಅವನಾದರೂ ಎಂತಹಾ ಪ್ರೇಮಿ . ಕರೆದುಬಿಡು ಬಂದುಬಿಡುವೆನೆಲ್ಲಿಂದಲೆ ಆಗಲಿ, ಬೆಟ್ಟ ಹತ್ತಿ ಹೊಳೆಯ ದಾಟಿ , ಯಾರೆ ನನ್ನ ತಡೆಯಲಿ ಎಂದವನು..ಬಿಸಿಹಾಲಿನ ಬಟ್ಟಲಂತಹಾ ಪ್ರೀತಿಗೆ ಮನಸೋತವನು .. ಮಲ್ಲಿಗೆಯ ಮನಸಿನ ಹುಡುಗಿಯ ಕಂಡು ಮೈ ಮರೆತವನು. ಅವಳೂ ಅಂತಹವಳೇ. ಉಕ್ಕುಕ್ಕಿ ಬರುವ ಭಾವಗಳನ್ನು  ಒಂದು ಕಣ್ಸನ್ನೆಯಲ್ಲಿ, ಹೆಜ್ಜೆಯಿಡುವ ಲಾಸ್ಯದಲ್ಲಿ, ಕೈ ಚಲನೆಯಲ್ಲಿ, ಮಿಂಚುಗಣ್ಣ ತುದಿಯಲ್ಲಿ ಅವನಿಗೆ ದಾಟಿಸುವವಳು.. ಇಂತಹಾ ಇವರಿಬ್ಬರ ಬದುಕಿಗೀಗ ಹತ್ತು ವರ್ಷಗಳು.


ಹತ್ತಿರದ ಹೆಣ್ಣೆಂದು ಅವಳನ್ನು ವರಿಸುವ ಹೊತ್ತು. ಅದು ಊರಿಗೆ ಹತ್ತಿರದ ಹುಡುಗಿಯಾ ಮನಕ್ಕೆ ಹತ್ತಿರವಾದವಳಾ . ಅವನಿಗೆಲ್ಲಿಲ್ಲದ ಸಂಭ್ರಮ. ಇಡೀ ಊರು ಹುಡುಕಿದರೂ ಅವನಿಗೆ ಅವಳಂತಹಾ ಮತ್ತೊಬ್ಬ ಚೆಲುವೆ ಕಣ್ಣಿಗೆ ಬೀಳುತ್ತಿಲ್ಲ. ಹೇಳಿಕೇಳಿ ಅದು ನವಿಲೂರು. ನವಿಲೂರು ಎಂಬ ಹೆಸರಲ್ಲೇ ಅದೆಷ್ಟು ನವಿರುತನ .. ಅಂತಹಾ ಊರಿನಲ್ಲೂ ಇವಳೇ ಚೆಲುವೆ.. ಇವಳೊಬ್ಬಳೇ ಚೆಲುವೆ. ಅವನ ಕನಸಿನ ನೇಯ್ಗೆಗೆ ಇವಳ ಭಾವಗಳೆಳೆಯ ಬಣ್ಣ  .. ಇವಳ ಪ್ರತಿ ಹೆಣಿಗೆಯಲ್ಲೂ ಅವನೇ .. ಅವನೊಬ್ಬನೇ . ಇವಳ ತಟ್ಟೆಯ ತುಂಬಾ ಅನ್ನ ನೊರೆಹಾಲು ತುಂಬಿಸುವ ಬಯಕೆ ಅವನದು.ಅವನ ಬದುಕಿನ ಹಾದಿಯ ಮಲ್ಲಿಗೆಯಲ್ಲಿ ತುಂಬುವ ತುಡಿತ ಇವಳದು.. ಇಂತಹಾ ಕನಸುಗಳ ತೇರೆಳೆದ ಇವರಿಬ್ಬರ ಬದುಕಿಗೀಗ ಹತ್ತು ವರ್ಷಗಳ ಸಂಭ್ರಮ. 

ಅವಳು ಊರಿಗೆ ಹೋದವಳು ಬರುವಾಗ ಕಾತುರ ತಾಳಲಾಗದೇ ಊರ ಬೇಲಿಗೇ ಬಂದವನವನು. ನವಿಲೂರಿಗಿಂತ ಹೊನ್ನೂರೇ ಸುಖವೆಂದು ಕನಸಲ್ಲೂ ನುಡಿವವಳಿವಳ
ಹೇಗಿರಬಹುದು ಇವರಿಬ್ಬರ ಬದುಕು. ಅವಳ ಮುಡಿಯಲ್ಲಿನ್ನೂ ಮಲ್ಲಿಗೆ ನಗುತ್ತಿರಬಹುದಾ? ಪ್ರೀತಿಯೊಂದನೆ ನಿನ್ನ ಬೇಡುವೆನು ನಾನು ಎಂದವನಿಗಿನ್ನೂ ಪ್ರೀತಿಯೇ ಮುಖ್ಯವಾಗಿದೆಯಾ ? ಅವಳೀಗ ಅದನ್ನೆಲ್ಲಾ ಹೇಳುವ ಹೊತ್ತು. ಅವಳದನ್ನು ಅವನಿಗೇ ಹೇಳುತ್ತಿದ್ದಾಳೆ. ಅಥವಾ ಆವನಿಗೆ ಹೇಳುತ್ತಿರುವಂತೆ ಸ್ವಗತವಾಡುತ್ತಿದ್ದಾಳೆ.

ಹತ್ತು ವರ್ಷಗಳು ಬದುಕಿನಲ್ಲೊಂದು ಸ್ಥಿರತೆ ಕೊಟ್ಟಿದೆ, ಮೊದಲಿರುಳ ಹೊಂಗನಸ ಮುನ್ನೀರ ದಾಟಿಸಿದವ ಅಂತಹಾ ಆರಂಭದ ರೋಮಾಂಚನ, ಆಕರ್ಷಣೆಗಳ ಮೀರಿದ ಭಾವಬಂಧುವಾಗಿದ್ದಾನೆ.  ಬಾಗಿಲಿಗೆ ಬಂದು ಬೇಗ ಬಾ ಎಂದವನು ಬಂದುದೇಕೆ ಎಂದೂ ರೇಗಿದ್ದಾನೆ. ನೋಡು ಬಾ ಎಂದವನು ಬೇಡ ಹೋಗು ಎಂದೂ ಮುನಿದಿದ್ದಾನೆ . ತೊತ್ತೆಂದು ಕರೆದನೆಂದು ಕಣ್ಣಲ್ಲಿ ಹನಿ ಮೂಡುವ ಮುನ್ನ ಮುತ್ತೆಂದು ಮುದ್ದಿಸಿ ಹನಿಯಿಂಗಿಸಿದ್ದಾನೆ. ಚಂದಿರನ ಮಗಳೆಂದಿದ್ದಾನೆ ..ಹಾಡಿದ್ದಾನೆ.. ನಕ್ಕು ನಗಿಸಿದ್ದಾನೆ .. ರೇಗಿದ್ದಾನೆ .. ಸಿಟ್ಟಿಗೆದ್ದಿದ್ದಾನೆ . ಜರಿದಿದ್ದಾನೆ.. ಅವಳು ಅದನ್ಯಾವುದನ್ನೂ ದೂರೆಂಬಂತೆ ಹೇಳುತ್ತಿಲ್ಲ.... ಅವಳೊಬ್ಬಳೆ ಮೈಮರೆತು ಮಾತನಾಡಿಕೊಳ್ಳುತ್ತಿದ್ದಾಳೆ.ಕನವರಿಸಿದಂತೆ ..

ಹೌದಾ ? ಹಾಗಾದೀತಾ ನಿಜ ಬದುಕಿನಲ್ಲಿಯೂ ? ಮೊದಲ ದಿನಗಳ ಸಂಭ್ರಮ ಮುಗಿದ ಮೇಲೆ ಯಾರಿದ್ದರೂ ಇಷ್ಟೇ ಅನ್ನಿಸಿ ಬಿಡುತ್ತದೆಯಾ ? ಸತತ ಸಾಂಗತ್ಯ ಏಕತಾನತೆಯಾಗಿ ಬಿಡುತ್ತದೆಯಾ ? ಅವಳ ಹೆಜ್ಜೆ ಅವನೆದೆಯಲ್ಲಿ ಸದ್ದು ಮೂಡಿಸುವುದಿಲ್ಲವಾ ? ಅವಳ ಮಿಂಚುಗಣ್ಣು ಅವನಲ್ಲೀಗ ಪುಳಕ ತರುತ್ತಿಲ್ಲವಾ ? ಅವನ ಒಲವು ಅವಳ ಆದ್ಯತೆಯ ಪಟ್ಟಿಯಲ್ಲಿ ಕೆಳಗಿಳಿಯುತ್ತದೆಯಾ? ಪರಸ್ಪರರ ಜವಾಬ್ದಾರಿಗಳು ಹೆಗಲೇರಿದೆ ಹೊಡೆತಕ್ಕೆ ಎಲ್ಲವೂ ಯಾಂತ್ರಿಕವಾಗಿ ಸಾಗುತ್ತಿದೆಯಾ ? ಯಾರ ಬದುಕೂ ನಿತ್ಯ ನೂತನವಲ್ಲವಾ? ಹಾಗಾದರೆ ಮದುವೆ ಕೊಡುವುದೂ ಪರಸ್ಪರ ಯಾಂತ್ರಿಕ ಹೊಣೆಗಾರಿಕೆಯನ್ನಷ್ಟೇ ಎಂದಾ ? ನಿನ್ನ ಬಲ್ಲವನೆಂದು ನಾನು ನಟಿಸಿದ್ದೇನೆ ; ನನ್ನ ನೀನೂ ಬಲ್ಲೆ ಅಲ್ಲಿಯತನಕ . ಅರಿವುಗಳ ನಡುವೆ ನಾನೂ ನಕ್ಕಿದ್ದೇನೆ ನಿನ್ನ ಜೊತೆಗೇ ಮನೆಯ ಸೂರತನಕ ಎನ್ನುವಲ್ಲಿನ ಭಾವವೇನು? 

ಹತ್ತು ವರ್ಷಗಳಲ್ಲಿ ಕೇವಲ ನಗೆಮಲ್ಲಿಗೆಯೊಂದೇ ಅವರಿಬ್ಬರ ಬದುಕಿನಲ್ಲಿಲ್ಲ. ಅವಳೂ ಒಮ್ಮೊಮ್ಮೆ ಅವನಿರುವ ರೀತಿಗೆ ಮುನಿದಿದ್ದಾಳೆ. ಅವಳ ಮುನಿಸಿಗೆ ಅವನು ಕಲ್ಲು ಬಂಡೆಯಾಗಿಲ್ಲ. ಕೆನ್ನೆಗೆಂಪಿನ ಮೇಲೆ ಕಂಬನಿಯ ತೆರೆಯಿಳಿಸಿ ಚೆಲುವ ಮರೆಮಾಚಲಹುದೇ? ಹೊರನೋಟ ದಿಟವಾಗಿ ಎದೆಯೊಲವೇ ಸಟೆಯಾಗಿ ನಂಬಿಕೆಯೇ ನಲುಗಬಹುದೇ? ಎಂದು ಕೇಳುತ್ತಿದ್ದಾನೆ. ಕನಕಾಂಗಿಯ ಪ್ರೇಮದ ಪರಿ ಬಲ್ಲವನು ಅವನು. ಹಾಗಾಗಿಯೇ ಈ ಸಣ್ಣ ಮಳೆಗೆ ಈ ಕಿರುಗಾಳಿಯಬ್ಬರಕೆ  ಹೆದರುತ್ತಿಲ್ಲ . ಬಿಡದವನನ್ನು ಬಿಡಿಹೋಗಿರೆಂದು ಬೇಡದಿರು ನುಡಿಗೊಡದೆ ನಗದೇ ಕನ್ನಡಿ ಹಿಡಿದು ಕುಳಿತು ಅಲ್ಲೇನು ಹುಡುಕುತಿರುವೆ ಎಂದು ರಮಿಸುತ್ತಿದ್ದಾನೆ. ಬಿಟ್ಟು ಹೋಗುವವಳೇ ಅವಳು? 
ಅವನೂ ಸಿಟ್ಟಿಗೆದ್ದಾಗ ಅವಳೂ ಮುದ್ದಿಸಿದ್ದಾಳೆ. ಕಣ್ಣ ಮರೆಯಾದಾಗ ಹೂವಲ್ಲ ಹಾವೆಂದು ಬಿರುನುಡಿಯನಾಡುವುದು ನಿಮಗೆ ತರವೇ ? ಎಂದು ಪ್ರಶ್ನಿಸುತ್ತಾಳೆ.  ಇರುಳಿನಲಿ ಕಾಣುವುದು ನಿಮ್ಮ ಕನಸೇ ಎಂದು ಮನವರಿಕೆ ಮಾಡಿಕೊಡಲೆತ್ನಿಸುತ್ತಿದ್ದಾಳೆ. ಚುಚ್ಚದಿರಿ ಮೊನೆಯಾದ ಮಾತನೆಸೆದು ಎಂದು ಅವನಿಗೆ ಎಚ್ಚರಿಕೆಯಲ್ಲದ ಎಚ್ಚರಿಕೆ ಕೊಡುತ್ತಿದ್ದಾಳೆ. 
ಅವರಿಬ್ಬರ ಮುನಿಸು, ಕನಸು, ಪ್ರೀತಿ, ದಾಂಪತ್ಯ  ಎಲ್ಲ ಎಲ್ಲವೂ ಈ ಹತ್ತು ವರ್ಷಗಳಲ್ಲಿ ಮಾಗಿದೆ.

 ಆ ದಾಂಪತ್ಯದಲ್ಲಿ ಅವನಿದ್ದ ರೀತಿಯನ್ನು ಅವನ ಪ್ರೀತಿಯನ್ನು ಮುನಿಸನ್ನು ಎಷ್ಟೆಲ್ಲಾ ಬಗೆಯಲ್ಲಿ ವರ್ಣಿಸುವ ಅವಳು ತಾನಿದ್ದ, ಇರುವ ಪರಿಯನ್ನು ಒಂದೇ ವಾಕ್ಯದಲ್ಲಿ ಮುಗಿಸಿಬಿಡುತ್ತಾಳೆ. ಗಂಡನಿಗೆ ಒಪ್ಪಾಗಿ ಕಂದನಿಗೆ ದಿಕ್ಕಾಗಿ ಪಯಣದಲಿ ಜೊತೆಯಾಗಿ ನಾನಿಲ್ಲವೇ ಎಂಬ ಮಾತಿನಲ್ಲಿ ಸಕಲವನ್ನೂ ಉಸುರಿ ಬಿಡುತ್ತಾಳೆ ತನಗೆ ತಾನೇ ಹೇಳಿಕೊಳ್ಳುವಂತೆ.. ಹಾಗಾಗಿಯೇ ಅವನು ನೀನೆ ಸಾಕು ಎಂಬ ಮಾತಿನಲ್ಲಿಯೇ ನಿಲ್ಲುವುದಿಲ್ಲ.. ಬೇಕಿದ್ದವಳೂ ನೀನೇ ಎನ್ನುತ್ತಿದ್ದಾನೆ. 

ಬದುಕು ಇಬ್ಬರನ್ನೂ ಹಣ್ಣಾಗಿಸಿದೆ, ಮಾಗಿಸಿದೆ. ನಕ್ಕ ನಗೆಗಳ ಲೆಕ್ಕವೀಗ ಅವರಿಬ್ಬರಲ್ಲೂ ಇಲ್ಲ, ಹುಚ್ಚೆದ್ದ ಬಿರುಗಾಳಿಯೂ ಮನೆಯಲ್ಲಿಲ್ಲ. ಅವನ ಬದುಕಿನಲ್ಲಿ ಪವಾಡದಂತೆ ಬಂದ ಅವಳ ಪ್ರೇಮ, ಅವಳ ಬದುಕಲ್ಲಿ ವಸಂತವಾಗಿ ಬಂದವನ ಒಲವು ಅವರಿಬ್ಬರ ಬದುಕಲ್ಲಿ ಕಾರ್ತೀಕದ ದೀಪದಂತೆ ಬೆಚ್ಚಗೆ ಶಾಂತವಾಗಿ ಉರಿಯುತ್ತಿದೆ. ನೋವಿರದ ನಲಿವಿಲ್ಲವೆಂಬ ಅರಿವು ಇಬ್ಬರಲ್ಲೂ ಮೂಡಿದೆ. ನಗುವಾಗ ನಕ್ಕು ಅಳುವಾಗ ಅತ್ತು  ಪಯಣದಲಿ ಜೊತೆಯಾಗಿ ನಾನಿಲ್ಲವೇ ಎಂಬ ಮಾತು ಮತ್ತೂ ಅರ್ಥ ಪಡೆದು ಕೊಂಡಿದೆ.  ಹತ್ತು ವರ್ಷದ ಬೆಳಕು ಹಾದಿ ತೋರುತ್ತಿದೆ.

ಇಂದಿರಾ ಎಂಬ ಅಚ್ಚರಿ






ಪುರುಷ ಸಾಹಿತಿಗಳು ನಮ್ಮನ್ನು ಪುರಸ್ಕರಿಸುವುದೇ ಇಲ್ಲ. ಹೀಗೆ ಗೊಣಗುಟ್ಟುವವರ ನಡುವೆ ನಿಂತಾಗ ನನಗೆ ವಾಣಿ ನೆನಪಾಗುತ್ತಾರೆ.. ತ್ರಿವೇಣಿ ನೆನಪಾಗುತ್ತಾರೆ. ಎಂ. ಕೆ. ಇಂದಿರಾ ನಗುತ್ತಾರೆ. ಇಂತಹದ್ದೊಂದು ಕೊರಗು ಅವರನ್ನೂ ಕಾಡಿತ್ತಾ ಎಂಬ ಪ್ರಶ್ನೆಯೊಡನೆ ಕೂಡ ತಮ್ಮ ಪಾಡಿಗೆ ತಾವು ಬರೆದುಕೊಂಡುಹೋದ ಇಂತಹ ಹೆಣ್ಣು ಜೀವಗಳು ತಮ್ಮ ಕೃತಿಯಲ್ಲಿ ತೋರಿಸಿರುವ ದಿಟ್ಟತನ, ಬರೆಯುವಾಗ ಆರಿಸಿಕೊಂಡ ವಸ್ತುವೈವಿಧ್ಯ, ವಿವರಗಳನ್ನು ಮೊಗೆಮೊಗೆದು ಕೊಟ್ಟ ಸಾಮರ್ಥ್ಯ ಬೆರಗುಗಣ್ಣು ಹೊತ್ತು ನೋಡುವಂತಾಗುತ್ತದೆ. ನಾನು ನನ್ನ ಕಾರ್ಯಕ್ಷೇತ್ರದ ಅನುಭವಗಳನ್ನು ಕತೆಯಾಗಿ ದಾಖಲಿಸುವಾಗ ನನ್ನ ಕಾರ್ಯಕ್ಷೇತ್ರದ ಕುರಿತ ನಿನ್ನ ಅವಜ್ಞೆಯ ಕುರಿತು ನನ್ನದೂ ಅವಜ್ಞೆಯೇ ಎಂಬಂತೆ ಬರೆಯುತ್ತಾ ಹೋದವರಿವರು. ಸ್ತ್ರೀ ಸಾಹಿತ್ಯದ ಕುರಿತ ದೂರುಗಳಲ್ಲಿ ಬಹಳ ಪ್ರಮುಖವಾಗಿ ಅವು ಅಡುಗೆಮನೆ ಸಾಹಿತ್ಯ, ಹಿತ್ತಲ ಸಾಹಿತ್ಯ, ಕಟ್ಟೆಪುರಾಣದ ಸಾಹಿತ್ಯವೆಂದು ಕರೆಯುವುದೇ ಆದರೆ ಅಲ್ಲೂ ಬದುಕಿದೆ.. ಬದುಕ ಸಂಭ್ರಮಗಳಿವೆ.. ಕಥೆಗಳಿವೆ. ಅವುಗಳನ್ನು ಇವರಂತೆ ದಾಖಲಿಸಲು ಪುರುಷ ಸಾಹಿತ್ಯಕ್ಕೆ ಸಾಧ್ಯವೇ ಇಲ್ಲವೆಂಬಷ್ಟು ವಿಫುಲವಾಗಿ ಸಶಕ್ತವಾಗಿ ಬರೆದವರಿವರು. 

ಚಿತ್ತಾಲರ ಕಚೇರಿಯ ಕುರಿತ ಸಣ್ಣಪುಟ್ಟ ಸೂಕ್ಷ್ಮವಿವರಗಳು  ಅದರಿಂದ ಉದ್ಭವಿಸುವ  ಮಾನಸಿಕ ಕ್ಷೋಭೆಗಳ ಚಿತ್ರಣದಷ್ಟೇ ಸಹಜವಾಗಿ ಪ್ರಖರವಾಗಿ ಒಳಜಗತ್ತಿನ ವಿವರಗಳನ್ನು ಅಲ್ಲಿ ಉದ್ಭವಿಸುವ ತಲ್ಲಣಗಳನ್ನು.. ಶೋಷಣೆಗಳನ್ಮು ತಲ್ಲಣಿಸುತ್ತಲೇ.. ಶೋಷಣೆಗೊಳಗಾಗುತ್ತಲೇ ಕಟ್ಟಿಕೊಟ್ಟವರು ಆಗಿನ ಸ್ತ್ರೀ ಸಾಹಿತಿಗಳು. ಅದರಲ್ಲೂ ಬಹಳ ಪ್ರಮುಖವಾಗಿ ಎಂ.ಕೆ. ಇಂದಿರಾ. ಈ ಎರಡೂ ಜಗತ್ತುಗಳನ್ನು ಅಕ್ಕಪಕ್ಕದಲ್ಲಿಟ್ಟು ನೋಡಿದಾಗಷ್ಟೇ ಆ ಕಾಲದ ಸಾಹಿತ್ಯದ ಒಂದು ಪರಿಪೂರ್ಣ ನೋಟ ದಕ್ಕುವುದು ಎಂಬಲ್ಲಿಗೆ ಅವೆರಡನ್ನೂ ನೋಡಬೇಕಾದ ರೀತಿ ಪರಸ್ಪರ ಪೂರಕವಾಗಿಯೇ ಹೊರತು ಪರಸ್ಪರರ ಲೇವಡಿಯಲ್ಲ. ಅಡಿಗೆಮನೆ ಹಿತ್ತಲುಗಳು ಬದುಕಿನ ಅವಿಭಾಜ್ಯ ಅಂಗವಾದಾಗ ಆ ಮೂಲದಿಂದ ಹೊಮ್ಮಿದ ಸಾಹಿತ್ಯ ಕೂಡಾ ಅವಿಭಾಜ್ಯವೇ ಆಗಬೇಕಿತ್ತು. ದುರಂತವೆಂದರೆ ಹಾಗಾಗಲೇ ಇಲ್ಲ. ಅವಳಿಗೆ ಹುಟ್ಟಿನಿಂದಲೇ ಸಹಜವಾಗಿಯೇ ದಕ್ಕಿದ ಎರಡನೆಯ ದರ್ಜೆಯ ಸ್ಥಾನಮಾನಗಳಿಂದ ಅವಳು ಇದ್ದ ಕ್ಷೇತ್ರ ಎರಡನೆಯ ದರ್ಜೆಯದಾಯಿತೋ.. ಅಥವಾ ಆ ಕ್ಷೇತ್ರದ ಕುರಿತ ಅವಜ್ಞೆಯಿಂದ ಅದು ಎರಡನೆಯ ದರ್ಜೆಯ ಸಾಹಿತ್ಯವೋ .  ಲೇಖಕಿಯರ ಅಡುಗೆಮನೆ ಸಾಹಿತ್ಯ ಎಂಬ ಅವಗಣನೆಗೆ ಅನೇಕ ಲೇಖಕಿಯರು ಬರೆದ ಕಳಪೆ ದರ್ಜೆಯ ಸಾಹಿತ್ಯವೇ ಕಾರಣ ಎಂದು ಹೇಳುವುದಾದರೆ ಆ ಕಾಲದ ಪುರುಷ ಸಾಹಿತಿಗಳೆಲ್ಲರೂ ಶ್ರೇಷ್ಠವಾದದ್ದನ್ನೇನೂ ಬರೆದಿರಲಿಲ್ಲ. ಜೊಳ್ಳು ಅಲ್ಲಿಯೂ ಇತ್ತು, ಇಲ್ಲಿಯೂ ಇತ್ತು. ಎರಡೂ ಕಡೆಯ ಜೊಳ್ಳುಗಳನ್ನು ಜಾಲಿಸಿ ಗಟ್ಟಿಕಾಳುಗಳನ್ನು ಸಮಾನವಾಗಿ ನೋಡುವ ಗುಣ ಬೆಳೆಸಿಕೊಳ್ಳಲೇ ಇಲ್ಲ. 


ಕಥೆ ಹುಟ್ಟುವುದು ಹೇಗೆ? ಕಥೆ ಸುಪುಷ್ಟವಾಗಲು ಅದರಲ್ಲಿನ ವಿವರಗಳಿಗೆ ಜೀವ ತುಂಬುವುದು ಹೇಗೆ ? ಹೀಗಿದ್ದ ಪ್ರಶ್ನೆಯೊಂದು ಕಾಡುವಾಗ ಕಥೆಯ ವಸ್ತುವನ್ನು ಎಲ್ಲಿಂದಲಾದರೂ ತಂದರೂ ಅದಕ್ಕೆ ಜೀವ ತುಂಬುವುದು ನಮ್ಮನಮ್ಮ ಅನುಭವಗಳ ಮೂಲಸೆಲೆಯಿಂದ. ಕಥೆಯ ವಸ್ತುವನ್ನು ನಾವು ಆರಿಸಿಕೊಳ್ಳುವುದೂ ನಮ್ಮನಮ್ಮ ಭಾವಕೋಶವನ್ನು ಉದ್ದೀಪಿಸುವ ಘಟನೆಗಳನ್ನೇ . 

ಯಾವುದಾದರೂ ಒಂದು ಕೃತಿ ಹೇಳಬೇಕಾದ್ದಾದರೂ ಏನು? ಏನನ್ನಾದರೂ ಹೇಳಬೇಕೇಕೆ? ತನ್ನ ಅನುಭವವನ್ನು .. ಅನುಭವದ ಸಾರವನ್ನು ಕಥೆಯ ರೂಪದಲ್ಲಿ ಕಟ್ಟಿಕೊಡುವುದು ಮುಖ್ಯವಲ್ಲವಾ? 


ಕಂಡು ಕೇಳಿದ ಕಥೆಯನ್ನು ತನ್ನ ಕಲ್ಪನೆಯಲ್ಲಿ ಸುಪುಷ್ಟಗೊಳಿಸಿ ಹೇಳುವಾಗ ಸಂದೇಶದ ಬಗ್ಗೆ ಯೋಚಿಸದೆ ಹಾಗಿದ್ದ ಕಥೆಯೊಂದು ಅಲ್ಲಿ ನಡೆದಿದೆ. ಅದನ್ನು ಕಟ್ಟಿಕೊಡುವುದಷ್ಟೇ ತನ್ನ ಕೆಲಸ ಎಂಬಂತೆ ಬರೆಯುವುದೇ ಒಳಿತಾ? ಓದುಗ ತನಗೆ ಬೇಕಾದ್ದನ್ನು ತಾನು ಗ್ರಹಿಸುತ್ತಾನೆ ಎಂಬುದೇ ಕೊನೆಗುಳಿಯುವ ಸತ್ಯವಾ? ಹಾಗಾದರೆ ಸದಾನಂದದಲ್ಲೊಂದು ಸಂದೇಶವಿದೆಯಲ್ಲ.


ಅವರ ಪ್ರಸಿದ್ಧ ಕೃತಿ ಗೆಜ್ಜೆಪೂಜೆಯಲ್ಲಿ ಬರುವ ಚಂದ್ರ, ಕುಲಸ್ಥರ ಮನೆಯ ಹುಡುಗಿಯಾಗಿಯೂ ಸಂಗವ್ವನ ಹುಲಿಯಂತಹಾ ಕೈಗೆ ಸಿಕ್ಕಿಬಿದ್ದು ವೇಶ್ಯೆಯಾಗುವ ಗರತಿಯಂತಹಾ ಅಪರ್ಣೆ.. ಬ್ರಾಹ್ಮಣರ ಕೇರಿಯಲ್ಲಿ ಪೀಡೆಯಂತೆ ಬಂದ ಈ ಸಂಸಾರ ಕಡೆಗೆ ಅವರೆಲ್ಲರ ಸಹಾನುಭೂತಿಗೂ ಪ್ರೀತಿಗೂ ಪಾತ್ರರಾಗುವ (ಸಂಗವ್ವನನ್ನು ಬಿಟ್ಟು) ರೀತಿಯನ್ನು ಅದ್ಭುತವೆಂಬಂತೆ ಕಟ್ಟಿಕೊಟ್ಟಿರುವ ಇಂದಿರಾ ಈ ಕಾದಂಬರಿಯ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ? 


ಮೊದಲು ಬಂದ ತುಂಗಭದ್ರ ಓದುವಾಗ ನೂರು ಭಾವಗಳು ಕಾಡುತ್ತವೆ . ಮೊಟ್ಟಮೊದಲನೆಯದಾಗಿ ಅವರೇನು ಹೇಳಹೊರಟಿದ್ದಾರೆ? ಕೃಷ್ಣೆ ಮಡಿದ ನಂತರ ಮುದ್ದುರಾಮನ ಪರಿಸ್ಥಿತಿ .. ಮಂದಾಳ ಒಲವು ..ಅವಳೊಡನೆ  ತುಂಗ ಭದ್ರ ಇಬ್ಬರನ್ನೂ ವಿವಾಹವಾಗುವ ಮುದ್ದುರಾಮ.. ಮೊದಲ ಓದಿಗೆ ವಿಚಿತ್ರವೆನ್ನಿಸಿತ್ತು. ಹೀಗೂ ಇರಬಹುದೇ? ಮರು ಓದಲ್ಲಿ ಮತ್ತೆಮತ್ತೆ ಓದುವಲ್ಲಿ ಬೇರೆ ಬೇರೆಯದೇ ಹೊಳಹುಗಳು. 

ನಾನಿಲ್ಲಿ ಅವರ ಎಲ್ಲ ಕೃತಿಗಳ ಬಗ್ಗೆ ಮಾತನಾಡಲಿಚ್ಚಿಸುವುದಿಲ್ಲ. ಅವರ ಪ್ರಮುಖ ಕಾದಂಬರಿಗಳಲ್ಲೊಂದಾದ ಸದಾನಂದದಲ್ಲಿ ಅವರು ಸೃಷ್ಟಿಸಿರುವ ಅದ್ಭುತ ಪಾತ್ರಗಳು ಇಂದಿಗೂ ಜೀವಂತ. ಮಲೆನಾಡಿನ ಸಂಪ್ರದಾಯಸ್ಥ ಕುಟುಂಬದ ಒಂದು ಪರಿಪೂರ್ಣ ಚಿತ್ರಣವನ್ನು ಕಟ್ಟಿಕೊಡುತ್ತಲೇ ಅದರೊಳಗೆ ಹಾಸು ಹೊಕ್ಕಾಗಿರುವ ಮೂಢನಂಬಿಕೆಗಳು, ವೈಚಾರಿಕತೆಗಳು, ದಿಟ್ಟತನ, ಹೇಡಿತನ... ಯಾವುದನ್ನೂ ವೈಭವೀಕರಿಸದೆ ಹಾಗೆಹಾಗೇ ಓದುಗನ ತಟ್ಟೆಗೆ ಬಡಿಸುವುದು ಅವರ ವೈಶಿಷ್ಟ್ಯ. ಕಾದಂಬರಿಯ ಶುರುವಿನಲ್ಲೇ ಬರುವ ಹಳೆಯ ಕಾಲವನ್ನು ಪ್ರತಿನಿಧಿಸುವ ನೂಕೋನರಸಿಂಹ ಬಸ್ಸು ಅಪ್ಯಾಯವೆನಿಸುವ ಹೊತ್ತಿಗೇ ಆಧುನಿಕತೆ ಪ್ರವೇಶಿಸುತ್ತಿರುವ ಕುರುಹಾದ ಮಾರುತಿ ಆಕರ್ಷಿಸುವುದಿಲ್ಲ. ಅದಕ್ಕೆ ಕಾರಣ ಕಾದಂಬರಿಯುದ್ದಕ್ಕೂ ಬರುವ ಇಂದಿರಾ ಅವರ ಆಧುನಿಕತೆಯ ವಿರುದ್ಧವಲ್ಲದ ವಿರುದ್ಧ ಮನಸ್ಥಿತಿ ಕಾರಣವಾ.. ಓದುತ್ತಾ  ನಾಸ್ಟಾಲ್ಜಿಕ್ ಆಗಿಬಿಡುವ ನಮ್ಮ ಮನಸ್ಸಾ ಗೊತ್ತಿಲ್ಲ. ನೂಕುವಿಕೆಯ ದಣಿವಿಗಿಂತ ನರಸಿಂಹಯ್ಯನವರ ಒಳ್ಳೆಯತನದ ಬಗ್ಗೆ ಗೌರವವಿಟ್ಟು ನೂಕೋ ನರಸಿಂಹಕ್ಕೇ ಶರಣಾಗುವ ರಾಜುವಿನಲ್ಲಿ ನಾಯಕನನ್ನು ಥಟ್ಟನೆ ಗುರುತಿಸಿಬಿಡುತ್ತೇವೆ. ನಗರಜೀವನಕ್ಕೆ ಮಾರುಹೋಗಿ ಮಾರುತಿಯನ್ನು ಅಪ್ಪಿಕೊಳ್ಳುವ ಮೂರ್ತಿ ನಮ್ಮ ಕಣ್ಣಿನಲ್ಲಿ ಇಳಿದು ಹೋಗುತ್ತಾನೆ ಅಥವಾ ಇಳಿಯುವಂತೆ ಕಾದಂಬರಿಗಾರ್ತಿ ಚಿತ್ರಿಸಿದ್ದಾರೆ. ಅದು ಬಚ್ಚನನ್ನು ಮದುವೆಗೆ ಕರೆದೊಯ್ಯುವ ಪ್ರಸಂಗವಿರಲಿ, ರಾಮಣ್ಣನವರು ಕಂಗಾಲಾದ ಗಳಿಗೆಯಿರಲಿ, ಕಮಲೆಯ ಮನದ ಅಳಲಿರಲಿ, ತಂತ್ರಿಯವರ ಜೀವನ ಕ್ರಮವಿರಲಿ,ಅಂಬಕ್ಕ ಅಚ್ಚಮ್ಮ ಯಂಟಮ್ಮ ಪುಟ್ಟಮ್ಮಮುಂತಾದವರ ಕುರಿತು ವಿವರಣೆಗಳಿರಲಿ 

ಭಾಷೆಯನ್ನು ಸರಾಗವಾಗಿ ನಿರ್ಭೀಡೆಯಿಂದ ಇಂದಿರಾ ಬಳಸುವ ರೀತಿ ಅನನ್ಯ. ಮಹಿಳಾ ಕಥೆಗಾರ್ತಿಯರು ಸಹಜವಾಗಿ ಅನುಭವಿಸುವ ಮುಜುಗರ ಇಂದಿರಾ ಅವರನ್ನು ಕಾಡುವುದೇ ಇಲ್ಲ. 


 " ' ಯೇನಾ, ಅತ್ತೆ ಮನೀಗೆ ಹೋಗ್ತೀರನ್ರಾ? ಏನ್ಸಮಾಚಾರ? '

ರಾಜು ಆತುರದಿಂದ ಬಾಯಿಬಿಟ್ಟ .

" ಮೂರ್ತಿಗೆ ಎಸ್.ಎಸ್.ಎಲ್.ಸಿ. ಫಸ್ಟ್ ಕ್ಲಾಸಿನಲ್ಲಿ ಪಾಸಾಯಿತು. ಪುಟ್ಟತ್ತೆಗೆ ಹೇಳಿಬಿಟ್ಟು ಬರ್ತೀನಿ" 

ಅವರು ಥಟ್ಟನೆ ಮೂರ್ತಿಯ ಕಡೆ ತಿರುಗಿ ಆಶ್ಚರ್ಯದಿಂದ,

" ಯಲಾ ತಾಯಿಗ್ಗಂಡ ! ನಂಗ್ಯಾಕ ಹೇಳಲಿಲ್ಲ ಮತ್ತೆ ?" ಎಂದರು. "


ಮತ್ತೊಂದು ಕಡೆ 


 " " ಥತ್ ಇದರವ್ವನ " ಎನ್ನುತ್ತಾ ಶಿಂಗ್ರಿ ಬಿರ್ರನೆ ಕೆಳಗಿಳಿದ. ಶಿಂಗರಿಯ ಸಾಹಿತ್ಯ ಭಂಡಾರ ಬಹಳ ಪವಿತ್ರವಾದದ್ದು ಅವನು ದಿನವೂ ಬಸ್ಸಿನ, ಅದರ ಮಾಲೀಕರ ಕುಲಕೋಟಿ ಉದ್ಧಾರ ಮಾಡುತ್ತಿದ್ದ.

ಸಾಕ್ಷಾತ್ ನರಸಿಂಹಯ್ಯನವರಿಗೇ ಆದರೂ ಅವರೆಂದೂ ಬೇಸರ ಪಟ್ಟುಕೊಂಡವರೇ ಅಲ್ಲ.

ದಿನವೂ ಅಭಿಷೇಕಕ್ಕೆ ಹಾಲು ಕೊಡುವ ಮನೆಯ ದನ ಗೋಪಿ, ಮಡದಿ ಲಕ್ಷ್ಮೀದೇವಮ್ಮನವರು, ಕಾಡಾನೆಯಂತಿದ್ದ ಬಸ್ಸು ಮತ್ತು ಡ್ರೈವರ್ ಶಿಂಗ್ರಿ ಇವರೆಲ್ಲರ ಮೇಲೂ ಒಂದೇ ವಿಧವಾದ ಪ್ರೇಮ- ವಿಶ್ವಾಸ ಇಟ್ಟುಕೊಂಡವರು ಲಕ್ಷ್ಮೀನರಸಿಂಹಯ್ಯನವರು.

ಅವರು ಸಮಾಧಾನದಿಂದಲೇ ಕೇಳಿದರು: 

" ಮತ್ತೇನಾತಾ ಶಿಂಗ್ರಿ ?" 

ಶಿಂಗ್ರಿಗೆ ಮೈಯ್ಯೆಲ್ಲಾ ಉರಿಯಿತು. ಅವನೂ ಉರಿದುಬಿದ್ದ .

" ಆತು ನನ್ನಮ್ಮನ ಪಿಂಡ ". 

ನರಸಿಂಹಯ್ಯನವರು ತೆಪ್ಪನೆ ಕುಳಿತರು . "


ಇದು ಇಂದಿರಾ ಅವರು ಭಾಷೆಯನ್ನು ನಿರ್ಭೀಡೆಯಿಂದ ಬಳಸುವ ರೀತಿ. ಯಾವ ಸಂಕೋಚವೂ ಇಲ್ಲದೆ ಜಗತ್ತು ಹೇಗಿದೆಯೋ ಹಾಗೆ ಆದರೆ ಮುಜುಗರಕ್ಕೆಡೆಯಿಲ್ಲದಂತೆ ಕಟ್ಟಿಕೊಡುತ್ತಾ ಹೋಗುತ್ತಾರೆ. ಕಾದಂಬರಿಯ ಉದ್ದಕ್ಕೂ ಇರುವುದು ಇಂತಹಾ ಲವಲವಿಕೆಯ ನಿರೂಪಣೆ. ಆ ಕಾದಂಬರಿಯ ನಾಯಕಿ ಕಮಲೆಯಾದರೂ ದಿಟ್ಟತನದಲ್ಲಿ ಸೆಳೆಯುವವಳು ಗೌರಿಯೇ.ಇಲ್ಲಿ ಅವರು ಪಾತ್ರವೊಂದರ ಪ್ರೀತಿಯನ್ನು ಕೊಂದು ಔದಾರ್ಯ ಮೆರೆಯುವಂತೆ ಮಾಡಿದ್ದಾರೆ. ಆದರ್ಶವೆಂಬುದು ಇರಬೇಕಾದಷ್ಟೆ ಇದ್ದಾರೆ ಚೆನ್ನು , ಔದಾರ್ಯದ ಅಡಿಪಾಯದ ಮೇಲೆ ಕಟ್ಟಲ್ಪಟ್ಟ ದಾಂಪತ್ಯ ಎಷ್ಟು ಕಾಲ ಬಾಳೀತು ,. ಅಲ್ಲಿ ಜಾನಕಿಯನ್ನು ದೂರ ಮಾಡಿ ಅವಳ ನೆನಪಿನಲ್ಲಿ ನೋಯುತ್ತಾ ಗೌರಿಯನ್ನು ಉದ್ಧರಿಸಿದವನು ರಾಜು ಎಂದು ಓದುವಾಗ ಅನ್ನಿಸಿದರೂ  ಕಾದಂಬರಿಯನ್ನು ಗಮನವಿಟ್ಟು ಓದಿದರೆ ರಾಜು ಜಾನಕಿಯರ ಮಧ್ಯೆ ಇದ್ದ ಸೆಳೆತ ಪ್ರೇಮವಲ್ಲ,  ಜಾನಕಿಯದು ಪ್ರೇಮವೇ ಆದರೂ ರಾಜುವಿನದ್ದು ಅವರಿಬ್ಬರ ಮದುವೆಯ ಮಾತುಕತೆಯ ಫಲವಾಗಿ ಹೊಮ್ಮಿದ್ದು. ಹೀಗಾಗಿ ರಾಜುವಿಗೆ ಜಾನಕಿಯನ್ನು ಬಿಡುವುದು ಕಷ್ಟವಾಗುವುದಿಲ್ಲ . ಅಂತರ್ಗತವಾಗಿ ಅಡಗಿದ್ದ ಪ್ರೀತಿ ಗೌರಿಯ ಬಗ್ಗೆಯೇ ಹೊರತು ಜಾನಕಿಯ ಬಗ್ಗೆಯಲ್ಲ. ಆಗಲೂ ಅವನು ವ್ಯಥೆ ಪಡುವುದು ಜಾನಕಿಯ ಮನಸ್ಥಿತಿಯ ಕುರಿತೇ ಹೊರತು ಜಾನಕಿಯನ್ನು ತನಗೆ ಬಿಡಲು ಸಾಧ್ಯವಿಲ್ಲ ಎಂದಲ್ಲ. ಇದೆಲ್ಲವನ್ನೂ ಹೇಳದೆಯೇ ಹೇಳುವುದು ಇಂದಿರಾ ವೈಶಿಷ್ಟ್ಯ.

" ತೀರ ಅವಳ ಸನಿಹದಲ್ಲಿ ಕುಳಿತು ಅವಳ ಮುಖವನ್ನೇ ರೆಪ್ಪೆ ಮಿಸುಕದೆ ನೋಡುತ್ತಿದ್ದಾನೆ. ಅಂದೇ ಜನನವಾದ ಕೂಸಿನ ಅಂಗಾಂಗವನ್ನು ತಾಯಿ ಪರೀಕ್ಷಿಸುವಂತೆ. ಇಷ್ಟು ದಿನ ಒಂದು ಛಾಯಾ ಮಾತ್ರವಾಗಿ ತನ್ನ ಎದೆಯೊಳಗೆ ಕುಳಿತು ಅಲ್ಲಿ ಜಾನಕಿಗೆ ಎಡೆ ಕೊಡದ ಗೌರಿ ಇಂದು ತನ್ನೆದುರು ಸಾಕಾರವಾಗಿ ಕುಳಿತಿದ್ದಾಳೆ. " 

" ಹಿಂದೆ ಕೆಲವು ವರ್ಷಗಳಿಂದ ತನ್ನ ಮನದ ಆಳದಲ್ಲಿ ಅಸ್ಪಷ್ಟವಾಗಿ ಅವಿತು ಕುಳಿತಿದ್ದ ಒಂದು ಪಾವನ ರೂಪ ಅವಳೆದುರು ಕುಳಿತಿತ್ತು. ಅವಳು ಮೌನವಾಗಿ ಅಲ್ಲೇ ಆಸರೆಯಾಗಿ ಸಿಕ್ಕಿದ ಅವನ ಭುಜಕ್ಕೆ ಒರಗಿದಳು."

ಮೇಲ್ಕಂಡ ವಾಕ್ಯಗಳು ಅವರಿಬ್ಬರ ನಡುವೆ ಸುಪ್ತವಾಗಿ ಅವರಿಗೇ ಅರಿಯದಂತೆ ಮನೆಮಾಡಿದ್ದ ಪ್ರೀತಿಯ ಬಗ್ಗೆ ಹೇಳುತ್ತದೆ. ಹಾಗಾಗಿ ಅಲ್ಲಿ ರಾಜು ಮಾಡಿದ ತ್ಯಾಗ ಪ್ರೀತಿಯ ತ್ಯಾಗವಲ್ಲ. ಗೌರಿ ಅದನ್ನು ಮರುಮಾತಿಲ್ಲದೆ ಒಪ್ಪುವುದೂ, ಜಾನಕಿಯನ್ನು ಬಿಟ್ಟಿದ್ದಕ್ಕೆ ಆಕ್ಷೇಪಿಸದಿರುವುದೂ ಕೂಡಾ ಆ ಸುಪ್ತ ಪ್ರೀತಿಯ ಗುರುತಿಸುವಿಕೆಯಿಂದ. ಗೌರಿಯನ್ನು ತೊರೆದು ಮುಕ್ತಾಳನ್ನು ಮದುವೆಯಾಗುವ ಮೂರ್ತಿಯನ್ನು ಮುಕ್ತಾ ತರಾಟೆಗೆ ತೆಗೆದುಕೊಳ್ಳುವ ಹಾಗೆ ಜಾನಕಿಯನ್ನು ತೊರೆದು ತನ್ನನ್ನು ಮದುವೆಯಾಗಲು ನಾಟಕವಾಡಿದ ರಾಜುವನ್ನು ಗೌರಿ ತರಾಟೆಗೆ ತೆಗೆದುಕೊಳ್ಳದಿರಲು ಪ್ರಮುಖ ಕಾರಣ ಅವಳಿಗೆ ಪರ್ಯಾಯವಿಲ್ಲ ಎಂಬುದಾಗಿರದೆ ತಮ್ಮಿಬ್ಬರ ನಡುವಿನ ಸುಪ್ತ ಪ್ರೀತಿಯನ್ನು ಕಂಡುಕೊಂಡಿದ್ದಕ್ಕೆ ಎಂದು ನನಗನ್ನಿಸುತ್ತದೆ.   ಇಂತಹದ್ದೊಂದು ನವಿರಾದ ಪ್ರೀತಿಯನ್ನು ಕಾದಂಬರಿಯುದ್ದಕ್ಕೂ ಗುಪ್ತಗಾಮಿನಿಯಾಗಿ ಹರಿಯುತ್ತಿರುವಂತೆ ಚಿತ್ರಿಸಿದವರು ಇಂದಿರಾ.

ಸದಾನಂದ ಕೃತಿಯ ಬಗ್ಗೆ ಇರುವ ಪ್ರಮುಖ ಆರೋಪವೆಂದರೆ ಸದಾನಂದರ ಪಾತ್ರದ ವೈಭವೀಕರಣ ಮಾಡಿದ್ದಾರೆ ಎನ್ನುವುದು. ಒಬ್ಬ ವ್ಯಕ್ತಿ ಹಾಗಿರಬಲ್ಲನೆ ... ಹಾಗಿರಲು ಸಾಧ್ಯ ಎಂದು ಸಮರ್ಥಿಸಿಕೊಳ್ಳುವ ಮೊದಲು ಆ ಕೃತಿ ಬಂದ ಕಾಲಘಟ್ಟದ ಕಡೆ ಗಮನ ಹರಿಸಬೇಕಾಗುತ್ತದೆ. ಕಮಲಳಂತಹ ಸುಸಂಪನ್ನ ಹೆಣ್ಣು ಮಗಳನ್ನು ಸದಾನಂದನಂತಹ ಆದರ್ಶ ಪುರುಷನೊಬ್ಬ ಮಾತ್ರ ಸುಖವಾಗಿಡಬಲ್ಲ ಎಂಬುದು ಅವರ ಭಾವವಿದ್ದಿರಬಹುದು. ವಿಧವಾ ವಿವಾಹ ಅಪರೂಪವಾಗಿದ್ದ ಆ ಕಾಲದಲ್ಲಿ ಒಬ್ಬ ವಿಧವೆಯನ್ನು ಮದುವೆಯಾಗಲು ಮುಂದೆ ಬರಬಲ್ಲ ಗಂಡು ಇಂತಹವನೇ ಎಂದು ಕೊಂಡಿದ್ದರಾ ಅಥವಾ ಇಂತಹವನಿಗೆ ತಮ್ಮ ಮಗಳನ್ನು ನಿರಾತಂಕದಿಂದ ಕೊಟ್ಟುಬಿಡಬಹುದು ಎಂಬ ಭಾವನೆ ಹೆತ್ತವರಲ್ಲಿ ಮೂಡಿಸಲೋಸುಗವಾ ಎಂಬಂತೆ ಸದಾನಂದನ ಪಾತ್ರ ಚಿತ್ರಿಸಲ್ಪಟ್ಟಿದೆ. ಹಾಗೆ ನೋಡಿದರೆ ಆ ಕಾಲದ ಎಲ್ಲ ಕಥೆಗಾರರೂ ಪಾತ್ರಗಳನ್ನೂ ಉದಾತ್ತೀಕರಿಸಿದವರೇ. ಕುವೆಂಪುರವರ ಹೂವಯ್ಯನ ಪಾತ್ರ ಅದಕ್ಕೊಂದು ಸ್ಪಷ್ಟ ನಿದರ್ಶನ. ಹಾಗಿದ್ದರೆ ಮಾತ್ರ ಆತ ನಾಯಕನಾಗಬಲ್ಲ ಎಂಬ ಉದ್ದೇಶವೂ ಇದ್ದಿರಬಹುದು. ಆದರೆ ಹಾಗಿದ್ದ ಪಾತ್ರಗಳು ಇರುವುದೇ ಇಲ್ಲ ಎನ್ನಲೂ ಸಾಧ್ಯವಾಗದು. ಹಾಗೆಂದು ಸದಾನಂದ ಆದರ್ಶಗಳೇ ಮೈವೆತ್ತ ಪುರುಷನೆಂದಲ್ಲ. ಅವರ ವೀಳ್ಯ, ಸಿಗರೇಟು, ಕುಡಿತ, ಇಸ್ಪೀಟು ಎಲ್ಲವೂ ಇರುವ ಮನುಷ್ಯ. ಆತನೇ ಹೇಳುವಂತೆ ಅದರಲ್ಲೂ ಸಂಯಮ ಹೊಂದಿರುವವ. ಆದವನಿಗೆ ಚಟವೂ ಅಲ್ಲ, ಅಭ್ಯಾಸವೂ ಅಲ್ಲ. ಅಪರೂಪದ ಗೆಳೆಯರು ಸೇರಿದಾಗ ಆ ಗಳಿಗೆಯ ಮೋಜು. ಹೀಗಿದ್ದ ಯಾವುದೇ ಅಭ್ಯಾಸಗಳನ್ನರಿಯದ ಮತ್ತೊಬ್ಬ ಆದರ್ಶ ಪುರುಷ  ರಾಜುವಿಗೆ  ಗೌರಿಯನ್ನು ಮದುವೆಯಾಗಲು ಸೂಚಿಸುವ ಸದಾನಂದ ಅರೆಕ್ಷಣ ರಾಜುವಿಗಿಂತ ಎತ್ತರ ಎನ್ನಿಸಿಬಿಡುತ್ತಾರೆ.  ಇಂತಹ ಪಾತ್ರಗಳನ್ನೂ ಸೃಷ್ಟಿಸಿದ ಇಂದಿರಾ ಆ ಕಾಲದಲ್ಲಿ ಇಂತಹ ಅಭ್ಯಾಸಗಳನ್ನೊಳಗೊಂಡೂ ಆದರ್ಶಪುರುಷನಾಗಿರಬಹುದು ಎಂದು ಹೇಳುತ್ತಾ ಅವರ ಕಾಲದ ಮಿಕ್ಕ ಸಾಹಿತಿಗಳಿಗಿಂತ ಬಹುತೇಕ ಮುಂದುವರಿದವರಂತೆ ಕಾಣಿಸುತ್ತಾರೆ. 


ಕರುಳು ಕತ್ತರಿಸುವಂತೆ ಬರೆದಿರುವ ಗೆಜ್ಜೆಪೂಜೆ ಇಂದಿರಾ ಅವರ ಮತ್ತೊಂದು ಮಹತ್ವದ ಕಾದಂಬರಿ. ಬ್ರಾಹ್ಮಣರ ಕೇರಿಗೆ ಬರುವ ವೇಶ್ಯೆಯ ಕಥೆ ಆರಂಭದಲ್ಲಿಯೇ ಅವರು ಎದುರಿಸುವ ಸಮಸ್ಯೆಗಳನ್ನು ಮನಮುಟ್ಟುವಂತೆ ಹೇಳಿದೆ. ತಾರುಣ್ಯದ ಪ್ರೀತಿಗೆ ಮಗುವನ್ನು ಒಡಲಲ್ಲಿ ಧರಿಸಿ ಬೇರೆ ದಾರಿ ಕಾಣದೆ ಯಾರಿಂದಲೋ ವೇಶ್ಯೆಯಾಗಿ ಪರಿವರ್ತಿಸಲ್ಪಟ್ಟು ಅವರನ್ನೇ ಅಮ್ಮ ಎಂದು ಕರೆಯುವ ಅನಿವಾರ್ಯತೆಗೆ ಸಿಲುಕುವ 'ಸೂಳೆಯೊಳಗಿನ ಗರತಿ' ಅಪರ್ಣ, ಜಿಂಕೆಕಣ್ಣಿನ ಅಪರಿಮಿತ ಸುಂದರಿ ಮಗಳು ಚಂದ್ರ, ಇವರಿಬ್ಬರ ಸೌಂದರ್ಯವನ್ನು ಮೆಚ್ಚುತ್ತಾ ಅದನ್ನು ಹಣವನ್ನಾಗಿ ಪರಿವರ್ತಿಸುವ ಉದ್ದೇಶ ಹೊತ್ತ ಮುದುಕಿ ಸಂಗವ್ವ .. ಈ ಮೂವರ ಆಗಮನದಿಂದ ಆತಂಕಕ್ಕೊಳಗಾಗುವ ಆ ಬೀದಿಯ ಜನತೆ ಅದರಲ್ಲೂ ಎದುರಿನ ಶೇಷಾವಧಾನಿಗಳ ಮನೆಯ ತಂಗಮ್ಮ, ಅವರತ್ತೆ ಗುಂಡಮ್ಮ. ಆ ಕ್ಷಣದ ಅಮಲಿಗೆ ಮನಸೋತದ್ದಕ್ಕೆ ಜನಿಸಿದ ಮಗಳು ಅನುಭವಿಸುವ ವೇದನೆಯನ್ನು ಅನುದಿನ ನೋಡುತ್ತಾ ಆ ಸಂಕಟದಲ್ಲಿ ಅನುಕ್ಷಣ ಸತ್ತಂತೆ ಬದುಕುವ ಅಪರ್ಣಳ ಪಾತ್ರ ದುರಂತದಲ್ಲಿ ಆದಿ ತೆಗೆದಂತಿದೆ.

ಚಂದ್ರಾಳ ತೊಳಲಾಟ ಕಾದಂಬರಿಯುದ್ದಕ್ಕೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾ ಹೋಗುತ್ತಾರೆ. ಚಿಟ್ಟೆಯಂತೆ ಹಾರಾಡಿಕೊಂಡಿದ್ದ ಚಂದ್ರಾ ಬರಬರುತ್ತಾ ಮುಟ್ಟಿದರೆ ಮುನಿಯಷ್ಟು ಸೂಕ್ಷ್ಮ ಸ್ವಭಾವದವಳಾಗಿ ಪರಿವರ್ತನೆಯಾಗುವ ಬಗೆಯ ಒಂದು ಚಿತ್ರಣ ಇಲ್ಲಿದೆ. 


" "ಕಳ್ಳ ಸೂಳೆಮಗನೇ, ಎಷ್ಟು ಜನಕ್ಕೆ ಹುಟ್ಟಿದೋನೋ ನೀನು!?"

"ಕತ್ತೆ ಸೂಳೆಮಗನೇ, ನೀನೇ ನೂರ್ ಜನದ ಪಿಂಡ. ನಿಮ್ಮಮ್ಮ ದಿನಕ್ಕೆ ಇಪ್ಪತ್ತು ಜನಕ್ಕೆ...."

ಚಂದ್ರಾ ತುಟಿಕಚ್ಚಿ ಮಾಲತಿಯ ಭುಜ ಹಿಡಿದುಕೊಂಡಳು. ಬೀದಿಯ ಜಗಳ ನೋಡುತ್ತಾ ನಿಲ್ಲುವಷ್ಟು ವೇಳೆ ಇರಲಿಲ್ಲ ಇಬ್ಬರಿಗೂ. 

"ಬಾರೆ ಹೋಗೋಣ, ಅದನ್ನೇನು ನೋಡೋದು ?" 

ಅನ್ನುತ್ತಾ ಹೆಜ್ಜೆ ಹಾಕಿದಳು ಮಾಲತಿ, ಉತ್ತರ ಕೊಡದೆ ಮುಖ ಬಾಗಿ ಅವಳ ಬದಿಯಲ್ಲಿ ನಡೆದಳು ಚಂದ್ರಾ. ಅವಳ ಮೌನವನ್ನು ಕಂಡು ಮಾಲತಿ ಇತ್ತ ನೋಡಿದಳು. ಚಂದ್ರಾಳ ಕಣ್ಣುಗಳಲ್ಲಿ ನೀರಾಡುತ್ತಿದೆ. ಮುಖ ಸಿಟ್ಟಿನಿಂದ ಉರಿಯುತ್ತಿದೆ. ಮಾಲತಿ ಅಚ್ಚರಿಯಿಂದ ಕೇಳಿದಳು. 

" ನಿಂಗೇನಾಯಿತೇ ಅಳೋಕೆ?"

"ಸೂಳೆ ಸೂಳೆ ಅನ್ನದೆ ಮಾತಾಡೋಕೆ ಬರಲ್ಲ ಈ ಜನಕ್ಕೆ.ಮಾತೆತ್ತಿದರೆ ಸೂಳೆಮಗನೇ ಅಂತಾರೆ. ಸೂಳೆ ಅಷ್ಟ್ ಕೆಟ್ಟೋರು ಇನ್ಯಾರು ಇಲ್ವೇ ಇಲ್ವೇನೋ ಪ್ರಪಂಚದಲ್ಲಿ."

" ಸಾಕೆ! ಕುಂಡಿ ಮೇಲೆ ಹೊಡದ್ರೆ ದವಡೆ ಹಲ್ಲು ಬಿತ್ತೂಂತ ಯಾರೋ ಏನೋ ಜಗಳ ಮಾಡ್ಕೊಂಡ್ರೆ ನೀ ಯಾಕೆ ಹೀಗಾಡ್ತೀಯಾ"

"ಜಗಳ ಮಾಡ್ಕೊಳ್ಳಿ ಯಾರ್ಗೆನಂತೆ. ಮೂರ್ಹೊತ್ತೂ ಸೂಳೆ ಸೂಳೆ ಅಂತ ಯಾಕನ್ನಬೇಕೋ ?"

ಮಾಲತಿ ಮತ್ತಷ್ಟು ಜೋರಾಗಿ ನಕ್ಕಳು 

" ಸುಮ್ನಿರೇ ಸಾಕು, ಕಳ್ಳನ ಮನಸ್ಸು ಹುಳ್ಳಗೇಂತ. ನಾ ಸೂಳೆ ಅಂತ ನೀನೇ ಮೂರ್ಹೊತ್ತೂ ಯೋಚ್ನೆ ಮಾಡ್ತಿರ್ತೀಯೇನೋ . ಅದಕ್ಕೆ ನಿಂಗೇ ಈ ಕೆಲಸಕ್ಕೆ ಬಾರದ ಚಿಂತೆ. ಬೈದಾಡೋರು ಏನೇನೊ ಅಂದ್ಕೊತಾರೆ. ನಮ್ಮ ಜನ ನೋಡು, ಗಂಡ ಸತ್ತ ಕೂಡ್ಲೇ ತಲೆ ಬೋಳಿಸೋದೂ ಅವರೇ. ಆಮೇಲೆ ರಂಡೆ ಮುಂಡೆ ಅಂತ ಬೈಯ್ಯೋರೂ ಅವರೇ.. ಅದಕ್ಕೇನು ಮಾಡೋಕಾಗುತ್ತೆ ಹೇಳು. ಸಧ್ಯ ನಿಂಜನಕ್ಕೆ ಈ ಮುಂಡೆತನ ಬಂದಿಲ್ಲ. ನಿತ್ಯ ಮುತ್ತೈದೆತನ ನಿಮ್ಮ ಜಾತಿಗೆ. ನಮ್ಮ ಜನದ ಕಷ್ಟ ನಿಂಗೇನ್ ಗೊತ್ತು."  "

ಮಾಲತಿಯ ಪಾತ್ರ ಚಂದ್ರಾಳನ್ನು ಸಮಾಧಾನಿಸುತ್ತಲೇ ಇಂದಿರಾ ಅವರ ಚಿಂತನೆಗಳನ್ನು, ಅವರ ವೈಚಾರಿಕತೆಯನ್ನುಹೇಳುತ್ತಾ ಹೋಗುತ್ತದೆ. 

 ಇದು ಇಂದಿರಾ !!

ಹರೆಯದ ಆಕರ್ಷಣೆ ಸೋಮು ಚಂದ್ರಾ ಇಬ್ಬರನ್ನೂ ಬಿಡುವುದಿಲ್ಲ. ಅದು ಕೇವಲ ಆಕರ್ಷಣೆಯಾಗುಳಿಯದೆ ಪ್ರೀತಿಯಾಗಿ ಪರಿವರ್ತಿತವಾದಾಗಲೂ ಅಲ್ಲಿ ಅವರಿಬ್ಬರಿಗೂ ಅತ್ಯಂತ ಸ್ಪಷ್ಟವಾಗಿ ಗೊತ್ತಿರುತ್ತದೆ ತಾವಿಬ್ಬರೂ ಮದುವೆಯಾಗಲು ಸಾಧ್ಯವೇ ಇಲ್ಲವೆಂಬುದು . ತಮ್ಮ ಪ್ರೀತಿಗೆ ಸಮಾಜ ಮತ್ತು ತಮ್ಮ ಕುಟುಂಬಗಳು ಮನ್ನಣೆಯನ್ನು ಕೊಡುವುದಿಲ್ಲವೆಂದು ತಿಳಿದಿದ್ದರೂ ಒಂದು ನವಿರಾದ ಪ್ರೀತಿ ಅವರಿಬ್ಬರ ಮಧ್ಯೆ ಅರಳುತ್ತದೆ. ಆದ್ದರಿಂದಲೇ ಸೋಮುವಿನ ಮದುವೆ ನಿಶ್ಚಯವಾದಾಗ ಚಡಪಡಿಸುವ, ನೋಯುವ ಚಂದ್ರಾಳಿಗೆ ಅವನ ಬಗ್ಗೆ ಸಿಟ್ಟು ಮೂಡುವುದಿಲ್ಲ. ಬೇಸರ ಬೆಟ್ಟದಷ್ಟಿದ್ದರೂ ಅದು ಅವನ ಕುರಿತದ್ದಲ್ಲ. ಇದರ ಅಂತ್ಯ ಹೀಗೇ ಎಂಬ ಸ್ಪಷ್ಟ ಅರಿವಿದ್ದೂ ಆ ಪ್ರೀತಿ ಮೂಡುವುದನ್ನು ಅವರಿಬ್ಬರಿಂದಲೂ ತಪ್ಪಿಸಲಾಗುವುದಿಲ್ಲ. ಒಂದು ವೇಳೆ ಚಲನಚಿತ್ರದಲ್ಲಿರುವಂತೆ ಅದು ಕಮಿಟ್ ಆಗಿ ನಂತರ ಅನುಮಾನಕ್ಕೆ ಬಲಿಯಾಗುವ ಪ್ರೀತಿಯಾಗಿದ್ದರೆ ಅಂತಹಾ ಪ್ರೀತಿ ಓದುಗನ ಕಣ್ಣಲ್ಲಿ ಇಳಿದು ಹೋಗುತ್ತಿತ್ತು. ಕಮಿಟ್ ಆಗಲು ಸಾಧ್ಯವೇ ಇಲ್ಲದ ವಾತಾವರಣದಲ್ಲಿ ಅದು ಅಸಹಜ ನಡೆಯಂತೆ ಕಾಣುತ್ತಿತ್ತು. ಹಾಗಾಗದಿರುವಂತೆ ಕಾಯ್ದಿರುವುದು ಇಂದಿರಾ ಅವರ ಬರವಣಿಗೆಯ ವೈಶಿಷ್ಟ್ಯ . 


ಇನ್ನು ಏಳು ಜನ್ಮಕ್ಕೂ ನಾನು ನಿನ್ನವಳು ಎಂದು ಬರೆದಿಟ್ಟ ಚಂದ್ರಾ ಇದ್ದೊಂದು ಜನ್ಮದಲ್ಲಿ ಕೂಡಾ ಅವನವಳಾಗಿಯೂ ಅವನವಳಾಗದೇ ಹೋಗುತ್ತಾಳೆ. ಈ ಕಾದಂಬರಿಯನ್ನು ಇಂತಹಾ ದಾರುಣ ಪ್ರಸಂಗದ ಮೂಲಕ ಅಂತ್ಯಗೊಳಿಸುವ ಇಂದಿರಾ ಹೇಳಹೊರಟಿದ್ದು ಏನಿರಬಹುದು? ಇಂತಹಾ ಪರಿಸರದಲ್ಲಿ ಬೆಳೆದಿರುವವರೆಲ್ಲರಿಗೂ ಇದೇ ಹಾದಿ ಎಂದಲ್ಲ . ನಿತ್ಯ ಹಳೆಯ ಸೀರೆ ಮಡಿಯುಟ್ಟು ಕರಿಮಣಿ ವಾಲೆಯೊಂದೇ ಪ್ರಧಾನವಾಗಿ (ಬಡತನವಿರಲಿ ಇಲ್ಲದಿರಲಿ) ತಮ್ಮದು ಕಾರ್ಪಣ್ಯದ ಜೀವನವೆಂದುಕೊಳ್ಳುತ್ತಾ ಪಾತಿವ್ರತ್ಯದ ಆಭರಣ ತೊಟ್ಟುಕೊಳ್ಳುತ್ತಿರುವವರೆದುರು  ಕಾಂಜೀವರಂ ರೇಷ್ಮೆ ಸೀರೆಯುಟ್ಟು ಮೈ ತುಂಬಾ ಒಡವೆಗಳನ್ನು ತೊಟ್ಟು ಅವರೆಲ್ಲರೂ ತಮ್ಮನ್ನು ಹೀನಾಯವಾಗಿ ನೋಡುತ್ತಾರೆಂದು ಅರಿತರೂ ಎಲ್ಲವನ್ನೂ ಒಳಗೊಳಗೇ ನುಂಗಿ ಬಾಳುವೆ ನಡೆಸುವರರ ಕಥೆಯ ದಾರುಣತೆಯನ್ನು ಹೇಳುವುದು ...... ಮಾಲತಿಯ ಬಾಯಲ್ಲಿ ಅವರು ಹೇಳಿಸುವಂತೆ ರಂಡೆ ಮುಂದೆ ಎಂದು ಕರೆಸಿಕೊಂಡವರದು ದಾರುಣ ಬಾಳಾದರೂ ಅಂತಹವರು ಕೂಡ ಅಸಹ್ಯದಿಂದ ನೋಡಿ ತಮ್ಮ ಜೀವನವೇ ಪುಣ್ಯವೆಂದು ತೃಪ್ತಿ ಪುಟ್ಟುಕೊಳ್ಳುವ ದಾರುಣಾತಿದಾರುಣ ಬಾಳು ವೇಶ್ಯೆಯರದು ಎಂಬುದನ್ನು ಹೇಳುವುದು... ಇಂತಹಾ ಸಮಾಜದಲ್ಲಿ ಮದುವೆಯಾಗಿ ಮನಮೆಚ್ಚಿದವನೊಡನೆ ತೃಪ್ತಿಯಿಂದ ಬಾಳಲು ಹಪಹಪಿಸುವ ಅಪರ್ಣಾ, ಚಂದ್ರಾಳಂತಹವರು ಚಂದ್ರಶೇಖರ, ಸೋಮುವಿನಂತಹ ಧೈರ್ಯವಿಲ್ಲದವರಿಂದ ಹೀಗೊಂದು ಅಂತ್ಯ ಕಾಣಬಲ್ಲರೆಂದು ಹೇಳುವುದು... ಇದು ಇಂದಿರಾ ಆ ಕಾದಂಬರಿಯ ದಾರುಣ ಅಂತ್ಯದ ಮೂಲಕ ಹೇಳುತ್ತಿರುವ ಸಂದೇಶವಲ್ಲದ ಸಂದೇಶ. 

ಅವರ ಮೇರು ಕೃತಿಯೆಂದೇ ಹೆಸರಾದ ಫಣಿಯಮ್ಮ ಅವರ ಎಲ್ಲ ಕಾದಂಬರಿಗಳಿಗೂ ಕಳಶವಿಟ್ಟಂತಹಾ ಕೃತಿ. ೧೮೪೦ನೆಯ ಇಸವಿಯಿಂದ ಆರಂಭವಾಗುವ ಈ ಕಾದಂಬರಿ ನಮ್ಮ ಸಾಹಿತ್ಯದ ಪರಂಪರೆಯಲ್ಲಿ ಮೈಲಿಗಲ್ಲಾಗಬಲ್ಲ, ಅನೇಕ ಸಾಂಸ್ಕೃತಿಕ ವಿವರಗಳನ್ನು ದಾಖಲಿಸಿದ ಕಾದಂಬರಿ. 

ಅದೊಂದು ಮನೆ.. ಸುಭಿಕ್ಷ ಮನೆ. ಮಲೆನಾಡಿನ ಹಳ್ಳಿಯ ಮನೆ.. ಸಮೃದ್ಧವಾಗಿ ಗದ್ದೆ, ತೋಟ, ಕಬ್ಬಿನಗದ್ದೆ, ಬಾಳೆ, ತೆಂಗು ತರಕಾರಿ, ಹಣ್ಣು, ಹೂವು ಸಕಲವೂ ಬೆಳೆಯುವ ಫಲವತ್ತಾದ ಭೂಮಿಯುಳ್ಳ, ಮನೆಯ ಜನರಿಗಿಂತಲೂ ದನಕರುಗಳೇ ಹೆಚ್ಚಾಗಿದ್ದ ಹದಿನಾರು ಕಂಬದ ತೊಟ್ಟಿಯ ನಾಡಹೆಂಚಿನ ಅತಿದೊಡ್ಡ ಸಮೃದ್ಧ ಮನೆ. ಅದರಲ್ಲೂ ಅಂಚೆಯ ಮನೆ. ಇಂತಹಾ ಮನೆಯಲ್ಲಿ ಫಣಿಯಮ್ಮನ ಜನನ.  ಕೇವಲ ಈ ಸಮೃದ್ಧಿಯಷ್ಟೇ ಅಲ್ಲದೆ ಆ ಕಾಲದ ಜನರ ನಡುವಳಿಕೆಗಳ ಬಗ್ಗೆ ಮುಲಾಜಿಲ್ಲದೆ ಇಂದಿರಾ ಬರೆಯುತ್ತಾ ಹೋಗುತ್ತಾರೆ. ಆಗಿನ ಕಾಲದಲ್ಲಿ ಬೇರು ಬಿಟ್ಟಿದ್ದೆಂದರೆ ವಿಪರೀತ ಮಡಿವಂತಿಕೆ. ಅದರ ಜೊತೆಗೆ ಸಂಪ್ರದಾಯ, ಶಾಸ್ತ್ರ .ಮತ್ತೂ ಹೆಚ್ಚಿನದೆಂದರೆ ಕೂಪಮಂಡೂಕತ್ವ. ಇಂತಹದ್ದೊಂದು ನಿಷ್ಠುರ ಮಾತಿನೊಡನೆ ಕಾದಂಬರಿಯನ್ನು ಆರಂಭಿಸುವ ಇಂದಿರಾ ಅದಕ್ಕೆ ಸಾಕ್ಷಿಗಳನ್ನು ಒದಗಿಸುತ್ತಾ ಹೋಗುತ್ತಾರೆ.

 "ಏನಾದರೂ ಚೂರು ಹೆಚ್ಚುಕಡಿಮೆ ಆಯಿತೆಂದರೆ ಬ್ರಾಹ್ಮಣರೆಲ್ಲಾ ಕಚ್ಚೆ ಕಟ್ಟಿಕೊಂಡು ಮೂವತ್ತು ಮೈಲಿ ದೂರದ ಶೃಂಗೇರಿಗೆ ಕಾಳು ನಡಿಗೆಯಲ್ಲಿ ನಡೆದರೆಂದೇ ತಿಳಿಯಬೇಕು. ಆಗ ಶ್ರೀಶ್ರೀಶ್ರೀ ನರಸಿಂಹಭಾರತಿ ಸ್ವಾಮಿಗಳು ಪಟ್ಟಕ್ಕೆ ಬಂದ ಕಾಲ. ಮಾತು ಎತ್ತಿದರೆ ಬಹಿಷ್ಕಾರ. ಇಂಥದು ದಿನವೂ ಇರುವುದೇ! ಯಾವಳಾದರೂ ಬಾಲ ವಿಧವೆ ಬಸಿರಾದಳೆಂದರೆ ಮುಗಿಯಿತು. ಅದಕ್ಕೆ ಕಾರಣರಾದವರೇ ಶೃಂಗೇರಿಗೆ ಹೋಗಿ ಆಕೆ ಬಗ್ಗೆ ಸ್ವಾಮಿಗಳಲ್ಲಿ ದೂರು ಹೇಳಿ ಆಕೆಯನ್ನು ಜಾತಿಯಿಂದ ಹೊರಹಾಕಿಸಿ ಬರುತ್ತಿದ್ದರು. ಸ್ವಾಮಿಗಳಾದರೂ ಹೇಳಿಕೇಳಿ ಸನ್ಯಾಸಿ . ಸದಾ ಈ ವ್ಯಭಿಚಾರದ ಪುರಾಣ ಕೇಳುವುದು ನಮ್ಮ ಬ್ರಹ್ಮಚರ್ಯಕ್ಕೆ ಕುಂದು ಎಂದು ತಿಳಿಯರು. ಅವರು ಕೇಳಿ ಕೈ ಸನ್ನೆಯಿಂದಲೇ ಅದನ್ನು ಮಠದ ಧರ್ಮಾಧಿಕಾರಿಗಳಿಗೆ ವಹಿಸುತ್ತಿದ್ದರು, ಕೇಳಬೇಕೆ? ತೋಳನಿಗೆ ಕುರಿ ಕಾಯಲು ಬಿಟ್ಟಂತೆ. ಅವರ ಸೊಂಟಕ್ಕೆ ಕೆಲವು ಅಪ್ಪಟ ಬೆಳ್ಳಿಯ ರೂಪಾಯಿಗಳು ಸೇರಿದ ಕೂಡಲೇ ಬಡಪಾಯಿ ಮಡಿ ಹೆಂಗಸಿಗೆ ಬಹಿಷ್ಕಾರ ಬಿದ್ದಂತೆಯೇ."

ಇಂತಹದ್ದೊಂದು ಅಸಾಧಾರಣ ಧೈರ್ಯ, ಕಟು ವಿಮರ್ಶೆಯನ್ನು .. ಯಾವುದೋ ಕಲ್ಪಿತವಲ್ಲದ ಇಂದಿಗೂ ಯಾವುದೇ ಕಳಂಕವಂಟಿಸಿಕೊಳ್ಳದ ಮಠವೊಂದನ್ನು ಹೆಸರಿಸಿ ಬರೆಯುವ ಧೈರ್ಯವನ್ನು ಮಾಡಿದ ಲೇಖಕ ಅಥವಾ ಲೇಖಕಿ ನನ್ನ ಓದಿಗೆ ಸಿಕ್ಕಿಲ್ಲ. ಕಚ್ಚೆ ಕಟ್ಟಿಕೊಂಡು ಶೃಗೇರಿಗೆ ಹೊರಡುವ ಬ್ರಾಹ್ಮಣರು ಎಂಬಲ್ಲಿಯೇ ಅಲ್ಲಿಯವರೆಗೆ ಅವರು ಕಟ್ಟಿರಲಿಲ್ಲ ಎಂಬ ಹೊಳಹು. ತಾನು ಮಾಡಿದ್ದು ಯಾರಿಗೂ ತಿಳಿಯಬಾರದೆಂದು ತನ್ನಿಂದಾದ ಅಕೃತ್ಯಕ್ಕೆ ತಾನೇ ಹೋಗಿ ಬಹಿಷ್ಕಾರ ಹಾಕಿಸುವ ಸೋಗಲಾಡಿತನದ ಬಗ್ಗೆ ಯಾವುದೇ ಮುಲಾಜೂ ತೋರದೆ ಒದ್ದಂತೆ ಬರೆಯುತ್ತಾ ಹೋಗುವ ಇಂದಿರಾ ದಂಗು ಬಡಿಸುತ್ತಾರೆ. 

ಹೋಗಲಿ ಮಡಿ ಹೆಂಗಸರ, ವಿಧವೆಯರ ಸ್ಥಿತಿ ಹೀಗಿದೆ ಎಂದರೆ ಮುತ್ತೈದೆಯರ ಪಾಡೇನೂ ನೆಮ್ಮದಿಯಾಗಿತ್ತೆಂದಲ್ಲ. ಅವರು ಅದನ್ನು ಬರೆಯುವ ರೀತಿ ನೋಡಿ "ಈಗಿನ ಕಾಲದಂತೆ ಆ ಕಾಲದಲ್ಲಿ ಹರಿಗೆ ಎಂದರೆ ಅದೊಂದು ಪುತ್ರಕಾಮೇಷ್ಟಿ ಯಾಗವಾಗಿರಲಿಲ್ಲ. ಹೆಂಗಸರು ಬಸುರಿಯರಾಗಲೀ, ಕಾಯಿಲೆಯಾಗಲೀ ಬೆಳಗಿನಿಂದ ಸಂಜೆಯ ತನಕ ಅವರಿಗೆ ಮೈ ತುಂಬಾ ಕೈ ತುಂಬಾ ಕೆಲಸವಿದ್ದೇ ಇರುತ್ತಿತ್ತು. ದುಡಿದು ದುಡಿದು ಮೈ ಹಣ್ಣಾಗಿರುತ್ತಿತ್ತು. ಹೆರಿಗೆ ನೋವು ಕಾಣಿಸಿಕೊಂಡ ಮೇಲೇ ಆಕೆ ಹೆರಿಗೆ ಕೋಣೆಗೆ ಹೋಗಬೇಕು." ಇದು ಅಂದಿನ ಮಹಿಳೆಯರ ಸ್ಥಿತಿ. ಹೆರಿಗೆ ರಾತ್ರಿಯೇ ಆದರೂ ಅದು ಮನೆಯವರಿಗೆ ತಿಳಿಯುವುದು ಬೆಳಗ್ಗೆ ಎದ್ದಮೇಲೇ. ಅದು ವಿಶೇಷವೂ ಅಲ್ಲ. ವರ್ಷ ಪೂರ್ತಿ ಯಾರಾದರೊಬ್ಬರು ಆ ಬಾಣಂತಿಯ ಕೋಣೆಯಲ್ಲಿ ಇರುತ್ತಲೇ ಇದ್ದರು.  

ಇದಿಷ್ಟೇ ಅಲ್ಲದೆ ಆ ಕಾಲದಲ್ಲಿನ ವಿದ್ಯಾಭ್ಯಾಸ ಪದ್ಧತಿ, ಹಿಂದಿನಿಂದ ನಮ್ಮ ಅಥವಾ ಪ್ರಪಂಚದ ಯಾವುದೇ ಪರಿಸರದಲ್ಲಿ ರೂಢಿಯಲ್ಲಿರುವ ವಿದ್ಯಾಭ್ಯಾಸದ ವಿಧಾನಗಳು.. ಒಂದೋ ಶಾಲೆ ಅಥವಾ ಗುರುಕುಲ ಅಥವಾ ಮಠಮಾನ್ಯಗಳು ಇಂತಹ ಪರಿಸರದಲ್ಲಿ ಶಿಕ್ಷಣ ಪಡೆಯುವ ಪದ್ಧತಿ ಮತ್ತು ಹಿರಿಯರಿಂದ ಅವರ ಅನುಭವಗಳ ಮುಖೇನ ಕಲಿಯಬಹುದಾದ ಜಾನಪದ ಶಿಕ್ಷಣದಂತಹಾ ಪದ್ಧತಿ. ಇವೆರಡರಲ್ಲಿ ಗಂಡುಮಕ್ಕಳು ಮೊದಲನೆಯ ರೀತಿಯೂ ಹೆಣ್ಣು ಮಕ್ಕಳು ಎರಡನೆಯ (ಅಂದರೆ ಮನೆಯಲ್ಲಿಯೇ ಹಿರಿಯರಿಂದ ಕಲಿಯಬಹುದಾದ ಕ್ರಮದಲ್ಲಿ )ರೀತಿಯಲ್ಲಿ ಕಲಿಯುವ ಕ್ರಮ . ಹೆಣ್ಣುಮಕ್ಕಳಿಗೆ ಅಕ್ಷರದ ದರ್ಶನವಿಲ್ಲದ ಸ್ಥಿತಿ. ತಮ್ಮ ಹಿರಿಯರಿಂದ ಅವರು ಕಲಿಯುತ್ತಿದ್ದುದಾದರೂ ಏನು? ಹಾಡು, ಹಸೆ, ಮನೆಗೆಲಸ, ದೇವರ ಉಪಕರಣೆ ತೊಳೆಯುವುದು, ಮನೆ ಸಾರಿಸಿ ರಂಗವಲ್ಲಿ ಇಡುವುದು, ಮಗುವಿಗೆ ಎರಡು ವರ್ಷವಾಗುತ್ತಿದ್ದಂತೆಯೇ ಮಡಿ ಹುಡಿ , ಎಂಜಲು ಮುಸುರೆಯ ಅವಾಂತರ, ದಿನ ಬೆಳಗಾದರೆ ನೂರೆಂಟು ಹಬ್ಬ ಹರಿದಿನ , ಮಾಡುವೆ ಮುಂಜಿಗಳು. 

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ್ದು ಪಠ್ಯಗಳು ಒಂದೇ ರೀತಿ ಇರುತ್ತಿತ್ತು. ಆದರೆ ಈ ಮೌಖಿಕ ಪರಂಪರೆ ಕಾಲಕಾಲಕ್ಕೆ ಬದಲಾಗುತ್ತಿತ್ತು. ಯಾವುದೋ ಒಂದು ಅರ್ಥಪೂರ್ಣ ಆಚರಣೆ ಅದನ್ನು ಕಳೆದುಕೊಂಡು ಮೂಢನಂಬಿಕೆಯಾಗಿ ಬದಲಾಗಿ ಕುರುಡಾಗಿ ಅದನ್ನು ಅನುಕರಿಸುವ ಸಾಧ್ಯತೆಗಳೇ ಹೆಚ್ಚಿತ್ತೆಂಬಂತೆ ತೋರುತ್ತದೆ. 

ಹೋಗಲಿ ಈ ಪಠ್ಯವನ್ನು ಕಲಿತ ಮೇಲೆ ಹೊರಗಿನ ಸಮಾಜವಾದರೂ ಸರಿ ಇರಬೇಕಿತ್ತಲ್ಲ ... ಅಲ್ಲಿಯೂ ಸಣ್ಣಪುಟ್ಟ ವಿಷಯಕ್ಕೂ ದ್ವೇಷ ಅಸೂಯೆ ಬೆಳೆಸಿಕೊಳ್ಳುವ, ಒಬ್ಬರ ಮೇಲೊಬ್ಬರು ಮಾಟ ಕೂಟ ಮಾಡಿಸುವ, ಮಾತೆತ್ತಿದರೆ ಗಾಜನೂರು ಅಮ್ಮನವರ ಆಣೆ, ಧರ್ಮಸ್ಥಳದ ದೇವರ ಮೇಲೆ ಆಣೆ, ಯಾರಾದರೂ ಬಲವಾದ ಕುಳ ಇದ್ದಾರೆ ಅವರ ಜಬರ್ದಸ್ತಿನಲ್ಲಿ ಕಟ್ಟೆಪಂಚಾಯಿತಿ, ತೀರ್ಮಾನ ರಾಜಿ .. ಹೀಗೆ ನೂರೆಂಟು ಕೆಸರಿನ ಮಧ್ಯೆ ನವಿರಾಗಿ ಅರಳಿದವಳು ಫಣಿಯಮ್ಮ. ಅಂಚೆ ಮನೆಯವರೆಂಬ ಪ್ರತಿಷ್ಠೆ ಬೆಳೆದ ಮೇಲೆ ಅವರ ಆರ್ಥಿಕ ಸಂಪತ್ತು, ಅಂತಸ್ತು, ದೌಲತ್ತು ಬೆಳೆಯಿತಾದರೂ ಸಂಪ್ರದಾಯ, ಮಡಿವಂತಿಕೆ, ಮೂಢನಂಬಿಕೆ ಮತ್ತೂ ಹೆಚ್ಚಾಗಿದ್ದು ಆ ಕಾಲದ ಜನರ ಮನೋಭಾವವನ್ನು ಎತ್ತಿತೋರಿಸುತ್ತದೆ. 

ಅಂತಸ್ತು ಹೆಚ್ಚಾಗಬೇಕಾದರೆ ಕೇವಲ ಹಣ ಬಂದರೆ ಸಾಲದು ಆ ಮನೆತನದ ಸಂಪ್ರದಾಯಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಅವರ ಪ್ರತಿಷ್ಠೆ ಹೆಚ್ಚಾಗುವುದೆಂದು ನಂಬಿದವರ ನಡುವೆ ಫಣಿಯಮ್ಮಮೆಲು ಮಾತಿನೊಡನೆ, ಮೃದು ಸ್ವಭಾವದೊಡನೆ, ಸದ್ದಿಲ್ಲದ ನಡೆ, ಗದ್ದಲವಿಲ್ಲದ ಕೆಲಸದೊಡನೆ ಸಂಪ್ರದಾಯದ ಸಂಕೋಲೆಯಲ್ಲಿ ಬೆಳೆಯುತ್ತಾಳೆ. ಸಣ್ಣ ವಯಸ್ಸಿನಲ್ಲಿ ಮದುವೆ ಎಂದರೇನೆಂದೂ ಅರಿಯದಾಗ ಗೃಹಿಣಿಯಾಗುವ ಫಣಿಯಮ್ಮ ಗೃಹಿಣಿ ತಾನು ಎಂಬುದು ಅರಿವಾಗುವುದರಲ್ಲೇ ವಿಧವೆಯೂ ಆಗಿಬಿಡುತ್ತಾಳೆ. ಆಗಿನ ಕಾಲದ ವಿಶೇಷವೆಂದರೆ ಯಾವುದೂ ಯಾರಿಗೂ ಕಷ್ಟವೇ ಅಲ್ಲ . ಏಕೆಂದರೆ ಅದಕ್ಕಿಂತ ಮಿಗಿಲಾದುದೊಂದು ಸುಖವಿದೆ ಎಂಬುದನ್ನೇ ಅರಿಯದವರು ಅವರು. ಮನೆಯಲ್ಲಿ ವಿಧವೆಯರ ಸಾಲು ಸಾಲೇ ಇರುತ್ತಿತ್ತಲ್ಲ .. ಇವಳೂ ಆ ವಿಧವೆಯರ ಗುಂಪಿಗೆ ಮೈನೆರೆಯುವ ಮುನ್ನವೇ ಸೇರಿ ಬಿಡುತ್ತಾಳೆ. ಕಾದಂಬರಿಯ ಅಂತಃಸತ್ವವಿರುವುದು ಇಂತಹ ಕೂಪದಲ್ಲೇ ಬೆಳೆದು ಬಂಡ ಫಣಿಯಮ್ಮ ಸಂಪ್ರದಾಯದ ಬೇರು ಕಳಚಿಕೊಳ್ಳದೇ ಕ್ರಾಂತಿಕಾರಿಯಾಗುವುದರಲ್ಲಿ. ಅತಿ ಜಾತಕ ನೋಡಿಸಬಾರದು ಎಂದು ಬುದ್ದಿ ಹೇಳುವ, ಹಸಲರ ಬೈರನ ಮಗಳು ಸಿಂಕಿಗೆ ಹೆರಿಗೆ ಮಾಡಿಸುವ, ದಾಕ್ಷಾಯಣಿಯ ತಲೆಕೂದಲು ತೆಗೆಸಬಾರದೆಂದು ಬುದ್ದಿ ಹೇಳುವ ಫಣಿಯಮ್ಮನ ವೈಚಾರಿಕತೆ ಅಂತಹಾ ವಾತಾವರಣದಲ್ಲಿದ್ದೂ ಮಾಗಿದ್ದು ಹೇಗೆ? ಹೊರಜಗತ್ತನ್ನೇ ಕಂಡರಿಯದ ಫಣಿಯಮ್ಮ, ಮಕ್ಕಳು ಹೇಗಾಗುತ್ತವೆ ಎಂದೂ ಅರಿಯದ ಫಣಿಯಮ್ಮ, ಅಡುಗೆಮನೆಯನ್ನು ಬಿಟ್ಟು ಹೊರಹೋಗದ ಫಣಿಯಮ್ಮನ ಮನದಲ್ಲಿ ಈ ಕ್ರಾಂತಿಯ ಬೀಜ ಮೊಳಕೆಯೊಡೆದದ್ದು ಹೇಗೆ 

ಮನೆಯ ಕೆಲಸಗಳೊಟ್ಟಿಗೆ ಕುರುಡು ಸಂಪ್ರದಾಯದ ಹಾದಿಯನ್ನೇ ಹೇಳಿಕೊಟ್ಟ ಮೌಖಿಕ ಪರಂಪರೆಯಲ್ಲೇ ಕಲಿತು ತನ್ನ ನಂತರದ ಪೀಳಿಗೆಗೆ ಮಾನವೀಯತೆಯ,ಉದಾತ್ತ ಮೌಖಿಕ ಪರಂಪರೆಯನ್ನು ಹೇಳಿಕೊಟ್ಟ ಫಣಿಯಮ್ಮ ವಿಶೇಷವೆನಿಸುತ್ತಾಳೆ. ಮಾಗುವುದೆಂದರೆ ಏನೆಂಬುದನ್ನು ತೋರಿಸಿಕೊಡುತ್ತಾಳೆ. 


ಈ ಮೂರೇ ಕಾದಂಬರಿಗಳನ್ನು ಮಾತ್ರ ನಾನು ಆರಿಸಿಕೊಂಡಿದ್ದಕ್ಕೆ ಹಲವು ಕಾರಣಗಳಿವೆ. ಒಂದು ಇಂದಿರಾ ಚಿತ್ರಿಸಿದ ವಿಧವೆಯರ ಚಿತ್ರಣ.., ಎರಡನೆಯದು ಗೆಜ್ಜೆಪೂಜೆಯ ಅಸಹಾಯಕ ಚಂದ್ರಾಳ ಚಿತ್ರಣ.. ಸದಾನಂದದ ವಿಧವೆ ಕಮಲೆಗೂ, ಫಣಿಯಮ್ಮ ಕಾದಂಬರಿಯ ಫಣಿಯಮ್ಮನಿಗೂ ಅಜಗಜಾಂತರ ವ್ಯತ್ಯಾಸ. ಸದಾನಂದದ ಕಮಲಾ ಅರಳುವ.. ಅರಳುತ್ತಿರುವ ಹೊತ್ತಲ್ಲೇ ವಿಷಾದದಿಂದ ನರಳುವ .. ಮುಂದೆ ಉದ್ದಕ್ಕೂ ಮರಳುಗಾಡಿನ ಹಾದಿಯಂತೆ ಚಾಚಿರುವ ಶುಷ್ಕ ಬದುಕನ್ನು ಹೇಗೆ ಕಳೆಯುವುದೆಂದು ಪ್ರಶ್ನಾರ್ಥಕ ಚಿಹ್ನೆ ಹೊತ್ತು ಸಮಯ ನೂಕುತ್ತಿರುವವಳು. ಫಣಿಯಮ್ಮ ಅಂತಹ ಭಾವನೆಯೇ ಅರಳದ ಕರ್ಮಯೋಗಿನಿಯಾಗಿ ಬದುಕು ಸವೆಸುವವಳು. ಉಪ್ಪರಿಗೆಯ ಕಿಟಕಿಯಲ್ಲಿ ಕಂಡ ಶಾರದೆ ಶಂಕರಣರಾಯಣನ ಸರಸ ಕಮಲಳಲ್ಲಿ ಇಂತಹದ್ದೊಂದು ರಸಘಳಿಗೆ ತನ್ನ ಜೀವನದಲ್ಲಿ ಬಂದಿಲ್ಲವೆಂಬ ಬಳಲಿಕೆ ಹುಟ್ಟಿಸಿದರೆ, ಸುಬ್ಬಿ ಮತ್ತು ಪುಟ್ಟಾಜೋಯಿಸರ ಪ್ರಸಂಗ ಫಣಿಯಮ್ಮನಲ್ಲಿ ಹೇವರಿಕೆ ಮೂಡಿಸುತ್ತದೆ. ಇದು ಅನೈತಿಕವಾದ್ದರಿಂದ ಹೀಗಾಗಿರಬಹುದೇ ಎಂದು ಅನ್ನಿಸಿದರೂ ಮಕ್ಕಳ ಹೆರಿಗೆ ಮಾಡಿಸುವಾಗಲೂ ಫಣಿಯಮ್ಮನಿಗೆ ತನಗೆ ಇಂತಹ ಜನ್ಮ ಬರದಿದ್ದುದೇ ಒಳ್ಳೆಯದಾಯಿತೆಂದು ಅನ್ನಿಸುವುದು, ತಾರುಣ್ಯದ ಕ್ಷಣಗಳಲ್ಲಿ ಕೂಡಾ ಅಂತಹದ್ದೊಂದು ಕೋಮಲ ಭಾವಗಳು ವಯೋ ಸಹಜವಾಗಿಯೂ  ಮೂಡದಿರುವುದನ್ನು ಗಮನಿಸಬೇಕಾಗುತ್ತದೆ.

 ಮುತ್ತೈದೆ ಅಚ್ಚಮ್ಮನನ್ನು ನೋಡಿದರೆ ಮನೆಗೆಲಸಗಳಲ್ಲಿ, ಮಕ್ಕಳ ಪಾಲನೆಗಳಲ್ಲಿ ಸುಖವಾಗಿ ಕಾಲ ಕಳೆದು ಬಿಡುವ ವಿಧವೆ ಯಂಟಮ್ಮನಿಗಿಂತ ಹೆಚ್ಚು ವ್ಯತ್ಯಾಸ ಬಹಿರಂಗದಲ್ಲಿ ಕಾಣುವುದಿಲ್ಲ.  ಮುತ್ತೈದೆಯರನ್ನೆಲ್ಲಾ ಒಂದೇ ರೀತಿ ಚಿತ್ರಿಸಿರುವ ಇಂದಿರಾ ವಿಧವೆಯರ ನಾನಾ ರೂಪುಗಳನ್ನು ಎತ್ತಿ ತೋರಿಸುತ್ತಾರೆ. ವಿಧವೆ ಎಂದರೆ ಒಂದೇ ರೀತಿ ಇರಬೇಕೆಂಬ ಮನೋಭಾವ ಅವರದಲ್ಲ. ಕಮಲಾ ಮರುಮದುವೆಯಾದರೆ, ಫಣಿಯಮ್ಮ ಮದುವೆ ಮುಂದಿನ ಜನ್ಮದಲ್ಲೂ ಬೇಡವೆಂದು ದೇವರಲ್ಲಿ ಬೇಡಿಕೊಳ್ಳುತ್ತಾಳೆ. 


ನೂಕೊನರಸಿಂಹವನ್ನು ಮೆಚ್ಚಿಕೊಳ್ಳುತ್ತಾ ಆಧುನಿಕತೆಯ ಪ್ರತೀಕವಾಗಿ ಆಗಮಿಸಿದ ವೇಗಕ್ಕೆ ಹೆಸರಾದ ಮಾರುತಿಯನ್ನು ಬದಿಗೊತ್ತುವ ಇಂದಿರಾ ಸಂಪ್ರದಾಯವಾದಿಯಾಗಿಯೂ ಆಧುನಿಕತೆಯ ಅದ್ಭುತ ಪ್ರತಿಪಾದಕಿಯಾಗಿಬಿಡುತ್ತಾರೆ. ಅವರು ಮೆಚ್ಚುವ ಆಧುನಿಕತೆ ಅಂತರಂಗ ಬೆಳಗುವ ಆಧುನಿಕತೆ. ಅದು ಬಹಿರಂಗದ್ದಲ್ಲ. ಮಹಾದೇವ ಶಾಸ್ತ್ರಿಗಳ ಶಾಸ್ತ್ರವನ್ನು ನಂಬುವ, ಗೆಜ್ಜೆಪೂಜೆಯ ಸೋಮುವಿನ ಬಾಲ್ಯದ ತಾವರೆಯ ಪ್ರಕರಣವನ್ನು ಇಡೀ ಕಾದಂಬರಿಯ ದಿಕ್ಸೂಚಿಯಾಗಿ ಕಾದಂಬರಿಯ ಆರಂಭದಲ್ಲಿ ತೋರಿಸುವ, ಫಣಿಯಮ್ಮನ ಜಡೆ ಕತ್ತರಿಸುವ ಪ್ರಕರಣವನ್ನು ಶಕುನದಂತೆ ತೋರಿಸುವ ಇಂದಿರಾ ಅದನ್ನೆಲ್ಲಾ ನಂಬುತ್ತಾರೆಯೇ ಎಂಬ ಅನುಮಾನದೊಡನೆ ಕೂಡಾ ಆಧುನಿಕತೆಯ ಹೊಸ ವ್ಯಾಖ್ಯಾನ ಬರೆಯುತ್ತಾರೆ. ಬೆಳೆಸಿಕೊಳ್ಳಬೇಕಾದ ಅಂತರಂಗದ ಬೆಳವಣಿಗೆಯ ಬಗ್ಗೆ ಮಾತನಾಡುತ್ತಾರೆ. ಫಣಿಯಮ್ಮನ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನಿಡಲು ಹೇಳುತ್ತಾರೆ. ಕಮಲೆಗೆ ಸದಾನಂದರಿಗೆ ಮರುವಿವಾಹ ಮಾಡಿಸುತ್ತಾರೆ. ಗೆಜ್ಜೆಪೂಜೆಯ ಚಂದ್ರಾಳ ಕರುಳು ಕತ್ತರಿಸುವ ಕಥಾನಕದ ಮೂಲಕ ನಿಮ್ಮ ಅವಜ್ಞೆಗೆ ಹೀಗೊಂದು ಜೀವ ಬಲಿಯಾಗುತ್ತದೆ ಎಂದು ಬುದ್ದಿ ಹೇಳುತ್ತಾರೆ. ಆ ಕಾಲದಲ್ಲಿ ಇಷ್ಟು ಕ್ರಾಂತಿಕಾರಿಯಾಗಿ ಬರೆದ ಇಂದಿರಾ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತಾರೆ. ಯಾವುದೇ ಪುರುಷ ಸಾಹಿತಿಗೂ ಕಡಿಮೆಯಿಲ್ಲದೆ ಒಂದು ಕೈ ಮಿಗಿಲೆನಿಸುವ ಹಾಗೆ ವಸ್ತುಗಳನ್ನು ಆರಿಸಿಕೊಂಡ ಆ ವಸ್ತುವಿಷಯಕ್ಕೆ ಹದವಾಗಿ ವಿವರಗಳನ್ನು ತುಂಬಿದ ರೀತಿ ಗಮನಾರ್ಹವೆನಿಸುತ್ತದೆ.

ಎಲ್ಲಕ್ಕಿಂತ ಅವರು ಕಥೆ ಹೇಳುವ ರೀತಿ ಅನನ್ಯ. ನಮ್ಮ ನಮ್ಮ ಮನೆಯಲ್ಲಿ ಇದ್ದಿರಬಹುದಾದ ಅಜ್ಜಿಯನ್ನೋ, ಹಿರಿಯಮ್ಮನನ್ನೋ ನೆನಪಿಸುವಂತೆ.. ನಮ್ಮನ್ನು ತನ್ನ ಪಾಂಡಿತ್ಯದಿಂದ ಮೆಚ್ಚಿಸುವ ಯಾವ ಹಪಾಹಪಿಯೂ ಇಲ್ಲದೆ, ಕಥಾ ತಂತ್ರಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಸರಳ, ಆಡುಭಾಷೆಯಲ್ಲಿ ಅಷ್ಟೇ ಸಹಜವಾಗಿ ನಿರ್ಭೀಡೆಯಿಂದ ಕಥೆ ಹೇಳುತ್ತಾ ಹೋಗುವ ಇಂದಿರಾ ಪದೇ ಪದೇ ಕಾಡುತ್ತಾರೆ. ಇಂತಹಾ ಕೃತಿಗಳನ್ನು ಕೊಟ್ಟ ಇಂದಿರಾ ಜನ್ಮವೆತ್ತಿ ನೂರು ವರ್ಷವಾಯಿತಂತೆ. ಈಗಲೂ ಅವರ ಪುಸ್ತಕ ಹಿಡಿದಾಗೆಲ್ಲಾ ಭಾಸವಾಗುವುದು ... ಒಂದು ಮಲೆನಾಡಿನ ಮನೆ. ಬಚ್ಚಲೊಲೆಯಲ್ಲಿ ಒಟ್ಟಿದ ಬೆಂಕಿ .. ಅದರ ಮುಂದೆ ಕುಳಿತು ಕಥೆ ಕೇಳುತ್ತಿರುವ ನಾನು .. ಒಲೆಯ ಬೆಂಕಿಯ ಬೆಳಕನ್ನು ಪ್ರತಿಫಲಿಸುತ್ತಿರುವ, ನಡುನಡುವೆ ಬೈಯುತ್ತಾ, ಮುದ್ದಿಸುತ್ತಾ ಕಥೆ ಹೇಳುತ್ತಿರುವ ನಿರ್ವಿಕಾರ ಮುದ್ರೆಯ ಎಂ.ಕೆ. ಇಂದಿರಾ...!!!!!!

ರಿಮೋಟು ಹುಡುಕುತ್ತಾ ...






ಯಾರೋ ಗೊಣಗುತ್ತಿದ್ದರಂತೆ .."ಇದು ಸಂಕ್ರಮಣ ಕಾಲ" ..ಪುಸ್ತಕಗಳು ವ್ಯಾಪಕವಾಗಿ ಬರಲು ಆರಂಭಿಸಿದ ಕಾಲದಲ್ಲಿ ನಮ್ಮಮ್ಮನ ಸರೀಕರಿಗೆ ಅವರಮ್ಮಂದಿರು ಕಣ್ಣು ಹಾಳಾಗುವ ನೆವವೊಡ್ಡಿ ಪುಸ್ತಕಗಳನ್ನು ನಿಷೇಧಿಸಿದ್ದು ಕೇಳಿ ಮೂಕಳಾಗುತ್ತೇನೆ. ಒಂದು ಪುಸ್ತಕ ಓದಿದರೆ ವಾರಕ್ಕೆರಡು ಬಾರಿ ಹರಳೆಣ್ಣೆ ಸ್ನಾನ ಕಡ್ಡಾಯವಾಗಿತ್ತಂತೆ .. ಉಷ್ಣವಾಗದಂತೆ .. ಕಣ್ಣು ಹಾಳಾಗದಂತೆ.!  ಜೊತೆಗೆ ಓದಿ ಹಾಳಾಗುತ್ತಾರೆ ಎಂಬ ಹೆದರಿಕೆ.. ದೊಡ್ಡವರಿಗೆ ತಿರುಗಿ ಮಾತನಾಡಿಬಿಟ್ಟರೆ? ಸ್ವಂತಿಕೆ ಬೆಳೆಸಿಕೊಂಡು ಹೊಕ್ಕ ಮನೆಯಲ್ಲಿ ಅವಿಧೇಯರಾದರೇ  ಎಂಬ ಭಯವೇ? ಗೊತ್ತಿಲ್ಲ. ಕದ್ದು ಓದುವುದು .. ಎಲ್ಲಿಂದಲೋ ಕಡ ತಂದ ಪುಸ್ತಕ ಮರೆ ಮಾಚಿ .. ಮುಚ್ಚಿಟ್ಟು .. ಬಚ್ಚಿ ಕುಳಿತು! ಸಿಕ್ಕಿಬಿದ್ದವರ ಕಥೆ ಗೋವಿಂದ... ಎದುರಿಸಿ ಓದುತ್ತೇನೆ ಎಂದು ಹೇಳಲಾಗದ ಕಾಲ.  ಆ ಸಾಹಸಗಳನ್ನು ಕೇಳುವಾಗ ಬೆರಗು .. ಹೀಗೂ ಒಂದು ಲೋಕವಿತ್ತೇ? ಸಧ್ಯ ಆ ಕಾಲದಲ್ಲಿ ನಾನಿರಲಿಲ್ಲವಲ್ಲಾ !!

ನನ್ನ ಕಾಲದಲ್ಲಿ ಸಿನಿಮಾಗಳು, ಟಿವಿ ಕೆಂಗಣ್ಣಿಗೆ ಗುರಿಯಾಗಿದ್ದವು. ಮನರಂಜನೆಯೆಂದರೆ ಬಾಲ್ಯದಲ್ಲಿ ಸಿನಿಮಾ ಒಂದೇ .. ನೋಡುತ್ತಿದ್ದೆವು.. ಕುರ್ಬಾನಿ ಬಳೆ.. ಬಾಬ್ಬಿ ಟೇಪು.. ಮಂಜುಳಾ ಮುಂಗುರುಳು .. ಸಂಜೆ ಆಟದಲ್ಲೂ ಅಲ್ಲಲ್ಲಿ ಇಬ್ಬಿಬ್ಬರು .. ಮೂವರು ಹುಡುಗರ ದಿಷುಮ್ ದಿಷುಮ್.. ಫೈಟಿಂಗು  ಥೇಟ್ ರಾಜಕುಮಾರ್ ವಜ್ರಮುನಿ ರೀತಿ . ಆದರೆ ಇಬ್ಬರಲ್ಲೂ ತಾನೇ ರಾಜಕುಮಾರ್ ಎಂಬ ಭಾವ .. ಹಾಗಾಗಿಯೇ ಎಷ್ಟೋ ಚಿತ್ರಗಳಿಗೆ ನಾವು ಸಣ್ಣವರ ಪ್ರವೇಶ ನಿಷಿದ್ಧ . ಪರಾಜಿತ, ಪರಸಂಗದ
ಗೆಂಡೆತಿಮ್ಮ  ಮುಂತಾದ ಚಿತ್ರಗಳ ಕಥೆಯನ್ನೂ ನೋಡಿಕೊಂಡು ಬಂದ ನಮಗಿಂತ ಸ್ವಲ್ಪ ದೊಡ್ಡವರು ಆ ಕಥೆಯನ್ನು ಸಣ್ಣವರಿಗೆ ಹೇಳುವಾಗಲೂ ಕದ್ದೇ ಹೇಳಬೇಕಿತ್ತು. ನಡುವೆ ಯಾರಾದರೂ ಬಂದರೆ ಬೇರೆ ಮತ್ತಿನ್ನೇನನ್ನೋ ಹೇಳುತ್ತಿರುವಂತೆ ನಟಿಸುತ್ತಾ .. ಅವರು ಮರೆಯಾದೊಡನೆ ಮತ್ತೆ ಬೇಗಬೇಗ ಕಥೆ ಹೇಳುತ್ತಾ.. ! . ಮತ್ತೆ ಹಿರಿಯರ ಗೊಣಗಾಟ .. ಕಾಲ ಕೆಟ್ಟುಹೋಯಿತು .. ಇದು ಸಂಕ್ರಮಣದ ಕಾಲ .. ಅದರಲ್ಲಿ ಸಂಕ್ರಮಣವೇನಿದೆ ನನಗರಿವಾಗುತ್ತಿರಲಿಲ್ಲ.. 
ಟಿವಿ ಬಂದ ಮೇಲೆ .. ಕಾಲೇಜು ಮುಗಿದೊಡನೆ ಮನೆಗೆ ಬರುವ ಸಂಭ್ರಮ .. ಒಂದಿಷ್ಟು ಧಾರಾವಾಹಿ.. ಅಪರೂಪಕ್ಕೊಂದು ಕಪ್ಪುಬಿಳುಪಿನ ಕನ್ನಡ ಚಿತ್ರ, ಭಾನುವಾರದ ರಂಗೋಲಿ, ಭಾನುವಾರ ಸಂಜೆಯ ಹಿಂದಿ ಚಿತ್ರ, ವಾರಕ್ಕೊಮ್ಮೆ ಚಿತ್ರಹಾರ್.. ಆಗಲೂ ನಮ್ಮ ಜೊತೆಗೆ ಕುಳಿತು ನೋಡುತ್ತಿದ್ದರೂ ಮತ್ತೆ ಹಿರಿಯರ ಗೊಣಗಾಟ .. ಕಾಲ ಕೆಟ್ಟುಹೋಯಿತು .. ಇದು ಸಂಕ್ರಮಣದ ಕಾಲ .. ಅದರಲ್ಲಿ ಸಂಕ್ರಮಣವೇನಿದೆ ನನಗರಿವಾಗುತ್ತಿರಲಿಲ್ಲ. 
ನಗು ಬರುತ್ತಿತ್ತು ನನಗೆ. ಇವರೆಲ್ಲಾ ಹಳೆಯ ಗೊಡ್ಡು ನಂಬಿಕೆಗಳಿಗೆ ಜೋತು ಬಿದ್ದು ಹೊಸದನ್ನು ಒಪ್ಪಿಕೊಳ್ಳಲಾಗದೆ ಸುಮ್ಮನೆ ಗೊಣಗುತ್ತಿದ್ದಾರೆ ಎಂದನ್ನಿಸುತ್ತಿತ್ತು. ಹಾಗೆ ಎಲ್ಲವನ್ನೂ ಒಪ್ಪಿಕೊಳ್ಳಲಾಗುವುದಿಲ್ಲ ಎಂದರೆ ಒಪ್ಪಿಕೊಳ್ಳಲಾಗದ್ದೇನಿದೆ ಎಂಬ ಪ್ರಶ್ನೆ ಧುತ್ತನೆ ಮೂಡುತ್ತಿತ್ತು.. ಗೌರವ, ಹಿರಿಯರ ಕುರಿತ ಹೆದರಿಕೆ ಬಾಯಿ ಕಟ್ಟಿಸುತ್ತಿತ್ತು. 

ನಿನ್ನೆ ಒಂದು ಸುದ್ದಿ ನನ್ನ ಗಮನಕ್ಕೆ ಬಂತು. ಒಬ್ಬ ಹುಡುಗಿ ಯಾವುದೋ ಧಾರಾವಾಹಿಯನ್ನು ನೋಡಿ ಅನುಕರಿಸಲೆತ್ನಿಸಿ ಸಾವು ಎಂದು. ಮೂರ್ನಾಲ್ಕು ದಿನಗಳ ಹಿಂದೆಯೇ ನಡೆದಿದ್ದರೂ ಬಿಡುವಿರದ ಕೆಲಸಗಳ ಮಧ್ಯೆ  ನನ್ನ ಗಮನಕ್ಕೆ ಬಂದಿರಲಿಲ್ಲ ಅದು ..ವಿವರಗಳನ್ನು ಕೇಳುತ್ತಿದ್ದಂತೆಯೇ ಅನ್ನಿಸಿದ್ದು  " ಇದು ಸಂಕ್ರಮಣದ ಕಾಲ " !  ಥಟ್ಟನೆ ಮಗಳ ಬಳಿ ಹೇಳಿಬಿಟ್ಟೆ. 
ನನಗೂ ಅನುಮಾನ ಕಾಡ ತೊಡಗಿತ್ತು . ನಾನೂ ಹೀಗೆ ಹಳಹಳಿಸುತ್ತಿದ್ದೇನಾ? ನನ್ನ ಕಾಲವೇ ಚೆನ್ನಾಗಿತ್ತು ಎಂದು ಸುಮ್ಮಸುಮ್ಮನೇ ಕೊರಗುತ್ತಿದ್ದೇನಾ..ಹಾಗನ್ನಿಸಿದ್ದು  ಅನುಭವ ಮಾಗಿದ್ದಕ್ಕಾ?  

"ನನ್ನಮ್ಮ ಹೇಳ್ತಿದ್ದು ಸರಿ ಅಂತ ನಂಗೀಗ ಗೊತ್ತಾಗ್ತಿದೆ.. ದುರಂತ ಎಂದರೆ ನಾನು ಹೇಳ್ತಿರೋದು ತಪ್ಪು ಅಂತ ನಿನ್ನ ವಯಸ್ಸಿನೋರಿಗೆ ಅನ್ಸುತ್ತೆ. ಇದು ಜನರೇಶನ್ ಗ್ಯಾಪ್" ಅಂದೆ. " ಎಂಥದೂ ಇಲ್ಲ .. ಸಣ್ಣವರಾಗಿದ್ದಾಗ ನಾವು ಮಾಡ್ತಿರೋದು ಸರಿ ಅನ್ಸುತ್ತೆ.. ಅದಕ್ಕೆ ನೀವು ವಯಸ್ಸಾದೋರು ಹೊಂದುಕೊಳ್ಳೋಲ್ಲ ಅಂತ ಅಂದ್ಕೋತೀವಿ. ದೊಡ್ಡವರಾದಾಗಲೂ ನಾವು ಮಾಡ್ತಿರೋದೇ ಸರಿ ಅನ್ಸುತ್ತೆ.. ಆಗ ಚಿಕ್ಕವರು ಮಾಡ್ತಿರೋದು ತಪ್ಪು ಅನ್ಸುತ್ತೆ. ಅಲ್ಲಿ ಜನರೇಶನ್ ಗ್ಯಾಪ್ ಅಲ್ಲ ಇರೋದು. ನನ್ನನ್ನು ನಾನು ಸರಿ ಅಂತ ಸಮರ್ಥಿಸಿಕೊಳ್ಳೋದು ಮನುಷ್ಯನ ಗುಣ ಅಷ್ಟೇ." ದಂಗುಬಡಿದು ಹೋದೆ ಮಗಳ ಉತ್ತರ ಕೇಳಿ...
" ಆದ್ರೆ ಈಗ ನೀನು ಹೇಳ್ತಿರೋದು ಸರಿ.. ಇದು ಸಂಕ್ರಮಣದ ಕಾಲವೇ.. ನಾವು ಎಲ್ಲಿದೀವಿ ಹೇಗಿದೀವಿ ನಂಗೂ ಗೊತ್ತಾಗ್ತಿಲ್ಲ . ಕಾಲ ಕೆಟ್ಟು ಹೋಗಿದೆ ಅಂತ ಇದೇ ಕಾಲದವಳಾಗಿಯೂ ನಂಗೂ ಅನ್ನಿಸ್ತಿದೆ. ಅದು ಸರಿ ಅಮ್ಮಾ."  ಆಮ್ಮ ಹೇಳುವುದು ಮಗಳಿಗೆ, ಮಗಳು ಹೇಳುವುದು ಅಮ್ಮನಿಗೆ ಸರಿ ಅನ್ನಿಸದ ಕಾಲಗಳನ್ನು ನೋಡಿ ಕೇಳಿದ್ದ ನನಗೆ.. ಇಬ್ಬರಿಗೂ ಏಕ ಕಾಲದಲ್ಲಿ ಇಲ್ಲೇನೋ ಸರಿಯಿಲ್ಲ ಅನ್ನಿಸುತ್ತಿರುವುದು ನಡುಕ ಹುಟ್ಟಿಸಿತು. 


ನಡುಕ ಹುಟ್ಟಿಸದೆ ಇನ್ನೇನಾದೀತು? ಸುನಾಮಿಯಂತೆ ಬದಲಾವಣೆ ಅಪ್ಪಳಿಸುತ್ತಿರವುದನ್ನು ನೋಡಿದರೆ ದಿಗಿಲಾಗುತ್ತಿದೆ. ಬದಲಾವಣೆ ಯುಗಯುಗದಿಂದಲೂ ಇದ್ದದ್ದೇ .. ಬದಲಾವಣೆಯ ಕ್ರಮ.. ಬದಲಾಗುವ ಸಮಯ ಬದಲಾವಣೆಗೆ ಒಗ್ಗಿಸುತ್ತಿತ್ತು. ಹಳಹಳಿಕೆ ಇದ್ದರೂ ಒಂದು ನಿಯಂತ್ರಣ ಎಲ್ಲೋ ಇದ್ದೆ ಇರುತ್ತಿತ್ತು. ಕದ್ದು ಒಂದಿಷ್ಟು ಸಿನಿಮಾಗಳಿಗೆ ಹೋಗಬಹುದಿತ್ತು .. ಕದ್ದು ಒಂದಿಷ್ಟು ಪುಸ್ತಕ ಓದಬಹುದಿತ್ತು.. ಅಲ್ಲಿ ಕದಿಯುವಿಕೆ ಇತ್ತು.. ಕದಿಯುವುದೆಂದರೆ ಹೆದರಿಕೆ ಹಿಂದೆಲ್ಲೋ ಇರುತ್ತಿತ್ತು.. ಎಲ್ಲೋ ಕೆಲವರಷ್ಟೇ ಎಲ್ಲರನ್ನೂ ಧಿಕ್ಕರಿಸಿ ರಾಜಾರೋಷವಾಗಿ ವರ್ತಿಸುತ್ತಿದ್ದರು. ಅವರನ್ನು ಬೀದಿಗೆ ಬಿದ್ದವರೆಂದೋ .. ಅಪಾಪೋಲಿಗಳೆಂದೋ ದೂರ ಇಡುತ್ತಿದ್ದರು.. ಯಾರೂ ಅವರೊಡನೆ ಗುರುತಿಸಿಕೊಳ್ಳುತ್ತಲೂ ಇರುತ್ತಿರಲಿಲ್ಲ... ಅವರು ಮಾಡುವ ಸಕಲ ವ್ಯವಹಾರಗಳೂ ತೆರೆದಿಟ್ಟಂತೆ... ಮಿಕ್ಕ ಮಕ್ಕಳ ತಂದೆ ತಾಯಿಯರು ಅವರೊಡನೆ ಸೇರದಂತೆ ತಡೆಯಲು ಹರಸಾಹಸ ಮಾಡುತ್ತಿದ್ದರು.. ಮಕ್ಕಳನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದರು..ಬಹುತೇಕರು ರಕ್ಷಿಸಿಕೊಳ್ಳುತ್ತಿದ್ದರು ..

ಈಗ ಯಾರನ್ನು ಯಾರಿಂದ ರಕ್ಷಿಸುವುದು? ಸ್ಮಾರ್ಟ್ ಫೋನುಗಳು ಮಕ್ಕಳ ಕೈಯ್ಯಲ್ಲೂ ಬಂದುಬಿಟ್ಟಿವೆ. ಶಾಲೆಯಲ್ಲಿ ಬಳಸುವ ಹಾಗಿಲ್ಲವೆಂದು ಕಟ್ಟು ಮಾಡಿದರೂ ನಿರ್ಭೀತಿಯಿಂದ ಮಕ್ಕಳು ಶಾಲೆಯೊಳಗೆ ಕೊಂಡೊಯ್ಯುತ್ತವೆ. ಯಾರನ್ನೋ ಕೇಳಿ ಮಾಹಿತಿ ಪಡೆದು ಕೊಳ್ಳುವ ದುರ್ಗತಿ(?) ಈಗಿನ ಮಕ್ಕಳಿಗಿಲ್ಲ . ಒಂದು ಬಟನ್ ಒತ್ತಿದರೆ ಮಾಹಿತಿಗಳ ಪೂರವೇ ಹರಿದು ಬರುತ್ತಿದೆ. ಏನು ಬೇಕಾದರೂ ನೋಡಬಹುದು .. ಏನು ಬೇಕಾದರೂ ತಿಳಿದುಕೊಳ್ಳಬಹುದು .. ಯಾವುದಕ್ಕೂ ತಡೆಯಿಲ್ಲ ..ಯಾವುದನ್ನೂ ನಿರ್ಬಂಧಿಸುವಂತಿಲ್ಲ.. ಗೂಗಲ್ ಹಿಸ್ಟರಿ ಡಿಲೀಟ್ ಮಾಡಿದರೆ ನೋಡಿದ್ದು.. ಹುಡುಕಿದ್ದು ಯಾರಿಗೂ ಅರ್ಥವಾಗುವುದೂ ಇಲ್ಲ. ಟಿವಿಯ ರಿಮೋಟ್ ಕಿತ್ತಿಟ್ಟುಕೊಳ್ಳಬಹುದು .. ಮನೆಯ ಪಡಸಾಲೆಯಲ್ಲೇ ಇರುವ ಟಿವಿಯಿಂದ ಮಗುವನ್ನು ದೂರ ಮಾಡುವಷ್ಟು ಸುಲಭ ರೂಮಿನಲ್ಲಿ ಮೊಬೈಲಿನಲ್ಲಿ ಸಿಗಬಹುದಾದ ಮಾಹಿತಿಗಳಿಂದ  ದೂರ ಇರಿಸುವುದಲ್ಲ .. 
ದಿನವಿಡೀ ದುಡಿದು ಮನೆಗೆ ಬಂದು ಮತ್ತೆ ಮನೆಯಲ್ಲೂ ದುಡಿಯುವುದು ಅನಿವಾರ್ಯವಾದ ಅಮ್ಮಂದಿರಿಗೆ ಬೆಳೆಯುವ ಎಳೆಯ ಮಕ್ಕಳ ಮೇಲೆ ಇಪ್ಪತ್ನಾಲ್ಕು ಗಂಟೆಗಳೂ ನಿಗಾ ಇಡಲು ಸಾಧ್ಯವೇ ಇಲ್ಲ. ಆಮ್ಮ ಅಡುಗೆ ಮಾಡುವಾಗ .. ಕೆಲಸ ಮಾಡುವಾಗ ಕೈಗೆ ಸಿಕ್ಕ ಮೊಬೈಲಿನಲ್ಲಿ .. ವಾಟ್ಸಾಪ್ಗೆ ಬಂದ ಸಂದೇಶಗಳನ್ನು ಮಗು ಡೌನ್ ಲೋಡ್ ಮಾಡಬಹುದು.. ನೋಡಬಹುದು.. ಇನ್ನೂ ಸ್ವಲ್ಪ ದೊಡ್ಡ ಮಕ್ಕಳಾದರೆ ಬೇರೇನೋ ಹುಡುಕಬಹುದು.. ಹರೆಯಕ್ಕೆ ಕಾಲಿಡುವ ಮಕ್ಕಳಾದರೆ ತಮ್ಮ ರೂಮಿನ ಬಾಗಿಲು ಹಾಕಿಕೊಂಡು ಏನನ್ನಾದರೂ ಮಾಡಬಹುದು.. ತಡೆಯುವವರು ಯಾರು? ತಡೆಯುವುದು ಹೇಗೆ? ಮೊಬೈಲ್ ಕೊಡಿಸದಿರುವುದು ಹೇಗೆ? ಒಳ್ಳೆಯ ಮಾಹಿತಿಗಳು.. ಪಠ್ಯಕ್ಕೆ ಸಂಬಂಧಿಸಿದವೂ ಸಿಕ್ಕುತ್ತವಲ್ಲ .. ಒಳ್ಳೆಯದೊಂದು ಕೊಳಲು ವಾದನ.. ಎಂದೋ ಪ್ರಕಟವಾಗಿ ಮರೆತು ಹೋದ ಅದ್ಭುತ ಲೇಖನ .. ಚಿಕ್ಕಂದಿನಲ್ಲಿ ಕೇಳಿದ್ದ ಆಗಾಗ ಗುನುಗುವಂತೆ ಮಾಡಿದ್ದ ಕೀರ್ತನೆ ... ಅವುಗಳನ್ನು ಬೇಡವೆಂದು ನಿರಾಕರಿಸುವುದು ಹೇಗೆ? ಜಗತ್ತೇ ಅದರ ಬೆನ್ನ ಹಿಂದೆ ಬಿದ್ದಾಗ ನಾವೊಬ್ಬರು ಮುಖ ತಿರುವುವುದು ಹೇಗೆ? ಅದರಿಂದ ಪಾರಾಗುವುದು ಹೇಗೆ? ನಮ್ಮ ನಂತರದ ಎಳೆಯ ತಲೆಮಾರನ್ನು ಪೊರೆಯುವುದು ಹೇಗೆ? ಅವಕ್ಕೆ ಸರಿಯಾದ ದಿಕ್ಕು ತೋರಿಸುವುದು ಹೇಗೆ? ಉತ್ತರವೇ ಹೊಳೆಯುತ್ತಿಲ್ಲ. 
ನಿಯಂತ್ರಣ ಎಂಬ ಪದ ಮಾಯವಾಗಿದೆ. . ಯಾರ ಚಟುವಟಿಕೆಗಳ ಮೇಲೆ ಯಾರೂ ನಿಗಾ ಇಡಲಾಗದ ಸ್ಥಿತಿ .. ಈ ತಂತ್ರಜ್ಞಾನ ಅಪ್ಪಳಿಸುತ್ತಿರುವ ಪರಿಯನ್ನು ಯಾರಿಂದಲೂ  ತಡೆದುಕೊಳ್ಳಲಾಗುತ್ತಿಲ್ಲ. ಏನು ಮಾಡಬೇಕು ಏನು ಮಾಡಬಾರದೋ ಗೊತ್ತಾಗದೆ ತೋಚಿದ್ದನ್ನು ಮಾಡುವ ಮಕ್ಕಳು .. ಅವರಿಗೆ ತಿಳುವಳಿಕೆ ಹೇಳಲಾಗದ ಸ್ಥಿತಿಯಲ್ಲಿ ಕಂಗಾಲಾಗಿ ನಿಂತಿರುವ ಅಪ್ಪ ಅಮ್ಮಂದಿರು..

" ಇದು ಎಲ್ಲಿಲ್ಲ ಹೇಳು? ಭಾರತದಲ್ಲಿ ಮತ್ತೂ ಕಷ್ಟ ಇರಬಹುದು. ಶಾರನ್ ಟೇಟ್ ಕೊಲೆ ಗೊತ್ತಲ್ಲ ನಿನಗೆ . ಚಾರ್ಲ್ಸ್ ಮ್ಯಾನ್ಸನ್ ಪ್ರಕರಣ.. ತಾನು ಏಕೆ ಕೊಲೆಯಾಗುತ್ತಿರುವೆ ಎಂದೂ ಗೊತ್ತಾಗದೆ ಸತ್ತು ಹೋದಳಲ್ಲ .. ಅದಕ್ಕಿಂತ ದುರಂತ ಬೇಕಾ? ಈ ಟಿವಿ ಶುರುವಾದ ಮೊದಲ ದಿನಗಳಲ್ಲಿ ಈ ವೈಭವಗಳನ್ನು ಅರಗಿಸಿಕೊಳ್ಳಲಾಗದ ದಿನಗಳಲ್ಲಿ ಇಲ್ಲೂ ಹಾಗೆ ಇತ್ತಂತೆ ಪರಿಸ್ಥಿತಿ. ಅದು ಕಾಲವೇ ಬ್ಯಾಲೆನ್ಸ್ ಮಾಡಬೇಕು. ಅಲ್ಲಿಯವರೆಗೆ ಇಂತಹ ಅತಿರೇಕಗಳು ನಡೆಯುತ್ತಲೇ ಇರುತ್ತವೆ. ನಮ್ಮ ದುರದೃಷ್ಟವೆಂದರೆ ಇಂತಹ ಕಾಲದಲ್ಲಿ ಇವಕ್ಕೆಲ್ಲ ನಾವು ಸಾಕ್ಷಿಯಾಗಿರೋದು .. ನಮ್ಮಿಂದೇನೂ ಮಾಡಲಾಗದ ಪರಿಸ್ಥಿತಿಯಲ್ಲಿ ಅಸಹಾಯಕರಾಗಿ ನಿಲ್ಲಲೇ ಬೇಕಾಗಿರೋದು." 
ಅಮೆರಿಕಾದಲ್ಲಿರುವ ಗೆಳತಿ ಮುಂದುವರಿದು ಹೇಳಿದ್ದು ಹೀಗೆ " ನಮ್ಮ ಮಕ್ಕಳು ಬೆಳೆದಾಯಿತು.. ಮೊಮ್ಮಕ್ಕಳ ಬಗ್ಗೆ ಯೋಚಿಸಿದರೆ ನಡುಕ ಹುಟ್ಟುತ್ತೆ. "

ನಾನೂ ಅಕ್ಷರಶ ನಡುಗಿ ಬಿಟ್ಟೆ. ರಿಮೋಟ್ ಇರಬೇಕಾಗಿದ್ದು ನಮ್ಮ ಕೈಯ್ಯಲ್ಲಿ... ನಮ್ಮ ಬೆರಳಲ್ಲಿ... ನಮ್ಮ ಮನಸ್ಸಿನಲ್ಲಿ.. ಎಳೆಯ ಕಂದಮ್ಮಗಳಿಗೆ ಆ ರಿಮೋಟ್ ಸಿಗುವಂತೆ ಮಾಡುವುದು ಹೇಗೆ? ರಿಮೋಟ್ ಇಲ್ಲದ ಜಗತ್ತಿನ ಬಗ್ಗೆ ತಿಳುವಳಿಕೆ ಮೂಡಿಸುವುದು ಹೇಗೆ? ಇನ್ನೆಷ್ಟು ಬಲಿಗಳು ಬೇಕು ಕಾಲಕ್ಕೆ ಬ್ಯಾಲೆನ್ಸ್ ಮಾಡಲು.? ಮೂಕಸಾಕ್ಷಿಯಾಗಿರಲು ಇಷ್ಟವಿಲ್ಲದೆ.. ಮೂಕಸಾಕ್ಷಿಯಾಗಿರಬೇಕಾದ ಅನಿವಾರ್ಯತೆಯಲ್ಲಿ.. ಅಸಹಾಯಕತೆಯಲ್ಲಿ....!!
ಉತ್ತರ ಸಿಕ್ಕರೆ ಹೇಳಿ.. ಕಾಯುತ್ತಿರುವೆ.. ಮುಂದೆ ಬಲಿಯಾಗಬಾರದ ಮುಂದಿನ ತಲೆಮಾರಿಗಾಗಿ.

ಸಂಕ್ರಾಂತಿ






ಇದು ಅಂತಿಂತಹ ಹಬ್ಬವಲ್ಲ .. ಈ ಹಬ್ಬಕ್ಕೋಸ್ಕರ ಸೂರ್ಯನೂ ಕಾಯ್ತಿರ್ತಾನೆ ದಿಕ್ಕು ಬದಲಿಸೋಕೆ ಎಂದು ಅಣ್ಣ ಹೇಳ್ತಿದ್ದರೆ ನಮ್ಮ ಕಣ್ಣುಗಳು ಬೆರಗಿನಿಂದ ಮತ್ತೂ ಅಗಲವಾಗುತ್ತಿತ್ತು. ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ ಎಂದು ಓದಿದ್ದ ಕೇಳಿದ್ದ ನಮಗೆ ಅವನು ದಿಕ್ಕು ಬದಲಿಸುವ ವಿಷಯ ಕೇಳಿದಾಗ ಇನ್ನು ಮುಂದೆ ಪರೀಕ್ಷೆಯಲ್ಲಿ ಅವನು ಹುಟ್ಟುವ ದಿಕ್ಕು ಯಾವುದೆಂದು ಬರೆಯುವುದು ಎಂಬ ಗೊಂದಲ ತೋಡಿಕೊಂಡಾಗ ಅಣ್ಣ ಜೋರಾಗಿ ನಕ್ಕು ಹೇಳಿದ್ದರು . ಸೂರ್ಯ ಪೂರ್ವದಲ್ಲೇ ಹುಟ್ಟಿ ಪಶ್ಚಿಮದಲ್ಲೇ ಮುಳುಗುವುದು ವರ್ಷಕ್ಕೆ ಎರಡೇ ದಿನ ಮಾತ್ರ. ಪ್ರತಿದಿನ ಅವನು ಪೂರ್ವದ ಬಲಕ್ಕೆ ಅಥವಾ ಎಡಕ್ಕೆ ಚಲಿಸುತ್ತಲೇ ಇರುತ್ತಾನೆ. ಎಡಕ್ಕೆ ಚಲಿಸುವಾಗ ದಕ್ಷಿಣಾಯಣ .. ಬಲಕ್ಕೆ ಚಲಿಸಿದರೆ ಉತ್ತರಾಯಣ .. ಎಡಕ್ಕೆ ಚಲಿಸಿದಾಗ ಚಳಿ , ಕತ್ತಲು ಹೆಚ್ಚು... ಬಲಕ್ಕೆ ಚಲಿಸಿದಾಗ ಬೆಳಕು.. ಬಿಸಿಲು ಹೆಚ್ಚು. . ಉತ್ತರಾಯಣದ ಮೊದಲ ದಿನ ಮಕರ ಸಂಕ್ರಮಣ .. ದಕ್ಷಿಣಾಯನದ ಮೊದಲ ದಿನ ಕರ್ಕಾಟಕ ಸಂಕ್ರಮಣ .. " ಪರೀಕ್ಷೆಯಲ್ಲಿ ಪೂರ್ವ ಎಂದೇ ಬರೆಯಬೇಕು ಎಂಬ ವಿಷಯವಷ್ಟೇ ನಮಗೆ ಮುಖ್ಯವಾದ್ದರಿಂದ ಮಿಕ್ಕೆ ವಿಷಯಗಳ ಬಗ್ಗೆ ಎಳ್ಳಷ್ಟೂ ಗಮನಿಸದೇ ಅಮ್ಮ ಬೆರೆಸುತ್ತಿದ್ದ ಎಳ್ಳುಬೆಲ್ಲದ ಕಡೆ ಓಡಿದೆವು. ತಿಂಗಳಿಂದ ತಯಾರಿ ಮಾಡಿದ್ದೆಲ್ಲವನ್ನೂ ಅಮ್ಮ ಪುಟ್ಟ ಪುಟ್ಟ ಕಾಗದದ ಪೊಟ್ಟಣಗಳಲ್ಲಿ ತುಂಬುತ್ತಿದ್ದರು. ಜೊತೆಗೆ ಸಕ್ಕರೆ ಅಚ್ಚು. ನಾವು ಓಡಿಹೋದಾಗ ಅಮ್ಮನಿಗೆ ಆತಂಕ ಅಷ್ಟೂ ದಿನಗಳ ಶ್ರಮ ಮಣ್ಣುಪಾಲಾದರೆ ಎಂದು .."ನಾಳೆ ನೈವೇದ್ಯ ಆದ ಮೇಲೆ ನಿಮಗೆ. ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡಬೇಕಲ್ಲವಾ" ಎಂದು ಹೇಳಿ ದೂರ ಕಳಿಸುತ್ತಿದ್ದರು. ಅದನ್ನು ತಿನ್ನದಿದ್ದರೆ ನಾವು ಒಳ್ಳೆಯ ಮಾತೆ ಆಡುವುದಿಲ್ಲವೇನೋ ಎಂಬ ಹೆದರಿಕೆಯಲ್ಲಿ .. ಎಳ್ಳು ತಿನ್ನುವ ಸಂಭ್ರಮದಲ್ಲಿ ಸಂಕ್ರಾಂತಿಯ ಬೆಳಗಿಗೆ ಕಾಯುತ್ತಿದ್ದೆವು.

ಹೌದು ..ಈ ಹಬ್ಬವೇ ಹಾಗೆ. ಎಲ್ಲ ಹಬ್ಬಗಳ ಹಾಗಲ್ಲ .. ಮಿಕ್ಕ ಹಬ್ಬಗಳಿಗೆರಡು ದಿನದ ತಯಾರಿ ಸಾಕೇಸಾಕು. ಸಂಕ್ರಾಂತಿಗೆ ಬರೋಬ್ಬರಿ ಹದಿನೈದು ದಿನಗಳೇ ಬೇಕು. ಅಣ್ಣ ಅಂಗಡಿಯಿಂದ ಬಿಳಿ ಅಚ್ಚುಬೆಲ್ಲವೇ ಬೇಕು ಎಂದು ಆರಿಸಿ ತರುತ್ತಿದ್ದನ್ನು ಅಮ್ಮ ಸಣ್ಣಸಣ್ಣ ಚೌಕಾಕೃತಿಯ ತುಂಡುಗಳಾಗಿ ಕತ್ತರಿಸುತ್ತಿದ್ದರು. ಕೊಬ್ಬರಿಯ ಕಪ್ಪುಸಿಪ್ಪೆ ಕೆತ್ತಿ ಒಗೆದು ಬೆಲ್ಲದ ಚೂರುಗಳ ಗಾತ್ರದಷ್ಟೇ ಸಣ್ಣಗೆ ಹೆಚ್ಚಿಟ್ಟ ಮೇಲೆ ಹುರಿಗಡಲೆಯನ್ನು ಆರಿಸುವ ಸಂಭ್ರಮ.. ನೆಲಗಡಲೆಯನ್ನು ಕಪ್ಪಾಗದಂತೆ ಮರಳಿನ ಜೊತೆ ಹುರಿದು ಸಿಪ್ಪೆ ತೆಗೆದು ಮೊರದಲ್ಲಿ ಕೇರಿ ಚೊಕ್ಕಮಾಡಿ .. ಕಪ್ಪು ಎಳ್ಳು ನೆನೆಸಿಟ್ಟು ಉಜ್ಜಿ ಸಿಪ್ಪೆ ತೆಗೆದು ನೆರಳಿನಲ್ಲಿ ಒಣಗಿಸಿ .. ಅವೆಲ್ಲವನ್ನೂ ಬೆರೆಸಿಟ್ಟು ಬೇಕಿದ್ದರೆ ಬಣ್ಣದ ಸಕ್ಕರೆ ಕಾಳುಗಳನ್ನೂ ಸೇರಿಸಿದರೆ ಅಲ್ಲಿಗೆ ಕೆಲಸ ಮುಗಿದುಬಿಡುವುದಿಲ್ಲ . ಸಕ್ಕರೆ ಅಚ್ಚು ಮಾಡುವ ಧಾವಂತ .. ಹದಿನೈದು ದಿನಗಳು ಹೇಗೆ ಹಾರಿಹೋಗುತ್ತಿದ್ದವೋ ..ಇಷ್ಟೆಲ್ಲಾ ಕಾಳಜಿ ವಹಿಸಿ ಮಾಡಿದ ಎಳ್ಳುಬೆಲ್ಲವನ್ನು ಎಲ್ಲರ ಮನೆಗೆ ಹಂಚಿದಾಗ ಆಡುವ  ಮಾಮೂಲಿಯ ಮಾತು "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ". 
ಈ ಹಬ್ಬಕ್ಕೆ ತಯಾರಿ ನಡೆಸುವಾಗ ಹಳೆಯ ಎಲ್ಲ ಸಡಗರ ನೆನಪಾಗಿ ಮನಸ್ಸಿಗೆ ಪಿಚ್ಚೆನ್ನಿಸಿತು..ಅಂಗಡಿಯಲ್ಲಿ ಎಳ್ಳು ಬೆಲ್ಲ ಸಿದ್ಧ ರೂಪದಲ್ಲಿ ಸಿಕ್ಕುತ್ತಿದೆ. ತಯಾರಿ ಎಂದರೆ ಅಂಗಡಿಗೆ ಹೋಗಿ ಕೊಳ್ಳಲು ಅರ್ಧ ದಿನ ಬಿಡುವು ಮಾಡಿಕೊಳ್ಳುವುದು ಮಾತ್ರ. . ತಂದಿದ್ದನ್ನು ಹಂಚುವಾಗ ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡಿ ಎನ್ನುವಾಗ ನನ್ನ ದನಿಯಲ್ಲೇ ಕೃತಕತೆ ಇದೆಯೇನೋ ಎನ್ನಿಸಿ ಸುಮ್ಮನೆ ಅವರ ಕೈಗೊಪ್ಪಿಸಿ ಬಂದುಬಿಡುತ್ತೇನೆ. 
ಒಳ್ಳೆಯ ಮಾತಾಡಿ ಎಂದು ಯಾರಲ್ಲಿ ಹೇಳುವುದು ? ಎಲ್ಲಿ ಮಾತನಾಡಬೇಕು ಒಳ್ಳೆಯ ಮಾತುಗಳನ್ನು? ಜಡಗಟ್ಟಿದ ನಾಲಿಗೆಗೆ ಎಳ್ಳಿನ ಬೆಲ್ಲದ ಸಿಹಿಯಾದ ಬೆಚ್ಚಗಿನ ಸ್ಪರ್ಶ ಸಿಕ್ಕು ಎದುರಿರುವವರೊಡನೆ ಒಳ್ಳೆಯ ಮಾತಾಡುವಿಕೆಗೆ ನಾಂದಿಯಾಗುತ್ತದೆ ಎಂಬ ಆಶಯ ನಂಬಿಕೆ .. ಒಳ್ಳೆಯ ಮಾತುಗಳು ನಮ್ಮ ಬಾಯಿಂದಷ್ಟೇ ಹೊಮ್ಮಬೇಕೆ? ಅಷ್ಟಕ್ಕೇ ಸೀಮಿತವಾಗಿದೆಯಾ ಮಾತುಗಳೆಂಬ ಮಾತುಗಳು? ಇಷ್ಟಕ್ಕೂ ನಾವು ಎದುರಿರುವವರ ಜೊತೆಗೆಷ್ಟು ಮಾತನಾಡುತ್ತೇವೆ? ಈಗ ಹತ್ತಿರದ ಸಂಬಂಧಗಳನ್ನೂ ಸಾಮಾಜಿಕ ಜಾಲತಾಣಗಳಲ್ಲೇ ಭೇಟಿಯಾಗುವ ಅಲ್ಲೇ ಮಾತನಾಡಿ ಮುಗಿಸುವ ಎದುರು ಸಿಕ್ಕಾಗ ಮೊಬೈಲಿನಲ್ಲಿಯೇ ಮಗ್ನರಾಗಿ ಮಾತು ಮರೆತಂತಾಡುವ ನಾವು ಒಳ್ಳೆಯ ಮಾತಾಡುವುದು ಹೇಗೆ? 
ಮಾತು.. ಮಾತು..ಮಾತು.. ಎಲ್ಲಿ ನೋಡಿದರೂ ಬರೀ ಮಾತು.. ಇಲ್ಲಿ "ನೋಡಿದರೂ" ಎಂಬ ಪದವನ್ನು ಉದ್ದೇಶಪೂರ್ವಕವಾಗಿಯೇ ಬಳಸುತ್ತಿದ್ದೇನೆ.. ಮಾತುಗಳನ್ನು ಜಾಲತಾಣಗಳಲ್ಲಿ ನೋಡುವ ಕಾಲ ಇದು .. ಎಲ್ಲರಿಗೂ ಎಲ್ಲವನ್ನೂ ಚರ್ಚಿಸುವ ಹಂಬಲ .. ಎಲ್ಲದರ ಬಗ್ಗೆಯೂ ಮಾತನಾಡುವ ಹಪಾಹಪಿ. ಇಷ್ಟವಿರಲಿ ಇಲ್ಲದಿರಲಿ ಅವರೆಲ್ಲರ ಅಭಿಪ್ರಾಯ ನೀವು ಓದಬೇಕು.. ಅದಕ್ಕೆ ಪ್ರತಿಕ್ರಿಯಿಸಬೇಕು . ಇಲ್ಲವಾದರೆ ನಿಮಗೆ ಸಾಮಾಜಿಕ ಬದ್ಧತೆಯಿಲ್ಲ ಎಂಬ ಹಣೆಪಟ್ಟಿ ಸಿದ್ಧವಾಗಿರುತ್ತದೆ. ನಿಮ್ಮ ನಿಲುವನ್ನು ವ್ಯಕ್ತಪಡಿಸಿ ಎನ್ನುತ್ತಾರೆ. ಯಾರಿಗೂ ಯಾರಿಗೆ ನೋವಾಗುತ್ತದೆಯಾ ಎಂಬ ಯೋಚನೆಯಿಲ್ಲ. ತಾನು ನೇರ ನಿಷ್ಠುರ ಎಂದು ಹೇಳಿಕೊಳ್ಳುವುದು ಹೆಚ್ಚುಗಾರಿಕೆಯಾಗಿದೆ.ಯಾರಿಗಾದರೂ ಅದರಿಂದ ನೋವಾದರೆ ತಾನು ಅಸಹಾಯಕ/ಕಿ ಎಂಬ ಉಡಾಫೆ. ಎಡ ಬಲ ಪಂಥಾಹ್ವಾನ ..ಇರುವ ಎಲ್ಲರನ್ನೂ ಯಾವುದಾದರೊಂದು ಕಡೆ ಗುರುತಿಸುವ ಅಥವಾ ಅವರನ್ನು ತಮ್ಮ ಗುಂಪಿಗೆ ಎಳೆದುಕೊಳ್ಳುವ ಧಾವಂತ .. ತಾನು ಯಾರಿಗೂ ಸೇರದವ ಎಂದರೆ ಮುಲಾಜಿಲ್ಲದೆ ಆಷಾಡಭೂತಿ.. ಸೋಗಲಾಡಿ ..ಸಮಯಸಾಧಕನೆಂಬ ಪಟ್ಟ. ಎಲ್ಲರಿಗೂ ಅವರವರದೇ ಮಾತು ಅಂತಿಮ ಎಂಬ ಹುಂಬತನ.. ಯಾರಲ್ಲಿ ಹೇಳುವುದು ? ಎಷ್ಟು ಜನಕ್ಕೆ ಹಂಚುವುದು ಎಳ್ಳುಬೆಲ್ಲ ? ಒಳ್ಳೆಯ ಮಾತಾಡಲು !!!...ಇಷ್ಟಕ್ಕೂ ಒಳ್ಳೆಯ ಮಾತೆಂದರೆ ಏನು? ಎದುರಿರುವವರ ಮೆಚ್ಚಿಸಲು ಆತ್ಮಸಾಕ್ಷಿಗೆ ವಿರುದ್ಧವಾಗಿ ಸುಮ್ಮನೆ ಗಿಲೀಟು ಮಾತನಾಡುವುದಾ? ಅಥವಾ ಸುಖಾಸುಮ್ಮನೆ ಹೊಗಳಿ ಅಟ್ಟಕ್ಕೇರಿಸುವುದಾ? ಒಳ್ಳೆಯ ಮಾತನಾಡಬೇಕು ಎಂಬ ಭ್ರಮೆಯಲ್ಲಿ ಎಲ್ಲರಿಗೂ ಒಳ್ಳೆಯವನಾಗಲು ಹೊರಟು ಕೃತಕವಾಗಿ ಬದುಕುವುದಾ ? ಒಳ್ಳೆಯ ಮಾತು ಎಂದರೆ ಏನು?
ಟ್ವಿಟ್ಟರ್ ವಾರ್ ಕಾಲ ಇದು .. ಯಾರೋ ನಟ ಮತ್ಯಾರೋ ನಟನ ಬಗ್ಗೆ ಮಾತನಾಡುತ್ತಾನೆ.. ಅತ್ತ ಕಡೆಯ ಪ್ರತಿಕ್ರಿಯೆ ಇನ್ನೂ ಉಗ್ರವಾಗಿರುತ್ತದೆ. ರಾಂಗೋಪಾಲ್ ವರ್ಮನಂತಹ ಸೆನ್ಸಿಬಲ್ ನಿರ್ದೇಶಕ ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಟ್ವೀಟ್ ಮಾಡುತ್ತಾರೆ. ಟ್ವಿಟ್ಟರ್ಗಳಲ್ಲಿ , ತರೂರರ ಟ್ವೀಟ್ ಎಷ್ಟೋ ಬಾರಿ ಹಾಸ್ಯಾಸ್ಪದವಾಗಿದೆ.. ರಾಜಕೀಯ ಧುರೀಣರಂತೂ ಸಾಮಾಜಿಕ ಜಾಲತಾಣಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದಾರೆ.. ಟ್ವಿಟ್ಟರ್  ಫೇಸ್ ಬುಕ್ಕಿನಂತಹಾ ಜಾಲತಾಣಗಳಲ್ಲಿ  ಎಲ್ಲರೂ ತಂತಮ್ಮ ವಕೀಲರಂತೆ ವರ್ತಿಸುತ್ತಾ ತಾವೇ ನ್ಯಾಯಾಧೀಶರುಗಳೂ ಆಗಿಬಿಡುತ್ತಾರೆ.. ಸತ್ಯಕ್ಕೆ ಮತ್ತೊಂದು ಮಗ್ಗುಲು ಇರಬಹುದಾ ಯೋಚಿಸಲೂ ಹೋಗುವುದಿಲ್ಲ. ತಮ್ಮ ಮಾತು ಸರಿ ಎಂದು ಜನರನ್ನು ಒಪ್ಪಿಸುವ ಹಪಾಹಪಿಯೇ ಹೊರತು ಸರಿಯಾದ್ದನ್ನು ಗುರುತಿಸುವ ಒಪ್ಪಿಕೊಳ್ಳುವ ಮನಸ್ಥಿತಿ ಯಾರಲ್ಲೂ ಇಲ್ಲ.  ಅಮೆರಿಕಾದ ಟ್ರಂಪ್  ಉತ್ತರ ಕೊರಿಯಾದ ಕಿಮ್ ಇಬ್ಬರೂ ಸಣ್ಣ ಮಕ್ಕಳಿಗಿಂತಲೂ ಕಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೊಡೆದಾಡಿಕೊಂಡಿದ್ದು .. ಸೈದ್ಧಾಂತಿಕ ರಾಜಕಾರಣದಿಂದ ವೈಯಕ್ತಿಕ ಮಟ್ಟದ ಕೀಳು ಅಭಿರುಚಿಯ ಟೀಕೆಗಳನ್ನು ಬೇಕಾಬಿಟ್ಟಿ ಒಗೆದದ್ದು ಈ ಶತಮಾನದ ಕೆಟ್ಟ ತಮಾಷೆಗಳಲ್ಲೊಂದು . ಮುದುಕನೆಂಬ ಟೀಕೆ ಅದಕ್ಕೆ ಕುಳ್ಳ ಡುಮ್ಮಎಂಬ ಪ್ರತಿಕ್ರಿಯೆ ಇದೆಂತಹ ಲಜ್ಜೆಗೇಡಿತನ ಎಂದು ಹುಬ್ಬೇರಿಸುವಂತಾಯಿತು. ಒಳ್ಳೆಯ ಮಾತೆಂದರೆ ಏನು? 
ಎಲ್ಲರಿಗೂ ಮಾತನಾಡುವ ಚಪಲ.. ತಕ್ಷಣಕ್ಕೆ ತನ್ನದೊಂದು ಪ್ರತಿಕ್ರಿಯೆ ದಾಖಲಿಸುವ ಹಂಬಲ .. ಯಾರನ್ನೋ ಬಂಧಿಸಿಬಿಟ್ಟರೆ ಅವನು ಅಪರಾಧಿ/ ನಿರಪರಾಧಿ ಎಂದು ತಾವೇ ತೀರ್ಮಾನಿಸಿಬಿಡುವ ಹುಂಬತನ.. ಕಾಯುವ ತಾಳ್ಮೆ ಸತ್ತುಹೋಗಿದೆ.. ತಕ್ಷಣದ ಆವೇಶದಲ್ಲಿ ಏನೋ ಬರೆದು ಒಗೆದು ಸ್ವಲ್ಪ ಹೊತ್ತಿನ ಮೇಲೆ ತಪ್ಪಿನ ಅರಿವಾಗಿ ಅದನ್ನು ಡಿಲೀಟ್ ಮಾಡಿಬಿಟ್ಟರೆ ಮುಗಿದುಹೋಗುವುದಿಲ್ಲ. ಅಷ್ಟರಲ್ಲೇ ಸ್ಕ್ರೀನ್ಶಾಟ್ ವೀರರು ವಿಜೃಂಭಿಸಿರುತ್ತಾರೆ. ಇವರ ಅವಿವೇಕದ ಮಾತುಗಳು ಸ್ಕ್ರೀನ್ ಶಾಟ್ ರೂಪದಲ್ಲಿ ಎಲ್ಲಡೆ ಹರಿದಾಡುತ್ತಾ ಮಾನ ಹರಾಜಿಗಿಡುತ್ತಿರುತ್ತವೆ. ತನ್ನ ಮಾತಿನಿಂದ ಹಿಂತೆಗೆದು ಕೊಳ್ಳುವ ಪ್ರಶ್ನೆಯೇ ಇಲ್ಲ. 
ಏಕೆ ಯೋಚಿಸುವುದಿಲ್ಲ? ಪ್ರತಿಕ್ರಿಯೆ ಹಾಕುವಾಗ ... ಮಾತನಾಡುವಾಗ ಮುಂದಿನ ಪರಿಣಾಮದ ಬಗ್ಗೆ .. ಅದು ತನ್ನ ವ್ಯಕ್ತಿತ್ವವನ್ನೇ ಹೇಳುತ್ತಿರುತ್ತದೆ ಎಂಬ ಬಗ್ಗೆ ಏಕೆ ಗಮನ ಹರಿಸುವುದಿಲ್ಲ ? ಮಾತು ಆಡಿದರೆ ಹೋಯಿತು ಎಂಬ ಮಾತು ಇಂದು ಎಂದಿಗಿಂತಲೂ ಪ್ರಸ್ತುತವಾಗಿದೆ.ಮಾತು ಆಡಿದ ಮೇಲೆ ಎಲ್ಲಿಗೂ ಹೋಗುವುದಿಲ್ಲ.. ಅದು ನಮ್ಮನ್ನೇ ಸುತ್ತುತ್ತಿರುತ್ತದೆ..ನಮ್ಮ ಬಲಿ ಬೇಡುತ್ತಿರುತ್ತದೆ.
ಒಳ್ಳೆಯ ಮಾತೆಂದರೆ ಓಲೈಸುವುದಲ್ಲ .. ಸೈದ್ಧಾಂತಿಕವಾಗಿ ಕರ್ಮಠರಂತೆ ವರ್ತಿಸುತ್ತಾ ತಮ್ಮ ಸಿದ್ಧಾಂತಗಳನ್ನು ಒಪ್ಪಿಕೊಳ್ಳದಿದ್ದರೆ ಅಂತಹವರ ಜನ್ಮವೇ ಕೀಳು ಎಂಬಂತೆ ದೂರುವುದಲ್ಲ. ಅವರವರ ಸಿದ್ಧಾಂತಗಳ ಗುಣಗಳ ಬಗ್ಗೆ ಹೇಳುವುದಕ್ಕಿಂತ ಮತ್ತೊಬ್ಬರ ಸಿದ್ಧಾಂತದ ಅವಗುಣಗಳ ಪಟ್ಟಿ ತಯಾರಿಸುವುದಲ್ಲ.ಇಂದು ಅಗತ್ಯವಿರುವುದು ಮುಕ್ತ ಮನಸ್ಥಿತಿ.. ತನ್ನ ನಿಲುವಿನಷ್ಟೇ ಮತ್ತೊಬ್ಬನ ನಿಲುವನ್ನು ಗೌರವಿಸುವ ಮನಸ್ಥಿತಿ .. ತನ್ನ ಸತ್ಯವನ್ನೂ ಮೀರಿ ಮತ್ತೊಂದೇನೋ ಇರಬಹುದೆಂದು ಒಪ್ಪಿಕೊಳ್ಳುವ ಮನಸ್ಥಿತಿ.. ತನ್ನ ನಿಲುವು ಇದು ಎಂದು ಮತ್ತೊಬ್ಬನಿಗೆ ನೋವಾಗದಂತೆ ಹೇಳುವ ಮನಸ್ಥಿತಿ.. 
ಜೊತೆ ಜೊತೆಗೆ ತನ್ನ ಕಾರ್ಯಕ್ಷೇತ್ರ .. ತನ್ನ ಅರಿವಿನ ಕ್ಷೇತ್ರ ಯಾವುದೆಂದು ಸ್ಪಷ್ಟವಾಗಿ ಗುರುತಿಸುವ.. ಅಗತ್ಯವಿದ್ದ ಜಾಗದಲ್ಲಷ್ಟೇ ಮಾತನಾಡುವ .. ಅಗತ್ಯವಿಲ್ಲದ ಜಾಗದಲ್ಲಿ ಮೌನವಾಗಿರುವುದು ಕೂಡಾ ಬಹಳ ಒಳ್ಳೆಯ ಮಾತೇ ಎಂಬ ತಿಳುವಳಿಕೆ ಇಂದು ಹಿಂದೆಂದಿಗಿಂತಲೂ ಅವಶ್ಯವಾಗಿದೆ.  
 
ಇದು ಸುಗ್ಗಿಯ ಹಬ್ಬ .. ಬೆಳೆದ ಬೆಳೆಗಳೆಲ್ಲ ಕೈಗೆ ಬಂದ ಸಂಭ್ರಮದ ಹಬ್ಬ.ಸುಗ್ಗಿಯ ಸಡಗರ .. ಬೆಳೆದದ್ದೆಲ್ಲವನ್ನೂ ಹಂಚಿತಿನ್ನುವ ಸಡಗರ.. ಪ್ರಕೃತಿ ನೀಡಿದ ಕೊಡುಗೆಯನ್ನು ಹಬ್ಬವಾಗಿಸುವ ಸಡಗರ.. ಕಬ್ಬಿನ ಜಲ್ಲೆ.. ಹಣ್ಣು.. ಪಕ್ಕದ ತಮಿಳುನಾಡಲ್ಲಿ ಪೊಂಗಲಿನ ರೂಪದಲ್ಲಿ ಸಮೃದ್ಧಿಯ ಹಬ್ಬ.. ಒಳ್ಳೆಯದೆಲ್ಲವನ್ನೂ ಹಂಚುವ ಸಂಭ್ರಮ ..ಏನೆಲ್ಲಾ ಹಂಚಿಕೊಳ್ಳುವುದರ ಜೊತೆಗೆ ಒಳ್ಳೆಯ ಮಾತುಗಳನ್ನೂ ಹಂಚೋಣ.. ಒಳ್ಳೆಯ ಮಾತುಗಳನ್ನಾಡುವ ಮನಸ್ಥಿತಿ ಬೆಳೆಸಿಕೊಳ್ಳೋಣ.. ಎಳ್ಳು ಬೆಲ್ಲದ ಸವಿ ಒಳ್ಳೆಯ ಮಾತುಗಳನ್ನಾಡಿಸಲಿ... ಬದುಕು ಹಬ್ಬವಾಗಲಿ.. 

Friday, 6 October 2017

ಕಾಡುವ ನೆನಪುಗಳು (ನವರಾತ್ರಿ )





ಈ ಹಬ್ಬ ಬಂತೆಂದರೆ ಎಷ್ಟು ಸಿಹಿ ಸಿಹಿ ನೆನಪುಗಳು. ಹಬ್ಬವೋ.. ದುರ್ಗಾಮಾತೆಯ ಅವತಾರಕ್ಕೆ ಕಾರಣವಾದ ಕಥೆಗಳೋ.. ಅದು ನಮ್ಮ ಮೈಸೂರಿನ ನಾಡಹಬ್ಬವೆಂಬ ಹಿರಿಮೆಯೋ ನಮಗೆ ಗೊತ್ತಿರಲಿಲ್ಲ.. ತಿಳಿದುಕೊಳ್ಳುವ ಹಂಬಲವೂ ಇರುತ್ತಿರಲಿಲ್ಲ. ಸಂಜೆಯಾಯಿತೆಂದರೆ ನೀಟಾಗಿ ತಲೆ ಬಾಚಿ ಜಡೆ ಹೆಣೆಸಿಕೊಂಡು ಇದ್ದುದರಲ್ಲೇ ಒಳ್ಳೆ ಬಟ್ಟೆ ಹಾಕಿಕೊಂಡು ಒಂದು ಪುಟ್ಟ ಜೇಬಿನ ಗಾತ್ರದ ಬಟ್ಟೆಯ ಚೀಲವನ್ನು ಹಿಡಿದು ಅಕ್ಕಪಕ್ಕದ ಮನೆಗೆಲ್ಲಾ ಓಡುತ್ತಿದ್ದೆವು.. ಪ್ರತಿಮನೆಯಲ್ಲೂ ಏನಾದರೊಂದು ತಿಂಡಿ.. ಗೊಂಬೆ ಬಾಗಿನ. ಎಲ್ಲವನ್ನೂ ತುಂಬಿಕೊಂಡು ಎಲ್ಲರೂ ಒಟ್ಟಿಗೆ ಕೂತು ಬೇಗಬೇಗ ತಿಂದಂತೆ ನಾಟಕವಾಡಿ ಒಂದಿಷ್ಟು ತಿಂಡಿಯನ್ನು ಮುಚ್ಚಿಟ್ಟು ಕಡೆಗೆ ಎಲ್ಲರದೂ ಮುಗಿದ ಮೇಲೆ ನಾವು ನಮ್ಮ ಬತ್ತಳಿಕೆಯಿಂದ ಒಂದೊಂದೇ ತಿಂಡಿಯನ್ನು ತೆಗೆದು ಅವರೆಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದುದು ಹಚ್ಚ ಹಸಿರು. ಅದರಲ್ಲೂ ಒಂದು ಮನೆ.. ಆ ಮನೆಯ ತಿಂಡಿಗಳು .. ಕುಮಾರಿಪೂಜೆಗೆ ನಾವೆಲ್ಲರೂ ಖಾಯಂ ಕುಮಾರೀಶಕ್ತಿಗಳು.


ಪ್ರತಿ ನವರಾತ್ರಿಯಲ್ಲೂ ನೆನಪಾಗುತ್ತಲೇ ಇರುತ್ತದೆ. ಅದು ದೊಡ್ಡ ಮನೆ.. ದೊಡ್ಡವರ ಮನೆ.. ತುಂಬು ಸಂಪ್ರದಾಯಸ್ಥ ಕುಟುಂಬ. ಮನೆ ತುಂಬಾ ಮಕ್ಕಳು .. ಆರು ಹೆಣ್ಣು ನಾಲ್ಕು ಗಂಡು .. ಯಜಮಾನ ಜಗಲಿಗೆ.. ಮಡದಿ ಮನೆಯೊಳಗೇ .. ಹೊಸಿಲ ದಾಟುವುದೆಂದರೆ ಅಂಗಳದ ರಂಗೋಲಿ ಆರಳಿಸುವಷ್ಟಕ್ಕೆ ಮಾತ್ರ..  ಸೊಂಪು ದಾಸವಾಳ.., ಹಬ್ಬಿಸಿದ ಮಲ್ಲಿಗೆ ಚಪ್ಪರ.. ಕರಿಬೇವು, ನಿಂಬೆಯ ಸಮೃದ್ಧ ಫಸಲು ಹಿತ್ತಲಿನಲ್ಲಿ ನಕ್ಕು ಅವಳು ಅಲ್ಲಿ ಕಳೆಯುವ ಹೊತ್ತಿನ ಬಗ್ಗೆ.., ಅವಳ ಶ್ರದ್ಧೆಯ ಬಗ್ಗೆ ಹೇಳುತ್ತಿದ್ದಂತೆ.. ಅದೂ ನವರಾತ್ರಿ ಮನೆ .. ಅಷ್ಟೂ ದಿನಗಳ ಕಾಲ ಅಲ್ಲೊಂದು ದೇಗುಲ ನಿರ್ಮಿಸಿದಂತೆ ಭಾಸವಾಗುತ್ತಿತ್ತು.. ಪ್ರತಿ ನಿತ್ಯ ರಾತ್ರಿ ಪೂಜೆ, ಚಂಡಿಕಾ ಪಾರಾಯಣ.. ದೇವಿ ಸ್ತೋತ್ರ .. ಮಂಗಳಾರತಿಗೆ ಹತ್ತು ಹಲವು ಬಗೆಯ ಆರತಿಗಳು..ಸುವಾಸಿನಿ ಪೂಜೆ, ಕುಮಾರಿ ಪೂಜೆ.. ದಿನಕ್ಕೊಂದು ತಿಂಡಿ .. ಸಮೃದ್ಧಿ.. 


ಆ ಮನೆಯ ಹೆಣ್ಣುಮಗಳು ಅವರು. ಇಂತಹುದೇ ಒಂದು ದೊಡ್ಡ ಮನೆಗೆ ಗೃಹಿಣಿಯಾಗಿ ಸೇರಕ್ಕಿ ಒದ್ದಮೇಲೆ ಇತ್ತಕಡೆ ಬಂದದ್ದೂ ಅಪರೂಪವೇ. ಗೌರಿ, ಯುಗಾದಿ , ದೀಪಾವಳಿ ಇಂತಹ ಯಾವುದೇ ಹಬ್ಬಕ್ಕೂ ಬಾರದವರು ನವರಾತ್ರಿಗೆ ಮಾತ್ರ ತಪ್ಪಿಸಿದವರೇ ಅಲ್ಲ. ಪ್ರತಿ ನವರಾತ್ರಿಗೂ ಹತ್ತು ದಿನಗಳೂ ಹಾಜರಿ. ಹಾಗಿದ್ದೆ ಒಂದು ನವರಾತ್ರಿ. ಅಲ್ಲಿ ಆ ಹೆಣ್ಣುಮಗಳು ಮತ್ತೊಬ್ಬಾಕೆ ಮಾತನಾಡುತ್ತಿದ್ದುದು ಅಯಾಚಿತವಾಗಿ ಕುಮಾರಿಪೂಜೆಗೆ ಸಿದ್ಧಳಾಗಿ ಕುಳಿತಿದ್ದ ನನ್ನ ಕಿವಿಗೆ ಬಿತ್ತು. ಆಕೆ ಈ ಹೆಣ್ಣುಮಗಳನ್ನು ಗೌರಿ ಹಬ್ಬಕ್ಕೆ ಏಕೆ ಬರಲಿಲ್ಲವೆಂದು ಪ್ರಶ್ನಿಸುತ್ತಿದ್ದರು. ಇವರು ಆ ಪ್ರಶ್ನೆ ಕಿವಿಗೆ ಬೀಳಲಿಲ್ಲವೆಂಬಂತೆ ಮೌನವಾಗಿಬಿಟ್ಟರು. ತುಸು ಹೊತ್ತಿನ ಬಳಿಕ ಕುಮಾರಿ ಪೂಜೆ ಮುಗಿದು ಆ ಮನೆಯ ಯಜಮಾನ ಸಾಷ್ಟಾಂಗ ನಮಸ್ಕಾರ ಮಾಡಿದಾಗ ಈ ಹೆಣ್ಣು ಮಗಳು ಪಕ್ಕದವರನ್ನು ಕೈ ತಟ್ಟಿ ಕರೆದು ಈ ದೃಶ್ಯವನ್ನು ತೋರಿಸಿ ಅವರೊಬ್ಬರಿಗೆ ಮಾತ್ರ ಕೇಳಿಸುವಷ್ಟು ಮೆಲುದನಿಯಲ್ಲಿ ಹೇಳಿದರು. "ಇದನ್ನು ನೋಡಲೆಂದೇ ನಾನು ಇಲ್ಲಿಗೆ ಪ್ರತಿವರ್ಷ ಬರುವುದು. ಯಾವ ಹೆಣ್ಣು ಜನ್ಮವನ್ನುಹುಟ್ಟಿನಿಂದ ಕೀಳು ಅನ್ನಿಸಿಕೊಂಡು ಬಂದೆವೋ .. ಯಾವ ತಪ್ಪಿಗಾಗಿ ಹೊಸಿಲು ದಾಟದೆ ಒಳಗೊಳಗೇ ನವೆದೆವೋ ಆ ಹೆಣ್ಣು ಜನ್ಮಕ್ಕೆ ಈ ಗಂಡುಗಳು ಈ ಹತ್ತು ದಿನಗಳು ತಲೆ ಬಾಗೋದನ್ನು ನೋಡಲಿಕ್ಕೆ ಬರ್ತೀನಷ್ಟೇ. " ಪಕ್ಕದಲ್ಲಿದ್ದಾಕೆ ಇವರನ್ನು ಹುಚ್ಚರಂತೆ ನೋಡಿ ಸುಮ್ಮನಾದರೇನೋ. ಅಂದು ಅವರು ಹೇಳಿದ ಮಾತುಗಳು ನಂತರದ ದಿನಗಳಲ್ಲಿ ಅರ್ಥವಾದದ್ದು. ಗೌರಿ ಪೂಜೆ, ಲಕ್ಷ್ಮಿ ಪೂಜೆ ಮಾಡುವವರು ಹೆಣ್ಣುಗಳೇ.. ನವರಾತ್ರಿಯ ಪೂಜೆ ಮಾತ್ರ ಅಲ್ಲಿ ಗಂಡಸರೇ ಮಾಡುತ್ತಿದ್ದುದು. ಅವರು ಸ್ತ್ರೀ ಶಕ್ತಿಗೆ ತಲೆ ಬಾಗುವುದನ್ನು ನೋಡಲು ಆಕೆ ಬರುತ್ತಿದ್ದರಾ? ಅಥವಾ ತನ್ನನ್ನು ನೋಯಿಸಿದವರು ತನ್ನಂತಹ ಹೆಣ್ಣಿಗೆ ( ಆಕೆ ದೇವತೆಯೇ ಆಗಿರಲಿ) ದೋರ್ಧಂಡ ನಮಸ್ಕಾರ ಹಾಕಿ ಪಾಹಿಮಾಂ ಎಂದು ಶರಣಾಗುವುದನ್ನು ಕಂಡು ಸಾಂತ್ವಾನ ಕಂಡುಕೊಳ್ಳುತ್ತಿದ್ದಾರಾ?


ಯಾರು ಮಾಡಿದವರು ಈ ಹಬ್ಬಗಳನ್ನು ? ಒಂದೊಂದೂ ಒಂದೊಂದು ರೀತಿ . ಮಹಿಷಾಸುರನಂತಹ ದೈತ್ಯನನ್ನು ಕೊಲ್ಲಲು ಹೆಣ್ಣೇ ಬೇಕಾಯಿತು. ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿ ಎಂದು ಹೆಣ್ಣನ್ನೇ ಏಕೆ ಸೃಷ್ಟಿ ಮಾಡಿದರು? ಸಪ್ತ ಮಾತೃಕೆಯರೇ ಏಕೆ ಬೇಕಾಯಿತು? ಜಗತ್ತಿಗೆ ಅವಳೂ ಎಷ್ಟು ಮುಖ್ಯವೆಂದು ತೋರಿಸುವುದಕ್ಕಾ? ಹೆಣ್ಣೆಂದರೆ ಕೀಳು ಎಂಬ ಭಾವನೆ ಬೆಳೆಯಬಾರದು ಎಂಬುದಕ್ಕಾ? ಅವರಿಬ್ಬರೂ ಪರಸ್ಪರ ಪೂರಕ ಎಂದು ತೋರಿಸಲಿಕ್ಕಾ ? ಇದನ್ನರಿಯದೆ ಮನೆಮನೆಯ ದುರ್ಗಿಯರನ್ನು ಕಡೆಗಣಿಸಿ ದುರ್ಗಾನಮಸ್ಕಾರ ಸಲ್ಲದೆಂದು ಕುಮಾರಿಪೂಜೆಯಂತಹ ಆಚರಣೆಗಳು ಬಂದವಾ? ಮಿಕ್ಕೆಲ್ಲವನ್ನೂ ಬದಿಗಿಟ್ಟು ಹೀಗೆಲ್ಲ ನೋಡಿದಾಗ ಈ ನವರಾತ್ರಿ ಹೆಣ್ಣುಜೀವಕ್ಕೆ ಅರ್ಥ ತಂದುಕೊಟ್ಟ , ಅವಳ ಸ್ಥಾನ ಎಲ್ಲೆಂದು ಗುರುತಿಸಿದ ಹಬ್ಬವೆನಿಸುವುದಿಲ್ಲವಾ ? ಯಾರು ಮಾಡಿದರು ಈ ಹಬ್ಬಗಳನ್ನು ಇಷ್ಟು ಅರ್ಥಪೂರ್ಣವಾಗಿ.. ಅವರಿಗೆ ಶರಣು.. ಶರಣು..