Sunday, 5 March 2017

ಉತ್ತರಾಯಣ - ನನ್ನ ಓದು

 ನನಗಿನ್ನೂ ಚೆನ್ನಾಗಿ ನೆನಪಿದೆ ನಾನೀ ಪುಸ್ತಕ ಮೊದಲು ಓದಿದ್ದು ಗೆಂಟಿಂಗ್ ಹೈಲ್ಯಾಂಡ್ಸ್ ನಲ್ಲಿ. ಆಗಷ್ಟೇ ಬಿಡುಗಡೆಯಾಗಿದ್ದ ಪುಸ್ತಕವನ್ನು ಸಮಯವಿದ್ದರೆ ಓದುವ ದುರಾಸೆಯಿಂದ ಪ್ರವಾಸಕ್ಕೂ ಹೊತ್ತುಕೊಂಡು ಹೋಗಿದ್ದೆ. ಸಂಜೆ 5 ಗಂಟೆಗೆ ಕತ್ತಲಾಗಿತ್ತು. ವಿಪರೀತ ಚಳಿ, ಗದಗುಟ್ಟಿಸುವ ಗಾಳಿ. ಎಲ್ಲರೂ ಇನ್‌ಡೋರ್ ಥೀಮ್ ಪಾರ್ಕ್ ನೋಡುತ್ತಿದ್ದಾಗ ಅಲ್ಲಿಂದ ಮೆಲ್ಲಗೆ ಕಳಚಿಕೊಂಡು ಒಬ್ಬಳೇ ರೂಮಿಗೆ ವಾಪಸ್ ಬಂದು ಓದಿದ ಪುಸ್ತಕವಿದು. ಗಂಡ ಮಕ್ಕಳು ವಾಪಸ್ ಬರುವಷ್ಟರಲ್ಲಿ ಕಣ್ಣು ಕೆಂಡ, ಮನಸ್ಸು ಭಾರ...ದಟ್ಟ ವಿಷಾದ. ಮೂವರನ್ನೂ ತಬ್ಬಿಕೊಂಡೇ ಬೆಳಗು ಮಾಡಿದ್ದೆ. ಮರುದಿನ ಬತು ಕೇವ್ಸ್ ನೋಡಲು ಮೇಲೆ ಹೋಗದೆ ಕೆಳಗೆ ದೇವಸ್ಥಾನದ ಕಟ್ಟೆ ಮೇಲೆ ಕುಳಿತು ಮತ್ತೆ ಮತ್ತೆ ಓದಿ ಕಣ್ಣೀರಿಟ್ಟೆ. ಹೌದು.... ಈ ಉತ್ತರಾಯಣ ಈಗ ಕೈಗೆತ್ತಿಕೊಂಡರೂ ನನ್ನನ್ನು ಕರಗಿಸುತ್ತದೆ, ಕಣ್ಣೀರಿಡುವಂತೆ ಮಾಡುತ್ತದೆ.

 ರಾಮಗಿರಿಯೆಂಬ ಊರಿನ ರಾಮಣ್ಣನವರ ಮಗಳು ರಾಜಲಕ್ಷ್ಮಿ ಈ ಕಾವ್ಯದ ಕೇಂದ್ರಬಿಂದು. ಕವಿಯ ಜೊತೆ ತುಂಬು ಸಂಸಾರ ನಡೆಸಿದವರು ಯಕೃತ್ತಿನ ವಿಕೃತಿಗೆ ಬಲಿಯಾಗಿದ್ದಾರೆ. ಅಗಲಿದ ಪತ್ನಿ ಕುರಿತ ಅಪರೂಪದ ಕಾವ್ಯ ಇದು. ಹೆಂಡತಿ ಸತ್ತ ಮೇಲೆ ಯಾರಾದರೂ ಬರೆದಿದ್ದಾರಾ? ನನ್ನ ಓದಿಗೆ ಸಿಕ್ಕಿಲ್ಲ. ಮಗ ಸತ್ತಾಗ ಬೀಚಿ ಬರೆದಿದ್ದರು. ನಂತರ ಅವರೇ ಅದನ್ನು ಓದಬೇಡಿ ಎಂದರು. ಪ್ರೀತಿಪಾತ್ರರನ್ನು ಕಳೆದುಕೊಂಡ ಕ್ಷಣದಲ್ಲಿ ಭಾವುಕತೆಗೆ ಪಕ್ಕಾಗಿರುತ್ತೇವೆ, ಏನೇನೋ ಸಂಕಟ..ಅನಿಸಿದ್ದನ್ನು ಕಾರಿರುತ್ತೇವೆ. ನಂತರ ಕಾರಿದ ಬಗ್ಗೆ ಒದ್ದಾಡುತ್ತೇವೆ.. ಹಾಳು ಭಾವುಕತೆ ಎಂದು ಶಪಿಸಿಕೊಳ್ಳುತ್ತೇವೆ. ಭಾವುಕರಾಗಿಯೂ ಮೈ ಮರೆಯದ ಪ್ರಜ್ಞೆ ಉತ್ತರಾಯಣದಲ್ಲಿದೆ.

 ಹತ್ತಿರದವರ ಸಾವು ಎಂಥವರನ್ನೂ ಕಂಗಾಲಾಗಿಸಿಬಿಡುತ್ತದೆ. ಕವಿಯ ವಿಷಯವನ್ನೇ ತೆಗೆದುಕೊಂಡರೆ ಅವರು ತಾಯಿ, ಅಜ್ಜಿ ಇಬ್ಬರೂ ಇದ್ದಾಗಲೇ ಪತ್ನಿಯನ್ನು ಕಳೆದು ಕೊಂಡವರು. ನಾವು ನೋಡಿದ ಮೊದಲ ಸಾವು ನಮ್ಮನ್ನು ಬೆಚ್ಚಿಬೀಳಿಸುತ್ತದೆ, ಇನ್ನಿಲ್ಲದಂತೆ ಕಾಡುತ್ತದೆ. ಅದೂ ಬದುಕಿನುದ್ದಕ್ಕೂ ಅಭೇದ್ಯ ಎನ್ನುವಂತೆ ಅಂಟಿಕೊಂಡಿದ್ದ ಆಪ್ತಜೀವದ್ದಾದರೆ ಕಳೆದು ಕೊಂಡವರು ಎಚ್ಚೆಸ್ವಿಯಂತಹಾ ಕವಿಯಾಗಿದ್ದರೆ ಉತ್ತರಾಯಣದಂತಹಾ ಅದ್ಭುತ ಕಾವ್ಯ ಹುಟ್ಟುತ್ತದೆ. 
 ಅಪರಿಚಿತ ಜೀವಗಳೆರಡನ್ನು ಒಂದೇ ಸೂರಿನಡಿ ಆಜೀವ ಪರ್ಯಂತ ಒಟ್ಟು ಮಾಡುವ ಈ ಮದುವೆ ಎಂಬ ಅದ್ಭುತ ಯಾವತ್ತೂ ನನಗೆ ಕುತೂಹಲದ ವಿಷಯ. ಭೌತಿಕ, ದೈಹಿಕ ಆಕರ್ಷಣೆಗಳ ರೋಮಾಂಚನ ಕಳೆದುಕೊಂಡ ನಂತರ ಅವರ ಸಹಬಾಳ್ವೆಯ ಸ್ವರೂಪ ನನಗೆಂದಿಗೂ ಅಧ್ಯಯನ ಯೋಗ್ಯವೆನಿಸುವ ಅಚ್ಚರಿ. ಪರಂಪರೆ ನೀಡಿದ ಪರಾವಲಂಬನೆ ಹೆಣ್ಣಿಗಿದ್ದರೆ ಸ್ವಾವಲಂಬಿಯೆಂಬ ಪರಂಪರಾನುಗತ ಅಭಿಮಾನ ಅಥವಾ ಅಹಂಕಾರ ಗಂಡಿಗಿರುತ್ತದೆ.  ಇವೆರಡೂ ಇವರಿಬ್ಬರ ಸ್ವಯಾರ್ಜಿತ ದುಡಿಮೆಯಲ್ಲ, ಪರಂಪರೆ ನೀಡಿದ ಸೊತ್ತು. ಅವನು ನನ್ನನ್ನು ಸಾಕುತ್ತಿದ್ದಾನೆ ಎಂಬ ನಂಬಿಕೆ, ಇವಳನ್ನು ನಾನು ಕಾಪಾಡುತ್ತೇನೆ ಎಂಬ ಇವನ ವಿಶ್ವಾಸ ಎರಡೂ ಭಾವಗಳೂ ಸಮಾನಾಂತರವಾಗಿ ಅಥವಾ ಈ ಮದುವೆ ಎಂಬ ಪದವೇ ಬಹುತೇಕರ ದಾಂಪತ್ಯವನ್ನು ಪೊರೆಯುತ್ತಿರುತ್ತದೆ. ಬರಬರುತ್ತಾ ಈ ಸ್ವಾವಲಂಬೀ ಭಾವನೆಯ ಅಡಿಯಲ್ಲೇ ಗಂಡು ಪರಾವಲಂಬಿಯಾಗುತ್ತಾ ಹೋಗುವ....ಪರಾವಲಂಬಿತ ಮನಸ್ಥಿತಿಯಲ್ಲೇ ಹೆಣ್ಣು ಸ್ವಾವಲಂಬೀ ಬದುಕು ಸಾಗಿಸುವ ಪ್ರಕ್ರಿಯೆ ಅವರಿಗರಿವಿಲ್ಲದೇ ಸಂಭವಿಸುತ್ತಿರುತ್ತದೆ. ಅವರಿಬ್ಬರಲ್ಲಿ ಯಾರೇ ಮತ್ತೊಬ್ಬರನ್ನು ಅಗಲಿದರೂ ಹೈರಾಣಾಗುತ್ತಾರಾದರೂ ಹೆಣ್ಣು ತನ್ನ ಅವಲಂಬಿತ .ಮನೋಭಾವದ ಅಡಿಯಲ್ಲಿ ಹೇಗೋ ಸುಧಾರಿಸಿಕೊಳ್ಳುತ್ತಾಳೆ. ಗಂಡು ಮಾತ್ರ ಈ ಸ್ವಾವಲಂಬೀ ಭಾವದ ಹಿನ್ನಲೆಯಲ್ಲಿ ಹೊಂದಿಕೊಳ್ಳಲಾರದೆ ಚಡಪಡಿಸುತ್ತಿರುತ್ತಾನೆ. ' ಒಂದು ಲೋಟ ಕಾಫೀಗೂ ಕಷ್ಟ, ಅವಳಿದ್ದಾಗ ಹೀಗಿರಲಿಲ್ಲ.' ಎಂದು ನಿಟ್ಟುಸಿರು ಬಿಡುವ ಹಿರಿಯ ಒಂಟಿ ಜೀವಗಳನ್ನು ನೋಡಿದ್ದೇನಾದರೂ ಅದು ಬರಿಯ ಕಾಫಿ ತಿಂಡಿಯ ಪ್ರಶ್ನೆ ಎಂದು ನನಗನ್ನಿಸುವುದಿಲ್ಲ. ತನ್ನ ಪರಾವಲಂಬಿ ತನದ ಅರಿವು ಮೂಡಿಸಿದ ಕೊರಗು ಅನ್ನಿಸುತ್ತದೆ.
 ಉತ್ತರಾಯಣದ ಕವಿ ಶ್ರೀ ಸಂಸಾರಿ. ಆತನ ಸಂಸಾರ ತುಂಬು ಸಂಸಾರ. ರಾಮನೊಬ್ಬನೇ ಎಂದೂ ಬಾರನು ಮಣೆಗೆ ಎನ್ನುವ ಮೂಲಕ ರಾಮನ ಕುಟುಂಬ ಪ್ರೀತಿಯನ್ನು ಎತ್ತಿಹಿಡಿಯುತ್ತಾರೆ. ಅದಕ್ಕೆ ಸಾಕ್ಷಿ ಒಂದು ಗ್ರೂಪ್ ಫೋಟೋ ಸೆಶನ್. ಅವನನ್ನು ಸುತ್ತುವರಿದಿರುವವರ ಸಂಖ್ಯೆ ನೋಡಿ. ರಾಮ ಸೀತೆಯೆಂಬ ಪತಿ ಪತ್ನಿಯ ಅತ್ಯಾಪ್ತ ವರ್ತುಲ, ಅದರ ಸುತ್ತ ಅಣ್ಣತಮ್ಮಂದಿರು ಅವರ ಪತ್ನಿಯರ ಸಂಬಂಧದ ವರ್ತುಲ, ಆದ್ರ ಸುತ್ತ ಕಷ್ಟಕಾಲದಲ್ಲಿ ಹೆಗಲಿತ್ತ ಗೆಳೆಯರ ವರ್ತುಲ, ಸೇವಕರ ವರ್ತುಲ, ಕೊನೆಗೆ ಅವನ ಕರೆಗೇ ಕಾಯುತ್ತಿದ್ದು ನೆನೆದೊಡನೆ ಪ್ರತ್ಯಕ್ಷವಾಗುವ ಪುಟ್ಟ ಅಳಿಲು ಬಿಲ್ಲಿನ ಬದಲು ಅವನ ಹೆಗಲ ಮೇಲೆ. ಯಾರೊಬ್ಬರನ್ನೂ ಯಾರಿಗಾಗಿಯೂ ಕಡೆಗಣಿಸದ ವ್ಯಕ್ತಿತ್ವ ರಾಮನದ್ದು. ಹಾಗಾದರೆ ಸೀತೆ ತೊರೆದ ನಂತರಒಂದಾದರೂ ಗ್ರೂಪ್ ಫೋಟೋ ಬಂದಿದ್ದುಂಟೆ ರಾಮನದು? ಆ ಕೇಂದ್ರ ವರ್ತುಲವಿಲ್ಲದಿದ್ದರೆ ಈ ಎಲ್ಲವೂ ಜಾಳುಜಾಳೆ?ಶ್ರೀಸಂಸಾರಿಯ ರಾಮ ಕುಟುಂಬವ್ಯವಸ್ಥೆಯ ಪ್ರತಿನಿಧಿಯಾದರೆ ಶಿವರಾತ್ರಿ ಪದ್ಯದ ಶಿವ ಅಪ್ಪಟ ಪ್ರೇಮಿ. ನಮ್ಮ ಹಗಲು ರಾತ್ರಿಯ ಕಲ್ಪನೆಯನ್ನೇ ಒದ್ದು ಹಾರಿಸುತ್ತಾ ಶಿವೇ ಇದ್ದ ಕ್ಷಣವೇ ಅವನಿಗೆ ರಾತ್ರಿ ಎನ್ನುತ್ತದೆ ಈ ಪದ್ಯ. ಈ ಶಿವನ ರಾತ್ರಿಯೇ ಪಾರ್ವತಿ. ಚಂದ್ರದಂಡೆಯ ಮುಡಿದು, ನಕ್ಷತ್ರ ನೆಕ್‌ಲೇಸ್ ಧರಿಸಿದ ಕಾಳಿ ಹೆಣ್ಣಾದ ನನ್ನಲ್ಲಿ ಹೊಟ್ಟೆಕಿಚ್ಚು ಮೂಡಿಸುತ್ತಾಳೆ. 
 "ಚಂದ್ರ ಬೋಗುಣಿ ತುಂಬಾ ತುಳುಕಾಡುತಿರೆ ಇರುಳು,
 ತಿರುಪೆ ಮುಗಿಸಿದ ಜೋಗಿ ಧವಳಗಿರಿ ಬಾಗಿಲಲಿ
 ನಿಂತು ಮೆಲ್ದನಿಯಲ್ಲಿ ಉಸುರಿದನು:" ಶಂಕರೀ...
 ತೆರೆಯೆ ಬಾಗಿಲು ಬೇಗ ಆಲೋಲ ನೇತ್ರೆಯೇ,
 ನನ್ನಧರ ಪಾತ್ರೆಯೇ, ಬಿಲ್ವವನಧಾತ್ರಿಯೆ,
 ಉರಿವ ಹಗಲಿಗೆ ತಂಪನೆರೆವ ಶಿವರಾತ್ರಿಯೇ"
 ಮಾತಿನಲ್ಲೇ ಎಂತಹ ಶೃಂಗಾರ!! ಕುಟುಂಬ ವ್ಯವಸ್ಥೆಯಲ್ಲಿ ಅಳಿಲನ್ನೂ ಮರೆಯದ ರಾಮ, ಏಕಾಂತದಲ್ಲಿ ಶಿವೆಯನ್ನು ರಮಿಸುತ್ತಾ ಶೃಂಗಾರಕ್ಕೆ ಕರೆವ ಶಿವ ಒಬ್ಬ ಪರಿಪೂರ್ಣ ಗಂಡಿನ ಲಕ್ಷಣಗಳನ್ನು ತೋರುತ್ತಾರೆ. ಕವಿತೆ ಕವಿಯ ಮನೋಭಾವವನ್ನಲ್ಲವೇ ಸೂಚಿಸುವುದು?
 ಇಂತಹ ಕವಿಯ ಜೀವನದಲ್ಲಿ ಬಿರುಗಾಳಿ ಬೀಸಿದೆ.  ಆ ಮನೆಯಲ್ಲೀಗ ಗ್ರೂಪ್ ಫೋಟೋ ಸಡಗರವಿಲ್ಲ... ಬಾಗಿಲು ತೆರೆವ ಶೀವೆಯಿಲ್ಲ. ಅಲ್ಲಿರುವುದು ಬತ್ತಿ ಸುಟ್ಟು ಎಣ್ಣೆ ...ಉದ್ವಿಗ್ನದೀಪ. ಅದೀಗ ನಿಷ್ಪಂದ ಶಾಂತ. ಅಲ್ಲೀಗ ನಡೆಯುತ್ತಿರುವುದು ನಿರಂತರ ನೆನಪಿನ ನಾಟಕ. " ಮುಗಿಲಿಲ್ಲದೆ ಮಳೆ ಸುರಿಯುತ್ತಿದೆ...ಗಾಳಿಯಿಲ್ಲದೆ ಸೆರಗು ಹಾರುತ್ತಿದೆ... ಚಂದ್ರನಿಲ್ಲದ ಬೆಳದಿಂಗಳಿನಲ್ಲಿ ನಗುತ್ತಿದ್ದಾಳೆ ನನ್ನಾಕೆ - ಯಾವ ಗುರಿಯೂ ಇಲ್ಲದ ಕಟ್ಟಾ ಖಾಸಗಿ ನಗೆ"  ಸಾವಿನ ಮನೆಯ ಸಶಕ್ತ ಚಿತ್ರಣವನ್ನು ಕಟ್ಟಿಕೊಡುವ ಕವಿಯನ್ನು ಕಾಡುವ ಅವಳ ಖಾಸಗೀ ನಗೆ ಓದುಗರನ್ನೂ ಕಾಡದೇ ಬಿಡುವುದಿಲ್ಲ. ಗಂಡ ಹೆಂಡತಿಯ ಮಧ್ಯೆ ಉಳಿವ ರಹಸ್ಯವಾದರೂ ಏನು? ಎಲ್ಲ ಎಲ್ಲವನ್ನೂ ತೆರೆದಿಟ್ಟು...ಬಿಚ್ಚಿಟ್ಟು...ಬಚ್ಚಿಟ್ಟಿದ್ದನ್ನು ಪರಸ್ಪರ ದೋಚಿಕೊಂಡ ನಂತರವೂ ಅವಳಲ್ಲಿನ್ನೂ ಉಳಿದಿರಬಹುದಾದ ಅವಳದ್ದೇ ಆದ ಕವಿಗೂ ಅಪರಿಚಿತವಾದ ಆ ಖಾಸಗಿ ನಗೆಯ ವೈಶಿಷ್ಟ್ಯ ನಮ್ಮನ್ನೂ ಕಾಡುತ್ತದೆ. ಏನಕ್ಕೆಲ್ಲ ನಗುತ್ತೇವೆ ....ಯಾರ್ಯಾರನ್ನೋ ಮೆಚ್ಚಿಸಲಿಕ್ಕಾಗಿ,. ಯಾರಿಂದಲೋ ಆಗಬೇಕಾಗಿರುವ ಕೆಲಸಕ್ಕಾಗಿ.. ಇಲ್ಲಾಕೆಗೆ ಯಾರನ್ನೂ ಮೆಚ್ಚಿಸುವ ಯಾರಿಗೋಸ್ಕರವೋ ನಗುವ ದರ್ದಿಲ್ಲ. ಅವಳಿಂದ, ಅವಳಿಗಾಗಿ, ಅವಳಿಗೋಸ್ಕರವೇ ನಗುತ್ತಿರುವ ನಗೆಯನ್ನು ಅರ್ಥೈಸಿಕೊಳ್ಳಲಾಗದೆ ಹಿಡಿಯಲಾಗದೆ ಅಸಹಾಯಕತೆಯಿಂದ ಕವಿ ಕುಸಿಯುತ್ತಾನೆ.

 ಬಾ ಬಾ ಕಪ್ಪು ಹಕ್ಕಿಯೇ... ನಿನಗೆ ಯಾವತ್ತೂ ಹೀಗೆ
 ಅನ್ನವಿಟ್ಟು ಕಾಯ್ದಿರಲಿಲ್ಲ. ಆತಂಕದಿಂದ ಕುದಿಯುತ್ತಿದ್ದಾರೆ
 ನೆರೆದ ಹತ್ತೂ ಸಮಸ್ತರು.
 ಒಲ್ಲೆನೆನಬೇಡ....ಹೀಗೆ ನಿಷ್ಕರುಣೆಯಿಂದ ತಲೆದೊನೆಯಬೇಡ
 ಕುಪ್ಪಳಿಸಿ ಕುಪ್ಪಳಿಸಿ ಹತ್ತಿರ ಬಂದು ಮತ್ತೆ ಮತ್ತೆ ಹಿಂದಕ್ಕೆ ಜಿಗಿಯಬೇಡ.
 ಸಾಮಾನ್ಯವಾಗಿ ಯಾರೂ ಕಾಗೆಗೆ ಅನ್ನವಿಟ್ಟು ಕಾಯುವುದಿಲ್ಲ...ಅದರ ಊಟದ ಬಗ್ಗೆ ಯೋಚಿಸುವುದಿಲ್ಲ. ಆದರೆ ಅವರೀಗ ಕಾಯುತ್ತಿರುವುದು ವಾಯಸದ ರೂಪದಲ್ಲಿ ಬರಬೇಕಾಗಿರುವ ತಮ್ಮ ಪತ್ನಿಗಾಗಿ. ಸಂಗಾತಿಯನ್ನು ಈ ರೂಪದಲ್ಲಿ ಕಲ್ಪಿಸಿಕೊಳ್ಳುವುದು ಎಷ್ಟು ಭಯಾನಕ. ಬರೀ ಅಷ್ಟಕ್ಕಾಗಿ ಬರೆದಿದ್ದಾರಾ ಈ ಸಾಲುಗಳನ್ನು? ' ಯಾವತ್ತೂ ನಿನಗೆ ಹೀಗೆ ಅನ್ನವಿಟ್ಟು ಕಾಯ್ದಿರಲಿಲ್ಲ'. ಯಾರಿಗೆ ಹೇಳುತ್ತಿದ್ದಾರೆ ಈ ಮಾತು ಎನ್ನಿಸಿ ಬೆಚ್ಚಿಬೀಳುವಂತಾಗುತ್ತದೆ. ವಾಯಸಕ್ಕೆ ಹೇಳಿದ್ದಾ ಅಥವಾ ತನ್ನನ್ನು ಬಿಟ್ಟು ಎಂದಿಗೂ ಮೊದಲು ಉಣ್ಣದ  ಹೆಂಡತಿಗೆ ಹೇಳಿದ್ದಾ ?  ಹತ್ತೂ ಸಮಸ್ತರಿಗೆ ಊಟ ಬಡಿಸಿ ಅವರೆಲ್ಲರೂ ಉಂಡ ನಂತರ ಒಂದಿಷ್ಟು ಅನ್ನ ಹೊಟ್ಟೆಗಿಳಿಸಿ ಉಳಿದ ಕೆಲಸ ಮಾಡುತ್ತಾ ಕಾಲಕಳೆದ ಬಗ್ಗೆ ಕವಿ ಹೇಳುತ್ತಿದ್ದಾರಾ? ಅವಳಿಗೆಂದೂ ಅನ್ನ ಬಡಿಸದ ತಮ್ಮ ಬಗ್ಗೆ ಮಾತನಾಡುತ್ತಿದ್ದಾರಾ? ಇಂದು ಅವಳಿಗೆ ಅವರೆಲ್ಲರಿಗಿಂತ ಮೊದಲು ಉಣ್ಣುವ ಭಾಗ್ಯ ಕಾಕ ರೂಪದಲ್ಲಿ. ಎಂಥಾ ವ್ಯಂಗ್ಯ.!! ನೆರೆದ ಹತ್ತೂ ಸಮಸ್ತರು ಕಾಯುತ್ತಿರುವುದು ನಂತರ ಆಗಲಿರುವ ಅವರ ಊಟಕ್ಕಾ? ಒಂದು ವೇಳೆ ಇವರ ಊಟದ ನಂತರ ಈ ಕ್ರಿಯೆ ನಡೆದಿದ್ದರೆ ಇಷ್ಟು ಆತಂಕದಿಂದ ಕಾಯುತ್ತಿದ್ದಾರಾ? ಬದುಕಿರುವವರೆಗೂ ಒಂದು ದಿನ ಇವರಿಗೆ ತಡ ಮಾಡದೆ ಬಂದು ಬಡಿಸುತ್ತಿದ್ದಳು ಇಂದೇಕೆ ಬರುತ್ತಿಲ್ಲ. ತಾನೆಂದೋ ಹೇಳಿದ ಸಣ್ಣ ಪುಟ್ಟ ಸುಳ್ಳುಗಳ ತಪ್ಪುಗಳ ನೆನಪು.... " ಕ್ಷಮಿಸಿ ಸರ್ವಾಪರಾಧವನ್ನು ಮುಟ್ಟುಮಿಟ್ಟಿಗೆ ಅನ್ನ." ಈ ಭಾಗ ಎಷ್ಟು ಅದ್ಭುತವಾಗಿ ಮೂಡಿಬಂದಿದೆ. ಸ್ವಲ್ಪ ವಾಚ್ಯವಾಗಿದ್ದರೂ ಕವನದ ದಿಕ್ಕು ತಪ್ಪುತ್ತಿತ್ತು. ಕವಿಯ ಅದ್ಭುತ ಸಂಯಮ ಹಾಗಾಗದಂತೆ ಕಾಯ್ದಿದೆ. ಹೆಂಡತಿ ಬಿಟ್ಟು ತೌರಿಗೆ ಹೋಗುವಾಗ ಹಾಗೇ ಹೋದಳೇ? ಫ್ಲಾಸ್ಕು, ಬಿಸಿ ಅಡುಗೆ..ಕಾಸಿದ ಹಾಲು..ಹಾಳು ಕಳಕಳಿ ಅಕ್ಕರಾಸ್ತೆ ಕವನದ ಸಾಲು. ಇಂತಹ ಸಣ್ಣಪುಟ್ಟ ವಿವರಗಳೇ ದಾಂಪತ್ಯದ ಸಶಕ್ತ ಚಿತ್ರಣವನ್ನು ಕಟ್ಟಿಕೊಟ್ಟಿರುವುದು.  ಉದಾಹರಣೆಗೆ ನೋಡಿ.....
 " ಪ್ಲೀಸ್ ಕಣ್ಮುಚ್ಚಿ ನೀವು. ಬಟ್ಟೆ ಬಿಚ್ಚಲಿಕ್ಕಿದೆ.
 ಕಿಸಿದ ಲಂಗದ ಮೇಲೆ ಹೊಚ್ಚಹೊಸ ಸೀರೆ.
 ಹೊಂಬಣ್ಣ ಚುಕ್ಕಿ ಮೈ ತುಂಬಾ ಗರಿ ಗರಿ ಬೇರೆ
 ಮೊದಲಿಂದಲೂ ಅಷ್ಟೇ ಸುಳಿಗೆ ಬೈತಲೆ ಓರೆ.

 ಬೆನ್ನ ಹಿಂದಿನ ಹುಕ್ಕು ಹಾಕಿಬಿಡಿ ಮತ್ತೆ. ಬಿಚ್ಚುವುದು
 ಸುಲಭ- ಹಾಕುವುದಲ್ಲ ನೆನಪಿಡಿ. ಆಗೋ ಆಗೋ
 ಅಲ್ಲಿಗೇಕೋಡುತ್ತೆ ಪೋಲಿ ಕೈ?
 ಕಡಿವಾಣವೇ ಇಲ್ಲ ಕುದುರೆಗೆ. ಈಗೀಗ.
 ಓದುತ್ತಿದ್ದಂತೆಯೇ ಓದುಗನ ತುಟಿಗಳಲ್ಲಿ ನಗೆ ಅರಳುತ್ತದೆ. ತನ್ನದೇ ಕಥೆಯೇನೋ ಎಂಬಷ್ಟು ಆಪ್ತವಾಗುತ್ತದೆ. ಹಾಗಂದುಕೊಂಡ ಮರುಕ್ಷಣವೇ ಈ ಕಾವ್ಯದಲ್ಲಿ ಸಂಭವಿಸಿರುವ ದುರಂತ ನೆನಪಾಗುತ್ತದೆ. ಇದೂ ನಮ್ಮಲ್ಲೂ ಸಂಭವಿಸಬಹುದೆಂಬ ಭಾವ ಹಟಾತ್ತನೆ ಆವರಿಸಿ ಬೆಚ್ಚಿಬೀಳಿಸುತ್ತದೆ. ಕವಿತೆ ಹತ್ತಿರವಾಗುವುದು ಆ ಕ್ಷಣದಲ್ಲೇ. ಕವಿಯ ಸಂಕಟ ನಮ್ಮದಾಗುವುದೂ ಆ ಕ್ಷಣದಲ್ಲೇ. ಬಣ್ಣದ ಬೀಜ ಬಿತ್ತುವ ಮನದನ್ನೆ ಬಿತ್ತಿದ್ದು ಮಂಚದ ಗುದುಮುರುಗಿಯಲ್ಲೊಡೆದ ಬಳೆ ಚೂರುಗಳೆಂಬ ಸುಖದ ಉಲುಹುಗಳನ್ನೇ? ಒಂದು ಕಾಲದಲ್ಲಿ ಉನ್ಮಾದ ಹುಟ್ಟಿಸುತ್ತಿದ್ದ, ಕಚಗುಳಿ ಇಡುತ್ತಿದ್ದ ಸಂಕೇತಗಳು ನೆನಪುಗಳು ಇಂದು ನೋವಿನ ನಿಟ್ಟುಸಿರಾಗುತ್ತಿದೆ, ಕಣ್ಣೀರಿನ ಕರ ಕೇಳುತ್ತಿವೆ. ಭಾವುಕರಾಗಿಯೂ ಎಚ್ಚರ ತಪ್ಪದೆ ವಿವರ ಕಟ್ಟಿಕೊಡುತ್ತಿರುವ ಕವಿ, ಓದುತ್ತಾ ಮತ್ತೆ ಮತ್ತೆ ಕಣ್ಣೀರಾಗುವ ಉತ್ತರಾಯಣದ ಉತ್ತರ ಹುಡುಕುವ ಓದುಗ..........

 ಮದುವೆಯಾದಾಗ ದಕ್ಕಿದ್ದ ಬಿಗಿದ ತುಂಬು ಮೈ ತಿರುಗುಣಿ ಹಲ್ಲು ಹೀರಿ ಉಗಿದ ಕಬ್ಬಾಗಿದ್ದಾಗಲೂ ಬತ್ತಿದ ತೊರೆಯನ್ನೊತ್ಟಿಕೊಳ್ಳುವ, ಜಗ್ಗುವ ಬೊಜ್ಜು.. ಆರೆನೆರೆತ ಕುರುಚಲು ಮುಡಿಗಳ ನೇವರಿಸುವ ಕವಿ ನಮಗೆ ಅತ್ಯಾಪ್ತರಾಗುತ್ತಾರೆ. ರೋಗದ ಧಾಳಿಗೆ ಕಂಗೆಟ್ಟ ದೇಹವನ್ನು ಸೇವಾಯೋಗಕ್ಕೆ ಈಗಷ್ಟೇ ನನ್ನಿಷ್ಟ ದೈವ ತೆರೆದ ಸೇವಾಕ್ಷೇತ್ರ ಎಂದು ಗುರುತಿಸುತ್ತಾರೆ. ಅವಳ ನಿರ್ಗಮನದ ನಂತರ ಪುನರ್ಜನ್ಮದ ಸಾಧ್ಯತೆಗಳ ಪತ್ತೇದಾರಿಗೆ ಇಳಿಯುತ್ತಾರೆ. ಕೊನೆಯಿಲ್ಲದ ಪತ್ತೇದಾರಿ.  ದಾಂಪತ್ಯದ ಉತ್ತುಂಗವನ್ನು ವರ್ಣಿಸುವಾಗ ಅವರು ಕೊಡುವ ಅದ್ಭುತ ಉಪಮೆ ' ದೇಹಗಳೀಗ ಗಾಂಧರ್ವರೀಸಾಡಿ ಹೋದ ಕೊಳಗಳ ಹಾಗೆ'.
 ಮಳ್ಳಿ ಮೀನಿನ ಸುತ್ತ ಒತ್ತು  ನೀರಿನ ಕವಚ
 ಮಣ್ಣ ಗೋಳಕ್ಕೆ ಆಕಾಶ ಕವಚ!
 ನಕ್ಷತ್ರದುಂಗುರಕ್ಕೆ ಇರುಳ ಶಾಪದ ಕವಚ;
 ಲಿಂಗಕ್ಕಾಲಿಂಗನದ ನಿರ್ವಯಲ ಕವಚ!
 ಛಂದಸ್ಸಿನಲ್ಲಿ ಬಂಧಿಸಿಟ್ಟರೆ ಮೃತ್ಯೂಭಯದಿಂದ ತಪ್ಪಿಸಿಕೊಳ್ಳಬಹುದೆಂದು ದೇವತೆಗಳೂ ಛಂದಸ್ಸಿನ ಒಳಗೆ ಪ್ರವೇಶಿಸುತ್ತಾರಂತೆ. ಈ ಕವಿತೆಯೂ ಛಂದಸ್ಸಿನೊಂದಿಗೆ ಮುಕ್ತಾಯವಾಗುತ್ತದೆ.
ಉತ್ತರಾಯಣ ಮುಕ್ತಾಯವಾದರೂ ನನ್ನ ದುಗುಡ, ಸಂಕಟ ಕಡಿಮೆಯಾಗಿರಲಿಲ್ಲ.  ಸಾಮಾನ್ಯವಾಗಿ ಎಲ್ಲಿ ಹೋದರೂ ನನ್ನದೇ ಲಹರಿಯಲ್ಲಿ ತೇಲುತ್ತಿದ್ದ ನನ್ನನ್ನು ಇಡೀ ಪ್ರವಾಸದುದ್ದಕ್ಕೂ ಕುಟುಂಬದೊಡನೆ ಮಾನಸಿಕವಾಗಿಯೂ ಇರುವಂತೆ ಮಾಡಿದ್ದು ಉತ್ತರಾಯಣ. ಸಂಕಟ ಕಡಿಮೆಯಾದದ್ದು ವೈದೇಹಿ ಬಂದಮೇಲೆಯೇ.
 ಉತ್ತರಾಯಣದ ಜರ್ಜರಿತ ದೇಹದ ನಾಯಕಿಯನ್ನು ಇಲ್ಲಿ ಪ್ರತಿಮೆಯನ್ನಾಗಿಸಿದ್ದಾರೆ 

"ಬಿಚ್ಚು ಒಂದೊಂದಾಗಿ ಉಟ್ಟಿದ್ದ ತೊಟ್ಟಿದ್ದ ಎಷ್ಟೋ ಕಾಲದಿಂದಿಟ್ಟಿದ್ದ.
ಕಳಚಿ ಜೀವ ಹಿಂಡುವ ನೋವಿನಿಕ್ಕಟ್ಟ.
ಕಣ್ಣ ಹಳದಿಯ ಬಣ್ಣ, ಪರೆಪರೆ ಸುಕ್ಕ, ಕೆನ್ನೆಯ ಜೋಲ, ಬೆಳಕು
ಬತ್ತಿದ ಬತ್ತಿಯ ಗಿಮಿಟು ಕರುಕ."
ಅವಳ ಅಗಲಿಕೆಯ ನೋವಿನಿಕ್ಕಟ್ಟನ್ನು ಬದಿಗೆಸೆವ ಕವಿ ಮತ್ತೆ ಅವಳ ಚಿತ್ರವನ್ನು ಅಳಿಸಿ ಬರೆಯುವುದು ಬೆಳಗಿನ ರತ್ನ ಕಿರಣಗಳಿಂದ, ಬಳಿಯುವ ಬಣ್ಣ ವಾದರೋ ನಟ್ಟಿರುಳ ಬೆಳದಿಂಗಳ ಬಿಳುಪು....ಆವಾಹಿಸುವುದು ಉಗುರು ಬೆಚ್ಚನೆಯ ಬಾಣಂತಿಯ ಮೈ ಬಿಸುಪು!!. 

" ಕೃತಿಯಾಗು ನನ್ನ ಮುದ್ದಿನ ಹೆಣ್ಣೆ, ದಟ್ಟ ರೆಪ್ಪೆಯ ಅನಿಮಿಷ ಕಣ್ಣೆ,
ಕಣ್ಣಲ್ಲಿ ಕಣ್ಣಿಟ್ಟು ನೋಡು ನನ್ನೆ.
ಮುಡಿದ ಹೂ ಬಾಡದ, ಬಿಸಿ ಮೈ ಬೆವರದ, ಯಾವತ್ತೂ ಸ್ಖಲಿಸದ,
ನನ್ನ ಮೈಯಿರದ ಮನದನ್ನೆ."
ಅವಳನ್ನು ಕೃತಿಯಾಗಿಸಿದ್ದಾರೆ...ಅವಳೀಗ ಮೂಡಿದ ಹೂ ಬಾಡದ, ಬಿಸಿ ಮೈ ಬೆವರದ, ಯಾವತ್ತೂ ಸ್ಖಲಿಸದ ಮೈಯಿರದ ಮನದನ್ನೆ. ಇವೆಲ್ಲವೂ ದೇವತೆಯ ಲಕ್ಷಣಗಳು. ಹೀಗೆ ಅವಳನ್ನು ಪ್ರತಿಮೆಯಾಗಿಸಿ ಹಸಿವು ನಿದ್ದೆ ನೀರಡಿಕೆಗಳಿಲ್ಲದ ಮನದನ್ನೆಯನ್ನು , ನಿಜಾರ್ಥದಲ್ಲಿ ವೈದೇಹಿಯನ್ನು ಸೃಷ್ಟಿಸುತ್ತಾರೆ.  ಉತ್ತರಾಯಣದ ಶಾಂತಿರಸ್ತು ಇಲ್ಲಿ ಶುಭಮಸ್ತುವಾಗಿದೆ. ಅವರೇ ಹೇಳುವಂತೆ ಸೀತೆ ವೈದೇಹಿಯಾಗದೆ ಉಜ್ಜೀವನದ ಉಪಾಯವೇ ಇರಲಿಲ್ಲ.

ಬೇಂದ್ರೆ - ನನ್ನ ಓದು

ಬೇಂದ್ರೆ ನನ್ನ ಓದು

ಪ್ರತೀ ಸಲವೂ ಗಮನವಿಟ್ಟು ನೋಡುತ್ತಿರುತ್ತೇನೆ...ಬಹುತೇಕ  ತೊಂಬತ್ತೊಂಬತ್ತರಷ್ಟು ಪ್ರತಿಶತ ಹೀಗೇ ನಡೆಯುತ್ತಿರುತ್ತದೆ. ಬೆಳಗಿನಿಂದ ಸಂಭ್ರಮದಲ್ಲಿ ಮಿಂದೆದ್ದು ಮಧ್ಯಾಹ್ನ ಕಳೆಯುವ ಹೊತ್ತಿಗೆ ಸೂತಕದ ಛಾಯೆ ಆವರಿಸಿರುತ್ತದೆ. ತುಸು ಬಾಡಿದ ನಾಚಿದ ತಲೆತಗ್ಗಿಸಿದ ಎಳೆ ಮೊಗ, ದುಗುಡವನ್ನೆಲ್ಲ ಎದೆಯಲ್ಲಿಟ್ಟುಕೊಂಡೂ ಮೊಗದಲ್ಲಿ ಬಾರದ ನಗೆ ತುಳುಕಿಸುತ್ತಾ ಹೊರಡುತ್ತಿರುವ ನೆಂಟರಿಗೆ ವಿದಾಯ ಹೇಳುತ್ತಾ ಓಡಾಡುತ್ತಿರುವ ಹಿರಿಯ ತಾಯಿ ಜೀವ. ಅವಳ ಕಣ್ಣಲ್ಲಿ ಇನ್ನೇನು ಹೊರಬಂದುಬಿಡುತ್ತೇನೆ ಎಂದು ಹಟ ಹಿಡಿದು ನಿಂತ ಕಣ್ಣೀರು.....ಶುರುವಾಗುತ್ತದೆ ನೋಡಿ ಆ ಸಂದರ್ಭದಲ್ಲಿ ನಾನೆಂದೂ ಕೇಳಬಯಸದ ಆ ಹಾಡು.....ಆ ಹಾಡಿಗೆ ಬಹುತೇಕ ಕಡೆ ರಾಗ, ತಾಳ, ಮಾಧುರ್ಯ ಯಾವುದೂ ಇರುವುದಿಲ್ಲ .....ಅದಕ್ಕಿರುವುದು ಆ ಸಂದರ್ಭದಲ್ಲಿ ಅಳಿಸುವ, ನೋಯಿಸುವ ಶಕ್ತಿಯೊಂದೇ. ತಮ್ಮ ಹಾಡು ಸುತ್ತಲಿನವರನ್ನು ಎಷ್ಟು ಅಳಿಸುತ್ತಿದೆ ಎಂದು ಅತ್ತಿತ್ತ ಕಣ್ಣು ಹಾಯಿಸುತ್ತಾ ಖಾತ್ರಿ ಪಡಿಸಿಕೊಳ್ಳುತ್ತಲೆ ಹಾಡುವ ಕೊರಳುಗಳು ನಂತರ ತಾವೂ ಕಣ್ಣೊರೆಸಿಕೊಳ್ಳುತ್ತವೆ. ಆ ಕ್ಷಣಗಳು ನನಗೆಂದಿಗೂ ತವರಿನ ಪಾಲಿಗೆ ಆ ಹುಡುಗಿಯ ಅರ್ಧ ಸಾವು ಎನ್ನಿಸಿಬಿಡುತ್ತದೆ.

" ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ,
ಈ ಮನೆಯೇ ಈ ಇವರೇ ನಿನ್ನವರು ಮುಂದೆ,
ಇವರೇ ತಾಯ್ಗಳು ಸಖರು ಭಾಗ್ಯವನು ಬೆಳೆಸುವರು,
ಇವರ ದೇವರುಗಳೇ ನಿನ್ನ ದೇವರುಗಳು".
 ಹುಟ್ಟಿಬೆಳೆದ ಪರಿಸರ, ಒಡನಾಟ, ಸುತ್ತಲಿನ ವಾತಾವರಣ,  ತಂದೆ ತಾಯಿ , ಅಭಿರುಚಿ ಇವೆಲ್ಲವೂ ಸೇರಿ ಒಬ್ಬ ವ್ಯಕ್ತಿ ಬೆಳೆಯುತ್ತಾನೆ. ಪರಿಸ್ಥಿತಿ ಈಗ ಎಷ್ಟೋ ಸುಧಾರಿಸಿದೆ ಎಂಬ ನೆಮ್ಮದಿಯಿದ್ದರೂ ಬಹತೇಕ ಮದುವೆಗಳಲ್ಲಿ ಒಂದು ಮನೆಯ ಹೆಣ್ಣುಮಗಳ ಅರ್ಧ ಸಾವು, ಮತ್ತೊಂದು ಮನೆಯ ಪುಟ್ಟ ಗೃಹಿಣಿಯ ಜನನ ಸಂಭವಿಸುತ್ತಲೇ ಇರುತ್ತದೆ. ಗಮನವಿಟ್ಟು ನೋಡಿ ಮೇಲಿನ ಸಾಲುಗಳನ್ನು. ಆ ಹೆಣ್ಣು ಮಗುವನ್ನು ಧಾರೆ ಎರೆದು ಕೊಟ್ಟ ಮರುಕ್ಷಣದಿಂದಲೇ ಅವಳು ಹೆತ್ತವರ ಮನೆಗೆ ಹೊರಗಾಗಿಬಿಡುತ್ತಾಳೆ. ಮುಂದವಳ ತಾಯಿ, ತಂದೆ, ಸಖ,ಸಖಿ ಎಲ್ಲ ಎಲ್ಲವೂ ಗಂಡನ ಮನೆಯವರೇ." ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ !." ಇದೆಷ್ಟರ ಮಟ್ಟಿಗೆಂದರೆ ಹುಟ್ಟಿನಿಂದ ಅವಳು ಪ್ರಾರ್ಥಿಸುತ್ತಿದ್ದ, ಪೂಜಿಸುತ್ತಿದ್ದ ದೇವರೂ ಅವಳ ದೇವರಲ್ಲ. ಗೋತ್ರ, ಸೂತ್ರ ಎಲ್ಲವೂ ಸತ್ತು ಮರುಹುಟ್ಟು ಪಡೆಯುವವಳಿಗೆ ಹೊಸ ಗೋತ್ರ, ಹೊಸ ಹುಟ್ಟು, ಹೊಸ ಸೂತ್ರ!!!!!  ಹೀಗೆ ಹುಟ್ಟುವ ಪುಟ್ಟ ಗೃಹಿಣಿಯೆಂಬ ಕೂಸಿಗೆ ಬೇಕಾಗುವುದು ತಂದೆ ತಾಯಿಯಂತೆ ಲಾಲಿಸಬೇಕಾದ ಅತ್ತೆ-ಮಾವ, ಕೈ ಹಿಡಿದು ಜೊತೆ ನಡೆಯುವ ಅಕ್ಷರಶ ಸಖನಾಗಬೇಕಾದ ಪತಿ, ಅವಳ ಆಸೆ ಆಕಾಂಕ್ಷೆ ಅಭಿರುಚಿ ಹವ್ಯಾಸಗಳನ್ನು ಅರ್ಥೈಸಿಕೊಳ್ಳಬೇಕಾದ ಹೊಸ ಪರಿವಾರ. ದುರಂತವೆಂದರೆ ಹೆಚ್ಚಿನ ಕಡೆ ಇದಾವುದೂ ಸಂಭವಿಸುವುದಿಲ್ಲ... ಹೆಂಡತಿಯನ್ನು ಗೆಳತಿಯನ್ನಾಗಿ ನೋಡುವ ಭಾವದ ಬಗ್ಗೆಯೇ ದ್ವಂದ್ವ, ಹೆಂಡತಿಯನ್ನು ಸರಿಸಮಾನ ಪರಿಗಣಿಸಲಾಗದ ಪರಂಪರಾನುಗತ ಪುರುಷ ಪ್ರಜ್ಞೆ...ಇಂದಿನ ಎಷ್ಟೋ ಮುಂದುವರಿದ ಶಿಷ್ಟ ಪರಿವಾರಗಳಲ್ಲೂ ತನ್ನ ಹಾಜರಿ ಹಾಕುತ್ತಲೇ ಇದೆ. ಆಗೆಲ್ಲಾ ನನಗೆ ಸಖೀಗೀತ ನೆನಪಾಗುತ್ತದೆ.... ನನ್ನೊಳಗೆ ಬೇಂದ್ರೆ ಕಾಡತೊಡಗುತ್ತಾರೆ....ಹಾಡತೊಡಗುತ್ತಾರೆ.

ಮಹಾನುಭಾವ, ಕವಿ, ಸಂತ, ಅನುಭಾವಿ ಏನೆಲ್ಲ ಹೆಸರುಗಳಿಂದ ಕರೆಯಬಹುದಾದ ಈ ರಸಋಷಿಯ  " ಮನದ ಬ್ಯಾಸರ ಕಳಿಯಕಾ, ಹಾಡ ನುಡಿ ಸಾಕ, ಹೆಚ್ಚಿಗೇನ ಬೇಕಾ, ಒಂದು ಹೂತ ಹುಣಸಿ ಸಾಕ" ಆಡು ನುಡಿಗಳೇ ಲಯಬದ್ಧವಾಗಿ ನಾದಲೀಲೆಯಾಗಿ ಪದ್ಯವಾಗಿ ಹೊರಹೊಮ್ಮುವ ಚಮತ್ಕಾರ ನನ್ನನ್ನು ಯಾವತ್ತೂ ಬೆರಗು ಗೊಳಿಸುತ್ತದೆ. ವೈದಿಕದಲ್ಲಿ ಜಾನಪದವನ್ನು ಹೇಳುವ, ಜಾನಪದದ ಮೂಲಕ ವೈದಿಕಕ್ಕೆ ಲಗ್ಗೆ ಹಾಕುವ ಬಗೆ ಅಂಬಿಕಾತನಯರಿಗಷ್ಟೆ ಗೊತ್ತೇನೋ. 'ಗೋವತ್ಸ ಲೀಲೆಯಷ್ಟೇ ಸುಲಲಿತವಾಗಿ 'ಕುರುಡು ಕಾಂಚಾಣವನ್ನು' ಬರೆಯಬಲ್ಲವರು ಮುಟ್ಟಬಲ್ಲವರು ಅವರು. ಅರವಿಂದರಿಂದ, ಜ್ಞಾನದೇವರಿಂದ ಗಾಢವಾಗಿ ಪ್ರಭಾವಿತರಾಗಿದ್ದ ಬೇಂದ್ರೆಯವರು ಸಂಸಾರದಲ್ಲಿದ್ದೂ ವಿರಕ್ತ, ವಿರಕ್ತನಾಗಿದ್ದೂ ಅನುರಕ್ತ.

ಇಷ್ಟು ವರ್ಷಗಳಿಂದ ಬೇಂದ್ರೆಯವರ ಕಾವ್ಯವನ್ನು ಅಭ್ಯಸಿಸುತ್ತಾ ಬಂದ ನನಗೆ ಅವರ ಕಾವ್ಯ ಮಾರ್ಗವನ್ನು, ಕಾವ್ಯದ ಕೇಂದ್ರ ಪ್ರಜ್ಞೆಯನ್ನು ಇಂದಿಗೂ ಗುರುತಿಸಲಾಗುತ್ತಿಲ್ಲ. ಹುಡುಕ ಹೊರಡುವ ನನ್ನನ್ನು ಪ್ರತಿಬಾರಿಯೂ ದಿಕ್ಕಾಪಾಲಾಗಿ ಎಳೆದೊಯ್ಯುತ್ತಾರೆ.  ಒಮ್ಮೆ ಮುಗಿಲಿಗೆ ಮತ್ತೊಮ್ಮೆ ನೆಲಕ್ಕೆ, ಒಮ್ಮೆ ಭಾವಕ್ಕೆ ಮತ್ತೊಮ್ಮೆ ಅನುಭಾವಕ್ಕೆ, ಒಮ್ಮೆ ವಿರಕ್ತಿಗೆ ಮತ್ತೊಮ್ಮೆ ಅನುರಕ್ತಿಗೆ, ಒಮ್ಮೆ ಶೃಂಗಾರಕ್ಕೆ ಮತ್ತೊಮ್ಮೆ ಸಂಸಾರದ ದಾರಿದ್ರ್ಯಕ್ಕೆ ಹೀಗೆ ನಿಷ್ಕರುಣೆಯಿಂದ ಕಟ್ಟಕಡೆಯದಾಗಿ ನನ್ನನ್ನು ಬಟ್ಟ ಬಯಲಿನಲ್ಲಿ, ಬಹು ದೊಡ್ಡ ಮೈದಾನದಲ್ಲಿ ನಿಲ್ಲಿಸಿಬಿಡುತ್ತಾರೆ. ಎತ್ತ ತಿರುಗಿದರೂ ಮಾರ್ಗಗಳಿಲ್ಲ, ಅಥವಾ ಎತ್ತ ನೋಡಿದರೂ ಮಾರ್ಗಗಳೇ.!!!!

ಗಂಡು ಹೆಣ್ಣನ್ನು ಸೊತ್ತು ಎಂದು ಭಾವಿಸಿದ್ದ ಕಾಲದಲ್ಲಿ, ಹೆಣ್ಣು ಗಂಡಿನ ತೊತ್ತಾಗಿದ್ದ ಕಾಲದಲ್ಲಿ, ಗಂಡ ಹೆಂಡಿರ ನಡುವೆ ಮಾತೆ ನಿಷಿದ್ದವೆನಿಸಿದ್ದ ಕಾಲದಲ್ಲಿ ಹೆಂಡತಿಯನ್ನು ಸಖಿ ಎಂದು ಕರೆಯುವ ಸಂಪ್ರದಾಯಕ್ಕೆ ನಾಂದಿ ಹಾಡಿದವರು ಬೇಂದ್ರೆ. ( ಮುದ್ದಣ ಮನೋರಮೆ ಹೊರತು ಪಡಿಸಿ). ಬೇಂದ್ರೆಯವರ ಜೀವನದ ಮೂಲ ಧ್ಯೇಯವೇ ಗೆಳತನದ ತತ್ವ. ಮಧುರ ಚೆನ್ನರ ಜೊತೆಗೂಡಿ ಅವರು ಕಟ್ಟಿದ್ದು ಗೆಳೆಯರ ಗುಂಪು.  ಎಲ್ಲವನ್ನೂ ಗೆಳೆತನದ ನೆರಳಲ್ಲೇ ನೋಡುತ್ತಿದ್ದ ಬೇಂದ್ರೆಯವರಿಗೆ ಹೆಂಡತಿಯೂ ಗೆಳತಿಯಾಗಿ ಕಂಡಳೆ?  ಹಾಗೆ ಕರೆದ ನಂತರವೂ ಅವರಲ್ಲಿ ದ್ವಂದ್ವ ಭಾವವಿತ್ತೇ?

ಅವರ ಮನದನ್ನೆ ಪದ್ಯವನ್ನು ನೋಡಿ.... ಮೊದಲಿಗೇ ಹೇಳಿಬಿಡುತ್ತಾರೆ..." ಆಡದಿರು ಮನದನ್ನೆ ಎನಗೆ ಇದಿರಾಡದಿರು" . ನನಗೆ ಇದಿರಾಡ ಬೇಡ ಎನ್ನುತ್ತಾ ಮುಂದುವರೆಯುವ ಕವಿ " ಹೇಳುತಿರೆ ಹೂಂ ಅನ್ನು", "ನಿನ್ನ ತಿಳಿವನು ಹಣಿಸು" ಎನ್ನುತ್ತಾರೆ. ಅವಳ ಅರಿವನ್ನು ಬದಿಗಿಟ್ಟು ಹೂಂ ಎನ್ನು ಎನ್ನುವ ಭಾವ ಅಲ್ಲಿ ಕಾಣುತ್ತದೆ.
" ಗಂಡು ದರ್ಪವ ಹರಿದು
ಬಿರುಸು ಬಿಂಕವ ತೊರೆದು
ತೋಳ ತೊಟ್ಟಿಲ ಮಗುವು ಆಗಿ ಬಂದೆ.
ಗೊಂಬೆಯಾಡಿಸಿದಂತೆ ಆಡಿಸೆಂದೆ.
ನಿನ್ನ ತಾಯ್ತನದ ಸೈರಣೆಯ ವಿತರಣೆ ಬೇಕು
ನಿನ್ನ ತಾಳ್ಮೆಯ ಸೈಪಿನೊಂದು ಕರುಣೆಯು ಸಾಕು"
ಓದುತ್ತಿದ್ದಂತೆಯೇ ಮನ ಆರ್ದ್ರವಾಗುತ್ತದೆ...ತನ್ನ ಬಿರುಸು ಬಿಂಕ , ದರ್ಪ ತೊರೆದು ಮಗುವಾಗಿ ಬರುವವನ ಮಾತಿಗೆಲ್ಲಾ 'ಹೂಂ' ಎಂದು ಸೋತು ಬಿಡುವ ಉತ್ಕಟ ಭಾವ ಆವರಿಸಿಬಿಡುತ್ತದೆ. ಗೊಂಬೆಯನ್ನು ನಾವು ಹೇಗೆ ಬೇಕಾದರೂ ಆಡಿಸಬಹುದು....ಆಡಿಸುವಾಗ ಅದಕ್ಕೆ ಹಾನಿಯಾದರೂ ಅದು ಉಸಿರೆತ್ತುವುದಿಲ್ಲವೆಂಬ ಧೈರ್ಯ ಆಡಿಸುವಾಕೆಯದು. ಮುಂದೆ ಓದಿ
" ಮಲಗಿರುವ ಹಾವನ್ನು ಕೆಣಕಬೇಡ
ಕಚ್ಚಿ ವಿಷ ಕಾರಿದರೆ ತಿಣುಕಬೇಡ"
ಮೊದಲು ಮೂಡಿದ ಉತ್ಕಟತೆ ಹಾಗೇ ಜರ್ರೆಂದು ಇಳಿದು ಹೋಗುತ್ತದೆ. ಒಂದೊಮ್ಮೆ ನಿನ್ನ ತಾಯ್ತನದ ಸೈರಣೆಯ ವಿತರಣೆ ನನಗೆ ದೊರೆಯದಿದ್ದರೆ, ನೀನು ನಾನು ಹೇಳಿದ್ದಕ್ಕೆ ಹೂಂ ಗುಡದಿದ್ದರೆ, ನಿನ್ನ ತಾಳ್ಮೆ ಇರದಿದ್ದರೆ ನಾನು ಮಲಗಿರುವ ಹಾವು ನೆನಪಿರಲಿ , ಕಚ್ಚದಿರಲಾರೆ ಎಂದು ಎಚ್ಚರಿಸುತ್ತಾರೆ. ' ಬಾಳನ್ನು ಮಾಡದಿರು ಬೇಳೆಯಂತೆ ಎನ್ನುವ ಕವಿ ನಾವಿಬ್ಬರೂ ಸೇರಿ ಮಾಡದಿರೋಣ ಬಾಳನ್ನು ಬೇಳೆಯಂತೆ ಎನ್ನುವುದಿಲ್ಲ... ಇಡಿಗಾಳು ಕೂಡಿರಲು ಇಬ್ಬರೂ ಬೇಕು ಎನ್ನುವುದಿಲ್ಲ. ಬಾಳನ್ನು ಹಸನು ಮಾಡುವುದು ಅವಳ ಕೈಯಲ್ಲಿದೆ, ಅವಳು ಎದಿರಡಾದೇ ಇರುವಲ್ಲಿದೆ, ಸುಮ್ಮನೆ ಹೂಂ ಗುಟ್ಟುವುದರಲ್ಲಿದೆ. ಇದು ಬೇಂದ್ರೆಯವರ ಸಖೀ ಭಾವದ ದ್ವಂದ್ವಕ್ಕೆ ಹಿಡಿದ ಸ್ಪಷ್ಟ ಕನ್ನಡಿಯಾಗಿದೆ. ಅವರ ಮೊದುಲ ದೀನತೆಯೂ ಸತ್ಯ, ನಂತರದ ದರ್ಪವೂ ಸತ್ಯ...ಅಲ್ಲಿರುವುದು ದ್ವಂದ್ವ..

ಬರುವುದೇನೆ ನೆಪ್ಪಿಗೆಯಲ್ಲಿ ಕೂಡ ಮೊದಲು ಎದೆಗೆ ಎದೆಯ ಅಪ್ಪಿಗೆ ಎನ್ನುವ ಕವಿ ನಂತರ ಕೂಡಿದೊಂದು ತಪ್ಪಿಗೆ ಎನ್ನುತ್ತಾರೆ, ಆಹಾ ಚೆಲುವ ಎಂದು ಕುಣಿದೆ ಮಿಕ್ಕ ಸಂಜೆ ಮಬ್ಬಿಗೆ ಎನ್ನುತ್ತಾರೆ. ಮಿಕ್ಕ ಸಂಜೆಯ ಮಬ್ಬೆಂದರೆ ಕತ್ತಲಲ್ಲವೇ? ಕತ್ತಲಲ್ಲಿ ಮಾತ್ರ ಚೆಲುವೆಯಾಗಿ ಕಂಡಳೆ ಮನದನ್ನೆ? ಮುಂದೆ ಬರುವ ಸಖೀಗೀತ ಅವರ ದ್ವಂದ್ವ ಭಾವವನ್ನು ಮತ್ತಷ್ಟು ಸ್ಪಷ್ಟವಾಗಿ ತೋರಿಸುತ್ತದೆ. ಹಾಗೆಂದರೆ ಅವರಲ್ಲಿ ಒಲವಿನ ಕೊರತೆ ಇದೆ ಎಂದಲ್ಲ, ಸಖೀ ಭಾವದ ಅನುಷ್ಟಾನದ ಬಗ್ಗೆಯಷ್ಟೇ ಈಗಿರುವ ಪ್ರಶ್ನೆ.. ಅವರ ಒಲವಿನ ಗೆಳೆತನದ ಸಾಲುಗಳು ಹೀಗಿವೆ.
" ನೀನು ದೊಡ್ದವಳಾದೆ ಮೈಸಲಿಗೆ ಬೆಳೆಸಿದೆ ಏಕಾಂತಕೆಳೆಸಿದೆ ಎಲೆ-ಕೆಳದಿಯೇ
ಏನು ಸಂಭ್ರಮವದು! ಹರೆಯದ ಹಬ್ಬವು ಕನಸು ಮನಸೂ ಹೆಣೆದು ಬೆಳೆಬೆಳೆದೆವೇ.

ಹೆರಳಿನ ಮಾಲೆಯು ಕಣ್ಣಿನ ಕಾಡಿಗೆ ತುಟಿಯ ತಂಬುಲ ಉಗುರ ಮದರಂಗಿಯೇ
ಕೊಳಲ ನುಡಿಸುತಿತ್ತು ರಾಗ ಮಿಗುತಲಿತ್ತು ನಿಂತ ನಿಲುವೆಲ್ಲವೂ ತ್ರಿಭಂಗಿಯೇ.

ಕಿವಿಮಾತ ಸೊಗಸೇನು ಆಡಿದ್ದಾಡುವುದೇನು ಹಳೆಸದ ಮುದ್ದಾಟ ಒಸಗುತಿರೆ
ಸವಿ ಬಂತು ಮುನಿಸಿಗೂ, ಕಳೆ ಬಂತು ಕನಸಿಗೂ ಮೋಹದ ಮಾಟವನೆಸಗುತಿರೆ"
ಈ ಒಲವಿನ ಶೃಂಗಾರದ ಆಟದಲ್ಲಿ, ಬೇಟದಲ್ಲಿ ಸಖೀ ಭಾವ ಬಹಳ ಸುಲಭ. ಒಬ್ಬರನ್ನೊಬ್ಬರು ಮೀರುವುದಿಲ್ಲ, ಮತ್ತೊಬ್ಬರನ್ನೊಬ್ಬರು ಧಿಕ್ಕರಿಸುವುದಿಲ್ಲ. ಸಖ್ಯ ಭಾವ ತಂತಾನೇ ಪೊರೆದುಕೊಳ್ಳುತ್ತದೆ. ಇದರ ಸತ್ವ ಪರೀಕ್ಷೆಯಾಗುವುದು ದುರ್ದಿನಗಳಲ್ಲೇ. ಮೋಹನದಾಸನ ಬಿರುಗಾಳಿ ದೇಶದಲ್ಲಷ್ಟೇ ಅಲ್ಲ ಇವರ ಮನೆಯಲ್ಲೂ ಬೀಸಿಬಿಡುತ್ತದೆ. ಇವರು ಬರೆದ ನರಬಲಿ ಪದ್ಯ ಉದ್ಯೋಗವನ್ನೇ ಬಲಿ ಪಡೆಯುತ್ತದೆ. ತಮ್ಮ ಸಂಸಾರ ಪರಾಶ್ರಯದಲ್ಲಿ ಬದುಕಬೇಕಾದ ಸ್ಥಿತಿ. ಸ್ವಾಭಿಮಾನಿ ಬೇಂದ್ರೆಯ ಜೀವನ ರೀತಿಯನ್ನೇ ಬದಲಿಸಿ ಬಿಡುತ್ತದೆ. ಸಂಸಾರವನ್ನು ಪೊರೆಯಲಶಕ್ತರಾದ ಬೇಂದ್ರೆ ಪತ್ನಿಯ ಕಣ್ಣು ತಪ್ಪಿಸಲಾರಂಭಿಸಿದರೇ?

ಪತಿಯ ರೀತಿಯಿಂದ ಕಂಗೆಟ್ಟ ಪತ್ನಿ ಪ್ರಶ್ನಿಸುವ ಪರಿ ನೋಡಿ.
" ನಿಮ್ಮ ಜೀವನ ಧ್ಯೇಯ ಗೌರೀಶಂಕರದಂತೆ ಶಿಖರವನೆತ್ತಿದೆ ಮುಗಿಲಿನೆಡೆ
ನನ್ನೆದೆ ತಿರುಗಿದೆ ಗಂಗೆಯು ಹರಿದಂತೆ ಜನರೀತಿಯಂತೆಯೇ ನೆಲದ ಕಡೆ.

ನಿಮ್ಮೆದೆ ಕರಗಿದರೆ ನನಗೆ ನೀರೆರೆವುದು ಚಳಿಗಾಳಿ ಬಂದಂತೆ ಕಲ್ಲಾಗಲು
ನಾ ತಣ್ಣಗಾಗುತ ನಡುಗುತ ಅಡಗಲು ಓದುವೆ ದಿಗ್ಡೇಶಕೆಲ್ಲಾದರೂ

ನಿಮ್ಮೆದೆ ಎತ್ತರಕೆ ನಾವೇನು ಬಂದೇವು ಕಲಿತವರ ಬೆಡಗಿಲ್ಲ ನಮ್ಮ ಕಡೆ
ನಿಮ್ಮ ಕಣ್ಮುಂದೆಯೇ ಕಣ್ಮುಚ್ಚಿದರೆ ಸಾಕು ಗೆದ್ದೆವು' ಎಂದೆ ನೀ ಕಣ್ಮುಚ್ಚಿಯೇ"
ಇಲ್ಲಿ ಸಖಿಯಾದವಳಿಗೆ ತಾನು ಸಖಿಯೆಂಬ ಭಾವವಿದ್ದಿದ್ದರೆ ಕಣ್ಮುಚ್ಚಿ ಒಂದೇ ಉಸುರಿಗೆ ಹೇಳಬೇಕಾದ ಅವಶ್ಯಕತೆಯೇ ಬರುತ್ತಿರಲಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ಕೇಳಬಹುದಿತ್ತು. ಮುಂದೆ ನೋಡಿ
"ಗೆಳೆಯರ ಕೂಡಾಡಿ ಬಂದಾಗ, ನಾ ನಿಮ್ಮ ಮುಖದಲುಕ್ಕುವ ಗೆಲುವ ಕಂಡಿಲ್ಲವೇ !
ಮನೆ ಬೆಳಕು ಮುಂದಿರೆ ಆ ಕಣ್ಣು ಕುಂದಿರೆ ನಾನೊಳಗೆ ನೊಂದಿರೇ ನೀವರಿಯರೇ.

ಏಕೆಂದು ಸಾಕೆಂದು ಬೇಕೆಂದು ನೂಕೆಂದು ರಮಿಸಾಡಿದಿರಲ್ಲ ನೀವು ನಿಮ್ಮಷ್ಟಕ್ಕೆ
ಗಂಗೆಯ ಕಷ್ಟವು ಗೌರಿಗೆ ತಿಳಿಯದು ಹೆಂಗಸಿನ ಕಷ್ಟವು ಗಂಡಸಿಗೆ.

ಎಂದಿಗೂ ತಿಳಿಯದು ಏತಕೆ ತಿಳಿಯೋದು ದು:ಖವು ನಮ್ಮದು ನಮಗೆ ಇದೆ"
ಇದು ಪತ್ನಿ ಶೋಕಿಸುವ ಪರಿ. ಇಲ್ಲೊಂದು ಅಂಶ ನೆನಪಿಡಲೇ ಬೇಕು, ಸಖೀ ಗೀತವನ್ನು ಬರೆದದ್ದು ಅವರ ಪತ್ನಿಯಲ್ಲ, ಸಾಕ್ಷಾತ್ ಬೇಂದ್ರೆಯೇ. ಅಂದರೆ ಆ ತೊಳಲಾಟಗಳು .... ಸಖಿಯೆಂಬ ಭಾವದ ನಿರ್ವಚನ ಅವರನ್ನೂ ಕಾಡಿತ್ತೆ?  ಸಖಿಯೆಂಬ ಭಾವ ಕರೆಯುವವನಿಗಷ್ಟೆ ಇದ್ದರೆ ಸಾಲದು, ಆ ಸಖಿಯ ಮನದಲ್ಲೂ ತಾನು ಸಖಿಯೆಂಬ ಭಾವದ ಅನಾವರಣವಾಗಬೇಕು . ಅದಾಗದ ತೀವ್ರತೆ ಬೇಂದ್ರೆಯವರನ್ನೂ ತಟ್ಟಿರಬಹುದೇ? ಪರಂಪರಾನುಗತ ಪುರುಷಾಹಾಂಕಾರದ ಶೃಂಖಲೆ ಬೇಂದ್ರೆಯವರಿಂದಲೂ ಬಿಡಿಸಿಕೊಳ್ಳಲಾಗಲಿಲ್ಲವೇ? ಅಥವಾ ಹೆಂಡತಿಯನ್ನು ಸಖಿ ಎಂದು ಕರೆದದ್ದೇ ಆತ್ಮವಂಚನೆಯೇ,  ಎಲ್ಲೂ ಹಾಗೆನ್ನಿಸುವುದಿಲ್ಲ, ಒಂದು ವೇಳೆ ಹೆಂಡತಿಯನ್ನು ದಾಸಿ ಎಂದು ಕರೆಯ ಬೇಕೆನಿಸಿದ್ದರೂ ಹಾಗೆ ಕರೆಯಬಹುದಾಗಿದ್ದ ನಿರ್ಭೀತ ವ್ಯಕ್ತಿತ್ವ , ಮನಸ್ಥಿತಿ ಬೇಂದ್ರೆಗಿತ್ತು. ಇಲ್ಲಿ  ಪ್ರಾಮಾಣಿಕತೆಯ ಕೊರತೆಯೋ, ಒಲವಿನ ಅಭಾವವೋ ಎಂದೂ ನನಗೆ ಕಂಡಿಲ್ಲ. ಪರಂಪರಾನುಗತ ಗಂಡಿನ ಮನೋಭಾವವನ್ನು ಒಂದು ಮಟ್ಟಿಗಷ್ಟೇ ಮೀರಲು ಬೇಂದ್ರೆ ಶಕ್ತರಾದರಾ? ಇಲ್ಲಿ ನನಗೆ ಕಾಣಿಸುತ್ತಿರುವುದು ಅಪ್ಪಟ ದ್ವಂದ್ವ ಮನಸ್ಥಿತಿ.

ಹೆಣ್ಣಿಗೇನು ಬೇಕೆಂದು ಬೇಂದ್ರೆಯವರಿಗೆ ಚೆನ್ನಾಗಿಯೇ ಗೊತ್ತಿತ್ತು, ಹೆಣ್ಣಾಗಿ ಬರೆದ " ನಾನು ಬಡವಿ" ಅದಕ್ಕೊಂದು ಸುಂದರ ಉದಾಹರಣೆ.
" ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು,
ತೋಳುಗಳಿಗೆ ತೋಳ ಬಂಧಿ ಕೆನ್ನೆ ತುಂಬ ಮುತ್ತು.
ಕುಂದುಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು 
ಹೊಟ್ಟೆಗಿತ್ತ ಜೀವ ಫಲವ ತುಟಿಗೆ ಹಾಲುಜೇನು"
ಕಡೆಯ ಸಾಲಿನಲ್ಲಿ ಸಾಕ್ಷಾತ್ ರಸಋಷಿಯೆ ಆಗಿ ವಿಜೃಂಭಿಸಿ ಬಿಡುವ, ಈ ಭಾವಗಳನ್ನು ಇಷ್ಟು ತೀವ್ರವಾಗಿ ಹೇಳಿದ ಕವಿಯನ್ನೂ ಕಾಡುತ್ತಿದ್ದ ಈ ದ್ವಂದ್ವ ಆ ಕಾಲದ ಜನರ ನಡಾವಳಿಗಳಿಂದ ಹುಟ್ಟಿದ್ದಾ? ಹೆಂಡತಿಯನ್ನು ಸಖಿಯೆಂದು ಕರೆಯಬೇಕೆಂಬ , ಸಖಿಯನ್ನಾಗಿಸಿ ಬಾಳ ಸಾಗಿಸುವ ಹಂಬಲ... ಹೆಣ್ಣನ್ನು ಆಳದಿದ್ದರೆ ತಮ್ಮ ಗಂಡುತನದ ಬಗ್ಗೆ ಅಂದಿನ ಸಂಪ್ರದಾಯಸ್ಥ ಸಮಾಜ ತೋರಿಸಬಹುದಿದ್ದ ತಿರಸ್ಕಾರ ಬೇಂದ್ರೆಯವರನ್ನು ಈ ದ್ವಂದ್ವಕ್ಕೆ ದೂಡಿತ್ತಾ?  ಅದೇನೇ ಇದ್ದರೂ ಪತ್ನಿಯನ್ನು ಸಖಿಯೆಂದು ಕರೆಯುವ ಸಂಪ್ರದಾಯಕ್ಕೆ ನಾಂದಿ ಹಾಡಿದವರು ಕನ್ನಡದ ಕಾವ್ಯ ಪರಂಪರೆಯಲ್ಲಿ ಬೇಂದ್ರೆ ಎಂಬುದನ್ನು ಮರೆಯಲಾಗದು.

ಸಂಪ್ರದಾಯ ಬಿಡದ, ಎಲ್ಲೆಯನ್ನು ಮೀರದ, ಹಾಗೆಂದು ಶೃಂಗಾರವನ್ನು ಕಡೆಗಣಿಸಿ ಬರಡು ಬದುಕು ಸಾಗಿಸದ, ಆತ್ಮ ವಂಚನೆ ಮಾಡಿಕೊಳ್ಳದ, ಹಾಗೆಂದು ಯಾರೂ ಕೇಳುವವರಿಲ್ಲವೆಂದು ಸ್ವೈರವೂ ಇಲ್ಲದ ಅಪ್ಪಟ ನಾದಮೂಲದ ಬೇಂದ್ರೆಯವರ ಕಾವ್ಯ ಈ ಎಲ್ಲ ದ್ವಂದ್ವಗಳನ್ನೂ ಮೀರಿ ನನ್ನೆದೆಯಲ್ಲಿ ಭದ್ರವಾಗಿ ಬೇರು ಬಿಟ್ಟಿದೆ....ಯಾವಾಗಲೋ ಒಮ್ಮೊಮ್ಮೆ ಬೇಸತ್ತು ಕುಳಿತಾಗ ಅಲ್ಲೆಲ್ಲೋ ದೂರದಲ್ಲಿ ಬೇಂದ್ರೆ ಹಾಡುತ್ತಿರುತ್ತಾರೆ.
"ಹುಸಿನಗುತ ಬಂದೇವ, ನಸುನಗುತ ಬಾಳೋಣ, ತುಸು ನಗುತ ತೆರಳೋಣ
ಬಡನೂರು ವರುಷಾನ ಹರುಷಾದಿ ಕಳೆಯೋಣ ಯಾಕಾರೆ ಕೆರಳೋಣ"
ನನ್ನ ತುಟಿಯಂಚಿನಲ್ಲಾಗ ನಸುನಗೆ..............

ವೈದೇಹಿ - ನನ್ನ ಓದು

ಎಷ್ಟು ವರ್ಷಗಳಾದವು ವೈದೇಹಿಯನ್ನು ಓದಲಾರಂಭಿಸಿ,ನಲವತ್ತು ದಾಟಿದ ಮೇಲೆ ಸುಮ್ಮನೆ ಲೆಕ್ಕ ಹಾಕುತ್ತಾ ಕುಳಿತಿದ್ದೇನೆ.. ಆಗಿನ್ನೂ ಹದಿಹರೆಯ ಮುಟ್ಟಲೋ ಬೇಡವೋ ಎಂದು ಮೀನಮೇಷ ಎಣಿಸುತ್ತಿತ್ತು. ಎಚ್. ಎಸ್. ಮುಕ್ತಾಯಕ್ಕನವರ ಪದ್ಯಗಳು ಆಗ ದಂಡು ದಂಡಾಗಿ ಪ್ರಕಟವಾಗುತ್ತಿತ್ತು. ಅವರ ಎಗ್ಗುಸಿಗ್ಗಿಲ್ಲದೆ ಎಲ್ಲ ಎಲ್ಲವನ್ನೂ ತೆರೆದಿಡುವ ಪದ್ಯಗಳ ಬಗ್ಗೆ ನನಗೆ ವಿಚಿತ್ರ ಆಕರ್ಷಣೆ. ' ಶಿಶಿರದ ಬೋಳು ಮರವಾದ ಈ ಬದುಕಿಗೆ ವಸಂತವಾಗಿ ನೀ ಸುಳಿದಾಗ ಕೊಂಬೆ ಕೊಂಬೆಗೂ ಹೂಗನಸುಗಳು, ನಕ್ಷತ್ರ ಗೊಂಚಲು'. ಇಂತಹ ಸಾಲುಗಳು ಪೂರ್ತಿ ಅರ್ಥವಾಗದಿದ್ದರೂ ಪದಗಳ ಲಾಲಿತ್ಯವೇ ಓದಿಸಿಕೊಳ್ಳುತ್ತಿತ್ತು. ಇಂತಹ ರೊಮ್ಯಾಂಟಿಕ್ ಮುಕ್ತಾಯಕ್ಕ ಯಾವಾಗ ನನ್ನನ್ನು ತೊರೆದು ವೈದೇಹಿ ಆವರಿಸಿ ಕೊಂಡರೋ ನೆನಪಾಗುತ್ತಿಲ್ಲ. ನರಸಿಂಹ ಸ್ವಾಮಿಯವರ ಗಂಡಿನ ಒಳ್ಳೆಯತನದ ಗುಂಗನ್ನು ನನ್ನೆದೆಯಲ್ಲಿ ಉಳಿಸಿಯೂ ಸ್ತ್ರೀವಾದ ಮೊಳೆಯುವಂತೆ ಮಾಡಿದ್ದು ವೈದೇಹಿ.

ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅವರ ಪದ್ಯಗಳಿಂದಾರಂಭಿಸಿ ನಾನೂ, ನನ್ನ ಸ್ತ್ರೀ ವಾದವೂ, ವೈದೇಹಿಯೂ ಬೆಳೆಯುತ್ತಲೇ ಬಂದಿದ್ದೇವೆ. ಅವರನ್ನು ಓದುತ್ತಾ ನಾನೂ ಮಾಗಿದ್ದೇನೆ, ನನ್ನಂತಹವರಿಗೆ  ಓದಿಸುತ್ತಾ ಅವರೂ. ಸ್ತ್ರೀ ವಾದವೆನ್ನುವುದು ಅವರವರ ಅನುಭವಗಳ ಆಧಾರದ ಮೇಲೆ ರೂಪುಗೊಳ್ಳುತ್ತದೆಂಬ ನನ್ನ ನಂಬಿಕೆ ವೈದೇಹಿ ಕೊಟ್ಟ ನೋಟ. ನಮಗೆ ಬೇಕಿರುವುದು ಸ್ವಾತಂತ್ರ್ಯ, ಸ್ವೇಚ್ಚೆಯಲ್ಲ ಎಂಬ ತತ್ವವನ್ನು ಇಂದಿನ ಎಷ್ಟೋ ಸ್ತ್ರೀ ವಾದಿಗಳು ಅರ್ಥ ಮಾಡಿಕೊಳ್ಳದೆ ಪುರುಷ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವ ಹೊತ್ತಿನಲ್ಲಿ ವೈದೇಹಿ ನನಗೆ ಪ್ರಸ್ತುತವಾಗುತ್ತಾರೆ.

ಇಂದು ನಮಗೆ ನಿಜವಾಗಿಯೂ ಬೇಕಾಗಿರುವುದಾದರೂ ಏನು? ನನ್ನಿಷ್ಟ ಬಂದಂತೆ ನನ್ನ ದೇಹವನ್ನು ಅತ್ಯಾಧುನಿಕವಾಗಿ ಕಾಣುವಂತೆ ಪರಿವರ್ತಿಸಿಕೊಳ್ಳವುದಾ? ಆರ್ಥಿಕ ಸ್ವಾತಂತ್ರ್ಯವಾ? ಸಾಮಾಜಿಕ ಸ್ವಾತಂತ್ರ್ಯವಾ? ಬೌದ್ಧಿಕ ಸ್ವಾತಂತ್ರ್ಯವಾ? ಲೈಂಗಿಕ ಸ್ವಾತಂತ್ರ್ಯವಾ? ಧಾರ್ಮಿಕ ಸ್ವಾತಂತ್ರ್ಯವಾ? ನನಗೆ ಬೇಕಾದ ಸ್ವಾತಂತ್ರ್ಯ ಇವೆಲ್ಲವನ್ನೂ ಒಳಗೊಂಡಿದ್ದು ಮತ್ತು ಇವೆಲ್ಲವನ್ನೂ ಮೀರಿದ್ದು. ನಾನು ಕೇಳುವ ಆರ್ಥಿಕ ಸ್ವಾತಂತ್ರ್ಯ ಹಣಕಾಸಿನ ದುಂದುವೆಚ್ಚವಲ್ಲ, ಹಣಕಾಸಿನ ಸರಿಯಾದ ನಿರ್ವಹಣೆ, ಅದನ್ನು ನಾನೂ ಮಾಡಬಲ್ಲೆ, ನನ್ನಿಂದ ಸಾಧ್ಯ ಎಂಬ ವಿಶ್ವಾಸ ನನ್ನ ಬಗ್ಗೆ ಅವನಿಗಿರಬೇಕು. ನಾನು ಕೇಳುವ ಸಾಮಾಜಿಕ ಸ್ವಾತಂತ್ರ್ಯ ಒಬ್ಬ ಅತ್ಯಾಚಾರವಾದ ಹುಡುಗಿಯ ಬಗ್ಗೆ ಸಮಾಜ ನಡೆದು ಕೊಳ್ಳುವ ರೀತಿಯ ಬದಲಾವಣೆ. ಅವಳನ್ನು ಉದ್ಧರಿಸುತ್ತೇನೆ ಎಂದು ಬರುವ ಗಂಡುಗಳಿಗೆ ಅವಳು ಕೆಟ್ಟೇ ಇಲ್ಲ ಎಂಬುದು ಅರ್ಥವಾಗಬೇಕು. ಅವಳ ಮೇಲಾದ ಖಾಸಗಿ ಧಾಳಿ ಅವಳ ಮೈಮನಸ್ಸನ್ನು ಕುಗ್ಗಿಸಿದ್ದಾಗ ಅದೊಂದು ಅಪಘಾತವಷ್ಟೇ ಧೈರ್ಯ ತುಂಬುವ, ಅನವಶ್ಯಕ ಸಾಂತ್ವಾನ ನೀಡದ ಸ್ವಾತಂತ್ರ್ಯ ನನಗೆ ಬೇಕು. ಗಂಡನ್ನು ಧಿಕ್ಕರಿಸಿ ದೂರೀಕರಿಸಿ ಇದಕ್ಕೆಲ್ಲ ಇವನೇ ಕಾರಣ ಎನ್ನುವ ಸ್ತ್ರೀ ವಾದ ನನಗೆ ಬೇಡ, ನನಗೆ ಬೇಕಾದದ್ದು ಅರ್ಧನಾರೀಶ್ವರ ತತ್ವ. ಒಮ್ಮೆ ನೀ ನನ್ನನ್ನು ಗೆಲ್ಲಬಿಟ್ಟರೆ ನಿನ್ನನ್ನೂ ನಾನು ಸೋಲಲು ಬಿಡುವುದಿಲ್ಲ ಎಂಬ ತತ್ವ ನನ್ನದು. 

ಈ ಹಕ್ಕುಗಳು ...ನಾನು ಕೇಳುವ ಈ ಹಕ್ಕುಗಳೆಂಬ ಹಕ್ಕುಗಳು ನೀ ಕೊಟ್ಟರಷ್ಟೇ ಸಾಲದು, ನಾನು ನನ್ನ ಜವಾಬ್ದಾರಿ, ಹೊಣೆ ಮತ್ತು ಬಾಧ್ಯತೆಗಳನ್ನು ನಿರ್ವಹಿಸಿ ಇವುಗಳನ್ನು ಗಳಿಸಿಕೊಳ್ಳಬೇಕು ಮತ್ತು ಹೀಗೆ ಗಳಿಸಿಕೊಂಡ ಹಕ್ಕುಗಳಷ್ಟೇ ಪ್ರಬಲವಾಗಿ ಉಳಿಯುವುದು ಎಂಬ ಸತ್ಯ ಇಂದಿನ ಸ್ತ್ರೀ ವಾದಿಗಳಿಗೆ ಅರಿವಾಗಬೇಕು. ಹಾಗೆ ಗಳಿಸಿಕೊಳ್ಳದೆ ಬಂದ ಹಕ್ಕು ದಾನಕ್ಕೆ ಬಂದಂತಿದ್ದು ಬಹುಬೇಗ ಶಿಥಿಲವಾಗಿ ಪತನಗೊಳ್ಳುವುದೆಂಬ ಎಚ್ಚರಿಕೆಯೂ ಇರಬೇಕು. ಇದೇ ಕಾರಣಕ್ಕೆ ದೀಪಿಕಾ ಪಡುಕೋಣೆಯ "ಮೈ ಚಾಯ್ಸ್" ಸ್ವೈರವಾಗುತ್ತದೆ. ಅಂತಹ ಹೆಣ್ಣನ್ನು ಸಮಾಜ ಬಹು ಬೇಗ ಮುಗಿಸುತ್ತದೆ. ಅವರಿಗೆ ಸ್ವರಕ್ಷಣೆ, ಪರರಕ್ಷಣೆ ಎರಡೂ ಗೊತ್ತಿರುವುದಿಲ್ಲ. ನಿರ್ವಹಿಸುವ ಶಕ್ತಿಯೂ ಇರುವುದಿಲ್ಲ. ವ್ಯಕ್ತಿ ಮಟ್ಟದಲ್ಲಿ ಬದಲಾವಣೆಯಾಗದೇ ಬರೀ ಸ್ತ್ರೀವಾದಕ್ಕೆ ಕಟ್ಟುಬಿದ್ದರೆ ಏನೂ ಪ್ರಯೋಜನವಿಲ್ಲ. ಅದು ಸ್ತ್ರೀ ವಾದವನ್ನು ಆಳಕ್ಕಿಳಿಸುತ್ತದಯೇ ಹೊರತು ಸ್ತ್ರೀ ವಾದದ ಎತ್ತರವನ್ನು ತಲುಪುವುದೇ ಇಲ್ಲ.

ಈ ಸ್ತ್ರೀವಾದ ನನ್ನಲ್ಲಿ ರೂಪುಗೊಳ್ಳಲು ಬಹುಮಟ್ಟಿಗೆ ಕಾರಣರಾದವರು ವೈದೇಹಿ. ವೈದೇಹಿಯವರ ಪ್ರಖ್ಯಾತ ಕಥೆ ಅಕ್ಕುವಿನ ಕಥೆಯಲ್ಲಿ ಅಕ್ಕು ಅನುಭವಿಸುತ್ತಿರುವ ನೋವುಗಳು ಆಕ್ರೋಶಗಳಾಗಿ ಹೊರಹೊಮ್ಮುತ್ತವೆ. ಕೈಯಲ್ಲಿ ಟುವಾಲು ಹಿಡಿದು ನಡೆಯುವ ಅಕ್ಕು ಗಂಡಾಗ ಬಯಸುತ್ತಾಳಾ ಎಂಬ ಗುಮಾನಿಯನ್ನು ಹುಟ್ಟು ಹಾಕುತ್ತದೆ. ಆದರೆ ಅವಳನ್ನು ಶೋಷಿಸುತ್ತಿರುವವರು ಬರೀ ಪುರುಷರಲ್ಲ, ಸ್ತ್ರೀಯರೂ ಇದ್ದಾರೆ. ದೊಡ್ಡತ್ತೆಯ ನಂಜಿನ ಕುಹಕದ ನುಡಿಗಳು ಸ್ತ್ರೀವಾದದ ಮತ್ತೊಂದು ಮಜಲನ್ನು ತೋರಿಸುತ್ತದೆ. ಅಕ್ಕು ಬಾಣಂತಿಯೆಂದು ನಟಿಸುತ್ತಿದ್ದಾಗ ಎಗ್ಗಿಲ್ಲದೆ ಆಡುವ ಹಡೆ ಮಾತು, ನಂತರ ಅದರ ನೆನಪೇ ಇಲ್ಲದಂತೆ ಮಡಿಯೆಂಬ ತೋರುಗಾಣಿಕೆ ಸ್ತ್ರೀ ವಾದದ ಪೊಳ್ಳುತನದತ್ತ ಬೆಟ್ಟು ಮಾಡುತ್ತದೆ.  ಅಮ್ಮಚ್ಚಿಯೆಂಬ ನೆನಪಿನಲ್ಲಿ ಕೂಡ ಅಮ್ಮಚ್ಚಿ ಪ್ರೀತಿಸಿದವನನ್ನು ಮದುವೆಯಾಗದಿರಲು ವೆಂಕಪ್ಪಯ್ಯನಷ್ಟೇ ಸೀತಮ್ಮ ಸಹ ಕಾರಣಳಾಗುತ್ತಾಳೆ. ತನ್ನ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ವೆಂಕಪ್ಪಯ್ಯನನ್ನು ದೂರ ಮಾಡಿ ಮಗಳನ್ನು ರಕ್ಷಿಸಿ ಕೊಳ್ಳುವ ಯಾವ ಪ್ರಯತ್ನವೂ ಕಥೆಯಲ್ಲಿ ನಮಗೆ ತೋರಿ ಬರುವುದಿಲ್ಲ. ಒಂದು ದಿನದ ಅತ್ಯಾಚಾರವನ್ನೇ ಸಹಿಸದ ಅಮ್ಮಚ್ಚಿ ಅನುದಿನದ ಅತ್ಯಾಚಾರಕ್ಕೆಮದುವೆಯೆಂಬ ಚೌಕಟ್ಟಿನಲ್ಲಿ ತನ್ನನ್ನು ಒಡ್ಡಿಕೊಳ್ಳುವ ಪರಿ ದಿಗಿಲು ಹುಟ್ಟಿಸುತ್ತದೆ. ತಿರುಪತಿಯಿಂದ ಒಬ್ಬಳೇ ವಾಪಸ್ ಬರುವ ಅಮ್ಮಚ್ಚಿಯ ಗಂಡ ಏನಾದ ಎಂಬ ಪ್ರಶ್ನೆಗಿಂತ ಅವಳು ವಾಪಸ್ ಬಂದದ್ದೇ ಓದುಗನಿಗೂ ಹಿತವಾಗಿ ಬಿಡುತ್ತದೆ. ಅವಲಂಬಿತರು ಕಥೆಯ ಶಾರದೆಯ ಕ್ರೌರ್ಯ ನಮ್ಮನ್ನು ನಡುಗಿಸುವ ಹೊತ್ತಿನಲ್ಲೇ ಕ್ರೌಂಚ ಪಕ್ಷಿಯ ವಿಶಾಖ ಬೆನ್ ನಮ್ಮ ಮೈದಡವುತ್ತಾರೆ.  ಸ್ತ್ರೀ ವಾದಕ್ಕಂಟಿಕೊಂಡೂ ಅಂಟದಷ್ಟು ಸೂಕ್ಷ್ಮತೆ, ಕ್ರೌರ್ಯಕ್ಕೆ ಲಿಂಗಬೇಧವಿಲ್ಲವೆಂಬ ಬದ್ದತೆ ಅವರ ಗದ್ಯ, ಪದ್ಯಗಳೆರಡರಲ್ಲಿಯೂ ವ್ಯಕ್ತವಾಗುತ್ತದೆ.

ಅವರ "ಶಿವನ ಮೀಸುವ ಹಾಡು" ಕವನದಲ್ಲಿ ನೋಡಿ ಅಲ್ಲಿ ಗೌರಿ ಶಿವನಿಗೆ ಅಭ್ಯಂಗ ಮಾಡಿಸುತ್ತಾಳೆ. ಪಾದ ಒತ್ತುವ ನೆವದಲ್ಲಿ ಶಿವ ಯಾವ ಬೀದಿಗೆ ಹೋಗಿದ್ದಾನೆಂದುಧೂಳಿನಲ್ಲೆ ಪತ್ತೆ ಹಚ್ಚುವ ಚಾಣಾಕ್ಷೆ. ಮುಗಿಯಿತೇ ಬೇಟೆ ಎಂಬ ಸಣ್ಣ ಕೊಂಕು ನುಡಿಯುತ್ತಾ ಮೂಜಗದಲ್ಲೋಡಾಡಿದ ನಟರಾಜನನ್ನು ಸ್ನಾನಕ್ಕೆ ಕರೆಯುತ್ತಾಳೆ. 
'ಇದೋ ಈ ತಂಬಿಗೆ ನೀರು ಗಂಗೆಯಾವತಾರಕ್ಕೆ
ಇದು ಇಗೋ ಆ ಮಣಿಕರ್ಣಿಕೆಗೆ
ಮಿಂದ ನದಿ ನೆನಪಿಗೆ ಒಂದೊಂದು ಬಿಂದಿಗೆ ನೀರು
ಕಡೆಯದಿಗೊ ನನ್ನ ಅನುದಿನದ ಬಡ ಕನಲು
ಎಂದಾಗ ನೀರೊಳಗೆ ಗೌರಿ ಕಂಬನಿ ಬಿಂದು
ಮಿಸಕ್ಕನೆ ಬೆರೆತು ಬಿಸಿಯಾಗಲು'
ಈಗ ಶಿವ ಅವಳ ಬೆವರುತ್ತಾನೆ. ನಿನ್ನ ಬಿಟ್ಟರೆ ನಾನು ಶುದ್ಧ ಬೈರಾಗಿ ಎಂದು ನಂಬಿಸ ಹೋಗುತ್ತಾನೆ. ಈ ಮಾತಿಗೆ ನಾನೆಷ್ಟನೆಯವಳೋ ನಾರಿ ಎಂದು ಮೃದುವಾಗಿ ಚಿವುಟಿ ಮೀಸುತ್ತಾಳೆ. ಜಾಣೆ ಜಗಳವಾಡುವುದಿಲ್ಲ, ಮಯ್ಯೊರೆಸಿ, ತಂಬಾಲು ಕುಡಿಸಿ ತೊಡೆಮೆತ್ತೆಯ ಮೇಲೆ ಮಲಗಿಸಿ ರೇಶಿಮೆಯ ನುಡಿಯ ಅಡಿಯಲ್ಲಿ ವ್ಯಂಗ್ಯವಾಡುತ್ತಾಳೆ. 'ಶಿವ ಶಿವಾ ಎಲ್ಲ ನದಿಗಳ ನೆನೆದು ಮಲಗು ದೇವ!'

ಮಿಂದು ಮತ್ತೆ ಮಡಿ ನಾರುಟ್ಟ ಶಿವ ಮತ್ತೆ ಹೊರಡುತ್ತಾನೆ. ಎಲ್ಲಿಗೆ ಹೋದರೂ ಇಲ್ಲಿಗೆ ಬಂದೇ ಬರುವನೆಂಬ ಆರ್ದ್ರ ಗರ್ವದ ಹುಡುಗಿ ನಮ್ಮ ಗೌರಿ. ಎಷ್ಟು ಸಹನೆ ಅವಳಿಗೆ. ಆ ಭಾಷೆ, ಒನಪು, ಲಾಲಿತ್ಯ ಎಲ್ಲ ಎಲ್ಲವೂ ತಟ್ಟಿದರೂ ಏನು ಹೇಳ ಹೊರಟಿದ್ದಾರೆ ವೈದೇಹಿ? ಹೆಣ್ನಿರಬೇಕಾದ್ದೇ ಹೀಗೆ ಎಂದಾ? ಶಿವನ ರೀತಿಯನ್ನು ಅವಳು ಒಪ್ಪಿಕೊಂಡಿದ್ದಾಳೆ ಎಂದಾ? ಸೂಚ್ಯವಾಗಿ ಗಂಡಿನ ಮನಸ್ಥಿತಿಯನ್ನೂ, ಜೊತೆಜೊತೆಗೆ ಹೆಣ್ಣಿನ ಪ್ರಶ್ನಿಸಲಾಗದ ಅಸಹಾಯಕತೆಯ ಬಗ್ಗೆ ಹೇಳುತ್ತಿದ್ದಾರಾ? ಪ್ರಶ್ನಿಸಿದರೆ ಜಗಳವಾಡಿದರೆ ಮತ್ತೆಲ್ಲಿ ಬಾರನೋ ಎಂಬ ಸಂಕಟಕ್ಕೆ ಮಿಸುಕಾಡದೆ ತಲ್ಲಣಗಳನ್ನು ಅನಾದಿ ಕಾಲದಿಂದ ನುಂಗುತ್ತಿರುವ ಹೆಣ್ಣುಗಳನ್ನು ಗೌರಿಯೊಂದಿಗೆ ಸಮೀಕರಿಸುತ್ತಿದ್ದಾರಾ?  ಅದಲ್ಲವನ್ನ್ನು ನಿಮ್ಮ ಓದಿಗೆ ಬಿಟ್ಟು ಬಿಡುತ್ತಾರೆ ವೈದೇಹಿ. 

ಪತಿ ಊರು ಸುತ್ತಿ ಬಂದರೂ ಪ್ರಶ್ನಿಸದ ವೈದೇಹಿಯ ಕಾವ್ಯದ ನಾಯಕಿ ತನ್ನ ಚೀಲದ ಒಳಗೆ ಕೈಹಾಕುವ ಗಂಡನ್ನು ಹೇಗೆ ತರಾಟೆಗೆ ತೆಗೆದು ಕೊಳ್ಳುತ್ತಾಳೆ ನೋಡಿ.
" ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು
ಎಂದಿಗೂ ಉಚಿತವಲ್ಲ ಪುರುಷರೇ
ವ್ಯಾನಿಟಿ ಹೆಸರಲ್ಲಿ ಏನೆಲ್ಲ ಇರಬಹುದು 
ಬಯಲು ಮಾಡುವೆ"
ಅಲ್ಲೇನಿದೆ ಎಂದು ಇಣುಕುತ್ತೀಯ ನನ್ನನ್ನೇ ಕೇಳು ಹೇಳುವೆ ಎಂಬ ರೊಚ್ಚು ಅವಳಿಗೆ.  ಕನ್ನಡಿ, ಕಾಡಿಗೆ, ಪೆನ್ನು, ಪೌಡೆರು, ಕ್ಲಿಪ್ಪು, ಸೆಂಟು, ಸೂಜಿ, ದಾರ, ಹುಣಸೆ ಬೀಜ, ಶುಂಟಿ ಪೆಪ್ಪರ್ಮೆಂಟು, ಕಂಫಿಟ್ಟು.   ಹೀಗೆ ಚೀಲದಲ್ಲಿರುವುದೆಲ್ಲವನ್ನು ಪಟ್ಟಿ ಮಾಡುತ್ತಾಳೆ. 

ಅರೆ ಬರೆ ತೆರೆದಿಟ್ಟ ಕವನ ತೆವಳುತ್ತಲಿರಬಹುದು
ಮುಗಿಯಲಾರದ ಕತ್ತಲಲ್ಲಿ
ಒಂದು ಬಿಸುಸುಯ್ಯಲು ಕರವಸ್ತ್ರದಲಿ ಅಡಗಿ 
ಗುಸುಗುಟ್ಟುತಿರಬಹುದು ಗಂಟಲಲ್ಲೇ
ವಿಳಾಸ ಹೊತ್ತಿರುವ ಖಾಲಿ ಲಕೋಟೆಯಲಿ
ಕೆಂಪು ಸೂರ್ಯನ ಚಿತ್ರ ಮಾತ್ರವಿರಬಹುದು.
ಬಂದ ಪತ್ರದ ಉಸಿರು ಒಗಟಾಗಿ ಇರಬಹುದು
ಚಂದದಕ್ಷರದ ಬಂಧದಲ್ಲಿ
ಚಂದದಕ್ಷರ ಸುತ್ತ ನತ್ತು ಮುತ್ತಿನ ಚಿತ್ತು
ಉತ್ಕಂಠ ರಾಗದ ಮುಟ್ಟು ಇರಬಹುದು
ಕರಿ ಮೀಸೆಯಡಿಯಲ್ಲಿ ಮಿರಿಮಿಂಚು ನಗೆಯಲ್ಲಿ
ಹೆಸರಿಲ್ಲ ಫೋಟೋ ಕೂಡ ಇರಬಹುದು.

ಬಾಲ್ಯ ಯೌವ್ವನ ವೃದ್ಧಾಪ್ಯ ನೆರಳುಗಳು
ಸೇರಿಕೊಂಡಿರಬಹುದು ಆ ಕೋಶದಲ್ಲಿ
ಗ್ರಾಹಸ್ಥ ವೇಶ್ಯಾ ಅಭಿಸಾರ ವಾಸನೆಗಳು
ಧರ್ಮ ಲಕ್ಷಣ ಅವಸ್ಥಾಂತರ ವೇಷದಲ್ಲಿ"

ಈ ಸಾಲುಗಳ ತೀವ್ರತೆಯನ್ನು ಗಮನಿಸಿ. ಯಾವ ಭಾವನೆಗಳೂ ನನ್ನಲ್ಲಿರಬಹುದು, ಅದು ನಿನಗಾರ್ಥವಾಗದಿರಬಹುದು ಎಂದು ಸೆಡ್ಡು ಹೊಡೆಯುತ್ತಾರೆ. ಚೀಲದೊಳಗೆ ಮನಸ್ಸಿನ ಲೋಕವನ್ನೂ ನಿಮಗೆಟುಕುವಂತೆ ಇಟ್ಟು ಬಿಡುತ್ತೇವೆಯೇ ನಾವು ಎಂದು ಲೇವಡಿ ಮಾಡುತ್ತಾರೆ. ತಪ್ಪು ಸಮೀಕರಣವನ್ನು ತೂಗದಿರಿ ವ್ಯರ್ಥವಾಗಿ ಕೈ ನೋಯುತ್ತದೆ ಎಂದು ವ್ಯಂಗ್ಯವಾಡುತ್ತಾರೆ.  ಮನಸ್ಸಿನೊಳಗೆ ಇಣುಕದ ನೀವು ಚೀಲದೊಳಗೂ ಇಣುಕದಿರಿ ಎಂದು ಎಚ್ಚರಿಕೆ ನೀಡುತ್ತಾರೆ. 

ಎರಡೂ ಪದ್ಯಗಳಲ್ಲಿರುವ ಸ್ತ್ರೀ ವಾದ ಒಂದರಲ್ಲಿ ಸೂಚ್ಯವಾಗಿ, ಮತ್ತೊಂದರಲ್ಲಿ ವಾಚ್ಯವಾಗಿ ಮನಮುಟ್ಟುತ್ತದೆ. 

ಒಬ್ಬ ಹಿಂದುಸ್ತಾನಿ ಗಾಯಕನಿಗೆ ತನ್ನ ತಾರಸ್ಥಾಯಿ, ಮಂದ್ರದ ಮಿತಿಗಳು ಚೆನ್ನಾಗಿ ತಿಳಿದಿರಬೇಕು. ( ಹಿಂದೂಸ್ತಾನಿಯನ್ನೇ ನಾನೇಕೆ ತೆಗೆದು ಕೊಳ್ಳುತ್ತಿದ್ದೇನೆ ಎಂದರೆ ಅದು ರಾಗ ಪ್ರಧಾನ ಎಂದಷ್ಟೇ)  . ಎಷ್ಟು ಎತ್ತರಕ್ಕೆ ತನ್ನ ಕಂಠವನ್ನು ವಿಸ್ತರಿಸಬಹುದು...ಎಷ್ಟು ತಗ್ಗಿಸಿದರೆ ತನ್ನ ದನಿ ಕೇಳಬಹುದು ..ಇದು ಸ್ಪಷ್ಟವಾಗಿ ಅರಿವಿದ್ದವ ಮಾತ್ರ ಆತ ಜನರನ್ನು ಮುಟ್ಟಬಲ್ಲ. ಹದ ಮೀರಿದೆತ್ತರ ಕೀರಲಾಗಿ ಕರ್ಕಶವಾಗುತ್ತದೆ. ಕೆಳಗಿಳಿಯುವ ಮಂದ್ರ ಕೇಳಿಸದೆ ಹೋಗುವ ಅಪಾಯವನ್ನು ಸೃಷ್ಟಿಸುತ್ತದೆ. ಇವೆರಡೂ ಶತ್ರುಗಳು ಗಾಯಕನನ್ನು ಮುಗಿಸಿಬಿಡುತ್ತವೆ. ಸ್ತ್ರೀ ವಾದವೂ ಅಷ್ಟೇ. ಅದರ ಮಿತಿಗಳ ಅರಿವಿದ್ದಲ್ಲಿ ಮಾತ್ರ ಅದು ಬದುಕುತ್ತದೆ , ಬಾಳುತ್ತದೆ. ಇಲ್ಲವೆಂದರೆ ಸ್ತ್ರೀಯನ್ನೇ ಮುಗಿಸಿಬಿಡುತ್ತವೆ, " ಮೈ ಚಾಯ್ಸ್"ನಂತೆ. 

ವೈದೇಹಿಯವರ ಸಾಹಿತ್ಯದಲ್ಲಿ ಈ ಸ್ತ್ರೀ ವಾದ ತಾನೇರುವ ಎತ್ತರ ತಲುಪದಿರಬಹುದು. ಧ್ವನಿ ಇನ್ನೂ ಸ್ವಲ್ಪ ಏರಿಸಬಹುದಿತ್ತು ಅನ್ನಿಸಲೂ ಬಹುದು. ಅವರ ಮಂದ್ರ ಮಾತ್ರ ಪ್ರತಿ ಸಾಲಿನಲ್ಲೂ ಪ್ರತಿ ಪದದಲ್ಲೂ ಝೇಂಕಾರ ಹೊಮ್ಮಿಸುತ್ತಲೆ ಇರುತ್ತದೆ, ಓದುಗನನ್ನು ಬಿಡದೆ ಕಾಡುತ್ತಲೇ ಇರುತ್ತದೆ.

ಶೂದ್ರತಪಸ್ವಿ - ನನ್ನ ಓದು

ಶೂದ್ರ ತಪಸ್ವಿ - ನನ್ನ ಓದು.
ಶೂದ್ರ ತಪಸ್ವಿ - ಇದು ನಿಸ್ಸಂದೇಹವಾಗಿ ನನ್ನ ಪ್ರಮುಖ ಓದುಗಳಲ್ಲೊಂದು. ಹಾಗೆ ನೋಡಿದರೆ ಈ ಕೃತಿಯ ಬಗ್ಗೆ ಮೊದಮೊದಲು ನೂರು ಅಸಮಾಧಾನಗಳಿದ್ದವು. ಓದಿದ್ದನ್ನು ಮನಸ್ಸು ಒಪ್ಪಿಕೊಳ್ಳಲು ನಿರಾಕರಿಸುತ್ತಿತ್ತು. ಓದು ಕಲಿಸಿದ ತಂದೆಯ ಬಳಿ ಈ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ ಮರು ಓದಿನ ಬಗ್ಗೆ ಸಲಹೆ ಸಿಗುತ್ತಿತ್ತೇ ವಿನಹ ಮತ್ತಾವ ಉತ್ತರವೂ ಸಿಗುತ್ತಿರಲಿಲ್ಲ. ನನ್ನ ನಿಲುವುಗಳ ಬಗ್ಗೆ ಅವರು ಅಸಮಾಧಾನ ಹೊಂದಿದ್ದಾರೆನೋ ಎಂಬ ಅನುಮಾನ ಪದೇ ಪದೇ ನನ್ನನ್ನು ಕಾಡುತ್ತಿತ್ತು. ಆ ಉತ್ತರಗಳನ್ನು ನಾನೇ ಹುಡುಕಿಕೊಳ್ಳಬೇಕೆಂಬುದು ಅವರ ಅಪೇಕ್ಷೆಯಾಗಿತ್ತು ಎಂದು ಈಗ ಅನ್ನಿಸುತ್ತಿದೆ.
ಮೂಲದ ಈ ಪ್ರಸಂಗದ ಬಗ್ಗೆ ಎರಡು ರೀತಿಯ ವಾದಗಳಿವೆ. ಮೊದಲನೆಯದು ಮತ್ತು ಬಹಳ ಪ್ರಮುಖವಾದುದು ಇದನ್ನೊಂದು ಪ್ರಕ್ಷಿಪ್ತ ಭಾಗವೆಂದು ಅನೇಕರು ಪರಿಗಣಿಸಿರುವುದು. ( ಉತ್ತರ ರಾಮಾಯಣವೇ ವಾಲ್ಮೀಕಿ ವಿರಚಿತವಲ್ಲ , ಅಗಸನ ಸೀತೆಯ ಕುರಿತ ನಿಂದನೆ, ಶಂಭೂಕ ವಧೆ ಮುಂತಾದ ಪ್ರಕರಣಗಳು ಇದಕ್ಕೆ ಇಂಬು ಕೊಡುತ್ತವೆ ಎಂಬ ಪ್ರಬಲ ವಾದವೂ ಉಂಟು) ಇದು ಹಲ ಮಟ್ಟಿಗೆ ಒಪ್ಪತಕ್ಕದ್ದು ಕೂಡಾ. ರೂಢಿಯಲ್ಲಿರುವ ಲಭ್ಯ ಜಾನಪದ ಕಥೆಗಳ ಪ್ರಕಾರ ಸ್ವಯಂ ವಾಲ್ಮೀಕಿಗಳೇ ಶೂದ್ರಾತಿಶೂದ್ರರು. ರಾಮ ಎಂಬ ಶಬ್ಧವನ್ನೂ ಉಚ್ಚರಿಸಲು ಬಾರದೇ ಮರಾ,ಮರಾ ಎಂದು ಹೇಳುತ್ತಾ ರಾಮ ಪದದ ಜಪಿಸುವಿಕೆಯಿಂದಲೇ ರಾಮಾಯಣದಂತಹ ಬೃಹತ್ ಗ್ರಂಥ ಬರೆದಂತಹ ವಾಲ್ಮೀಕಿ ಶೂದ್ರಾತಿಶೂದ್ರನಿಂದ ಋಷಿಯಾಗಿ ಪರಿವರ್ತಿತರಾದವರು, ತಮ್ಮ ಋಷ್ಯಾಶ್ರಮದಲ್ಲಿ ಸೀತೆಯನ್ನು ಸಲಹಿದವರು, ಸಮಕಾಲೀನ ಋಷಿಮುನಿಗಳಿಂದ ಗೌರವಿಸಲ್ಪಟ್ಟವರು. ಇಂತಹ ಹಿನ್ನೆಲೆಯುಳ್ಳ ವಾಲ್ಮೀಕಿಯವರು ತಪಸ್ಸು ಮಾಡುತ್ತಿದ್ದವನನ್ನು ಶೂದ್ರನೆಂಬ ಏಕೈಕ ಕಾರಣಕ್ಕೆ ರಾಮನ ಕೈಯಿಂದ ಹತ್ಯೆ ಮಾಡಿಸುತ್ತಾರೆ ಎಂಬ ಕಲ್ಪನೆಯೇ ಹಾಸ್ಯಾಸ್ಪದವಾದುದು. ಉತ್ತರ ರಾಮಾಯಣದ ಪ್ರಕಾರ ವಾಲ್ಮೀಕಿಗಳು ರಾಮನ ಸಮಕಾಲೀನರು. ತ್ರೇತಾಯುಗದಲ್ಲೇ ಜೀವಿಸಿದ್ದವರು. ನಾರದರ ಮಾತುಗಳಲ್ಲಿ ಹೇಳುವುದಾದರೆ
"ತ್ರೇತಾಯುಗೇ ಚ ವರ್ತಂತೇ ಬ್ರಾಹ್ಮಣಾಃ ಕ್ಷತ್ರಿಯಾಶ್ಚ ಯೇ/
ತಪೋ ತಪ್ಯಂತ ತೇ ಸರ್ವೇ ಶಶ್ರೂಷಾಮಪರೇ ಜನಾಃ /
ಸ ಧರ್ಮಃ ಪರಮಸ್ತೇಷಾಂ ವೈಶ್ಯಶೂದ್ರಂ ಸಮಾಗಮತ್/
ಪೂಜಾಂ ಚ ಸರ್ವವರ್ಣಾನಾಂ ಶೂದ್ರಾಶ್ಚಕ್ರುರ್ವಿಶೇಷತಃ/ "
"ತ್ರೇತಾಯುಗದಲ್ಲಿ ಬ್ರಾಹ್ಮಣರೂ, ಕ್ಷತ್ರಿಯರೂ ತಪಸ್ಸನ್ನಾಚರಿಸುತ್ತಿದ್ದರು. ವೈಶ್ಯಶೂದ್ರರು ಶುಶ್ರೂಷಾದಿ ವೃತ್ತಿಯಲ್ಲಿ ನಿರತರಾದರು. ಅದು ಅವರಿಗೆ ಪರಮ ಧರ್ಮವಾಯಿತು. ಶೂದ್ರರು ವಿಶೇಷವಾಗಿ ಇತರ ವರ್ಣದವರನ್ನು ಗೌರವಿಸುತ್ತಿದ್ದರು." ಈ ಮಾತುಗಳನ್ನೇ ಅಂದಿನ ಕಾಲದ ಧರ್ಮವೆಂದು ಒಪ್ಪುವುದಾದರೆ ವಾಲ್ಮೀಕಿಗಳೂ ಅಧರ್ಮಿಗಳೇ. ಅವರ ಆಶ್ರಮವೂ ರಾಮನ ಆಡಳಿತದ ಪರಿಧಿಯಲ್ಲೇ ಇತ್ತಾದ್ದರಿಂದ ಶೂದ್ರಕನಿಗೆ ಸಿಕ್ಕ ಶಿಕ್ಷೆಯೇ ವಾಲ್ಮೀಕಿಗಳಿಗೂ ಸಿಗಬೇಕಿತ್ತು. ಹಾಗಾಗಿ ಶಂಭೂಕ ವಧೆಯನ್ನು ಪ್ರಕ್ಷಿಪ್ತ ಎಂದು ಪರಿಗಣಿಸಬೇಕಾಗುತ್ತದೆ.
ಇತ್ತೀಚೆಗೆ ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಕುರಿತು ಓದುತ್ತಿದ್ದಾಗ ಶಾಂಕರ ದರ್ಶನದಲ್ಲಿ ಮಿಥ್ಯೆಯ ಕುರಿತು ಒಂದು ಪ್ರಸ್ತಾಪ, ಅದನ್ನು ಓದುತ್ತಿದ್ದಂತೇ ಮೈ ರೋಮಾಂಚನವಾಯಿತು. ಅದಕ್ಕೂ ಈ ವಾಲ್ಮೀಕಿ ವಿರಚಿತ ಶಂಭೂಕ ವಧೆಗೂ ಯಾವುದೇ ನೇರ ಸಂಬಂಧವಿಲ್ಲದಿದ್ದಾಗ್ಯೂ ಈ ಶಂಭೂಕ ಎಂಬ ಪದಕ್ಕಿರುವ ಅರ್ಥಸಂಬಂಧದಿಂದ ಇಲ್ಲಿ ಅದನ್ನು ಅನ್ವಯಿಸಿಕೊಳ್ಳಬಹುದೇನೋ ಅನ್ನಿಸಿತು.ಕಪ್ಪೆಚಿಪ್ಪಿಗೆ ಸಂಸ್ಕೃತದಲ್ಲಿ ಶಂಭೂಕ ಎನ್ನುತ್ತಾರೆ. ಒಂದು ಬೆಳದಿಂಗಳ ರಾತ್ರಿಯಲ್ಲಿ ನದಿಯ ತೀರದಲ್ಲಿ ಏಕಾಂತವಾಗಿ ಸಂಚರಿಸುತ್ತಿರುವಾಗ ಕೆಳಗೆ ಬಿದ್ದ ಕಪ್ಪೆಚಿಪ್ಪು (ಶಂಭೂಕ) ಬೆಳ್ಳಿಯಂತೆ ಹೊಳೆಯುತ್ತಿರುತ್ತಾ ಆಕರ್ಶಿಸುವಂತಿರುತ್ತದೆ. ಕೈಗೆತ್ತಿಕೊಳ್ಳುವ ಬಯಕೆ ಮೂಡಿಸುತ್ತದೆ. ಅಥವಾ ಒಂದು ವೇಳೆ ನಿಜವಾದ ಬೆಳ್ಳಿ ಬಿದ್ದಿದ್ದರೂ ಅದನ್ನು ನಾವು ಕಪ್ಪೆಚಿಪ್ಪು ಎಂದು ನಿರ್ಲಕ್ಷಿತವಾಗುವ ಸಾಧ್ಯತೆಯೂ ಉಂಟು. ಇದು ಮಿಥ್ಯೆ. ಮಿಥ್ಯೆಯೆಂದರೆ ಅಸತ್ಯವಲ್ಲ. ಮಿಥ್ಯೆ ಬೇರೆ, ಅಸತ್ ಬೇರೆ. ಅಸತ್ ಎಂದರೆ ಅಸ್ತಿತ್ವದಲ್ಲಿ ಇಲ್ಲದ್ದು. ಮಿಥ್ಯೆಯೆಂದರೆ ಒಂದನ್ನು ಇನ್ನೊಂದಾಗಿ ಭ್ರಮಿಸುವುದು. ಹೀಗೆ ತುಂಬಾ ಶಂಭೂಕಗಳ ಮಧ್ಯದಲ್ಲಿ ಬೆಲೆಬಾಳುವ ರಜತ ಬಿದ್ದಿದ್ದರೂ ಸುತ್ತಲೂ ಶಂಭೂಕಗಳಿರುವುದರಿಂದ ಆ ರಜತಕ್ಕೆ ದೊರಕಬೇಕಾದ ಬೆಲೆ ದಕ್ಕದೇ ಹೋಗಬಹುದು. ಅದನ್ನು ಯಾರೂ ಗಮನಿಸದಿರಬಹುದು. ಅಥವಾ ಹೊಳೆಯುತ್ತಿರುವ ಶಂಭೂಕಗಳ ಆಕರ್ಷಣೆಯಲ್ಲಿ ಅವುಗಳನ್ನೇ ರಜತವೆಂದು ಒಪ್ಪಿಕೊಂಡು ಮೋಸ ಹೋಗಬಹುದು. ಒಬ್ಬರು ಇನ್ನೊಬ್ಬರ ಕಾರ್ಯಕ್ಷೇತ್ರದಲ್ಲಿದ್ದಾಗ ಈ ರೀತಿಯ ಅವಘಡಗಳು ಸಂಭವಿಸುತ್ತವೆ. ಯಾರು ಯಾವ ಕೆಲಸವನ್ನು ಮಾಡತಕ್ಕದ್ದೋ ಅದನ್ನೇ ಮಾಡುವುದು ಒಳಿತು ಎಂದು ಈ ಶಂಭೂಕ ರಜತ ಸಿದ್ಧಾಂತ ಹೇಳುತ್ತದೆ. ಈ ತತ್ವವನ್ನೇ ಅನ್ವಯಿಸಿ ನೋಡುವುದಾದರೆ ಅಲ್ಲಿ ತಪಸ್ಸು ಮಾದುತ್ತಿದ್ದ ಶಂಭೂಕನಿಗೆ (ಜಾತಿಯಾಧಾರಿತವಾಗಲ್ಲದೆ) ಆ ಯೋಗ್ಯತೆ ಇದ್ದಿರಲಾರದು. ತಾನು ಅರ್ಹನಲ್ಲದ ಸ್ಥಾನಕ್ಕೆ ಏರಲು ಆತ ಪ್ರಯತ್ನಿಸುತ್ತಿದ್ದಿರಬಹುದು ಮತ್ತು ಆ ಕಾಲದ ನಿಜವಾದ ಅರ್ಹತೆಯುಳ್ಳ ತಪಸ್ವಿಗಳಿಗೆ ( ಅವರ ಹುಟ್ಟು ಯಾವುದೇ ಜಾತಿಯಲ್ಲಿ ಸಂಭವಿಸಿರಲಿ) ಇಂತಹವರ ಮಧ್ಯೆಬೆಲೆ ಸಿಗಲಾರದೆಂಬ ಕಾರಣಕ್ಕೆ ರಾಮನ ಕೈಯಿಂದ ವಾಲ್ಮೀಕಿಗಳು ಆತನ ಹತ್ಯೆ ಮಾಡಿಸಿರಬಹುದು.
ಆದರೆ ವಾಲ್ಮೀಕಿಗಳೂ ತಪ್ಪು ಮಾಡಬಾರದೆಂದಿಲ್ಲ.. ಆ ಕಾವ್ಯದ ಒಪ್ಪುಗಳೊಟ್ಟಿಗೇ ತಪ್ಪುಗಳನ್ನೂ ಒಪ್ಪಿಕೊಳ್ಳುತ್ತಾ ಆ ತಪ್ಪುಗಳಿಗೆ ಸಮಜಾಯಿಷಿ ನೀಡದೇ ಅವುಗಳನ್ನು ಸ್ವೀಕರಿಸದಿರುವುದು ಸರಿಯಾದ ಕ್ರಮವೆಂಬುದು ಇನ್ನೊಂದು ವಾದ.
ಆದರೆ ಕುವೆಂಪು ಈ ಪ್ರಸಂಗವನ್ನು ಶಂಭೂಕ ವಧೆಯಿಂದ ಶೂದ್ರ ತಪಸ್ವಿಯಾಗಿ ಬದಲಾಯಿಸಿ ಕೊಂಡಿದ್ದಾರೆ... ಹೀಗೆ ಅವರು ಬದಲಾಯಿಸಿಕೊಂಡಿರುವುದು ಬರೀ ಹೆಸರನ್ನಷ್ಟೇ ಅಲ್ಲ, ಇಡೀ ಕಥೆಯನ್ನೇ. ಆಶಯಗಳೇನೇ ಇದ್ದರೂ ಒಂದು ಕೃತಿಯನ್ನು ಅದೂ ಪುರಾಣವನ್ನು ಮೂಲದಿಂದ ಎರವಲು ಪಡೆದಾಗ ಎಷ್ಟರ ಮಟ್ಟಿಗೆ ಅದನ್ನು ಬದಲಾಯಿಸಿಕೊಳ್ಳಬಹುದು? ಏಕೆಂದರೆ ತಪೋನಂದನ ಕೃತಿಯಲ್ಲಿ ಕುವೆಂಪುರವರೇ ಒಂದು ಕಡೆ ಬರೆಯುತ್ತಾರೆ. ' ಪುರಾಣ ಕಥೆಗಳು ಭೂಲೋಕ್ಕೂ ಸ್ವರ್ಗಕ್ಕೂ ನಡುವೆ ನಿರ್ಮಿಸಿದ ಸುವರ್ಣ ಸೇತುವೆಗಳು. ಇವುಗಳನ್ನು ಹೇಗಿದೆಯೋ ಹಾಗೆಯೇ ಆ ಕಾಲದೇಶಕ್ಕನುಗುಣವಾಗಿಯೇ ಇದ್ದಂತೆಯೇ ಓದಬೇಕಲ್ಲದೆ ಘನೀಕೃತ ವಾಸ್ತವಕ್ಕಿಳಿಸಿ ನೋಡಲಾಗದು ' ಮತ್ತೊಂದು ಕಡೆ ಮಾಸ್ತಿಯವರಿಗೆ ಕೊಟ್ಟ ಉತ್ತರದಲ್ಲಿ ಅವರು 'ಹಳೆಯ ಕಥೆಯನ್ನು ಹೊಸ ಸಾಹಿತಿ ತನ್ನ ಕೃತಿಗೆ ತನ್ನಿಷ್ಟದಂತೆ ಉಪಯೋಗಿಸಿಕೊಳ್ಳುವ ಪದ್ಧತಿಯೂ ಮಹಾಕವಿ ಸಂಪ್ರದಾಯ ಸಿದ್ಧವಾದುದು. ಪುರಾಣದಲ್ಲಿ ಬದಲಾವಣೆಯನ್ನು ಮಹಾಕವಿಗಳೆಲ್ಲರೂ ಮಾಡಿಕೊಂಡಿದ್ದಾರೆ. " ಸತ್ಸಂಗಜಾನಿ ನಿಧನಾನ್ಯಪಿ ತಾರಯಂತಿ". ಮಹಾಕವಿಗಳೊಟ್ಟಿಗಿನ ತಪ್ಪು ಒಪ್ಪು ನನಗೆ ಎಂದು'. ಒಂದು ಮಟ್ಟಿಗೆ ಈ ವಾದವನ್ನು ಒಪ್ಪಿಕೊಳ್ಳಬಹುದು. ಈ ಎರಡೂ ಹೇಳಿಕೆಗಳಲ್ಲಿ ಮೇಲ್ನೋಟಕ್ಕೇ ವಿರೋಧಾಭಾಸ ಎದ್ದು ತೋರುತ್ತದೆ.
ಕೃತಿಯನ್ನು ನೇಯುವಾಗ ಪಂಪ, ರನ್ನ ಕೂಡಾ ಬದಲಾಯಿಸಿಕೊಂಡವರೇ. ಪಂಪನ ಭಾರತದಲ್ಲಿ ಧರ್ಮರಾಯನ ಬದಲಾಗಿ ಅರ್ಜುನನಿಗೆ ಪಟ್ಟವಾಗುತ್ತದೆ, ಅವನೊಡನೆ ಪಟ್ಟವೇರುವವಳು ದ್ರೌಪದಿಯಲ್ಲ, ಸುಭದ್ರೆ.,ಅಲ್ಲಿ ನಾಯಕ ಅರ್ಜುನ. ರನ್ನನ ಗದಾ ಯುದ್ಧದಲ್ಲಿ ನಾಯಕ ಭೀಮ. ಸಮರ ನಡೆದ ನಂತರ ಪಟ್ಟವಾಗುವುದು ಭೀಮನಿಗೆ. ಇಂತಹಾ ಬದಲಾವಣೆಗಳು ಪ್ರಮುಖವೆನಿಸುವುದಿಲ್ಲ. ಇವುಗಳಿಂದ ಕಥೆಯ ಆಶಯಕ್ಕೆ ಯಾವ ಧಕ್ಕೆಯೂ ಇಲ್ಲ. ನಿಜವಾಗಿಯೂ ಕಥೆಯನ್ನು ಬದಲಾಯಿಸಿ ಕೊಳ್ಳುವುದು ಎಂದ ಕೂಡಲೇ ನೆನಪಾಗುವವನು, ಬದಲಾಯಿಸಿಕೊಂಡವನು ಭಾಸ. ಭಾಸ ತನ್ನ ಹದಿಮೂರೂ ನಾಟಕಗಳನ್ನೂ ಪುರಾಣದಿಂದಲೇ ಎತ್ತಿಕೊಳ್ಳುತ್ತಾನೆ, ಅವೆಲ್ಲವನ್ನೂ ತನಗೆ ಬೇಕಾದಂತೆಯೇ ತಿರುಚಿದ್ದಾನೆ. ಇದು ಎಷ್ಟರಮಟ್ಟಿಗೆಂದರೆ ಅವನ "ಪಂಚ ರಾತ್ರಂ" ನಾಟಕ ಮಹಾಭಾರತದ ಕಥೆಯನ್ನಾಧರಿಸಿದ್ದರೂ ಅಲ್ಲಿ ಯುದ್ಧವೇ ನಡೆಯುವುದಿಲ್ಲ. ಆ ಐದು ರಾತ್ರಿಗಳಲ್ಲಿ ನಡೆವ ಕಥೆಯಲ್ಲಿ ದುರ್ಯೋಧನ ಪಾಂಡವರಿಗೆ ಅರ್ಧ ರಾಜ್ಯವನ್ನು ಯುದ್ಧವಿಲ್ಲದೇ ಕೊಟ್ಟುಬಿಡುತ್ತಾನೆ. ಕೌರವರು ಮತ್ತು ಪಾಂಡವರೀರ್ವರೂ ತಮ್ಮ ತಮ್ಮ ರಾಜ್ಯಗಳನ್ನು ಧರ್ಮದಿಂದ ಆಳುತ್ತಾ ಸುಖವಾಗಿದ್ದರು ಎಂಬಲ್ಲಿಗೆ ಭಾಸೋ ಹಾಸಃ ಎಂಬ ಮಾತನ್ನು ಸಾರ್ಥಕ ಮಾಡಿಕೊಂಡಿದ್ದಾನೆ. ಭಾಸನ ನಾಟಕಗಳ ಹಿನ್ನೆಲೆಯಲ್ಲಿ ನೋಡಿದರೆ ಮಹಾಭಾರತದಲ್ಲಿ ಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧಿಸಲು ಅವಕಾಶವೇ ಲಭಿಸುವುದಿಲ್ಲ, ಅರ್ಜುನ ಯುದ್ಧವನ್ನೂ ಮಾಡುವುದಿಲ್ಲ, ದ್ರೋಣನನ್ನು ಕೊಲ್ಲುವ ಸಲುವಾಗಿಯೇ ಹುಟ್ಟಿ ಬಂದ ದೃಷ್ಟದ್ಯುಮ್ನ, ಡಂಭಾಸುರನೆಂಬ ಕರ್ಣನ ಹೆಸರಿನಲ್ಲಿ ಹುಟ್ಟಿಬಂದ ರಾಕ್ಷಸನನ್ನು ಕೊಲ್ಲುವ ಸಲುವಾಗಿ ಸಹಸ್ರ ವರ್ಷ ತಪಸ್ಸು ಮಾಡಿ ಅವತಾರವೆತ್ತಿದ ನರ (ಅರ್ಜುನ), ಭೀಷ್ಮನನ್ನು ಹಣಿಯಲೆಂದೇ ದೇಹತ್ಯಾಗ ಮಾಡಿ ಶಿಖಂಡಿಯಾಗಿ ಹುಟ್ಟಿದ ಅಂಬೆ......... ಇವರುಗಳಿಗೆ ಕೆಲಸವೇ ಇಲ್ಲ. ಭೀಷ್ಮ ಶರಶಯ್ಯೆಯಲ್ಲಿ ಮಲಗುವುದಿಲ್ಲ, ಧರ್ಮರಾಯ ಸುಳ್ಳು ಹೇಳುವುದಿಲ್ಲ...
ಭಾಸನ ಪ್ರತಿಮಾ ನಾಟಕದಲ್ಲೂ ಕೈಕೇಯಿಯನ್ನು ಅದೆಷ್ಟು ಉದಾತ್ತವಾಗಿ ಚಿತ್ರಿಸುತ್ತಾನೆಂದರೆ ಹೀಗೇ ಮೂಲ ಪಾತ್ರಗಳೂ ಇರಬಾರದಿತ್ತೇ ಎಂದು ಹಂಬಲಿಸುವಷ್ಟು ತೀವ್ರವಾಗಿ. ಭಾಸನಿಗೂ ಬದಲಿಸಲಾಗದ ಪಾತ್ರಗಳೆಂದರೆ ಶಕುನಿ, ಮಂಥರೆ ಮಾತ್ರ. ಈ ಬದಲಾವಣೆಗಳು ಬಹಳ ದೊಡ್ಡ ಮಟ್ಟದ ಬದಲಾವಣೆಗಳೇ ಆಗಿದ್ದರೂ ಒಂದು ವಿಷಯ ಅತ್ಯಂತ ಅವಶ್ಯವಾಗಿ ನೆನಪಿನಲ್ಲಿಡಲೇ ಬೇಕು, ಇವೆಲ್ಲವನ್ನೂ ಆತ ನಾಟಕದ ಉದಾತ್ತೀಕರಣಕ್ಕಾಗಿ ಮಾಡಿಕೊಂಡಿದ್ದಾನೆ. ಭಾಸ ಯಾರನ್ನೂ ತಪ್ಪಿತಸ್ಥರನ್ನಾಗಿ ಮಾಡಲಾರ, ಯಾರನ್ನೂ ನೋಯಿಸಲಾರ.. ಪ್ರತೀ ಪಾತ್ರವೂ ಭಾಸನ ಕೈಯಲ್ಲಿ ತನ್ನ ಔನ್ನತ್ಯವನ್ನು ತಲುಪುತ್ತದೆ, ಓದುಗರಲ್ಲಿ ನವಿರು ಭಾವನೆಗಳನ್ನೂ, ಸಜ್ಜನಿಕೆಯನ್ನೂ ಉದ್ದೀಪಿಸುತ್ತದೆ. ಓದುತ್ತಿದ್ದಾಗ ಪ್ರಪಂಚ ಸುಂದರವಾಗಿ, ಸುಭಿಕ್ಷವಾಗಿ, ಎಲ್ಲರೂ ಕುಟಿಲರಹಿತರಾಗಿ ಗೋಚರಿಸುವುದರೊಂದಿಗೆ ಭಾಸೋ ಹಾಸಃ ..... ಬದಲಾವಣೆಯ ಹಿಂದಿನ ಅವನ ಉದ್ದೇಶ ಸ್ಪಷ್ಟವಾಗುತ್ತದೆ.
ಕುವೆಂಪುರವರೂ ಭಾಸನಂತೆಯೇ ತಮ್ಮೆಲ್ಲ ನಾಟಕಗಳ ವಸ್ತುಗಳನ್ನೂ ಪುರಾಣದಿಂದಲೇ ಎತ್ತಿಕೊಳ್ಳುತ್ತಾರೆ. ಬೆರಳ್ ಗೆ ಕೊರಳ್, ಯಮನ ಸೋಲು, ಸ್ಮಶಾನ ಕುರುಕ್ಷೇತ್ರಂ, ವಾಲ್ಮೀಕಿಯ ಭಾಗ್ಯ... ಇವೆಲ್ಲವುಗಳನ್ನೂ ಅನೇಕ ಬದಲಾವಣೆಗಳ ಸಹಿತವಾಗಿ. ಶೂದ್ರ ತಪಸ್ವಿಯನ್ನು ಅವರು ಉತ್ತರ ರಾಮಾಯಣದಿಂದ ಆರಿಸಿಕೊಳ್ಳುತ್ತಾರೆ. ವಿಭಿನ್ನ ದೃಷ್ಟಿಕೋನದಿಂದ ಈ ಕಥೆಯನ್ನು ಹೇಳಹೊರಡುವ ಅವರು ಬಹಳ ಪ್ರಮುಖ ಬದಲಾವಣೆಗಳನ್ನೇ ಮಾಡಿಕೊಂಡಿದ್ದಾರೆ.
ಮೊದಲನೆಯದಾಗಿ ಮೂಲ ಉತ್ತರ ರಾಮಾಯಣದಲ್ಲಿ ಬ್ರಾಹ್ಮಣನಿಗೆ ಎಲ್ಲೋ ಇದ್ದ ಶಂಭೂಕನ ತಪಸ್ಸಿನ ಕುರಿತು ಅರಿವಿರುವುದಿಲ್ಲ. ತನ್ನ ಮಗ ಸತ್ತಿದ್ದಾನೆ, ಅದಕ್ಕೆ ಕಾರಣ ಅವನಿಗೆ ಬೇಕಿಲ್ಲ, ಪರಿಹಾರ ಬೇಕಿದೆ. ತನ್ನ ಮಗ ಮರಳಿ ಬರಬೇಕಿದೆ, ತಾನು ಧರ್ಮವನ್ನೇ ಪಾಲಿಸುತ್ತಿರುವುದರಿಂದ ಈ ಅಕಾಲ ಮರಣ ತನ್ನದೋ, ತನ್ನ ಮಗನ ತಪ್ಪಿನಿಂದ ಸಂಭವಿಸಿದ್ದೋ ಅಲ್ಲ. ಇದಾದದ್ದು ರಾಜ್ಯದಲ್ಲಿ ಸಂಭವಿಸಿರಬಹುದಾದ ಯಾವುದೋ ಒಂದು ಅಧರ್ಮ ಕಾರ್ಯದಿಂದ ಹಾಗೂ ಆ ಅಧರ್ಮ ಕಾರ್ಯವನ್ನು ತಡೆಗಟ್ಟಲಾರದ ರಾಜನ ತಪ್ಪಿನಿಂದ. ಹೀಗಾಗಿ ಅವನು ಆರ್ತನಾಗಿ ರಾಜನಲ್ಲಿಗೆ ಬಂದಿದ್ದಾನೆ, ಪರಿಹಾರ ಕೇಳುತ್ತಿದ್ದಾನೆ. ಶೂದ್ರತಪಸ್ವಿಯಲ್ಲಿ ಹಾಗಿಲ್ಲ, ಇಲ್ಲಿ ಬ್ರಾಹ್ಮಣನಿಗೆ ತನ್ನ ಮಗನ ಸಾವಿನ ಕಾರಣ ಸ್ಪಷ್ಟವಾಗಿ ತಿಳಿದಿದೆ. ಶೂದ್ರನೊಬ್ಬ ತಪಸ್ಸನ್ನು ಆಚರಿಸುತ್ತಿರುವುದೇ ಅಧರ್ಮವೆಂಬಂತೆ. ಅವನ ಆಶ್ರಮದೊಳಗೆ ಕಾಲಿಟ್ಟಿದ್ದೇ ಪರಮ ಪಾಪವೆಂಬಂತೆ.ಬ್ರಾಹ್ಮಣನನ್ನು ಅವರು ಚಿತ್ರಿಸಿರುವ ರೀತಿ ನೋಡಿ,
ಅಲ್ಲಿ ರಾಮನು ಬ್ರಾಹ್ಮಣನನ್ನು ಕೇಳುತ್ತಾನೆ
"ನಮಸ್ಕಾರಂಗೆಯ್ದಿರೇನ್?"
ಬ್ರಾಹ್ಮಣನ ಉತ್ತರ ನೋಡಿ.
" ಶಿವ ಶಿವ ಶಿವ !
ಅಂತಪ್ಪ ಘೋರಮಂ ನಾವೆಸಗಿದೆವಲ್ತು.
ಅರಿಯದಾ ಕುವರಂ ಕೈಮುಗಿಯಲಿರ್ದನ್;
'ಮಾಣ್, ಶೂದ್ರಂಗೆ ತುಳಿಲ್ ಗೆಯ್ಯಲಾಗ !'
ಎಂದಾಂ ಬುದ್ಧಿಯಂ ತಿದ್ದಿ ತಡೆದನ್."
ಆಗ " ಎಂತಾದೊಡೆಂ ತಾವು ವೇದಮೂರ್ತಿಗಳಲ್ತೆ" ಎಂಬ ಶ್ರೀರಾಮನ ವ್ಯಂಗ್ಯ ಕೂಡಾ ಬ್ರಾಹ್ಮಣನಿಗೆ ಅರಿವಾಗುವುದಿಲ್ಲ. ಹೀಗೆ ಪರಿಚಯಿಸುತ್ತಾರೆ ಓದುಗರಿಗೆ ಬ್ರಾಹ್ಮಣನ ಮನಸ್ಥಿತಿಯನ್ನು
ಎರಡನೆಯದು ಮೂಲದಲ್ಲಿ ರಾಮ ತನ್ನ ಆಳ್ವಿಕೆಯಲ್ಲಿ ಸಂಭವಿಸಿದ ಅಧರ್ಮದ ಬಗ್ಗೆ ತಿಳಿಯುವುದು ಋಷಿ ಮುನಿಗಳಿಂದ. ಅವನು ಕರೆಸುವ ಮುನಿಗಳ ಪಟ್ಟಿ ನೋಡಿ ವಶಿಷ್ಟ, ಮಾರ್ಕಂಡೇಯ, ಮೌದ್ಗಲ್ಯ, ವಾಮದೇವ, ಕಶ್ಯಪ, ಕಾತ್ಯಾಯನ, ಜಾಬಾಲಿ, ಗೌತಮ ಮತ್ತು ನಾರದರು. ಇವರಲ್ಲಿ ತನ್ನ ಆಳ್ವಿಕೆಯಲ್ಲಿ ನಡೆದಿರಬಹುದಾದ ಅಧರ್ಮದ ಬಗ್ಗೆ ಪ್ರಶ್ನಿಸಿದಾಗ ಶಂಭೂಕನ ಕುರಿತು, ಅವನು ಆಚರಿಸುತ್ತಿರುವ ಅಧಾರ್ಮಿಕ ತಪಸ್ಸಿನ ಕುರಿತು ವಿವರಿಸುವವರು ನಾರದರು. ಶೂದ್ರನೊಬ್ಬ ತಪಸ್ಸು ಮಾಡಲು ತ್ರೇತಾಯುಗದಲ್ಲಿ ಅನರ್ಹ, ಈ ದುಷ್ಕೃತ್ಯವನ್ನು ನಿವಾರಿಸುವುದು ಅನಿವಾರ್ಯ ಮತ್ತು ಅದು ರಾಜನಾದವನ ಕರ್ತವ್ಯ ಕೂಡ. ಹೀಗೆ ಹೇಳುತ್ತಾ ರಾಮನನ್ನು ಶಂಭೂಕ ವಧೆಗೆ ಪ್ರಚೋದಿಸುವ ಕೆಲಸವನ್ನು ನಾರದರು ಮಾಡುತ್ತಾರೆ.
"ಅಧೀತಸ್ಯ ಚ ತಪ್ತಸ್ಯ ಕರ್ಮಣಃ ಸುಕೃತಸ್ಯ ಚ /
ಷಷ್ಠಂ ಭಜತಿ ಭಾಗಂ ತು ಪ್ರಜಾ ಧರ್ಮೇಣ ಪಾಲಯನ್//
ಷಡ್ಭಾಗಸ್ಯ ನ ಭೋಕ್ತಾಸೌ ರಕ್ಷತೇ ನ ಪ್ರಜಾಃ ಕಥಮ್/
ಸ ತ್ವಂ ಪುರುಷಶಾರ್ದೂಲ ಮಾರ್ಗಸ್ವ ವಿಷಯಂ ಸ್ವಕಮ್//
ಹೇಗೆ ಪ್ರಚೋದಿಸುತ್ತಾರೆ ನೋಡಿ. ರಾಜನು ಧರ್ಮದಿಂದ ಪ್ರಜೆಗಳನ್ನು ಪಾಲಿಸುತ್ತಿದ್ದರೆ ದೇಶದಲ್ಲಿ ನಡೆಯುವ ವೇದಾಧ್ಯಯನ, ತಪಸ್ಸು, ಪುಣ್ಯ ಕಾರ್ಯ ಇವುಗಳ ಆರನೆಯ ಒಂದಂಶವು ರಾಜನಿಗೆ ಸೇರುತ್ತದೆ ಎಂಬ ಮಾತಿನ ಜೊತೆಗೇ ಹೀಗೆ ಆರನೆಯ ಒಂದು ಭಾಗವನ್ನು ಹಕ್ಕಿನಂತೆ ಪಡೆಯುವ ರಾಜ ತನ್ನ ಪ್ರಜೆಗಳನ್ನು ರಕ್ಷಿಸುವುದಿಲ್ಲವೆಂದರೇನು ಎಂಬ ಧರ್ಮಸೂಕ್ಷ್ಮವನ್ನು ಮುಂದಿಡುತ್ತಾರೆ.
ಕುವೆಂಪು ತಮ್ಮ ನಾಟಕದಲ್ಲಿ ಈ ಪ್ರಸಂಗದ ಪ್ರಧಾನ ಪಾತ್ರಧಾರಿ ನಾರದರನ್ನೇ ಕೈ ಬಿಡುತ್ತಾರೆ. ಅಲ್ಲಿ ಈ ಯಾವ ಮುನಿಗಳ ಪ್ರಸ್ತಾಪವೂ ಬರುವುದಿಲ್ಲ. ತನ್ನ ಮಗನನ್ನು ಕಳೆದುಕೊಂಡ ಬ್ರಾಹ್ಮಣನೇ ಸ್ವತಃ ವಕೀಲನಾಗಿ ಬಿಡುತ್ತಾನೆ. ಅಧರ್ಮವೆಲ್ಲಿದೆ ಎಂದು ತಿಳಿಸುತ್ತಾನೆ, ತನ್ನ ಕರ್ತವ್ಯವನ್ನು ನಿರ್ವಹಿಸುವಂತೆ ರಾಜನಿಗೆ ಬೋಧಿಸುತ್ತಾನೆ. ರಾಮನಿಗೆ ಅಧರ್ಮವೆಲ್ಲಿದೆ ತಿಳಿಸಿಹೇಳುತ್ತಾನೆ. ಮಗನ ಸಾವಿಗೆ ಕಾರಣ ಶೂದ್ರನಿಗೆ ನಮಸ್ಕರಿಸಿದ್ದೇ ಎಂಬ ರಾಮನ ವ್ಯಂಗ್ಯಕ್ಕೆ ಬ್ರಾಹ್ಮಣ ಕೊಡುವ ಉತ್ತರ,
" ಅಲ್ತಲ್ತು, ರಾಮಚಂದ್ರ,
ಶೂದ್ರನ್ ತಪಂಗೆಯ್ವೊಂದು ಅಧರ್ಮಕ್ಕೆ,
ವರ್ಣಾಶ್ರಮ ಧರ್ಮದುಲ್ಲಂಘನೆಯ ಪಾಪಕ್ಕೆ
ನಿನ್ನ ಬಾಲಪ್ರಜೆಯೋರ್ವನ್ ಬಲಿಯಾದನ್-
ಮುಂದಾವ ಮಹತ್ಕಾರ್ಯಮಂ ಗೆಯ್ಯಲಿರ್ದನೋ?
ಆವ ಶಾಸ್ತ್ರವನೊರೆಯಲಿರ್ದನೋ?
ಆವ ಕಬ್ಬಮಂ ಕಟ್ಟಲಿರ್ದನೋ?
ಆವ ತಪದಿಂದಾವ ಸಿದ್ಧಿಯ ಪಡೆಯಲಿರ್ದನೋ?
ಆ ಪ್ರಜೆ ಶೂದ್ರನ ತಪೋದುಷ್ಕೃತಿಗೆ ಬೇಳ್ವೆಯಾದನ್!
ಪಾವಗಿದು ತೀರ್ದನ್ ! "
ಹೀಗೆ ರಾಮನಿಗೆ ಶೂದ್ರನ ತಪ್ಪನ್ನು ಮನವರಿಕೆ ಮಾಡಿಕೊಡಲೆತ್ನಿಸುತ್ತಾನೆ. ಶಾಸ್ತ್ರವನ್ನು ಪೊರೆಯುವುದೇ ಜೀವನದ ಪರಮೋದ್ದೇಶವೆಂಬಂತೆ.
ಮೂರನೆಯದು ವಾಲ್ಮೀಕಿ ರಾಮಾಯಣದಲ್ಲಿ ಶೈವಲವೆಂಬ ಪರ್ವತದ ಉತ್ತರ ಪಾರ್ಶ್ವದಲ್ಲಿ ಒಂದು ದೊಡ್ಡ ಸರಸ್ಸಿನ ತೀರದಲ್ಲಿ ಶಂಭೂಕ ತಲೆಕೆಳಗಾಗಿ ತಪಸ್ಸು ಮಾಡುತ್ತಿರುತ್ತಾನೆ. ರಾಮನು ಅವನನ್ನು ಅವನ ಜಾತಿಯ ಕುರಿತು ಪ್ರಶ್ನಿಸಿದಾಗ ತಾನು ಶೂದ್ರಯೋನಿಯಲ್ಲಿ ಜನಿಸಿರುವುದಾಗಿಯೂ, ಸಶರೀರ ಸಹಿತನಾಗಿ ದೇವತ್ವವನ್ನು ಬಯಸುತ್ತಿದ್ದೇನೆ ಎನ್ನುತ್ತಿದ್ದಂತೆಯೇ ಮುಂದೇನೂ ಕೇಳಿಸಿಕೊಳ್ಳಲು ಬಯಸದ ರಾಮ ಖಡ್ಗದಿಂದ ಅವನ ಶಿರಚ್ಛ್ಹೇಧ ಮಾಡುತ್ತಾನೆ. ದೇವತೆಗಳು ಸಾಧು ಸಾಧು ಎಂದು ಕೊಂಡಾಡುತ್ತಾರೆ.
ಶೂದ್ರತಪಸ್ವಿಯಲ್ಲಿ ರಾಮನಿಗೆ ತಪಸ್ವಿಯ ಹುಟ್ಟಿನ ಕುರಿತು ಖಚಿತ ತಿಳಿವಿದೆ, ಆತನ ಬಗ್ಗೆ ಅಸೀಮ ಗೌರವವೂ ಇದೆ. ಶಂಭೂಕ ತಪೋನಿರತನೇ ಆಗಿ ವಲ್ಮಿಕದೊಳಗೇ ಇರುತ್ತಾನೆ. ರಾಮ ಅವನನ್ನು ಖಡ್ಗದಿಂದ ಸಂಹರಿಸ ಹೊರಡುವುದಿಲ್ಲ, ಬದಲಾಗಿ ಬ್ರಾಹ್ಮಣನ ಅಣತಿಯಂತೇ ಬ್ರಹ್ಮ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ಅದು ಶಂಭೂಕನನ್ನು ಮುಟ್ಟದೇ ಹಿಂತಿರುಗಿ ಬ್ರಾಹ್ಮಣನನ್ನೇ ಬೆನ್ನತ್ತುತ್ತದೆ. ಬ್ರಾಹ್ಮಣನು ರಾಮನ ಅಪ್ಪಣೆಯ ಮೇರೆಗೆ ಶಂಭೂಕನಿಗೆ ಶರಣಾಗುತ್ತಾನೆ. ಪ್ರಕೃತಿ ಸಂಭ್ರಮಿಸುತ್ತದೆ.
ಉತ್ತರ ರಾಮಾಯಣದಲ್ಲಿ ಬರುವ ಈ ಪ್ರಸಂಗ ಕುವೆಂಪು ಶೂದ್ರ ತಪಸ್ವಿಯಲ್ಲಿ ಸಂಪೂರ್ಣ ಬದಲಾಗಿಬಿಡುತ್ತದೆ. ಹೀಗೆ ಆರಂಭದಿಂದ ಮುಕ್ತಾಯದವರೆಗೂ ಬದಲಾವಣೆಗಳ ಸರಮಾಲೆಯನ್ನೇ ಹೊತ್ತು, ಆ ಕಥೆಯ ಆಶಯವನ್ನೂ ಬದಲಾಯಿಸಿಕೊಂಡ ಹಾಗೂ ಪ್ರಮುಖವಾಗಿ ನಾರದರ ಪಾತ್ರದ ಕಣ್ಮರೆಯ ಉದ್ದೇಶದ ಬಗ್ಗೆ ಅನುಮಾನ ಮೂಡುತ್ತದೆ. ಮೂಲ ರಾಮಾಯಣದಲ್ಲಿ ಮಗನನ್ನು ಕಳೆದುಕೊಂಡು ಆರ್ತನಾಗಿ ರೋಧಿಸುವ ಬ್ರಾಹ್ಮಣನ ಮೇಲೆ ಮೂಡುವ ಕರುಣೆ ಶೂದ್ರತಪಸ್ವಿಯ ಬ್ರಾಹ್ಮಣನ ಮೇಲೆ ಮೂಡುವುದಿಲ್ಲ. ನಾರದರ ಪಾತ್ರದ ಕೆಲಸವನ್ನೂ ಬ್ರಾಹ್ಮಣನ ಪಾತ್ರವೇ ನಿರ್ವಹಿಸುವುದರಿಂದ ಇಲ್ಲಿ ಬ್ರಾಹ್ಮಣನ ಬಗ್ಗೆ ತಿರಸ್ಕಾರವೇ ಮೂಡುತ್ತದೆ ಅಥವಾ ತಿರಸ್ಕಾರ ಮೂಡಿಸಲೆಂದೇ ಈ ಬದಲಾವಣೆ ಮಾಡಲಾಗಿದೆ. ಇದು ಮೇಲ್ನೋಟಕ್ಕೇ ಬಹುವಾಗಿ ಕಾಡಿಬಿಡುತ್ತದೆ. ಏಕೆಂದರೆ ಇಲ್ಲಿ ಅವರು ರಾಮನ ಪಾತ್ರವನ್ನು ಉದಾತ್ತೀಕರಿಸಿದ್ದಾರೆ, ಪ್ರಾಜ್ಞನಂತೆ, ಉದಾರಿಯಂತೆ, ಸ್ವಯಂ ನಿರ್ಣಯ ತೆಗೆದುಕೊಳ್ಳಬಲ್ಲ ಶಕ್ತ ರಾಜನಂತೆ. ಆದರೆ ಮೂಲ ಕಥೆಯ ರಾಮ ಈ ಸನ್ನಿವೇಶದಲ್ಲಿ ಗುರುಹಿರಿಯರ ಮಾತಿನಂತೆ ನಡೆಯುತ್ತಾನೆ, ತನಗೊಂದು ಸ್ವಂತ ಅಭಿಪ್ರಾಯವೇ ಇಲ್ಲವೆಂಬಂತೆ, ಕೀಲು ಕೊಟ್ಟ ಗೊಂಬೆಯಂತೆ.
ಹೀಗೆ ಶಕ್ತಿಯಿಲ್ಲದ ಬ್ರಾಹ್ಮಣನನ್ನು ಶಾಸ್ತ್ರ ಸಂಭ್ರಾಂತ ಕುಟಿಲನಂತೆಯೂ, ಕೀಲುಗೊಂಬೆ ರಾಮನನ್ನು ಸಶಕ್ತ ರಾಜನಂತೆಯೂ, ದುರುದ್ದೇಶದಿಂದ ತಪಸ್ಸನ್ನಾಚರಿಸುತ್ತಿದ್ದ ತಪಸ್ವಿಯನ್ನು ಸಾತ್ವಿಕ ತಪಸ್ವಿಯಂತೆಯೂ ಬದಲಾಯಿಸಿಕೊಂಡು ನಾಟಕ ಕಟ್ಟಿದ ಕುವೆಂಪುರವರ ಉದ್ದೇಶದ ಬಗ್ಗೆ ಮೊದಲ ಓದಿಗೇ ನೂರು ಪ್ರಶ್ನೆಗಳು ಮೂಡುತ್ತವೆ, ಈ ಮೂರೂ ಪಾತ್ರಗಳ ಬದಲಾವಣೆ ಯೋಚಿಸ ಹಚ್ಚುತ್ತದೆ.
ಮತ್ತು ಶಂಭೂಕ ಪಾತ್ರದ ಬದಲಾವಣೆ. ಶಂಭೂಕ ಮೂಲದಲ್ಲಿ ಲೋಕ ಕಲ್ಯಾಣಕ್ಕೋ, ಪಾರಮಾರ್ಥ ಸಿದ್ಧಿಗೋ ತಪಸ್ಸನ್ನಾಚರಿಸುತ್ತಿಲ್ಲ. ಸಶರೀರನಾಗಿ ಸ್ವರ್ಗ ಪ್ರವೇಶಿಸಬೇಕೆಂಬ ಹಠದಲ್ಲಿ ಘೋರ ತಪಸ್ಸನ್ನು ಆಚರಿಸುತ್ತಿದ್ದಾನೆ. ಅದು ಲಂಬಮಾನಮಧೋಮುಖನಾಗಿ ಎಂಬ ವಾಕ್ಯದಲ್ಲೇ ಇದು ಧರ್ಮಸಮ್ಮತವಾದುದಲ್ಲ ಎಂಬ ಧ್ವನಿ ಹೊಮ್ಮುತ್ತಿದೆ. ಕುವೆಂಪು ಈ ತಪಸ್ಸಿನ ರೀತಿಯನ್ನೂ ಬದಲಾಯಿಸಿದ್ದಾರೆ, ಇಲ್ಲಿನ ಶಂಭೂಕ ಲೋಕಕಲ್ಯಾಣಾರ್ಥವಾಗಿ ತಪಸ್ಸು ಮಾಡುತ್ತಿರುವವನು, ಸಕಲರಿಗೂ ಸನ್ಮಂಗಳವನ್ನುಂಟು ಮಾಡುವವನು. ಇವನ ತಪಸ್ಸಿನ ಪ್ರಭಾವದಿಂದ ಪ್ರಕೃತಿ (ವಟತರು) ಮೃತ್ಯುವನ್ನೇ ಹಿಮ್ಮೆಟ್ಟಿಸುವಷ್ಟು ಧರ್ಮಬಲ ಹೊಂದಿಬಿಡುತ್ತದೆ. ಧರ್ಮದೇವತೆ ಕೂಡಾ ಬ್ರಾಹ್ಮಣನಿಗೆ ಬುದ್ಧಿ ಕಲಿಸಲು ಮೃತ್ಯುವನ್ನೇ ಕಳಿಸುತ್ತದೆ. ವಟತರು, ಮೃತ್ಯುದೇವತೆ, ಧರ್ಮದೇವತೆ, ರಾಮ ಎಲ್ಲರೂ ಬ್ರಾಹ್ಮಣನ ವಿರೋಧಿಗಳಂತೆ ವರ್ತಿಸುತ್ತಾರೆ. ವಿಪರ್ಯಾಸವೆಂದರೆ ಮಗನನ್ನು ಕಳೆದು ಕೊಂಡಿರುವ ಸಂತ್ರಸ್ತ ಬ್ರಾಹ್ಮಣ, ಶೋಕಿಸುತ್ತಿರುವವನು ಬ್ರಾಹ್ಮಣ.
ಕುವೆಂಪು ಮಾಸ್ತಿಯವರಿಗೆ ಉತ್ತರ ಕೊಟ್ಟ ಮಾರ್ನುಡಿಯಲ್ಲಿ ಈ ಬದಲಾವಣೆಗಳು ಜಾತಿಮಾತ್ಸರ್ಯದಿಂದ ಪ್ರೆರಿತವಾದ ಮೂದಲಿಕೆಯಲ್ಲ ಎಂಬ ಸ್ಪಷ್ಟೀಕರಣವನ್ನೂ , ಈ ಭಾವನೆ ಹೊಗಳಿಕೆ ಮತ್ತು ತೆಗಳಿಕೆ ಎರಡಕ್ಕೂ ಕಾರಣವಾಗಿದೆ ಎಂದೂ ವಿಷಾದ ವ್ಯಕ್ತ ಪಡಿಸುತ್ತಾರೆ. ಇಂತಹ ಪೂರ್ವಗ್ರಹ ಮತ್ತು ಪಕ್ಷಪಾತಗಳ ದೆಸೆಯಿಂದ ಕೃತಿಕಾರನ ಮುಖ್ಯಾಶಯ, ರಸಪ್ರಯೋಜನ ಶೀಲವಾದ ಸತ್ಯಬೋಧನ, ತತ್ಕಾಲಕ್ಕಾದರೂ ವ್ಯರ್ಥವಾಯಿತೆಂದು ತೋರುತ್ತದೆ ಎಂಬ ನೋವನ್ನು ತೋಡಿಕೊಳ್ಳುತ್ತಾರೆ. ವರ್ಣಾಶ್ರಮದ ಪರಿಣಾಮವಾಗಿ ಹೊರಹೊಮ್ಮಿದ ಬ್ರಾಹ್ಮಣ ಪಾರಮ್ಯದ ಬಗ್ಗೆ ಕುವೆಂಪು ಅವರಿಗೆ ಅಸಹನೆಯಿತ್ತಾ? ಅದಕ್ಕಾಗಿಯೇ ಬ್ರಾಹ್ಮಣನನ್ನು ಈ ರೀತಿ ಚಿತ್ರಿಸಿದರಾ? ಈ ಕೆಳಗಿನ ಸಾಲುಗಳನ್ನು ಓದಿದರೆ ಹಾಗೇನೂ ಅನ್ನಿಸುವುದಿಲ್ಲ." ಬ್ರಾಹ್ಮಣೇತರರಲ್ಲಿ ಕೆಲವರು ಕೃತಿಯ ಕಾವ್ಯತ್ವಕ್ಕಿಂತಲೂ ಹೆಚ್ಚಾಗಿ ಈ ಕೃತಿ ಬ್ರಾಹ್ಮಣರಿಗೆ ಚೆನ್ನಾಗಿ ಏಟು ಕೊಡುತ್ತದೆ ಎಂಬ ಅಸತ್ಯವೂ, ಅಪ್ರಕೃತವೂ, ಅವಿವೇಕವೂ ಆದ ಕಾವ್ಯವಿಮರ್ಶೇತರ ಕಾರಣವನ್ನು ಆರೋಪಿಸಿಕೊಂಡು ಅದನ್ನು ಸ್ತುತಿಸಿದರೆಂದು ಕೇಳಿದ್ದೇನೆ " ಇಂತಹ ಸಾಲುಗಳು ನಿಜಕ್ಕೂ ಪ್ರಾಮಾಣಿಕವೆನ್ನಿಸಿ ಈ ಬದಲಾವಣೆಗಳ ಕಾರಣಗಳ ಬಗ್ಗೆ ಯೋಚಿಸಹಚ್ಚುತ್ತವೆ. ಕೃತಿಯನ್ನೂ, ಕೃತಿಕಾರನನ್ನೂ ಬೇರ್ಪಡಿಸಿ ಕೇವಲ ರಸಗ್ರಹಣಕ್ಕಾಗಿ ಈ ಕೃತಿಯನ್ನು ಓದಲು ಸಾಧ್ಯವೇ ? ಅವರ ನೆನಪಿನ ದೋಣಿಯಲ್ಲೇ ಪಯಣಿಸಬೇಕು ಈ ಎಲ್ಲ ಪ್ರಶ್ನೆಗಳ ಉತ್ತರಕ್ಕೆ.
ಅವರ ಆತ್ಮ ಕಥನದನ್ವಯ ಅವರು ಬ್ರಾಹ್ಮಣ ವಿರೋಧಿಯಾಗಿರಲಿಲ್ಲ. ಬ್ರಾಹ್ಮಣರಾಗಿದ್ದ ಟಿ. ಎಸ್. ವೆಂಕಣ್ಣಯ್ಯನವರನ್ನು ಪಿತೃಸಮಾನರೆಂದು ಗೌರವಿಸುತ್ತಿದ್ದವರು ಕುವೆಂಪು. ತಮ್ಮ ಉನ್ನತಿಗೆ ಕಾರಣರಾದ ಅನೇಕ ಬ್ರಾಹ್ಮಣರನ್ನು ಬಹಳ ಪ್ರೀತಿಗೌರವಗಳಿಂದಲೇ ತಮ್ಮ ಆತ್ಮ ಕಥನದಲ್ಲಿ ಸ್ಮರಿಸುತ್ತಾರೆ. ಕುಮಾರವ್ಯಾಸ ಭಾರತಕ್ಕೆ ಅವರು ಬರೆದ ತೋರಣ ನಾಂದಿ, ರಾಮಕೃಷ್ಣಪರಮಹಂಸ, ಶ್ರೀ ರಾಮಾಯಣ ದರ್ಶನಂ ಮುಂತಾದುವುಗಳು ಅವರ ಅಪ್ರತಿಮ ಪ್ರತಿಭೆಗೆ, ಅಧ್ಯಯನ ಶೀಲತೆಗೆ ಸ್ಪಷ್ಟ ಸಾಕ್ಷಿಗಳಾಗಿವೆ. ಇಂತಹಾ ಕವಿ ಕೇವಲ ಜಾತಿ ಮಾತ್ಸರ್ಯದಿಂದ ಬ್ರಾಹ್ಮಣರ ವಿರುದ್ಧವಾಗಿ ಬರೆದರೆಂಬುದನ್ನು ಒಪ್ಪುವುದೂ ಕಷ್ಟ. ಬ್ರಾಹ್ಮಣ ಪದದ ನಿಜಾರ್ಥ ಅಧ್ಯಯನ ಶೀಲ ಎಂಬುದೇ ಆಗಿದ್ದಲ್ಲಿ ಅಂತಹ ಯಾವುದೇ ಅರ್ಹತೆಯಿಲ್ಲದ ಕೇವಲ ಹುಟ್ಟಿನಿಂದ ಮಾತ್ರ ಬ್ರಾಹ್ಮಣರೆಂದು ಬೀಗುತ್ತಾ ಉಳಿದವರನ್ನು ಕೀಳಾಗಿ ಕಾಣುತ್ತಿದ್ದವರ ಬಗ್ಗೆ ಅವರಿಗೆ ಅಸಹನೆಯಿತ್ತು. ಜನ್ಮದತ್ತ ಹಕ್ಕೆಂಬಂತೆ ತೋರಿಸಿಕೊಳ್ಳುತ್ತಿದ್ದ ಹುಸಿ ಪಾರಮ್ಯದ ಬಗ್ಗೆ ಆಕ್ರೋಶವಿತ್ತು.
ಆ ಕಾಲದಲ್ಲಿ ಶೂದ್ರನೆಂಬ ಪದ ಅದೆಷ್ಟು ಕೆಳಮಟ್ಟದಲ್ಲಿ ಬಳಕೆಯಾಗುತ್ತಿತ್ತೆಂದರೆ ಬ್ರಾಹ್ಮಣನೊಬ್ಬ ಯಾವುದೋ ತಪ್ಪು ಮಾಡಿದಲ್ಲಿ ಆತನನ್ನು ಶೂದ್ರನೆಂದು ಸಂಬೋಧಿಸಲಾಗುತ್ತಿತ್ತು. ಶೂದ್ರ ಎಂಬ ಪದ ಕಾಯಕ ಸೂಚಕವಾಗುಳಿಯದೇ ಕೆಳಮಟ್ಟದ ವರ್ತನೆಗೆ, ಕೀಳು ಮನಸ್ಥಿತಿಗೆ, ಬೌದ್ಧಿಕ ದಾರಿದ್ರ್ಯಕ್ಕೆ ಪರ್ಯಾಯವಾಗಿ ಬಳಸಲಾಗುತ್ತಿತ್ತು, ಇದೆಷ್ಟರಮಟ್ಟಿಗೆಂದರೆ ಶೂದ್ರನೊಬ್ಬ ಸಜ್ಜನನೆಂಬ ಪದಕ್ಕೆ ಅರ್ಹನೇ ಅಲ್ಲವೆಂಬ ರೀತಿಯಲ್ಲಿ, ಹಾಗೊಮ್ಮೆ ಅವನು ಸಜ್ಜನನಾಗಿದ್ದೇ ಆದರೆ ಅವನನ್ನು ಬ್ರಾಹ್ಮಣ ಸಮಾನನೆಂದು ಕರೆದು ಶೂದ್ರ ಎಂಬ ಪದಕ್ಕೇ ಅವಮಾನವಾಗುವ ರೀತಿಯಲ್ಲಿ.
ಶೂದ್ರರ ಅಥವಾ ಶೂದ್ರ ಪದದ ಸ್ಥಿತಿಯೇ ಹೀಗಿದ್ದಲ್ಲಿ ಅತಿಶೂದ್ರರ ಕತೆಯಂತೂ ಶೋಚನೀಯವಾಗಿತ್ತು. ಇದು ಶೂದ್ರರ ಗಮನಕ್ಕೆ ಬಂದಿದ್ದು ಮತ್ತು ಈ ಶೂದ್ರಪ್ರಜ್ಞೆ ಪ್ರಜ್ಞಾಪೂರ್ವಕವಾಗಿ ಎಚ್ಚೆತ್ತುಕೊಂಡಿದ್ದು ಕಾಡಲಾರಂಭಿಸಿದ್ದು ಬ್ರಿಟೀಷರ ಆಗಮನದಿಂದ, ಅವರ ಆಡಳಿತದಿಂದ. ಅತಿಶೂದ್ರಪ್ರಜ್ಞೆ ಭಾರತಕ್ಕೆ ಗಾಂಧೀಜಿಯವರ ಆಗಮನದಿಂದ. ಬ್ರಿಟೀಷರ ಆಗಮನದಿಂದ ಭಾರತಕ್ಕಾದ ಬಹುದೊಡ್ಡ ಲಾಭವೆಂದರೆ ಪಾಶ್ಚಾತ್ಯ ಸಾಹಿತ್ಯದ ಪರಿಚಯ. ಸಾಂಸ್ಕೃತಿಕ ಲೋಕದಲ್ಲಿ ಆ ಕಾಲಕ್ಕನುಗುಣವಾಗಿ ಸಹಜವಾಗೇ ಬ್ರಾಹ್ಮಣರಿಗಿದ್ದ ಹಿಡಿತ, ಬ್ರಾಹ್ಮಣ ಪಾರಮ್ಯ , ಮತ್ತು ಕೇವಲ ಹುಟ್ಟಿನಿಂದ ಮಾತ್ರ ಬ್ರಾಹ್ಮಣರಾಗಿರಲು ಯೋಗ್ಯರಾದವರೂ ಆ ಪಾರಮ್ಯತೆಯ ನೆರಳಲ್ಲಿ ಮೆರೆಯುತ್ತಿದ್ದ ರೀತಿ ಇವೆಲ್ಲವೂ ಶೂದ್ರರ ಗಮನಕ್ಕೆ ಬಂದುದು ಬ್ರಿಟೀಶರ ಆಳ್ವಿಕೆಯಲ್ಲೇ. ಬ್ರಾಹ್ಮಣ ಶೂದ್ರರ ನಡುವೆಯಿದ್ದ ಸಾಂಸ್ಕೃತಿಕ ವ್ಯತ್ಯಾಸಗಳನ್ನು ಬ್ರಿಟೀಶರು ಎತ್ತಿ ತೋರಿಸುತ್ತಾ ಬಂದರು. ಅಲ್ಲಿಯವರೆಗೂ ಶೂದ್ರ ಪ್ರಜ್ಞೆ ಇರಲಿಲ್ಲವೆಂದಲ್ಲ, ಆ ಮನಸ್ಥಿತಿ ಅವರಿಗೆ ಅಭ್ಯಾಸವಾಗಿತ್ತು, ರೂಢಿಗತವಾಗಿತ್ತು. ನಮ್ಮ ಸಾಮಾಜಿಕ ಜನಜೀವನದ ಹುಳುಕುಗಳು, ಯೋಗ್ಯರಲ್ಲದವರೂ ಹಾಕುವ ಯೋಗ್ಯರ ವೇಷ ಇವುಗಳ ತೀವ್ರತೆ ಶೂದ್ರರಿಗೆ ಮನದಟ್ಟಾಗಲಾರಂಭಿಸಿತು. ಇವುಗಳನ್ನು ಶೂದ್ರರಿಗೆ ತೋರಿಸುವ ಹಪಾಹಪಿ ಬ್ರಿಟೀಷರಿಗಿತ್ತೇ ವಿನಹ ಅತಿಶೂದ್ರರ ಬಗ್ಗೆ ಅವರ ಗಮನವಿರಲಿಲ್ಲ. ಅದನ್ನು ನಿರ್ವಹಿಸಿದವರು ಗಾಂಧೀಜಿ.
ಇವೆಲ್ಲವೂ ಕುವೆಂಪುರವರನ್ನು ಗಾಢವಾಗಿ ಕಾಡಿತ್ತು. ಮೊಟ್ಟಮೊದಲು ಅವರಿಗೆ ಸಂಸ್ಕೃತ ತರಗತಿಯಲ್ಲಾದ ಅವಮಾನ ಬೇರೆ ಯಾರಿಗೇ ಆಗಿದ್ದರೂ ಸಂಸ್ಕೃತದಿಂದ ಶಾಶ್ವತವಾಗಿ ದೂರ ಸರಿದು ಬಿಡುತ್ತಿದ್ದರೇನೋ, ಕುವೆಂಪು ಅದನ್ನೊಂದು ಸವಾಲಾಗಿ ಸ್ವೀಕರಿಸಿದರು. ಸಂಸ್ಕೃತವನ್ನು ಕಲಿತು ಪ್ರಾಚೀನ ಸಂಸ್ಕೃತ ಕಾವ್ಯಗಳನ್ನು ತಮ್ಮದಾಗಿಸಿಕೊಂಡರು. ಅವರ ವಿಶೇಷತೆಯೆಂದರೆ ಶೂದ್ರರಾಗಿದ್ದುಕೊಂಡೂ ಬ್ರಾಹ್ಮಣರ ನಡುವೆ ಯಾವುದೇ ಕೀಳರಿಮೆಯಿಲ್ಲದೆ ಸಹಜವಾಗಿ ಸರಿಸಮಾನರಾಗಿ ಬದುಕಿದ್ದುದು, ಸಂಸ್ಕೃತದ ಮೂಲಕ ಸಂಸ್ಕೃತೀಕರಣಕ್ಕೆ ಸಂಬಂಧ ಪಟ್ಟಿದ್ದನ್ನು, ಭಾರತೀಯ ಪುರಾಣಗಳನ್ನು ವಿಭಿನ್ನವಾಗಿ ಅರಗಿಸಿಕೊಂಡಿದ್ದು, ಕನ್ನಡದ ಹಳೆಗನ್ನಡ, ನಡುಗನ್ನಡದ ಕಾವ್ಯಗಳನ್ನು ಅಭ್ಯಾಸ ಮಾಡಿದ್ದುದು, ಪಾಶ್ಚಾತ್ಯ ಸಾಹಿತ್ಯವನ್ನು ಅಭ್ಯಸಿಸುವ ಮೂಲಕ ಅಂದಿನ ಬಹುತೇಕ ಬ್ರಾಹ್ಮಣರನ್ನು ಮೀರಿಸುವ ಆಧುನಿಕತೆ ಮತ್ತು ವೈಚಾರಿಕತೆಯ ಕಡೆ ನುಗ್ಗಿದ್ದು ( ಸುಮಾರು ೪೦ನೇ ಇಸವಿಯ ಹೊತ್ತಿಗೇ ಕುವೆಂಪು ಜಾಗತಿಕವಾಗಿ ಸುಪ್ರಸಿದ್ಧವಾದ ಬಹುತೇಕ ಎಲ್ಲ ಕೃತಿಗಳನ್ನು ಓದಿ ಮುಗಿಸಿದ್ದರು). ಇವೆಲ್ಲವೂ ಕುವೆಂಪುರವರ ವ್ಯಕ್ತಿತ್ವವನ್ನು ಬಹಳ ಸಶಕ್ತವಾಗಿ ರೂಪಿಸಿದವೆನ್ನಬಹುದು.
ಜೊತೆಗೆ ವಿವೇಕಾನಂದ, ರಾಮಕೃಷ್ಣರ ಪ್ರಭಾವ ತಂದು ಕೊಟ್ಟ ಹೊಳಹುಗಳ ಹಿನ್ನೆಲೆಯಲ್ಲಿ ಅವರು ಸಾಹಿತ್ಯವನ್ನು ಬೇರೆಯದೇ ಆದ ರೀತಿಯಲ್ಲಿ ನೋಡಲಾರಂಭಿಸಿದರು, ತರತಮಗಳನ್ನು ಪತ್ತೆ ಹಚ್ಚಿದರು, ಎಲ್ಲೆಲ್ಲಿ ಅವಮಾನಗಳಾಗಿವೆಯೋ ಅವುಗಳನ್ನು ತಮ್ಮದೇ ರೀತಿಯಲ್ಲಿ ಪ್ರತಿಭಟಿಸಿದರು... ಬಹಳ ಮುಖ್ಯವಾಗಿ ಶೂದ್ರ ತಪಸ್ವಿಯಂತಹ ನಾಟಕಗಳ ರೂಪದಲ್ಲಿ.
ಮನರಂಜನೆಯೊಂದೇ ನಾಟಕಗಳ ಉದ್ದೇಶವಾಗಿದ್ದ, ಗುರಿಯಾಗಿದ್ದ ಕಾಲದಲ್ಲಿ ಕಥೆಗಳೂ ಅದಕ್ಕೆ ತಕ್ಕಂತೆಯೇ ಇರುತ್ತಿದ್ದವು. ಕಾಲಕ್ರಮೇಣ ನಮ್ಮ ನಡುವೆ ಜ್ವಲಂತವಾಗಿರುವ ಸಮಸ್ಯೆಗಳು ಮತ್ತು ಅವುಗಳನ್ನು ಎತ್ತಿ ತೋರುವ ಮೂಲಕ ಸಾಮಾಜಿಕ ಪರಿವರ್ತನೆಯ ಪ್ರಯತ್ನ ನಾಟಕಗಳ ಪ್ರಮುಖ ಗುರಿಯಾಗತೊಡಗಿತು. ಕುವೆಂಪುರವರ ನಾಟಕಗಳು ಈ ದಿಕ್ಕಿನಲ್ಲಿ ಮೊದಲ ಅಂತಹಾ ಪ್ರಯತ್ನಗಳು. ಅವುಗಳು ರಂಗದ ಮೇಲೆ ಪ್ರಯೋಗಿಸಲ್ಪಡುವುದೆಂಬ ನಂಬಿಕೆ ಸ್ವಯಂ ಕುವೆಂಪು ಅವರಿಗೇ ಇರಲಿಲ್ಲ. "ಶೂದ್ರ ತಪಸ್ವಿಯಲ್ಲಿ ಶಂಭೂಕನ ಕಥೆಯ ಸಾಮಗ್ರಿ ಹೊಸ ರೀತಿಯಿಂದ ದೃಶ್ಯವಸ್ತುವಾಗಿದೆ. ಈ ನಾಟಕ ಆಡುವ ದೃಷ್ಟಿಯಿಂದ ನಿಷ್ಪ್ರಯೋಜಕ. ಅದರ ಚಿತ್ರಗಳ ಬೃಹತ್ತನ್ನೂ ಮಹತ್ತನ್ನೂ ಹೊರಗಡೆಯ ಅಲ್ಪ ವೇದಿಕೆಯ ಮೇಲೆ ಕೃತಕಾಭಿನಯದಿಂದ ಪ್ರದರ್ಶಿಸುವುದೂ ಅಸಾಧ್ಯ. ಆದ್ದರಿಂದ ಕಲ್ಪನಾ ತಪಸ್ಸಾಧ್ಯವಾದ ಮನೋ ರಂಗಭೂಮಿಯಲ್ಲಿಯೇ ಅದನ್ನು ಸೃಷ್ಟಿಸಿ ದೃಷ್ಟಿಸಬೇಕು." ಎಂಬ ಮಾತನ್ನು ಕುವೆಂಪುರವರೇ ಹೇಳುತ್ತಾರೆ.
ಶೂದ್ರನ ತಪಸ್ಸು ಪ್ರಕೃತಿಯ ಮಡಿಲಲ್ಲಿ, ಪ್ರಕೃತಿಗೆ ಪೂರಕವಾಗಿ ನಡೆಯುತ್ತಿರುತ್ತದೆ. ಪ್ರಕೃತಿಯೂ ಶೂದ್ರನನ್ನು ಆರಾಧಿಸುತ್ತಿರುತ್ತದೆ, ಮೃತ್ಯುವನ್ನೂ ಎದುರು ಹಾಕಿಕೊಳ್ಳುವಷ್ಟು, ಮೃತ್ಯುವಿಗೇ ಸವಾಲು ಹಾಕುವಷ್ಟು. ಶಂಭೂಕನ ಪಾತ್ರವನ್ನು ಅವರು ಚಿತ್ರಿಸಿರುವ ರೀತಿಯೂ ಇಂದಿಗೆ ಬಹಳ ಪ್ರಸ್ತುತವೆನಿಸುತ್ತದೆ. ಬ್ರಾಹ್ಮಣನು ರಾಮನನ್ನು ಶೂದ್ರ ತಪಸ್ವಿಯ ಬಳಿ ಕರೆತರುವಾಗ, ಅವನ ಮೇಲೆ ಆರೋಪವನ್ನು ಮಾಡುವಾಗ ಶಂಭೂಕ ನಡೆದು ಕೊಳ್ಳುವ ರೀತಿ ಅತ್ಯಂತ ಸ್ತುತ್ಯರ್ಹವಾದುದು ಮತ್ತು ಒಬ್ಬ ಪ್ರಾಜ್ಞ ನಿಜವಾಗಿಯೂ ನಡೆದುಕೊಳ್ಳಬೇಕಾಗಿರುವಂಥದ್ದು. ಮೌನವಾಗಿ ತಪಗೈಯುತ್ತಿದ್ದ ಮುನಿಯ ಮೇಲೆ ವಿನಾಕಾರಣ ಆರೋಪ ಮಾಡಿದರೂ ಮುನಿ ತನ್ನನ್ನು ಸಮರ್ಥಿಸಿಕೊಳ್ಳುವುದಿಲ್ಲ, ವಾದಿಸುವುದಿಲ್ಲ. ವಲ್ಮಿಕದೊಳಗೆ ತಪಸ್ಸು ಮಾಡುತ್ತಿದ್ದ ಮುನಿಗೆ ಎಲ್ಲವೂ ತಿಳಿಯುತ್ತಿರುತ್ತದೆ ಎಂಬುದಕ್ಕೆ ಕಡೆಯ ದೃಶ್ಯದಲ್ಲಿ ಬ್ರಾಹ್ಮಣ ನಮಸ್ಕರಿಸಿದಾಗ ಶಂಭೂಕ ಮುನಿಯ ಕೈಗಳು ಹೊರಬಂದು ಹರಸುವುದೇ ಸಾಕ್ಷಿ.. ರಾಮನು ಈ ಮುನಿಯನ್ನು ಸಂಹರಿಸಲು ಸಾಮಾನ್ಯ ಆಯುಧ ಸಮರ್ಥವಾಗದೆಂದು ಬ್ರಾಹ್ಮಣನಿಗೆ ಮನದಟ್ಟು ಮಾಡಲೆತ್ನಿಸಿದಾಗ ಬ್ರಾಹ್ಮಣ " ಆವ ದಿವ್ಯಾಸ್ತ್ರದಿಂ ದೈತ್ಯೇಂದ್ರಂ ರಾವಣನ ದಶಶಿರಗಳುರುಳಿದವೋ ಅದನೆ ತುಡು, " ಎಂದಾಗಲೂ ತಡೆಯಲು ಎದ್ದುಬರುವುದಿಲ್ಲ. ಕೊನೆಗೆ ಬ್ರಾಹ್ಮಣನ ಅಣತಿಯ ಮೇರೆಗೆ ರಾಮ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದರೂ ವಿಚಲಿತನಾಗುವುದಿಲ್ಲ. ರಾಮ ಬ್ರಹ್ಮಾಸ್ತ್ರವನ್ನು ತೊಟ್ಟಾಗ ಭೂಮಿ ನಡುಗುತ್ತದೆ, ಗಗನ ಗುಡುಗುತ್ತದೆ. ತನ್ನನ್ನೇನೂ ಮಾಡದು, ಅದು ಶೂದ್ರನ ಸಂಹಾರಕ್ಕೆ ತೊಟ್ಟದ್ದೆಂದು ತಿಳಿದಿದ್ದ ಬ್ರಾಹ್ಮಣ ಹೆದರಿ, ಸೆಡೆತು, ರಾಮನ ಮೊರೆಗೆ ಹೋಗುತ್ತಾನೆ. ಆದರೂ ಶೂದ್ರ ಬೆಚ್ಚುವುದಿಲ್ಲ, ವಲ್ಮಿಕದಿಂದ ಹೊರಬರುವುದಿಲ್ಲ. ಬ್ರಹ್ಮಾಸ್ತ್ರ ತಪಸ್ವಿಯನ್ನು ಗೌರವಿಸಿ ಬ್ರಾಹ್ಮಣನನ್ನೇ ಆಹುತಿ ತೆಗೆದುಕೊಳ್ಳಲು ಹಿಂತಿರುಗುತ್ತದೆ. ಬ್ರಾಹ್ಮಣನು ನಿಜವಾದ ಅಧ್ಯಯನಕ್ಕೆ, ಜ್ಞಾನಕ್ಕೆ ಶರಣಾಗುವುದರೊಂದಿಗೆ ಎಲ್ಲವೂ ಮಂಗಳವಾಗುತ್ತದೆ, ನಿಜವಾಗಿ ಗೌರವಿಸಬೇಕಾದ್ದು ಹುಟ್ಟಿನ ಮೂಲವನ್ನಲ್ಲ, ಶಾಸ್ತ್ರಸಂಭ್ರಾಂತರನ್ನಲ್ಲ, ಮಾನವೀಯತೆಯ ಲವಲೇಶವೂ ಇಲ್ಲದ ಅಸಮಾನತೆಯನ್ನಲ್ಲ, ಬೆಲೆ ಕೊಡಬೇಕಾದ್ದು ನಿಜವಾದ ಮಾನವೀಯತೆಗೆ, ಅಧ್ಯಯನ ತಂದುಕೊಡಬಲ್ಲ ಜ್ಞಾನಕ್ಕೆ, ಸಜ್ಜನಿಕೆಗೆ, ತಾನು ಉತ್ತರಿಸಬೇಕಿಲ್ಲದ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಮೌನವಾಗಿ ತನ್ನ ಕಾರ್ಯವನ್ನು ತಾನು ನಿರ್ವಹಿಸುತ್ತಿರುವ ಸ್ಥಿತಪ್ರಜ್ಞತೆಗೆ.  ಇಲ್ಲಿ ಶರಣಾಗುವುದು ಬ್ರಾಹ್ಮಣನಲ್ಲ, ಶಾಸ್ತ್ರಸಂಭ್ರಾಂತ ಮನಸ್ಥಿತಿ. ಗೆಲ್ಲುವುದು ಶೂದ್ರನಲ್ಲ , ನಿಜವಾದ ಅಧ್ಯಯನ, ನಿಜ ಪಾಂಡಿತ್ಯ. ಇಂದು ಅಸಹಿಷ್ಣುತೆಯ ಹೆಸರಿನಲ್ಲಿ ಕೂಗಾಡುತ್ತಿರುವವರೆಲ್ಲಾ ಈ ವಿಷಯವನ್ನು ಅತ್ಯಂತ ಅವಶ್ಯಕವಾಗಿ ಅನುಸರಿಸಲೇ ಬೇಕಾದ ಅಗತ್ಯವಿದೆ.
ಶೂದ್ರತಪಸ್ವಿಯೊಡನೆ ತಮ್ಮನ್ನು ಕವಿ ಗುರುತಿಸಿಕೊಂಡಿದ್ದಾರಾ? ನಿಜವಾದ ಅಧ್ಯಯನ ಶೀಲ ತಾನು, ರಜತ ಮನುಷ್ಯ ತಾನು.., ಅಧ್ಯಯನದಿಂದ ಜ್ಞಾನವನ್ನು ಪಡೆಯದೇ ಕಂದಾಚಾರದಲ್ಲಿ ತೊಡಗಿರುವ ನೀವು ನಿಜವಾದ ಶಂಭೂಕಗಳು(ಕಪ್ಪೆ ಚಿಪ್ಪು) ಎಂದು ಹೇಳುತ್ತಿದ್ದಾರಾ? ಮರುಓದು ಹೌದೆನ್ನುತ್ತದೆ.
ಇಲ್ಲಿ ಅವರು ನಾರದರ ಪಾತ್ರವನ್ನು ಅದಕ್ಕಾಗಿಯೇ ಬ್ರಾಹ್ಮಣನೇ ನಿರ್ವಹಿಸುವಂತೆ ಮಾಡಿದ್ದಾರೆ. ಬ್ರಾಹ್ಮಣರ ಬಗ್ಗೆ ಬರೆದುದಲ್ಲವೆಂದು ಅವರೆಷ್ಟೇ ಸ್ಪಷ್ಟೀಕರಣ ಕೊಟ್ಟರೂ ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಅದು ನಿಸ್ಸಂದೇಹವಾಗಿ ಬ್ರಾಹ್ಮಣರ ಬಗ್ಗೆಯೇ ಬರೆದುದಾಗಿದ್ದರೂ ಎಲ್ಲ ಬ್ರಾಹ್ಮಣರ ವಿರುದ್ಧವೂ ಅಲ್ಲ. ಅಂದು ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಪುರೋಹಿತಶಾಹಿ ಪರಂಪರೆಯನ್ನು, ವೈದಿಕ ಬ್ರಾಹ್ಮಣರ ಕರ್ಮಠ ಶಾಸ್ತ್ರಗಳನ್ನು, ಹುಸಿ ಬ್ರಾಹ್ಮಣ ಪಾರಮ್ಯವನ್ನು ಈ ರೀತಿಯಾಗಿ ಪ್ರಶ್ನಿಸುತ್ತಾರೆ, ಧಿಕ್ಕರಿಸುತ್ತಾರೆ. ಅವರ ಅಸಮಾಧಾನ ಪ್ರಾಜ್ಞ ಬ್ರಾಹ್ಮಣರ ಕುರಿತಲ್ಲ ಎಂಬುದು ಈ ಎಲ್ಲ ಹಿನ್ನೆಲೆಯಲ್ಲಿ ಸ್ಪಷ್ಟವಾಗುತ್ತಾ ಹೋಗುತ್ತದೆ.
ಇಲ್ಲಾಗಿರುವುದು ಬದಲಾವಣೆಯ ಜೊತೆಜೊತೆಗೇ ಉದಾತ್ತೀಕರಣ. ಭಾಸನ ಉದಾತ್ತೀಕರಣದಂತೆಯೇ ಕುವೆಂಪು ಶೂದ್ರ ತಪಸ್ವಿಯ ಉದಾತ್ತೀಕರಣವೂ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಯಾವುದೇ ನಾಟಕವನ್ನು ನೋಡುವಾಗ , ಓದುವಾಗ ಪ್ರತಿಯೊಬ್ಬ ಓದುಗನೂ ಯಾವುದಾದರೊಂದು ಪಾತ್ರದಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತಾನೆ. ಹುಟ್ಟಿನ ಮೂಲದ ಪ್ರಭ್ಹಾವದಲ್ಲಿ ನೋಡಿದರೆ ಬ್ರಾಹ್ಮಣನಿಗೆ ಕುವೆಂಪು ಖಳನಾಯಕರಂತೆಯೂ, ಶೂದ್ರರ ದೃಷ್ಟಿಯಲ್ಲಿ ನೋಡಿದರೆ ಬ್ರಾಹ್ಮಣರ ಮರ್ಮಸ್ಥಾನಕ್ಕೇ ಪ್ರಬಲವಾದ ಹೊಡೆತ ಕೊಟ್ಟ ಧೀಮಂತ ನಾಯಕನಂತೆಯೂ ಕಾಣಿಸಬಹುದು. ಇವೆರಡೂ ಕುವೆಂಪುರವರ ಆಶಯವಾಗಿರಲಿಲ್ಲವೆಂಬುದು ಅವರೇ ಹೇಳಿದ ಮಾತಿನಿಂದ ಸ್ಪಷ್ಟವಾಗುತ್ತದೆ. ಅದನ್ನವರು ಕಲೆಯ ಉದ್ದೇಶವೇ ಕೊಲೆಯಾದಂತೆ ಎಂದಿದ್ದಾರೆ.ಇಷ್ಟಾಗಿಯೂ ಕೆಲವೊಮ್ಮೆ ಬ್ರಾಹ್ಮಣರ ವಿರುದ್ಧದ ಮನಸ್ಥಿತಿಯೇ ಶೂದ್ರತಪಸ್ವಿಯ ರಚನೆಗೆ ಕಾರಣ ಎಂದನ್ನಿಸಿದರೆ ಒಂದು ಮಾತು. ಒಂದು ಶೂದ್ರ ತಪಸ್ವಿಯ ಓದು ಬ್ರಾಹ್ಮಣರಲ್ಲಿ ಇಷ್ಟು ಸಂಚಲನ ಉಂಟು ಮಾಡಿದರೆ , ಅದು ಅವಹೇಳನಕಾರಿ ಎಂದು ಬೊಬ್ಬೆ ಹೊಡೆದರೆ ಅನಾದಿ ಕಾಲದಿಂದ ಶಂಭೂಕ ವಧೆಯನ್ನು ಓದುತ್ತಾ, ಅದನ್ನೊಂದು ಹರಿಕಥೆಯಂತೆ ಭಕ್ತಿಯಿಂದ ಕೇಳುತ್ತಾ ಬಂದ ಶೂದ್ರರ ಮನಸ್ಥಿತಿಯ ಬಗ್ಗೆಯೂ ಒಮ್ಮೆ ಯೋಚಿಸುವುದು ಒಳಿತು. ಅವರಿಗೆ ಹೀಗನ್ನಿಸಬಾರದು ಎಂದು ಹೇಗೆ ನಿರೀಕ್ಷಿಸಲಾದೀತು? ಮಾನವೀಯತೆಯ, ಮನುಷ್ಯತ್ವದ ಹಿನ್ನೆಲೆಯಲ್ಲಿ ಯಾವುದೇ ಪಕ್ಷೋದ್ರೇಕ ಹೊಂದದೇ ಸಮಾಧಾನವಾಗಿ ಓದಿದರೆ ಕುವೆಂಪು ಪ್ರಜ್ವಲಿಸುತ್ತಾರೆ, ಶೂದ್ರ ತಪಸ್ವಿ ನಿಗಿನಿಗಿ ಹೊಳೆಯುತ್ತದೆ

ಕುಮಾರವ್ಯಾಸನಂಥಾ ಅಣ್ಣ , ಅಣ್ಣನಂಥಾ ಕುಮಾರವ್ಯಾಸ

ಹೊರಗೆ ಗೇಟು ಕಿರ್ರೆಂದು ಸದ್ದಾದಾಗಲೇ ಗೊತ್ತಾಯಿತು, ಅವರೆಲ್ಲರೂ ಬಂದರು. ಒಳಗೆ ಎಲ್ಲರಿಗೂ ಸ್ನಾನಕ್ಕೆ ಗಡಿಬಿಡಿ...ಅಲ್ಲಿಗೆ...ಎಲ್ಲವೂ ಮುಗಿದಿತ್ತು. 'ಅಣ್ಣಾ' ಎಂದು ನನ್ನಿಂದ ಕರೆಸಿಕೊಳ್ಳುತ್ತಿದ್ದ ನನ್ನ ತಂದೆಯ ದೇಹ ಪಂಚಭೂತಗಳಲ್ಲಿ ಲೀನವಾಗಿತ್ತು. ಯಾರೋ ಹೊರಗೆ ನಿಂತು ನುಡಿಯುತ್ತಿದ್ದರು, " ವೈಕುಂಠ ಏಕಾದಶಿ ಮರಣ ಮುಕ್ಕೋಟಿ ದ್ವಾದಶಿ ದಹನ ಬಹಳ ಪುಣ್ಯ ಮಾಡಿದವರಿಗೆ ಮಾತ್ರ ಈ ಅದೃಷ್ಟ. ಮಹಾಭಾರತದಲ್ಲಿ ಭೀಷ್ಮನಿಗೆ ಸಿಕ್ಕಿತ್ತು ನೋಡಿ". ನನ್ನ ಪುಣ್ಯ ಉರಿದುಹೋಗಿತ್ತು, ಬೂದಿಯಾಗಿತ್ತು. ಮಾತುಗಳಿಲ್ಲದೇ ರೂಮಿಗೆ ಬಂದು ಕದವಿಕ್ಕಿದೆ. ಹನಿ ಕಣ್ಣೀರು ಹೊರಹೋಗದೆ ಮೈಮನ ಬೆಂಕಿಯಂತೆ ಉರಿಯುತ್ತಿತ್ತು, ಬೂದಿಯಾಗ ಬಯಸುತ್ತಿತ್ತು. ..ಚಡಪಡಿಸುತ್ತಿದ್ದ ಜೀವಕ್ಕೆ ಕಂಡದ್ದು ನನ್ನಂತೆಯೇ ಉರಿಯುತ್ತಿದ್ದ, ಕಂಗಾಲಾಗಿದ್ದ, ರೆಕ್ಕೆ ಮುರಿದ ಹಕ್ಕಿಯಂತೆ ಬಿದ್ದಿದ್ದ ಆ ಪುಸ್ತಕ. 'ಗದುಗಿನ ಭಾರತ.'. ನಿಧಾನವಾಗಿ ಹೋಗಿ ಕೈಗೆತ್ತಿಕೊಂಡೆ....ಅಣ್ಣನದೇ ಸ್ಪರ್ಶ, ಅದೇ ಬೆಚ್ಚಗಿನ ಆಸರೆಯ ಅನುಭವ...ನಂತರ ಅಲ್ಲಿದ್ದುದು ಬಿಕ್ಕಿಬಿಕ್ಕಿ ಆಳುತ್ತಿದ್ದ, ಪರಸ್ಪರ ಸಂತೈಸಿಕೊಳ್ಳುತ್ತಿದ್ದ ಎರಡು ಜೀವಗಳು..ನಾನು, ನನ್ನ ಕುಮಾರವ್ಯಾಸ....
ಬುದ್ದಿ ತಿಳಿದಾಗಿನಿಂದ ಪ್ರತಿದಿನವೂ ಅಣ್ಣ ಓದುತ್ತಿದ್ದ, ಹಾಡುತ್ತಿದ್ದ ಗದುಗಿನ ಭಾರತದ ಬಗ್ಗೆ ನನಗೇನೋ ವಿಚಿತ್ರ ಆಕರ್ಷಣೆ. ನನ್ನಮ್ಮ, ನಾಗರತ್ನಮ್ಮ(ಎಚ್ಚೆಸ್ವಿಯವರ ತಾಯಿ) ಇವರಿಬ್ಬರೂ ಅತೀ ಸಣ್ಣ ವಯಸ್ಸಿಗೆ ನನಗೆ ಅಕ್ಷರಗಳ ಸುಸ್ಪಷ್ಟ್ಟ ಪರಿಚಯ ಮಾಡಿಸಿಕೊಟ್ಟಿದ್ದರು. ಒಂದು ದಿನ ಮನೆಯಲ್ಲಿ ಯಾರೂ ಇರಲಿಲ್ಲ.( ನಾನು ಹಾಗೆಂದು ಕೊಂಡಿದ್ದೆ) ಬಹುಶ: ಎರಡನೇ ತರಗತಿ ನಾನು, ಕಳ್ಳ ಹೆಜ್ಜೆಯಿಡುತ್ತಾ ಹೋಗಿ ಗದುಗಿನ ಭಾರತವನ್ನೆತ್ತಿ ಕೊಂಡೆ. ಆಗ ಹಂಚೀಕಡ್ಡಿಯಂತಿದ್ದ ನನಗೆ ಅದನ್ನು ಎತ್ತಿಕೊಳ್ಳುವುದೇ ಸಾಹಸ ಕೆಲಸವಾಗಿತ್ತು. ( ನಂತರದ ದಿನಗಳಲ್ಲಿ ಎಲ್ಲರ ಬಾಯಿಂದ ಕೇಳಿದ್ದರಿಂದ ಇದರ ಬಗ್ಗೆ ಬರೆಯುತ್ತಿದ್ದೇನೆಯೇ ಹೊರತು ನನಗೂ ಇದರ ಸ್ಪಷ್ಟ ನೆನಪಿಲ್ಲ.) ಓದಲೆತ್ನಿಸುತ್ತಾ ಅರ್ಥವಾಗದೆ ಕಣ್ಣುಕಣ್ಣು ಬಿಡುತ್ತಿದ್ದವಳ ಬೆನ್ನ ಹಿಂದೆ ಬಂದು ನಿಂತ ನನ್ನಣ್ಣ "ಅರ್ಥವಾಗ್ತಿದೆಯಾ" ಎಂದು ಮೃದುವಾಗಿ ಕೇಳಿದರು. ಅದನ್ನು ಮುಟ್ಟಿ ಸಿಕ್ಕಿಬಿದ್ದಿದ್ದಕ್ಕೋ, ಅಣ್ಣನಂತೆ ಪುಸ್ತಕ ತೆರೆದೊಡನೆ ಹಾಡುತ್ತೇನೆ ಎಂಬ ಭ್ರಮೆ ಕಳಚಿದ್ದಕ್ಕೋ ಜೋರಾಗಿ ಅಳಲಾರಂಭಿಸಿದೆ. ಜೋಪಾನವಾಗಿ ಕುಮಾರವ್ಯಾಸನನ್ನು ಮುಚ್ಚಿಟ್ಟ ನನ್ನಣ್ಣ " ಇದನ್ನು ಓದುವ ಕಾಲವೂ ಬಂದೇಬರುತ್ತದೆ. ಈಗ ನೀನು ಓದಬೇಕಿರುವುದು ಇದನ್ನು" ಎಂದು ನನ್ನ ಕಣ್ಣೊರೆಸಿ ಕೈಗೆ ಅಮರ ಚಿತ್ರ ಕಥಾ ಮಾಲಿಕೆಯನ್ನು ಕೈಗಿತ್ತರು. ನನ್ನ ಓದು ಆರಂಭವಾಗಿದ್ದು ಹೀಗೆ. ನನಗಿಷ್ಟವಿಲ್ಲದ ಯಾವುದೇ ಕೆಲಸವನ್ನು ಒತ್ತಾಯದಿಂದ ಮಾಡಿಸಲಿಲ್ಲ ನನ್ನಣ್ಣ, ಓದುವುದನ್ನೂ.
ಮಲ್ಲಾಡಿಹಳ್ಳಿಯಿಂದ ೫ ಕಿಮೀ ಇದ್ದ ನನ್ನೂರಿಗೆ ನಡೆದು ಕೊಂಡೇ ಹೋಗಬೇಕಿತ್ತು. ಆ ಕುಗ್ರಾಮಕ್ಕೆ ಆಗಿನ್ನೂ ವಾಹನ ಸೌಕರ್ಯ ಇರಲಿಲ್ಲ. ಸಾಮಾನ್ಯವಾಗಿ ಶಾಲೆ ಮುಗಿದ ನಂತರವೇ ಹೊರಡುತ್ತಿದ್ದರಿಂದ ಸಂಜೆಯಾಗಿರುತ್ತಿತ್ತು. ಅಬ್ಬಬ್ಬಾ ಎಂದರೆ ಎರಡು ಕಿಮೀ ಬಸ್ಸು ಸಿಗುತ್ತಿತ್ತು ಮುಂದಿನ ದಾರಿ ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾದ ಅನಿವಾರ್ಯತೆ. ನಮ್ಮ ಪುಟ್ಟ ಪುಟ್ಟ ಕಾಲ್ಗಳ ಕಷ್ಟ ನೀಗಿಸಲು ಅಣ್ಣ ಕಥೆ ಹೇಳುತ್ತಾ ಹೋಗುತ್ತಿದ್ದರು. ಸೂರ್ಯ ತಾನೂ ಕೆಂಪಾಗುವುದಲ್ಲದೆ ನಮ್ಮೆಲ್ಲರನ್ನೂ ಕೆಂಪಾಗಿಸಿರುತ್ತಿದ್ದ. ಅಣ್ಣ ಹೇಳುತ್ತಿದ್ದ ಪುರಾಣ ಕಥೆಗಳು, ಅರೇಬೀಯನ್ ನೈಟ್ಸ್, ಪಂಚತಂತ್ರ, ಜಾತಕ , ವಿಕ್ರಮ ಬೇತಾಳ ಕತೆಗಳೂ ಆ ಹೊಂಬೆಳಕಿನಲ್ಲಿ ಮಿಂದು ನಮಗೊಂದು ಸ್ವರ್ಗೀಯ ಅನುಭವ ಕೊಡುತ್ತಿದ್ದವು. ಅರ್ಧ-ಮುಕ್ಕಾಲು ಹಾದಿ ಕ್ರಮಿಸುವಷ್ಟರಲ್ಲಿ ಕತ್ತಲು ಕೆಂಬಣ್ಣವನ್ನು ನುಂಗಲು ಆರಂಭಿಸುತ್ತಿತ್ತು. ಅಲ್ಲಿಯವರೆಗೂ ನಂದನವನದ ಹೊನ್ನ ವೃಕ್ಷಗಳಂತೆ ಕಂಗೊಳಿಸುತ್ತಿದ್ದ ಜಾಲಿ ಮರಗಳು ಕಪ್ಪಗೆ ವಿಕ್ರಮಾದಿತ್ಯನ ಬೇತಾಳ ನೇತಾಡುತ್ತಿದ್ದ ಮರಗಳಂತೆ ಅನ್ನಿಸಿ ಅಣ್ಣನಿಗೆ ಆತು ಕೊಳ್ಳುತ್ತಿದ್ದೆವು. ಕರಡಿಗಳ ನಾಡೆಂದು ಜನಜನಿತವಾಗಿದ್ದ ಆ ದಾರಿಯಲ್ಲಿ ಈಚಲು ಪೊದೆಗಳ ಹಿಂದೆ ಅವಿತು ನಮಗಾಗೆ ಕಾಯುತ್ತಿರಬಹುದಾದ ಕರಡಿಗಳನ್ನು ಊಹಿಸುತ್ತಾ, ಅವು ಬಂದೆರಗುವ ಕ್ಷಣಗಳನ್ನು ಭಯದಿಂದ ಎದುರು ನೋಡುತ್ತಿರುವಾಗ ಅಣ್ಣ ಇದ್ದಕ್ಕಿದ್ದಂತೆ ಕುಮಾರವ್ಯಾಸನ ಯಾವುದಾದರೂ ಪ್ರಸಂಗವನ್ನು ಹಾಡಿ ಅರ್ಥ ವಿವರಿಸುತ್ತಿದ್ದರು. ಕತ್ತಲು, ಕರಡಿ, ಬೇತಾಳ ಎಲ್ಲ ಎಲ್ಲವೂ ಕರಗಿ ನಾವು ದ್ವಾಪರ ಯುಗದಲ್ಲಿ ಆನಂದದಿಂದ ಹೆಜ್ಜೆ ಹಾಕುತ್ತಿದ್ದೆವು. ( ಈಗ ಆ ದಾರಿಯಲ್ಲಿ ಹೆಜ್ಜೆ ಹಾಕುವಾಗ ನನ್ನ ಕಣ್ಣು ಮಂಜು ಮಂಜು, ಮನಸ್ಸು ಒದ್ದೆ ಒದ್ದೆ.)
ಈ ಗದುಗಿನ ಭಾರತದ ಬಗ್ಗೆ ನನಗೊಂದು ವಿಚಿತ್ರ ಮೋಹವಿತ್ತು. ಅಣ್ಣ ಕುಮಾರವ್ಯಾಸ ಇಬ್ಬರಲ್ಲೂ ವ್ಯತ್ಯಾಸವೇ ನನಗಿರಲಿಲ್ಲ. ಒಮ್ಮೆ ನನ್ನ ಮಾವನ ಮನೆಗೆ ಹೋದಾಗ ಅಲ್ಲಿ ನನಗೀ ಪುಸ್ತಕ ಕಾಣಿಸಿತು. ಸೀದಾ ಅಣ್ಣನ ಬಳಿ ಹೋಗಿ ಹೇಳಿದೆ. " ಅಣ್ಣಾ, ಅದು ನಮ್ಮನೆ ಬುಕ್ಕು. ಇಲ್ಲಿದೆ" . ಅದು ಅವರ ಮನೆಯದೇ ಪುಸ್ತಕ ಎಂದು ಅಣ್ಣ ಎಷ್ಟು ಹೇಳಿದರು ನನಗೆ ಸಮಾಧಾನವಾಗಲೇ ಇಲ್ಲ. ಹೇಗಾದರೂ ಮಾಡಿ ಅದನ್ನು ಯಾರಿಗೂ ಗೊತ್ತಾಗದಂತೆ ಎತ್ತಿಕೊಂಡು ಬಂದು ಬಿಡುವ ಯೋಜನೆ ಒಳಗೊಳಗೇ ಹಮ್ಮಿಕೊಂಡಿದ್ದೆನಾದರೂ ಆ ಪುಸ್ತಕದ ಗಾತ್ರ ಅದಕ್ಕೆ ಅಡ್ಡಿಯಾಗಿತ್ತು. ವಾಪಸ್ ಮನೆಗೆ ಬಂದು ನೋಡಿದಾಗಲೇ ನನಗೆ ಅರ್ಥವಾಗಿದ್ದು ಅದು ಯಾರ ಮನೆಯಲ್ಲಿ ಬೇಕಾದರೂ ಇರಬಹುದಾದ ಪುಸ್ತಕವೆಂದು. ಹುಟ್ಟಿದಾಗಿನಿಂದ ಅದರ ಜೊತೆಗೊಂದು ಅವಿನಾಭಾವ ಸಂಬಂಧ ಬೆಳೆಸಿಕೊಂಡುಬಂದಿದ್ದ ನನಗೆ ಇದನ್ನು ಅರಗಿಸಿಕೊಳ್ಳಲು ಆಗಲೇ ಇಲ್ಲ. ಆದರೂ ಛಲ ಬಿಡದ ತ್ರಿವಿಕ್ರಮಳಂತೆ ಮತ್ತೆ ಮತ್ತೆ ಕೇಳಿದೆ.. " ಅವರ್ಯಾರೂ ನಿಮ್ಮಷ್ಟು ಆ ಬುಕ್ಕನ್ನ ಓದಿಲ್ಲ ಅಲ್ವೆನಣ್ಣಾ". ನನ್ನ ಮುಗ್ಧತೆಗೆ ಅಣ್ಣ ನಕ್ಕುಬಿಟ್ಟರು. " ನಿನ್ನ ಮಾವ ಅರಾಸೇ ನಾನು ಓದಿದ್ದಕ್ಕಿಂತ ಹತ್ತು ಪಟ್ಟು ಜಾಸ್ತಿ ಇದನ್ನು ಓದಿದ್ಡಾರೆ." ನನಗೆ ಈ ಉತ್ತರ ಸ್ವಲ್ಪವೂ ಇಷ್ಟವಾಗಲಿಲ್ಲ. ಕುಮಾರವ್ಯಾಸ ನಮ್ಮ ಮನೆಯ ಸದಸ್ಯ ಮಾತ್ರ ಎಂಬ ನನ್ನ ನಂಬಿಕೆಯ ಮೇಲೆ ನನ್ನ ಅಣ್ಣ ತಣ್ಣೀರೆರೆಚಿದ್ದರು. ( ನಂತರ ಅರಾಸೇ ಬರೆದ 'ಕುಮಾರವ್ಯಾಸ ಭಾರತ ಓದಿದ ಮೇಲೆ ಅಣ್ಣನ ಮಾತಿನ ಸತ್ಯ ನನಗರಿವಾಯಿತು) ಓದಿದ್ದಕ್ಕಿಂತ ಹೆಚ್ಚು ಓದಿದ್ದೇವೆಂದು ತೋರಿಸಿಕೊಳ್ಳುವ ಜನರಿರುವ ಕಾಲದಲ್ಲಿ ನನ್ನಣ್ಣ ನಿಜಕ್ಕೂ ಮಾದರಿಯೆನಿಸುತ್ತಾರೆ. ಚಿಕ್ಕವಳಾದ ನನ್ನ ಬಳಿಯೂ ಅವರು ಸುಳ್ಳಾಡಲಿಲ್ಲ.
ಅವರ ಕಂಠ ಬಹಳ ಸುಶ್ರಾವ್ಯವಾಗಿತ್ತು. ಗಮಕವಷ್ಟೆ ಅಲ್ಲದೆ ಹಳೆಯ ಹಿಂದಿ ಚಿತ್ರಗೀತೆಗಳನ್ನವರು ಅದ್ಭುತವಾಗಿ ಹಾಡುತ್ತಿದ್ದರು. ದಾಸರ ಪದಗಳು, ಕೀರ್ತನೆಗಳು ಅವರ ಕಂಠದಲ್ಲಿ ಸೊಗಸಾಗಿ ಮೂಡಿಬರುತ್ತಿತ್ತು. ನನಗವರು ಗಮಕ ಕಲಿಸಿದರು, ಹಾಡುಗಳನ್ನು ತಿದ್ದಿದರು, ಓದು ಸಮೃದ್ಧವಾಗುವಂತೆ ಮಾಡಿದರು, ಸಂಸ್ಕೃತದ ಬಗ್ಗೆ ಅಭಿಮಾನ ಬೆಳೆಸಿದರು, ಒಳ್ಳೆಯ ಚರ್ಚಾಪಟುವಿಗಿರಬೇಕಾದ ಅರ್ಹತೆಯನ್ನು ತಿಳಿಸಿ ಕೊಟ್ಟರು, ಜ್ಯೋತಿಷ್ಯದ ಬಗ್ಗೆ ಅರಿವು ಮೂಡಿಸಿದರು, ಎಲ್ಲ ಎಲ್ಲವನ್ನೂ ನಾನಾಗಿ ಹಾತೊರೆದು ಕೇಳಿದಾಗ ಮಾತ್ರ, ನನಗಿಷ್ಟವಿಲ್ಲದ್ದನ್ನು ಅವರೆಂದೂ ಹೇರಲಿಲ್ಲ.
ಇಷ್ಟಾದರೂ ನನ್ನಲ್ಲಿ ಅವರ ಬಗ್ಗೆ ಒಂದು ಸಣ್ಣ ಅಸಮಾಧಾನವಿತ್ತು. ಸಭೆಗಳಲ್ಲಿ ಭಾಷಣ ಮಾಡುವಾಗ, ಹಾಡುವಾಗ, ನರ್ತಿಸಿದಾಗ, ಚರ್ಚಾಸ್ಪರ್ಧೆಯಲ್ಲಿ ಗೆದ್ದಾಗ, ಡಿಸ್ಟಿಂಕ್ಷನ್ ತೆಗೆದಾಗ ಅಚ್ಚರಿ ಗೊಂಡು ಹುಬ್ಬೇರಿಸುತ್ತಿದ್ದವರೆಲ್ಲ ಯಾರ ಮಗಳು ಎಂದು ತಿಳಿದೊಡನೆ ಏರಿದ ಹುಬ್ಬು ಇಳಿಸಿಬಿಡುತ್ತಿದ್ದರು. "ಓ" ಎಂಬ ಉದ್ಗಾರದಲ್ಲಿ ಅಷ್ಟೂ ಇಲ್ಲದಿದ್ದರೆ ಹೇಗೆ ಎನ್ನುವ ಭಾವ ಕಾಣಿಸಿ ನನ್ನನ್ನು ಕೆರಳಿಸುತ್ತಿತ್ತು.  ೧೦ನೆಯ ತರಗತಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದವರು ಅವರು. ಸಂಗೀತದಲ್ಲಿ, ಹಿಂದಿ, ಆನರ್ಸ್ ಎಲ್ಲ ಕಡೆಯೂ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದವರು. ಸಹಜವಾಗಿಯೇ ನನ್ನ ಸಾಧನೆ ಅವರ ಮುಂದೆ ಮಬ್ಬಾಗುತ್ತಿತ್ತು. ಎಷ್ಟೋ ಬಾರಿ ಗೊಣಗುತ್ತಿದ್ದೆ. " ಹೋಗಣ್ಣ ನಿಮ್ಮ ಮಗಳಾಗಿದ್ದೆ ತಪ್ಪಾಗಿ ಹೋಯ್ತು, ನಾನೇನು ಗೆದ್ದರೂ ನಂದಲ್ಲ ಅಂತಾರೆ ಎಲ್ಲರೂ". ಆಗೆಲ್ಲ ನಕ್ಕು ಸುಮ್ಮನಾಗುತ್ತಿದ್ದ ಅಣ್ಣ ನಾನು ಶಾಂತಳಾದ ಮೇಲೆ ನಿಧಾನವಾಗಿ ಹೇಳುತ್ತಿದ್ದರು " ಹಾಗಾದ್ರೆ ನಿನ್ನ ಮುಂದೆ ದೊಡ್ಡ ಗುರಿ ಇರಬೇಕಾಗುತ್ತೆ, ನನ್ನನ್ನೂ ಮೀರಿಸುವ ಗುರಿ".
ಮೊದಲ ಕಥೆ, ಪುಸ್ತಕ ಬಂದ ನಂತರ ಕನಿಷ್ಟ ೫ ವರ್ಷಗಳು ಬರೆಯಬೇಡೆಂಬ ಮಿತಿ ವಿಧಿಸಿದರು. ದಿನಕ್ಕೆ ೩ ಪುಸ್ತಕ ಓದುತ್ತೇನೆಂದು ಸೊಕ್ಕುತ್ತಿದ್ದ ನನಗೆ ಹೇಗೆ ಓದಬೇಕೆಂದು ಹೇಳಿ ಕೊಟ್ಟರು. ಪ್ರತಿ ಪುಸ್ತಕ ಓದಿದ ನಂತರ ಅದರ ಒಳನೋಟಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ವಾಚ್ಯಾರ್ಥಗಳನ್ನು ಬದಿಗಿರಿಸಿ ಸೂಚ್ಯಾರ್ಥಗಳನ್ನು ಸ್ಪರ್ಶಿಸುವ ಸುಖ ಕಲಿಸಿದರು. ಟಿಎಸ್ ಎಲಿಯೆಟ್, ಯೇಟ್ಸ್, ಬರ್ನ್, ಫ್ರಾಸ್ಟ್ ರನ್ನು ಪರಿಚಯಿಸಿದರು, ರಾಮಾಯಣ, ಮಹಾಭಾರತ ನನ್ನಲ್ಲಿ ಬೇರೂರುವಂತೆ ಮಾಡಿದರು......ಎಲ್ಲಕ್ಕಿಂತ ಕುಮಾರವ್ಯಾಸನನ್ನು ಅವರಿಲ್ಲದ ಈ ದಿನಗಳಲ್ಲಿ ನನ್ನನ್ನು ಪೊರೆಯುವಂತೆ ಮಾಡಿದರು. ನಂತರದ ದಿನಗಳಲ್ಲಿ ಪುಸ್ತಕ ಹಿಡಿಯಲಾರದ ಅನಿವಾರ್ಯತೆ ಬಂದಾಗ ' ಬದುಕು ಓದಿಗಿಂತ ದೊಡ್ಡದು' ಎಂದು ಸಂತೈಸಿದರು. ಈ ಬದುಕು ನನ್ನಣ್ಣ, ನನ್ನ ಗುರು ನನಗಿತ್ತ ಭಿಕ್ಷೆ.
ಅಣ್ಣ ನೆನಪಾದಾಗ, ನೆನಪುಗಳು ತೀವ್ರವಾಗಿ ಕಾಡಿದಾಗ ಈಗಲೂ ಆ ಪುಸ್ತಕ ಕೈಗೆತ್ತಿಕೊಳ್ಳುತ್ತೇನೆ, ತಬ್ಬಿಕೊಳ್ಳುತ್ತೇನೆ..ಕುಮಾರವ್ಯಾಸ  ನನ್ನಣ್ಣನಾಗಿ  ನನ್ನನ್ನು ನೇವರಿಸುತ್ತಾನೆ, ಕಣ್ಣೊರೆಸುತ್ತಾನೆ, ಕಾಯುತ್ತಾನೆ..

ಬಿಸಿಲು

ಧಗೆ ದೊಡ್ಡಪ್ಪಾ,
ನೀವು ಅಲ್ಲೇ ಇದ್ದೀರಲ್ಲಾ? ಸೂರ್ಯನ ಪಕ್ಕದಲ್ಲೆ? ಅಣ್ಣನೂ ಅಲ್ಲೇ ಇದ್ದಿರಬೇಕು. ಇದ್ದಿರಬೇಕೇನು , ಇದ್ದೇ ಇದ್ದಾರೆ. ಹೇಳಿ ನಿಮ್ಮ ಮಗಳಿಗೆ ಸಿಕ್ಕಾಪಟ್ಟೆ ಧಗೆ ಅಂತ. ಕೊಂಚ ಕಡಿಮೆ ಮಾಡಲು ಹೇಳಿ ಸೂರ್ಯನಿಗೆ, ಉಸಿರಾಡುತ್ತೇನೆ ಕೊಂಚ ಸಹಜ ಗಾಳಿಯನ್ನಾದರೂ.
ನೀವು ಮರೆತಿರಬಹುದೇನೋ, ನಾನಿನ್ನೂ ಮರೆತಿಲ್ಲ. ಅಂದು ನಿಮ್ಮೊಡನೆ ನಾನೂ ನನ್ನ ಅಕ್ಕ ಇಬ್ಬರೂ ನಡೆಯುತ್ತಿದ್ದ ಕ್ಷಣ, ಎಷ್ಟು ಬಗೆಯ ಕಲ್ಲುಗಳವು, ಮರಳ ಗಾತ್ರದ ಕಲ್ಲು ಚೂರುಗಳು, ಸಣ್ಣ ಸಣ್ಣ ಕಲ್ಲು, ದೊಡ್ಡ ಕಲ್ಲು, ನಡು ನಡುವೆ ಕಾಲಿಗೆ ಚುಚ್ಚಲೆಂದೇ ಅವಿತು ಕುಳಿತಂತಿದ್ದ ರಾಯಜಾಲೀ ಮುಳ್ಳುಗಳು.
ಅವತ್ತೂ ಸೂರ್ಯ ಕೆಂಡಗಳನ್ನೇ ಸುರಿಸುತ್ತಿದ್ದ. ಕಾದ ರಸ್ತೆ, ಕಾದ ಹೆಂಚಿನಂತಿದ್ದ ನಮ್ಮ ಮುಖ, ನಾಲ್ಕು ಕಿಲೋ ಮೀಟರ್ ಉದ್ದದ ದಾರಿ, ನಮ್ಮ ಪುಟ್ಟ ಪುಟ್ಟ ಕಾಲ್ಗಳು ನಿಮ್ಮೊಡನೆ ಓಡಲಾರದೆ, ಓಡದಿರಲಾರದೆ, ಸೋಲುತ್ತಿದ್ದ ಕ್ಷಣಗಳಲ್ಲೇ " ಬೇಗ ಹೆಜ್ಜೆ ಹಾಕಿ, ಬಿಸಿಲೇರುತ್ತೆ"... " ಇನ್ನೂ ಏರತ್ತಾ" ನಮ್ಮ ಮುಖದಲ್ಲಿ ಬೆರಗು ಗಾಬರಿ, "ದೊಡ್ಡಪ್ಪಾ ಬಿದ್ಲು ಇವಳು.." ಅಕ್ಕನ ದನಿ ಕಿವಿಗೆ ಬಿದ್ದ ಮೇಲೇ ನಾನು ಬಿದ್ದದ್ದು ನನಗೆ ಗೊತ್ತಾಗಿದ್ದು. ನೀವೊಮ್ಮೆ ನಿಂತು ಹೌದೋ ಅಲ್ಲವೋ ಎಂಬಂತೆ ತಿರುಗಿದಿರಿ. ಎಷ್ಟೇ ಮರೆಮಾಚಿದರೂ ನಿಮ್ಮ ಹುಸಿಗಂಭೀರ ಮುಖದಲ್ಲಿದ್ದ ಕಾಳಜಿ ಹೊತ್ತ ಕಣ್ಣುಗಳು ನನಗೆ ಕಂಡೇ ಬಿಟ್ಟಿತ್ತು. "ಏಳ್ತಾಳೆ ಅವ್ಳೇ, ಬಿಡು ಅವ್ಳನ್ನ,ಎದ್ದು ಬೇಗ ಹೆಜ್ಜೆ ಹಾಕಿ..." ಎರಡು ಹೆಜ್ಜೆ ಮುಂದಿಟ್ಟವರು ಕಾಲಿಗೆ ಮುಳ್ಳು ಚುಚ್ಚಿತೆಂಬಂತೆ ಬಗ್ಗಿ ಕಾಲು ಸವರುತ್ತ ಮತ್ತೆ ಹಿಂತಿರುಗಿ ನೋಡಿದಿರಲ್ಲಾ , ಆಗ ಕಂಡಿದ್ದು ನಿಮ್ಮ ಕಣ್ಣುಗಳಲ್ಲ. ಚಿತ್ರದುರ್ಗದ ಬಿಸಿಲಿಗೆ ಒಣಗಿ ಬಾಯ್ಬಿಟ್ಟ ಬಿರುಕು ನೆಲಕ್ಕಿಂತ ದೊರಗಾಗಿ ಒಡೆದಿದ್ದ ನಿಮ್ಮ ಪಾದಗಳು. ಗಾಬರಿಯೇ ಆಗಿತ್ತು, ಅಲ್ಲಿಯವರೆಗೆ ನಾನು ಅಂತಹ ಕಾಲುಗಳನ್ನೆ ನೋಡಿರಲಿಲ್ಲ. ಬಿದ್ದ ನೋವು ಮರೆತು ಓಡಿ ಬಂದು ಕೇಳಿದ್ದೆ. ನಿಮ್ಮ ಕಾಲಿಗೆ ಇಷ್ಟೊಂದು ಗಾಯವಾಗಿದೆಯಲ್ಲ ದೊಡ್ಡಪ್ಪಾ ನೋವಾಗ್ತಿಲ್ವಾ? ನಕ್ಕಿದ್ದಿರಿ, "ಮತ್ತೆ.. ನೋಡು ಸೂರ್ಯಪರಮಾತ್ಮನ್ನ, ಈ ಪಾಟಿ ಬಿಸ್ಲು, ಧೂಳು, ಅದಕ್ಕೆ ಹೀಗಾಗಿದೆ ಪುಟ್ಟೀ" "ಈ ಸೂರ್ಯ ತುಂಬ ಕೆಟ್ಟವ್ನು ದೊಡ್ಡಪ್ಪಾ, ಬಿಸ್ಲಲ್ಲಿ ಓಡಾಡ್ ಬೇಡಿ. ಈ ಗಾಯ ಹಾಗೆ ದೊಡ್ಡದಾಗ್ತಾ ತಲೆವರ್ಗೂ ಬಂದ್ ಬಿಟ್ರೆ?..." ತಲೆ ಬುಡವಿಲ್ಲದ ನನ್ನ ಮಾತುಗಳಿಗೆ ಎಂಥ ಉತ್ತರ ಕೊಟ್ಟಿದ್ರಿ ಅವತ್ ನೀವು. "ಸೂರ್ಯನ ಪಕ್ಕಾನೆ ನಮ್ಮಪ್ಪ, ಅಮ್ಮ, ದೊಡ್ಡಪ್ಪ ,ಚಿಕ್ಕಪ್ಪ ಎಲ್ರೂ ಇರ್ತಾರೆ ಕಣೆ, ನನ್ ಮಕ್ಳು ತಡ್ಕೋಳಷ್ಟು ಮಾತ್ರ ಬಿಸ್ಲು ಕೊಡು ಅಂತ ಅವ್ರು ಕೇಳ್ಕೋತಾರೆ.ಆಗ ಸೂರ್ಯ ಅಯ್ಯೋ ಪಾಪ ಅಂತ ನಾವು ತಡ್ಕೋಳೂಷ್ಟು ಮಾತ್ರ ಬಿಸ್ಲು ಕೊಡ್ತಾನೆ. ಇದೆಲ್ಲಾ ಇದ್ದಿದ್ದೇ, ನೀವು ಬೇಗ ಬನ್ನಿ. " ಮನೆ ತಲ್ಪಿ ದೊಡ್ಡಮ್ಮ ಕೊಟ್ಟ ರಾಗಿ ಪಾನಕ ಕುಡಿದು, ಬಕೆಟ್ ನೀರಿನಲ್ಲಿ ಮುಳುಗಿಸಿಟ್ಟಿದ್ದ ಮಾವಿನಹಣ್ಣು ತಿನ್ನುವಾಗ ಸೂರ್ಯನ ಪಕ್ಕ ಇರಬಹುದಾದ ಅಜ್ಜ ಅಜ್ಜಿಯರ ಬಗ್ಗೆ ಯೋಚನೆ ಮತ್ತು ದಿವ್ಯ ಸಮಾಧಾನ. ಸೂರ್ಯ ನಮಗೇನೂ ಮಾಡಲಾರ.
ಮೊನ್ನೆ ಉರಿವ ಬಿಸಿಲಲ್ಲಿ, ಚಿತ್ರದುರ್ಗದ ಬೆಟ್ಟದ ಕೆಳಗೆ ನಿಂತು ತುಪ್ಪದ ಕೊಳದತ್ತ ಕಣ್ಣು ಹಾಯಿಸಿದಾಗ ನಿಮ್ಮ ಮಾತುಗಳೇ ಕಿವಿಯಲ್ಲಿ. "ಅಮ್ಮಾ ನಾವು ಹೋಗೇ ಹೋಗ್ತೀವಿ".ಮಕ್ಕಳು ಶೂ ಕಾಲಿನಲ್ಲಿ ಆನೆಹೆಜ್ಜೆ ಕುದುರೆಹೆಜ್ಜೆಯಲ್ಲಿ ಒಂದೊಂದೇ ಹೆಜ್ಜೆ ಇಡುತ್ತ, ಥೇಟ್ ನಾನಂದು ಹತ್ತಿದಂತೇ ಹತ್ತಲು ಹೊರಟೇ ಬಿಟ್ಟರಲ್ಲ!! ಹಳೆಯ ನೆನಪುಗಳ ಸಂತೆ ಮನದಲ್ಲಿ. ಅವರೆಲ್ಲಾದರೂ ಬಿದ್ದು ಬಿಟ್ಟರೆ, ಆತಂಕವನ್ನೂ ನುಂಗುವಂತೆ ಬೆಟ್ಟ ಬತೇರಿ ಕೈ ಬೀಸುತ್ತಲೇ ಇದ್ದ ಪರಿಗೆ ಮನಸೋತು ಚಪ್ಪಲಿ ಬದಿಗಿಟ್ಟು ಇಟ್ಟ ಎರಡು ಹೆಜ್ಜೆ....ಎರಡೇ ಹೆಜ್ಜೆ, ಕೆಂಡದ ಮೇಲೆ ಕಾಲಿಟ್ಟಂತೆ! ಹಾ ! ಎಂದು ಚೀತ್ಕರಿಸಿ ಮತ್ತೆ ಚಪ್ಪಲಿ ಮೆಟ್ಟಿ, ಕುಡಿಯಲೆಂದು ಹೊತ್ತೊಯ್ದಿದ್ದ ನೀರನ್ನು ಕಾಲಿಗೆ ಹಾಕಿಕೊಂದವಳಿಗೆ ಅದೆಷ್ಟು ಸುಮಕೋಮಲೆಯಾಗಿ ಬಿಟ್ಟೆ ನಾನು..!! ಬೆರಗೋ ಹಳಹಳಿಕೆಯೋ?! ದೊಡ್ಡಪ್ಪಾ ನೀವಲ್ಲೆ ಇದ್ದಿರಲ್ಲ ಸೂರ್ಯನ ಬದಿಯಲ್ಲಿ. ಹೇಳುವದಲ್ಲವಾ ಅವನಿಗೆ "ಕೊಂಚ ಬಿಸಿಲು ಕಡಿಮೆ ಮಾಡು ನನ್ನ ಮಗಳು ಬೆಟ್ಟ ಹತ್ತಬೇಕಿದೆ"
ನಗುತ್ತಿದ್ದೀರಾ ದೊಡ್ಡಪ್ಪಾ, ಬಿಸಿಲಲ್ಲಿ ಬೆಂದರೂ ಬಿದ್ದರೂ ಬೇಯದ ಹಾಗೆ ಮುನ್ನಡೆಯಬೇಕೆಂದು, ಬಿದ್ದ ನಾವೇ ಮೇಲೇಳಬೇಕೆಂದು ಹೇಳಿಕೊಟ್ಟವರು ನೀವು. ನಾನದನ್ನು ಬದುಕಿಗೂ ಅಳವಡಿಸಿಕೊಳ್ಳುತ್ತಲೇ ಹೋದೆ. ಬಿದ್ದಾಗ ಯಾರ ಕೈಗೂ ಕಾಯದೆ, ಕೈಕಾಲು ಕೊಡವಿಕೊಂಡು ಮೇಲೇಳುತ್ತ, ಬೆಂದದ್ದು ಯಾರಿಗೂ ತೋರಿಸಿಕೊಳ್ಳದೆ, ತಂಪಿನಲ್ಲಿದ್ದಂತೆ ನಗುತ್ತ ಇರುವುದು ರೂಢಿಯಾಗಿಯೇ ಹೋಯಿತು,
ಈಗ ಕೊತಕೊತ ಕುದಿಯುತ್ತಿದೆ ಬೆಂಗಳೂರು. ಕುದಿಯುವ ಮಧ್ಯಾಹ್ನದಲ್ಲಿ ಅಡಿಗರನ್ನು ಕೈಗೆತ್ತಿಕೊಂಡೆ ನೋಡಿ. ಬಿಸಿಲು, ಧಗೆ, ಆ ದಾರಿ ಮತ್ತು ಬೆಟ್ಟ ಎಲ್ಲವೂ ಮತ್ತೆ ಮತ್ತೆ ಕಣ್ಮುಂದೆ.
ಹೊಗೆ ಬೆಂಕಿ,
-ಅಯ್ಯೋ ಹಾಳಾಗ-
ಉರಿ, ಶಖೆ, ತಾಪ;
ಹೊರಗೆ ರಣ ರಣ ಬಿಸಿಲು, ಒಳಗೆ ಮಾರಣ ಬೆಂಕಿ.
ಮಲಗಿತ್ತು ಮನ ಚಿತೆಯ ಮೇಲೆ ಆಫೀಸಿನಲಿ.

ಇದಕ್ಕಿಂತ ಸೊಗಸಾಗಿ, ಭೀಕರವಾಗಿ, ಬಿಸಿಲನ್ನು ವರ್ಣಿಸಲು ಸಾಧ್ಯವೇ ದೊಡ್ಡಪ್ಪಾ?ಬಿಸಿಲೇರಿದೊಡನೆ ಕೈ ಯಾಂತ್ರಿಕವಾಗಿ ಏಸಿಯ ಕಡೆ ಹೋಗುತ್ತದೆ. ಮಲಗಿದ್ದ ಮಕ್ಕಳ ಮುಖದಲ್ಲಿ ಬೆವರು ಕಂಡದ್ದು ನನ್ನ ಭ್ರಮೆಯಾ, ಇಪ್ಪತ್ತಾರರಿಂದ ಹದಿನೆಂಟಕ್ಕೆ ಸೆಟ್ ಮಾಡಿ ಚಳಿಯಾದರೆ ಎಂದು ಬ್ಲಾಂಕೆಟ್ ಇಟ್ಟು ಬರುತ್ತೇನೆ.
ಬದುಕಿನ ಬಿಸಿಗೊಂದು ಏಸಿ ಬೇಕಾಗಿದೆ ದೊಡ್ಡಪ್ಪ. ಥಟ್ಟನೆ ತಂಪಾಗುವ ಬಯಕೆ. ನಮಗೆಲ್ಲವೂ ಇನ್ ಸ್ಟಂಟ್ ಆಗಿರಬೇಕು. ಕೈಚಾಚಿದೊಡನೇ ಸಿಕ್ಕಬೇಕು. ತಣ್ಣಗೆ ಕೊರೆವ ಬೆಳ್ಳಿ ಇಳಿಜಾರು, ಹಿಮಹರ್ಮ್ಯ. ಬೇಕಿದೆ ತಂಪು ತಂಪು, ನರನೆತ್ತರನು ಗಡ್ಡೆ ಕಟ್ಟಿಸಿ ತಟ್ಟಿ ಮಲಗಿಸುವ ತಂಪು. ಕರೆಯುತಿದೆ ಹಿಮಗಿರಿಯ ಕಂದರ. ನಡುವೆ ಭಗ್ನ ಸೇತುವೆ.
ಮತ್ತೆ ನೆನಪಾಗುವ ಅದೇ ಪ್ರಿಯಕವಿಯ ಸಾಲುಗಳು.
ಕಾಯಬೇಕು ಬೇಸಿಗೆಯಲ್ಲ
ಬೇಯಿಸುವ ಹೊತ್ತು
ಬೆವರ ವಾಸನೆ ಹೊತ್ತು
ನಿಂತಲ್ಲಿಯೇ ಬೇರು ಬಿಟ್ಟು, ಬೇರ್ಪಟ್ಟು,
ಕಾಯುತ್ತಲೇ ಮಾಗಿ, ಮಾಗಿದ ಕಾಯಿ ಹಣ್ಣಾಗಿ,
ಹಣ್ಣಿನ ಚಿತ್ರ ಹೊನ್ನಲ್ಲಿ ಮೂಡಿ ಪುತ್ಥಳಿಯಾಗಿ
ಚಿನಿವಾರ ಸುಟ್ಟು ಕರಗಿಸಿ
ಕುಟ್ಟಿ ತಟ್ಟಿ ಮಂತ್ರಿಸಿಕೊಟ್ಟ ಕಂಠಿಕೆಯಾಗಿ....

ಕಲಿಯಬೇಕಾದ್ದು ಬಃಹಳವಿದೆ ದೊಡ್ಡಪ್ಪಾ. ನೀವು ಕಲಿಸಿಕೊಟ್ಟು ಹೋದ ಪಾಠವನ್ನು  ಮಕ್ಕಳಿಗೆ ಕಲಿಸುವುದನ್ನೂ ಕಲಿಯಬೇಕಿದೆ. ಮಕ್ಕಳಿಗೆ ಕಲಿಸುವ ಮುನ್ನ ನಾನೆಂಬ ಕಾಯಿ ಮಾಗಬೇಕಿದೆ. ಹಣ್ಣಾಗದಿದ್ದರೂ ದೋರೆಗಾಯಾಗಬೇಕಿದೆ. ಏಸಿ ಬಂದ್ ಮಾಡಬೇಕಿದೆ. ಬಿಸಿಲಲ್ಲಿ ನಿಲ್ಲುವ ಕಲೆ ಕಲಿತು, ಕಲಿಸಬೇಕಿದೆ. ಸೂರ್ಯನಿಗೆ ಹೇಳಿ ದೊಡ್ಡಪ್ಪಾ, ನನ್ನ ಮಗಳು ಸಹಿಸುವಷ್ಟು ...ಪಾಠ ಕಲಿಯುವಷ್ಟು ...ಕಲಿತು ಕಲಿಸುವಷ್ಟು ಬಿಸಿಲು ಕೊಡು.
-
ಮಾಲಿನಿ ಗುರುಪ್ರಸನ್ನ.

ಅಡಿಗರೆಂದರೆ..........

ಅಡಿಗರೆಂದರೆ .........
ಮೊಟ್ಟಮೊದಲು ಅಡಿಗರನ್ನು ನಾನು ಓದಿದ್ದು ನನ್ನ ಪ್ರೌಢ ಶಾಲೆಯ ಪಠ್ಯಪುಸ್ತಕದಲ್ಲಿ. ಆಗ ಅರ್ಥವೂ ಆಗಿರದ, ನನ್ನ ಆಕರ್ಷಿಸದೇ ಇದ್ದ ಅಡಿಗರ ಕಾವ್ಯ ಮುಂದೊಂದು ದಿನ ಬದುಕಿನ ಭಾಗವೇ ಆಗಿಬಿಟ್ಟದ್ದು ಸೋಜಿಗ... ಅನುದಿನದ ಬದುಕಿನ ನೂರೆಂಟು ಅನುಭವಗಳ ಅರ್ಥ ಅರಿಯಲಾಗದೆ ಸಂಕಟ ಪಡುವಾಗೆಲ್ಲ ಅಡಿಗರು ಇದು ನಿನ್ನೊಬ್ಬಳ ಪಾಡಲ್ಲ ಎಂದು ಪಾಠ ಮಾಡುತ್ತಾರೆ.. ನನ್ನ ಮುಂದೊಂದು ಕನ್ನಡಿ ಇಡುತ್ತಾರೆ. ಬದುಕಿನ ದುಃಖವನ್ನು ನಿರಸ್ತಗೊಳಿಸಲು ಹೋರಾಟ ಅಗತ್ಯವಾ ಅಂದುಕೊಂಡಾಗೆಲ್ಲ ಅಡಿಗರು ಕಣ್ಮುಂದೆ ನಿಲ್ಲುತ್ತಾರೆ.
ಅಡಿಗರೆಂದರೆ.. ಅವರು ಇರದುದರೆಡೆಗೆ ತುಡಿಯುವವರಷ್ಟೇ ಅಲ್ಲ.. ಅದು ಬರೀ ತುಡಿತವಾಗಿಯೇ ಉಳಿಯುವುದೆಂದು  ಖಚಿತವಾಗಿ ನಂಬಿದವರು. . " ಕೆಸರೊಳಿದ್ದರು ಮೇಲೆ ಬಾಂದಳವ ನೋಡಿ , ಮಿಸುಪ ರವಿ ಕಿರಣಗಳ ಸಿರಿಗೆ ಮೆರೆದಾಡಿ , ಮಸಗುವಂಬುಜದಂತೆ ಧ್ಯೇಯದಳವೆಸೆತಕೆ ಒಸಮಾಗು ಬಂದ ಮನುಜತೆಯ ಸಾರ್ಥತೆಗೆ  " ಎನ್ನುವಲ್ಲಿ ತುಡಿತವೆಂಬ ಭವತಾರಕ ಮಂತ್ರವನ್ನು ಹೇಳಿಕೊಟ್ಟವರು..ಬದುಕ  ಬಿಸಿಲಲ್ಲಿ ಬೇಯುವ ಹಿಂಸೆ ಕಾಡಿದಾಗ ಮಾಗುವುದು ಹಣ್ಣಾಗುವುದು ಬಿಸಿಲಲ್ಲೇ ಎಂಬ ಅರಿವು ಮೂಡಿಸಿದವರು , ಎಷ್ಟು ಸಾಗಿದರೂ ಮುಗಿಯದ ದಾರಿಯಲ್ಲಿ ಕಾಲುಗಳು ಬಳಲಿ ಚೀತ್ಕರಿಸಿದಾಗ 'ಪಯಣ ಹೊರಟವನ ಗತಿ ಗಾಣದೆತ್ತಿನ ಪ್ರಗತಿ, ಸಂಜೆಯಾದರೆ ಮತ್ತೆ ಅದೇ ಮತ್ತಿಗೆ" ಎಂದು ಬುದ್ದಿ ಹೇಳಿದವರು..  ಕೀಳರಿಮೆಯಿಂದ ಬಳಲುವಾಗ " ದೊಡ್ಡವರು ನೀವು, ನಾವೇನೂ ಕುಬ್ಜರಲ್ಲ " ಎಂದು ತಲೆ ಎತ್ತಿ ನಿಲ್ಲುವುದನ್ನು ಕಲಿಸಿದವರು.., ಹೀಗೆ ಹೇಳಬಹುದೇ ಎಂಬ ಅನುಮಾನ ಕಾಡಿದಾಗ " ಆಚಾರ್ಯರೆಲ್ಲ ದಿಕ್ಸೂಚಿಗಳು ದಿಗ್ಭ್ರಾಂತರಿಗೆ; ನಡೆಯಬೇಕಾದವರು ನಾವು ನೀವು " ಎಂದು ಧೈರ್ಯ ತುಂಬಿದವರು. ರಮ್ಯ ಭ್ರಮೆಗಳ ತೊರೆದು ವರ್ತಮಾನದಲ್ಲಿ ಬದುಕುವುದನ್ನು ತಮ್ಮ ಪದ್ಯಗಳಲ್ಲಿ ಚೂಪು ವ್ಯಂಗ್ಯಗಳ ಮೂಲಕ, ದಿಟ್ಟತನದ ನಿಲುವುಗಳ ಮೂಲಕ ಹೇಳಿ  ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋದವರು ಅಡಿಗರು. ಬದುಕನ್ನು... ಅದರ ದುಃಖವನ್ನು .. ಆ ದುಃಖದ ನಿರಸ್ತಗೊಳಿಸುವಿಕೆಯನ್ನು ಅವರು ಹೇಗೆ ಕಂಡುಕೊಂಡಿರಬಹುದು....
ಬದುಕು ಹೋರಾಟದ್ದು ದುಃಖಮಯವಾದದ್ದು ಎಂದು ಒಪ್ಪಿಕೊಳ್ಳುತ್ತಲೇ ಆ ದುಃಖವನ್ನು ನಿರಸ್ತಗೊಳಿಸಬೇಕು ಎಂಬುದನ್ನೂ ನಾವು ಒಪ್ಪಿಕೊಳ್ಳುತ್ತೇವೆ. ಹೀಗೆ ನಿರಸ್ತಗೊಳಿಸಲು ಎರಡು ಬಗೆಯ ದಾರಿಗಳಿವೆ. ಮೊದಲನೆಯದು ದುಃಖದ ಸ್ವರೂಪವನ್ನು ತಾತ್ವಿಕವಾಗಿ  ತಿಳಿದುಕೊಳ್ಳದೆಯೇ ದುಃಖವನ್ನು ನಿವಾರಣೆ ಮಾಡಲು ಕೇವಲ ಆ ದುಃಖವನ್ನು ನಿಯಮಿಸುವ ಶಕ್ತಿಗೆ ಪ್ರಾರ್ಥನೆ ಮಾಡುವುದು ಅರ್ಥವಿಲ್ಲದ್ದು. ಎರಡನೆಯದು ದುಃಖದ ಸ್ವರೂಪವನ್ನು ತಿಳಿದು ಕೊಳ್ಳುತ್ತಾ ಹೋದಲ್ಲಿ ಅದನ್ನು ಅರಿಯುವುದು ಅಸಾಧ್ಯವೇ ಸರಿ. ಅನುಭವ ಎನ್ನುವುದು ಅದೆಷ್ಟು ಅಮೂರ್ತ, ಅನೂಹ್ಯ ಮತ್ತು ಅಸಂಕಲ್ಪಿತ ಎಂದರೆ ಅದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲವಾಗಿಬಿಡುತ್ತದೆ.
ಹಾಗಾಗಿ ಒಂದು ವರ್ಗದ ಪ್ರಕಾರ ಜೀವನದ ಅನುಭವವನ್ನು ಅರ್ಥ ಮಾಡಿಕೊಳ್ಳಲು ಹೋಗದೆಯೇ ಅನುಭವದ ಪರಿಣಮಿತ ದುಃಖವನ್ನು ಅನುಭವವನ್ನು ಕೊಟ್ಟಂಥವನಿಗೆ ನಿಸ್ತರಿಸುವಂತೆ ಪ್ರಾರ್ಥಿಸುವುದು.
ಒಂದೋ ಜೀವನದ ಅನುಭವವನ್ನು ಅರ್ಥ ಮಾಡಿಕೊಂಡು ಜೀವನವನ್ನು ನೋಡುವುದು ಅಥವಾ ಅನುಭವದ ಅರ್ಥವನ್ನು ಕಡೆಗಣಿಸಿ ( deny  ಮಾಡಿ) ಜೀವನವನ್ನು ನೋಡುವುದು . ಅತ್ಯಂತ ಅವಶ್ಯಕವಾಗಿ ನೆನಪಿನಲ್ಲಿಡಬೇಕಾದ್ದು ಕಡೆಗಣಿಸುವುದೆಂದರೆ ಕನಿಷ್ಠವಾಗಿ ಕಾಣುವುದು ಎಂದಲ್ಲ. ಅನುಭವದ ಅರ್ಥದ ಸೂಕ್ಷ್ಮತೆ, ಅನೂಹ್ಯತೆ ಮತ್ತು ಅತಾರ್ಕಿಕತೆ ಇದನ್ನೆಲ್ಲಾ ಇಟ್ಟುಕೊಂಡೂ ಜೀವನದ ಅನುಭವಗಳ ಬೆನ್ನಟ್ಟಿಹೋಗಿ ಅನುಭವದ ಸಾವಿರಾರು ಯೋಜನವನ್ನು ಕ್ರಮಿಸಿಯೂ ಕೊನೆಗೆ ನಮಗೆ ದಕ್ಕುವುದು ಅನುಭವದ ಸ್ಪಷ್ಟ ಅರ್ಥ ನಮಗಾಗುವುದಿಲ್ಲ ಎಂಬುದನ್ನೇ !!  ಆದರೆ ಅನುಭವದ ಬೆನ್ನು ಹತ್ತಿ ಅನುಭವದ ಅರ್ಥ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎನ್ನುವುದು ನಮಗೆ ಅರ್ಥವಾಗುವುದೂ ಅನುಭವದ ಅರ್ಥಕ್ಕೆ ಬೆನ್ನು ಹತ್ತಿದಾಗಲೇ. ಈ ಚಮತ್ಕಾರ ಯಾವಾಗಲೂ ನನ್ನ ಕಾಡುತ್ತಲೇ ಇರುವಂತೆ ಮಾಡಿದ ಇಬ್ಬರು ಕವಿಗಳಲ್ಲಿ ಅಡಿಗರು ಬಹಳ ಪ್ರಮುಖರಾದವರು. 
ಎಷ್ಟೇ ತಪ್ಪಿಸಿಕೊಳ್ಳ ಹೊರಟರೂ ಅಡಿಗರಿಗೆ ಈ ಸಂಕಟವನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಅನುಭವವನ್ನು ಅವರು ಬೆನ್ನಟ್ಟದೇ ಇರಲಾರರು. ಅನುಭವದ ಅರ್ಥ ಆಗುವುದಿಲ್ಲ ಎಂಬುದು ಬೌದ್ಧಿಕವಾಗಿ ಅರ್ಥವಾದರೂ ಆ ಅನುಭವಕ್ಕಾಗಿಯೇ ಅಡಿಗರು ಅನುಭವದ ಬೆನ್ನು ಹತ್ತುತ್ತಾರೆ. ಜೀವನದ ಅನುಭವಗಳ ಅರ್ಥ ಅರ್ಥವಾಗುವುದಿಲ್ಲ ಎಂಬುದು ಬರೀದೇ ಬೌದ್ಧಿಕ ತೃಪ್ತಿಯಾಗಿದ್ದರೆ ಅವರು ಸಂತೃಪ್ತರಾಗುವುದೂ ಇಲ್ಲ. ಅವರು ಹಿಮಗಿರಿಯ ಕಂದರದಲ್ಲಿ ಮಾಡಿರುವುದು ಅದನ್ನೇ.
ಹಿಮಗಿರಿಯ ಕಂದರ ಓದಿದಾಗೆಲ್ಲ ನನಗೆ ಥಟ್ಟನೆ ನೆನಪಾಗುವುದು ಬೇಂದ್ರೆಯವರ ಜೋಗಿ ಪದ್ಯ. ಎರಡೂ ಪದ್ಯಗಳೂ ಅದ್ಭುತ ಪಯಣಗಳೇ. ಈ ಎರಡೂ ಪದ್ಯಗಳಲ್ಲಿ ಇಬ್ಬರು ಕವಿಗಳೂ ಮಾಡುತ್ತಿರುವುದು ಒಂದು ಅತ್ಯಂತ ನಮ್ಮ ಮೈ ತೊಗಲಿಗೆ ಅಂದರೆ ಪಂಚೇಂದ್ರಿಯಗಳಿಗೆ ಸ್ಪರ್ಶವಾಗುವ ಒಂದು ಲೋಕ ಜಗತ್ತನ್ನು ಕಟ್ಟಿಕೊಟ್ಟು ಆ ಜಗತ್ತಿನೊಳಗೆ ಒಂದು ಅನುಭವದ ಅತ್ಯಂತ ಮೂರ್ತವಾದ ಚಿತ್ರವನ್ನೂ ಇಟ್ಟು, ಓದುಗ ಅದರಲ್ಲಿ ತನ್ನ ಅಭೂತಪೂರ್ವವಾದ ಗ್ರಹಿಕೆಯನ್ನು ಇಳಿಸಿದಮೇಲೂ , ಒಂದು ಅದ್ಭುತ ಅನುಭವ ತನಗೆ ದಕ್ಕಿತು ಎಂದು ಹೇಳಿದಮೇಲೂ, ದಕ್ಕಿದ್ದೇನು ಎಂಬ ಪ್ರಶ್ನೆಗೆ ಉತ್ತರವನ್ನೀಯಲು ಸಾಧ್ಯವೇ ಇಲ್ಲ. ಬೇಂದ್ರೆಯವರ ಜೋಗಿ ಇಂಟರ್ನಲ್ ಇನ್ಟ್ಯೂಷನ್ನಿನಿಂದ ಹೊಮ್ಮಿದ್ದರೆ ಅಡಿಗರ ಹಿಮಗಿರಿಯ ಕಂದರ ಎಕ್ಸ್ಟರ್ನಲ್ ಸ್ಟಿಮ್ಯುಲೇಷನ್ನಿನಿಂದ ಹೊಮ್ಮಿದ್ದು. ಈ ಎರಡೂ ಕವಿತೆಗಳ ಆಶಯ ಒಂದೇ. ಅನುಭವದ ಅರ್ಥಹೀನತೆಯನ್ನು ( ಅರ್ಥಹೀನತೆ ಎಂದರೆ ಅರ್ಥ ಇಲ್ಲದಿರುವಿಕೆ ಅಲ್ಲ , ಅನುಭವದ ಅರ್ಥವನ್ನು ಮಾಡಿಕೊಳ್ಳುವ ಕ್ರಿಯೆಯ ಅರ್ಥಹೀನತೆ ) ಅರ್ಥಪೂರ್ಣವಾದ ಒಂದು ಜಗತ್ತಿನ ಮೂಲಕವೇ ಕಟ್ಟಿಕೊಡುವ ಪ್ರಯತ್ನ. ಜೋಗಿ ಕವಿತೆಯಲ್ಲಿನ ದಟ್ಟವಾದ ಅನುಭವ .. ಅದೂ ಬಹಳ ಶಿಸ್ತಿನಿಂದ ಕೂಡಿರುವ ಅನುಭವ . ಅದು ಅಸಂಗತ ಲೋಕಗಳ ಚಿತ್ರಣವಲ್ಲ. ಬಹಳ ಸೊಗಸಾದ ಚಿತ್ರಣ . ಒಬ್ಬ ಹರಿಕಥೆ ದಾಸರ ಕೈಗೆ ಅದು ಸಿಕ್ಕಲ್ಲಿ ಅದನ್ನೊಂದು ಪುರಂದರ ದಾಸರ ಕೀರ್ತನೆಯ ಜೊತೆ ಆತ ವರ್ಣಿಸಬಲ್ಲ ಮತ್ತು ಅದಕ್ಕೆ ತನ್ನದೇ ಆದ ಪಾರಂಪರಿಕ ಮತೀಯ ಅರ್ಥವನ್ನೂ ಕೊಡಬಲ್ಲ. ಅದು ಮತಪಂಥೀಯ ಅರ್ಥಕ್ಕೂ ದಕ್ಕುವ ಅಥವಾ ನಾವು ಕೇವಲ ಸೆನ್ಸಿಬಲ್ ಆಗಿ ಅನುಭವಗಳನ್ನು ಮಾತ್ರ ನೋಡುವ ದೃಷ್ಟಿಯಿಂದ ನೋಡಿದರೂ ಅತ್ಯಂತ ದಟ್ಟವಾದ ಚೌಕಟ್ಟನ್ನು ನಮ್ಮ ಅನುಭವದ ಮೈಯೊಳಗೆ ನುಗಿಸಿದ ನಂತರವೂ ಒಟ್ಟು ಅನುಭವದ ಸಾರಾಂಶವನ್ನು ಅನುಭವಿಸಬಹುದೇ ವಿನಃ ವಿವರಿಸಲಿಕ್ಕಾಗುವುದಿಲ್ಲ. 
ಈ ಎರಡೂ ಪದ್ಯಗಳಲ್ಲಿ ಗುರಿ ಒಂದೇ. ದಾರಿಗಳು ಮಾತ್ರ ಬೇರೆ ಬೇರೆ. ಜೋಗಿ ಪದ್ಯದಲ್ಲಿ ಇರುವುದು ಪಾರಂಪರಿಕ ಮಾಗುವಿಕೆ. ಮಾನವ ಸಹಜ ಬಾಲ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಗಳಿದ್ದಂತೆ. ಅದೊಂದು ಶಿಸ್ತಿನ ಮಾಗುವಿಕೆ, ಶಿಸ್ತಿನ ದಾರಿ.. ಆ ದಾರಿಯ ಕೊನೆ ಕೂಡಾ ಅಧ್ಯಾತ್ಮವೇ. ಬಹಳ ಮುಖ್ಯವಾಗಿ ಆ ದಾರಿಯಲ್ಲಿ ಗೊಂದಲವಿಲ್ಲ.. ತಾನು ಗುರಿಯನ್ನು ಮುಟ್ಟಲಾರೆ ಎಂಬ ಅನುಮಾನವಿಲ್ಲ. ಗುರುವಿನ ಬಗ್ಗೆ ಅಚಲ ನಂಬಿಕೆ.. ಆ ಮಾರ್ಗದರ್ಶನ ತನ್ನನ್ನು ಗುರಿಯತ್ತ ಕರೆದೊಯ್ಯುವುದೇ ಒಯ್ಯುವುದೆಂಬ ಅಮಿತ ವಿಶ್ವಾಸ  ಪ್ರತಿ ಸಾಲಿನಲ್ಲೂ ಸುಸ್ಪಷ್ಟ. ಅದು ಒಳಗಿನ ಅಂತರಂಗದ ಪ್ರೇರಣೆಯಿಂದ ಉದ್ಭವಿಸಿದ್ದು, ಸಹಜ ಮಾಗುವಿಕೆ...
ಹಿಮಗಿರಿಯ ಕಂದರದಲ್ಲಿ ಈ ದಾರಿ ಮಾತ್ರ ಬೇರೆ. ಅಧ್ಯಾತ್ಮದ ತುತ್ತತುದಿಯೆಂದೇ ಗುರುತಿಸಿಕೊಂಡಿರುವ ಹಿಮಾಲಯದತ್ತ ಪಯಣ ಹೊರಟಿದ್ದಾರೆ. ಅಲ್ಲಿನ ತಂಪು ಇಲ್ಲಿನ ಬಿಸಿಗೆ ಪರಿಹಾರವೆಂದು ನಂಬುತ್ತಾರೆ. ಇದು ಅಂತರಂಗದ ಪ್ರೇರಣೆಯ ಮಾಗುವಿಕೆ ಅಲ್ಲ.. ಹೊರಗಿನ ಘರ್ಷಣೆಗಳಿಂದ ಉದ್ಭವಿಸಿದ ಮಾಗುವಿಕೆಯಲ್ಲದ ತುಡಿತ. ಹಾಗಾಗಿಯೇ ಇಲ್ಲವರಿಗೆ ತಾನು ಹೋಗಿಯೇ ಹೋಗುತ್ತೇನೆಂಬ ವಿಶ್ವಾಸವಿಲ್ಲ. ಹೋಗುವ ಯೋಗ್ಯತೆಯ ಬಗ್ಗೆಯೇ ಪ್ರಶ್ನಿಸಿಕೊಳ್ಳುತ್ತಾರೆ ಕೂಡಾ. ಜೋಗಿಯಂತೆ ಸಹಜವಾಗಿ ಮರದಲ್ಲೇ ಹಣ್ಣಾದ ಸಿಹಿಮಾವಲ್ಲ ಇದು. ಕಾಯಾಗಿದ್ದಾಗಲೇ ಬಿಸಿಯ ಒತ್ತೆಯಲ್ಲಿ ಬಲವಂತವಾಗಿ ಹಣ್ಣು ಮಾಡಿದ ಹುಳಿ ಮಾವಿನಂತೆ ಇದು.
 ಇಲ್ಲಿರುವುದು ಶಿಸ್ತಿನ ಅನುಭವವಲ್ಲ. ಇಲ್ಲಿನ ಅನುಭವಗಳನ್ನು ಒಂದು ಚೌಕಟ್ಟಿನಲ್ಲಿ ಬಂಧಿಸಲಾಗುವುದೂ ಇಲ್ಲ.. ಅಸಂಗತ ಲೋಕದ ಚಿತ್ರಣ.. ಮೈ ಝುಮ್ಮೆನ್ನಿಸುವ ಮೈ ನಡುಗಿಸುವ ದುರ್ಭರ ಬವಣೆ ಬೆಂಕಿಯ ಚಿತ್ರಣ. ಮೊದಲ ಸಾಲುಗಳಲ್ಲೇ 
ಹೊಗೆ ಬೆಂಕಿ
ಅಯ್ಯೋ ಹಾಳಾಗ
ಉರಿ, ಶೆಖೆ ,ತಾಪ
ಹೊರಗೆ ರಣರಣ ಬಿಸಿಲು
ಒಳಗೆ ಮಾರಣ ಬೆಂಕಿ. ... ಹೀಗೆ ಮುಂದುವರಿಸಿ ಮಿದುಳನ್ನು ಬಚ್ಚಲ ಹಂಡೆಯಲ್ಲಿ ಬೇಯುವ ಆಮೆ ಎಂದು ವರ್ಣಿಸುತ್ತಾರೆ. ಹಿಮದ ತಂಪಿಗಾಗಿ ಹಾತೊರೆಯುತ್ತಾರೆ.ಹಿಮಗಿರಿಯತ್ತ ಹೊರಟೆ ಎನ್ನುತ್ತಾರೆ .. ಬದುಕ ತಂಪನ್ನು ಕೊಳ್ಳಲು ಇವರ ಬಳಿ ಚಿಕ್ಕಾಸಿನ ಯೋಗ್ಯತೆಯೂ ಇಲ್ಲ. ಅಪ್ಪ ಬಿಟ್ಟದ್ದು ಬರೀ ಸೊನ್ನೆ, ಆವಾ ಕೊಟ್ಟಿದ್ದು ಸೊನ್ನೆಗೂ ಸೊನ್ನೆ , ತಾನು ಪಡೆದದ್ದು ಬರಿ ಗೋಳ !
ಹಿಮದತ್ತ ಹೊರಟವರು ಕುಳಿತುಕೊಳ್ಳುವುದು ಅಗ್ನಿಪ್ರಳಯದಲಿ ತೇಲುವ ಕಲ್ಲು ಬೆಂಚಿನ ಮೇಲೆ.!!!.
ಇರದುದರೆಡೆಗೆ ತುಡಿಯುವಿಕೆ ಅಲ್ಲ ಇದು. ಬೇಕಾದ್ದೇನೆಲ್ಲವೂ ಇದ್ದೂ ಮತ್ತೊಂದಕ್ಕೆ ಹಂಬಲಿಸುವಿಕೆ ಅಲ್ಲ. ಮಾನಸಿಕ ಘರ್ಷಣೆಗಳ ಫಲಿತಾಂಶ.  ಅವರಿಲ್ಲಿ ಅನುಭವಗಳ ಬೆನ್ನು ಹತ್ತಿ ನೂರಾರು ಯೋಜನ ಕ್ರಮಿಸುತ್ತಾರೆ. ಏನು ಬೇಕೆಂಬುದು ಅವರಿಗೆ ಬಹಳ ಸ್ಪಷ್ಟವಾಗಿಯೇ ಅರಿವಿದೆ. ಅಲ್ಲಿಗೆ ಹೊರಟಿದ್ದಾರೆ ಬಿಸಿಲ ಧಗೆಯಿಂದ ದೂರಾಗಲು, ಬದುಕ ಬಿಸಿಯಿಂದ ತಪ್ಪಿಸಿಕೊಳ್ಳಲು , ಹೋಗಲಾಗದೆಂಬ ಅರಿವಿದ್ದೂ . ನಡುರಾತ್ರಿಯಲ್ಲಿ ಎಲ್ಲವನ್ನೂ ತೊರೆದು ಹೋಗಲಾಗುತ್ತಿಲ್ಲ. ಹೋಗದೆ ಇರಲಾಗುತ್ತಿಲ್ಲ. ಅಲಾರ್ಮ್ ಕೈಕೊಟ್ಟಿದೆ. ಬೆಳಗಾಗುತ್ತಿದೆ. ಚೆನ್ನ ಬಂದಿಲ್ಲ. ತನ್ನ ಗಂಟನ್ನು ತಾನೇ ಹೊರಲಾಗುತ್ತಿಲ್ಲ.( ಚೆನ್ನ ಬಾರದಿದ್ದರೂ ಬುದ್ಧ ಹೊರಡುತ್ತಿದ್ದ). ಹೊರಡುತ್ತಿರುವಾಗಲೇ ಕೇಳಿಕೊಳ್ಳುವ ಪ್ರಶ್ನೆ ಹೊರಡಲೇ ಬೇಕೇ? ತಂಪಿನತ್ತ ಹೊರಟಾಗಲೂ ಬಿಸಿ ಕಾಫಿ ಕುಡಿಯುವ ಹಂಬಲ. ಬಿಸಿಗಾಗಿ ಚಡಪಡಿಕೆ.. ಭಗ್ನ ಸೇತುವೆ !!!!
ಹೀಗೆ ಹೇಳುತ್ತಾ ಹೋಗುವ ಅಡಿಗರು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾರೆ. ಯಾವುದು ಕವಿತೆ ಯಾವುದು ಜೀವನ ಎಂಬ ಗಡಿರೇಖೆಗಳಿಲ್ಲದ ಈ ಇಬ್ಬರು ಕವಿಗಳೂ ಅವರವರದೇ ರೀತಿಯಲ್ಲಿ ಒಂದು ದಟ್ಟವಾದ ಜೀವನಾನುಭವವನ್ನು ಕಟ್ಟಿಕೊಡುತ್ತಾರೆ. ಜೋಗಿ ಕವಿತೆಯನ್ನು ಸಾಧಕನ ಅಂತರಂಗದ ಕಥೆಯೆಂದು ನೋಡ ಹೊರಟರೆ ಅದು ಕಾವ್ಯಭಾಷೆಯ ಅಂತರಂಗದ ಕಥೆಯೂ ಆಗಿರಬಹುದು. ಕಾವ್ಯದ ಭಾಷೆಯನ್ನು ಒಳಗೆ ಸಾಧಿಸಿಕೊಳ್ಳುವ ಸಾಧಕನ ಸಾಧನೆಯೂ ಹೌದು. ಜೀವನದ ದುಃಖವನ್ನು ನೀಗಿಕೊಂಡು ನಿರ್ಲಿಪ್ತ ಆನಂದವನ್ನು ಪಡೆಯಲು ಹೋಗುವ ಒಬ್ಬ ಮುಕ್ತನ , ಸಾಧಕನ ಅಂತರಂಗದ ಜಗತ್ತೂ ಆಗಿರಬಹುದು.  ಬೇಂದ್ರೆಯವರು ಈ ಹಾಡಿಗೆ ಒಂದು ಟೆಲಿಸ್ಕೋಪ್ ಹಿಡಿಯುತ್ತಾರೆ. ಇದು ನಿನ್ನ ದಾರಿ...
ಹಿಮಗಿರಿಯ ಕಂದರ ಯಾವ ಓದುಗನ ಕಥೆಯೂ ಆಗಿರಬಹುದು.. ಭೂಮಿಗೀತದಿಂದ ಆರಂಭವಾದ ಪಯಣ ಹಿಮಗಿರಿಯ ಕಂದರ, ಗೊಂದಲಪುರವನ್ನು ದಾಟಿ  ಇದನ್ನು ಬಯಸಿರಲಿಲ್ಲದಲ್ಲಿ ಮುಕ್ತಾಯವಾಗುವಾಗ ಈ ಎಲ್ಲ ಅನುಭವಗಳ ಒಟ್ಟು ಅರ್ಥವೇನೆಂದು ಹುಡುಕ ಹೊರಟರೆ ಅನುಭವಗಳ ಅರ್ಥ ಹುಡುಕುವ ಅರ್ಥಹೀನತೆಯೇ ದಕ್ಕುವುದು ಅರ್ಥಪೂರ್ಣವೂ ಆಗಿದೆ. ಅಡಿಗರು ಈ ಹಾದಿಯಲ್ಲಿ ಪಯಣಿಸ ಹೊರಡುವ ನಮ್ಮ ಮುಂದೆ ಕನ್ನಡಿಯನ್ನು ಹಿಡಿಯುತ್ತಾರೆ. ಇದು ಹೊರಟಿರುವ ನೀನು.....
ಹಿಮಗಿರಿಯೆಂದರೆ ಭಾರತೀಯ ಪರಂಪರೆಯ ಔನ್ನತ್ಯ, ಕೈಲಾಸ ಕೂಡ ಅಲ್ಲೇ ಇದೆಯೆಂದು ನಂಬುವ ಭಾರತೀಯ ಮನಸ್ಸುಗಳ ಪವಿತ್ರ ತಾಣ.. ಹಳೆಯ ನಾಗರೀಕತೆಗಳ ಹುಟ್ಟು ತಾಣ.. ಗಂಗಾ, ಯಮುನಾ, ಬ್ರಹ್ಮಪುತ್ರ ಜೀವಜಲಗಳ ಮೂಲ. ಆ ಪ್ರಾಚೀನತೆಯನ್ನೂ ಈಗಿನ ಆಧುನಿಕತೆಯನ್ನೂ ಮುಖಾಮುಖಿ ಮಾಡಹೊರಟಿದ್ದರಾ ಅಡಿಗರು ? ಅವೆರಡರ ಮಧ್ಯೆ ಇರುವ ಕಂದರವನ್ನು ಸೂಚ್ಯವಾಗಿ ಹೇಳುತ್ತಿದ್ದಾರಾ? ಇವೆರಡರ ನಡುವೆ ಭಗ್ನ ಸೇತುವೆ ಮಾತ್ರ ಇರಲು ಸಾಧ್ಯ ಎನ್ನುತ್ತಿದ್ದಾರಾ ? ಹಿಮ್ಮುಖವಾಗಿ ಎಂದರೆ ಸನಾತನದ ಕಡೆ ಚಲಿಸುವ ರೈಲಾ ? ಹೊರಟ ರೈಲನ್ನು ಹತ್ತಲಾಗದು ಎಂದು ಹೇಳುತ್ತಿದ್ದಾರಾ ... ಇದನ್ನು ಬಯಸಿರಲಿಲ್ಲ ಎಂಬುದರಿಂದ ಭೂಮಿಗೀತದ ಕಡೆಗೆ ಮತ್ತೆ ಹಿಂತಿರುಗುವುದು ಅವರ ಆಶಯವಾಗಿತ್ತಾ...!!!!
ಬೇಂದ್ರೆಯವರ ಅತ್ಯಂತ ಶ್ರೇಷ್ಠ ಪದ್ಯವೊಂದನ್ನು ಆಯ್ಕೆ ಮಾಡಿಕೊಳ್ಳುವುದಾದಲ್ಲಿ ನನ್ನ ಮೊದಲ ಆಯ್ಕೆ ಜೋಗಿ ಪದ್ಯ. ಆದರೆ ಅಡಿಗರ ಪದ್ಯದಲ್ಲಿ ಹಿಮಗಿರಿಯ ಕಂದರ ಅವರ ಅತ್ಯಂತ ಶ್ರೇಷ್ಠ ಪದ್ಯವೇನೂ ಅಲ್ಲದಿದ್ದರೂ ಇದರಲ್ಲಿ ಅಡಿಗರ ಕಾವ್ಯದ ಮೂಲಧಾತು ಅಡಗಿದೆ ಎಂದು ನಂಬಿದವಳು ನಾನು.
ಅಡಿಗರ ಕಟ್ಟಾ ಅಭಿಮಾನಿಯಾದ ನನಗೆ ಅಡಿಗರ ಬಗ್ಗೆ ಆಕ್ಷೇಪಗಳೇ ಇಲ್ಲವೆಂದೇನೂ ಇಲ್ಲ. ಆ ಆಕ್ಷೇಪಗಳನ್ನೂ  ಕಡೆಗಣಿಸಿ ಮತ್ತೆ ಮತ್ತೆ ಅವರ ಪದ್ಯಗಳನ್ನು ಓದುವಂತೆ ಮಾಡಿದ್ದು ಅವರ ಅದ್ಭುತ ಒಳನೋಟಗಳು, ಸಮಕಾಲೀನಕ್ಕೆ ಸ್ಪಂದಿಸುವ ಅವರ ಮನೋಗುಣ...
ಅಡಿಗರ ಪದ್ಯಗಳು ಬಹು ಆಯಾಮಗಳುಳ್ಳವು . ಅಡಿಗರ ಕಾವ್ಯದ ಬಗ್ಗೆ ಯಾರೆಷ್ಟೇ ಚೆಂದವಾಗಿ ಮಾತನಾಡಿದರೂ ಯಾರೆಷ್ಟೇ ಅದ್ಭುತವಾಗಿ ಬರೆದರೂ ಅದರ ಒಂದು ಆಯಾಮದ ಬಗ್ಗೆ ಮಾತ್ರ ಮಾತಾನಾಡಿರುತ್ತಾರಷ್ಟೇ. ಇನ್ನುಳಿದ ಆಯಾಮಗಳು ಹಾಗೆಯೇ ಉಳಿದುಬಿಟ್ಟಿರುತ್ತವೆ ಎಂಬುದೇ ಅಡಿಗರ ಕಾವ್ಯದ ಶ್ರೇಷ್ಠತೆ. ಅಡಿಗರ ಕಾವ್ಯ  ಕಳೆದ ಶತಮಾನದಲ್ಲಿ ಸಂಭವಿಸಿರಬಹುದಾದ ಬಹುದೊಡ್ಡ ಅದ್ಭುತ, ಆಶ್ಚರ್ಯ ಮತ್ತು ಅಭೂತಪೂರ್ವ ಕೊಡುಗೆ ಕೂಡಾ