ಅಡಿಗರೆಂದರೆ .........
ಮೊಟ್ಟಮೊದಲು ಅಡಿಗರನ್ನು ನಾನು ಓದಿದ್ದು ನನ್ನ ಪ್ರೌಢ ಶಾಲೆಯ ಪಠ್ಯಪುಸ್ತಕದಲ್ಲಿ. ಆಗ ಅರ್ಥವೂ ಆಗಿರದ, ನನ್ನ ಆಕರ್ಷಿಸದೇ ಇದ್ದ ಅಡಿಗರ ಕಾವ್ಯ ಮುಂದೊಂದು ದಿನ ಬದುಕಿನ ಭಾಗವೇ ಆಗಿಬಿಟ್ಟದ್ದು ಸೋಜಿಗ... ಅನುದಿನದ ಬದುಕಿನ ನೂರೆಂಟು ಅನುಭವಗಳ ಅರ್ಥ ಅರಿಯಲಾಗದೆ ಸಂಕಟ ಪಡುವಾಗೆಲ್ಲ ಅಡಿಗರು ಇದು ನಿನ್ನೊಬ್ಬಳ ಪಾಡಲ್ಲ ಎಂದು ಪಾಠ ಮಾಡುತ್ತಾರೆ.. ನನ್ನ ಮುಂದೊಂದು ಕನ್ನಡಿ ಇಡುತ್ತಾರೆ. ಬದುಕಿನ ದುಃಖವನ್ನು ನಿರಸ್ತಗೊಳಿಸಲು ಹೋರಾಟ ಅಗತ್ಯವಾ ಅಂದುಕೊಂಡಾಗೆಲ್ಲ ಅಡಿಗರು ಕಣ್ಮುಂದೆ ನಿಲ್ಲುತ್ತಾರೆ.
ಅಡಿಗರೆಂದರೆ.. ಅವರು ಇರದುದರೆಡೆಗೆ ತುಡಿಯುವವರಷ್ಟೇ ಅಲ್ಲ.. ಅದು ಬರೀ ತುಡಿತವಾಗಿಯೇ ಉಳಿಯುವುದೆಂದು ಖಚಿತವಾಗಿ ನಂಬಿದವರು. . " ಕೆಸರೊಳಿದ್ದರು ಮೇಲೆ ಬಾಂದಳವ ನೋಡಿ , ಮಿಸುಪ ರವಿ ಕಿರಣಗಳ ಸಿರಿಗೆ ಮೆರೆದಾಡಿ , ಮಸಗುವಂಬುಜದಂತೆ ಧ್ಯೇಯದಳವೆಸೆತಕೆ ಒಸಮಾಗು ಬಂದ ಮನುಜತೆಯ ಸಾರ್ಥತೆಗೆ " ಎನ್ನುವಲ್ಲಿ ತುಡಿತವೆಂಬ ಭವತಾರಕ ಮಂತ್ರವನ್ನು ಹೇಳಿಕೊಟ್ಟವರು..ಬದುಕ ಬಿಸಿಲಲ್ಲಿ ಬೇಯುವ ಹಿಂಸೆ ಕಾಡಿದಾಗ ಮಾಗುವುದು ಹಣ್ಣಾಗುವುದು ಬಿಸಿಲಲ್ಲೇ ಎಂಬ ಅರಿವು ಮೂಡಿಸಿದವರು , ಎಷ್ಟು ಸಾಗಿದರೂ ಮುಗಿಯದ ದಾರಿಯಲ್ಲಿ ಕಾಲುಗಳು ಬಳಲಿ ಚೀತ್ಕರಿಸಿದಾಗ 'ಪಯಣ ಹೊರಟವನ ಗತಿ ಗಾಣದೆತ್ತಿನ ಪ್ರಗತಿ, ಸಂಜೆಯಾದರೆ ಮತ್ತೆ ಅದೇ ಮತ್ತಿಗೆ" ಎಂದು ಬುದ್ದಿ ಹೇಳಿದವರು.. ಕೀಳರಿಮೆಯಿಂದ ಬಳಲುವಾಗ " ದೊಡ್ಡವರು ನೀವು, ನಾವೇನೂ ಕುಬ್ಜರಲ್ಲ " ಎಂದು ತಲೆ ಎತ್ತಿ ನಿಲ್ಲುವುದನ್ನು ಕಲಿಸಿದವರು.., ಹೀಗೆ ಹೇಳಬಹುದೇ ಎಂಬ ಅನುಮಾನ ಕಾಡಿದಾಗ " ಆಚಾರ್ಯರೆಲ್ಲ ದಿಕ್ಸೂಚಿಗಳು ದಿಗ್ಭ್ರಾಂತರಿಗೆ; ನಡೆಯಬೇಕಾದವರು ನಾವು ನೀವು " ಎಂದು ಧೈರ್ಯ ತುಂಬಿದವರು. ರಮ್ಯ ಭ್ರಮೆಗಳ ತೊರೆದು ವರ್ತಮಾನದಲ್ಲಿ ಬದುಕುವುದನ್ನು ತಮ್ಮ ಪದ್ಯಗಳಲ್ಲಿ ಚೂಪು ವ್ಯಂಗ್ಯಗಳ ಮೂಲಕ, ದಿಟ್ಟತನದ ನಿಲುವುಗಳ ಮೂಲಕ ಹೇಳಿ ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋದವರು ಅಡಿಗರು. ಬದುಕನ್ನು... ಅದರ ದುಃಖವನ್ನು .. ಆ ದುಃಖದ ನಿರಸ್ತಗೊಳಿಸುವಿಕೆಯನ್ನು ಅವರು ಹೇಗೆ ಕಂಡುಕೊಂಡಿರಬಹುದು....
ಬದುಕು ಹೋರಾಟದ್ದು ದುಃಖಮಯವಾದದ್ದು ಎಂದು ಒಪ್ಪಿಕೊಳ್ಳುತ್ತಲೇ ಆ ದುಃಖವನ್ನು ನಿರಸ್ತಗೊಳಿಸಬೇಕು ಎಂಬುದನ್ನೂ ನಾವು ಒಪ್ಪಿಕೊಳ್ಳುತ್ತೇವೆ. ಹೀಗೆ ನಿರಸ್ತಗೊಳಿಸಲು ಎರಡು ಬಗೆಯ ದಾರಿಗಳಿವೆ. ಮೊದಲನೆಯದು ದುಃಖದ ಸ್ವರೂಪವನ್ನು ತಾತ್ವಿಕವಾಗಿ ತಿಳಿದುಕೊಳ್ಳದೆಯೇ ದುಃಖವನ್ನು ನಿವಾರಣೆ ಮಾಡಲು ಕೇವಲ ಆ ದುಃಖವನ್ನು ನಿಯಮಿಸುವ ಶಕ್ತಿಗೆ ಪ್ರಾರ್ಥನೆ ಮಾಡುವುದು ಅರ್ಥವಿಲ್ಲದ್ದು. ಎರಡನೆಯದು ದುಃಖದ ಸ್ವರೂಪವನ್ನು ತಿಳಿದು ಕೊಳ್ಳುತ್ತಾ ಹೋದಲ್ಲಿ ಅದನ್ನು ಅರಿಯುವುದು ಅಸಾಧ್ಯವೇ ಸರಿ. ಅನುಭವ ಎನ್ನುವುದು ಅದೆಷ್ಟು ಅಮೂರ್ತ, ಅನೂಹ್ಯ ಮತ್ತು ಅಸಂಕಲ್ಪಿತ ಎಂದರೆ ಅದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲವಾಗಿಬಿಡುತ್ತದೆ.
ಹಾಗಾಗಿ ಒಂದು ವರ್ಗದ ಪ್ರಕಾರ ಜೀವನದ ಅನುಭವವನ್ನು ಅರ್ಥ ಮಾಡಿಕೊಳ್ಳಲು ಹೋಗದೆಯೇ ಅನುಭವದ ಪರಿಣಮಿತ ದುಃಖವನ್ನು ಅನುಭವವನ್ನು ಕೊಟ್ಟಂಥವನಿಗೆ ನಿಸ್ತರಿಸುವಂತೆ ಪ್ರಾರ್ಥಿಸುವುದು.
ಹಾಗಾಗಿ ಒಂದು ವರ್ಗದ ಪ್ರಕಾರ ಜೀವನದ ಅನುಭವವನ್ನು ಅರ್ಥ ಮಾಡಿಕೊಳ್ಳಲು ಹೋಗದೆಯೇ ಅನುಭವದ ಪರಿಣಮಿತ ದುಃಖವನ್ನು ಅನುಭವವನ್ನು ಕೊಟ್ಟಂಥವನಿಗೆ ನಿಸ್ತರಿಸುವಂತೆ ಪ್ರಾರ್ಥಿಸುವುದು.
ಒಂದೋ ಜೀವನದ ಅನುಭವವನ್ನು ಅರ್ಥ ಮಾಡಿಕೊಂಡು ಜೀವನವನ್ನು ನೋಡುವುದು ಅಥವಾ ಅನುಭವದ ಅರ್ಥವನ್ನು ಕಡೆಗಣಿಸಿ ( deny ಮಾಡಿ) ಜೀವನವನ್ನು ನೋಡುವುದು . ಅತ್ಯಂತ ಅವಶ್ಯಕವಾಗಿ ನೆನಪಿನಲ್ಲಿಡಬೇಕಾದ್ದು ಕಡೆಗಣಿಸುವುದೆಂದರೆ ಕನಿಷ್ಠವಾಗಿ ಕಾಣುವುದು ಎಂದಲ್ಲ. ಅನುಭವದ ಅರ್ಥದ ಸೂಕ್ಷ್ಮತೆ, ಅನೂಹ್ಯತೆ ಮತ್ತು ಅತಾರ್ಕಿಕತೆ ಇದನ್ನೆಲ್ಲಾ ಇಟ್ಟುಕೊಂಡೂ ಜೀವನದ ಅನುಭವಗಳ ಬೆನ್ನಟ್ಟಿಹೋಗಿ ಅನುಭವದ ಸಾವಿರಾರು ಯೋಜನವನ್ನು ಕ್ರಮಿಸಿಯೂ ಕೊನೆಗೆ ನಮಗೆ ದಕ್ಕುವುದು ಅನುಭವದ ಸ್ಪಷ್ಟ ಅರ್ಥ ನಮಗಾಗುವುದಿಲ್ಲ ಎಂಬುದನ್ನೇ !! ಆದರೆ ಅನುಭವದ ಬೆನ್ನು ಹತ್ತಿ ಅನುಭವದ ಅರ್ಥ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎನ್ನುವುದು ನಮಗೆ ಅರ್ಥವಾಗುವುದೂ ಅನುಭವದ ಅರ್ಥಕ್ಕೆ ಬೆನ್ನು ಹತ್ತಿದಾಗಲೇ. ಈ ಚಮತ್ಕಾರ ಯಾವಾಗಲೂ ನನ್ನ ಕಾಡುತ್ತಲೇ ಇರುವಂತೆ ಮಾಡಿದ ಇಬ್ಬರು ಕವಿಗಳಲ್ಲಿ ಅಡಿಗರು ಬಹಳ ಪ್ರಮುಖರಾದವರು.
ಎಷ್ಟೇ ತಪ್ಪಿಸಿಕೊಳ್ಳ ಹೊರಟರೂ ಅಡಿಗರಿಗೆ ಈ ಸಂಕಟವನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಅನುಭವವನ್ನು ಅವರು ಬೆನ್ನಟ್ಟದೇ ಇರಲಾರರು. ಅನುಭವದ ಅರ್ಥ ಆಗುವುದಿಲ್ಲ ಎಂಬುದು ಬೌದ್ಧಿಕವಾಗಿ ಅರ್ಥವಾದರೂ ಆ ಅನುಭವಕ್ಕಾಗಿಯೇ ಅಡಿಗರು ಅನುಭವದ ಬೆನ್ನು ಹತ್ತುತ್ತಾರೆ. ಜೀವನದ ಅನುಭವಗಳ ಅರ್ಥ ಅರ್ಥವಾಗುವುದಿಲ್ಲ ಎಂಬುದು ಬರೀದೇ ಬೌದ್ಧಿಕ ತೃಪ್ತಿಯಾಗಿದ್ದರೆ ಅವರು ಸಂತೃಪ್ತರಾಗುವುದೂ ಇಲ್ಲ. ಅವರು ಹಿಮಗಿರಿಯ ಕಂದರದಲ್ಲಿ ಮಾಡಿರುವುದು ಅದನ್ನೇ.
ಹಿಮಗಿರಿಯ ಕಂದರ ಓದಿದಾಗೆಲ್ಲ ನನಗೆ ಥಟ್ಟನೆ ನೆನಪಾಗುವುದು ಬೇಂದ್ರೆಯವರ ಜೋಗಿ ಪದ್ಯ. ಎರಡೂ ಪದ್ಯಗಳೂ ಅದ್ಭುತ ಪಯಣಗಳೇ. ಈ ಎರಡೂ ಪದ್ಯಗಳಲ್ಲಿ ಇಬ್ಬರು ಕವಿಗಳೂ ಮಾಡುತ್ತಿರುವುದು ಒಂದು ಅತ್ಯಂತ ನಮ್ಮ ಮೈ ತೊಗಲಿಗೆ ಅಂದರೆ ಪಂಚೇಂದ್ರಿಯಗಳಿಗೆ ಸ್ಪರ್ಶವಾಗುವ ಒಂದು ಲೋಕ ಜಗತ್ತನ್ನು ಕಟ್ಟಿಕೊಟ್ಟು ಆ ಜಗತ್ತಿನೊಳಗೆ ಒಂದು ಅನುಭವದ ಅತ್ಯಂತ ಮೂರ್ತವಾದ ಚಿತ್ರವನ್ನೂ ಇಟ್ಟು, ಓದುಗ ಅದರಲ್ಲಿ ತನ್ನ ಅಭೂತಪೂರ್ವವಾದ ಗ್ರಹಿಕೆಯನ್ನು ಇಳಿಸಿದಮೇಲೂ , ಒಂದು ಅದ್ಭುತ ಅನುಭವ ತನಗೆ ದಕ್ಕಿತು ಎಂದು ಹೇಳಿದಮೇಲೂ, ದಕ್ಕಿದ್ದೇನು ಎಂಬ ಪ್ರಶ್ನೆಗೆ ಉತ್ತರವನ್ನೀಯಲು ಸಾಧ್ಯವೇ ಇಲ್ಲ. ಬೇಂದ್ರೆಯವರ ಜೋಗಿ ಇಂಟರ್ನಲ್ ಇನ್ಟ್ಯೂಷನ್ನಿನಿಂದ ಹೊಮ್ಮಿದ್ದರೆ ಅಡಿಗರ ಹಿಮಗಿರಿಯ ಕಂದರ ಎಕ್ಸ್ಟರ್ನಲ್ ಸ್ಟಿಮ್ಯುಲೇಷನ್ನಿನಿಂದ ಹೊಮ್ಮಿದ್ದು. ಈ ಎರಡೂ ಕವಿತೆಗಳ ಆಶಯ ಒಂದೇ. ಅನುಭವದ ಅರ್ಥಹೀನತೆಯನ್ನು ( ಅರ್ಥಹೀನತೆ ಎಂದರೆ ಅರ್ಥ ಇಲ್ಲದಿರುವಿಕೆ ಅಲ್ಲ , ಅನುಭವದ ಅರ್ಥವನ್ನು ಮಾಡಿಕೊಳ್ಳುವ ಕ್ರಿಯೆಯ ಅರ್ಥಹೀನತೆ ) ಅರ್ಥಪೂರ್ಣವಾದ ಒಂದು ಜಗತ್ತಿನ ಮೂಲಕವೇ ಕಟ್ಟಿಕೊಡುವ ಪ್ರಯತ್ನ. ಜೋಗಿ ಕವಿತೆಯಲ್ಲಿನ ದಟ್ಟವಾದ ಅನುಭವ .. ಅದೂ ಬಹಳ ಶಿಸ್ತಿನಿಂದ ಕೂಡಿರುವ ಅನುಭವ . ಅದು ಅಸಂಗತ ಲೋಕಗಳ ಚಿತ್ರಣವಲ್ಲ. ಬಹಳ ಸೊಗಸಾದ ಚಿತ್ರಣ . ಒಬ್ಬ ಹರಿಕಥೆ ದಾಸರ ಕೈಗೆ ಅದು ಸಿಕ್ಕಲ್ಲಿ ಅದನ್ನೊಂದು ಪುರಂದರ ದಾಸರ ಕೀರ್ತನೆಯ ಜೊತೆ ಆತ ವರ್ಣಿಸಬಲ್ಲ ಮತ್ತು ಅದಕ್ಕೆ ತನ್ನದೇ ಆದ ಪಾರಂಪರಿಕ ಮತೀಯ ಅರ್ಥವನ್ನೂ ಕೊಡಬಲ್ಲ. ಅದು ಮತಪಂಥೀಯ ಅರ್ಥಕ್ಕೂ ದಕ್ಕುವ ಅಥವಾ ನಾವು ಕೇವಲ ಸೆನ್ಸಿಬಲ್ ಆಗಿ ಅನುಭವಗಳನ್ನು ಮಾತ್ರ ನೋಡುವ ದೃಷ್ಟಿಯಿಂದ ನೋಡಿದರೂ ಅತ್ಯಂತ ದಟ್ಟವಾದ ಚೌಕಟ್ಟನ್ನು ನಮ್ಮ ಅನುಭವದ ಮೈಯೊಳಗೆ ನುಗಿಸಿದ ನಂತರವೂ ಒಟ್ಟು ಅನುಭವದ ಸಾರಾಂಶವನ್ನು ಅನುಭವಿಸಬಹುದೇ ವಿನಃ ವಿವರಿಸಲಿಕ್ಕಾಗುವುದಿಲ್ಲ.

ಈ ಎರಡೂ ಪದ್ಯಗಳಲ್ಲಿ ಗುರಿ ಒಂದೇ. ದಾರಿಗಳು ಮಾತ್ರ ಬೇರೆ ಬೇರೆ. ಜೋಗಿ ಪದ್ಯದಲ್ಲಿ ಇರುವುದು ಪಾರಂಪರಿಕ ಮಾಗುವಿಕೆ. ಮಾನವ ಸಹಜ ಬಾಲ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಗಳಿದ್ದಂತೆ. ಅದೊಂದು ಶಿಸ್ತಿನ ಮಾಗುವಿಕೆ, ಶಿಸ್ತಿನ ದಾರಿ.. ಆ ದಾರಿಯ ಕೊನೆ ಕೂಡಾ ಅಧ್ಯಾತ್ಮವೇ. ಬಹಳ ಮುಖ್ಯವಾಗಿ ಆ ದಾರಿಯಲ್ಲಿ ಗೊಂದಲವಿಲ್ಲ.. ತಾನು ಗುರಿಯನ್ನು ಮುಟ್ಟಲಾರೆ ಎಂಬ ಅನುಮಾನವಿಲ್ಲ. ಗುರುವಿನ ಬಗ್ಗೆ ಅಚಲ ನಂಬಿಕೆ.. ಆ ಮಾರ್ಗದರ್ಶನ ತನ್ನನ್ನು ಗುರಿಯತ್ತ ಕರೆದೊಯ್ಯುವುದೇ ಒಯ್ಯುವುದೆಂಬ ಅಮಿತ ವಿಶ್ವಾಸ ಪ್ರತಿ ಸಾಲಿನಲ್ಲೂ ಸುಸ್ಪಷ್ಟ. ಅದು ಒಳಗಿನ ಅಂತರಂಗದ ಪ್ರೇರಣೆಯಿಂದ ಉದ್ಭವಿಸಿದ್ದು, ಸಹಜ ಮಾಗುವಿಕೆ...
ಹಿಮಗಿರಿಯ ಕಂದರದಲ್ಲಿ ಈ ದಾರಿ ಮಾತ್ರ ಬೇರೆ. ಅಧ್ಯಾತ್ಮದ ತುತ್ತತುದಿಯೆಂದೇ ಗುರುತಿಸಿಕೊಂಡಿರುವ ಹಿಮಾಲಯದತ್ತ ಪಯಣ ಹೊರಟಿದ್ದಾರೆ. ಅಲ್ಲಿನ ತಂಪು ಇಲ್ಲಿನ ಬಿಸಿಗೆ ಪರಿಹಾರವೆಂದು ನಂಬುತ್ತಾರೆ. ಇದು ಅಂತರಂಗದ ಪ್ರೇರಣೆಯ ಮಾಗುವಿಕೆ ಅಲ್ಲ.. ಹೊರಗಿನ ಘರ್ಷಣೆಗಳಿಂದ ಉದ್ಭವಿಸಿದ ಮಾಗುವಿಕೆಯಲ್ಲದ ತುಡಿತ. ಹಾಗಾಗಿಯೇ ಇಲ್ಲವರಿಗೆ ತಾನು ಹೋಗಿಯೇ ಹೋಗುತ್ತೇನೆಂಬ ವಿಶ್ವಾಸವಿಲ್ಲ. ಹೋಗುವ ಯೋಗ್ಯತೆಯ ಬಗ್ಗೆಯೇ ಪ್ರಶ್ನಿಸಿಕೊಳ್ಳುತ್ತಾರೆ ಕೂಡಾ. ಜೋಗಿಯಂತೆ ಸಹಜವಾಗಿ ಮರದಲ್ಲೇ ಹಣ್ಣಾದ ಸಿಹಿಮಾವಲ್ಲ ಇದು. ಕಾಯಾಗಿದ್ದಾಗಲೇ ಬಿಸಿಯ ಒತ್ತೆಯಲ್ಲಿ ಬಲವಂತವಾಗಿ ಹಣ್ಣು ಮಾಡಿದ ಹುಳಿ ಮಾವಿನಂತೆ ಇದು.
ಇಲ್ಲಿರುವುದು ಶಿಸ್ತಿನ ಅನುಭವವಲ್ಲ. ಇಲ್ಲಿನ ಅನುಭವಗಳನ್ನು ಒಂದು ಚೌಕಟ್ಟಿನಲ್ಲಿ ಬಂಧಿಸಲಾಗುವುದೂ ಇಲ್ಲ.. ಅಸಂಗತ ಲೋಕದ ಚಿತ್ರಣ.. ಮೈ ಝುಮ್ಮೆನ್ನಿಸುವ ಮೈ ನಡುಗಿಸುವ ದುರ್ಭರ ಬವಣೆ ಬೆಂಕಿಯ ಚಿತ್ರಣ. ಮೊದಲ ಸಾಲುಗಳಲ್ಲೇ
ಹೊಗೆ ಬೆಂಕಿ
ಅಯ್ಯೋ ಹಾಳಾಗ
ಉರಿ, ಶೆಖೆ ,ತಾಪ
ಹೊರಗೆ ರಣರಣ ಬಿಸಿಲು
ಒಳಗೆ ಮಾರಣ ಬೆಂಕಿ. ... ಹೀಗೆ ಮುಂದುವರಿಸಿ ಮಿದುಳನ್ನು ಬಚ್ಚಲ ಹಂಡೆಯಲ್ಲಿ ಬೇಯುವ ಆಮೆ ಎಂದು ವರ್ಣಿಸುತ್ತಾರೆ. ಹಿಮದ ತಂಪಿಗಾಗಿ ಹಾತೊರೆಯುತ್ತಾರೆ.ಹಿಮಗಿರಿಯತ್ತ ಹೊರಟೆ ಎನ್ನುತ್ತಾರೆ .. ಬದುಕ ತಂಪನ್ನು ಕೊಳ್ಳಲು ಇವರ ಬಳಿ ಚಿಕ್ಕಾಸಿನ ಯೋಗ್ಯತೆಯೂ ಇಲ್ಲ. ಅಪ್ಪ ಬಿಟ್ಟದ್ದು ಬರೀ ಸೊನ್ನೆ, ಆವಾ ಕೊಟ್ಟಿದ್ದು ಸೊನ್ನೆಗೂ ಸೊನ್ನೆ , ತಾನು ಪಡೆದದ್ದು ಬರಿ ಗೋಳ !
ಹಿಮದತ್ತ ಹೊರಟವರು ಕುಳಿತುಕೊಳ್ಳುವುದು ಅಗ್ನಿಪ್ರಳಯದಲಿ ತೇಲುವ ಕಲ್ಲು ಬೆಂಚಿನ ಮೇಲೆ.!!!.

ಇರದುದರೆಡೆಗೆ ತುಡಿಯುವಿಕೆ ಅಲ್ಲ ಇದು. ಬೇಕಾದ್ದೇನೆಲ್ಲವೂ ಇದ್ದೂ ಮತ್ತೊಂದಕ್ಕೆ ಹಂಬಲಿಸುವಿಕೆ ಅಲ್ಲ. ಮಾನಸಿಕ ಘರ್ಷಣೆಗಳ ಫಲಿತಾಂಶ. ಅವರಿಲ್ಲಿ ಅನುಭವಗಳ ಬೆನ್ನು ಹತ್ತಿ ನೂರಾರು ಯೋಜನ ಕ್ರಮಿಸುತ್ತಾರೆ. ಏನು ಬೇಕೆಂಬುದು ಅವರಿಗೆ ಬಹಳ ಸ್ಪಷ್ಟವಾಗಿಯೇ ಅರಿವಿದೆ. ಅಲ್ಲಿಗೆ ಹೊರಟಿದ್ದಾರೆ ಬಿಸಿಲ ಧಗೆಯಿಂದ ದೂರಾಗಲು, ಬದುಕ ಬಿಸಿಯಿಂದ ತಪ್ಪಿಸಿಕೊಳ್ಳಲು , ಹೋಗಲಾಗದೆಂಬ ಅರಿವಿದ್ದೂ . ನಡುರಾತ್ರಿಯಲ್ಲಿ ಎಲ್ಲವನ್ನೂ ತೊರೆದು ಹೋಗಲಾಗುತ್ತಿಲ್ಲ. ಹೋಗದೆ ಇರಲಾಗುತ್ತಿಲ್ಲ. ಅಲಾರ್ಮ್ ಕೈಕೊಟ್ಟಿದೆ. ಬೆಳಗಾಗುತ್ತಿದೆ. ಚೆನ್ನ ಬಂದಿಲ್ಲ. ತನ್ನ ಗಂಟನ್ನು ತಾನೇ ಹೊರಲಾಗುತ್ತಿಲ್ಲ.( ಚೆನ್ನ ಬಾರದಿದ್ದರೂ ಬುದ್ಧ ಹೊರಡುತ್ತಿದ್ದ). ಹೊರಡುತ್ತಿರುವಾಗಲೇ ಕೇಳಿಕೊಳ್ಳುವ ಪ್ರಶ್ನೆ ಹೊರಡಲೇ ಬೇಕೇ? ತಂಪಿನತ್ತ ಹೊರಟಾಗಲೂ ಬಿಸಿ ಕಾಫಿ ಕುಡಿಯುವ ಹಂಬಲ. ಬಿಸಿಗಾಗಿ ಚಡಪಡಿಕೆ.. ಭಗ್ನ ಸೇತುವೆ !!!!
ಹೀಗೆ ಹೇಳುತ್ತಾ ಹೋಗುವ ಅಡಿಗರು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾರೆ. ಯಾವುದು ಕವಿತೆ ಯಾವುದು ಜೀವನ ಎಂಬ ಗಡಿರೇಖೆಗಳಿಲ್ಲದ ಈ ಇಬ್ಬರು ಕವಿಗಳೂ ಅವರವರದೇ ರೀತಿಯಲ್ಲಿ ಒಂದು ದಟ್ಟವಾದ ಜೀವನಾನುಭವವನ್ನು ಕಟ್ಟಿಕೊಡುತ್ತಾರೆ. ಜೋಗಿ ಕವಿತೆಯನ್ನು ಸಾಧಕನ ಅಂತರಂಗದ ಕಥೆಯೆಂದು ನೋಡ ಹೊರಟರೆ ಅದು ಕಾವ್ಯಭಾಷೆಯ ಅಂತರಂಗದ ಕಥೆಯೂ ಆಗಿರಬಹುದು. ಕಾವ್ಯದ ಭಾಷೆಯನ್ನು ಒಳಗೆ ಸಾಧಿಸಿಕೊಳ್ಳುವ ಸಾಧಕನ ಸಾಧನೆಯೂ ಹೌದು. ಜೀವನದ ದುಃಖವನ್ನು ನೀಗಿಕೊಂಡು ನಿರ್ಲಿಪ್ತ ಆನಂದವನ್ನು ಪಡೆಯಲು ಹೋಗುವ ಒಬ್ಬ ಮುಕ್ತನ , ಸಾಧಕನ ಅಂತರಂಗದ ಜಗತ್ತೂ ಆಗಿರಬಹುದು. ಬೇಂದ್ರೆಯವರು ಈ ಹಾಡಿಗೆ ಒಂದು ಟೆಲಿಸ್ಕೋಪ್ ಹಿಡಿಯುತ್ತಾರೆ. ಇದು ನಿನ್ನ ದಾರಿ...
ಹಿಮಗಿರಿಯ ಕಂದರ ಯಾವ ಓದುಗನ ಕಥೆಯೂ ಆಗಿರಬಹುದು.. ಭೂಮಿಗೀತದಿಂದ ಆರಂಭವಾದ ಪಯಣ ಹಿಮಗಿರಿಯ ಕಂದರ, ಗೊಂದಲಪುರವನ್ನು ದಾಟಿ ಇದನ್ನು ಬಯಸಿರಲಿಲ್ಲದಲ್ಲಿ ಮುಕ್ತಾಯವಾಗುವಾಗ ಈ ಎಲ್ಲ ಅನುಭವಗಳ ಒಟ್ಟು ಅರ್ಥವೇನೆಂದು ಹುಡುಕ ಹೊರಟರೆ ಅನುಭವಗಳ ಅರ್ಥ ಹುಡುಕುವ ಅರ್ಥಹೀನತೆಯೇ ದಕ್ಕುವುದು ಅರ್ಥಪೂರ್ಣವೂ ಆಗಿದೆ. ಅಡಿಗರು ಈ ಹಾದಿಯಲ್ಲಿ ಪಯಣಿಸ ಹೊರಡುವ ನಮ್ಮ ಮುಂದೆ ಕನ್ನಡಿಯನ್ನು ಹಿಡಿಯುತ್ತಾರೆ. ಇದು ಹೊರಟಿರುವ ನೀನು.....
ಹಿಮಗಿರಿಯೆಂದರೆ ಭಾರತೀಯ ಪರಂಪರೆಯ ಔನ್ನತ್ಯ, ಕೈಲಾಸ ಕೂಡ ಅಲ್ಲೇ ಇದೆಯೆಂದು ನಂಬುವ ಭಾರತೀಯ ಮನಸ್ಸುಗಳ ಪವಿತ್ರ ತಾಣ.. ಹಳೆಯ ನಾಗರೀಕತೆಗಳ ಹುಟ್ಟು ತಾಣ.. ಗಂಗಾ, ಯಮುನಾ, ಬ್ರಹ್ಮಪುತ್ರ ಜೀವಜಲಗಳ ಮೂಲ. ಆ ಪ್ರಾಚೀನತೆಯನ್ನೂ ಈಗಿನ ಆಧುನಿಕತೆಯನ್ನೂ ಮುಖಾಮುಖಿ ಮಾಡಹೊರಟಿದ್ದರಾ ಅಡಿಗರು ? ಅವೆರಡರ ಮಧ್ಯೆ ಇರುವ ಕಂದರವನ್ನು ಸೂಚ್ಯವಾಗಿ ಹೇಳುತ್ತಿದ್ದಾರಾ? ಇವೆರಡರ ನಡುವೆ ಭಗ್ನ ಸೇತುವೆ ಮಾತ್ರ ಇರಲು ಸಾಧ್ಯ ಎನ್ನುತ್ತಿದ್ದಾರಾ ? ಹಿಮ್ಮುಖವಾಗಿ ಎಂದರೆ ಸನಾತನದ ಕಡೆ ಚಲಿಸುವ ರೈಲಾ ? ಹೊರಟ ರೈಲನ್ನು ಹತ್ತಲಾಗದು ಎಂದು ಹೇಳುತ್ತಿದ್ದಾರಾ ... ಇದನ್ನು ಬಯಸಿರಲಿಲ್ಲ ಎಂಬುದರಿಂದ ಭೂಮಿಗೀತದ ಕಡೆಗೆ ಮತ್ತೆ ಹಿಂತಿರುಗುವುದು ಅವರ ಆಶಯವಾಗಿತ್ತಾ...!!!!
ಬೇಂದ್ರೆಯವರ ಅತ್ಯಂತ ಶ್ರೇಷ್ಠ ಪದ್ಯವೊಂದನ್ನು ಆಯ್ಕೆ ಮಾಡಿಕೊಳ್ಳುವುದಾದಲ್ಲಿ ನನ್ನ ಮೊದಲ ಆಯ್ಕೆ ಜೋಗಿ ಪದ್ಯ. ಆದರೆ ಅಡಿಗರ ಪದ್ಯದಲ್ಲಿ ಹಿಮಗಿರಿಯ ಕಂದರ ಅವರ ಅತ್ಯಂತ ಶ್ರೇಷ್ಠ ಪದ್ಯವೇನೂ ಅಲ್ಲದಿದ್ದರೂ ಇದರಲ್ಲಿ ಅಡಿಗರ ಕಾವ್ಯದ ಮೂಲಧಾತು ಅಡಗಿದೆ ಎಂದು ನಂಬಿದವಳು ನಾನು.
ಅಡಿಗರ ಕಟ್ಟಾ ಅಭಿಮಾನಿಯಾದ ನನಗೆ ಅಡಿಗರ ಬಗ್ಗೆ ಆಕ್ಷೇಪಗಳೇ ಇಲ್ಲವೆಂದೇನೂ ಇಲ್ಲ. ಆ ಆಕ್ಷೇಪಗಳನ್ನೂ ಕಡೆಗಣಿಸಿ ಮತ್ತೆ ಮತ್ತೆ ಅವರ ಪದ್ಯಗಳನ್ನು ಓದುವಂತೆ ಮಾಡಿದ್ದು ಅವರ ಅದ್ಭುತ ಒಳನೋಟಗಳು, ಸಮಕಾಲೀನಕ್ಕೆ ಸ್ಪಂದಿಸುವ ಅವರ ಮನೋಗುಣ...
ಅಡಿಗರ ಕಟ್ಟಾ ಅಭಿಮಾನಿಯಾದ ನನಗೆ ಅಡಿಗರ ಬಗ್ಗೆ ಆಕ್ಷೇಪಗಳೇ ಇಲ್ಲವೆಂದೇನೂ ಇಲ್ಲ. ಆ ಆಕ್ಷೇಪಗಳನ್ನೂ ಕಡೆಗಣಿಸಿ ಮತ್ತೆ ಮತ್ತೆ ಅವರ ಪದ್ಯಗಳನ್ನು ಓದುವಂತೆ ಮಾಡಿದ್ದು ಅವರ ಅದ್ಭುತ ಒಳನೋಟಗಳು, ಸಮಕಾಲೀನಕ್ಕೆ ಸ್ಪಂದಿಸುವ ಅವರ ಮನೋಗುಣ...
ಅಡಿಗರ ಪದ್ಯಗಳು ಬಹು ಆಯಾಮಗಳುಳ್ಳವು . ಅಡಿಗರ ಕಾವ್ಯದ ಬಗ್ಗೆ ಯಾರೆಷ್ಟೇ ಚೆಂದವಾಗಿ ಮಾತನಾಡಿದರೂ ಯಾರೆಷ್ಟೇ ಅದ್ಭುತವಾಗಿ ಬರೆದರೂ ಅದರ ಒಂದು ಆಯಾಮದ ಬಗ್ಗೆ ಮಾತ್ರ ಮಾತಾನಾಡಿರುತ್ತಾರಷ್ಟೇ. ಇನ್ನುಳಿದ ಆಯಾಮಗಳು ಹಾಗೆಯೇ ಉಳಿದುಬಿಟ್ಟಿರುತ್ತವೆ ಎಂಬುದೇ ಅಡಿಗರ ಕಾವ್ಯದ ಶ್ರೇಷ್ಠತೆ. ಅಡಿಗರ ಕಾವ್ಯ ಕಳೆದ ಶತಮಾನದಲ್ಲಿ ಸಂಭವಿಸಿರಬಹುದಾದ ಬಹುದೊಡ್ಡ ಅದ್ಭುತ, ಆಶ್ಚರ್ಯ ಮತ್ತು ಅಭೂತಪೂರ್ವ ಕೊಡುಗೆ ಕೂಡಾ
No comments:
Post a Comment