ಈ ಹಬ್ಬ ಬಂತೆಂದರೆ ಎಷ್ಟು ಸಿಹಿ ಸಿಹಿ ನೆನಪುಗಳು. ಹಬ್ಬವೋ.. ದುರ್ಗಾಮಾತೆಯ ಅವತಾರಕ್ಕೆ ಕಾರಣವಾದ ಕಥೆಗಳೋ.. ಅದು ನಮ್ಮ ಮೈಸೂರಿನ ನಾಡಹಬ್ಬವೆಂಬ ಹಿರಿಮೆಯೋ ನಮಗೆ ಗೊತ್ತಿರಲಿಲ್ಲ.. ತಿಳಿದುಕೊಳ್ಳುವ ಹಂಬಲವೂ ಇರುತ್ತಿರಲಿಲ್ಲ. ಸಂಜೆಯಾಯಿತೆಂದರೆ ನೀಟಾಗಿ ತಲೆ ಬಾಚಿ ಜಡೆ ಹೆಣೆಸಿಕೊಂಡು ಇದ್ದುದರಲ್ಲೇ ಒಳ್ಳೆ ಬಟ್ಟೆ ಹಾಕಿಕೊಂಡು ಒಂದು ಪುಟ್ಟ ಜೇಬಿನ ಗಾತ್ರದ ಬಟ್ಟೆಯ ಚೀಲವನ್ನು ಹಿಡಿದು ಅಕ್ಕಪಕ್ಕದ ಮನೆಗೆಲ್ಲಾ ಓಡುತ್ತಿದ್ದೆವು.. ಪ್ರತಿಮನೆಯಲ್ಲೂ ಏನಾದರೊಂದು ತಿಂಡಿ.. ಗೊಂಬೆ ಬಾಗಿನ. ಎಲ್ಲವನ್ನೂ ತುಂಬಿಕೊಂಡು ಎಲ್ಲರೂ ಒಟ್ಟಿಗೆ ಕೂತು ಬೇಗಬೇಗ ತಿಂದಂತೆ ನಾಟಕವಾಡಿ ಒಂದಿಷ್ಟು ತಿಂಡಿಯನ್ನು ಮುಚ್ಚಿಟ್ಟು ಕಡೆಗೆ ಎಲ್ಲರದೂ ಮುಗಿದ ಮೇಲೆ ನಾವು ನಮ್ಮ ಬತ್ತಳಿಕೆಯಿಂದ ಒಂದೊಂದೇ ತಿಂಡಿಯನ್ನು ತೆಗೆದು ಅವರೆಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದುದು ಹಚ್ಚ ಹಸಿರು. ಅದರಲ್ಲೂ ಒಂದು ಮನೆ.. ಆ ಮನೆಯ ತಿಂಡಿಗಳು .. ಕುಮಾರಿಪೂಜೆಗೆ ನಾವೆಲ್ಲರೂ ಖಾಯಂ ಕುಮಾರೀಶಕ್ತಿಗಳು.
ಪ್ರತಿ ನವರಾತ್ರಿಯಲ್ಲೂ ನೆನಪಾಗುತ್ತಲೇ ಇರುತ್ತದೆ. ಅದು ದೊಡ್ಡ ಮನೆ.. ದೊಡ್ಡವರ ಮನೆ.. ತುಂಬು ಸಂಪ್ರದಾಯಸ್ಥ ಕುಟುಂಬ. ಮನೆ ತುಂಬಾ ಮಕ್ಕಳು .. ಆರು ಹೆಣ್ಣು ನಾಲ್ಕು ಗಂಡು .. ಯಜಮಾನ ಜಗಲಿಗೆ.. ಮಡದಿ ಮನೆಯೊಳಗೇ .. ಹೊಸಿಲ ದಾಟುವುದೆಂದರೆ ಅಂಗಳದ ರಂಗೋಲಿ ಆರಳಿಸುವಷ್ಟಕ್ಕೆ ಮಾತ್ರ.. ಸೊಂಪು ದಾಸವಾಳ.., ಹಬ್ಬಿಸಿದ ಮಲ್ಲಿಗೆ ಚಪ್ಪರ.. ಕರಿಬೇವು, ನಿಂಬೆಯ ಸಮೃದ್ಧ ಫಸಲು ಹಿತ್ತಲಿನಲ್ಲಿ ನಕ್ಕು ಅವಳು ಅಲ್ಲಿ ಕಳೆಯುವ ಹೊತ್ತಿನ ಬಗ್ಗೆ.., ಅವಳ ಶ್ರದ್ಧೆಯ ಬಗ್ಗೆ ಹೇಳುತ್ತಿದ್ದಂತೆ.. ಅದೂ ನವರಾತ್ರಿ ಮನೆ .. ಅಷ್ಟೂ ದಿನಗಳ ಕಾಲ ಅಲ್ಲೊಂದು ದೇಗುಲ ನಿರ್ಮಿಸಿದಂತೆ ಭಾಸವಾಗುತ್ತಿತ್ತು.. ಪ್ರತಿ ನಿತ್ಯ ರಾತ್ರಿ ಪೂಜೆ, ಚಂಡಿಕಾ ಪಾರಾಯಣ.. ದೇವಿ ಸ್ತೋತ್ರ .. ಮಂಗಳಾರತಿಗೆ ಹತ್ತು ಹಲವು ಬಗೆಯ ಆರತಿಗಳು..ಸುವಾಸಿನಿ ಪೂಜೆ, ಕುಮಾರಿ ಪೂಜೆ.. ದಿನಕ್ಕೊಂದು ತಿಂಡಿ .. ಸಮೃದ್ಧಿ..
ಆ ಮನೆಯ ಹೆಣ್ಣುಮಗಳು ಅವರು. ಇಂತಹುದೇ ಒಂದು ದೊಡ್ಡ ಮನೆಗೆ ಗೃಹಿಣಿಯಾಗಿ ಸೇರಕ್ಕಿ ಒದ್ದಮೇಲೆ ಇತ್ತಕಡೆ ಬಂದದ್ದೂ ಅಪರೂಪವೇ. ಗೌರಿ, ಯುಗಾದಿ , ದೀಪಾವಳಿ ಇಂತಹ ಯಾವುದೇ ಹಬ್ಬಕ್ಕೂ ಬಾರದವರು ನವರಾತ್ರಿಗೆ ಮಾತ್ರ ತಪ್ಪಿಸಿದವರೇ ಅಲ್ಲ. ಪ್ರತಿ ನವರಾತ್ರಿಗೂ ಹತ್ತು ದಿನಗಳೂ ಹಾಜರಿ. ಹಾಗಿದ್ದೆ ಒಂದು ನವರಾತ್ರಿ. ಅಲ್ಲಿ ಆ ಹೆಣ್ಣುಮಗಳು ಮತ್ತೊಬ್ಬಾಕೆ ಮಾತನಾಡುತ್ತಿದ್ದುದು ಅಯಾಚಿತವಾಗಿ ಕುಮಾರಿಪೂಜೆಗೆ ಸಿದ್ಧಳಾಗಿ ಕುಳಿತಿದ್ದ ನನ್ನ ಕಿವಿಗೆ ಬಿತ್ತು. ಆಕೆ ಈ ಹೆಣ್ಣುಮಗಳನ್ನು ಗೌರಿ ಹಬ್ಬಕ್ಕೆ ಏಕೆ ಬರಲಿಲ್ಲವೆಂದು ಪ್ರಶ್ನಿಸುತ್ತಿದ್ದರು. ಇವರು ಆ ಪ್ರಶ್ನೆ ಕಿವಿಗೆ ಬೀಳಲಿಲ್ಲವೆಂಬಂತೆ ಮೌನವಾಗಿಬಿಟ್ಟರು. ತುಸು ಹೊತ್ತಿನ ಬಳಿಕ ಕುಮಾರಿ ಪೂಜೆ ಮುಗಿದು ಆ ಮನೆಯ ಯಜಮಾನ ಸಾಷ್ಟಾಂಗ ನಮಸ್ಕಾರ ಮಾಡಿದಾಗ ಈ ಹೆಣ್ಣು ಮಗಳು ಪಕ್ಕದವರನ್ನು ಕೈ ತಟ್ಟಿ ಕರೆದು ಈ ದೃಶ್ಯವನ್ನು ತೋರಿಸಿ ಅವರೊಬ್ಬರಿಗೆ ಮಾತ್ರ ಕೇಳಿಸುವಷ್ಟು ಮೆಲುದನಿಯಲ್ಲಿ ಹೇಳಿದರು. "ಇದನ್ನು ನೋಡಲೆಂದೇ ನಾನು ಇಲ್ಲಿಗೆ ಪ್ರತಿವರ್ಷ ಬರುವುದು. ಯಾವ ಹೆಣ್ಣು ಜನ್ಮವನ್ನುಹುಟ್ಟಿನಿಂದ ಕೀಳು ಅನ್ನಿಸಿಕೊಂಡು ಬಂದೆವೋ .. ಯಾವ ತಪ್ಪಿಗಾಗಿ ಹೊಸಿಲು ದಾಟದೆ ಒಳಗೊಳಗೇ ನವೆದೆವೋ ಆ ಹೆಣ್ಣು ಜನ್ಮಕ್ಕೆ ಈ ಗಂಡುಗಳು ಈ ಹತ್ತು ದಿನಗಳು ತಲೆ ಬಾಗೋದನ್ನು ನೋಡಲಿಕ್ಕೆ ಬರ್ತೀನಷ್ಟೇ. " ಪಕ್ಕದಲ್ಲಿದ್ದಾಕೆ ಇವರನ್ನು ಹುಚ್ಚರಂತೆ ನೋಡಿ ಸುಮ್ಮನಾದರೇನೋ. ಅಂದು ಅವರು ಹೇಳಿದ ಮಾತುಗಳು ನಂತರದ ದಿನಗಳಲ್ಲಿ ಅರ್ಥವಾದದ್ದು. ಗೌರಿ ಪೂಜೆ, ಲಕ್ಷ್ಮಿ ಪೂಜೆ ಮಾಡುವವರು ಹೆಣ್ಣುಗಳೇ.. ನವರಾತ್ರಿಯ ಪೂಜೆ ಮಾತ್ರ ಅಲ್ಲಿ ಗಂಡಸರೇ ಮಾಡುತ್ತಿದ್ದುದು. ಅವರು ಸ್ತ್ರೀ ಶಕ್ತಿಗೆ ತಲೆ ಬಾಗುವುದನ್ನು ನೋಡಲು ಆಕೆ ಬರುತ್ತಿದ್ದರಾ? ಅಥವಾ ತನ್ನನ್ನು ನೋಯಿಸಿದವರು ತನ್ನಂತಹ ಹೆಣ್ಣಿಗೆ ( ಆಕೆ ದೇವತೆಯೇ ಆಗಿರಲಿ) ದೋರ್ಧಂಡ ನಮಸ್ಕಾರ ಹಾಕಿ ಪಾಹಿಮಾಂ ಎಂದು ಶರಣಾಗುವುದನ್ನು ಕಂಡು ಸಾಂತ್ವಾನ ಕಂಡುಕೊಳ್ಳುತ್ತಿದ್ದಾರಾ?
ಯಾರು ಮಾಡಿದವರು ಈ ಹಬ್ಬಗಳನ್ನು ? ಒಂದೊಂದೂ ಒಂದೊಂದು ರೀತಿ . ಮಹಿಷಾಸುರನಂತಹ ದೈತ್ಯನನ್ನು ಕೊಲ್ಲಲು ಹೆಣ್ಣೇ ಬೇಕಾಯಿತು. ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿ ಎಂದು ಹೆಣ್ಣನ್ನೇ ಏಕೆ ಸೃಷ್ಟಿ ಮಾಡಿದರು? ಸಪ್ತ ಮಾತೃಕೆಯರೇ ಏಕೆ ಬೇಕಾಯಿತು? ಜಗತ್ತಿಗೆ ಅವಳೂ ಎಷ್ಟು ಮುಖ್ಯವೆಂದು ತೋರಿಸುವುದಕ್ಕಾ? ಹೆಣ್ಣೆಂದರೆ ಕೀಳು ಎಂಬ ಭಾವನೆ ಬೆಳೆಯಬಾರದು ಎಂಬುದಕ್ಕಾ? ಅವರಿಬ್ಬರೂ ಪರಸ್ಪರ ಪೂರಕ ಎಂದು ತೋರಿಸಲಿಕ್ಕಾ ? ಇದನ್ನರಿಯದೆ ಮನೆಮನೆಯ ದುರ್ಗಿಯರನ್ನು ಕಡೆಗಣಿಸಿ ದುರ್ಗಾನಮಸ್ಕಾರ ಸಲ್ಲದೆಂದು ಕುಮಾರಿಪೂಜೆಯಂತಹ ಆಚರಣೆಗಳು ಬಂದವಾ? ಮಿಕ್ಕೆಲ್ಲವನ್ನೂ ಬದಿಗಿಟ್ಟು ಹೀಗೆಲ್ಲ ನೋಡಿದಾಗ ಈ ನವರಾತ್ರಿ ಹೆಣ್ಣುಜೀವಕ್ಕೆ ಅರ್ಥ ತಂದುಕೊಟ್ಟ , ಅವಳ ಸ್ಥಾನ ಎಲ್ಲೆಂದು ಗುರುತಿಸಿದ ಹಬ್ಬವೆನಿಸುವುದಿಲ್ಲವಾ ? ಯಾರು ಮಾಡಿದರು ಈ ಹಬ್ಬಗಳನ್ನು ಇಷ್ಟು ಅರ್ಥಪೂರ್ಣವಾಗಿ.. ಅವರಿಗೆ ಶರಣು.. ಶರಣು..