ಹೊಂಗೆ ಚಿಗುರುಗಳನ್ನು ವಸಂತ ಅರಳಿಸುತ್ತಿದ್ದ ಕೆಲಸದಲ್ಲಿ ತಲ್ಲೀನನಾಗಿದ್ದಾಗಲೇ ಪ್ರತಿವರ್ಷಯುಗಾದಿಯಂದು ಆ ಹಾಡು ಕೇಳಿ ಬರುತ್ತಿತ್ತು, " ಯುಗಯುಗಾದಿ ಕಳೆದರೂ " . ನಾವೊಂದಿಷ್ಟುಹುಡುಗರು ರಜೆ ಬಂದ ಸಂಭ್ರಮದಲ್ಲಿ ಮನೆಯ ಮುಂದಿದ್ದ ಹೊಂಗೆ ಮರಗಳ ಕೆಳಗೆ ಭೃಂಗದ ಸಂಗೀತಕೇಳುತ್ತಾ , ಕೆಳಗೆ ಬಿದ್ದ ಕೆಲವು ಹೂಗಳನ್ನು ಗಮನಿಸದೆ ಅದರ ಮೇಲೆ ಆಟವಾಡುತ್ತಿದ್ದ ದಿನಗಳವು. ಆಹಾಡು, ಹೊಂಗೆ ಮರ, ಹೂವು ಇಲ್ಲದ ಯುಗಾದಿಯನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲವಷ್ಟೆಅಲ್ಲ , ಎಲ್ಲರ ಯುಗಾದಿಯೂ ಹೀಗೆ ಇರುತ್ತೆ ಎಂದು ದೃಢವಾಗಿ ನಂಬಿದ ಕಾಲ ಅದು. ಅವಳಬದುಕಿನಲ್ಲಿ ಅವನು ವಸಂತದಂತೆ ಬಂದ ... ಅವಳೊಬ್ಬಳಿದ್ದಳು ಅವನ ಬಾಳಿನಲ್ಲಿ ವಸಂತದಚಿಗುರೊಡೆಸಲು .. ಹೀಗಿದ್ದ ವಾಕ್ಯಗಳು ಅರ್ಥವಾಗುವ ಮೊದಲೇ ಮಲೆನಾಡಿಗೆ ಕಾಲಿಟ್ಟಾಗಿತ್ತು
ಬೇಲಿ ಕಟ್ಟಿಕೊಂಡಷ್ಟೂ ಉದ್ದದ ಜಾಗ .. ಭರ್ರೂ ಎಂದು ಸುರಿಯುವ ಮಳೆ .. ಗಿಡ ನೆಟ್ಟಷ್ಟೂ ಕೈಸೋಲದು, ಚಿಗುರೊಡೆದಷ್ಟೂ ಕಣ್ಮನಕ್ಕೆ ಸಾಲದು . ಹೀಗಿರುವಾಗೊಮ್ಮೆ ಚಳಿಗಾಲದಲ್ಲಿ ಗಿಡ ನೆಡಲುಹೋದಾಗ ಅಮ್ಮ ತಡೆದಿದ್ದರು. .' ಈಗ ನೀರುಣಿಸಿದರೂ ಗಿಡ ಹುಟ್ಟುವುದಿಲ್ಲ.. ಹವಾಮಾನಕ್ಕೆಸರಿಯಾಗಿ ಹಾಕಬೇಕು. ಮಳೆಗಾಲದ ಶುರುವಿನಲ್ಲಿ ನೆಟ್ಟರೆ ಸಾಕು' .. ಗಿಡ ಚಿಗುರೊಡೆಯಲುಮಳೆಗಾಲ ಬೇಕೆಂದು ಹವೆ ಪೂರಕವಾಗಿರಬೇಕೆಂದು ಅರಿವಾದ ಕ್ಷಣವದು. ಮಳೆಗಾಲದ ಆರಂಭದಲ್ಲಿಗಿಡ ನೆಡುವುದು, ಹೂ ಕುಯ್ದು ಉದ್ದ ಜಡೆಗೆ ಮುಡಿಯುವ ಸಂಭ್ರಮಗಳು...
ಹಾಗೊಂದು ಪುಳಕದ ವಸಂತ ಅರಿವಿಗೆ ಬಂದಿದ್ದು ಯಾವತ್ತು? ಚಳಿ, ಚಿಗುರು, ಬಿಸಿಲು, ಮಳೆ ,ಹೂವು, ಹಣ್ಣು ಎಲ್ಲಎಲ್ಲವೂ ಅತೀ ಸಹಜವೆಂಬಂತೆ ನನ್ನ ಗಮನಕ್ಕೇ ಬಾರದಂತೆ ತಮ್ಮ ಪಾಡಿಗೆ ತಾವುಸಂಭವಿಸುತ್ತಿದ್ದಾಗಲೇ ಇದೊಂದು ಸಂಭ್ರಮದಂತೆ ಕಂಡಿದ್ದು, ಮೈಗಡರಿದ್ದು, ಮನಕ್ಕೆ ತಾಕಿದ್ದು ..ಯಾವತ್ತು ? ಹಸಿರು ಕಾಣದ ಊರಿಂದ ಮಲೆನಾಡಿಗೆ ಹೆಜ್ಜೆಯಿಟ್ಟ ಗಳಿಗೆಯಲ್ಲಾ? ಹಾಗೆ ಮಲೆನಾಡಿಗೆಕಾಲಿಟ್ಟ ಸಮಯ ಹದಿಹರೆಯಕ್ಕೆ ಹೆಜ್ಜೆಯಿಡುತ್ತಿದ್ದ ಹೊತ್ತೇ ಆಗಿದ್ದರಿಂದಲಾ ? ಬೆಳಗು ಶುರುವಾಗುವಹೊತ್ತಲ್ಲಿ ಸುತ್ತಲಿನ ಹೊಂಬಣ್ಣದ ರಂಗು ಬಳಿದುಕೊಂಡ ಹಸಿರು ಚಿಗುರುಗಳನ್ನು ನೋಡುತ್ತಾಪರೀಕ್ಷೆಯಲ್ಲಿ ಬರೆಯಬೇಕಾದ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ ಬಸ್ಸು ಹಿಡಿಯಲು ಒಂದೂವರೆಮೈಲು ನಡೆಯುತ್ತಿದ್ದ ಹೊತ್ತಲ್ಲಾ ?
ವಸಂತ ನನಗಿಷ್ಟವಾಗಲು ಬಹು ಮುಖ್ಯ ಕಾರಣ ಮಲ್ಲಿಗೆ. ಚಿಗುರೊಡೆದ ಮಲ್ಲಿಗೆಯ ಬಳ್ಳಿಗೆ ಚಪ್ಪರ ಕಟ್ಟಿಘಮ್ಮೆನ್ನವ ಮೊಗ್ಗು ಪೋಣಿಸಿ ದಂಡೆ ಕಟ್ಟಿಟ್ಟು.. ತಲೆಗೆ ರಾಶಿ ಹರಳೆಣ್ಣೆ ಪೊಳಚಿಕೊಂಡು ಸೀಗೆಹಿಟ್ಟಿನಲ್ಲಿಅದರ ಜಿಡ್ಡಿನ ಸೊಕ್ಕು ಮುರಿದ ಮೇಲೆ , ಇನ್ನೂ ಕಡುಹಸಿರು ಬಣ್ಣಕ್ಕೆ ತಿರುಗದ ಮತ್ತಿಸೊಪ್ಪಿನ ಚಿಗುರುನೆನೆಸಿ ತಯಾರಿಸಿದ ಗುಳ ಬಳಸಿ ತೊಳೆವ ಸಂಭ್ರಮ. ಮಿಂದು ಮಿರುಗುವ ಕೂದಲನ್ನು ಒಣಗಿಸಿನೀರುಜಡೆ ಹಾಕಿಕೊಂಡು ಮಲ್ಲಿಗೆಯ ದಂಡೆ ಮುಡಿದರೆ ವಸಂತ ನನ್ನ ಕಾಲಡಿ ಬಿದ್ದು ನಕ್ಕ ಲೆಕ್ಕ . ಒದ್ದೆಕೂದಲಿದ್ದಾಗಲೇ ಮಲ್ಲಿಗೆ ಮುಡಿದರೆ ವಾರವಿಡೀ ಘಮ ಹೋಗುವುದಿಲ್ಲ ಎಂದು ನಮ್ಮೂರ ಭಟ್ಟರಹೆಂಡತಿ ಹೇಳುತ್ತಿದ್ದುದು ನಿಜವೆಂಬುದು ಅರಿವಾಗಿದ್ದು ಆಗಲೇ. ವಸಂತವೆಂದರೆ ಸಮೃದ್ಧಿ,ವಸಂತವೆಂದರೆ ಹೊಸತನ, ವಸಂತವೆಂದರೆ ಹರ್ಷ.. ಹೀಗೆಲ್ಲಾ ಏನೇನೊಅಂದುಕೊಳ್ಳುತ್ತ ಒಳಗೊಳಗೇ ಮೊಳಕೆಯೊಡೆಯುತ್ತಿದ್ದ ಚಿಗುರು ಭಾವಗಳಡಿಯಲ್ಲಿಅರಳುತ್ತಿದ್ದಾಗಲೇ ಬಂದಿದ್ದು ಆ ದಿನ.
ಕನ್ನಡದ ಕ್ಲಾಸು .. ಅವತ್ತು ಯಶೋಧರ ಚರಿತೆಯ ಕುರಿತ ಪಾಠದ ಮಧ್ಯದಲ್ಲಿ ಅವರಾಡಿದ ಮಾತು. "ಎಲ್ಲರ ಬದುಕಿನಲ್ಲಿ ವಯೋಸಹಜವಾಗಿ ವಸಂತ ಬಂದರೆ ಅಮೃತಮತಿಯ ಬದುಕಿನಲ್ಲಿ ಅವಳಜೀವನದ ಮಧ್ಯ ಭಾಗದಲ್ಲಿ ಅಷ್ಟಾವಕ್ರ ವಸಂತವಾಗಿ ಬಂದ" ... ವಸಂತ ಹೀಗೂ ಬಂದೀತೇ ಅದೂಅಷ್ಟಾವಕ್ರನಂತೆ ಎಂದೆಲ್ಲಾ ಪಿಸುಮಾತುಗಳ ನಡುವೆಯೂ ವಸಂತ ಎಂಬ ಪದ ನನ್ನ ಮನದಾಳಕ್ಕೆಇಳಿದು ಹೋಗಿತ್ತು. ಅಮ್ಮ ಹೇಳಿದ ಮಾತು ಹವಾಮಾನ ಪೂರಕವಾಗಿರಬೇಕು.. ಅದುಚಿಗುರೊಡೆಯಲು ಮಳೆಗಾಲದ ಆರಂಭದ ದಿನಗಳು ಬೇಕು.ಎಂಬ ಮಾತಿಗೆ ಅರ್ಥವೇ ಇಲ್ಲದಂತೆಗಿಡಮರಗಳು ಕುಡಿಯೊಡೆಯುತ್ತವೆ ಎಂದು ಥಟ್ಟನೆ ಹೊಳೆದಿತ್ತು. ನಮ್ಮ ಮೈಒಡೆದು ಎಷ್ಟು ಎಣ್ಣೆಸವರಿದರೂ ತ್ವಚೆ ನಯವಾಗದ ಕಾಲದಲ್ಲಿ , ನೆಲ ಬಿರಿಬಿಟ್ಟು ಧೂಳೇಳುವ ಕಾಲದಲ್ಲಿ, ಹೆಸರಿಗೆ ಒಂದೇಒಂದು ಎಲೆಯೂ ಗಿಡಮರಗಳಲ್ಲಿ ಉಳಿಯದೆ ಮಣ್ಣಾಗುವ ಹೊತ್ತಿನಲ್ಲಿ , ಮಳೆಯ ಸುಳಿವೇ ಇಲ್ಲದಸಮಯದಲ್ಲಿ ಒಣಗಿ ನಿಂತು ಸೌದೆಯಾಗಲಷ್ಟೇ ಲಾಯಕ್ಕು ಎನ್ನುವ ಭಾವನೆ ಹುಟ್ಟುಹಾಕುವಂತಿದ್ದಮರಗಳು ಇದ್ದಕ್ಕಿದ್ದಂತೆ ಬಂಗಾರದ ಬಣ್ಣದ ಚಿಗುರುಗಳನರಳಿಸಿ ತಿಳಿಹಸಿರ ಬಟ್ಟೆಯುಟ್ಟು ನಳನಳಿಸುವಪರಿ ಬೆರಗು ಮೂಡಿಸಿತ್ತು. ಬದುಕಿನಲ್ಲಿ ವಸಂತ ತಂದವನು ಎಂಬ ಮಾತಿನ ಅರ್ಥ ಹೊಳೆದಿತ್ತು.
ಬದುಕಲ್ಲಿ ಭರವಸೆಗಳೆಲ್ಲವೂ ಹಣ್ಣೆಲೆಗಳಾಗಿ ಬಿದ್ದು ಕೊಳೆಯುವ ಸ್ಥಿತಿ ಬಂದಾಗ, ಬರಡು ಬರಡುದಿನಗಳು ತೆವಳಲೂ ಕಷ್ಟಪಡುವಾಗ, ಬಿಸಿ ಗಾಳಿ ಹೊತ್ತ ಬಿಸಿಲು ಬೇಯಿಸುವ ಹೊತ್ತಲ್ಲಿ , ಹನಿ ನೀರಒರತೆಯೂ ದಕ್ಕದ ಕ್ಷಣಗಳಲ್ಲಿ ಅವನೊಬ್ಬ/ಅವಳೊಬ್ಬಳು ವಸಂತವಾಗಿ ಬಂದು ಸಂಭ್ರಮದಚಿಗುರೊಡೆಸುವ ಪವಾಡ ... ಬದುಕು ಇದ್ದಕ್ಕಿದ್ದಂತೆ ಬದಲಾಗುವ ವಿಸ್ಮಯ .... ಜೀವನವೇಮುಗಿಯಿತೆಂಬ ಹತಾಶೆಯಲ್ಲಿ ಕೈಚೆಲ್ಲಿದ ಘಳಿಗೆಯಲ್ಲಿ ಮತ್ತೆ ಹೂ ಬಿಟ್ಟು ಭೃಂಗದ ಸಂಗೀತ ಕೇಲಿಗೆತಾವು ನೀಡುವ ಬೆರಗು ... ಹೇಗೆ ಮೂಡುತ್ತವೆ ಇವು .. ಯಾವ ಆಸರೆ ಇಷ್ಟು ಸಡಗರ ಕೊಟ್ಟಿದ್ದು .. ಭಾವನೆಗಳೆಂಬ ಭಾವನೆಗಳನ್ನು ಪಕ್ಕಕ್ಕಿಟ್ಟು ವೈಜ್ಞಾನಿಕ ಕಾರಣವೇನಾದರೂ ಇದ್ದೀತಾ ಇದರಲ್ಲಿ ?
ವಿಜ್ಞಾನದ ಅಧ್ಯಾಪಕರೊಬ್ಬರು ಹೇಳುತ್ತಾ ಹೋದರು .. ಮರಗಿಡಗಳೆಲ್ಲ ಚಳಿಗಾಲದಲ್ಲಿ ಎಲೆಉದುರಿಸಿಕೊಂಡು ಬೋಳಾಗುತ್ತವೆ. ಒಣ ಹವೆ.. ಶುಷ್ಕತೆ .. ಕೆಳಗೆ ಬಿದ್ದು ಒಣಗಿದ ತರಗಲೆಗಳು .. ಇಂಗಿಹೋದ ವಾತಾವರಣದ ಆರ್ದ್ರತೆ.ಉದ್ದನೆಯ ರಾತ್ರಿಗಳು,. ಗಿಡ್ಡ ಹಗಲುಗಳು . ಅಂತಹಾ ಸಮಯದಲ್ಲಿಭೂಮಿಯಿಂದ ದೂರವಿದ್ದ ಸೂರ್ಯ ಹತ್ತಿರವಾಗುತ್ತಾ ಬರುತ್ತಾನೆ.. ದಿನ ಮತ್ತೆ ಉದ್ದವಾಗಲಾರಂಭಿಸುತ್ತದೆ.. ರಾತ್ರಿಗಳು ಗಿಡ್ಡ ಗಿಡ್ಡವಾಗಿ ಉಷ್ಣತೆ ಏರಲಾರಂಭಿಸುತ್ತದೆ. ಬಿಸಿ ತಾಗಿದ ಕೂಡಲೇ ಹೊತ್ತಿ ಉರಿಯುವ ಸ್ಥಿತಿಯಲ್ಲಿತರಗಲೆಗಳ ನಡುವೆ ನಿಂತ ಮರಗಳು... ಭೂಮಿ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಲ್ಲವಾ ? ತನ್ನ ಸಕಲಶಕ್ತಿಯನ್ನೂ ಒಗ್ಗೂಡಿಸಿ ಮರಗಳಿಗೆ ಪೋಷಣೆಯೊದಗಿಸುತ್ತದೆ. ಮರಗಳು ಚಿಗುರೊಡೆದು ಮತ್ತೆ ಹಸಿರು ಮತ್ತೆತಂಪು.. ಮತ್ತೆ ಎಲೆಗಳ ಸವರಿ ಬರುವ ತಂಗಾಳಿ .. ಸೂರ್ಯನ ಪ್ರಕೋಪ ಹೆಚ್ಚಿದರೂ ಅಪಾಯದ ಭಯದಿಂದಭೂಮಿ ಹೊರಬರುತ್ತದೆ. ಚಳಿಗಾಲ ಬರುವಾಗಲೇ ಎಲೆಯುದುರಿಸಿಕೊಳ್ಳಲು ಗಿಡಮರಗಳಿಗೊಂದು ಸಿಗ್ನಲ್ಕೊಟ್ಟಿರುತ್ತದೆ. ವಸಂತ ಅರಳಿಸುತ್ತದೆ......
ನಾನು ಮಾತು ಮರೆತು ಕೂತಿದ್ದೆ. ಮೇಲೆ ಮೇಲೆ ಯಾವ ಬಾಹ್ಯ ಪೋಷಣೆಯೂ ಇಲ್ಲದೆ ಯಾವಸೂಚನೆಯನ್ನೂ ಕೊಡದೆ ಭೂಮಿ ಇಷ್ಟು ಹೋರಾಟ ನಡೆಸುವುದು ಹೇಗೆ? ಸೊರಗುವುದು ಹೇಗೆ ? ಅರಳುವುದು ಹೇಗೆ ? ಬೆರಗು ತಾಂಡವವಾಡಿತ್ತು.. ಊಹಿಸಲೂ ಆಗದಂತಹಾ ವಿವರಗಳು..
ಅಮೃತಮತಿಯ ಬದುಕಿನಲ್ಲಿ ಅಷ್ಟಾವಕ್ರ ವಸಂತದಂತೆ ಬಂದ ಎಂಬ ಮಾತಿಗೆ ಈಗ ದಕ್ಕಿದ ಅರ್ಥವ್ಯಾಪ್ತಿಯವಿಸ್ತಾರವೇ ಬೇರೆಯಾಗಿತ್ತು. ವಸಂತವೆಂದರೆ ಪುಟ್ಟ ಗಿಡವೊಂದನ್ನು ನೆಟ್ಟು ನೀರುಣಿಸಿ ಚಿಗುರಿಸಿ ಹೊಸ ಜೀವತುಂಬುವುದಲ್ಲ .. ಬೆಳೆದು ನಿಂತ ಮರಗಳಲ್ಲಿ ಪ್ರತಿ ವರ್ಷವೂ ಹೊಸ ಚಿಗುರು, ಹೊಸ ಹೂವು, ಹೊಸಭರವಸೆ...
ಇದೆಲ್ಲವೂ ಗೊತ್ತಿದ್ದೇ ನಮ್ಮವರು ಯುಗದ ಆದಿಯ ಹಬ್ಬವೆಂದು ಕರೆದಿರಬಹುದಾ ಇದನ್ನು? ಮೊದಲಹಬ್ಬವೆಂದು ಕರೆಯುವುದು ಇಷ್ಟು ಅರ್ಥಪೂರ್ಣವಾ ? ಮಾವು ಬೇವಿನ ಚಿಗುರುಗಳ ಸಂಭ್ರಮ ಬದುಕಲ್ಲಿಯೂಬರಲೆಂಬ ಆಶಯ ಅವರದಾಗಿತ್ತಾ? ಇರುವ ಜೀವನವನ್ನು ಒಪ್ಪ ಮಾಡುತ್ತಾ ಪ್ರತಿ ವರ್ಷ ವರ್ಷವೂ ಹೊಸತನತುಂಬುವ ಸಂಕೇತವಾ ?
ನೋವುಗಳನ್ನು ಹಳೆ ಎಲೆಗಳಂತೆ ಕಳಚಿಕೊಳ್ಳುತ್ತಾ ಯಾವ ಹೊರಗಿನ ಪೋಷಣೆಯೂ ಇಲ್ಲದೆ ಭೂಮಿಯಂತೆಸಕಲ ಶಕ್ತಿಯನ್ನು ಒಗ್ಗೂಡಿಸಿ ಬದುಕಲ್ಲಿ ನಲಿವನ್ನು ಸಂಭ್ರಮವನ್ನು ಜೀವನೋತ್ಸಾಹವನ್ನು ತುಂಬಿಕೊಳ್ಳುವಯತ್ನವಾಗಿತ್ತಾ ? ಮರಗಿಡಗಳಿಗೇ ಶಕ್ತಿ ತುಂಬುವ ವಸಂತ ಮಾನವರಲ್ಲೂ ಅಂತಹದ್ದೇನಾದರೂ ಪವಾಡಮಾಡಬಲ್ಲನಾ ? ವರುಷಕೊಂದು ಹೊಸತು ಜನ್ಮ .. ಹರುಷಕೊಂದು ಹೊಸತು ನೆಲೆ ಎಂಬುದು ಮತ್ತೂಅರ್ಥಪೂರ್ಣವಾಗಿ...
ಬೆರಗು ಹುಟ್ಟಿಸುವ ವಸಂತ ನಮ್ಮೆಲ್ಲರ ಬದುಕಲ್ಲಿ ವಸಂತವಾಗಿ ಬರಲಿ. ಈ ಯುಗಾದಿ ನಮ್ಮನಿಮ್ಮೆಲ್ಲರಲ್ಲೂಜೀವನೋತ್ಸಾಹವನ್ನು ಒಳಗಿಂದಲೇ ಚಿಗುರಿಸಲಿ ಎಂಬ ಆಶಯ ...
ಚಿಕ್ಕಂದಿನಲ್ಲಿ ಕೇಳಿದ ಹಾಡು ಅಲ್ಲೆಲ್ಲೋ ಕೇಳಿಸುತ್ತಿದೆ..
ವಸಂತ ಬಂದ ಕೂವೂ ಜಗ್ ಜಗ್ ಪೂವ್ವೀ ಟೂವಿಟ್ಟವೂ
No comments:
Post a Comment