ತೀರಾ ಇತ್ತೀಚಿಗೆ ಒಬ್ಬರು ಕೇಳಿದರು. ನೀವು ಧ್ಯಾನಸ್ಥರಾಗಿ ಕುಮಾರವ್ಯಾಸನನ್ನು ಓದಬಲ್ಲಿರಾ? ಹೊರಗಿನ ವಿಷಯಗಳು ಬಾಧಿಸುವುದಿಲ್ಲವೇ ? ಅಂತಹಾ ಧ್ಯಾನದ ಸ್ಥಿತಿಯನ್ನು ನೀವು ತಲುಪಿದ್ದೀರಾ ನಿಮ್ಮ ಓದಿನಲ್ಲಿ ? ಒಂದಿಷ್ಟು ಹೊತ್ತು ನನಗೆ ಏನು ಹೇಳಬೇಕೋ ತೋಚಲೇ ಇಲ್ಲ. ಧ್ಯಾನಸ್ಥರಾಗಿ ಓದುವುದು ಎನ್ನುವುದು ಸಹಜವಾಗಿ ಹೇಳುವ ಮಾತಾಗಿ ಬಿಟ್ಟಿದೆಯಲ್ಲಾ ಎಂದೆನಿಸಿತು. ಪರಿಭಾಷೆಗಳನ್ನು ಉಪಯೋಗಿಸುವಾಗ ಎಷ್ಟು ಎಚ್ಚರ ಬೇಕಲ್ಲವಾ ಎನ್ನಿಸಿಬಿಟ್ಟಿತು.ಅವರು ಕೇಳಿದ್ದರಲ್ಲಿ ತಪ್ಪೇನಿರಲಿಲ್ಲ. ಧ್ಯಾನವೆಂಬ ಪದ ಕಿವಿಗೆ ಬಿದ್ದೊಡನೆ ನನ್ನ ಮನಸ್ಸು ಎಲ್ಲೋ ಎಲ್ಲೆಲ್ಲೋ ಓಡತೊಡಗಿತು. ಈ ವಿಷಯಕ್ಕೆ ಸಂಬಂಧಿಸಿದ್ದೋ ಇಲ್ಲವೋ ಎಂಬ ಅರಿವೂ ಇಲ್ಲದಂತೆ.... ಇಷ್ಟಕ್ಕೂ ಧ್ಯಾನವೆಂದರೆ......
ಮನುಷ್ಯನ ಉತ್ಪಾದನಾ ಘಟಕಗಳು ಮೂರು. ದೇಹ, ಮನಸ್ಸು ಮತ್ತು ಪ್ರಜ್ಞೆ ಅಥವಾ ಬುದ್ಧಿ. ಮನುಷ್ಯ ಹುಟ್ಟಿದಂದಿನಿಂದ ಸಾವು ಎನ್ನುವ ಪ್ರಕ್ರಿಯೆ ಅವನ ದೇಹದೊಳಗೆ ಪ್ರತಿದಿನ ಪ್ರತಿಕ್ಷಣ ನಿರಂತರವಾಗಿ ನಡೆದಿರುತ್ತದೆ. ಸಾವಿನ ಬಿಂದುವಿನೆಡೆಗೆ ನಿರಂತರವಾಗಿ ನಡೆಯುತ್ತಿರುವ ದೇಹದೊಳಗಿರುವ ಮನಸ್ಸು, ಪ್ರಜ್ಞೆ, ಜೀವಗಳು ಸುಖವಾಗಿ ಇರಲು ಸಾಧ್ಯವಿಲ್ಲ. ಹೆಚ್ಚೆಂದರೆ ಅವನ ದೈನಂದಿನ ಅರ್ಥ ಕಾಮಗಳಲ್ಲಿ ಅದನ್ನು ಮರೆತಿರುತ್ತಾನಷ್ಟೆ. ಪ್ರಜ್ಞೆ ಅಥವಾ ಯೋಚಿಸುವ ಶಕ್ತಿಯನ್ನು ಹೊಂದಿರದ ಪ್ರಾಣಿಗಳನ್ನು ಈ ದುಃಖ ಕಾಡುವುದೇ ಇಲ್ಲ. ಮಾನವ ಮೂಲಭೂತವಾಗಿ ಎದುರಿಸಿಕೊಂಡು ಬಂದಿರುವ ಅನಾದಿ ಅನಂತ ಪ್ರಶ್ನೆಯೆಂದರೆ ಇಂತಹ ದುಃಖಮಯವಿರುವ ಜೀವನದ ದುಃಖವನ್ನು ಆತ್ಯಂತಿಕವಾಗಿ, ಶಾಶ್ವತವಾಗಿ ಹೇಗೆ ಕೊನೆಗಾಣಿಸಬಹುದು ಎಂಬುದೇ. ಇದು ಮೇಲ್ನೋಟಕ್ಕೆ ಕಾಣುವ ಯಾವ ಬದಲಾವಣೆಯಿಂದಲೂ ಸಾಧ್ಯವಿಲ್ಲ. ಸಮಾಜದ ಬದಲಾವಣೆಯಿಂದ ಸಾಧ್ಯವಿಲ್ಲ, ಆಳುವ ಸರ್ಕಾರದ ಬದಲಾವಣೆಯಿಂದ ಸಾಧ್ಯವಿಲ್ಲ. ಒಂದು ಅತ್ಯುತ್ತಮ ಸರ್ಕಾರ ಬಂದಾಗಲೂ ಆತನ ಜೀವನ ಹಾಗೆಯೇ ಇರುತ್ತದೆ. ಇದು ವೈಯಕ್ತಿಕ ಮಟ್ಟದಲ್ಲಿಯೇ ಆಗಬೇಕಾದ ಬದಲಾವಣೆ. ಅದನ್ನು ಸಾಧಿಸಿಕೊಳ್ಳಲು ಆತ ನೂರು ವಿಷಯ ವಸ್ತುಗಳ ಮೊರೆ ಹೋಗುತ್ತಿರುತ್ತಾನೆ.
ದೇಹ, ಮನಸ್ಸು, ಪ್ರಜ್ಞೆ ಈ ಮೂರನ್ನೂ ಬಳಸಿಕೊಂಡು ಅಂದರೆ ಒಂದನ್ನು ಕೇಂದ್ರವಾಗಿಟ್ಟುಕೊಂಡು ಇನ್ನೆರಡನ್ನು ಅದರ ಅಧೀನವಾಗಿಟ್ಟು ಇದನ್ನು ಸಾಧಿಸಬೇಕಾಗುತ್ತದೆ. ವೇದ, ಉಪನಿಷತ್ತು, ಪುರಾಣ, ಬ್ರಹ್ಮಸೂತ್ರ, ಭಗವದ್ಗೀತೆಗಳಲ್ಲಿ ಈ ವಿವರಣೆಗಳಿವೆ. ಮತ್ತು ನಾವು ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವುದು ಐಚ್ಛಿಕವಾದುದೂ ಅಲ್ಲ. ಅವರವರ ಸ್ವಭಾವಕ್ಕೆ ಅನುಗುಣವಾಗಿ, ಸ್ವಧರ್ಮಕ್ಕೆ ಅನುಗುಣವಾಗಿ ಮಾರ್ಗಗಳೂ ಸಿದ್ಧವಿರುತ್ತವೆ. ಇದೊಂದು ನಿರಂತರ ಹುಡುಕಾಟ. ಪೂರ್ವಾರ್ಧದ ಹುಡುಕಾಟಕ್ಕೆ ಜೀವಾಚ್ಛಾದಿತ ಹಂತವೆಂದರೆ, ಉತ್ತರಾರ್ಧಕ್ಕೆ ಪರಮಾಚ್ಛಾದಿತ ಹಂತವೆನ್ನಬಹುದು.
ದೇಹವನ್ನು ಕೇಂದ್ರವಾಗಿಸಿಕೊಂಡು ಮನಸ್ಸು ಮತ್ತು ಪ್ರಜ್ಞೆಯನ್ನು ಅದಕ್ಕೆ ಅಧೀನವಾಗಿಸಿ ಮಾಡುವ ದುಃಖ ನಿವಾರಣೆಯ ಮಾರ್ಗ "ತಂತ್ರ" ಅಥವಾ "ತಾಂತ್ರಿಕ"ವಾಗುತ್ತದೆ. ಮನಸ್ಸನ್ನು ಕೇಂದ್ರವಾಗಿಸಿ ದೇಹ ಮತ್ತು ಪ್ರಜ್ಞೆಯನ್ನು ಅದಕ್ಕೆ ಅಧೀನವಾಗಿಸುವ ಮಾರ್ಗ "ಭಕ್ತಿ"ಯಾಗುತ್ತದೆ. ಪ್ರಜ್ಞೆಯನ್ನು ಕೇಂದ್ರವಾಗಿಸಿ ದೇಹ ಮನಸ್ಸುಗಳನ್ನು ಅದಕ್ಕೆ ಅಧೀನ ಮಾಡಿಕೊಂಡು ಮುನ್ನಡೆಯುವ ಮಾರ್ಗ "ಧ್ಯಾನ'ವಾಗುತ್ತದೆ . ಈ ಮೂರೂ ವಿಧಾನಗಳಲ್ಲೂ ಧ್ಯಾನದ ಶಕ್ತಿ ಬಹಳ ಪ್ರಬಲವಾದುದು.. ಅಂತಹಾ ಧ್ಯಾನದ ಮಾರ್ಗವನ್ನು ಆರಿಸಿಕೊಂಡವನ ಕೀಲಿಕೆ ಧ್ಯಾನದ ವಿಷಯದ ಜೊತೆಗೆ ಅದೆಷ್ಟು ಗಾಢವಾಗಿರಬೇಕೆಂದರೆ ಜಗತ್ತನ್ನೇ ಮರೆಯುವಷ್ಟು.
ಅದು ಅಷ್ಟು ಸುಲಭವಾಗಿ ಸಾಮಾನ್ಯರಿಗೆ ಸಿದ್ಧಿಸುವುದೂ ಇಲ್ಲ. ಒಂದು ವೇಳೆ ಧ್ಯಾನ ಸಿದ್ಧಿಸಿದ್ದೇ ಆದರೆ ಅವನ ಮೇಲೆ ತಂತ್ರ ಮತ್ತು ಭಕ್ತಿಗಳು ಯಾವ ಪರಿಣಾಮವನ್ನೂ ಬೀರುವುದೇ ಇಲ್ಲ. ಇಂತಹಾ ಧ್ಯಾನದ ಮಟ್ಟವನ್ನು ಮುಟ್ಟಿದ ಮೇಲೆ ಆತ ಹಿಂತಿರುಗಿ ಬರುವುದೂ ಬಹಳ ಕಷ್ಟ. ಅಂತಹವರ ಜೊತೆ ಹೊಂದಿಕೊಳ್ಳಲು ಸಾಮಾನ್ಯನಿಗೆ ಹೇಗೆ ಕಷ್ಟವೋ ಅವರಿಗೂ ಜಗತ್ತಿಗೆ ಹೊಂದಿಕೊಳ್ಳವುದು ಅಷ್ಟೇ ಕಷ್ಟವಾಗಿಬಿಡುತ್ತದೆ. ಧ್ಯಾನಸ್ಥರಾಗಿ ಪ್ರೀತಿಸಿದವರನ್ನೇ ನೋಡಿ ಅವರಿಗೆ ಅದರಿಂದ ಹೊರಬರಲು ಆಗುವುದೇ ಇಲ್ಲ. ಯಾರಾದರೂ ಮಧ್ಯದಲ್ಲೇ ತೊರೆದರೆ ಅರೆ ಹುಚ್ಚರಂತಾಗಿಬಿಡುತ್ತಾರೆ.
ಬುದ್ಧನ ದಾರಿಯನ್ನೇ ನೋಡಿ. ಧ್ಯಾನ ಮಾರ್ಗ ಹಿಡಿಯಲು ಜನರಿಗೆ ಸಂದೇಶವಿತ್ತ ಬುದ್ಧ ಹೇಳಿದ್ದಾದಾದರೂ ಏನು? " ಜೀವನ ದುಃಖಮಯವಿದೆ, ಇದರಲ್ಲಿ ಚಿಂತನೆಗಳ ಮೂಲಕ ಧ್ಯಾನಕ್ಕೇರಬೇಕು, ಆಸೆಗಳು ನಿರ್ವಿಷಯವಾಗಬೇಕು ಅಥವಾ ದುಃಖ ನಿವಾರಣೆಯಾಗಬೇಕು ". ಸರಿಯಾಗಿಯೇ ಇದೆ. ಬುದ್ಧನಿಗೆ ಸಾಧ್ಯವೂ ಆಯಿತು. ಅವನು ಮರೆತಿದ್ದೆನು? ತಾನು ಹೇಳುವ ಧ್ಯಾನ ಮಾರ್ಗ ಸಾರ್ವಜನಿಕ ಮಾರ್ಗವಲ್ಲ, ಅದು ಕೆಲವರಿಗೆ ಮಾತ್ರ ದಕ್ಕುವ ಮಾರ್ಗ. ಅದು ಶಾಶ್ವತ ಪರಿಹಾರವಾಗಲಾರದು ಎಂಬುದನ್ನೇ ಅವನು ಮರೆತಿದ್ದಾ ?
ದೇಹವನ್ನು ಕೇಂದ್ರವನ್ನಾಗಿಸಿ ಮನಸ್ಸು, ಪ್ರಜ್ಞೆಯನ್ನು ಅದಕ್ಕೆ ಅಧೀನವನ್ನಾಗಿಸಿ ಸಾಗುವ ಮಾರ್ಗ ತಂತ್ರ. ರಜನೀಶ್ ರಂಥಹವರು ಹಿಡಿದ ಮಾರ್ಗ. ಒಂದು ಆರೋಗ್ಯ ಪೂರ್ಣ ತಾಂತ್ರಿಕತೆಯನ್ನು ಎಲ್ಲರೂ ಇಟ್ಟುಕೊಳ್ಳಲು ಸಾಧ್ಯವಾ ಎಂಬುದೇ ಮೊಟ್ಟಮೊದಲು ಎದುರಾಗುವ ಅನುಮಾನ. ಯಾವ ವಿಷಯವನ್ನೂ ಗಹನವಾಗಿ ತೆಗೆದುಕೊಳ್ಳದ ಇಂದಿನ ಜಗತ್ತಿನಲ್ಲಿ ತಾಂತ್ರಿಕ ಎಂದ ಕೂಡಲೇ ವಿಕೃತಿಯಾಗುವ ಸಂಭವವೇ ಹೆಚ್ಚು. ಹೀಗಾಗಿ ತಂತ್ರ ಮತ್ತು ಧ್ಯಾನಗಳು ಯಾವ ಕಾಲಕ್ಕೂ ಅಪಾಯಕಾರಿ ಮಾರ್ಗಗಳು ಮತ್ತು ಕಠಿಣ ಮಾರ್ಗಗಳು.
ಭಕ್ತಿಯೊಂದೇ ಮುಖ್ಯವಾದ ಮಾರ್ಗ... ಎಲ್ಲರಿಗೂ ದಕ್ಕಬಹುದಾದ ಮಾರ್ಗ.
ಸಾಹಿತ್ಯದ ಸಂವಹನ ಮತ್ತು ವಿಮರ್ಶೆಯ ಚೌಕಟ್ಟಿನಲ್ಲಿ ಈ ಪರಿಭಾಷೆಗಳನ್ನು ಬಳಸಬಹುದಾದರೆ ಒಂದು ಕೃತಿಯ ಒಳಗೆ ಅದರ ತಾಂತ್ರಿಕ ಪರಿಣತಿಯನ್ನು ಅಷ್ಟೇ ನೋಡಿ ತಾಂತ್ರಿಕವಾಗಿ ಬೆನ್ನು ಹತ್ತಿದರೆ ಆ ಕೃತಿ ನಮಗೆ ದಕ್ಕುವುದೇ ಇಲ್ಲ. ಅಥವಾ ಪ್ರಜ್ಞಾಪೂರ್ವಕವಾಗಿ ಅದರ ವೈಚಾರಿಕತೆ ಏನನ್ನು ಹೇಳುತ್ತದೆ, ಅದರ ಹಿಂದೆ ಯಾವ ವಾದಗಳಿವೆ ಎಂದು ಬೆನ್ನಟ್ಟಿದರೂ ಕೃತಿ ದಕ್ಕಲಾರದು. ರಸ ಸಿದ್ಧಾಂತವಿರುವುದೇ ಅದಕ್ಕಾಗಿ .. ಓದುಗ ಮೊದಲು ಕೃತಿಯ ರಸದಲ್ಲಿ ಮುಳುಗಬೇಕು. ಆ ಕೃತಿಯೂ ಕೂಡಾ ತನ್ನಲ್ಲಿ ಓದುಗನನ್ನು ಮುಳುಗಿಸಿಕೊಳ್ಳುವ ಅರ್ಹತೆಯುಳ್ಳದ್ದಾಗಿರಬೇಕು.. ಒಂದು ರಸ ಕೃತಿ ಸೃಷ್ಟಿಯಾಗುವ ಭುವನದ ಭಾಗ್ಯಕ್ಕಿಂತ ಸೃಷ್ಟ ಕೃತಿಗೂ ಓದುಗನ ಮನಸ್ಸಿಗೂ ಒಂದು ಯೋಗ್ಯ ಸಂವಹನ ಉಂಟಾಗಿ ಅಲ್ಲೊಂದು ಹೊಸ ಅರಿವು, ಹೊಸ ಪುಳಕ ಸ್ಫೋಟವಾಗುವುದೇ ಭುವನದ ಭಾಗ್ಯ. ಈ ಅರ್ಥದಲ್ಲಿ ಧ್ಯಾನಸ್ಥರಾಗುವುದೆಂದರೆ ಮೊದಲು ರಸದೊಳಗೆ ಮುಳುಗಿ ನಂತರ ಆ ಕೃತಿ ಕೊಡುವ ಅರಿವುಗಳನ್ನು ಧ್ಯಾನಸ್ಥರಾಗಿ ಪರಿಶೀಲಿಸುವುದು.
ಕುಮಾರವ್ಯಾಸನನ್ನು ಧ್ಯಾನಸ್ಥಳಾಗಿ ಓದಬಲ್ಲೆನಾ ? ಮೊದಲು ಮುಳುಗಬೇಕಿದೆ ಅದರ ರಸದಲ್ಲಿ .. ಇನ್ನೂ ಇನ್ನೂ . ನಂತರವಷ್ಟೇ ಧ್ಯಾನ... ಹಾಗೊಂದು ದಿನಕ್ಕಾಗಿ ಎದುರು ನೋಡುತ್ತಲೇ......
No comments:
Post a Comment