ಯಾರೋ ಬರುತ್ತಾರೆಂದು ಸುಮ್ಮನೆ ಕಾದೆ - ಕಾಯುತ್ತಿದ್ದಾರೆ ... ಯಾರೋ ಬರುತ್ತಾರೆ ಎಂಬ ತುಡಿತವಿದೆ. ಅದು ಯಾರು? ಅವರೇಕೆ ಬರಬೇಕು? ಇವರು ಕಾಯುತ್ತಿದ್ದಾರೆಂದು ಅವರಿಗೆ ಗೊತ್ತಿದೆಯಾ? ಬರುತ್ತೇನೆಂದು ಅವರು ಹೇಳಿದ್ದಾರಾ? ಕಾಯುತ್ತಿದ್ದಾರೆಂದರೆ ಅವರ ಬರುವಿಕೆ ಇವರಿಗೆ ಅವಶ್ಯಕವಿರಲೇ ಬೇಕು. ಹಾಗಾಗಿಯೇ ಈ ಕಾಯುವಿಕೆ.. ಆದರೆ ಮುಂದಿನ ಮಾತು ಸುಮ್ಮನೆ ಕಾದೆ. ಎರಡು ಪದದಲ್ಲಿ ಹೆಪ್ಪುಗಟ್ಟಿದ ವಿಷಾದ ಅವರು ಬರಲಿಲ್ಲವೆಂದು ಉಸುರುತ್ತದೆ.
ಅವರು ಬಾರದ ವಿಷಾದ ಇವರಿಗೆ ... ಇವರಿಗಷ್ಟೇ ಬರುವವರು ಬರುತ್ತಲೇ ಇದ್ದಾರೆ., ಹೋಗುವವರು ಹೋಗುತ್ತಲೇ.. ಜೀಪು ಕಾರುಗಳ ಗದ್ದಲ ಗೊಂದಲದಲ್ಲಿ ಧೂಳು ಹೊದ್ದ ಬದುಕ ಫೈಲುಗಳು !! .. ಬರುವವರು ಯಾರೆಂದು ಇವರಿಗೂ ಸ್ಪಷ್ಟವಿಲ್ಲ. ಅಧಿಕಾರಿ? ಅವತಾರ ಪುರುಷ? ಪೊರೆವ ತಂದೆ? ಮಾಯಾದಂಡ ಹಿಡಿದ ದೇವತೆ? ಇರಬಹುದು ಇವರಲ್ಲಿ ಯಾರಾದರೊಬ್ಬ.. ಅಥವಾ ಎಲ್ಲವೂ ಒಬ್ಬನೇ ಆಗಿರುವವ.. ಕಾಯುತ್ತಲೇ ಇದ್ದಾರೆ..ಕೈಗಳಲ್ಲಿ ಕುಣಿವ ಪುಷ್ಪಹಾರಗಳು ಬಾಡಿಹೋಗಿವೆ, ... ಟ್ರೇ ಗಳಲ್ಲಿ ನಿರೀಕ್ಷೆಯಲ್ಲಿ ಕುಳಿತ ತಿಂಡಿ ತಿನಿಸುಗಳು ಹಳಸಿಯಾಗಿದೆ..... ಫೈಲು ಮುಚ್ಚಿಕೊಂಡಿದೆ.. ಯಾರು ಬರುವರೆಂದು ಕೊನೆಗೂ ಗೊತ್ತಾಗದ ನಿರೀಕ್ಷೆ .. ಇವರಿರಬಹುದಾ ಎಂದು ಹುಡುಕುವ ಆತಂಕ .. ಇವರಲ್ಲ .. ಅವರೂ ಅಲ್ಲ.. ಬರುತ್ತೇನೆ ಎಂದವರು ಕಡೆಗೂ ಬಾರಲೇ ಇಲ್ಲ. ಅಂದರೆ ಬರುತ್ತೇನೆಂದವರನ್ನು ಇವರು ನೋಡಿಲ್ಲ, ಬರುವವರ ಬಗ್ಗೆ ಒಂದು ದಟ್ಟ ಭರವಸೆಇತ್ತಲ್ಲಾ ಅದು ಎಲ್ಲಿಂದ ಬಂದಿದ್ದು ? ಹೇಗೆ ಮೂಡಿದ್ದು ? ಕೊನೆಯ ಸಾಲುಗಳು ಬೆಚ್ಚಿ ಬೀಳಿಸುತ್ತವೆ.
"ಕತ್ತಲ ಕೋಣೆಯಲ್ಲಿ
ಸುಮ್ಮನೆ ಕಾದೆ -
ನಿಮ್ಮ ಹಾಗೆ ."
ಕತ್ತಲಾಗಿದೆ ಅಂದರೆ ಕಾಯುವಿಕೆ ಮುಗಿದಿದೆ, ಇನ್ನು ಬರುವುದಿಲ್ಲ ಎಂಬ ಅರಿವೂ ಇದೆ.. 'ಸುಮ್ಮನೆ' ಕಾದೆ ಎಂಬ ಸಾಲಿನಲ್ಲಿ ಬರುವುದಿಲ್ಲ ಎಂದು ಗೊತ್ತಿದ್ದರೂ ಕಾದೆ ಎಂಬ ಭಾವವಿದೆಯಾ ? ಕಾದಿದ್ದು ವ್ಯರ್ಥ ಎಂಬ ಭಾವವಾ? ಕಡೆಯ ಶಾಕ್ ತಾಗುವುದು ನಿಮ್ಮ ಹಾಗೆ ಎಂಬ ಸಾಲಿನಲ್ಲಿ. ಅರೆರೆ ನಾವು ಕಾದದ್ದು ನಿಮಗೆ ಹೇಗೆ ಗೊತ್ತು ಎಂದು ಕೇಳುವ ಮುನ್ನವೇ ಎಲ್ಲರ ಬದುಕೂ ಹೀಗೆ ಅಲ್ಲವಾ ಎನ್ನಿಸಿಬಿಡುತ್ತದೆ .. ಬದುಕೇ ಹಾಗೆ .. ಒಮ್ಮೊಮ್ಮೆ ಯಾರೂ ಬರುತ್ತೇವೆಂದು ಭರವಸೆ ಕೊಡದಿದ್ದರೂ ಕಾಯುತ್ತೇವೆ.... ಸುಖಾಸುಮ್ಮನೆ .. !!
ದಿನ ಹೀಗೆ ಜಾರಿ ಹೋಗಿದೆಯಲ್ಲಿ ಅವರು ಬರೆವ ಸಾಲುಗಳು
'ಅರಳಿ ಅನೇಕ ಹೂಗಳು ಬರಿದೆ ಕಾದಿವೆ
ಹಿಮದ ಕಟೋರ ಕೈಯಲಿ ನರಳಿ ಕೆಡೆದಿವೆ.' ದುಗುಡ ನಿಧಾನವಾಗಿ ಬೆಳೆದು ಬಾಳ ಮುಸುಕಿ ಕನಸು ಮಾಸಿಹೋಗಿದೆ ಕಾಯುತ್ತಲೇ ....
ಕಾಯುವುದೆಂದರೆ ಯಾರೋ ಬರಲಿ ಎಂದಲ್ಲ , ಬರುತ್ತಾರೆ ಎಂದೂ ಅಲ್ಲ, ರಾಧೆ ಮಾಧವನಿಗೆ ಕಾದಂತೆ... ಅಕ್ಕ ತನ್ನ ಮಲ್ಲಿಕಾರ್ಜುನನಿಗಾಗಿ ಹಂಬಲಿಸಿದಂತೆ.. ಬಾರನೆಂಬುದು ಅರಿತಿದ್ದರೂ ಕಾಯುವ ಅನುಭೂತಿಗಾಗಿ ಕಾದಂತೆ ..
ಕಾಯುವಿಕೆಯನ್ನೂ ಅದ್ಭುತವೆಂಬಂತೆ ತೋರಿಸಿಕೊಟ್ಟವರು ಚೊಕ್ಕಾಡಿಯವರು. ಕಾಯುತ್ತಲೇ ....
.
ಅವರ ಪದ್ಯಗಳಲ್ಲಿ ಹೀಗೇ ಎಷ್ಟೋ ಬಾರಿ ಕಳೆದು ಹೋಗಿದ್ದೇನೆ . ಮೀನಿನ ಹೆಜ್ಜೆ ಕವನವನ್ನೇ ನೋಡಿ..
ನೀರಿನಲಿ ಮೀನಿನ ಹೆಜ್ಜೆ ಹುಡುಕುತ್ತ ಹೊರಟವರು
ತಿಳಿದಿರಬೇಕು-ಮೀನು ಹಾಗೂ ನೀರ ಅಂಟಿರದ ನಂಟು.
ಮೀನಿಗೋ ಇಡಿ ದೇಹವೇ ಪಾದ,ನೀರಿಗಿದೆ
ಯಾವುದೇ ಬಂಧನವಿರದ ಸಂಬಂಧ.ಎರಡೂ ಜತೆಗೆ
ಸಾಗುತ್ತ ,ಬೇರೆಯಾಗುತ್ತ, ಇದ್ದೂ ಇರದಂತೆ ಬಾಳುವವು.
ಇಡಿ ದೇಹ ಹೆಜ್ಜೆಯಂತೂರಿ ಸಾಗುವ ಮೀನು
ಆ ಗುರುತನೊಡನೆಯೇ ಒರೆಸಿ ಹಾಕುವ ನೀರು
ಮೀನ ಕಣ್ಣಿನ ಬೆಳಕು ನೀರನ್ನು ಬೆಳಗುತ್ತ
ನೀರು ಆ ಕಂಗಳಿಗೆ ಜೀವವನು ಊಡುತ್ತ
ಗುರುತಿರದೆ ಬಾಳಿ ,ಆಗುವುವು ಜೀವನ್ಮುಕ್ತ.
ಪಾತ್ರವನ್ನಾಧರಿಸಿ ಇರುವ ನೀರಿನ ಒಳಗೆ
ಆಳ ಅಗಲಗಳ ಅರಿತಿರುವ ಮೀನಿನ ನಡಿಗೆ,
ನೀರಿನ ಚಲನೆ,ಘನವಾಗಿ ಸ್ಥಿರಚಿತ್ರವಾದಾಗ
ಹಿಡಿದಿಡಲೂ ಬಹುದು ಮೀನಿನ ಹೆಜ್ಜೆ ಗುರುತಾಗ!
ಮೀನಿನ ಹೆಜ್ಜೆ ಹುಡುಕಹೊರಟವರಿಗೆ ನೀರು ಮೀನಿನ ಅಂಟಿರದ ನಂಟು ಗೊತ್ತಿರಬೇಕು. ನಂಟು ಎಂಬ ಪದದಲ್ಲೇ ಅಂಟಿಸಿಕೊಳ್ಳುವಿಕೆಯನ್ನು ಗುರುತಿಸುವಷ್ಟರಲ್ಲೇ ಅಂಟಿರದ ನಂಟು ಎಂದುಬಿಡುತ್ತಾರೆ. ದೇಹವನ್ನೇ ಪಾದ ಮಾಡಿ ನಡೆವ ಮೀನು.. ಅದು ನಡೆದ ಹೆಜ್ಜೆ ಗುರುತನ್ನು ಅಳಿಸುತ್ತಾ ಬರುವ ನೀರು ಜೊತೆಗಿದ್ದೂ ಇಲ್ಲದಂತೆ, ಇಲ್ಲದೆಯೂ ಇದ್ದಂತೆ. ಯಾವುದೇ ಬಂಧನವಿರದ ಸಂಬಂಧವದು. ನೀರ ಬೆಳಗುವ ಮೀನ ಕಣ್ಣು, ಜೀವವೂಡುವ ನೀರು ತಾವು ಹಾಗೆ ಪರಸ್ಪರವೆಂದು ಅರಿವಿಲ್ಲದೆ, ಗುರುತಿರದೆ ಜೊತೆಜೊತೆಗೇ ಬಾಳಿ ಜೀವನ್ಮುಕ್ತರಾಗುವ ಪರಿ ...
ಇಲ್ಲಿ ಮತ್ತೊಂದು ಕವನವಿದೆ ನೋಡಿ.
ಹಾರಿಹೋಗುತ್ತವೆ ಹಕ್ಕಿಗಳು ನಸುಕಿನಲ್ಲೇ ಗಾಳಿ ಬೀದಿಯಲಿ
ಜಗತ್ತನ್ನೇ ಆವರಿಸಿಕೊಳ್ಳುತ್ತ
ಮರಮಾತ್ರ ಅಲ್ಲೇ ನಿಂತಿರುತ್ತದೆ ನೆಲದಲ್ಲಿ ಕಾಲೂರಿ-ದಿಗಂತದತ್ತ
ಕೊಂಬೆ ರೆಂಬೆಗಳ ಚಾಚಿ ಜಗವನ್ನು ಒಳಗೊಳ್ಳುತ್ತ.
ಸಂಜೆ ಹಿಂದಿರುಗಿದ ಹಕ್ಕಿಗಳು ತೂಗುಹಾಕುತ್ತವೆ ಮರಕ್ಕೆ ತಮ್ಮ
ಹಾಡುಗಳನ್ನು:ನೆಲಮುಗಿಲನೊಳಗೊಂಡ ಜಗದ ಪಾಡುಗಳನ್ನು.
ಬೆಳಗೆದ್ದು ನೋಡಿದರೆ,ಮರವೋ--ಕಣ್ಣು ಮಿಟುಕಿಸುತ್ತದೆ,ಮೈತುಂಬಿರುವ
ಹೊಸ ಚಿಗುರು ಹೂವು ಹಣ್ಣುಗಳ ಕಣ್ಣುಗಳನ್ನು.
ಯಾರವಿವು?ಹಕ್ಕಿಗಳ ಕೊಡುಗೆಗಳ ರೂಪಾಂತರವೆ ಅಥವಾ ಮರವು
ನೆಲದಿಂದ ಪಡೆದದ್ದೆ? ಯಾವುದೂ ಸರಿಯಿರಬಹುದು.,ಇಲ್ಲದಿರಬಹುದು
ಮರದಲ್ಲೋ ಹಕ್ಕಿಗಳ ಹೆಜ್ಜೆ ಗುರುತುಗಳಿಲ್ಲ, ,ಹಕ್ಕಿಗಳಲೂ
ಮರದ ಯಾವುದೇ ನೆನವರಿಕೆ ಉಳಿದಂತಿಲ್ಲ.
ಕವಿದ ಕತ್ತಲಲೆ ವರ್ಗಾವಣೆ ಗೊಂಡವೇ-ಹಕ್ಕಿಗಳ
ಮರದ ಗಳಿಕೆಗಳು ಮುಟ್ಟಿಯೂ ಮುಟ್ಟದ ರೀತಿಯಲ್ಲಿ?
ಹಕ್ಕಿಗಳು ಹಾಗೂ ಮರ ಮಾತ್ರ ಸುಮ್ಮನೇ ನಿದ್ದೆ ಹೋಗುತ್ತವೆ
ರಾತ್ರಿ--ಮಾತಿರದೆ,ಯಾವುದೇ ಗೊಡವೆಯೇ ಇರದ ರೀತಿಯಲ್ಲಿ.
ಕನಸಿನ ಅನೂಹ್ಯ ಓಣಿಗಳಲ್ಲಿ ಹಕ್ಕಿಗಳಿಗೋ--ಮರದ ಘನತೆ,ಮರಕ್ಕೆ
ಹಕ್ಕಿಗಳ ಲವಲವಿಕೆ ದಕ್ಕಿ ಅದಲು ಬದಲಾದಂತಿದೆ.
ನಿಂತವರು ಅಲೆದಂತೆ,ಅಲೆದವರು ನಿಂತಂತೆ.ಈಗ ಹಕ್ಕಿಗಳಿಗಿಲ್ಲ
ಮರದ ಹಂಗು:ಮರಕ್ಕಿಲ್ಲ ಹಕ್ಕಿಗಳ ಹಂಗು.
ಜಗತ್ತಿಗೆ ಹಾರುವ ಹಕ್ಕಿಗಳು ಆಗಸದ ವಿಸ್ತಾರದ ಜೊತೆಜೊತೆಗೇ ತಮ್ಮ ಹಾರುವಿಕೆಯ ವಿಸ್ತಾರವನ್ನೂ ಸೂಚಿಸಿ , ಜಗವನ್ನೇ ಆವರಿಸುವಂತೆ ಕೈ ಚಾಚಿ ತನ್ನೊಳಗೆ ಎಳೆದುಕೊಳ್ಳುವಂತೆ ನಿಂತ ಮರದಲ್ಲಿ ನೆಲದ ಒಳಗೊಳ್ಳುವಿಕೆಯ ಬೇರಬಲ. ಹಕ್ಕಿ ಹಾರಿದ ಮೇಲೆ ಮರದ ಮೇಲೆ ಹಕ್ಕಿಯ ಹೆಜ್ಜೆ ಗುರುತಿಲ್ಲ ... ಹಕ್ಕಿಗಳ ರೆಕ್ಕೆಗಳಿಗೆ ಮರದ ನೆನಪಿಲ್ಲ. ಸಂಭ್ರಮದಲ್ಲೋ, ನೋವೆಲ್ಲೋ, ಹಸಿವಲ್ಲೋ, ಜಗವ ಒಳಗೊಳ್ಳುವ ಆತುರದಲ್ಲೋ ಹಾರಿದ ಹಕ್ಕಿ ಮತ್ತೆ ಮರದ ಮಡಿಲಿಗೆ ಹಿಂತಿರುಗಬೇಕು, ತನ್ನೆಲ್ಲ ದುಗುಡಗಳನ್ನು, ನಗುವನ್ನು, ಹಾಡುಗಳನ್ನೂ ಮರಕ್ಕೆ ನೇತು ಹಾಕಬೇಕು, ನಿಶ್ಚಿಂತೆಯಿಂದ ಮಲಗಬೇಕು. ಹಕ್ಕಿಗಳ ಸದ್ದುಸುದ್ದಿಯಿಲ್ಲದೆ ಹಗಲು ಕಳೆದ ಮರ ಹೊಸ ಚಿಗುರು, ಹಣ್ಣು, ಹೂವುಗಳನ್ನು ಅರಳಿಸಬೇಕು. ಮತ್ತೆ ಹಾರುವ ಹಕ್ಕಿಗಳಲ್ಲಿ ಮರದ ಯಾವುದೇ ನೆನವರಿಕೆ ಉಳಿದಂತಿಲ್ಲ, ಹಾರಿದ ಹಕ್ಕಿಗಳ ಹೆಜ್ಜೆ ಗುರುತು ಮರದಲ್ಲೂ . ಹಾರಿದ ಹಕ್ಕಿಯ ರೆಕ್ಕೆ ಬಲಕ್ಕೆ ಮರದ ಮಡಿಲೂ ಕಾರಣವಲ್ಲವಾ? ಚಿಗುರಿದ ಅರಳಿದ ಮರದ ಸೊಬಗಿಗೆ ಕೇವಲ ಬೇರು ಬಲ ಮಾತ್ರ ಕಾರಣವಾ ? ಕವಿದ ಕತ್ತಲಲ್ಲಿ ಅವೆರಡರ ಗಳಿಕೆಗಳೂ ಬದಲಾಗಿರಬಹುದೇ ಮುಟ್ಟಿಯೂ ಮುಟ್ಟದ ರೀತಿಯಲ್ಲಿ, ಮಾತಿರದೆ, ಯಾವುದೇ ಗೊಡವೆಯಿರದೆ ಸುಮ್ಮನೆ ನಿದ್ರೆ ಹೋದ ರೀತಿಯಲ್ಲಿ ಎಂಬ ಕವಿಯ ಸಾಲು ಮೈ ನವಿರೇಳಿಸುತ್ತದೆ. ' ನಿಂತವರು ಅಲೆದಂತೆ, ಅಲೆದವರು ನಿಂತಂತೆ'
ಈ ಪದ್ಯವನ್ನು ಓದಿ Sindhu ಹೇಳಿದ ಮಾತು ನೆನಪಾಗುತ್ತಿದೆ
"ನೆಲಮುಗಿಲುಗಳನ್ನೊಳಗೊಂಡ ಜಗದ ಪಾಡು ಮರಕ್ಕೆ ತೂಗು ಹಾಕುವ ಹಕ್ಕಿ ಸಂಕುಲಕ್ಕೆ ಗೊತ್ತು ಗೂಡಿಗೆ ಮಲಗಲಷ್ಟೆ ಜಾಗವಿದೆ. ಜಂಝಡಗಳನ್ನ ಹೊರಗಿಟ್ಟು ಮಲಗು ಅಂತ.
ಪಾಡನುಂಡು ಹೂಚಿಗುರು, ಕಾಯಿ, ಹಣ್ಣಾಗಿಸುವ ಮರ ಇಂಗಾಲವುಂಡು ಆಮ್ಲಜನಕ ಸುರಿಸಿದ ಹಾಗೆ.. ಈ ರೀತಿ ಇರಲಿಕ್ಕೆ ಮರಕ್ಕೆ ಮತ್ತು ಅಮ್ಮನಿಗೆ ಮಾತ್ರ ಸಾಧ್ಯವೇನೋ.
ಮರದಲ್ಲೋ ಹಕ್ಕಿಗಳ ಹೆಜ್ಜೆಗುರುತಿಲ್ಲ.. ಆದರೂ ಉಂಡ ಲವಲವಿಕೆ ಮರೆತಿಲ್ಲ.
ಹಕ್ಕಿಗಳು ಮರದ ಸ್ಥಾವರ ಬಿಟ್ಟು ಹಾರಿಯೂ ಮರೆತು ಹಾರಿಯೂ.. ಕೊನೆಗೆ ಮರಳುವುದು ಗೂಡಿಗೇ.
ಏನೆಲ್ಲ ನೋವುಗಳ ಹೊತ್ತು ಹೊರಬಿದ್ದವರು ಮತ್ತೆ ಸಂಜೆ ಮನೆಗೇ. ವಿಷಾದಗಳಲ್ಲೆ ಸ್ಥಾಯಿಯಾಗಿಯೂ ನಗು ನಗುತ್ತಿರುವುದೆ ಬದುಕಲ್ಲವೆ ಅನಿಸುತ್ತಿದೆ ಈಗ. ವಿಷಾದಗಳು ಇರುವುದು ತುಟಿಯ ಮೇಲೆ ತುಂಟ ಕಿರುನಗೆಯನ್ನ ಚಿಮ್ಮಿಸಲಿಕ್ಕಿರಬಹುದೆ? ನೋವನುಂಡ ಬಗೆಗೆ ಮಾತ್ರ ನಗಲು ಗೊತ್ತಾಗಬಹುದೆ?
ಹಕ್ಕಿಯೇ ಮರವಾದಾಗ ಮರಕೆ ರೆಕ್ಕೆ ಮೂಡಿ..ರೆಕ್ಕೆಯಂಚಲ್ಲಿ ಗೊಂಚಲು ಗೊಂಚಲು ಹೂ ಹಣ್ಣು ಕಾಯ್ ತೂಗಿ.. ಬೀಸಿದ ರೆಕ್ಕೆಗೆ ಮರದ ನೆರಳು ಅಲ್ಲಾಡಿ.. ಕೆಳಗೆ ಕೂತವರಿಗೆ ತಂಗಾಳಿ."
ಇದು ಕಾಯುವಿಕೆಯಿಲ್ಲದ ಬಂಧ, ನಿರೀಕ್ಷೆಗಳಿಲ್ಲದ ಅನುಬಂಧ... ಸಂಬಂಧಗಳು ಇರಬೇಕಾದ್ದು ಹೀಗಾ? ಗೊತ್ತಿಲ್ಲ... ನಿಮ್ಮ ಕವನಗಳು ಕೈ ದೀವಿಗೆಯಂತೆ ಹೆಜ್ಜೆಯಿಡುವಾಗೆಲ್ಲಾ ಬೆಳಕು... ಹಿತವಾದ ಬೆಳಕು..
ಈ ಬೆಳಕಿಗೊಂದು ನಮನ.
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು Chokkady ಸರ್.
ನಿಮ್ಮ ಹಾರೈಕೆ ನಮಗಿರಲಿ.
No comments:
Post a Comment