Friday, 1 September 2017

ಹೀಗೊಂದು ಚಹಾ



ನೀರಿಗೆ ಬಿದ್ದ ಚಹಾ ಎಲೆಗಳು.

ಕುದಿಯುತ್ತಿದೆ.. ಕೊತ..ಕೊತ..

ಮನಸ್ಸು ಕುದ್ದಂತೇ...

ಹೊರಹಾರಲೆತ್ನಿಸಿ ಸೋತು ಮತ್ತೆ

ಪಾತ್ರೆಯೊಳಗೇ ಬೀಳುವ ನೀರಗುಳ್ಳೆಗಳು..

ಹೊರಹಾಕಲಾರದೇ ಮನದಲ್ಲೇ

ಮುಚ್ಚಿಟ್ಟ ಬೇಗುದಿಯಂತೆ..


ಕಾಳಜಿಯಿಲ್ಲದವನು..

ಅಷ್ಟು ದಿನವೇಕೆ ದೂರವಿದ್ದದ್ದು..

ದೀಕ್ಷೆ ತೊಟ್ಟವನಂತೆ..

ಗೊತ್ತವನಿಗೆ ಸುರಿಸುತ್ತಿರುತ್ತಾಳೆ ಕಂಬನಿ

ಸುರಿಯಲಿ.. ಕಡಿಮೆಯಾದೀತು ಒಂದಿಷ್ಟು

ಹಟಮಾರಿತನ... ಇಳಿಯಲಿಳಿಯಲಿ ಅಂಗಾಲಿನಿಂದ ನೆತ್ತಿಗೂ ಮಿಕ್ಕಿ ನಿಂತ ಸೊಕ್ಕು..

ಬರುತ್ತಾಳೆ.. ಬಂದೇ ಬರುತ್ತಾಳೆ.. ಹೋಗುತ್ತಾಳೆಲ್ಲಿಗೆ...


ಇನ್ನು ಆಗುವುದಿಲ್ಲ ..

ದೂರ ನಡೆಯುತ್ತೇನೆ. ಮತ್ತೆ ನೋಡುವುದಿಲ್ಲ

ನಿನ್ನ ರಮಿಸುವಿದಿಲ್ಲ

ಮುದ್ದಿಸುವುದಿಲ್ಲ...

ಎಷ್ಟೇ ಕಾಡಲಿ ಬೇಡಲಿ..

ಬಾಯಿ ಬಡಿಯುತ್ತೇನೆ..

ಉಸಿರೆತ್ತಬೇಡ.. ನಾನು ಇನ್ನು ನಿಲ್ಲುವವಳಲ್ಲ..


ಹಾಗೇ ಹೇಳಿಬಿಡಲಾ..

ಹೋಗೆಂದು ಬಿಟ್ಟರೆ?

ತಡೆಯದಿದ್ದರೆ...?

ಕಾಡದಿದ್ದರೆ..?

ಪಾತ್ರೆಯೊಳಗೆ ಕುದಿನೀರೊಳಗೆ ಬಿದ್ದ ಚಹಾ ಪುಡಿ..

ಕುದಿಯುತ್ತಿದೆ.. ಕುಣಿಯುತ್ತಿದೆ..

ಘಮಗುಟ್ಟುತ್ತಿದೆ..

ತುರಿದಿಟ್ಟ ಚೂರೇಚೂರು ಶುಂಠಿಯ ಘಮವೂ..

ಗಟ್ಟಿಹಾಲು, ಹದಾ ಸಕ್ಕರೆ..

ಹಾಳು ಮರೆವು

ಮಾಡಿದ್ದೇಕೆ  ಎರಡು ಕಪ್ಪು..


ಬಾಗಿಲ ಸದ್ದು..

ಬಂದೇ ಬಿಟ್ಟನಾ...

ಬಾಗಿಲಲ್ಲಿ ನಿಂತವನ ತುಂಟನಗೆ..

ಹೇಳು ಇದೇನಿದು? ನೀರು? ಚಹಾಎಲೆ? ಹಾಲು? ಸಕ್ಕರೆ? ಕುದ್ದಮೇಲಲ್ಲವೇನೇ ಪೆದ್ದಿ ಚಹಾ ದಕ್ಕುವುದು..

ತುಟಿಗಿಟ್ಟ ಚಹಾಬಟ್ಟಲ ಬದಿಗಿಟ್ಟವನ

ತುಟಿಯೀಗ ನನ್ನ ನೆತ್ತಿಯ ಮೇಲೆ.. ಕುದ್ದಮೇಲಲ್ಲವೇನೇ ಇಷ್ಟು ಚೆಂದದ ಚಹಾ... 

No comments:

Post a Comment