" ದೊಡ್ಡೋರಾದಮೇಲೆ ಯಾರ್ಯಾರು ಏನೇನಾಗ್ತೀರಾ ಹೇಳ್ಬೇಕಪ್ಪ ಒಬ್ಬೊಬ್ರೇ ".. ನಮಗಿಂತ ಒಂದೈದು ವರ್ಷ ದೊಡ್ಡವನಾದ ಗುಂಡ ಇದ್ದಕ್ಕಿದ್ದಂತೆ ಈ ಪ್ರಶ್ನೆ ನಮ್ಮ ಮುಂದಿಟ್ಟಾಗ ದೊಡ್ಡವರಾಗುವ ಕಲ್ಪನೆಯೇ ಇಲ್ಲದೆ ಆಟವಾಡುತ್ತಿದ್ದ ನಾವು ಕಕ್ಕಾಬಿಕ್ಕಿಯಾದೆವು. ಇನ್ನೂ ಪ್ರೈಮರಿ ಹಂತದ ಎರಡನೆಯ ವರ್ಷದಲ್ಲಿದ್ದ ನಾವೊಂದಿಬ್ಬರು ಏನು ಹೇಳಬೇಕೆಂದು ಯೋಚಿಸುವ ಮೊದಲೇ .. " ನಾನು ಉದಯ ಬಸ್ ಡ್ರೈವರ್ ಆಗ್ತೀನಿ " ರಾಘು ದೃಢ ವಿಶ್ವಾಸದಿಂದ ಹೇಳಿದ. ಹಿಂದಿನ ದಿನವಷ್ಟೇ ನಮ್ಮಿಬ್ಬರ ಮನೆಯವರು ಚಿತ್ರದುರ್ಗಕ್ಕೆ ಹೋಗಿ ಬಂದಿದ್ದರಿಂದ ಉದಯ ಬಸ್ಸಿನಲ್ಲಿ ಡ್ರೈವರ್ ಮುಂದಿನ ಸೀಟಿನಲ್ಲೇ ಕುಳಿತು ಬಿಟ್ಟ ಕಣ್ಣು ಬಿಟ್ಟುಕೊಂಡು ಡ್ರೈವಿಂಗ್ ನೋಡುತ್ತಾ ಕುಳಿತಿದ್ದ ರಾಘುವಿಗೆ ಅವನು ದೊಡ್ಡ ಹೀರೋ ತರಹ ಕಾಣಿಸಿದ್ದ. ಫಸ್ಟ್ ಎಂದರೆ ದೊಡ್ಡದು ಎಂದುಕೊಂಡಿದ್ದ ನಾವು ಡ್ರೈವರ್ ವೇಗವಾಗಿ ಓಡಿಸುತ್ತಿದ್ದಾಗ ಫಸ್ಟ್ ಗೇರ್ ಎಂದೂ .. ಮೆಲ್ಲಗೆ ಓಡಿಸುವಾಗ ನಾಲ್ಕನೇ ಗೇರ್ ಎಂದೂ ಉದ್ಗಾರ ಎತ್ತುತ್ತಾ ಆ ಡ್ರೈವರ್ಗೆ ಉಚಿತ ಮನರಂಜನೆ ಒದಗಿಸುತ್ತಾ ಕುಳಿತಿದ್ದೆವು. ನನಗೂ ಅದನ್ನೇ ಹೇಳುವ ಆಸೆಯಾಗಿತ್ತಾದರೂ ಹುಡುಗಿಯರು ಅದನ್ನೆಲ್ಲ ಮಾಡಬಾರದೇನೋ ಎಂಬ ಸಂಶಯ ಬಂದು ತೆಪ್ಪಗೆ ಕುಳಿತೆ. ನನ್ನ ತಮ್ಮನ ಸರದಿ ಬಂದಾಗ ಅವನು ನಿಶ್ಚಿಂತೆಯಿಂದ ನಾನು ಓಂಕಾರಪ್ಪನ ಅಂಗಡಿ ಇಡುತ್ತೇನೆ ಎಂದು ಘೋಷಿಸಿದ. ಮೊದಮೊದಲು ರಂಗಪ್ಪನ ಅಂಗಡಿಯ ಬಗ್ಗೆ ಒಲವು ಇಟ್ಟುಕೊಂಡಿದ್ದವನು ಇತ್ತೀಚಿಗೆ ಪ್ಯಾರಿಸ್ ಚಾಕಲೇಟ್ ಮಾರುತ್ತಿದ್ದ ಓಂಕಾರಪ್ಪನ ಅಂಗಡಿಗೆ ಮಾರು ಹೋಗಿದ್ದ.
ಒಬ್ಬೊಬ್ಬರೇ ಹೇಳುವುದನ್ನು ಬಾಯಿಬಿಟ್ಟುಕೊಂಡು ಕೇಳುತ್ತಾ ಕೂತಿದ್ದ ನನಗೆ ನನ್ನ ಸರದಿ ಬಂದಾಗ ಏನು ಹೇಳುವುದೆಂದು ಅರ್ಥವಾಗದೆ ಯಾವುದು ಒಳ್ಳೆಯದು ಎಂದು ಯೋಚಿಸಲಾರಂಭಿಸಿದೆ. " ಅದೆಲ್ಲ ಗೊತ್ತಿಲ್ಲ, ಬೇಗಬೇಗ ಹೇಳ್ಬೇಕು .. ಯೋಚ್ನೆ ಮಾಡಾಂಗಿಲ್ಲ ", "ಒಳ್ಳೇದು ಹುಡುಕ್ತಿದ್ದಾಳೆ ಹೇಳಕ್ಕೆ" ಎಂದೆಲ್ಲ ಅವರೆಲ್ಲರೂ ರೇಗಲಾರಂಭಿಸಿದ ಮೇಲೆ ನಿರುಪಾಯಳಾಗಿ " ನಾನು ಟಿ ಸಿ ಹೆಚ್ ಮಾಡಿ ಟೀಚರ್ ಆಗ್ತೀನಿ " ಎಂದು ಅಳುಮೋರೆಯಿಂದಲೇ ಉತ್ತರಿಸಿದೆ. ಆಶ್ರಮದಲ್ಲಿ ಇದ್ದ ಟಿ ಸಿ ಹೆಚ್ ಕಾಲೇಜಿನ ಬಿಳಿ ಸೀರೆ ಉಡುವ ಹುಡುಗಿಯರನ್ನು ಪ್ರತಿದಿನ ನೋಡುತ್ತಿದ್ದರಿಂದ ಅವರಿಗೆ ನನ್ನ ಉತ್ತರ ಅಂತಹ ಮಹತ್ವದ್ದೇನಲ್ಲ ಎನ್ನಿಸಿ ಸಮಾಧಾನವಾಯಿತು. ಕತ್ತಲಾಗುತ್ತ ಬಂದಿದ್ದರಿಂದ ಆ ಸಭೆ ಅಲ್ಲಿಗೆ ಮುಕ್ತಾಯವಾಯಿತು. ಅಂದಿನಿಂದ ಆಶ್ರಮದ ಮಕ್ಕಳೆಲ್ಲರೂ ಆಟವಾಡಿದ ನಂತರ ದೊಡ್ಡವರಾದ ಮೇಲಿನ ಮಾತುಗಳು ಆಗಾಗ್ಗೆ ಬರಲಾರಂಭಿಸಿದವು.
ಆಶ್ರಮ ಊರಿಗೆ ಹೊಂದಿಕೊಂಡೇ ಇತ್ತಾದರೂ ನಾವು ಆಶ್ರಮದಿಂದ ಹೊರಗೆ ಕಾಲಿಟ್ಟವರೇ ಅಲ್ಲ . ಆ ಊರಿನ ಜಗತ್ತು ನಮಗೆಲ್ಲ ಪರಿಚಯವಾಗುತ್ತಿದ್ದುದು ಆಶ್ರಮದೊಳಗೆ ಪ್ರೈಮರಿ ಶಾಲೆ ಇಲ್ಲದ್ದರಿಂದ ಅನಿವಾರ್ಯವಾಗಿ ಊರೊಳಗೆ ಇದ್ದ ಶಾಲೆಗೆ ಹೋಗುವ ಸಮಯದಲ್ಲಿ ಮಾತ್ರ. ಊರಿನ ಮಕ್ಕಳೂ ಆಶ್ರಮಕ್ಕೆ ಬರುತ್ತಿರಲಿಲ್ಲ. ನಾವು ಶಾಲೆಯಿಂದ ಮನೆಗೆ ಬರುವಾಗಲೇ ಒಂದು ಕಾಲೆತ್ತಿ ಹೊರಗಿಟ್ಟುಕೊಂಡೇ ಬರುತ್ತಿದ್ದೆವು. ಮನೆಗೆ ಬಂದವರೇ ಬ್ಯಾಗು ಬಿಸಾಕಿ ಮಕ್ಕಳ ರಾಜ್ಯಕ್ಕೆ ಓಡುತ್ತಿದ್ದೆವು.. ಅಲ್ಲಿದ್ದ ಜಾರು ಬಂಡೆ, ಜೋಕಾಲಿಗಳು, ಏತಮಣೆ, ಒಂದೆಡೆ ಹಾಕಿದ್ದ ಮರಳು ರಾಶಿ ಎಲ್ಲವೂ ನಮ್ಮ ಆಕರ್ಷಣೆಯ ಕೇಂದ್ರಗಳು. ಆಟ ಆಡುವಷ್ಟೂ ಅಡಿ ಕತ್ತಲು ಮೆಲ್ಲಗೆ ಆವರಿಸುತ್ತಿದ್ದಂತೆ ನಮ್ಮ ನಮ್ಮ ಮನೆಯಿಂದ ಬುಲಾವ್ ಬರುತ್ತಿತ್ತು. ಒಲ್ಲದ ಮನಸ್ಸಿನಿಂದ ಮನೆಗೆ ಹೋಗಿ ಕೈಕಾಲು ತೊಳೆದು ಓದಲು ಕೂಡುವಾಗ ಯಮಯಾತನೆ. ಸಂಕಟ .ರಾತ್ರಿ ಒಂಬತ್ತರವರೆಗೂ ಆಟವಾಡಲು ನಾವು ಸಿದ್ಧರಿದ್ದರೂ ದೊಡ್ಡವರಿಗೆ ನಮ್ಮ ಆಸೆಯ ಬಗ್ಗೆ ಕಿಂಚಿತ್ತೂ ಯೋಚಿಸುವ ಔದಾರ್ಯವೂ ಇರಲಿಲ್ಲ.. ಓದು ಓದು ಎಂದು ನಮ್ಮನ್ನು ರುಬ್ಬುವುದರಲ್ಲೇ ಅವರು ಅವ್ಯಕ್ತ ಆನಂದ ಅನುಭವಿಸುತ್ತಿದ್ದರು.
ಸ್ವಲ್ಪ ದಿನ ಕಳೆದಂತೆ ರಾಘು ಉದಯ ಬಸ್ ಡ್ರೈವರ್ ಆಗುವ ಆಸೆಗಿಂತ ಎಸ್ ಬಿ ಬಸ್ ಡ್ರೈವರ್ ಆಗೋದೇ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದಿದ್ದ .. ನನ್ನ ತಮ್ಮ ದಪ್ಪ ದಪ್ಪ ಪುಸ್ತಕ ಯಾರು ಓದ್ತಾರೆ .. ಸಿ ಪಿ ಎಡ್ ಮಾಡಿದ್ರೆ ದಿನಾ ಆಟ ಆಡ್ತಿರಬಹುದು ಎಂದು ಕನಸು ಕಾಣುತ್ತಿದ್ದ.. ಯಾವ ಕನಸೂ ಕಾಣಲಾರದಷ್ಟು ಚಿಕ್ಕವನಾಗಿದ್ದ ವಚ್ಚಿಯನ್ನು ನಾವೇ ಎರಡು ಕೆಲಸ ಊಹಿಸಿಕೊಂಡು ಎರಡು ಬೆರಳಲ್ಲಿ ಒಂದು ಬೆರಳು ಮುಟ್ಟು ಎಂದು ಮುಟ್ಟಿಸಿ ಅವನ ಭವಿಷ್ಯದ ಕೆಲಸ ಅವನಿಗೆ ಒಪ್ಪಿಸಿ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದೆವು. ಅಷ್ಟರಲ್ಲೇ ಆ ಊರಿನಲ್ಲಿ ಜಿತೇಂದ್ರಿಯ ಬೇಕರಿ ಎಂಬ ಹೊಸ ಆಕರ್ಷಣೆ ಶುರುವಾಗಿತ್ತು .. ಎಲ್ಲರೂ ಶಾಲೆಗೆ ಹೋಗುವ ದಾರಿಯಲ್ಲೇ ಅದು ಇತ್ತಾದ್ದರಿಂದ ಅದರ ಮುಂದೆ ಐದು ನಿಮಿಷ ನಿಂತು ಅಲ್ಲಿ ಗಾಜಿನ ಕಪಾಟಿನಲ್ಲಿಟ್ಟಿದ್ದ ಬ್ರೆಡ್ಡು , ಬನ್ನು, ಕೇಕುಗಳನ್ನೆಲ್ಲ ಅವುಗಳ ಹೆಸರು ಹಿಡಿದು ಗುರುತಿಸಿ ಸಂಭ್ರಮ ಪಡುತ್ತಾ ಹೋಗುತ್ತಿದ್ದೆವು. ನನ್ನ ತಮ್ಮನ ಗುರಿ ಮತ್ತೆ ಬದಲಾಗಿತ್ತು. ನಾನು ದೊಡ್ಡೋನಾದಮೇಲೆ ಜಿತೇಂದ್ರಿಯ ಬೇಕರಿಯನ್ನೇ ಇಡೋದು ಅಂತ ಬೇಕರಿ ಬಂದ ಸಂಜೆಯೇ ಘೋಷಿಸಿ ಮತ್ಯಾರೂ ಆ ಕೆಲಸದ ಕಡೆ ಆಸೆ ಪಡಬಾರದೆಂದು ಹೇಳಿಬಿಟ್ಟ. ಅನಿರೀಕ್ಷಿತವಾಗಿ ಅವನಿಗೆ ಹೊಡೆದ ಬಂಪರ್ ಲಾಟರಿಯ ಬಗ್ಗೆ ಹೊಟ್ಟೆಯುರಿದು ಹೋಯಿತು ಎಲ್ಲರಿಗೂ.
ಅವತ್ತೊಂದು ದಿನ ಶಾಲೆಯಲ್ಲಿ ಸರೋಜಮ್ಮ ಟೀಚರ್ ಬಂದಿರಲಿಲ್ಲದ ಪ್ರಯುಕ್ತ ಎಲ್ಲರೂ ಸಾಧ್ಯವಾದಷ್ಟೂ ಗಲಾಟೆ ಮಾಡುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದ ಹಾಗೆ ನನಗೆ ಇವರೆಲ್ಲ ಮುಂದೆ ಏನಾಗುತ್ತಾರೆ ಎಂದು ಕೇಳುವ ಹುಕಿ ಬಂತು. ಪಕ್ಕದಲ್ಲಿದ್ದ ಒಂದಿಷ್ಟು ಗೆಳತಿಯರ ಬಳಿ ಈ ಪ್ರಶ್ನೆ ಕೇಳಿಯೇ ಬಿಟ್ಟೆ. ಮೊದಲದಿನ ನಾನು ಕಕ್ಕಾಬಿಕ್ಕಿಯಾದಂತೆ ಇವರೂ ಯೋಚಿಸಲಾರಂಭಿಸಿದರು . ನನ್ನ ಮೇಲೆ ಆಶ್ರಮದ ಮಕ್ಕಳು ಮಾಡಿದ ದಬ್ಬಾಳಿಕೆಗಳನ್ನೆಲ್ಲ ಯಥಾನುಶಕ್ತಿ ನಾನು ಮಾಡಲಾರಂಭಿಸಿದೆ. ಬೇಗ ಹೇಳ್ಬೇಕು .. ಯೋಚ್ನೆ ಮಾಡಿ ಒಳ್ಳೆ ಕೆಲಸ ಹುಡುಕೊಂಗಿಲ್ಲ .. ಎಂದೆಲ್ಲಾ ಪೀಡಿಸಿದೆ. ನನ್ನ ಪೀಡನೆಯ ಬಗ್ಗೆ ಎಳ್ಳಷ್ಟೂ ಗಮನ ಕೊಡದೆ ಅವರವರೊಳಗೆ ಮಾತಾಡಿಕೊಳ್ಳತೊಡಗಿದರು. ಇನ್ನೇನಾಗದು ಅಡುಗೆ ಮಾಡಬೇಕಾಯಿತದೆ.. ನಮ್ಮಕ್ಕ ಅದ್ನೇ ಮಾಡ್ತಿರದು ಎಂದು ಸಾಕಮ್ಮ ಘೋಷಿಸಿದಳು. ನಿಮ್ಮಮ್ಮ ಅಡುಗೆ ಮಾಡಲ್ವಾ ಎಂದು ಕೇಳಿದಾಗ ನಮ್ಮಕ್ಕಗೆ ಮದ್ವೆ ಆತು.. ಅಂದುಬಿಟ್ಟಳು. ದೊಡ್ಡವರಾದ್ಮೇಲೆ ಹುಣಸೆಕಾಯಿ ಕುಯ್ಯೋಷ್ಟು ಕೈ ಉದ್ದ ಆಗಿರುತ್ತೆ .. ಬೇಗ ಕಿತ್ಕಂಡು ಭೈರನ ಕೈಗೆ ಸಿಕ್ದೆ ವಾಟ ಹ್ವಡೀಬಹದು ಎಂದೊಬ್ಬಳು ಹೇಳಿದಾಗ ಅದು ಕೆಲಸವಲ್ಲ ಎಂದು ಹೇಗೆ ಹೇಳಬೇಕೋ ಅರ್ಥವಾಗದೆ ಕಣ್ಣು ಕಣ್ಣು ಬಿಡಲಾರಂಭಿಸಿದೆ. ಇದ್ಯಾವದೂ ಕೆಲಸ ಅಲ್ಲ ಅಂತ ನಾನು ಗೋಳಾಡುವಾಗ ಒಬ್ಬಳು ನೀನೇನ್ಮಾಡ್ತೀಯಾ ಎಂದು ಒಬ್ಬಳು ಪ್ರಶ್ನೆ ಹಾಕಿ ನನ್ನನ್ನು ಬದುಕಿಸಿಬಿಟ್ಟಳು. ಆಶ್ರಮದಲ್ಲಿ ನನಗೆ ಬಿಳೀಸೀರೆ ಪಟ್ಟ ಕಟ್ಟಿದ್ದರಿಂದ ಟಿ.ಸಿ.ಹೆಚ್ ಹೇಳಲು ನನಗಿಷ್ಟವಾಗಲಿಲ್ಲ .. ಹೊಸದಾಗಿ ಬಂದ ಡಾಕ್ಟರ್ ನೆನಪಾಗಿ ನಾನು ದೊಡ್ಡೋಳಾದ್ಮೇಲೆ ಡಾಕ್ಟರ್ ಆಗ್ತೀನಿ ಎಂದು ಹೇಳಿ ಕೆಲಸ ಎಂದರೆ ಏನು ಅಂತ ಅವರಿಗೆಲ್ಲಾ ಅರ್ಥ ಮಾಡಿಸಿದೆನೆಂದು ಬೀಗುತ್ತಾ ಕುಳಿತೆ.
ಕಡೆಯ ಪಿರಿಯಡ್ ಎಲ್ಲರನ್ನೂ ಆಟಕ್ಕೆ ಬಿಟ್ಟಿದ್ದರಿಂದ ಹೊರಗಡೆ ಆಟದ ಮೈದಾನದಲ್ಲಿ ಕುಳಿತು ಚರ್ಚಿಸಲಾರಂಭಿಸಿದೆವು. ಜೊತೆಗೆ ಬೇರೆ ತರಗತಿಯವರೂ ಸೇರಿದರು. ಸೀನಿಯರ್ ಹುಡುಗಿಯರಲ್ಲೊಬ್ಬಳು ಅಲ್ಲೇ ನಿಂತು ನಮ್ಮ ಮಾತು ಕೇಳುತ್ತಿದ್ದವಳು "ನಾನೂ ಡಾಕ್ಟ್ರಾಯ್ತೀನಿ. ನಮ್ಮಪ್ಪ ಹೇಳೈತೆ ಓದುಸ್ತಾರಂತೆ ನನ್ನ. ನಿಮ್ಮಪ್ಪ ಓದುಸ್ತುತಾ ? " ಇದ್ಯಾವ್ದೋ ಹೊಸಾ ಕ್ಯಾರೆಕ್ಟರ್ ಎಂಟ್ರಿ ಆಗಿದ್ದು ನನ್ನ ತಲೆ ಕೆಡಿಸಿತು.ಅಪ್ಪ ಅಂದ್ರೆ ಅಂತ ಮರು ಪ್ರಶ್ನೆ ಹಾಕಿದೆ. ಅಪ್ಪ ಅಂದ್ರೆ ಅಪ್ಪ .. ನಮ್ಮನೆಗೆ ನಮ್ಮವ್ವ ಅಪ್ಪ ಇದಾರೆ .. ನಿಮ್ಮನೆಗೆ ಇಲ್ವಾ ಅಂತ ಮತ್ತೆ ಪ್ರಶ್ನೆ ಬಂತು. ನಮ್ಮನೇಲಿ ನಮ್ಮಮ್ಮ ಅಣ್ಣ ಅಕ್ಕ ತಮ್ಮ ಇದಾರೆ ಎಂದು ಉತ್ತರಿಸಿದ ಕೂಡಲೇ ಒಬ್ಬಳು ಹಂಗಾರೆ ನಿಂಗೆ ಅಪ್ಪ ಇಲ್ವಾ ಎಂದು ಥಟ್ಟನೆ ಕೇಳಿದಳು. ಇಷ್ಟರಲ್ಲೇ ಆ ಸೀನಿಯರ್ ಹುಡುಗಿಯರ ಆತಂಕದ ಪ್ರಶ್ನೆಯಿಂದ ಏನೋ ಅನಾಹುತ ಆಗಿದೆ ಅನ್ನಿಸತೊಡಗಿತ್ತು .. ನಂಗೆ ಅಪ್ಪ ಇಲ್ಲ ಎಂದು ಅಳುಮುಖದಲ್ಲೇ ಉತ್ತರಿಸಿದೆ. ಇವಳಿಗೆ ಅಪ್ಪ ಇಲ್ವಂತೆ ಎಂಬ ಮಾತು ಆ ಹುಡುಗಿಯರ ಅನುಕಂಪದ ನೋಟಗಳು ನಂಗೇನೋ ಇರಬೇಕಾಗಿದ್ದು ಇಲ್ಲ ಅನ್ನುವಷ್ಟು ಮಾತ್ರ ಅರ್ಥವಾಗಿ ಜೋರಾಗಿ ಅಳಲಾರಂಭಿಸಿದೆ. ತಕ್ಷಣ ನನ್ನ ಸುತ್ತ ಇದ್ದವರಲ್ಲೊಬ್ಬಳು ಅವಳ ಕೈಚೀಲದಿಂದ ಹುರಿದ ಹುಣಸೆಬೀಜ ತೆಗೆದು ಕೊಟ್ಟಳು .. ಅದನ್ನು ನೋಡಿ ಮತ್ತೊಬ್ಬಳು ಅಮಟೆಕಾಯಿ ಉಪ್ಪಿನಕಾಯಿಯ ತೊಳೆದು ತಂದಿದ್ದ ಹೋಳೊಂದನ್ನು ನನ್ನ ಕೈಗಿತ್ತಳು.. ಅದನ್ನು ನೋಡಿ ನನಗೆ ಅಪ್ಪನಿಲ್ಲವೆಂಬ ವಿಷಯವೇ ಮರೆತು ಹೋಗಿ ಕಣ್ಣೊರೆಸಿಕೊಂಡು ಉಪ್ಪಿನಕಾಯಿಯ ಹೋಳು ತಿಂದು ಹುಣಸೆಬೀಜ ಬಾಯಾಡಿಸುತ್ತಾ ನೋಡಿದರೆ ಅಮ್ಮ ಬೈಯ್ಯುತ್ತಾರೆಂದು ದಾರಿಯಲ್ಲೇ ಅಲ್ಲಲ್ಲಿ ನಿಂತು ಅದನ್ನು ಪೂರ್ತಿ ತಿಂದು ನಿಧಾನವಾಗಿ ಮನೆಗೆ ಬಂದೆ.
ಅಷ್ಟರಲ್ಲಿ ದೊಡ್ಡ ಅನಾಹುತವೇ ನಡೆದುಹೋಗಿತ್ತು. ರಾಘು, ರಾಜ ಇಬ್ಬರೂ ಜೋಕಾಲಿಗಳನ್ನು ಆಕ್ರಮಿಸಿಕೊಂಡು ಬಿಟ್ಟಿದ್ದರು. ಬ್ಯಾಗು ಬಿಸಾಕಿ ಅವರಿಬ್ಬರ ಹತ್ತಿರ ಓಡಿದೆ.. ಜೋಕಾಲಿ ಬಿಟ್ಟಿಳಿಯಲು ಬೇಡಿಕೊಂಡರೂ ಅವರಿಬ್ಬರೂ ಕರಗಲಿಲ್ಲ ..ನನ್ನಂತಹ ಅಪ್ಪನಿಲ್ಲದ ಹುಡುಗಿಯನ್ನು ಇವರಿಬ್ಬರೂ ಹೇಗೆ ಗೋಳಾಡಿಸುತ್ತಿದ್ದಾರೆ ಎಂದು ಸಂಕಟ ಶುರುವಾಯಿತು. ಅದನ್ನೇ ಹೇಳಹೊರಟವಳಿಗೆ ಥಟ್ಟನೆ ನೆನಪಾಗಿದ್ದು ರಾಘುವಿನ ಮನೆಯಲ್ಲೂ ಅಪ್ಪ ಇಲ್ಲವೆಂಬುದು.. ಅವನೊಬ್ಬನೇ ಅಲ್ಲ ಆಶ್ರಮದಲ್ಲಿ ಯಾರ ಮನೆಯಲ್ಲೂ ಅಪ್ಪನಿರಲಿಲ್ಲ.. ಎಲ್ಲರಿಗೂ ಅಣ್ಣನೇ ಇರುವುದೆಂಬುದು ಅರಿವಿಗೆ ಬಂದು ಆಶ್ರಮದ ಎಲ್ಲ ಮಕ್ಕಳೂ ಪಾಪ ಎನ್ನಿಸತೊಡಗಿತು .. ಈ ಆಶ್ರಮದಲ್ಲಿ ನನಗೆ ಯಾರೂ ಈ ಬಗ್ಗೆ ಅನುಕಂಪ ತೋರಿಸುವುದಿಲ್ಲವೆಂದು ಖಚಿತವಾಗಿ ತೆಪ್ಪಗೆ ಜಾರುವ ಬಂಡೆಯತ್ತ ಪಯಣ ಬೆಳೆಸಿದೆ. ಶಾಲೆಯಲ್ಲಿ ಮಾತ್ರ ನನ್ನ ದರ್ಬಾರು ಮುಂದುವರೆದಿತ್ತು.
ಆಶ್ರಮದಲ್ಲಿ ಏನೇ ಇದ್ದರೂ ಶಾಲೆಯಲ್ಲಿ ಮಾತ್ರ ನನ್ನ ಬಗ್ಗೆ ಅನುಕಂಪದ ಅಲೆಯೊಂದು ಹಾಗೆ ಇತ್ತು. ಒಂದು ದಿನ ಒಬ್ಬಳ ಕೈಯಲ್ಲಿ ಬನ್ ನೋಡಿ ಅವಳ ಬಳಿ ಹೋಗಿ ಒಂದು ಚೂರು ಕೊಡುವಂತೆ ಕೇಳಿದೆ . ಅವಳು ಸಾಧ್ಯವೇ ಇಲ್ಲ ಎಂದು ನಿರಾಕರಿಸಿ ನನಗೆ ಬೆನ್ನು ಮಾಡಿ ನಿಂತು ತಿನ್ನತೊಡಗಿದಳು. " ನಂಗೆ ಅಪ್ಪ ಇಲ್ಲ ಗೊತ್ತಾ' ಎಂದು ನನ್ನ ಮಾಮೂಲಿ ಅಸ್ತ್ರ ಪ್ರಯೋಗಿಸಿದೆ. "ನಂಗೆ ಅವ್ವನೂ ಇಲ್ಲ . ಹೋಗೆ ಅತ್ಲಗೆ " ಎಂದು ಹೆಚ್ಚುಕಡಿಮೆ ಕಿರುಚಿದಾಗ ಇನ್ನು ಇವಳು ಕೊಡುವುದಿಲ್ಲ ಎಂದು ಖಚಿತವಾಗಿ ತಣ್ಣಗೆ ಬಂದು ನನ್ನ ಜಾಗದಲ್ಲಿ ಕುಳಿತುಕೊಂಡೆ. ಇಂತಹಾ ಒಂದೆರಡು ಘಟನೆಗಳನ್ನು ಹೊರತು ಪಡಿಸಿದರೆ ಮಿಕ್ಕೆಲ್ಲ ಸಮಯದಲ್ಲೂ ನಾನು ಕೇಳಿದ್ದಕ್ಕೆ ತೀರಾ ಮೋಸವಾಗುತ್ತಿರಲಿಲ್ಲ. ಆಗಾಗ ಸಿಗುತ್ತಿದ್ದ ಹುರಿದ ಹುಣಸೆ ಬೀಜ, ದೋರು ಹುಣಸೆಕಾಯಿ, ಉಪ್ಪಿನಕಾಯಿ ಹೋಳುಗಳು, ಮತ್ತೂ ಅದೃಷ್ಟ ಚೆನ್ನಾಗಿದ್ದರೆ ಪೆಪ್ಪೆರ್ಮಿಂಟ್ .. ಈ ಎಲ್ಲ ಸೌಭಾಗ್ಯಕ್ಕೂ ಒಂದು ಕೊನೆಯ ದಿನ ಬಂದೆ ಬಿಟ್ಟಿತು.
ಅವತ್ತೊಂದು ದಿನ ಶಾಲೆಯಲ್ಲಿ ಅದೇನೋ ಇನ್ಸ್ಪೆಕ್ಷನ್ . ಬಂದವರು ಎಲ್ಲರ ಮಾಹಿತಿ ಸಂಗ್ರಹಿಸುತ್ತಿದ್ದರು. ನನ್ನ ಸರದಿ ಬಂದಾಗ ಯಥಾಪ್ರಕಾರ ನಾನು ಅಪ್ಪನಿಲ್ಲ ಎಂದೆ. ಅದೇ ಸಮಯಕ್ಕೆ ಸರಿಯಾಗಿ ನಮ್ಮ ಹೆಡ್ ಮಾಸ್ಟರ್ ಅಲ್ಲಿಗೆ ಬಂದವರು ನನ್ನ ಮಾತಿಗೆ ಕೊಂಚ ಗಾಬರಿಯಾಗಿ ಪಕ್ಕದ ತರಗತಿಯಲ್ಲಿದ್ದ ನಾಗರತ್ನಮ್ಮ ಮೇಡಂನ ಕರೆದರು. " ನೋಡಿ.. ಈ ತಾಯಿ ಅಪ್ಪ ಇಲ್ಲ ಅಂತಿದಾಳೆ . ಇವರಪ್ಪ ಇಲ್ಲವ್ರಾ ? " ನಾಗರತ್ನಮ್ಮ ಮೇಡಂಗೆ ಈ ಪ್ರಶ್ನೆ ವಿಪರೀತ ಕಿರಿಕಿರಿಯಾಗಿ " ಇಲ್ದೆ ಏನು ? ಗುಂಡುಕಲ್ಲಂಗೆ ಇದಾನೆ ಇವಳಪ್ಪ " ಎಂದವರೇ ನನ್ನ ಕಡೆ ತಿರುಗಿ " ಯಾಕೇ ಸುಳ್ಳು ಹೇಳದು , ನಿಮ್ಮಪ್ಪನ ಹತ್ರ ಮೂರು ಹೊತ್ತೂ ಕಥೆ ಕಥೆ ಅಂತ ಗೋಳು ಹೊಯಿಕೋತಿರ್ತೀಯ.. ತಡಿ ನಿಮ್ಮಪ್ಪಂಗೆ ಹೇಳ್ತೀನಿ " ಎಂದು ಜೋರು ಮಾಡಿದರು.
ಅಕ್ಕಪಕ್ಕದ ಹುಡುಗಿಯರೆಲ್ಲ ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದುದು ಅವ್ರು ಇಷ್ಟು ದಿನ ಕೊಟ್ಟಿದ್ದನ್ನೆಲ್ಲ ಎಲ್ಲಿ ವಾಪಸ್ ಕೇಳುತ್ತಾರೋ ಎಂಬ ಹೆದರಿಕೆ ನನ್ನಲ್ಲಿ ಹುಟ್ಟಿಹಾಕಿತ್ತು. ಜೊತೆಗೆ ನಾನು ಸುಳ್ಳು ಹೇಳುತ್ತಿಲ್ಲ ಎಂದು ಇವರಿಗೆಲ್ಲ ಹೇಗೆ ಹೇಳುವುದು .. ಅಣ್ಣ ಯಾವಾಗಲೂ ಸುಳ್ಳು ಹೇಳಬಾರದು ಎನ್ನುತ್ತಿದ್ದುದರಿಂದ ಇವರು ಹೋಗಿ ಅವರ ಬಳಿ ನಾನು ಸುಳ್ಳು ಹೇಳಿದೆ ಎಂದು ನಂಬಿಸಿಬಿಟ್ಟರೆ ? " ಇಲ್ಲ ನಂಗಪ್ಪ ಇಲ್ಲ.. ನಂಗೆ ದಿನಾ ಕಥೆ ಹೇಳದು ನಮ್ಮಣ್ಣ " ಎಂದು ಜೋರಾಗಿ ಅಳಲಾರಂಭಿಸಿದೆ.
ನಾಗರತ್ನಮ್ಮನವರು ಜೋರಾಗಿ ನಕ್ಕುಬಿಟ್ಟರು.. . ಅವರು ಹೆಡ್ ಮಾಸ್ಟರ್ ಕಡೆ ತಿರುಗಿ " ಅಯ್ಯ.. ಈ ಕಡೆ ಬ್ರಾಹ್ಮಣರೆಲ್ಲ ಅಪ್ಪನಿಗೆ ಅಣ್ಣ ಅಣ್ಣ ಅಂತ ಕರೀತಾರೆ ಮೇಷ್ಟ್ರೇ .. ಅದಕ್ಕೆ ಇದು ತನಗೆ ಅಪ್ಪ ಇಲ್ಲ ಅಂತಿದೆ. ಈ ದಡ್ಡ ಶಿಖಾಮಣಿಗೆ ಆ ಅಣ್ಣನೇ ಇವರಪ್ಪ ಅಂತ ಗೊತ್ತಿಲ್ಲ .. ಬರ್ಕಳಿ.. ಇವಳಿಗೆ ಅಪ್ಪ ಇದಾರೆ " ಅನ್ನುತ್ತಲೇ ನನ್ನ ತಲೆಯ ಮೇಲೊಂದು ಮೊಟಕಿದರು. ನಂಗೆ ಅಪ್ಪ ಇದ್ದಾರೆ ಎಂದು ಖುಷಿ ಪಡುವ ಹೊತ್ತಲ್ಲೇ ಮಿಕ್ಕ ಸೌಲಭ್ಯಗಳು ಜಾರಿ ಹೋಗುತ್ತಿವೆಯಲ್ಲಾ ಎಂಬ ಸಂಕಟದಲ್ಲೇ ತೆಪ್ಪಗೆ ಕುಳಿತೆ. ಸಂಜೆ ನನ್ನೊಡನೆ ಮನೆಗೆ ಬಂದ ನಾಗರತ್ನಮ್ಮನವರು " ನೋಡೇ ರಮಾ, ಅಪ್ಪನಿಗೆ ಅಣ್ಣ ಅಂತ ಕರೆದು ತನಗೆ ಅಪ್ಪನೇ ಇಲ್ಲ ಅಂತ ಊರ ತುಂಬಾ ಹೇಳ್ಕೊಂಡು ತಿರುಗ್ತಿದೆ ಇದು. ಇದಕ್ಕೆ ಅಪ್ಪನೇ ಅಣ್ಣ ಅಂತ ಹೇಳ್ಕೊಡು " ಎಂದಾಗ ಹೊಡೆತ ನಿರೀಕ್ಷಿಸುತ್ತಾ ಅಳುಮೋರೆ ಹೊತ್ತು ನಿಂತಿದ್ದ ನನಗೆ ಅಣ್ಣ ಬಂದು ತಬ್ಬಿ ಮುತ್ತಿಟ್ಟಾಗ ನಿರಾಳ .. ಅಣ್ಣ ತಪ್ಪು ತಿಳಿದುಕೊಳ್ಳಲಿಲ್ಲವೆಂಬ ನೆಮ್ಮದಿಯೊಂದಿಗೆ ಮತ್ತೆ ಆಟವಾಡಲು ಹೊರಗೆ ಹಾರಿದೆ ದೊಡ್ಡವಳಾದ ಮೇಲೆ ಏನಾಗುತ್ತೇನೆಂದು ಮಾತನಾಡಲು.
No comments:
Post a Comment