ಅನ್ಯರೊರೆದುದನೆ ಒರೆಯಬೇಕಾಗಿದೆ.. ಅಡಿಗರ ಬಗ್ಗೆ ಹೇಳಲು ಉಳಿದದ್ದೇನಿದೆ? ಎಲ್ಲ ಬರೆದಿಟ್ಟ ಅಡಿಗರ ಕುರಿತ ಮಾತುಗಳನ್ನೇ ಮತ್ತೆ ಬರೆಯಬೇಕೇನೋ ಎಂಬ ಅನುಮಾನದಲ್ಲಿ ಕೂಡಾ... ಅಡಿಗರೂ ಕನ್ನಡ ಕಾವ್ಯ ಜಗತ್ತನ್ನು ಪ್ರವೇಶಿಸುವಾಗ ಇದ್ದ ಪರಿಸ್ಥಿತಿ ಹಾಗೆ ಇತ್ತಲ್ಲವಾ? ಬರೆಯಲೇನೂ ಉಳಿದಿರದ ನವೋದಯ !! ಅಡಿಗರ ಕನ್ನಡ ಕಾವ್ಯ ಜಗತ್ತನ್ನು ಪ್ರವೇಶಿಸುವಾಗಿದ್ದ ಪರಿಸ್ಥಿತಿ ಅವಲೋಕಿಸಿದರೆ ಹಿಂದಿನ ಕನ್ನಡ ಕಾವ್ಯ ತನ್ನ ಸಹಜ ಸಾವನ್ನು ಅಪ್ಪುವತ್ತ ಸಾಗಿತ್ತೇನೋ ನಿಜವೇ. ( ಸಾಹಿತ್ಯ ಪರಂಪರೆಗಳ ಸಾವು ಅಸಹಜವೂ ಒಮ್ಮೆಮ್ಮೆ ಆಗಬಹುದಾದರೂ ನವೋದಯದ ಸಾವು ಸಹಜವಾಗಿಯೇ ಸಂಭವಿಸುವ ಹಾದಿಯಲ್ಲಿತ್ತು. ಅಡಿಗರು ಆ ಸಾವನ್ನು ಸ್ವಲ್ಪ ಕಾಲ ಮುಂದೂಡಿದರು ಕೂಡಾ. ಅಡಿಗರಲ್ಲಿರುವ ಬಹಳ ದೊಡ್ಡ ಗುಣ ಅವರ ಪ್ರಾಮಾಣಿಕತೆ.. ಅದು ತನ್ನ ಬಗ್ಗೆ ತನಗಿದ್ದ ಪ್ರಾಮಾಣಿಕತೆ.. ಅವರ ಕಾವ್ಯವನ್ನು ಬಹಳ ಮುಖ್ಯವಾಗಿ ಪೂರ್ವಾರ್ಧದ ಕಾವ್ಯ ಮತ್ತು ಉತ್ತರಾರ್ಧದ ಕಾವ್ಯ ಎಂದು ಸ್ಪಷ್ಟವಾಗಿ ವಿಂಗಡಿಸಿಕೊಳ್ಳಬಹುದಾದರೆ ಪೂರ್ವಾರ್ಧದ ಕಾವ್ಯವನ್ನು ಆರೋಹಣವೆಂದೂ ಉತ್ತರಾರ್ಧವನ್ನು ಅವರೋಹಣವೆಂದೂ ಕರೆಯಬಹುದು.. ಅವರೋಹಣವೆಂದರೆ ಇಳಿಕೆಯಲ್ಲ ..ಮಾಗುವಿಕೆ.. ಮಾಗುವಿಕೆಯ ಸಾಗುವಿಕೆ. ಪುತಿನ , ಬೇಂದ್ರೆಯಂತಹ ಒಂದಿಬ್ಬರು ಕವಿಗಳನ್ನು ಹೊರತುಪಡಿಸಿ ಅಡಿಗರು ಮಿಕ್ಕೆಲ್ಲರ ಕಾವ್ಯವನ್ನು ಸಾವಿನತ್ತ ಮೊಗ ಮಾಡಿರುವ ಕಾವ್ಯ ಎಂದೇ ಪರಿಗಣಿಸಿದ್ದರು. ಆರೋಹಣದಲ್ಲಿ ಶ್ರಮವಿರುತ್ತದೆ .. ಸಂಕಟವಿರುತ್ತದೆ .. ದಾರಿಯ ಹುಡುಕಾಟವಿರುತ್ತದೆ. ದೇಹ ಮನಸ್ಸು ಬಳಲಿ ಬೆಂಡಾಗುತ್ತದೆ .. ದಣಿಯುತ್ತದೆ... ದಣಿದ ಅಸಹಾಯಕತೆಗೆ ಸಿಟ್ಟು ಉಕ್ಕುತ್ತದೆ.. ಈ ಆರೋಹಣದ ಶೃಂಗ ಅಡಿಗರ ಕಾವ್ಯದಲ್ಲಿ ಭೂಮಿಗೀತ ಮತ್ತು ಹಿಮಗಿರಿಯ ಕಂದರ .. ನಂತರ ಆರೋಹಣ ಇರಲಿಲ್ಲವಾ ? ಅವರಿಗೆ ಗುರಿ ದಕ್ಕಿಬಿಟ್ಟಿತಾ ಎಂದರೆ ದಕ್ಕಿದ್ದು ಗುರಿಯಲ್ಲ.. ಸಾಗುವ ಸಾಗಬೇಕಾಗಿರುವ ತಲ್ಲಣದ ಹಾದಿ. ಅವರ ಹಿಮಗಿರಿಯ ಕಂದರದಲ್ಲಿ ಆ ಎತ್ತರವೇರ ಹೊರಟ ಅಡಿಗರ ಮುಂದಿದ್ದ ಸಮಸ್ಯೆ ಆಧುನಿಕತೆಯ ಒಳಗೆ ಇರುವ ಮೂಲಭೂತ ಸಮಸ್ಯೆಯೂ ಹೌದು. ಎತ್ತರ ಎಂಬುದು ಯಾವ ಕಾಲಕ್ಕೂ ಗೌರವಿಸಬೇಕಾದ ಮೌಲ್ಯವೇ ಆಗಿದ್ದರೂ ಆ ಎತ್ತರ ಸ್ಥಿರವಾಗಿಯೂ ಇರಬೇಕೆನ್ನುವುದು. ಇಂದು ಎತ್ತರ ಕಂಡಿದ್ದು ನಾಳೆ ಕಿರಿದಾಗಿ ಕಾಣಬಾರದು.. ಇಂದು ಕಿರಿದಾಗಿ ಕಂಡದ್ದು ನಾಳೆ ಎತ್ತರ ಅನ್ನಿಸಲಾರಂಭಿಸಿದರೆ ಅಥವಾ ನಿನ್ನೆ ಕಂಡಿದ್ದ ಎತ್ತರದ ಅಸ್ತಿತ್ವವೇ ಇಂದು ಇಲ್ಲವೆನಿಸಿಬಿಟ್ಟರೆ ಸಾಧಕನ ಹಾದಿ ತಬ್ಬಿಬ್ಬಾಗಿ ಬಿಡುತ್ತದೆ. ಎತ್ತರದ ಹಿಂದಿನ ಗೌರವ, ಎತ್ತರವನ್ನು ತಲುಪುವ ಹಂಬಲ, ಎತ್ತರದ ಮಹತ್ವ ಎಲ್ಲವೂ ಗೊತ್ತಿದ್ದೂ ಎತ್ತರವನ್ನು ಮುಟ್ಟಲು ಹೋಗುವ ಮಾರ್ಗವೂ ಅಸ್ಥಿರ.. ಎತ್ತರ ಯಾವುದು ಎನ್ನುವುದನ್ನು ಕುರಿತ ಪರಿಕಲ್ಪನೆಯೂ ಅಸ್ಥಿರ ಎನ್ನಿಸಿಬಿಟ್ಟರೆ ಸಾಧಕ ತಬ್ಬಿಬ್ಬಾಗಿ ಬಿಡುತ್ತಾನೆ. ಕೊನೆಗೆ ಉಳಿಯಬೇಕಾದ್ದು ಗಟ್ಟಿಯಾದ ಮೌಲ್ಯ.. ಇಲ್ಲಿ ಹಿಮಗಿರಿಯೆಂದರೆ ಹಿಮಾಲಯವೇ ಆಗಬೇಕಿಲ್ಲ.. ಕರಗುವ ಗುಣವುಳ್ಳ ಎತ್ತರವೂ ಆಗಬಹುದು ..ಜೊತೆಗೆ ತಾನೇರುವೆತ್ತರಕ್ಕೆ ಏರ ಹೊರಟಾಗ ತುಸು ಕಾಲು ಜಾರಿದರೂ ಕಂದರಕ್ಕೆ ಬೀಳುವ ಅಪಾಯ... ಹಾಗಾಗಿಯೇ ಅವರು ಹಿಮಗಿರಿಯ ಕಂದರದತ್ತ ಹೊರಡುವ ರೈಲನ್ನು ಹತ್ತಿಸಲಾರರು. ಗಟ್ಟಿಯಾಗಬೇಕೆಂಬುದು ಅಡಿಗರ ಯಾವತ್ತಿನ ಹಠ.. ದಾರಿ ಗಟ್ಟಿಯಿರಬೇಕು.. ಗುರಿ ಗಟ್ಟಿಯಿರಬೇಕು.. ಹೋಗುವ ಸಂಕಲ್ಪ ಗಟ್ಟಿಯಿರಬೇಕು.. ಇದರ ಕುರಿತು ಅಡಿಗರು ಪಟ್ಟ ಶ್ರಮ ಎದುರಿಸಿದ ಸವಾಲು .. ಪಟ್ಟ ಸಂಕಷ್ಟ ಯಾವ ಕವಿಯೂ ಪಡಲಿಲ್ಲ. ಹಿಮಗಿರಿಯ ಕಂದರದಲ್ಲಿ ಅವರು ಆ ಎತ್ತರವನ್ನು ಕಾಣುತ್ತಾರೆ ಜೊತೆಜೊತೆಗೆ ಅದು ಸ್ಥಿರವಲ್ಲವೆಂಬ ತಲ್ಲಣವನ್ನೂ .. ಅಲ್ಲಿ ದಕ್ಕುವ ತಂಪಿನೊಡನೆ ಕರಗುವ ಗುಣವುಳ್ಳ ಹಿಮವನ್ನು ಕರಾಗಬಹುದಾದ ಮೌಲ್ಯಗಳ ಜೊತೆಗೆ ಸಮೀಕರಿಸಿಕೊಂಡರಾ ಅಡಿಗರು? ತನ್ನ ಅನುಭವಗಳೇ ತನ್ನನ್ನು ಗಟ್ಟಿಯಾಗಿಸುವುದೆಂದು ಅರಿತಿದ್ದ ಅಡಿಗರು ಅನುಭವವನ್ನೇ ಬಗೆಯುತ್ತಾ ಆ ಎತ್ತರ ತಲುಪಹೊರಟಿದ್ದು ಈಗ ಕೇಳುವುದಕ್ಕೆ ಬಹಳ ಸಾಮಾನ್ಯವಾದ ಸಂಗತಿಯಂತೆ ಕಾಣುತ್ತದೆ.. ಆ ದಾರಿಯಲ್ಲಿ ಕ್ರಮಿಸಿದ್ದು ಸಾಮಾನ್ಯವಲ್ಲವೇ ಅಲ್ಲ.
ಇಷ್ಟಕ್ಕೂ ಅನುಭವದ ಅರ್ಥ ರೂಪುಗೊಳ್ಳುವುದಾದರೂ ಎಲ್ಲಿ? ಕಾಲಿಗೊಂದು ಮುಳ್ಳು ಚುಚ್ಚಿದರೆ ಗಾಯ.. ಯಾರಾದರೂ ಕೆನ್ನೆಗೆ ಹೊಡೆದಾಗ ಪೆಟ್ಟು ಇಂತಹವುಗಳು ಘಟನೆಗಳೇ. ಅದರಿಂದ ಉದ್ಭವವಾಗುವ ನೋವು.. ಮತ್ತು ಅವಮಾನಗಳು ಅನುಭವ ಎನ್ನುತ್ತಾ ನಮ್ಮ ಜೀವನದ ಯಾವುದೇ ಅನುಭವವಾಗುವುದು ಇನ್ನೊಬ್ಬರಿಂದಲೋ.. ಇನ್ನೊಂದು ಜಗತ್ತಿನಿಂದಲೋ ಹೊರಗಿನಿಂದೆ ಆಗಿರುತ್ತದೆ ಎಂದುಕೊಂಡುಬಿಡುತ್ತೇವೆ. ಆದರೆ ಅನುಭವ ಹಾಗೆ ರೂಪುಗೊಳ್ಳುವುದೇ ಇಲ್ಲ. ಹೇಗೆ ಕಬ್ಬು ಸಕ್ಕರೆ ಕಾರ್ಖಾನೆಗೆ ಕಚ್ಚಾವಸ್ತುವಾಗಿ ಬಂದುಬೀಳುತ್ತದೆಯೋ ಹಾಗೆಯೇ ಹೊರಗಿನ ಎಲ್ಲ ಘಟನೆಗಳೂ ಕಚ್ಚಾವಸ್ತುವಾಗಿ ನಮ್ಮೊಳಗಿನ ಸುಪ್ತ ಮನಸ್ಸಿಗೆ ಬಂದು ಬೀಳುತ್ತದೆ. ದೇಹ, ಬುದ್ಧಿ ಮನಸ್ಸು ಈ ತ್ರಿಪುಟಿಎಂಬ ನಿಜವಾದ ಕಾರ್ಖಾನೆಯೊಳಗೆ ಹೊರಗಿನಿಂದ ಬಂದು ಬೀಳುವ ಮಾತು, ಘಟನೆ, ದೃಶ್ಯ, ಸ್ಪರ್ಶ ಎಲ್ಲವೂ ಸಂಸ್ಕರಿತಗೊಂಡು ನಮ್ಮ ಅರಿವಿನೊಳಗೆ ಮೂಡುವ ಪ್ರಕ್ರಿಯೆ ನಿಜವಾದ ಅನುಭವ. ಅಂದರೆ ಅನುಭವವನ್ನು ರೂಪಿಸುವ ಅಂಶ ಒಳಗಿದೆಯೇ ಹೊರತು ಹೊರಗಿಲ್ಲ. ಇದು ಅಷ್ಟು ಸುಲಭಕ್ಕೆ ದಕ್ಕುವ ವಿಷಯವೂ ಅಲ್ಲ.. ಸಾಕಷ್ಟು ಆಧುನಿಕರೂ,, ಪಾಶ್ಚತ್ಯವನ್ನು ಓದಿಕೊಂಡಿದ್ದವರೂ .. ಸಂಸ್ಕೃತವನ್ನು ಅಭ್ಯಸಿಸಿದವರೂ ಆಗಿದ್ದೂ ಈ ಘಟನೆಗಳು ರೂಪಿಸಿದ ಅನುಭವದ ಮೂಲ ಹೊರಗಿನದೋ ಒಳಗಿನದೋ ಎಂದು ಅರಿಯಲು ಅಡಿಗರು ಪಟ್ಟಷ್ಟು ಸಂಕಟ ಮತ್ತಾವ ಕವಿಯೂ ಪಟ್ಟಿಲ್ಲ. ಅವರ ಪೂರ್ವಾರ್ಧದ ಕವಿತೆಗಳಿಗಿಂತ ಉತ್ತರಾರ್ಧದ ಕವಿತೆಗಳಲ್ಲಿ ಈ ತಲ್ಲಣ , ಹುಡುಕಾಟ ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ.
ಗಾಂಧಿ ಕೊಲೆಯ ನಂತರ ಆ ಕೊಲೆ ಈ ದೇಶದ ರಾಜಕಾರಣವನ್ನು ಎಷ್ಟು ಛಿನ್ನಛಿನ್ನವಾಗಿಸಿತು ಎನ್ನುವುದನ್ನು ಗಮನಿಸುತ್ತಲೇ ಗಾಂಧಿಯ ಕೊಲೆಯ ಅನುಭವ ತನ್ನೊಳಗೆ ಹುಟ್ಟಿಸಿದ ಅನುಭವವೋ ಅಥವಾ ಇಡೀ ದೇಶದಲ್ಲಿ ಗಾಂಧಿಯ ಕೊಲೆಗೆ ಒಂದು ಸಮೂಹ ರೂಪಿಸಿದ ಅರ್ಥವೋ .. ಯಾವ ಅನುಭವ ಮುಖ್ಯ ಯಾವುದು ಪ್ರಾಮಾಣಿಕ ಎನ್ನುವಾಗ ಅಡಿಗರು ಕೊನೆಗೆ ಹೇಳುವುದು ಗಾಂಧಿಯ ಕುರಿತು.. ಗಾಂಧಿಯ ಕೊಲೆಯ ಕುರಿತು ತನಗೇನನ್ನಿಸಿತೋ ಅದಷ್ಟೇ ಸತ್ಯ. ತನ್ನೊಳಗೆ ಗಾಂಧಿಕೊಲೆ ರೂಪಿಸಿದ ಅನುಭವ ಮಾತ್ರ ತನ್ನ ಅನುಭವ, ಅನುಭವವೆನ್ನುವುದು ಘಟನೆಯ ಮೇಲೆ ತಾನು ಹೇರಿದ ತನ್ನ ಸ್ವಂತ ಭಾವ .. ಅನುಭವವನ್ನು ರೂಪಿಸುವವರು ತಾವೇ ಆಗಿದ್ದರಿಂದ ಆ ಅನುಭವ ಕೊಡುವ ಸುಖ ದುಃಖ ಎಲ್ಲವೂ ತಮ್ಮತಮ್ಮ ಜವಾಬ್ದಾರಿಯೇ. ಹೀಗಾಗಿಯೇ ಅಡಿಗರು "ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ" ಎಂದರೆ ಅದು ಅತ್ಯಂತ ಪ್ರಾಮಾಣಿಕವೆನ್ನಿಸುತ್ತದೆ.
ಇದನ್ನು ನವೋದಯದಲ್ಲಿ ಬೇಂದ್ರೆಯವರೂ ಮಾಡಿದ್ದರೂ ಅವರಲ್ಲಿ ಆಧುನಿಕತೆಯ ತೊಳಲಾಟವಿರಲಿಲ್ಲ. ಅವರ ಆಶಯ ಪ್ರಜ್ಞೆಯಿಂದ ಅದೆಲ್ಲವನ್ನೂ ಅರಿತಂತಿದ್ದ ಬೇಂದ್ರೆಯವರ ಶ್ರದ್ಧೆ ಅವರಿಗೆ ಮರಾಠಿ ಸಂತರಿಂದ, ಜ್ಞಾನೇಶ್ವರಿ, ವೇದ ಉಪನಿಷತ್ತುಗಳಿಂದ, ದಾಸಬೋಧಗಳಿಂದ ಪರಂಪರಾನುಗತವಾಗಿಯೇ ದಕ್ಕಿತ್ತು. " ಕಡ್ಡಿ ಅಲುಗದು ಅಕಸ್ಮಾತ್ಯದಿಂದ..ಹುತ್ತ ಉರುಳೀತೇನು ಗುಂಡಿನಿಂದ " ಎಂದು ಬರೆಯುವ ಬೇಂದ್ರೆಗಿದ್ದ ಖಚಿತ ನಂಬಿಕೆ ಆ ಆಧುನಿಕತೆಯನ್ನು ಎದುರಿಸಬೇಕಾದ ಅನಿವಾರ್ಯತೆ ಇಲ್ಲದ ಕಾಲಘಟ್ಟದಿಂದಲೂ ಬಂದಿರಬಹುದು. ಇಬ್ಬರೂ ಆ ದಾರಿಯಲ್ಲಿ ಕ್ಯೂ ನಿಂತವರೇ. ರೇಡಿಯೋ ಬಂದಾಗ ನಮ್ಮ ಮೌಲ್ಯಗಳು ನಾಶವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದ ಬೇಂದ್ರೆಯವರಿಗಿಂತ ಅಡಿಗರು ಎದುರಿಸಿದ್ದ ಕಾಲ ಮತ್ತೂ ಆಧುನಿಕವಾಗಿತ್ತು. ಒಮ್ಮೆ ಸೋಲಾಪುರದಲ್ಲಿ ಬೇಂದ್ರೆಯವರು ಮಾಡಿದ ಮರಾಠಿ ಭಾಷಣದಲ್ಲಿ " ಮುಂದೊಮ್ಮೆ ತಾನು ಕವಿಯಾಗಿಯೇ ಹುಟ್ಟುತ್ತೇನಾದರೂ ಮೊದಲು ಜ್ಯೋತಿಷಿಯಾಗಿ ತಾರಾಗಣಗಳನ್ನು ತಿದ್ದಿ ಭೂಮಿಯನ್ನು ಸ್ವಚ್ಛಮಾಡಿ ನಂತರ ಕವಿಯಾಗುತ್ತೇನೆ " ಎಂಬ ಮಾತು ಗಮನಾರ್ಹ. ಶ್ರದ್ಧೆಯ ಜೊತೆಜೊತೆಗೆ ಅವರಲ್ಲಿಯೂ ತಲ್ಲಣವಿತ್ತು. ಒಂದು ಬಿಂದುವಿನಿಂದ ಮತ್ತೊಂದು ಬಿಂದುವಿನೆಡೆಗೆ ಹೊರಟಾಗ ತಾವು ನಿಂತ ಬಿಂದು, ತಲುಪಬೇಕಾದ ದಾರಿ.. ಇನ್ನೊಂದು ಬಿಂದುವಿಗೆ ತಲುಪಿದಾಗ ಆಗುವ ಅನುಭವ .. ಈ ಖಾಚಿತ್ಯ ಬೇಂದ್ರೆಯವರಿಗಿದ್ದ ಹಾಗೆ ಅಡಿಗರಿಗಿರಲಿಲ್ಲ ಎನ್ನುವವರು ಅಡಿಗರು ಎದುರಿಸಿದ ಕಾಲಘಟ್ಟವನ್ನು ಬಹಳ ಮುಖ್ಯವಾಗಿ ಪರಿಗಣಿಸಬೇಕು. ಅವರೆದುರಿಸಿದ್ದು ತಮ್ಮ ತಾಯಿಯನ್ನೇ ತಾವು ನಂಬಬೇಕೋ ಬೇಡವೋ ಎಂಬಷ್ಟು ಕ್ರೂರಿಯಾಗಿದ್ದ ಕಾಲ.
ಅವರ ಉತ್ತರಾರ್ಧದ ಕಾವ್ಯದಲ್ಲಿ ಈ ಎಲ್ಲ ಅಂಶಗಳಿವೆ. ಜೀವನವನ್ನು ಕೇವಲ ವರ್ತಮಾನದ ಹಿನ್ನೆಲೆಯಲ್ಲಿ ಅಷ್ಟೇ ಅರ್ಥಮಾಡಿಕೊಳ್ಳಹೊರಡದೆ ಇಡೀ ಬ್ರಹ್ಮಾಂಡದ ಆದಿ ಅನಂತದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳುವತ್ತ ಪಯಣ ಹೊರಟವರು ಅಡಿಗರು. ಅವರ ನೀ ಬಳಿಯೊಳಿರುವಾಗ್ಗೆ ಎಂಬ ಕವಿತೆ ಅವರ ಉತ್ತರಾರ್ಧದ ಅಷ್ಟೂ ಪ್ರಕ್ರಿಯೆಯನ್ನೂ ಒಂದೇ ಪದ್ಯದಲ್ಲಿ ಒಳಗೊಂಡ ಕವಿತೆ . ಬಡಿದಿಷ್ಟ ದೇವತಾವಿಗ್ರಹಕ್ಕೊಗ್ಗಿಸುವ ಅಸಲು ಕಸುಬಿನಿಂದ ಆರಂಭಿಸಿದ ಅಡಿಗರು " ಹೃದಯ ಮಧ್ಯವೇ ರೂಪು ತಳೆವ ತ್ರಿಜಯೆಗಳಸಂಖ್ಯಕ್ಕೆ ಗುರಿಮುರಿತಣಿವು ತರುವ ಪರಿಧಿಯ ಸಾಮತೇಜಸ್ಸೇ, ನಮಸ್ಕಾರ " ಎನ್ನುವಲ್ಲಿ ಬಂದು ನಿಲ್ಲತ್ತಾರೆ. ಅಸಲು ಕಸುಬನ್ನು ಮಾಡುತ್ತಾ ಬಂದು ಅದು ಫಲಿತವಾದದ್ದೆಲ್ಲಿ ಎಂದರೆ ಸಾಮ ತೇಜಸ್ಸಿಗೆ ನಮಸ್ಕಾರ ಮಾಡುವ ಮಣಿತದಲ್ಲಿ. ..!!. ಅನುಭವ ಪಕ್ವವಾಗಿದ್ದು ಹಾಗೆ... ಮಣಿದ ಅಡಿಗರ ಸ್ಮರಿಸುತ್ತಾ ... ಆ ಮಣಿತದತ್ತ ಕ್ರಮಿಸುತ್ತಾ .... ಅಡಿಗರಿಗೊಮ್ಮೆ ನಮಸ್ಕಾರ ...
No comments:
Post a Comment