Sunday, 5 March 2017

ಬಿಸಿಲು

ಧಗೆ ದೊಡ್ಡಪ್ಪಾ,
ನೀವು ಅಲ್ಲೇ ಇದ್ದೀರಲ್ಲಾ? ಸೂರ್ಯನ ಪಕ್ಕದಲ್ಲೆ? ಅಣ್ಣನೂ ಅಲ್ಲೇ ಇದ್ದಿರಬೇಕು. ಇದ್ದಿರಬೇಕೇನು , ಇದ್ದೇ ಇದ್ದಾರೆ. ಹೇಳಿ ನಿಮ್ಮ ಮಗಳಿಗೆ ಸಿಕ್ಕಾಪಟ್ಟೆ ಧಗೆ ಅಂತ. ಕೊಂಚ ಕಡಿಮೆ ಮಾಡಲು ಹೇಳಿ ಸೂರ್ಯನಿಗೆ, ಉಸಿರಾಡುತ್ತೇನೆ ಕೊಂಚ ಸಹಜ ಗಾಳಿಯನ್ನಾದರೂ.
ನೀವು ಮರೆತಿರಬಹುದೇನೋ, ನಾನಿನ್ನೂ ಮರೆತಿಲ್ಲ. ಅಂದು ನಿಮ್ಮೊಡನೆ ನಾನೂ ನನ್ನ ಅಕ್ಕ ಇಬ್ಬರೂ ನಡೆಯುತ್ತಿದ್ದ ಕ್ಷಣ, ಎಷ್ಟು ಬಗೆಯ ಕಲ್ಲುಗಳವು, ಮರಳ ಗಾತ್ರದ ಕಲ್ಲು ಚೂರುಗಳು, ಸಣ್ಣ ಸಣ್ಣ ಕಲ್ಲು, ದೊಡ್ಡ ಕಲ್ಲು, ನಡು ನಡುವೆ ಕಾಲಿಗೆ ಚುಚ್ಚಲೆಂದೇ ಅವಿತು ಕುಳಿತಂತಿದ್ದ ರಾಯಜಾಲೀ ಮುಳ್ಳುಗಳು.
ಅವತ್ತೂ ಸೂರ್ಯ ಕೆಂಡಗಳನ್ನೇ ಸುರಿಸುತ್ತಿದ್ದ. ಕಾದ ರಸ್ತೆ, ಕಾದ ಹೆಂಚಿನಂತಿದ್ದ ನಮ್ಮ ಮುಖ, ನಾಲ್ಕು ಕಿಲೋ ಮೀಟರ್ ಉದ್ದದ ದಾರಿ, ನಮ್ಮ ಪುಟ್ಟ ಪುಟ್ಟ ಕಾಲ್ಗಳು ನಿಮ್ಮೊಡನೆ ಓಡಲಾರದೆ, ಓಡದಿರಲಾರದೆ, ಸೋಲುತ್ತಿದ್ದ ಕ್ಷಣಗಳಲ್ಲೇ " ಬೇಗ ಹೆಜ್ಜೆ ಹಾಕಿ, ಬಿಸಿಲೇರುತ್ತೆ"... " ಇನ್ನೂ ಏರತ್ತಾ" ನಮ್ಮ ಮುಖದಲ್ಲಿ ಬೆರಗು ಗಾಬರಿ, "ದೊಡ್ಡಪ್ಪಾ ಬಿದ್ಲು ಇವಳು.." ಅಕ್ಕನ ದನಿ ಕಿವಿಗೆ ಬಿದ್ದ ಮೇಲೇ ನಾನು ಬಿದ್ದದ್ದು ನನಗೆ ಗೊತ್ತಾಗಿದ್ದು. ನೀವೊಮ್ಮೆ ನಿಂತು ಹೌದೋ ಅಲ್ಲವೋ ಎಂಬಂತೆ ತಿರುಗಿದಿರಿ. ಎಷ್ಟೇ ಮರೆಮಾಚಿದರೂ ನಿಮ್ಮ ಹುಸಿಗಂಭೀರ ಮುಖದಲ್ಲಿದ್ದ ಕಾಳಜಿ ಹೊತ್ತ ಕಣ್ಣುಗಳು ನನಗೆ ಕಂಡೇ ಬಿಟ್ಟಿತ್ತು. "ಏಳ್ತಾಳೆ ಅವ್ಳೇ, ಬಿಡು ಅವ್ಳನ್ನ,ಎದ್ದು ಬೇಗ ಹೆಜ್ಜೆ ಹಾಕಿ..." ಎರಡು ಹೆಜ್ಜೆ ಮುಂದಿಟ್ಟವರು ಕಾಲಿಗೆ ಮುಳ್ಳು ಚುಚ್ಚಿತೆಂಬಂತೆ ಬಗ್ಗಿ ಕಾಲು ಸವರುತ್ತ ಮತ್ತೆ ಹಿಂತಿರುಗಿ ನೋಡಿದಿರಲ್ಲಾ , ಆಗ ಕಂಡಿದ್ದು ನಿಮ್ಮ ಕಣ್ಣುಗಳಲ್ಲ. ಚಿತ್ರದುರ್ಗದ ಬಿಸಿಲಿಗೆ ಒಣಗಿ ಬಾಯ್ಬಿಟ್ಟ ಬಿರುಕು ನೆಲಕ್ಕಿಂತ ದೊರಗಾಗಿ ಒಡೆದಿದ್ದ ನಿಮ್ಮ ಪಾದಗಳು. ಗಾಬರಿಯೇ ಆಗಿತ್ತು, ಅಲ್ಲಿಯವರೆಗೆ ನಾನು ಅಂತಹ ಕಾಲುಗಳನ್ನೆ ನೋಡಿರಲಿಲ್ಲ. ಬಿದ್ದ ನೋವು ಮರೆತು ಓಡಿ ಬಂದು ಕೇಳಿದ್ದೆ. ನಿಮ್ಮ ಕಾಲಿಗೆ ಇಷ್ಟೊಂದು ಗಾಯವಾಗಿದೆಯಲ್ಲ ದೊಡ್ಡಪ್ಪಾ ನೋವಾಗ್ತಿಲ್ವಾ? ನಕ್ಕಿದ್ದಿರಿ, "ಮತ್ತೆ.. ನೋಡು ಸೂರ್ಯಪರಮಾತ್ಮನ್ನ, ಈ ಪಾಟಿ ಬಿಸ್ಲು, ಧೂಳು, ಅದಕ್ಕೆ ಹೀಗಾಗಿದೆ ಪುಟ್ಟೀ" "ಈ ಸೂರ್ಯ ತುಂಬ ಕೆಟ್ಟವ್ನು ದೊಡ್ಡಪ್ಪಾ, ಬಿಸ್ಲಲ್ಲಿ ಓಡಾಡ್ ಬೇಡಿ. ಈ ಗಾಯ ಹಾಗೆ ದೊಡ್ಡದಾಗ್ತಾ ತಲೆವರ್ಗೂ ಬಂದ್ ಬಿಟ್ರೆ?..." ತಲೆ ಬುಡವಿಲ್ಲದ ನನ್ನ ಮಾತುಗಳಿಗೆ ಎಂಥ ಉತ್ತರ ಕೊಟ್ಟಿದ್ರಿ ಅವತ್ ನೀವು. "ಸೂರ್ಯನ ಪಕ್ಕಾನೆ ನಮ್ಮಪ್ಪ, ಅಮ್ಮ, ದೊಡ್ಡಪ್ಪ ,ಚಿಕ್ಕಪ್ಪ ಎಲ್ರೂ ಇರ್ತಾರೆ ಕಣೆ, ನನ್ ಮಕ್ಳು ತಡ್ಕೋಳಷ್ಟು ಮಾತ್ರ ಬಿಸ್ಲು ಕೊಡು ಅಂತ ಅವ್ರು ಕೇಳ್ಕೋತಾರೆ.ಆಗ ಸೂರ್ಯ ಅಯ್ಯೋ ಪಾಪ ಅಂತ ನಾವು ತಡ್ಕೋಳೂಷ್ಟು ಮಾತ್ರ ಬಿಸ್ಲು ಕೊಡ್ತಾನೆ. ಇದೆಲ್ಲಾ ಇದ್ದಿದ್ದೇ, ನೀವು ಬೇಗ ಬನ್ನಿ. " ಮನೆ ತಲ್ಪಿ ದೊಡ್ಡಮ್ಮ ಕೊಟ್ಟ ರಾಗಿ ಪಾನಕ ಕುಡಿದು, ಬಕೆಟ್ ನೀರಿನಲ್ಲಿ ಮುಳುಗಿಸಿಟ್ಟಿದ್ದ ಮಾವಿನಹಣ್ಣು ತಿನ್ನುವಾಗ ಸೂರ್ಯನ ಪಕ್ಕ ಇರಬಹುದಾದ ಅಜ್ಜ ಅಜ್ಜಿಯರ ಬಗ್ಗೆ ಯೋಚನೆ ಮತ್ತು ದಿವ್ಯ ಸಮಾಧಾನ. ಸೂರ್ಯ ನಮಗೇನೂ ಮಾಡಲಾರ.
ಮೊನ್ನೆ ಉರಿವ ಬಿಸಿಲಲ್ಲಿ, ಚಿತ್ರದುರ್ಗದ ಬೆಟ್ಟದ ಕೆಳಗೆ ನಿಂತು ತುಪ್ಪದ ಕೊಳದತ್ತ ಕಣ್ಣು ಹಾಯಿಸಿದಾಗ ನಿಮ್ಮ ಮಾತುಗಳೇ ಕಿವಿಯಲ್ಲಿ. "ಅಮ್ಮಾ ನಾವು ಹೋಗೇ ಹೋಗ್ತೀವಿ".ಮಕ್ಕಳು ಶೂ ಕಾಲಿನಲ್ಲಿ ಆನೆಹೆಜ್ಜೆ ಕುದುರೆಹೆಜ್ಜೆಯಲ್ಲಿ ಒಂದೊಂದೇ ಹೆಜ್ಜೆ ಇಡುತ್ತ, ಥೇಟ್ ನಾನಂದು ಹತ್ತಿದಂತೇ ಹತ್ತಲು ಹೊರಟೇ ಬಿಟ್ಟರಲ್ಲ!! ಹಳೆಯ ನೆನಪುಗಳ ಸಂತೆ ಮನದಲ್ಲಿ. ಅವರೆಲ್ಲಾದರೂ ಬಿದ್ದು ಬಿಟ್ಟರೆ, ಆತಂಕವನ್ನೂ ನುಂಗುವಂತೆ ಬೆಟ್ಟ ಬತೇರಿ ಕೈ ಬೀಸುತ್ತಲೇ ಇದ್ದ ಪರಿಗೆ ಮನಸೋತು ಚಪ್ಪಲಿ ಬದಿಗಿಟ್ಟು ಇಟ್ಟ ಎರಡು ಹೆಜ್ಜೆ....ಎರಡೇ ಹೆಜ್ಜೆ, ಕೆಂಡದ ಮೇಲೆ ಕಾಲಿಟ್ಟಂತೆ! ಹಾ ! ಎಂದು ಚೀತ್ಕರಿಸಿ ಮತ್ತೆ ಚಪ್ಪಲಿ ಮೆಟ್ಟಿ, ಕುಡಿಯಲೆಂದು ಹೊತ್ತೊಯ್ದಿದ್ದ ನೀರನ್ನು ಕಾಲಿಗೆ ಹಾಕಿಕೊಂದವಳಿಗೆ ಅದೆಷ್ಟು ಸುಮಕೋಮಲೆಯಾಗಿ ಬಿಟ್ಟೆ ನಾನು..!! ಬೆರಗೋ ಹಳಹಳಿಕೆಯೋ?! ದೊಡ್ಡಪ್ಪಾ ನೀವಲ್ಲೆ ಇದ್ದಿರಲ್ಲ ಸೂರ್ಯನ ಬದಿಯಲ್ಲಿ. ಹೇಳುವದಲ್ಲವಾ ಅವನಿಗೆ "ಕೊಂಚ ಬಿಸಿಲು ಕಡಿಮೆ ಮಾಡು ನನ್ನ ಮಗಳು ಬೆಟ್ಟ ಹತ್ತಬೇಕಿದೆ"
ನಗುತ್ತಿದ್ದೀರಾ ದೊಡ್ಡಪ್ಪಾ, ಬಿಸಿಲಲ್ಲಿ ಬೆಂದರೂ ಬಿದ್ದರೂ ಬೇಯದ ಹಾಗೆ ಮುನ್ನಡೆಯಬೇಕೆಂದು, ಬಿದ್ದ ನಾವೇ ಮೇಲೇಳಬೇಕೆಂದು ಹೇಳಿಕೊಟ್ಟವರು ನೀವು. ನಾನದನ್ನು ಬದುಕಿಗೂ ಅಳವಡಿಸಿಕೊಳ್ಳುತ್ತಲೇ ಹೋದೆ. ಬಿದ್ದಾಗ ಯಾರ ಕೈಗೂ ಕಾಯದೆ, ಕೈಕಾಲು ಕೊಡವಿಕೊಂಡು ಮೇಲೇಳುತ್ತ, ಬೆಂದದ್ದು ಯಾರಿಗೂ ತೋರಿಸಿಕೊಳ್ಳದೆ, ತಂಪಿನಲ್ಲಿದ್ದಂತೆ ನಗುತ್ತ ಇರುವುದು ರೂಢಿಯಾಗಿಯೇ ಹೋಯಿತು,
ಈಗ ಕೊತಕೊತ ಕುದಿಯುತ್ತಿದೆ ಬೆಂಗಳೂರು. ಕುದಿಯುವ ಮಧ್ಯಾಹ್ನದಲ್ಲಿ ಅಡಿಗರನ್ನು ಕೈಗೆತ್ತಿಕೊಂಡೆ ನೋಡಿ. ಬಿಸಿಲು, ಧಗೆ, ಆ ದಾರಿ ಮತ್ತು ಬೆಟ್ಟ ಎಲ್ಲವೂ ಮತ್ತೆ ಮತ್ತೆ ಕಣ್ಮುಂದೆ.
ಹೊಗೆ ಬೆಂಕಿ,
-ಅಯ್ಯೋ ಹಾಳಾಗ-
ಉರಿ, ಶಖೆ, ತಾಪ;
ಹೊರಗೆ ರಣ ರಣ ಬಿಸಿಲು, ಒಳಗೆ ಮಾರಣ ಬೆಂಕಿ.
ಮಲಗಿತ್ತು ಮನ ಚಿತೆಯ ಮೇಲೆ ಆಫೀಸಿನಲಿ.

ಇದಕ್ಕಿಂತ ಸೊಗಸಾಗಿ, ಭೀಕರವಾಗಿ, ಬಿಸಿಲನ್ನು ವರ್ಣಿಸಲು ಸಾಧ್ಯವೇ ದೊಡ್ಡಪ್ಪಾ?ಬಿಸಿಲೇರಿದೊಡನೆ ಕೈ ಯಾಂತ್ರಿಕವಾಗಿ ಏಸಿಯ ಕಡೆ ಹೋಗುತ್ತದೆ. ಮಲಗಿದ್ದ ಮಕ್ಕಳ ಮುಖದಲ್ಲಿ ಬೆವರು ಕಂಡದ್ದು ನನ್ನ ಭ್ರಮೆಯಾ, ಇಪ್ಪತ್ತಾರರಿಂದ ಹದಿನೆಂಟಕ್ಕೆ ಸೆಟ್ ಮಾಡಿ ಚಳಿಯಾದರೆ ಎಂದು ಬ್ಲಾಂಕೆಟ್ ಇಟ್ಟು ಬರುತ್ತೇನೆ.
ಬದುಕಿನ ಬಿಸಿಗೊಂದು ಏಸಿ ಬೇಕಾಗಿದೆ ದೊಡ್ಡಪ್ಪ. ಥಟ್ಟನೆ ತಂಪಾಗುವ ಬಯಕೆ. ನಮಗೆಲ್ಲವೂ ಇನ್ ಸ್ಟಂಟ್ ಆಗಿರಬೇಕು. ಕೈಚಾಚಿದೊಡನೇ ಸಿಕ್ಕಬೇಕು. ತಣ್ಣಗೆ ಕೊರೆವ ಬೆಳ್ಳಿ ಇಳಿಜಾರು, ಹಿಮಹರ್ಮ್ಯ. ಬೇಕಿದೆ ತಂಪು ತಂಪು, ನರನೆತ್ತರನು ಗಡ್ಡೆ ಕಟ್ಟಿಸಿ ತಟ್ಟಿ ಮಲಗಿಸುವ ತಂಪು. ಕರೆಯುತಿದೆ ಹಿಮಗಿರಿಯ ಕಂದರ. ನಡುವೆ ಭಗ್ನ ಸೇತುವೆ.
ಮತ್ತೆ ನೆನಪಾಗುವ ಅದೇ ಪ್ರಿಯಕವಿಯ ಸಾಲುಗಳು.
ಕಾಯಬೇಕು ಬೇಸಿಗೆಯಲ್ಲ
ಬೇಯಿಸುವ ಹೊತ್ತು
ಬೆವರ ವಾಸನೆ ಹೊತ್ತು
ನಿಂತಲ್ಲಿಯೇ ಬೇರು ಬಿಟ್ಟು, ಬೇರ್ಪಟ್ಟು,
ಕಾಯುತ್ತಲೇ ಮಾಗಿ, ಮಾಗಿದ ಕಾಯಿ ಹಣ್ಣಾಗಿ,
ಹಣ್ಣಿನ ಚಿತ್ರ ಹೊನ್ನಲ್ಲಿ ಮೂಡಿ ಪುತ್ಥಳಿಯಾಗಿ
ಚಿನಿವಾರ ಸುಟ್ಟು ಕರಗಿಸಿ
ಕುಟ್ಟಿ ತಟ್ಟಿ ಮಂತ್ರಿಸಿಕೊಟ್ಟ ಕಂಠಿಕೆಯಾಗಿ....

ಕಲಿಯಬೇಕಾದ್ದು ಬಃಹಳವಿದೆ ದೊಡ್ಡಪ್ಪಾ. ನೀವು ಕಲಿಸಿಕೊಟ್ಟು ಹೋದ ಪಾಠವನ್ನು  ಮಕ್ಕಳಿಗೆ ಕಲಿಸುವುದನ್ನೂ ಕಲಿಯಬೇಕಿದೆ. ಮಕ್ಕಳಿಗೆ ಕಲಿಸುವ ಮುನ್ನ ನಾನೆಂಬ ಕಾಯಿ ಮಾಗಬೇಕಿದೆ. ಹಣ್ಣಾಗದಿದ್ದರೂ ದೋರೆಗಾಯಾಗಬೇಕಿದೆ. ಏಸಿ ಬಂದ್ ಮಾಡಬೇಕಿದೆ. ಬಿಸಿಲಲ್ಲಿ ನಿಲ್ಲುವ ಕಲೆ ಕಲಿತು, ಕಲಿಸಬೇಕಿದೆ. ಸೂರ್ಯನಿಗೆ ಹೇಳಿ ದೊಡ್ಡಪ್ಪಾ, ನನ್ನ ಮಗಳು ಸಹಿಸುವಷ್ಟು ...ಪಾಠ ಕಲಿಯುವಷ್ಟು ...ಕಲಿತು ಕಲಿಸುವಷ್ಟು ಬಿಸಿಲು ಕೊಡು.
-
ಮಾಲಿನಿ ಗುರುಪ್ರಸನ್ನ.

No comments:

Post a Comment