ಹೊರಗೆ ಗೇಟು ಕಿರ್ರೆಂದು ಸದ್ದಾದಾಗಲೇ ಗೊತ್ತಾಯಿತು, ಅವರೆಲ್ಲರೂ ಬಂದರು. ಒಳಗೆ ಎಲ್ಲರಿಗೂ ಸ್ನಾನಕ್ಕೆ ಗಡಿಬಿಡಿ...ಅಲ್ಲಿಗೆ...ಎಲ್ಲವೂ ಮುಗಿದಿತ್ತು. 'ಅಣ್ಣಾ' ಎಂದು ನನ್ನಿಂದ ಕರೆಸಿಕೊಳ್ಳುತ್ತಿದ್ದ ನನ್ನ ತಂದೆಯ ದೇಹ ಪಂಚಭೂತಗಳಲ್ಲಿ ಲೀನವಾಗಿತ್ತು. ಯಾರೋ ಹೊರಗೆ ನಿಂತು ನುಡಿಯುತ್ತಿದ್ದರು, " ವೈಕುಂಠ ಏಕಾದಶಿ ಮರಣ ಮುಕ್ಕೋಟಿ ದ್ವಾದಶಿ ದಹನ ಬಹಳ ಪುಣ್ಯ ಮಾಡಿದವರಿಗೆ ಮಾತ್ರ ಈ ಅದೃಷ್ಟ. ಮಹಾಭಾರತದಲ್ಲಿ ಭೀಷ್ಮನಿಗೆ ಸಿಕ್ಕಿತ್ತು ನೋಡಿ". ನನ್ನ ಪುಣ್ಯ ಉರಿದುಹೋಗಿತ್ತು, ಬೂದಿಯಾಗಿತ್ತು. ಮಾತುಗಳಿಲ್ಲದೇ ರೂಮಿಗೆ ಬಂದು ಕದವಿಕ್ಕಿದೆ. ಹನಿ ಕಣ್ಣೀರು ಹೊರಹೋಗದೆ ಮೈಮನ ಬೆಂಕಿಯಂತೆ ಉರಿಯುತ್ತಿತ್ತು, ಬೂದಿಯಾಗ ಬಯಸುತ್ತಿತ್ತು. ..ಚಡಪಡಿಸುತ್ತಿದ್ದ ಜೀವಕ್ಕೆ ಕಂಡದ್ದು ನನ್ನಂತೆಯೇ ಉರಿಯುತ್ತಿದ್ದ, ಕಂಗಾಲಾಗಿದ್ದ, ರೆಕ್ಕೆ ಮುರಿದ ಹಕ್ಕಿಯಂತೆ ಬಿದ್ದಿದ್ದ ಆ ಪುಸ್ತಕ. 'ಗದುಗಿನ ಭಾರತ.'. ನಿಧಾನವಾಗಿ ಹೋಗಿ ಕೈಗೆತ್ತಿಕೊಂಡೆ....ಅಣ್ಣನದೇ ಸ್ಪರ್ಶ, ಅದೇ ಬೆಚ್ಚಗಿನ ಆಸರೆಯ ಅನುಭವ...ನಂತರ ಅಲ್ಲಿದ್ದುದು ಬಿಕ್ಕಿಬಿಕ್ಕಿ ಆಳುತ್ತಿದ್ದ, ಪರಸ್ಪರ ಸಂತೈಸಿಕೊಳ್ಳುತ್ತಿದ್ದ ಎರಡು ಜೀವಗಳು..ನಾನು, ನನ್ನ ಕುಮಾರವ್ಯಾಸ....
ಬುದ್ದಿ ತಿಳಿದಾಗಿನಿಂದ ಪ್ರತಿದಿನವೂ ಅಣ್ಣ ಓದುತ್ತಿದ್ದ, ಹಾಡುತ್ತಿದ್ದ ಗದುಗಿನ ಭಾರತದ ಬಗ್ಗೆ ನನಗೇನೋ ವಿಚಿತ್ರ ಆಕರ್ಷಣೆ. ನನ್ನಮ್ಮ, ನಾಗರತ್ನಮ್ಮ(ಎಚ್ಚೆಸ್ವಿಯವರ ತಾಯಿ) ಇವರಿಬ್ಬರೂ ಅತೀ ಸಣ್ಣ ವಯಸ್ಸಿಗೆ ನನಗೆ ಅಕ್ಷರಗಳ ಸುಸ್ಪಷ್ಟ್ಟ ಪರಿಚಯ ಮಾಡಿಸಿಕೊಟ್ಟಿದ್ದರು. ಒಂದು ದಿನ ಮನೆಯಲ್ಲಿ ಯಾರೂ ಇರಲಿಲ್ಲ.( ನಾನು ಹಾಗೆಂದು ಕೊಂಡಿದ್ದೆ) ಬಹುಶ: ಎರಡನೇ ತರಗತಿ ನಾನು, ಕಳ್ಳ ಹೆಜ್ಜೆಯಿಡುತ್ತಾ ಹೋಗಿ ಗದುಗಿನ ಭಾರತವನ್ನೆತ್ತಿ ಕೊಂಡೆ. ಆಗ ಹಂಚೀಕಡ್ಡಿಯಂತಿದ್ದ ನನಗೆ ಅದನ್ನು ಎತ್ತಿಕೊಳ್ಳುವುದೇ ಸಾಹಸ ಕೆಲಸವಾಗಿತ್ತು. ( ನಂತರದ ದಿನಗಳಲ್ಲಿ ಎಲ್ಲರ ಬಾಯಿಂದ ಕೇಳಿದ್ದರಿಂದ ಇದರ ಬಗ್ಗೆ ಬರೆಯುತ್ತಿದ್ದೇನೆಯೇ ಹೊರತು ನನಗೂ ಇದರ ಸ್ಪಷ್ಟ ನೆನಪಿಲ್ಲ.) ಓದಲೆತ್ನಿಸುತ್ತಾ ಅರ್ಥವಾಗದೆ ಕಣ್ಣುಕಣ್ಣು ಬಿಡುತ್ತಿದ್ದವಳ ಬೆನ್ನ ಹಿಂದೆ ಬಂದು ನಿಂತ ನನ್ನಣ್ಣ "ಅರ್ಥವಾಗ್ತಿದೆಯಾ" ಎಂದು ಮೃದುವಾಗಿ ಕೇಳಿದರು. ಅದನ್ನು ಮುಟ್ಟಿ ಸಿಕ್ಕಿಬಿದ್ದಿದ್ದಕ್ಕೋ, ಅಣ್ಣನಂತೆ ಪುಸ್ತಕ ತೆರೆದೊಡನೆ ಹಾಡುತ್ತೇನೆ ಎಂಬ ಭ್ರಮೆ ಕಳಚಿದ್ದಕ್ಕೋ ಜೋರಾಗಿ ಅಳಲಾರಂಭಿಸಿದೆ. ಜೋಪಾನವಾಗಿ ಕುಮಾರವ್ಯಾಸನನ್ನು ಮುಚ್ಚಿಟ್ಟ ನನ್ನಣ್ಣ " ಇದನ್ನು ಓದುವ ಕಾಲವೂ ಬಂದೇಬರುತ್ತದೆ. ಈಗ ನೀನು ಓದಬೇಕಿರುವುದು ಇದನ್ನು" ಎಂದು ನನ್ನ ಕಣ್ಣೊರೆಸಿ ಕೈಗೆ ಅಮರ ಚಿತ್ರ ಕಥಾ ಮಾಲಿಕೆಯನ್ನು ಕೈಗಿತ್ತರು. ನನ್ನ ಓದು ಆರಂಭವಾಗಿದ್ದು ಹೀಗೆ. ನನಗಿಷ್ಟವಿಲ್ಲದ ಯಾವುದೇ ಕೆಲಸವನ್ನು ಒತ್ತಾಯದಿಂದ ಮಾಡಿಸಲಿಲ್ಲ ನನ್ನಣ್ಣ, ಓದುವುದನ್ನೂ.
ಮಲ್ಲಾಡಿಹಳ್ಳಿಯಿಂದ ೫ ಕಿಮೀ ಇದ್ದ ನನ್ನೂರಿಗೆ ನಡೆದು ಕೊಂಡೇ ಹೋಗಬೇಕಿತ್ತು. ಆ ಕುಗ್ರಾಮಕ್ಕೆ ಆಗಿನ್ನೂ ವಾಹನ ಸೌಕರ್ಯ ಇರಲಿಲ್ಲ. ಸಾಮಾನ್ಯವಾಗಿ ಶಾಲೆ ಮುಗಿದ ನಂತರವೇ ಹೊರಡುತ್ತಿದ್ದರಿಂದ ಸಂಜೆಯಾಗಿರುತ್ತಿತ್ತು. ಅಬ್ಬಬ್ಬಾ ಎಂದರೆ ಎರಡು ಕಿಮೀ ಬಸ್ಸು ಸಿಗುತ್ತಿತ್ತು ಮುಂದಿನ ದಾರಿ ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾದ ಅನಿವಾರ್ಯತೆ. ನಮ್ಮ ಪುಟ್ಟ ಪುಟ್ಟ ಕಾಲ್ಗಳ ಕಷ್ಟ ನೀಗಿಸಲು ಅಣ್ಣ ಕಥೆ ಹೇಳುತ್ತಾ ಹೋಗುತ್ತಿದ್ದರು. ಸೂರ್ಯ ತಾನೂ ಕೆಂಪಾಗುವುದಲ್ಲದೆ ನಮ್ಮೆಲ್ಲರನ್ನೂ ಕೆಂಪಾಗಿಸಿರುತ್ತಿದ್ದ. ಅಣ್ಣ ಹೇಳುತ್ತಿದ್ದ ಪುರಾಣ ಕಥೆಗಳು, ಅರೇಬೀಯನ್ ನೈಟ್ಸ್, ಪಂಚತಂತ್ರ, ಜಾತಕ , ವಿಕ್ರಮ ಬೇತಾಳ ಕತೆಗಳೂ ಆ ಹೊಂಬೆಳಕಿನಲ್ಲಿ ಮಿಂದು ನಮಗೊಂದು ಸ್ವರ್ಗೀಯ ಅನುಭವ ಕೊಡುತ್ತಿದ್ದವು. ಅರ್ಧ-ಮುಕ್ಕಾಲು ಹಾದಿ ಕ್ರಮಿಸುವಷ್ಟರಲ್ಲಿ ಕತ್ತಲು ಕೆಂಬಣ್ಣವನ್ನು ನುಂಗಲು ಆರಂಭಿಸುತ್ತಿತ್ತು. ಅಲ್ಲಿಯವರೆಗೂ ನಂದನವನದ ಹೊನ್ನ ವೃಕ್ಷಗಳಂತೆ ಕಂಗೊಳಿಸುತ್ತಿದ್ದ ಜಾಲಿ ಮರಗಳು ಕಪ್ಪಗೆ ವಿಕ್ರಮಾದಿತ್ಯನ ಬೇತಾಳ ನೇತಾಡುತ್ತಿದ್ದ ಮರಗಳಂತೆ ಅನ್ನಿಸಿ ಅಣ್ಣನಿಗೆ ಆತು ಕೊಳ್ಳುತ್ತಿದ್ದೆವು. ಕರಡಿಗಳ ನಾಡೆಂದು ಜನಜನಿತವಾಗಿದ್ದ ಆ ದಾರಿಯಲ್ಲಿ ಈಚಲು ಪೊದೆಗಳ ಹಿಂದೆ ಅವಿತು ನಮಗಾಗೆ ಕಾಯುತ್ತಿರಬಹುದಾದ ಕರಡಿಗಳನ್ನು ಊಹಿಸುತ್ತಾ, ಅವು ಬಂದೆರಗುವ ಕ್ಷಣಗಳನ್ನು ಭಯದಿಂದ ಎದುರು ನೋಡುತ್ತಿರುವಾಗ ಅಣ್ಣ ಇದ್ದಕ್ಕಿದ್ದಂತೆ ಕುಮಾರವ್ಯಾಸನ ಯಾವುದಾದರೂ ಪ್ರಸಂಗವನ್ನು ಹಾಡಿ ಅರ್ಥ ವಿವರಿಸುತ್ತಿದ್ದರು. ಕತ್ತಲು, ಕರಡಿ, ಬೇತಾಳ ಎಲ್ಲ ಎಲ್ಲವೂ ಕರಗಿ ನಾವು ದ್ವಾಪರ ಯುಗದಲ್ಲಿ ಆನಂದದಿಂದ ಹೆಜ್ಜೆ ಹಾಕುತ್ತಿದ್ದೆವು. ( ಈಗ ಆ ದಾರಿಯಲ್ಲಿ ಹೆಜ್ಜೆ ಹಾಕುವಾಗ ನನ್ನ ಕಣ್ಣು ಮಂಜು ಮಂಜು, ಮನಸ್ಸು ಒದ್ದೆ ಒದ್ದೆ.)
ಈ ಗದುಗಿನ ಭಾರತದ ಬಗ್ಗೆ ನನಗೊಂದು ವಿಚಿತ್ರ ಮೋಹವಿತ್ತು. ಅಣ್ಣ ಕುಮಾರವ್ಯಾಸ ಇಬ್ಬರಲ್ಲೂ ವ್ಯತ್ಯಾಸವೇ ನನಗಿರಲಿಲ್ಲ. ಒಮ್ಮೆ ನನ್ನ ಮಾವನ ಮನೆಗೆ ಹೋದಾಗ ಅಲ್ಲಿ ನನಗೀ ಪುಸ್ತಕ ಕಾಣಿಸಿತು. ಸೀದಾ ಅಣ್ಣನ ಬಳಿ ಹೋಗಿ ಹೇಳಿದೆ. " ಅಣ್ಣಾ, ಅದು ನಮ್ಮನೆ ಬುಕ್ಕು. ಇಲ್ಲಿದೆ" . ಅದು ಅವರ ಮನೆಯದೇ ಪುಸ್ತಕ ಎಂದು ಅಣ್ಣ ಎಷ್ಟು ಹೇಳಿದರು ನನಗೆ ಸಮಾಧಾನವಾಗಲೇ ಇಲ್ಲ. ಹೇಗಾದರೂ ಮಾಡಿ ಅದನ್ನು ಯಾರಿಗೂ ಗೊತ್ತಾಗದಂತೆ ಎತ್ತಿಕೊಂಡು ಬಂದು ಬಿಡುವ ಯೋಜನೆ ಒಳಗೊಳಗೇ ಹಮ್ಮಿಕೊಂಡಿದ್ದೆನಾದರೂ ಆ ಪುಸ್ತಕದ ಗಾತ್ರ ಅದಕ್ಕೆ ಅಡ್ಡಿಯಾಗಿತ್ತು. ವಾಪಸ್ ಮನೆಗೆ ಬಂದು ನೋಡಿದಾಗಲೇ ನನಗೆ ಅರ್ಥವಾಗಿದ್ದು ಅದು ಯಾರ ಮನೆಯಲ್ಲಿ ಬೇಕಾದರೂ ಇರಬಹುದಾದ ಪುಸ್ತಕವೆಂದು. ಹುಟ್ಟಿದಾಗಿನಿಂದ ಅದರ ಜೊತೆಗೊಂದು ಅವಿನಾಭಾವ ಸಂಬಂಧ ಬೆಳೆಸಿಕೊಂಡುಬಂದಿದ್ದ ನನಗೆ ಇದನ್ನು ಅರಗಿಸಿಕೊಳ್ಳಲು ಆಗಲೇ ಇಲ್ಲ. ಆದರೂ ಛಲ ಬಿಡದ ತ್ರಿವಿಕ್ರಮಳಂತೆ ಮತ್ತೆ ಮತ್ತೆ ಕೇಳಿದೆ.. " ಅವರ್ಯಾರೂ ನಿಮ್ಮಷ್ಟು ಆ ಬುಕ್ಕನ್ನ ಓದಿಲ್ಲ ಅಲ್ವೆನಣ್ಣಾ". ನನ್ನ ಮುಗ್ಧತೆಗೆ ಅಣ್ಣ ನಕ್ಕುಬಿಟ್ಟರು. " ನಿನ್ನ ಮಾವ ಅರಾಸೇ ನಾನು ಓದಿದ್ದಕ್ಕಿಂತ ಹತ್ತು ಪಟ್ಟು ಜಾಸ್ತಿ ಇದನ್ನು ಓದಿದ್ಡಾರೆ." ನನಗೆ ಈ ಉತ್ತರ ಸ್ವಲ್ಪವೂ ಇಷ್ಟವಾಗಲಿಲ್ಲ. ಕುಮಾರವ್ಯಾಸ ನಮ್ಮ ಮನೆಯ ಸದಸ್ಯ ಮಾತ್ರ ಎಂಬ ನನ್ನ ನಂಬಿಕೆಯ ಮೇಲೆ ನನ್ನ ಅಣ್ಣ ತಣ್ಣೀರೆರೆಚಿದ್ದರು. ( ನಂತರ ಅರಾಸೇ ಬರೆದ 'ಕುಮಾರವ್ಯಾಸ ಭಾರತ ಓದಿದ ಮೇಲೆ ಅಣ್ಣನ ಮಾತಿನ ಸತ್ಯ ನನಗರಿವಾಯಿತು) ಓದಿದ್ದಕ್ಕಿಂತ ಹೆಚ್ಚು ಓದಿದ್ದೇವೆಂದು ತೋರಿಸಿಕೊಳ್ಳುವ ಜನರಿರುವ ಕಾಲದಲ್ಲಿ ನನ್ನಣ್ಣ ನಿಜಕ್ಕೂ ಮಾದರಿಯೆನಿಸುತ್ತಾರೆ. ಚಿಕ್ಕವಳಾದ ನನ್ನ ಬಳಿಯೂ ಅವರು ಸುಳ್ಳಾಡಲಿಲ್ಲ.
ಅವರ ಕಂಠ ಬಹಳ ಸುಶ್ರಾವ್ಯವಾಗಿತ್ತು. ಗಮಕವಷ್ಟೆ ಅಲ್ಲದೆ ಹಳೆಯ ಹಿಂದಿ ಚಿತ್ರಗೀತೆಗಳನ್ನವರು ಅದ್ಭುತವಾಗಿ ಹಾಡುತ್ತಿದ್ದರು. ದಾಸರ ಪದಗಳು, ಕೀರ್ತನೆಗಳು ಅವರ ಕಂಠದಲ್ಲಿ ಸೊಗಸಾಗಿ ಮೂಡಿಬರುತ್ತಿತ್ತು. ನನಗವರು ಗಮಕ ಕಲಿಸಿದರು, ಹಾಡುಗಳನ್ನು ತಿದ್ದಿದರು, ಓದು ಸಮೃದ್ಧವಾಗುವಂತೆ ಮಾಡಿದರು, ಸಂಸ್ಕೃತದ ಬಗ್ಗೆ ಅಭಿಮಾನ ಬೆಳೆಸಿದರು, ಒಳ್ಳೆಯ ಚರ್ಚಾಪಟುವಿಗಿರಬೇಕಾದ ಅರ್ಹತೆಯನ್ನು ತಿಳಿಸಿ ಕೊಟ್ಟರು, ಜ್ಯೋತಿಷ್ಯದ ಬಗ್ಗೆ ಅರಿವು ಮೂಡಿಸಿದರು, ಎಲ್ಲ ಎಲ್ಲವನ್ನೂ ನಾನಾಗಿ ಹಾತೊರೆದು ಕೇಳಿದಾಗ ಮಾತ್ರ, ನನಗಿಷ್ಟವಿಲ್ಲದ್ದನ್ನು ಅವರೆಂದೂ ಹೇರಲಿಲ್ಲ.
ಇಷ್ಟಾದರೂ ನನ್ನಲ್ಲಿ ಅವರ ಬಗ್ಗೆ ಒಂದು ಸಣ್ಣ ಅಸಮಾಧಾನವಿತ್ತು. ಸಭೆಗಳಲ್ಲಿ ಭಾಷಣ ಮಾಡುವಾಗ, ಹಾಡುವಾಗ, ನರ್ತಿಸಿದಾಗ, ಚರ್ಚಾಸ್ಪರ್ಧೆಯಲ್ಲಿ ಗೆದ್ದಾಗ, ಡಿಸ್ಟಿಂಕ್ಷನ್ ತೆಗೆದಾಗ ಅಚ್ಚರಿ ಗೊಂಡು ಹುಬ್ಬೇರಿಸುತ್ತಿದ್ದವರೆಲ್ಲ ಯಾರ ಮಗಳು ಎಂದು ತಿಳಿದೊಡನೆ ಏರಿದ ಹುಬ್ಬು ಇಳಿಸಿಬಿಡುತ್ತಿದ್ದರು. "ಓ" ಎಂಬ ಉದ್ಗಾರದಲ್ಲಿ ಅಷ್ಟೂ ಇಲ್ಲದಿದ್ದರೆ ಹೇಗೆ ಎನ್ನುವ ಭಾವ ಕಾಣಿಸಿ ನನ್ನನ್ನು ಕೆರಳಿಸುತ್ತಿತ್ತು. ೧೦ನೆಯ ತರಗತಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದವರು ಅವರು. ಸಂಗೀತದಲ್ಲಿ, ಹಿಂದಿ, ಆನರ್ಸ್ ಎಲ್ಲ ಕಡೆಯೂ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದವರು. ಸಹಜವಾಗಿಯೇ ನನ್ನ ಸಾಧನೆ ಅವರ ಮುಂದೆ ಮಬ್ಬಾಗುತ್ತಿತ್ತು. ಎಷ್ಟೋ ಬಾರಿ ಗೊಣಗುತ್ತಿದ್ದೆ. " ಹೋಗಣ್ಣ ನಿಮ್ಮ ಮಗಳಾಗಿದ್ದೆ ತಪ್ಪಾಗಿ ಹೋಯ್ತು, ನಾನೇನು ಗೆದ್ದರೂ ನಂದಲ್ಲ ಅಂತಾರೆ ಎಲ್ಲರೂ". ಆಗೆಲ್ಲ ನಕ್ಕು ಸುಮ್ಮನಾಗುತ್ತಿದ್ದ ಅಣ್ಣ ನಾನು ಶಾಂತಳಾದ ಮೇಲೆ ನಿಧಾನವಾಗಿ ಹೇಳುತ್ತಿದ್ದರು " ಹಾಗಾದ್ರೆ ನಿನ್ನ ಮುಂದೆ ದೊಡ್ಡ ಗುರಿ ಇರಬೇಕಾಗುತ್ತೆ, ನನ್ನನ್ನೂ ಮೀರಿಸುವ ಗುರಿ".
ಮೊದಲ ಕಥೆ, ಪುಸ್ತಕ ಬಂದ ನಂತರ ಕನಿಷ್ಟ ೫ ವರ್ಷಗಳು ಬರೆಯಬೇಡೆಂಬ ಮಿತಿ ವಿಧಿಸಿದರು. ದಿನಕ್ಕೆ ೩ ಪುಸ್ತಕ ಓದುತ್ತೇನೆಂದು ಸೊಕ್ಕುತ್ತಿದ್ದ ನನಗೆ ಹೇಗೆ ಓದಬೇಕೆಂದು ಹೇಳಿ ಕೊಟ್ಟರು. ಪ್ರತಿ ಪುಸ್ತಕ ಓದಿದ ನಂತರ ಅದರ ಒಳನೋಟಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ವಾಚ್ಯಾರ್ಥಗಳನ್ನು ಬದಿಗಿರಿಸಿ ಸೂಚ್ಯಾರ್ಥಗಳನ್ನು ಸ್ಪರ್ಶಿಸುವ ಸುಖ ಕಲಿಸಿದರು. ಟಿಎಸ್ ಎಲಿಯೆಟ್, ಯೇಟ್ಸ್, ಬರ್ನ್, ಫ್ರಾಸ್ಟ್ ರನ್ನು ಪರಿಚಯಿಸಿದರು, ರಾಮಾಯಣ, ಮಹಾಭಾರತ ನನ್ನಲ್ಲಿ ಬೇರೂರುವಂತೆ ಮಾಡಿದರು......ಎಲ್ಲಕ್ಕಿಂತ ಕುಮಾರವ್ಯಾಸನನ್ನು ಅವರಿಲ್ಲದ ಈ ದಿನಗಳಲ್ಲಿ ನನ್ನನ್ನು ಪೊರೆಯುವಂತೆ ಮಾಡಿದರು. ನಂತರದ ದಿನಗಳಲ್ಲಿ ಪುಸ್ತಕ ಹಿಡಿಯಲಾರದ ಅನಿವಾರ್ಯತೆ ಬಂದಾಗ ' ಬದುಕು ಓದಿಗಿಂತ ದೊಡ್ಡದು' ಎಂದು ಸಂತೈಸಿದರು. ಈ ಬದುಕು ನನ್ನಣ್ಣ, ನನ್ನ ಗುರು ನನಗಿತ್ತ ಭಿಕ್ಷೆ.
ಅಣ್ಣ ನೆನಪಾದಾಗ, ನೆನಪುಗಳು ತೀವ್ರವಾಗಿ ಕಾಡಿದಾಗ ಈಗಲೂ ಆ ಪುಸ್ತಕ ಕೈಗೆತ್ತಿಕೊಳ್ಳುತ್ತೇನೆ, ತಬ್ಬಿಕೊಳ್ಳುತ್ತೇನೆ..ಕುಮಾರವ್ಯಾಸ ನನ್ನಣ್ಣನಾಗಿ ನನ್ನನ್ನು ನೇವರಿಸುತ್ತಾನೆ, ಕಣ್ಣೊರೆಸುತ್ತಾನೆ, ಕಾಯುತ್ತಾನೆ..
No comments:
Post a Comment