ಎಷ್ಟು ವರ್ಷಗಳಾದವು ವೈದೇಹಿಯನ್ನು ಓದಲಾರಂಭಿಸಿ,ನಲವತ್ತು ದಾಟಿದ ಮೇಲೆ ಸುಮ್ಮನೆ ಲೆಕ್ಕ ಹಾಕುತ್ತಾ ಕುಳಿತಿದ್ದೇನೆ.. ಆಗಿನ್ನೂ ಹದಿಹರೆಯ ಮುಟ್ಟಲೋ ಬೇಡವೋ ಎಂದು ಮೀನಮೇಷ ಎಣಿಸುತ್ತಿತ್ತು. ಎಚ್. ಎಸ್. ಮುಕ್ತಾಯಕ್ಕನವರ ಪದ್ಯಗಳು ಆಗ ದಂಡು ದಂಡಾಗಿ ಪ್ರಕಟವಾಗುತ್ತಿತ್ತು. ಅವರ ಎಗ್ಗುಸಿಗ್ಗಿಲ್ಲದೆ ಎಲ್ಲ ಎಲ್ಲವನ್ನೂ ತೆರೆದಿಡುವ ಪದ್ಯಗಳ ಬಗ್ಗೆ ನನಗೆ ವಿಚಿತ್ರ ಆಕರ್ಷಣೆ. ' ಶಿಶಿರದ ಬೋಳು ಮರವಾದ ಈ ಬದುಕಿಗೆ ವಸಂತವಾಗಿ ನೀ ಸುಳಿದಾಗ ಕೊಂಬೆ ಕೊಂಬೆಗೂ ಹೂಗನಸುಗಳು, ನಕ್ಷತ್ರ ಗೊಂಚಲು'. ಇಂತಹ ಸಾಲುಗಳು ಪೂರ್ತಿ ಅರ್ಥವಾಗದಿದ್ದರೂ ಪದಗಳ ಲಾಲಿತ್ಯವೇ ಓದಿಸಿಕೊಳ್ಳುತ್ತಿತ್ತು. ಇಂತಹ ರೊಮ್ಯಾಂಟಿಕ್ ಮುಕ್ತಾಯಕ್ಕ ಯಾವಾಗ ನನ್ನನ್ನು ತೊರೆದು ವೈದೇಹಿ ಆವರಿಸಿ ಕೊಂಡರೋ ನೆನಪಾಗುತ್ತಿಲ್ಲ. ನರಸಿಂಹ ಸ್ವಾಮಿಯವರ ಗಂಡಿನ ಒಳ್ಳೆಯತನದ ಗುಂಗನ್ನು ನನ್ನೆದೆಯಲ್ಲಿ ಉಳಿಸಿಯೂ ಸ್ತ್ರೀವಾದ ಮೊಳೆಯುವಂತೆ ಮಾಡಿದ್ದು ವೈದೇಹಿ.
ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅವರ ಪದ್ಯಗಳಿಂದಾರಂಭಿಸಿ ನಾನೂ, ನನ್ನ ಸ್ತ್ರೀ ವಾದವೂ, ವೈದೇಹಿಯೂ ಬೆಳೆಯುತ್ತಲೇ ಬಂದಿದ್ದೇವೆ. ಅವರನ್ನು ಓದುತ್ತಾ ನಾನೂ ಮಾಗಿದ್ದೇನೆ, ನನ್ನಂತಹವರಿಗೆ ಓದಿಸುತ್ತಾ ಅವರೂ. ಸ್ತ್ರೀ ವಾದವೆನ್ನುವುದು ಅವರವರ ಅನುಭವಗಳ ಆಧಾರದ ಮೇಲೆ ರೂಪುಗೊಳ್ಳುತ್ತದೆಂಬ ನನ್ನ ನಂಬಿಕೆ ವೈದೇಹಿ ಕೊಟ್ಟ ನೋಟ. ನಮಗೆ ಬೇಕಿರುವುದು ಸ್ವಾತಂತ್ರ್ಯ, ಸ್ವೇಚ್ಚೆಯಲ್ಲ ಎಂಬ ತತ್ವವನ್ನು ಇಂದಿನ ಎಷ್ಟೋ ಸ್ತ್ರೀ ವಾದಿಗಳು ಅರ್ಥ ಮಾಡಿಕೊಳ್ಳದೆ ಪುರುಷ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವ ಹೊತ್ತಿನಲ್ಲಿ ವೈದೇಹಿ ನನಗೆ ಪ್ರಸ್ತುತವಾಗುತ್ತಾರೆ.
ಇಂದು ನಮಗೆ ನಿಜವಾಗಿಯೂ ಬೇಕಾಗಿರುವುದಾದರೂ ಏನು? ನನ್ನಿಷ್ಟ ಬಂದಂತೆ ನನ್ನ ದೇಹವನ್ನು ಅತ್ಯಾಧುನಿಕವಾಗಿ ಕಾಣುವಂತೆ ಪರಿವರ್ತಿಸಿಕೊಳ್ಳವುದಾ? ಆರ್ಥಿಕ ಸ್ವಾತಂತ್ರ್ಯವಾ? ಸಾಮಾಜಿಕ ಸ್ವಾತಂತ್ರ್ಯವಾ? ಬೌದ್ಧಿಕ ಸ್ವಾತಂತ್ರ್ಯವಾ? ಲೈಂಗಿಕ ಸ್ವಾತಂತ್ರ್ಯವಾ? ಧಾರ್ಮಿಕ ಸ್ವಾತಂತ್ರ್ಯವಾ? ನನಗೆ ಬೇಕಾದ ಸ್ವಾತಂತ್ರ್ಯ ಇವೆಲ್ಲವನ್ನೂ ಒಳಗೊಂಡಿದ್ದು ಮತ್ತು ಇವೆಲ್ಲವನ್ನೂ ಮೀರಿದ್ದು. ನಾನು ಕೇಳುವ ಆರ್ಥಿಕ ಸ್ವಾತಂತ್ರ್ಯ ಹಣಕಾಸಿನ ದುಂದುವೆಚ್ಚವಲ್ಲ, ಹಣಕಾಸಿನ ಸರಿಯಾದ ನಿರ್ವಹಣೆ, ಅದನ್ನು ನಾನೂ ಮಾಡಬಲ್ಲೆ, ನನ್ನಿಂದ ಸಾಧ್ಯ ಎಂಬ ವಿಶ್ವಾಸ ನನ್ನ ಬಗ್ಗೆ ಅವನಿಗಿರಬೇಕು. ನಾನು ಕೇಳುವ ಸಾಮಾಜಿಕ ಸ್ವಾತಂತ್ರ್ಯ ಒಬ್ಬ ಅತ್ಯಾಚಾರವಾದ ಹುಡುಗಿಯ ಬಗ್ಗೆ ಸಮಾಜ ನಡೆದು ಕೊಳ್ಳುವ ರೀತಿಯ ಬದಲಾವಣೆ. ಅವಳನ್ನು ಉದ್ಧರಿಸುತ್ತೇನೆ ಎಂದು ಬರುವ ಗಂಡುಗಳಿಗೆ ಅವಳು ಕೆಟ್ಟೇ ಇಲ್ಲ ಎಂಬುದು ಅರ್ಥವಾಗಬೇಕು. ಅವಳ ಮೇಲಾದ ಖಾಸಗಿ ಧಾಳಿ ಅವಳ ಮೈಮನಸ್ಸನ್ನು ಕುಗ್ಗಿಸಿದ್ದಾಗ ಅದೊಂದು ಅಪಘಾತವಷ್ಟೇ ಧೈರ್ಯ ತುಂಬುವ, ಅನವಶ್ಯಕ ಸಾಂತ್ವಾನ ನೀಡದ ಸ್ವಾತಂತ್ರ್ಯ ನನಗೆ ಬೇಕು. ಗಂಡನ್ನು ಧಿಕ್ಕರಿಸಿ ದೂರೀಕರಿಸಿ ಇದಕ್ಕೆಲ್ಲ ಇವನೇ ಕಾರಣ ಎನ್ನುವ ಸ್ತ್ರೀ ವಾದ ನನಗೆ ಬೇಡ, ನನಗೆ ಬೇಕಾದದ್ದು ಅರ್ಧನಾರೀಶ್ವರ ತತ್ವ. ಒಮ್ಮೆ ನೀ ನನ್ನನ್ನು ಗೆಲ್ಲಬಿಟ್ಟರೆ ನಿನ್ನನ್ನೂ ನಾನು ಸೋಲಲು ಬಿಡುವುದಿಲ್ಲ ಎಂಬ ತತ್ವ ನನ್ನದು.
ಈ ಹಕ್ಕುಗಳು ...ನಾನು ಕೇಳುವ ಈ ಹಕ್ಕುಗಳೆಂಬ ಹಕ್ಕುಗಳು ನೀ ಕೊಟ್ಟರಷ್ಟೇ ಸಾಲದು, ನಾನು ನನ್ನ ಜವಾಬ್ದಾರಿ, ಹೊಣೆ ಮತ್ತು ಬಾಧ್ಯತೆಗಳನ್ನು ನಿರ್ವಹಿಸಿ ಇವುಗಳನ್ನು ಗಳಿಸಿಕೊಳ್ಳಬೇಕು ಮತ್ತು ಹೀಗೆ ಗಳಿಸಿಕೊಂಡ ಹಕ್ಕುಗಳಷ್ಟೇ ಪ್ರಬಲವಾಗಿ ಉಳಿಯುವುದು ಎಂಬ ಸತ್ಯ ಇಂದಿನ ಸ್ತ್ರೀ ವಾದಿಗಳಿಗೆ ಅರಿವಾಗಬೇಕು. ಹಾಗೆ ಗಳಿಸಿಕೊಳ್ಳದೆ ಬಂದ ಹಕ್ಕು ದಾನಕ್ಕೆ ಬಂದಂತಿದ್ದು ಬಹುಬೇಗ ಶಿಥಿಲವಾಗಿ ಪತನಗೊಳ್ಳುವುದೆಂಬ ಎಚ್ಚರಿಕೆಯೂ ಇರಬೇಕು. ಇದೇ ಕಾರಣಕ್ಕೆ ದೀಪಿಕಾ ಪಡುಕೋಣೆಯ "ಮೈ ಚಾಯ್ಸ್" ಸ್ವೈರವಾಗುತ್ತದೆ. ಅಂತಹ ಹೆಣ್ಣನ್ನು ಸಮಾಜ ಬಹು ಬೇಗ ಮುಗಿಸುತ್ತದೆ. ಅವರಿಗೆ ಸ್ವರಕ್ಷಣೆ, ಪರರಕ್ಷಣೆ ಎರಡೂ ಗೊತ್ತಿರುವುದಿಲ್ಲ. ನಿರ್ವಹಿಸುವ ಶಕ್ತಿಯೂ ಇರುವುದಿಲ್ಲ. ವ್ಯಕ್ತಿ ಮಟ್ಟದಲ್ಲಿ ಬದಲಾವಣೆಯಾಗದೇ ಬರೀ ಸ್ತ್ರೀವಾದಕ್ಕೆ ಕಟ್ಟುಬಿದ್ದರೆ ಏನೂ ಪ್ರಯೋಜನವಿಲ್ಲ. ಅದು ಸ್ತ್ರೀ ವಾದವನ್ನು ಆಳಕ್ಕಿಳಿಸುತ್ತದಯೇ ಹೊರತು ಸ್ತ್ರೀ ವಾದದ ಎತ್ತರವನ್ನು ತಲುಪುವುದೇ ಇಲ್ಲ.
ಈ ಸ್ತ್ರೀವಾದ ನನ್ನಲ್ಲಿ ರೂಪುಗೊಳ್ಳಲು ಬಹುಮಟ್ಟಿಗೆ ಕಾರಣರಾದವರು ವೈದೇಹಿ. ವೈದೇಹಿಯವರ ಪ್ರಖ್ಯಾತ ಕಥೆ ಅಕ್ಕುವಿನ ಕಥೆಯಲ್ಲಿ ಅಕ್ಕು ಅನುಭವಿಸುತ್ತಿರುವ ನೋವುಗಳು ಆಕ್ರೋಶಗಳಾಗಿ ಹೊರಹೊಮ್ಮುತ್ತವೆ. ಕೈಯಲ್ಲಿ ಟುವಾಲು ಹಿಡಿದು ನಡೆಯುವ ಅಕ್ಕು ಗಂಡಾಗ ಬಯಸುತ್ತಾಳಾ ಎಂಬ ಗುಮಾನಿಯನ್ನು ಹುಟ್ಟು ಹಾಕುತ್ತದೆ. ಆದರೆ ಅವಳನ್ನು ಶೋಷಿಸುತ್ತಿರುವವರು ಬರೀ ಪುರುಷರಲ್ಲ, ಸ್ತ್ರೀಯರೂ ಇದ್ದಾರೆ. ದೊಡ್ಡತ್ತೆಯ ನಂಜಿನ ಕುಹಕದ ನುಡಿಗಳು ಸ್ತ್ರೀವಾದದ ಮತ್ತೊಂದು ಮಜಲನ್ನು ತೋರಿಸುತ್ತದೆ. ಅಕ್ಕು ಬಾಣಂತಿಯೆಂದು ನಟಿಸುತ್ತಿದ್ದಾಗ ಎಗ್ಗಿಲ್ಲದೆ ಆಡುವ ಹಡೆ ಮಾತು, ನಂತರ ಅದರ ನೆನಪೇ ಇಲ್ಲದಂತೆ ಮಡಿಯೆಂಬ ತೋರುಗಾಣಿಕೆ ಸ್ತ್ರೀ ವಾದದ ಪೊಳ್ಳುತನದತ್ತ ಬೆಟ್ಟು ಮಾಡುತ್ತದೆ. ಅಮ್ಮಚ್ಚಿಯೆಂಬ ನೆನಪಿನಲ್ಲಿ ಕೂಡ ಅಮ್ಮಚ್ಚಿ ಪ್ರೀತಿಸಿದವನನ್ನು ಮದುವೆಯಾಗದಿರಲು ವೆಂಕಪ್ಪಯ್ಯನಷ್ಟೇ ಸೀತಮ್ಮ ಸಹ ಕಾರಣಳಾಗುತ್ತಾಳೆ. ತನ್ನ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ವೆಂಕಪ್ಪಯ್ಯನನ್ನು ದೂರ ಮಾಡಿ ಮಗಳನ್ನು ರಕ್ಷಿಸಿ ಕೊಳ್ಳುವ ಯಾವ ಪ್ರಯತ್ನವೂ ಕಥೆಯಲ್ಲಿ ನಮಗೆ ತೋರಿ ಬರುವುದಿಲ್ಲ. ಒಂದು ದಿನದ ಅತ್ಯಾಚಾರವನ್ನೇ ಸಹಿಸದ ಅಮ್ಮಚ್ಚಿ ಅನುದಿನದ ಅತ್ಯಾಚಾರಕ್ಕೆಮದುವೆಯೆಂಬ ಚೌಕಟ್ಟಿನಲ್ಲಿ ತನ್ನನ್ನು ಒಡ್ಡಿಕೊಳ್ಳುವ ಪರಿ ದಿಗಿಲು ಹುಟ್ಟಿಸುತ್ತದೆ. ತಿರುಪತಿಯಿಂದ ಒಬ್ಬಳೇ ವಾಪಸ್ ಬರುವ ಅಮ್ಮಚ್ಚಿಯ ಗಂಡ ಏನಾದ ಎಂಬ ಪ್ರಶ್ನೆಗಿಂತ ಅವಳು ವಾಪಸ್ ಬಂದದ್ದೇ ಓದುಗನಿಗೂ ಹಿತವಾಗಿ ಬಿಡುತ್ತದೆ. ಅವಲಂಬಿತರು ಕಥೆಯ ಶಾರದೆಯ ಕ್ರೌರ್ಯ ನಮ್ಮನ್ನು ನಡುಗಿಸುವ ಹೊತ್ತಿನಲ್ಲೇ ಕ್ರೌಂಚ ಪಕ್ಷಿಯ ವಿಶಾಖ ಬೆನ್ ನಮ್ಮ ಮೈದಡವುತ್ತಾರೆ. ಸ್ತ್ರೀ ವಾದಕ್ಕಂಟಿಕೊಂಡೂ ಅಂಟದಷ್ಟು ಸೂಕ್ಷ್ಮತೆ, ಕ್ರೌರ್ಯಕ್ಕೆ ಲಿಂಗಬೇಧವಿಲ್ಲವೆಂಬ ಬದ್ದತೆ ಅವರ ಗದ್ಯ, ಪದ್ಯಗಳೆರಡರಲ್ಲಿಯೂ ವ್ಯಕ್ತವಾಗುತ್ತದೆ.
ಅವರ "ಶಿವನ ಮೀಸುವ ಹಾಡು" ಕವನದಲ್ಲಿ ನೋಡಿ ಅಲ್ಲಿ ಗೌರಿ ಶಿವನಿಗೆ ಅಭ್ಯಂಗ ಮಾಡಿಸುತ್ತಾಳೆ. ಪಾದ ಒತ್ತುವ ನೆವದಲ್ಲಿ ಶಿವ ಯಾವ ಬೀದಿಗೆ ಹೋಗಿದ್ದಾನೆಂದುಧೂಳಿನಲ್ಲೆ ಪತ್ತೆ ಹಚ್ಚುವ ಚಾಣಾಕ್ಷೆ. ಮುಗಿಯಿತೇ ಬೇಟೆ ಎಂಬ ಸಣ್ಣ ಕೊಂಕು ನುಡಿಯುತ್ತಾ ಮೂಜಗದಲ್ಲೋಡಾಡಿದ ನಟರಾಜನನ್ನು ಸ್ನಾನಕ್ಕೆ ಕರೆಯುತ್ತಾಳೆ.
'ಇದೋ ಈ ತಂಬಿಗೆ ನೀರು ಗಂಗೆಯಾವತಾರಕ್ಕೆ
ಇದು ಇಗೋ ಆ ಮಣಿಕರ್ಣಿಕೆಗೆ
ಮಿಂದ ನದಿ ನೆನಪಿಗೆ ಒಂದೊಂದು ಬಿಂದಿಗೆ ನೀರು
ಕಡೆಯದಿಗೊ ನನ್ನ ಅನುದಿನದ ಬಡ ಕನಲು
ಎಂದಾಗ ನೀರೊಳಗೆ ಗೌರಿ ಕಂಬನಿ ಬಿಂದು
ಮಿಸಕ್ಕನೆ ಬೆರೆತು ಬಿಸಿಯಾಗಲು'
ಈಗ ಶಿವ ಅವಳ ಬೆವರುತ್ತಾನೆ. ನಿನ್ನ ಬಿಟ್ಟರೆ ನಾನು ಶುದ್ಧ ಬೈರಾಗಿ ಎಂದು ನಂಬಿಸ ಹೋಗುತ್ತಾನೆ. ಈ ಮಾತಿಗೆ ನಾನೆಷ್ಟನೆಯವಳೋ ನಾರಿ ಎಂದು ಮೃದುವಾಗಿ ಚಿವುಟಿ ಮೀಸುತ್ತಾಳೆ. ಜಾಣೆ ಜಗಳವಾಡುವುದಿಲ್ಲ, ಮಯ್ಯೊರೆಸಿ, ತಂಬಾಲು ಕುಡಿಸಿ ತೊಡೆಮೆತ್ತೆಯ ಮೇಲೆ ಮಲಗಿಸಿ ರೇಶಿಮೆಯ ನುಡಿಯ ಅಡಿಯಲ್ಲಿ ವ್ಯಂಗ್ಯವಾಡುತ್ತಾಳೆ. 'ಶಿವ ಶಿವಾ ಎಲ್ಲ ನದಿಗಳ ನೆನೆದು ಮಲಗು ದೇವ!'
ಮಿಂದು ಮತ್ತೆ ಮಡಿ ನಾರುಟ್ಟ ಶಿವ ಮತ್ತೆ ಹೊರಡುತ್ತಾನೆ. ಎಲ್ಲಿಗೆ ಹೋದರೂ ಇಲ್ಲಿಗೆ ಬಂದೇ ಬರುವನೆಂಬ ಆರ್ದ್ರ ಗರ್ವದ ಹುಡುಗಿ ನಮ್ಮ ಗೌರಿ. ಎಷ್ಟು ಸಹನೆ ಅವಳಿಗೆ. ಆ ಭಾಷೆ, ಒನಪು, ಲಾಲಿತ್ಯ ಎಲ್ಲ ಎಲ್ಲವೂ ತಟ್ಟಿದರೂ ಏನು ಹೇಳ ಹೊರಟಿದ್ದಾರೆ ವೈದೇಹಿ? ಹೆಣ್ನಿರಬೇಕಾದ್ದೇ ಹೀಗೆ ಎಂದಾ? ಶಿವನ ರೀತಿಯನ್ನು ಅವಳು ಒಪ್ಪಿಕೊಂಡಿದ್ದಾಳೆ ಎಂದಾ? ಸೂಚ್ಯವಾಗಿ ಗಂಡಿನ ಮನಸ್ಥಿತಿಯನ್ನೂ, ಜೊತೆಜೊತೆಗೆ ಹೆಣ್ಣಿನ ಪ್ರಶ್ನಿಸಲಾಗದ ಅಸಹಾಯಕತೆಯ ಬಗ್ಗೆ ಹೇಳುತ್ತಿದ್ದಾರಾ? ಪ್ರಶ್ನಿಸಿದರೆ ಜಗಳವಾಡಿದರೆ ಮತ್ತೆಲ್ಲಿ ಬಾರನೋ ಎಂಬ ಸಂಕಟಕ್ಕೆ ಮಿಸುಕಾಡದೆ ತಲ್ಲಣಗಳನ್ನು ಅನಾದಿ ಕಾಲದಿಂದ ನುಂಗುತ್ತಿರುವ ಹೆಣ್ಣುಗಳನ್ನು ಗೌರಿಯೊಂದಿಗೆ ಸಮೀಕರಿಸುತ್ತಿದ್ದಾರಾ? ಅದಲ್ಲವನ್ನ್ನು ನಿಮ್ಮ ಓದಿಗೆ ಬಿಟ್ಟು ಬಿಡುತ್ತಾರೆ ವೈದೇಹಿ.
ಪತಿ ಊರು ಸುತ್ತಿ ಬಂದರೂ ಪ್ರಶ್ನಿಸದ ವೈದೇಹಿಯ ಕಾವ್ಯದ ನಾಯಕಿ ತನ್ನ ಚೀಲದ ಒಳಗೆ ಕೈಹಾಕುವ ಗಂಡನ್ನು ಹೇಗೆ ತರಾಟೆಗೆ ತೆಗೆದು ಕೊಳ್ಳುತ್ತಾಳೆ ನೋಡಿ.
" ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು
ಎಂದಿಗೂ ಉಚಿತವಲ್ಲ ಪುರುಷರೇ
ವ್ಯಾನಿಟಿ ಹೆಸರಲ್ಲಿ ಏನೆಲ್ಲ ಇರಬಹುದು
ಬಯಲು ಮಾಡುವೆ"
ಅಲ್ಲೇನಿದೆ ಎಂದು ಇಣುಕುತ್ತೀಯ ನನ್ನನ್ನೇ ಕೇಳು ಹೇಳುವೆ ಎಂಬ ರೊಚ್ಚು ಅವಳಿಗೆ. ಕನ್ನಡಿ, ಕಾಡಿಗೆ, ಪೆನ್ನು, ಪೌಡೆರು, ಕ್ಲಿಪ್ಪು, ಸೆಂಟು, ಸೂಜಿ, ದಾರ, ಹುಣಸೆ ಬೀಜ, ಶುಂಟಿ ಪೆಪ್ಪರ್ಮೆಂಟು, ಕಂಫಿಟ್ಟು. ಹೀಗೆ ಚೀಲದಲ್ಲಿರುವುದೆಲ್ಲವನ್ನು ಪಟ್ಟಿ ಮಾಡುತ್ತಾಳೆ.
ಅರೆ ಬರೆ ತೆರೆದಿಟ್ಟ ಕವನ ತೆವಳುತ್ತಲಿರಬಹುದು
ಮುಗಿಯಲಾರದ ಕತ್ತಲಲ್ಲಿ
ಒಂದು ಬಿಸುಸುಯ್ಯಲು ಕರವಸ್ತ್ರದಲಿ ಅಡಗಿ
ಗುಸುಗುಟ್ಟುತಿರಬಹುದು ಗಂಟಲಲ್ಲೇ
ವಿಳಾಸ ಹೊತ್ತಿರುವ ಖಾಲಿ ಲಕೋಟೆಯಲಿ
ಕೆಂಪು ಸೂರ್ಯನ ಚಿತ್ರ ಮಾತ್ರವಿರಬಹುದು.
ಬಂದ ಪತ್ರದ ಉಸಿರು ಒಗಟಾಗಿ ಇರಬಹುದು
ಚಂದದಕ್ಷರದ ಬಂಧದಲ್ಲಿ
ಚಂದದಕ್ಷರ ಸುತ್ತ ನತ್ತು ಮುತ್ತಿನ ಚಿತ್ತು
ಉತ್ಕಂಠ ರಾಗದ ಮುಟ್ಟು ಇರಬಹುದು
ಕರಿ ಮೀಸೆಯಡಿಯಲ್ಲಿ ಮಿರಿಮಿಂಚು ನಗೆಯಲ್ಲಿ
ಹೆಸರಿಲ್ಲ ಫೋಟೋ ಕೂಡ ಇರಬಹುದು.
ಬಾಲ್ಯ ಯೌವ್ವನ ವೃದ್ಧಾಪ್ಯ ನೆರಳುಗಳು
ಸೇರಿಕೊಂಡಿರಬಹುದು ಆ ಕೋಶದಲ್ಲಿ
ಗ್ರಾಹಸ್ಥ ವೇಶ್ಯಾ ಅಭಿಸಾರ ವಾಸನೆಗಳು
ಧರ್ಮ ಲಕ್ಷಣ ಅವಸ್ಥಾಂತರ ವೇಷದಲ್ಲಿ"
ಈ ಸಾಲುಗಳ ತೀವ್ರತೆಯನ್ನು ಗಮನಿಸಿ. ಯಾವ ಭಾವನೆಗಳೂ ನನ್ನಲ್ಲಿರಬಹುದು, ಅದು ನಿನಗಾರ್ಥವಾಗದಿರಬಹುದು ಎಂದು ಸೆಡ್ಡು ಹೊಡೆಯುತ್ತಾರೆ. ಚೀಲದೊಳಗೆ ಮನಸ್ಸಿನ ಲೋಕವನ್ನೂ ನಿಮಗೆಟುಕುವಂತೆ ಇಟ್ಟು ಬಿಡುತ್ತೇವೆಯೇ ನಾವು ಎಂದು ಲೇವಡಿ ಮಾಡುತ್ತಾರೆ. ತಪ್ಪು ಸಮೀಕರಣವನ್ನು ತೂಗದಿರಿ ವ್ಯರ್ಥವಾಗಿ ಕೈ ನೋಯುತ್ತದೆ ಎಂದು ವ್ಯಂಗ್ಯವಾಡುತ್ತಾರೆ. ಮನಸ್ಸಿನೊಳಗೆ ಇಣುಕದ ನೀವು ಚೀಲದೊಳಗೂ ಇಣುಕದಿರಿ ಎಂದು ಎಚ್ಚರಿಕೆ ನೀಡುತ್ತಾರೆ.
ಎರಡೂ ಪದ್ಯಗಳಲ್ಲಿರುವ ಸ್ತ್ರೀ ವಾದ ಒಂದರಲ್ಲಿ ಸೂಚ್ಯವಾಗಿ, ಮತ್ತೊಂದರಲ್ಲಿ ವಾಚ್ಯವಾಗಿ ಮನಮುಟ್ಟುತ್ತದೆ.
ಒಬ್ಬ ಹಿಂದುಸ್ತಾನಿ ಗಾಯಕನಿಗೆ ತನ್ನ ತಾರಸ್ಥಾಯಿ, ಮಂದ್ರದ ಮಿತಿಗಳು ಚೆನ್ನಾಗಿ ತಿಳಿದಿರಬೇಕು. ( ಹಿಂದೂಸ್ತಾನಿಯನ್ನೇ ನಾನೇಕೆ ತೆಗೆದು ಕೊಳ್ಳುತ್ತಿದ್ದೇನೆ ಎಂದರೆ ಅದು ರಾಗ ಪ್ರಧಾನ ಎಂದಷ್ಟೇ) . ಎಷ್ಟು ಎತ್ತರಕ್ಕೆ ತನ್ನ ಕಂಠವನ್ನು ವಿಸ್ತರಿಸಬಹುದು...ಎಷ್ಟು ತಗ್ಗಿಸಿದರೆ ತನ್ನ ದನಿ ಕೇಳಬಹುದು ..ಇದು ಸ್ಪಷ್ಟವಾಗಿ ಅರಿವಿದ್ದವ ಮಾತ್ರ ಆತ ಜನರನ್ನು ಮುಟ್ಟಬಲ್ಲ. ಹದ ಮೀರಿದೆತ್ತರ ಕೀರಲಾಗಿ ಕರ್ಕಶವಾಗುತ್ತದೆ. ಕೆಳಗಿಳಿಯುವ ಮಂದ್ರ ಕೇಳಿಸದೆ ಹೋಗುವ ಅಪಾಯವನ್ನು ಸೃಷ್ಟಿಸುತ್ತದೆ. ಇವೆರಡೂ ಶತ್ರುಗಳು ಗಾಯಕನನ್ನು ಮುಗಿಸಿಬಿಡುತ್ತವೆ. ಸ್ತ್ರೀ ವಾದವೂ ಅಷ್ಟೇ. ಅದರ ಮಿತಿಗಳ ಅರಿವಿದ್ದಲ್ಲಿ ಮಾತ್ರ ಅದು ಬದುಕುತ್ತದೆ , ಬಾಳುತ್ತದೆ. ಇಲ್ಲವೆಂದರೆ ಸ್ತ್ರೀಯನ್ನೇ ಮುಗಿಸಿಬಿಡುತ್ತವೆ, " ಮೈ ಚಾಯ್ಸ್"ನಂತೆ.
ವೈದೇಹಿಯವರ ಸಾಹಿತ್ಯದಲ್ಲಿ ಈ ಸ್ತ್ರೀ ವಾದ ತಾನೇರುವ ಎತ್ತರ ತಲುಪದಿರಬಹುದು. ಧ್ವನಿ ಇನ್ನೂ ಸ್ವಲ್ಪ ಏರಿಸಬಹುದಿತ್ತು ಅನ್ನಿಸಲೂ ಬಹುದು. ಅವರ ಮಂದ್ರ ಮಾತ್ರ ಪ್ರತಿ ಸಾಲಿನಲ್ಲೂ ಪ್ರತಿ ಪದದಲ್ಲೂ ಝೇಂಕಾರ ಹೊಮ್ಮಿಸುತ್ತಲೆ ಇರುತ್ತದೆ, ಓದುಗನನ್ನು ಬಿಡದೆ ಕಾಡುತ್ತಲೇ ಇರುತ್ತದೆ.
No comments:
Post a Comment