Wednesday, 12 April 2017

ವಸಂತ ಗಾನ

ಹೊಂಗೆ ಚಿಗುರುಗಳನ್ನು ವಸಂತ ಅರಳಿಸುತ್ತಿದ್ದ ಕೆಲಸದಲ್ಲಿ ತಲ್ಲೀನನಾಗಿದ್ದಾಗಲೇ ಪ್ರತಿವರ್ಷಯುಗಾದಿಯಂದು ಆ ಹಾಡು ಕೇಳಿ ಬರುತ್ತಿತ್ತು, " ಯುಗಯುಗಾದಿ ಕಳೆದರೂ " . ನಾವೊಂದಿಷ್ಟುಹುಡುಗರು ರಜೆ ಬಂದ ಸಂಭ್ರಮದಲ್ಲಿ ಮನೆಯ ಮುಂದಿದ್ದ ಹೊಂಗೆ ಮರಗಳ ಕೆಳಗೆ ಭೃಂಗದ ಸಂಗೀತಕೇಳುತ್ತಾ , ಕೆಳಗೆ ಬಿದ್ದ ಕೆಲವು ಹೂಗಳನ್ನು ಗಮನಿಸದೆ ಅದರ ಮೇಲೆ ಆಟವಾಡುತ್ತಿದ್ದ ದಿನಗಳವು. ಆಹಾಡು, ಹೊಂಗೆ ಮರ, ಹೂವು ಇಲ್ಲದ ಯುಗಾದಿಯನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲವಷ್ಟೆಅಲ್ಲ , ಎಲ್ಲರ ಯುಗಾದಿಯೂ ಹೀಗೆ ಇರುತ್ತೆ ಎಂದು ದೃಢವಾಗಿ ನಂಬಿದ ಕಾಲ ಅದು. ಅವಳಬದುಕಿನಲ್ಲಿ ಅವನು ವಸಂತದಂತೆ ಬಂದ ... ಅವಳೊಬ್ಬಳಿದ್ದಳು ಅವನ ಬಾಳಿನಲ್ಲಿ  ವಸಂತದಚಿಗುರೊಡೆಸಲು .. ಹೀಗಿದ್ದ ವಾಕ್ಯಗಳು ಅರ್ಥವಾಗುವ ಮೊದಲೇ ಮಲೆನಾಡಿಗೆ ಕಾಲಿಟ್ಟಾಗಿತ್ತು

ಬೇಲಿ ಕಟ್ಟಿಕೊಂಡಷ್ಟೂ ಉದ್ದದ ಜಾಗ .. ಭರ್ರೂ ಎಂದು ಸುರಿಯುವ ಮಳೆ .. ಗಿಡ ನೆಟ್ಟಷ್ಟೂ ಕೈಸೋಲದು, ಚಿಗುರೊಡೆದಷ್ಟೂ ಕಣ್ಮನಕ್ಕೆ ಸಾಲದು . ಹೀಗಿರುವಾಗೊಮ್ಮೆ ಚಳಿಗಾಲದಲ್ಲಿ ಗಿಡ ನೆಡಲುಹೋದಾಗ ಅಮ್ಮ ತಡೆದಿದ್ದರು. .' ಈಗ ನೀರುಣಿಸಿದರೂ ಗಿಡ ಹುಟ್ಟುವುದಿಲ್ಲ.. ಹವಾಮಾನಕ್ಕೆಸರಿಯಾಗಿ ಹಾಕಬೇಕು. ಮಳೆಗಾಲದ ಶುರುವಿನಲ್ಲಿ ನೆಟ್ಟರೆ ಸಾಕು' .. ಗಿಡ ಚಿಗುರೊಡೆಯಲುಮಳೆಗಾಲ ಬೇಕೆಂದು ಹವೆ ಪೂರಕವಾಗಿರಬೇಕೆಂದು ಅರಿವಾದ ಕ್ಷಣವದು. ಮಳೆಗಾಲದ ಆರಂಭದಲ್ಲಿಗಿಡ ನೆಡುವುದು, ಹೂ ಕುಯ್ದು ಉದ್ದ ಜಡೆಗೆ ಮುಡಿಯುವ ಸಂಭ್ರಮಗಳು...

ಹಾಗೊಂದು ಪುಳಕದ ವಸಂತ ಅರಿವಿಗೆ ಬಂದಿದ್ದು ಯಾವತ್ತು? ಚಳಿ, ಚಿಗುರು, ಬಿಸಿಲು, ಮಳೆ ,ಹೂವು, ಹಣ್ಣು ಎಲ್ಲಎಲ್ಲವೂ ಅತೀ ಸಹಜವೆಂಬಂತೆ ನನ್ನ ಗಮನಕ್ಕೇ ಬಾರದಂತೆ ತಮ್ಮ ಪಾಡಿಗೆ ತಾವುಸಂಭವಿಸುತ್ತಿದ್ದಾಗಲೇ ಇದೊಂದು ಸಂಭ್ರಮದಂತೆ ಕಂಡಿದ್ದು, ಮೈಗಡರಿದ್ದು, ಮನಕ್ಕೆ ತಾಕಿದ್ದು ..ಯಾವತ್ತು ? ಹಸಿರು ಕಾಣದ ಊರಿಂದ ಮಲೆನಾಡಿಗೆ ಹೆಜ್ಜೆಯಿಟ್ಟ ಗಳಿಗೆಯಲ್ಲಾ? ಹಾಗೆ ಮಲೆನಾಡಿಗೆಕಾಲಿಟ್ಟ ಸಮಯ ಹದಿಹರೆಯಕ್ಕೆ ಹೆಜ್ಜೆಯಿಡುತ್ತಿದ್ದ ಹೊತ್ತೇ ಆಗಿದ್ದರಿಂದಲಾ ? ಬೆಳಗು ಶುರುವಾಗುವಹೊತ್ತಲ್ಲಿ  ಸುತ್ತಲಿನ ಹೊಂಬಣ್ಣದ ರಂಗು ಬಳಿದುಕೊಂಡ ಹಸಿರು ಚಿಗುರುಗಳನ್ನು ನೋಡುತ್ತಾಪರೀಕ್ಷೆಯಲ್ಲಿ ಬರೆಯಬೇಕಾದ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ ಬಸ್ಸು ಹಿಡಿಯಲು ಒಂದೂವರೆಮೈಲು ನಡೆಯುತ್ತಿದ್ದ ಹೊತ್ತಲ್ಲಾ ? 
ವಸಂತ ನನಗಿಷ್ಟವಾಗಲು ಬಹು ಮುಖ್ಯ ಕಾರಣ ಮಲ್ಲಿಗೆ. ಚಿಗುರೊಡೆದ ಮಲ್ಲಿಗೆಯ ಬಳ್ಳಿಗೆ ಚಪ್ಪರ ಕಟ್ಟಿಘಮ್ಮೆನ್ನವ ಮೊಗ್ಗು ಪೋಣಿಸಿ ದಂಡೆ ಕಟ್ಟಿಟ್ಟು.. ತಲೆಗೆ ರಾಶಿ ಹರಳೆಣ್ಣೆ ಪೊಳಚಿಕೊಂಡು  ಸೀಗೆಹಿಟ್ಟಿನಲ್ಲಿಅದರ ಜಿಡ್ಡಿನ ಸೊಕ್ಕು ಮುರಿದ ಮೇಲೆ , ಇನ್ನೂ ಕಡುಹಸಿರು ಬಣ್ಣಕ್ಕೆ ತಿರುಗದ ಮತ್ತಿಸೊಪ್ಪಿನ ಚಿಗುರುನೆನೆಸಿ ತಯಾರಿಸಿದ ಗುಳ ಬಳಸಿ ತೊಳೆವ ಸಂಭ್ರಮ. ಮಿಂದು ಮಿರುಗುವ  ಕೂದಲನ್ನು ಒಣಗಿಸಿನೀರುಜಡೆ ಹಾಕಿಕೊಂಡು ಮಲ್ಲಿಗೆಯ ದಂಡೆ ಮುಡಿದರೆ ವಸಂತ ನನ್ನ ಕಾಲಡಿ ಬಿದ್ದು ನಕ್ಕ ಲೆಕ್ಕ . ಒದ್ದೆಕೂದಲಿದ್ದಾಗಲೇ ಮಲ್ಲಿಗೆ ಮುಡಿದರೆ ವಾರವಿಡೀ ಘಮ ಹೋಗುವುದಿಲ್ಲ ಎಂದು ನಮ್ಮೂರ ಭಟ್ಟರಹೆಂಡತಿ ಹೇಳುತ್ತಿದ್ದುದು ನಿಜವೆಂಬುದು ಅರಿವಾಗಿದ್ದು ಆಗಲೇ. ವಸಂತವೆಂದರೆ ಸಮೃದ್ಧಿ,ವಸಂತವೆಂದರೆ ಹೊಸತನ, ವಸಂತವೆಂದರೆ ಹರ್ಷ.. ಹೀಗೆಲ್ಲಾ ಏನೇನೊಅಂದುಕೊಳ್ಳುತ್ತ ಒಳಗೊಳಗೇ ಮೊಳಕೆಯೊಡೆಯುತ್ತಿದ್ದ ಚಿಗುರು ಭಾವಗಳಡಿಯಲ್ಲಿಅರಳುತ್ತಿದ್ದಾಗಲೇ  ಬಂದಿದ್ದು ಆ ದಿನ.

ಕನ್ನಡದ ಕ್ಲಾಸು .. ಅವತ್ತು ಯಶೋಧರ ಚರಿತೆಯ ಕುರಿತ ಪಾಠದ ಮಧ್ಯದಲ್ಲಿ ಅವರಾಡಿದ ಮಾತು. "ಎಲ್ಲರ ಬದುಕಿನಲ್ಲಿ ವಯೋಸಹಜವಾಗಿ ವಸಂತ ಬಂದರೆ ಅಮೃತಮತಿಯ ಬದುಕಿನಲ್ಲಿ ಅವಳಜೀವನದ ಮಧ್ಯ ಭಾಗದಲ್ಲಿ ಅಷ್ಟಾವಕ್ರ ವಸಂತವಾಗಿ ಬಂದ" ... ವಸಂತ ಹೀಗೂ ಬಂದೀತೇ  ಅದೂಅಷ್ಟಾವಕ್ರನಂತೆ ಎಂದೆಲ್ಲಾ ಪಿಸುಮಾತುಗಳ ನಡುವೆಯೂ ವಸಂತ ಎಂಬ ಪದ ನನ್ನ ಮನದಾಳಕ್ಕೆಇಳಿದು ಹೋಗಿತ್ತು. ಅಮ್ಮ ಹೇಳಿದ ಮಾತು ಹವಾಮಾನ ಪೂರಕವಾಗಿರಬೇಕು.. ಅದುಚಿಗುರೊಡೆಯಲು ಮಳೆಗಾಲದ ಆರಂಭದ ದಿನಗಳು ಬೇಕು.ಎಂಬ ಮಾತಿಗೆ ಅರ್ಥವೇ ಇಲ್ಲದಂತೆಗಿಡಮರಗಳು ಕುಡಿಯೊಡೆಯುತ್ತವೆ ಎಂದು ಥಟ್ಟನೆ ಹೊಳೆದಿತ್ತು. ನಮ್ಮ ಮೈಒಡೆದು ಎಷ್ಟು ಎಣ್ಣೆಸವರಿದರೂ ತ್ವಚೆ ನಯವಾಗದ ಕಾಲದಲ್ಲಿ , ನೆಲ ಬಿರಿಬಿಟ್ಟು ಧೂಳೇಳುವ ಕಾಲದಲ್ಲಿ, ಹೆಸರಿಗೆ ಒಂದೇಒಂದು ಎಲೆಯೂ ಗಿಡಮರಗಳಲ್ಲಿ ಉಳಿಯದೆ ಮಣ್ಣಾಗುವ ಹೊತ್ತಿನಲ್ಲಿ , ಮಳೆಯ ಸುಳಿವೇ ಇಲ್ಲದಸಮಯದಲ್ಲಿ ಒಣಗಿ ನಿಂತು ಸೌದೆಯಾಗಲಷ್ಟೇ ಲಾಯಕ್ಕು ಎನ್ನುವ ಭಾವನೆ ಹುಟ್ಟುಹಾಕುವಂತಿದ್ದಮರಗಳು ಇದ್ದಕ್ಕಿದ್ದಂತೆ ಬಂಗಾರದ ಬಣ್ಣದ ಚಿಗುರುಗಳನರಳಿಸಿ ತಿಳಿಹಸಿರ ಬಟ್ಟೆಯುಟ್ಟು ನಳನಳಿಸುವಪರಿ ಬೆರಗು ಮೂಡಿಸಿತ್ತು. ಬದುಕಿನಲ್ಲಿ ವಸಂತ ತಂದವನು ಎಂಬ ಮಾತಿನ ಅರ್ಥ ಹೊಳೆದಿತ್ತು.
 ಬದುಕಲ್ಲಿ ಭರವಸೆಗಳೆಲ್ಲವೂ ಹಣ್ಣೆಲೆಗಳಾಗಿ ಬಿದ್ದು ಕೊಳೆಯುವ ಸ್ಥಿತಿ ಬಂದಾಗ, ಬರಡು ಬರಡುದಿನಗಳು ತೆವಳಲೂ ಕಷ್ಟಪಡುವಾಗ, ಬಿಸಿ ಗಾಳಿ ಹೊತ್ತ ಬಿಸಿಲು ಬೇಯಿಸುವ ಹೊತ್ತಲ್ಲಿ , ಹನಿ ನೀರಒರತೆಯೂ ದಕ್ಕದ ಕ್ಷಣಗಳಲ್ಲಿ ಅವನೊಬ್ಬ/ಅವಳೊಬ್ಬಳು ವಸಂತವಾಗಿ ಬಂದು ಸಂಭ್ರಮದಚಿಗುರೊಡೆಸುವ ಪವಾಡ  ... ಬದುಕು ಇದ್ದಕ್ಕಿದ್ದಂತೆ ಬದಲಾಗುವ ವಿಸ್ಮಯ .... ಜೀವನವೇಮುಗಿಯಿತೆಂಬ ಹತಾಶೆಯಲ್ಲಿ ಕೈಚೆಲ್ಲಿದ ಘಳಿಗೆಯಲ್ಲಿ ಮತ್ತೆ ಹೂ ಬಿಟ್ಟು ಭೃಂಗದ ಸಂಗೀತ ಕೇಲಿಗೆತಾವು ನೀಡುವ ಬೆರಗು ... ಹೇಗೆ ಮೂಡುತ್ತವೆ ಇವು .. ಯಾವ ಆಸರೆ ಇಷ್ಟು ಸಡಗರ ಕೊಟ್ಟಿದ್ದು .. ಭಾವನೆಗಳೆಂಬ ಭಾವನೆಗಳನ್ನು ಪಕ್ಕಕ್ಕಿಟ್ಟು ವೈಜ್ಞಾನಿಕ ಕಾರಣವೇನಾದರೂ ಇದ್ದೀತಾ ಇದರಲ್ಲಿ ?

ವಿಜ್ಞಾನದ ಅಧ್ಯಾಪಕರೊಬ್ಬರು ಹೇಳುತ್ತಾ ಹೋದರು .. ಮರಗಿಡಗಳೆಲ್ಲ ಚಳಿಗಾಲದಲ್ಲಿ ಎಲೆಉದುರಿಸಿಕೊಂಡು ಬೋಳಾಗುತ್ತವೆ. ಒಣ ಹವೆ.. ಶುಷ್ಕತೆ .. ಕೆಳಗೆ ಬಿದ್ದು ಒಣಗಿದ ತರಗಲೆಗಳು .. ಇಂಗಿಹೋದ ವಾತಾವರಣದ ಆರ್ದ್ರತೆ.ಉದ್ದನೆಯ ರಾತ್ರಿಗಳು,. ಗಿಡ್ಡ ಹಗಲುಗಳು . ಅಂತಹಾ ಸಮಯದಲ್ಲಿಭೂಮಿಯಿಂದ ದೂರವಿದ್ದ ಸೂರ್ಯ ಹತ್ತಿರವಾಗುತ್ತಾ ಬರುತ್ತಾನೆ.. ದಿನ ಮತ್ತೆ ಉದ್ದವಾಗಲಾರಂಭಿಸುತ್ತದೆ.. ರಾತ್ರಿಗಳು ಗಿಡ್ಡ ಗಿಡ್ಡವಾಗಿ ಉಷ್ಣತೆ ಏರಲಾರಂಭಿಸುತ್ತದೆ. ಬಿಸಿ ತಾಗಿದ ಕೂಡಲೇ ಹೊತ್ತಿ ಉರಿಯುವ ಸ್ಥಿತಿಯಲ್ಲಿತರಗಲೆಗಳ ನಡುವೆ ನಿಂತ ಮರಗಳು... ಭೂಮಿ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಲ್ಲವಾ ? ತನ್ನ ಸಕಲಶಕ್ತಿಯನ್ನೂ ಒಗ್ಗೂಡಿಸಿ ಮರಗಳಿಗೆ ಪೋಷಣೆಯೊದಗಿಸುತ್ತದೆ. ಮರಗಳು ಚಿಗುರೊಡೆದು ಮತ್ತೆ ಹಸಿರು ಮತ್ತೆತಂಪು.. ಮತ್ತೆ ಎಲೆಗಳ ಸವರಿ ಬರುವ ತಂಗಾಳಿ .. ಸೂರ್ಯನ ಪ್ರಕೋಪ ಹೆಚ್ಚಿದರೂ ಅಪಾಯದ ಭಯದಿಂದಭೂಮಿ ಹೊರಬರುತ್ತದೆ. ಚಳಿಗಾಲ ಬರುವಾಗಲೇ ಎಲೆಯುದುರಿಸಿಕೊಳ್ಳಲು  ಗಿಡಮರಗಳಿಗೊಂದು ಸಿಗ್ನಲ್ಕೊಟ್ಟಿರುತ್ತದೆ. ವಸಂತ ಅರಳಿಸುತ್ತದೆ......

ನಾನು ಮಾತು ಮರೆತು ಕೂತಿದ್ದೆ. ಮೇಲೆ ಮೇಲೆ ಯಾವ ಬಾಹ್ಯ ಪೋಷಣೆಯೂ ಇಲ್ಲದೆ ಯಾವಸೂಚನೆಯನ್ನೂ ಕೊಡದೆ ಭೂಮಿ ಇಷ್ಟು ಹೋರಾಟ ನಡೆಸುವುದು ಹೇಗೆ? ಸೊರಗುವುದು ಹೇಗೆ ? ಅರಳುವುದು ಹೇಗೆ ? ಬೆರಗು ತಾಂಡವವಾಡಿತ್ತು.. ಊಹಿಸಲೂ ಆಗದಂತಹಾ ವಿವರಗಳು..

ಅಮೃತಮತಿಯ ಬದುಕಿನಲ್ಲಿ ಅಷ್ಟಾವಕ್ರ ವಸಂತದಂತೆ ಬಂದ ಎಂಬ ಮಾತಿಗೆ ಈಗ ದಕ್ಕಿದ ಅರ್ಥವ್ಯಾಪ್ತಿಯವಿಸ್ತಾರವೇ ಬೇರೆಯಾಗಿತ್ತು. ವಸಂತವೆಂದರೆ ಪುಟ್ಟ ಗಿಡವೊಂದನ್ನು ನೆಟ್ಟು ನೀರುಣಿಸಿ ಚಿಗುರಿಸಿ ಹೊಸ ಜೀವತುಂಬುವುದಲ್ಲ .. ಬೆಳೆದು ನಿಂತ ಮರಗಳಲ್ಲಿ ಪ್ರತಿ ವರ್ಷವೂ ಹೊಸ ಚಿಗುರು, ಹೊಸ ಹೂವು, ಹೊಸಭರವಸೆ...
ಇದೆಲ್ಲವೂ ಗೊತ್ತಿದ್ದೇ ನಮ್ಮವರು ಯುಗದ ಆದಿಯ ಹಬ್ಬವೆಂದು ಕರೆದಿರಬಹುದಾ ಇದನ್ನು? ಮೊದಲಹಬ್ಬವೆಂದು ಕರೆಯುವುದು ಇಷ್ಟು ಅರ್ಥಪೂರ್ಣವಾ ? ಮಾವು ಬೇವಿನ ಚಿಗುರುಗಳ ಸಂಭ್ರಮ ಬದುಕಲ್ಲಿಯೂಬರಲೆಂಬ ಆಶಯ ಅವರದಾಗಿತ್ತಾ? ಇರುವ ಜೀವನವನ್ನು ಒಪ್ಪ ಮಾಡುತ್ತಾ ಪ್ರತಿ ವರ್ಷ ವರ್ಷವೂ ಹೊಸತನತುಂಬುವ ಸಂಕೇತವಾ ?
ನೋವುಗಳನ್ನು ಹಳೆ ಎಲೆಗಳಂತೆ ಕಳಚಿಕೊಳ್ಳುತ್ತಾ  ಯಾವ ಹೊರಗಿನ ಪೋಷಣೆಯೂ ಇಲ್ಲದೆ ಭೂಮಿಯಂತೆಸಕಲ ಶಕ್ತಿಯನ್ನು ಒಗ್ಗೂಡಿಸಿ ಬದುಕಲ್ಲಿ ನಲಿವನ್ನು ಸಂಭ್ರಮವನ್ನು ಜೀವನೋತ್ಸಾಹವನ್ನು ತುಂಬಿಕೊಳ್ಳುವಯತ್ನವಾಗಿತ್ತಾ ? ಮರಗಿಡಗಳಿಗೇ ಶಕ್ತಿ ತುಂಬುವ ವಸಂತ ಮಾನವರಲ್ಲೂ ಅಂತಹದ್ದೇನಾದರೂ ಪವಾಡಮಾಡಬಲ್ಲನಾ ? ವರುಷಕೊಂದು ಹೊಸತು ಜನ್ಮ .. ಹರುಷಕೊಂದು ಹೊಸತು ನೆಲೆ ಎಂಬುದು ಮತ್ತೂಅರ್ಥಪೂರ್ಣವಾಗಿ...

ಬೆರಗು ಹುಟ್ಟಿಸುವ ವಸಂತ ನಮ್ಮೆಲ್ಲರ ಬದುಕಲ್ಲಿ ವಸಂತವಾಗಿ ಬರಲಿ. ಈ ಯುಗಾದಿ ನಮ್ಮನಿಮ್ಮೆಲ್ಲರಲ್ಲೂಜೀವನೋತ್ಸಾಹವನ್ನು ಒಳಗಿಂದಲೇ ಚಿಗುರಿಸಲಿ ಎಂಬ ಆಶಯ ...
ಚಿಕ್ಕಂದಿನಲ್ಲಿ ಕೇಳಿದ ಹಾಡು ಅಲ್ಲೆಲ್ಲೋ ಕೇಳಿಸುತ್ತಿದೆ..
ವಸಂತ ಬಂದ ಕೂವೂ ಜಗ್ ಜಗ್ ಪೂವ್ವೀ ಟೂವಿಟ್ಟವೂ


Sunday, 5 March 2017

ಉತ್ತರಾಯಣ - ನನ್ನ ಓದು

 ನನಗಿನ್ನೂ ಚೆನ್ನಾಗಿ ನೆನಪಿದೆ ನಾನೀ ಪುಸ್ತಕ ಮೊದಲು ಓದಿದ್ದು ಗೆಂಟಿಂಗ್ ಹೈಲ್ಯಾಂಡ್ಸ್ ನಲ್ಲಿ. ಆಗಷ್ಟೇ ಬಿಡುಗಡೆಯಾಗಿದ್ದ ಪುಸ್ತಕವನ್ನು ಸಮಯವಿದ್ದರೆ ಓದುವ ದುರಾಸೆಯಿಂದ ಪ್ರವಾಸಕ್ಕೂ ಹೊತ್ತುಕೊಂಡು ಹೋಗಿದ್ದೆ. ಸಂಜೆ 5 ಗಂಟೆಗೆ ಕತ್ತಲಾಗಿತ್ತು. ವಿಪರೀತ ಚಳಿ, ಗದಗುಟ್ಟಿಸುವ ಗಾಳಿ. ಎಲ್ಲರೂ ಇನ್‌ಡೋರ್ ಥೀಮ್ ಪಾರ್ಕ್ ನೋಡುತ್ತಿದ್ದಾಗ ಅಲ್ಲಿಂದ ಮೆಲ್ಲಗೆ ಕಳಚಿಕೊಂಡು ಒಬ್ಬಳೇ ರೂಮಿಗೆ ವಾಪಸ್ ಬಂದು ಓದಿದ ಪುಸ್ತಕವಿದು. ಗಂಡ ಮಕ್ಕಳು ವಾಪಸ್ ಬರುವಷ್ಟರಲ್ಲಿ ಕಣ್ಣು ಕೆಂಡ, ಮನಸ್ಸು ಭಾರ...ದಟ್ಟ ವಿಷಾದ. ಮೂವರನ್ನೂ ತಬ್ಬಿಕೊಂಡೇ ಬೆಳಗು ಮಾಡಿದ್ದೆ. ಮರುದಿನ ಬತು ಕೇವ್ಸ್ ನೋಡಲು ಮೇಲೆ ಹೋಗದೆ ಕೆಳಗೆ ದೇವಸ್ಥಾನದ ಕಟ್ಟೆ ಮೇಲೆ ಕುಳಿತು ಮತ್ತೆ ಮತ್ತೆ ಓದಿ ಕಣ್ಣೀರಿಟ್ಟೆ. ಹೌದು.... ಈ ಉತ್ತರಾಯಣ ಈಗ ಕೈಗೆತ್ತಿಕೊಂಡರೂ ನನ್ನನ್ನು ಕರಗಿಸುತ್ತದೆ, ಕಣ್ಣೀರಿಡುವಂತೆ ಮಾಡುತ್ತದೆ.

 ರಾಮಗಿರಿಯೆಂಬ ಊರಿನ ರಾಮಣ್ಣನವರ ಮಗಳು ರಾಜಲಕ್ಷ್ಮಿ ಈ ಕಾವ್ಯದ ಕೇಂದ್ರಬಿಂದು. ಕವಿಯ ಜೊತೆ ತುಂಬು ಸಂಸಾರ ನಡೆಸಿದವರು ಯಕೃತ್ತಿನ ವಿಕೃತಿಗೆ ಬಲಿಯಾಗಿದ್ದಾರೆ. ಅಗಲಿದ ಪತ್ನಿ ಕುರಿತ ಅಪರೂಪದ ಕಾವ್ಯ ಇದು. ಹೆಂಡತಿ ಸತ್ತ ಮೇಲೆ ಯಾರಾದರೂ ಬರೆದಿದ್ದಾರಾ? ನನ್ನ ಓದಿಗೆ ಸಿಕ್ಕಿಲ್ಲ. ಮಗ ಸತ್ತಾಗ ಬೀಚಿ ಬರೆದಿದ್ದರು. ನಂತರ ಅವರೇ ಅದನ್ನು ಓದಬೇಡಿ ಎಂದರು. ಪ್ರೀತಿಪಾತ್ರರನ್ನು ಕಳೆದುಕೊಂಡ ಕ್ಷಣದಲ್ಲಿ ಭಾವುಕತೆಗೆ ಪಕ್ಕಾಗಿರುತ್ತೇವೆ, ಏನೇನೋ ಸಂಕಟ..ಅನಿಸಿದ್ದನ್ನು ಕಾರಿರುತ್ತೇವೆ. ನಂತರ ಕಾರಿದ ಬಗ್ಗೆ ಒದ್ದಾಡುತ್ತೇವೆ.. ಹಾಳು ಭಾವುಕತೆ ಎಂದು ಶಪಿಸಿಕೊಳ್ಳುತ್ತೇವೆ. ಭಾವುಕರಾಗಿಯೂ ಮೈ ಮರೆಯದ ಪ್ರಜ್ಞೆ ಉತ್ತರಾಯಣದಲ್ಲಿದೆ.

 ಹತ್ತಿರದವರ ಸಾವು ಎಂಥವರನ್ನೂ ಕಂಗಾಲಾಗಿಸಿಬಿಡುತ್ತದೆ. ಕವಿಯ ವಿಷಯವನ್ನೇ ತೆಗೆದುಕೊಂಡರೆ ಅವರು ತಾಯಿ, ಅಜ್ಜಿ ಇಬ್ಬರೂ ಇದ್ದಾಗಲೇ ಪತ್ನಿಯನ್ನು ಕಳೆದು ಕೊಂಡವರು. ನಾವು ನೋಡಿದ ಮೊದಲ ಸಾವು ನಮ್ಮನ್ನು ಬೆಚ್ಚಿಬೀಳಿಸುತ್ತದೆ, ಇನ್ನಿಲ್ಲದಂತೆ ಕಾಡುತ್ತದೆ. ಅದೂ ಬದುಕಿನುದ್ದಕ್ಕೂ ಅಭೇದ್ಯ ಎನ್ನುವಂತೆ ಅಂಟಿಕೊಂಡಿದ್ದ ಆಪ್ತಜೀವದ್ದಾದರೆ ಕಳೆದು ಕೊಂಡವರು ಎಚ್ಚೆಸ್ವಿಯಂತಹಾ ಕವಿಯಾಗಿದ್ದರೆ ಉತ್ತರಾಯಣದಂತಹಾ ಅದ್ಭುತ ಕಾವ್ಯ ಹುಟ್ಟುತ್ತದೆ. 
 ಅಪರಿಚಿತ ಜೀವಗಳೆರಡನ್ನು ಒಂದೇ ಸೂರಿನಡಿ ಆಜೀವ ಪರ್ಯಂತ ಒಟ್ಟು ಮಾಡುವ ಈ ಮದುವೆ ಎಂಬ ಅದ್ಭುತ ಯಾವತ್ತೂ ನನಗೆ ಕುತೂಹಲದ ವಿಷಯ. ಭೌತಿಕ, ದೈಹಿಕ ಆಕರ್ಷಣೆಗಳ ರೋಮಾಂಚನ ಕಳೆದುಕೊಂಡ ನಂತರ ಅವರ ಸಹಬಾಳ್ವೆಯ ಸ್ವರೂಪ ನನಗೆಂದಿಗೂ ಅಧ್ಯಯನ ಯೋಗ್ಯವೆನಿಸುವ ಅಚ್ಚರಿ. ಪರಂಪರೆ ನೀಡಿದ ಪರಾವಲಂಬನೆ ಹೆಣ್ಣಿಗಿದ್ದರೆ ಸ್ವಾವಲಂಬಿಯೆಂಬ ಪರಂಪರಾನುಗತ ಅಭಿಮಾನ ಅಥವಾ ಅಹಂಕಾರ ಗಂಡಿಗಿರುತ್ತದೆ.  ಇವೆರಡೂ ಇವರಿಬ್ಬರ ಸ್ವಯಾರ್ಜಿತ ದುಡಿಮೆಯಲ್ಲ, ಪರಂಪರೆ ನೀಡಿದ ಸೊತ್ತು. ಅವನು ನನ್ನನ್ನು ಸಾಕುತ್ತಿದ್ದಾನೆ ಎಂಬ ನಂಬಿಕೆ, ಇವಳನ್ನು ನಾನು ಕಾಪಾಡುತ್ತೇನೆ ಎಂಬ ಇವನ ವಿಶ್ವಾಸ ಎರಡೂ ಭಾವಗಳೂ ಸಮಾನಾಂತರವಾಗಿ ಅಥವಾ ಈ ಮದುವೆ ಎಂಬ ಪದವೇ ಬಹುತೇಕರ ದಾಂಪತ್ಯವನ್ನು ಪೊರೆಯುತ್ತಿರುತ್ತದೆ. ಬರಬರುತ್ತಾ ಈ ಸ್ವಾವಲಂಬೀ ಭಾವನೆಯ ಅಡಿಯಲ್ಲೇ ಗಂಡು ಪರಾವಲಂಬಿಯಾಗುತ್ತಾ ಹೋಗುವ....ಪರಾವಲಂಬಿತ ಮನಸ್ಥಿತಿಯಲ್ಲೇ ಹೆಣ್ಣು ಸ್ವಾವಲಂಬೀ ಬದುಕು ಸಾಗಿಸುವ ಪ್ರಕ್ರಿಯೆ ಅವರಿಗರಿವಿಲ್ಲದೇ ಸಂಭವಿಸುತ್ತಿರುತ್ತದೆ. ಅವರಿಬ್ಬರಲ್ಲಿ ಯಾರೇ ಮತ್ತೊಬ್ಬರನ್ನು ಅಗಲಿದರೂ ಹೈರಾಣಾಗುತ್ತಾರಾದರೂ ಹೆಣ್ಣು ತನ್ನ ಅವಲಂಬಿತ .ಮನೋಭಾವದ ಅಡಿಯಲ್ಲಿ ಹೇಗೋ ಸುಧಾರಿಸಿಕೊಳ್ಳುತ್ತಾಳೆ. ಗಂಡು ಮಾತ್ರ ಈ ಸ್ವಾವಲಂಬೀ ಭಾವದ ಹಿನ್ನಲೆಯಲ್ಲಿ ಹೊಂದಿಕೊಳ್ಳಲಾರದೆ ಚಡಪಡಿಸುತ್ತಿರುತ್ತಾನೆ. ' ಒಂದು ಲೋಟ ಕಾಫೀಗೂ ಕಷ್ಟ, ಅವಳಿದ್ದಾಗ ಹೀಗಿರಲಿಲ್ಲ.' ಎಂದು ನಿಟ್ಟುಸಿರು ಬಿಡುವ ಹಿರಿಯ ಒಂಟಿ ಜೀವಗಳನ್ನು ನೋಡಿದ್ದೇನಾದರೂ ಅದು ಬರಿಯ ಕಾಫಿ ತಿಂಡಿಯ ಪ್ರಶ್ನೆ ಎಂದು ನನಗನ್ನಿಸುವುದಿಲ್ಲ. ತನ್ನ ಪರಾವಲಂಬಿ ತನದ ಅರಿವು ಮೂಡಿಸಿದ ಕೊರಗು ಅನ್ನಿಸುತ್ತದೆ.
 ಉತ್ತರಾಯಣದ ಕವಿ ಶ್ರೀ ಸಂಸಾರಿ. ಆತನ ಸಂಸಾರ ತುಂಬು ಸಂಸಾರ. ರಾಮನೊಬ್ಬನೇ ಎಂದೂ ಬಾರನು ಮಣೆಗೆ ಎನ್ನುವ ಮೂಲಕ ರಾಮನ ಕುಟುಂಬ ಪ್ರೀತಿಯನ್ನು ಎತ್ತಿಹಿಡಿಯುತ್ತಾರೆ. ಅದಕ್ಕೆ ಸಾಕ್ಷಿ ಒಂದು ಗ್ರೂಪ್ ಫೋಟೋ ಸೆಶನ್. ಅವನನ್ನು ಸುತ್ತುವರಿದಿರುವವರ ಸಂಖ್ಯೆ ನೋಡಿ. ರಾಮ ಸೀತೆಯೆಂಬ ಪತಿ ಪತ್ನಿಯ ಅತ್ಯಾಪ್ತ ವರ್ತುಲ, ಅದರ ಸುತ್ತ ಅಣ್ಣತಮ್ಮಂದಿರು ಅವರ ಪತ್ನಿಯರ ಸಂಬಂಧದ ವರ್ತುಲ, ಆದ್ರ ಸುತ್ತ ಕಷ್ಟಕಾಲದಲ್ಲಿ ಹೆಗಲಿತ್ತ ಗೆಳೆಯರ ವರ್ತುಲ, ಸೇವಕರ ವರ್ತುಲ, ಕೊನೆಗೆ ಅವನ ಕರೆಗೇ ಕಾಯುತ್ತಿದ್ದು ನೆನೆದೊಡನೆ ಪ್ರತ್ಯಕ್ಷವಾಗುವ ಪುಟ್ಟ ಅಳಿಲು ಬಿಲ್ಲಿನ ಬದಲು ಅವನ ಹೆಗಲ ಮೇಲೆ. ಯಾರೊಬ್ಬರನ್ನೂ ಯಾರಿಗಾಗಿಯೂ ಕಡೆಗಣಿಸದ ವ್ಯಕ್ತಿತ್ವ ರಾಮನದ್ದು. ಹಾಗಾದರೆ ಸೀತೆ ತೊರೆದ ನಂತರಒಂದಾದರೂ ಗ್ರೂಪ್ ಫೋಟೋ ಬಂದಿದ್ದುಂಟೆ ರಾಮನದು? ಆ ಕೇಂದ್ರ ವರ್ತುಲವಿಲ್ಲದಿದ್ದರೆ ಈ ಎಲ್ಲವೂ ಜಾಳುಜಾಳೆ?ಶ್ರೀಸಂಸಾರಿಯ ರಾಮ ಕುಟುಂಬವ್ಯವಸ್ಥೆಯ ಪ್ರತಿನಿಧಿಯಾದರೆ ಶಿವರಾತ್ರಿ ಪದ್ಯದ ಶಿವ ಅಪ್ಪಟ ಪ್ರೇಮಿ. ನಮ್ಮ ಹಗಲು ರಾತ್ರಿಯ ಕಲ್ಪನೆಯನ್ನೇ ಒದ್ದು ಹಾರಿಸುತ್ತಾ ಶಿವೇ ಇದ್ದ ಕ್ಷಣವೇ ಅವನಿಗೆ ರಾತ್ರಿ ಎನ್ನುತ್ತದೆ ಈ ಪದ್ಯ. ಈ ಶಿವನ ರಾತ್ರಿಯೇ ಪಾರ್ವತಿ. ಚಂದ್ರದಂಡೆಯ ಮುಡಿದು, ನಕ್ಷತ್ರ ನೆಕ್‌ಲೇಸ್ ಧರಿಸಿದ ಕಾಳಿ ಹೆಣ್ಣಾದ ನನ್ನಲ್ಲಿ ಹೊಟ್ಟೆಕಿಚ್ಚು ಮೂಡಿಸುತ್ತಾಳೆ. 
 "ಚಂದ್ರ ಬೋಗುಣಿ ತುಂಬಾ ತುಳುಕಾಡುತಿರೆ ಇರುಳು,
 ತಿರುಪೆ ಮುಗಿಸಿದ ಜೋಗಿ ಧವಳಗಿರಿ ಬಾಗಿಲಲಿ
 ನಿಂತು ಮೆಲ್ದನಿಯಲ್ಲಿ ಉಸುರಿದನು:" ಶಂಕರೀ...
 ತೆರೆಯೆ ಬಾಗಿಲು ಬೇಗ ಆಲೋಲ ನೇತ್ರೆಯೇ,
 ನನ್ನಧರ ಪಾತ್ರೆಯೇ, ಬಿಲ್ವವನಧಾತ್ರಿಯೆ,
 ಉರಿವ ಹಗಲಿಗೆ ತಂಪನೆರೆವ ಶಿವರಾತ್ರಿಯೇ"
 ಮಾತಿನಲ್ಲೇ ಎಂತಹ ಶೃಂಗಾರ!! ಕುಟುಂಬ ವ್ಯವಸ್ಥೆಯಲ್ಲಿ ಅಳಿಲನ್ನೂ ಮರೆಯದ ರಾಮ, ಏಕಾಂತದಲ್ಲಿ ಶಿವೆಯನ್ನು ರಮಿಸುತ್ತಾ ಶೃಂಗಾರಕ್ಕೆ ಕರೆವ ಶಿವ ಒಬ್ಬ ಪರಿಪೂರ್ಣ ಗಂಡಿನ ಲಕ್ಷಣಗಳನ್ನು ತೋರುತ್ತಾರೆ. ಕವಿತೆ ಕವಿಯ ಮನೋಭಾವವನ್ನಲ್ಲವೇ ಸೂಚಿಸುವುದು?
 ಇಂತಹ ಕವಿಯ ಜೀವನದಲ್ಲಿ ಬಿರುಗಾಳಿ ಬೀಸಿದೆ.  ಆ ಮನೆಯಲ್ಲೀಗ ಗ್ರೂಪ್ ಫೋಟೋ ಸಡಗರವಿಲ್ಲ... ಬಾಗಿಲು ತೆರೆವ ಶೀವೆಯಿಲ್ಲ. ಅಲ್ಲಿರುವುದು ಬತ್ತಿ ಸುಟ್ಟು ಎಣ್ಣೆ ...ಉದ್ವಿಗ್ನದೀಪ. ಅದೀಗ ನಿಷ್ಪಂದ ಶಾಂತ. ಅಲ್ಲೀಗ ನಡೆಯುತ್ತಿರುವುದು ನಿರಂತರ ನೆನಪಿನ ನಾಟಕ. " ಮುಗಿಲಿಲ್ಲದೆ ಮಳೆ ಸುರಿಯುತ್ತಿದೆ...ಗಾಳಿಯಿಲ್ಲದೆ ಸೆರಗು ಹಾರುತ್ತಿದೆ... ಚಂದ್ರನಿಲ್ಲದ ಬೆಳದಿಂಗಳಿನಲ್ಲಿ ನಗುತ್ತಿದ್ದಾಳೆ ನನ್ನಾಕೆ - ಯಾವ ಗುರಿಯೂ ಇಲ್ಲದ ಕಟ್ಟಾ ಖಾಸಗಿ ನಗೆ"  ಸಾವಿನ ಮನೆಯ ಸಶಕ್ತ ಚಿತ್ರಣವನ್ನು ಕಟ್ಟಿಕೊಡುವ ಕವಿಯನ್ನು ಕಾಡುವ ಅವಳ ಖಾಸಗೀ ನಗೆ ಓದುಗರನ್ನೂ ಕಾಡದೇ ಬಿಡುವುದಿಲ್ಲ. ಗಂಡ ಹೆಂಡತಿಯ ಮಧ್ಯೆ ಉಳಿವ ರಹಸ್ಯವಾದರೂ ಏನು? ಎಲ್ಲ ಎಲ್ಲವನ್ನೂ ತೆರೆದಿಟ್ಟು...ಬಿಚ್ಚಿಟ್ಟು...ಬಚ್ಚಿಟ್ಟಿದ್ದನ್ನು ಪರಸ್ಪರ ದೋಚಿಕೊಂಡ ನಂತರವೂ ಅವಳಲ್ಲಿನ್ನೂ ಉಳಿದಿರಬಹುದಾದ ಅವಳದ್ದೇ ಆದ ಕವಿಗೂ ಅಪರಿಚಿತವಾದ ಆ ಖಾಸಗಿ ನಗೆಯ ವೈಶಿಷ್ಟ್ಯ ನಮ್ಮನ್ನೂ ಕಾಡುತ್ತದೆ. ಏನಕ್ಕೆಲ್ಲ ನಗುತ್ತೇವೆ ....ಯಾರ್ಯಾರನ್ನೋ ಮೆಚ್ಚಿಸಲಿಕ್ಕಾಗಿ,. ಯಾರಿಂದಲೋ ಆಗಬೇಕಾಗಿರುವ ಕೆಲಸಕ್ಕಾಗಿ.. ಇಲ್ಲಾಕೆಗೆ ಯಾರನ್ನೂ ಮೆಚ್ಚಿಸುವ ಯಾರಿಗೋಸ್ಕರವೋ ನಗುವ ದರ್ದಿಲ್ಲ. ಅವಳಿಂದ, ಅವಳಿಗಾಗಿ, ಅವಳಿಗೋಸ್ಕರವೇ ನಗುತ್ತಿರುವ ನಗೆಯನ್ನು ಅರ್ಥೈಸಿಕೊಳ್ಳಲಾಗದೆ ಹಿಡಿಯಲಾಗದೆ ಅಸಹಾಯಕತೆಯಿಂದ ಕವಿ ಕುಸಿಯುತ್ತಾನೆ.

 ಬಾ ಬಾ ಕಪ್ಪು ಹಕ್ಕಿಯೇ... ನಿನಗೆ ಯಾವತ್ತೂ ಹೀಗೆ
 ಅನ್ನವಿಟ್ಟು ಕಾಯ್ದಿರಲಿಲ್ಲ. ಆತಂಕದಿಂದ ಕುದಿಯುತ್ತಿದ್ದಾರೆ
 ನೆರೆದ ಹತ್ತೂ ಸಮಸ್ತರು.
 ಒಲ್ಲೆನೆನಬೇಡ....ಹೀಗೆ ನಿಷ್ಕರುಣೆಯಿಂದ ತಲೆದೊನೆಯಬೇಡ
 ಕುಪ್ಪಳಿಸಿ ಕುಪ್ಪಳಿಸಿ ಹತ್ತಿರ ಬಂದು ಮತ್ತೆ ಮತ್ತೆ ಹಿಂದಕ್ಕೆ ಜಿಗಿಯಬೇಡ.
 ಸಾಮಾನ್ಯವಾಗಿ ಯಾರೂ ಕಾಗೆಗೆ ಅನ್ನವಿಟ್ಟು ಕಾಯುವುದಿಲ್ಲ...ಅದರ ಊಟದ ಬಗ್ಗೆ ಯೋಚಿಸುವುದಿಲ್ಲ. ಆದರೆ ಅವರೀಗ ಕಾಯುತ್ತಿರುವುದು ವಾಯಸದ ರೂಪದಲ್ಲಿ ಬರಬೇಕಾಗಿರುವ ತಮ್ಮ ಪತ್ನಿಗಾಗಿ. ಸಂಗಾತಿಯನ್ನು ಈ ರೂಪದಲ್ಲಿ ಕಲ್ಪಿಸಿಕೊಳ್ಳುವುದು ಎಷ್ಟು ಭಯಾನಕ. ಬರೀ ಅಷ್ಟಕ್ಕಾಗಿ ಬರೆದಿದ್ದಾರಾ ಈ ಸಾಲುಗಳನ್ನು? ' ಯಾವತ್ತೂ ನಿನಗೆ ಹೀಗೆ ಅನ್ನವಿಟ್ಟು ಕಾಯ್ದಿರಲಿಲ್ಲ'. ಯಾರಿಗೆ ಹೇಳುತ್ತಿದ್ದಾರೆ ಈ ಮಾತು ಎನ್ನಿಸಿ ಬೆಚ್ಚಿಬೀಳುವಂತಾಗುತ್ತದೆ. ವಾಯಸಕ್ಕೆ ಹೇಳಿದ್ದಾ ಅಥವಾ ತನ್ನನ್ನು ಬಿಟ್ಟು ಎಂದಿಗೂ ಮೊದಲು ಉಣ್ಣದ  ಹೆಂಡತಿಗೆ ಹೇಳಿದ್ದಾ ?  ಹತ್ತೂ ಸಮಸ್ತರಿಗೆ ಊಟ ಬಡಿಸಿ ಅವರೆಲ್ಲರೂ ಉಂಡ ನಂತರ ಒಂದಿಷ್ಟು ಅನ್ನ ಹೊಟ್ಟೆಗಿಳಿಸಿ ಉಳಿದ ಕೆಲಸ ಮಾಡುತ್ತಾ ಕಾಲಕಳೆದ ಬಗ್ಗೆ ಕವಿ ಹೇಳುತ್ತಿದ್ದಾರಾ? ಅವಳಿಗೆಂದೂ ಅನ್ನ ಬಡಿಸದ ತಮ್ಮ ಬಗ್ಗೆ ಮಾತನಾಡುತ್ತಿದ್ದಾರಾ? ಇಂದು ಅವಳಿಗೆ ಅವರೆಲ್ಲರಿಗಿಂತ ಮೊದಲು ಉಣ್ಣುವ ಭಾಗ್ಯ ಕಾಕ ರೂಪದಲ್ಲಿ. ಎಂಥಾ ವ್ಯಂಗ್ಯ.!! ನೆರೆದ ಹತ್ತೂ ಸಮಸ್ತರು ಕಾಯುತ್ತಿರುವುದು ನಂತರ ಆಗಲಿರುವ ಅವರ ಊಟಕ್ಕಾ? ಒಂದು ವೇಳೆ ಇವರ ಊಟದ ನಂತರ ಈ ಕ್ರಿಯೆ ನಡೆದಿದ್ದರೆ ಇಷ್ಟು ಆತಂಕದಿಂದ ಕಾಯುತ್ತಿದ್ದಾರಾ? ಬದುಕಿರುವವರೆಗೂ ಒಂದು ದಿನ ಇವರಿಗೆ ತಡ ಮಾಡದೆ ಬಂದು ಬಡಿಸುತ್ತಿದ್ದಳು ಇಂದೇಕೆ ಬರುತ್ತಿಲ್ಲ. ತಾನೆಂದೋ ಹೇಳಿದ ಸಣ್ಣ ಪುಟ್ಟ ಸುಳ್ಳುಗಳ ತಪ್ಪುಗಳ ನೆನಪು.... " ಕ್ಷಮಿಸಿ ಸರ್ವಾಪರಾಧವನ್ನು ಮುಟ್ಟುಮಿಟ್ಟಿಗೆ ಅನ್ನ." ಈ ಭಾಗ ಎಷ್ಟು ಅದ್ಭುತವಾಗಿ ಮೂಡಿಬಂದಿದೆ. ಸ್ವಲ್ಪ ವಾಚ್ಯವಾಗಿದ್ದರೂ ಕವನದ ದಿಕ್ಕು ತಪ್ಪುತ್ತಿತ್ತು. ಕವಿಯ ಅದ್ಭುತ ಸಂಯಮ ಹಾಗಾಗದಂತೆ ಕಾಯ್ದಿದೆ. ಹೆಂಡತಿ ಬಿಟ್ಟು ತೌರಿಗೆ ಹೋಗುವಾಗ ಹಾಗೇ ಹೋದಳೇ? ಫ್ಲಾಸ್ಕು, ಬಿಸಿ ಅಡುಗೆ..ಕಾಸಿದ ಹಾಲು..ಹಾಳು ಕಳಕಳಿ ಅಕ್ಕರಾಸ್ತೆ ಕವನದ ಸಾಲು. ಇಂತಹ ಸಣ್ಣಪುಟ್ಟ ವಿವರಗಳೇ ದಾಂಪತ್ಯದ ಸಶಕ್ತ ಚಿತ್ರಣವನ್ನು ಕಟ್ಟಿಕೊಟ್ಟಿರುವುದು.  ಉದಾಹರಣೆಗೆ ನೋಡಿ.....
 " ಪ್ಲೀಸ್ ಕಣ್ಮುಚ್ಚಿ ನೀವು. ಬಟ್ಟೆ ಬಿಚ್ಚಲಿಕ್ಕಿದೆ.
 ಕಿಸಿದ ಲಂಗದ ಮೇಲೆ ಹೊಚ್ಚಹೊಸ ಸೀರೆ.
 ಹೊಂಬಣ್ಣ ಚುಕ್ಕಿ ಮೈ ತುಂಬಾ ಗರಿ ಗರಿ ಬೇರೆ
 ಮೊದಲಿಂದಲೂ ಅಷ್ಟೇ ಸುಳಿಗೆ ಬೈತಲೆ ಓರೆ.

 ಬೆನ್ನ ಹಿಂದಿನ ಹುಕ್ಕು ಹಾಕಿಬಿಡಿ ಮತ್ತೆ. ಬಿಚ್ಚುವುದು
 ಸುಲಭ- ಹಾಕುವುದಲ್ಲ ನೆನಪಿಡಿ. ಆಗೋ ಆಗೋ
 ಅಲ್ಲಿಗೇಕೋಡುತ್ತೆ ಪೋಲಿ ಕೈ?
 ಕಡಿವಾಣವೇ ಇಲ್ಲ ಕುದುರೆಗೆ. ಈಗೀಗ.
 ಓದುತ್ತಿದ್ದಂತೆಯೇ ಓದುಗನ ತುಟಿಗಳಲ್ಲಿ ನಗೆ ಅರಳುತ್ತದೆ. ತನ್ನದೇ ಕಥೆಯೇನೋ ಎಂಬಷ್ಟು ಆಪ್ತವಾಗುತ್ತದೆ. ಹಾಗಂದುಕೊಂಡ ಮರುಕ್ಷಣವೇ ಈ ಕಾವ್ಯದಲ್ಲಿ ಸಂಭವಿಸಿರುವ ದುರಂತ ನೆನಪಾಗುತ್ತದೆ. ಇದೂ ನಮ್ಮಲ್ಲೂ ಸಂಭವಿಸಬಹುದೆಂಬ ಭಾವ ಹಟಾತ್ತನೆ ಆವರಿಸಿ ಬೆಚ್ಚಿಬೀಳಿಸುತ್ತದೆ. ಕವಿತೆ ಹತ್ತಿರವಾಗುವುದು ಆ ಕ್ಷಣದಲ್ಲೇ. ಕವಿಯ ಸಂಕಟ ನಮ್ಮದಾಗುವುದೂ ಆ ಕ್ಷಣದಲ್ಲೇ. ಬಣ್ಣದ ಬೀಜ ಬಿತ್ತುವ ಮನದನ್ನೆ ಬಿತ್ತಿದ್ದು ಮಂಚದ ಗುದುಮುರುಗಿಯಲ್ಲೊಡೆದ ಬಳೆ ಚೂರುಗಳೆಂಬ ಸುಖದ ಉಲುಹುಗಳನ್ನೇ? ಒಂದು ಕಾಲದಲ್ಲಿ ಉನ್ಮಾದ ಹುಟ್ಟಿಸುತ್ತಿದ್ದ, ಕಚಗುಳಿ ಇಡುತ್ತಿದ್ದ ಸಂಕೇತಗಳು ನೆನಪುಗಳು ಇಂದು ನೋವಿನ ನಿಟ್ಟುಸಿರಾಗುತ್ತಿದೆ, ಕಣ್ಣೀರಿನ ಕರ ಕೇಳುತ್ತಿವೆ. ಭಾವುಕರಾಗಿಯೂ ಎಚ್ಚರ ತಪ್ಪದೆ ವಿವರ ಕಟ್ಟಿಕೊಡುತ್ತಿರುವ ಕವಿ, ಓದುತ್ತಾ ಮತ್ತೆ ಮತ್ತೆ ಕಣ್ಣೀರಾಗುವ ಉತ್ತರಾಯಣದ ಉತ್ತರ ಹುಡುಕುವ ಓದುಗ..........

 ಮದುವೆಯಾದಾಗ ದಕ್ಕಿದ್ದ ಬಿಗಿದ ತುಂಬು ಮೈ ತಿರುಗುಣಿ ಹಲ್ಲು ಹೀರಿ ಉಗಿದ ಕಬ್ಬಾಗಿದ್ದಾಗಲೂ ಬತ್ತಿದ ತೊರೆಯನ್ನೊತ್ಟಿಕೊಳ್ಳುವ, ಜಗ್ಗುವ ಬೊಜ್ಜು.. ಆರೆನೆರೆತ ಕುರುಚಲು ಮುಡಿಗಳ ನೇವರಿಸುವ ಕವಿ ನಮಗೆ ಅತ್ಯಾಪ್ತರಾಗುತ್ತಾರೆ. ರೋಗದ ಧಾಳಿಗೆ ಕಂಗೆಟ್ಟ ದೇಹವನ್ನು ಸೇವಾಯೋಗಕ್ಕೆ ಈಗಷ್ಟೇ ನನ್ನಿಷ್ಟ ದೈವ ತೆರೆದ ಸೇವಾಕ್ಷೇತ್ರ ಎಂದು ಗುರುತಿಸುತ್ತಾರೆ. ಅವಳ ನಿರ್ಗಮನದ ನಂತರ ಪುನರ್ಜನ್ಮದ ಸಾಧ್ಯತೆಗಳ ಪತ್ತೇದಾರಿಗೆ ಇಳಿಯುತ್ತಾರೆ. ಕೊನೆಯಿಲ್ಲದ ಪತ್ತೇದಾರಿ.  ದಾಂಪತ್ಯದ ಉತ್ತುಂಗವನ್ನು ವರ್ಣಿಸುವಾಗ ಅವರು ಕೊಡುವ ಅದ್ಭುತ ಉಪಮೆ ' ದೇಹಗಳೀಗ ಗಾಂಧರ್ವರೀಸಾಡಿ ಹೋದ ಕೊಳಗಳ ಹಾಗೆ'.
 ಮಳ್ಳಿ ಮೀನಿನ ಸುತ್ತ ಒತ್ತು  ನೀರಿನ ಕವಚ
 ಮಣ್ಣ ಗೋಳಕ್ಕೆ ಆಕಾಶ ಕವಚ!
 ನಕ್ಷತ್ರದುಂಗುರಕ್ಕೆ ಇರುಳ ಶಾಪದ ಕವಚ;
 ಲಿಂಗಕ್ಕಾಲಿಂಗನದ ನಿರ್ವಯಲ ಕವಚ!
 ಛಂದಸ್ಸಿನಲ್ಲಿ ಬಂಧಿಸಿಟ್ಟರೆ ಮೃತ್ಯೂಭಯದಿಂದ ತಪ್ಪಿಸಿಕೊಳ್ಳಬಹುದೆಂದು ದೇವತೆಗಳೂ ಛಂದಸ್ಸಿನ ಒಳಗೆ ಪ್ರವೇಶಿಸುತ್ತಾರಂತೆ. ಈ ಕವಿತೆಯೂ ಛಂದಸ್ಸಿನೊಂದಿಗೆ ಮುಕ್ತಾಯವಾಗುತ್ತದೆ.
ಉತ್ತರಾಯಣ ಮುಕ್ತಾಯವಾದರೂ ನನ್ನ ದುಗುಡ, ಸಂಕಟ ಕಡಿಮೆಯಾಗಿರಲಿಲ್ಲ.  ಸಾಮಾನ್ಯವಾಗಿ ಎಲ್ಲಿ ಹೋದರೂ ನನ್ನದೇ ಲಹರಿಯಲ್ಲಿ ತೇಲುತ್ತಿದ್ದ ನನ್ನನ್ನು ಇಡೀ ಪ್ರವಾಸದುದ್ದಕ್ಕೂ ಕುಟುಂಬದೊಡನೆ ಮಾನಸಿಕವಾಗಿಯೂ ಇರುವಂತೆ ಮಾಡಿದ್ದು ಉತ್ತರಾಯಣ. ಸಂಕಟ ಕಡಿಮೆಯಾದದ್ದು ವೈದೇಹಿ ಬಂದಮೇಲೆಯೇ.
 ಉತ್ತರಾಯಣದ ಜರ್ಜರಿತ ದೇಹದ ನಾಯಕಿಯನ್ನು ಇಲ್ಲಿ ಪ್ರತಿಮೆಯನ್ನಾಗಿಸಿದ್ದಾರೆ 

"ಬಿಚ್ಚು ಒಂದೊಂದಾಗಿ ಉಟ್ಟಿದ್ದ ತೊಟ್ಟಿದ್ದ ಎಷ್ಟೋ ಕಾಲದಿಂದಿಟ್ಟಿದ್ದ.
ಕಳಚಿ ಜೀವ ಹಿಂಡುವ ನೋವಿನಿಕ್ಕಟ್ಟ.
ಕಣ್ಣ ಹಳದಿಯ ಬಣ್ಣ, ಪರೆಪರೆ ಸುಕ್ಕ, ಕೆನ್ನೆಯ ಜೋಲ, ಬೆಳಕು
ಬತ್ತಿದ ಬತ್ತಿಯ ಗಿಮಿಟು ಕರುಕ."
ಅವಳ ಅಗಲಿಕೆಯ ನೋವಿನಿಕ್ಕಟ್ಟನ್ನು ಬದಿಗೆಸೆವ ಕವಿ ಮತ್ತೆ ಅವಳ ಚಿತ್ರವನ್ನು ಅಳಿಸಿ ಬರೆಯುವುದು ಬೆಳಗಿನ ರತ್ನ ಕಿರಣಗಳಿಂದ, ಬಳಿಯುವ ಬಣ್ಣ ವಾದರೋ ನಟ್ಟಿರುಳ ಬೆಳದಿಂಗಳ ಬಿಳುಪು....ಆವಾಹಿಸುವುದು ಉಗುರು ಬೆಚ್ಚನೆಯ ಬಾಣಂತಿಯ ಮೈ ಬಿಸುಪು!!. 

" ಕೃತಿಯಾಗು ನನ್ನ ಮುದ್ದಿನ ಹೆಣ್ಣೆ, ದಟ್ಟ ರೆಪ್ಪೆಯ ಅನಿಮಿಷ ಕಣ್ಣೆ,
ಕಣ್ಣಲ್ಲಿ ಕಣ್ಣಿಟ್ಟು ನೋಡು ನನ್ನೆ.
ಮುಡಿದ ಹೂ ಬಾಡದ, ಬಿಸಿ ಮೈ ಬೆವರದ, ಯಾವತ್ತೂ ಸ್ಖಲಿಸದ,
ನನ್ನ ಮೈಯಿರದ ಮನದನ್ನೆ."
ಅವಳನ್ನು ಕೃತಿಯಾಗಿಸಿದ್ದಾರೆ...ಅವಳೀಗ ಮೂಡಿದ ಹೂ ಬಾಡದ, ಬಿಸಿ ಮೈ ಬೆವರದ, ಯಾವತ್ತೂ ಸ್ಖಲಿಸದ ಮೈಯಿರದ ಮನದನ್ನೆ. ಇವೆಲ್ಲವೂ ದೇವತೆಯ ಲಕ್ಷಣಗಳು. ಹೀಗೆ ಅವಳನ್ನು ಪ್ರತಿಮೆಯಾಗಿಸಿ ಹಸಿವು ನಿದ್ದೆ ನೀರಡಿಕೆಗಳಿಲ್ಲದ ಮನದನ್ನೆಯನ್ನು , ನಿಜಾರ್ಥದಲ್ಲಿ ವೈದೇಹಿಯನ್ನು ಸೃಷ್ಟಿಸುತ್ತಾರೆ.  ಉತ್ತರಾಯಣದ ಶಾಂತಿರಸ್ತು ಇಲ್ಲಿ ಶುಭಮಸ್ತುವಾಗಿದೆ. ಅವರೇ ಹೇಳುವಂತೆ ಸೀತೆ ವೈದೇಹಿಯಾಗದೆ ಉಜ್ಜೀವನದ ಉಪಾಯವೇ ಇರಲಿಲ್ಲ.

ಬೇಂದ್ರೆ - ನನ್ನ ಓದು

ಬೇಂದ್ರೆ ನನ್ನ ಓದು

ಪ್ರತೀ ಸಲವೂ ಗಮನವಿಟ್ಟು ನೋಡುತ್ತಿರುತ್ತೇನೆ...ಬಹುತೇಕ  ತೊಂಬತ್ತೊಂಬತ್ತರಷ್ಟು ಪ್ರತಿಶತ ಹೀಗೇ ನಡೆಯುತ್ತಿರುತ್ತದೆ. ಬೆಳಗಿನಿಂದ ಸಂಭ್ರಮದಲ್ಲಿ ಮಿಂದೆದ್ದು ಮಧ್ಯಾಹ್ನ ಕಳೆಯುವ ಹೊತ್ತಿಗೆ ಸೂತಕದ ಛಾಯೆ ಆವರಿಸಿರುತ್ತದೆ. ತುಸು ಬಾಡಿದ ನಾಚಿದ ತಲೆತಗ್ಗಿಸಿದ ಎಳೆ ಮೊಗ, ದುಗುಡವನ್ನೆಲ್ಲ ಎದೆಯಲ್ಲಿಟ್ಟುಕೊಂಡೂ ಮೊಗದಲ್ಲಿ ಬಾರದ ನಗೆ ತುಳುಕಿಸುತ್ತಾ ಹೊರಡುತ್ತಿರುವ ನೆಂಟರಿಗೆ ವಿದಾಯ ಹೇಳುತ್ತಾ ಓಡಾಡುತ್ತಿರುವ ಹಿರಿಯ ತಾಯಿ ಜೀವ. ಅವಳ ಕಣ್ಣಲ್ಲಿ ಇನ್ನೇನು ಹೊರಬಂದುಬಿಡುತ್ತೇನೆ ಎಂದು ಹಟ ಹಿಡಿದು ನಿಂತ ಕಣ್ಣೀರು.....ಶುರುವಾಗುತ್ತದೆ ನೋಡಿ ಆ ಸಂದರ್ಭದಲ್ಲಿ ನಾನೆಂದೂ ಕೇಳಬಯಸದ ಆ ಹಾಡು.....ಆ ಹಾಡಿಗೆ ಬಹುತೇಕ ಕಡೆ ರಾಗ, ತಾಳ, ಮಾಧುರ್ಯ ಯಾವುದೂ ಇರುವುದಿಲ್ಲ .....ಅದಕ್ಕಿರುವುದು ಆ ಸಂದರ್ಭದಲ್ಲಿ ಅಳಿಸುವ, ನೋಯಿಸುವ ಶಕ್ತಿಯೊಂದೇ. ತಮ್ಮ ಹಾಡು ಸುತ್ತಲಿನವರನ್ನು ಎಷ್ಟು ಅಳಿಸುತ್ತಿದೆ ಎಂದು ಅತ್ತಿತ್ತ ಕಣ್ಣು ಹಾಯಿಸುತ್ತಾ ಖಾತ್ರಿ ಪಡಿಸಿಕೊಳ್ಳುತ್ತಲೆ ಹಾಡುವ ಕೊರಳುಗಳು ನಂತರ ತಾವೂ ಕಣ್ಣೊರೆಸಿಕೊಳ್ಳುತ್ತವೆ. ಆ ಕ್ಷಣಗಳು ನನಗೆಂದಿಗೂ ತವರಿನ ಪಾಲಿಗೆ ಆ ಹುಡುಗಿಯ ಅರ್ಧ ಸಾವು ಎನ್ನಿಸಿಬಿಡುತ್ತದೆ.

" ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ,
ಈ ಮನೆಯೇ ಈ ಇವರೇ ನಿನ್ನವರು ಮುಂದೆ,
ಇವರೇ ತಾಯ್ಗಳು ಸಖರು ಭಾಗ್ಯವನು ಬೆಳೆಸುವರು,
ಇವರ ದೇವರುಗಳೇ ನಿನ್ನ ದೇವರುಗಳು".
 ಹುಟ್ಟಿಬೆಳೆದ ಪರಿಸರ, ಒಡನಾಟ, ಸುತ್ತಲಿನ ವಾತಾವರಣ,  ತಂದೆ ತಾಯಿ , ಅಭಿರುಚಿ ಇವೆಲ್ಲವೂ ಸೇರಿ ಒಬ್ಬ ವ್ಯಕ್ತಿ ಬೆಳೆಯುತ್ತಾನೆ. ಪರಿಸ್ಥಿತಿ ಈಗ ಎಷ್ಟೋ ಸುಧಾರಿಸಿದೆ ಎಂಬ ನೆಮ್ಮದಿಯಿದ್ದರೂ ಬಹತೇಕ ಮದುವೆಗಳಲ್ಲಿ ಒಂದು ಮನೆಯ ಹೆಣ್ಣುಮಗಳ ಅರ್ಧ ಸಾವು, ಮತ್ತೊಂದು ಮನೆಯ ಪುಟ್ಟ ಗೃಹಿಣಿಯ ಜನನ ಸಂಭವಿಸುತ್ತಲೇ ಇರುತ್ತದೆ. ಗಮನವಿಟ್ಟು ನೋಡಿ ಮೇಲಿನ ಸಾಲುಗಳನ್ನು. ಆ ಹೆಣ್ಣು ಮಗುವನ್ನು ಧಾರೆ ಎರೆದು ಕೊಟ್ಟ ಮರುಕ್ಷಣದಿಂದಲೇ ಅವಳು ಹೆತ್ತವರ ಮನೆಗೆ ಹೊರಗಾಗಿಬಿಡುತ್ತಾಳೆ. ಮುಂದವಳ ತಾಯಿ, ತಂದೆ, ಸಖ,ಸಖಿ ಎಲ್ಲ ಎಲ್ಲವೂ ಗಂಡನ ಮನೆಯವರೇ." ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ !." ಇದೆಷ್ಟರ ಮಟ್ಟಿಗೆಂದರೆ ಹುಟ್ಟಿನಿಂದ ಅವಳು ಪ್ರಾರ್ಥಿಸುತ್ತಿದ್ದ, ಪೂಜಿಸುತ್ತಿದ್ದ ದೇವರೂ ಅವಳ ದೇವರಲ್ಲ. ಗೋತ್ರ, ಸೂತ್ರ ಎಲ್ಲವೂ ಸತ್ತು ಮರುಹುಟ್ಟು ಪಡೆಯುವವಳಿಗೆ ಹೊಸ ಗೋತ್ರ, ಹೊಸ ಹುಟ್ಟು, ಹೊಸ ಸೂತ್ರ!!!!!  ಹೀಗೆ ಹುಟ್ಟುವ ಪುಟ್ಟ ಗೃಹಿಣಿಯೆಂಬ ಕೂಸಿಗೆ ಬೇಕಾಗುವುದು ತಂದೆ ತಾಯಿಯಂತೆ ಲಾಲಿಸಬೇಕಾದ ಅತ್ತೆ-ಮಾವ, ಕೈ ಹಿಡಿದು ಜೊತೆ ನಡೆಯುವ ಅಕ್ಷರಶ ಸಖನಾಗಬೇಕಾದ ಪತಿ, ಅವಳ ಆಸೆ ಆಕಾಂಕ್ಷೆ ಅಭಿರುಚಿ ಹವ್ಯಾಸಗಳನ್ನು ಅರ್ಥೈಸಿಕೊಳ್ಳಬೇಕಾದ ಹೊಸ ಪರಿವಾರ. ದುರಂತವೆಂದರೆ ಹೆಚ್ಚಿನ ಕಡೆ ಇದಾವುದೂ ಸಂಭವಿಸುವುದಿಲ್ಲ... ಹೆಂಡತಿಯನ್ನು ಗೆಳತಿಯನ್ನಾಗಿ ನೋಡುವ ಭಾವದ ಬಗ್ಗೆಯೇ ದ್ವಂದ್ವ, ಹೆಂಡತಿಯನ್ನು ಸರಿಸಮಾನ ಪರಿಗಣಿಸಲಾಗದ ಪರಂಪರಾನುಗತ ಪುರುಷ ಪ್ರಜ್ಞೆ...ಇಂದಿನ ಎಷ್ಟೋ ಮುಂದುವರಿದ ಶಿಷ್ಟ ಪರಿವಾರಗಳಲ್ಲೂ ತನ್ನ ಹಾಜರಿ ಹಾಕುತ್ತಲೇ ಇದೆ. ಆಗೆಲ್ಲಾ ನನಗೆ ಸಖೀಗೀತ ನೆನಪಾಗುತ್ತದೆ.... ನನ್ನೊಳಗೆ ಬೇಂದ್ರೆ ಕಾಡತೊಡಗುತ್ತಾರೆ....ಹಾಡತೊಡಗುತ್ತಾರೆ.

ಮಹಾನುಭಾವ, ಕವಿ, ಸಂತ, ಅನುಭಾವಿ ಏನೆಲ್ಲ ಹೆಸರುಗಳಿಂದ ಕರೆಯಬಹುದಾದ ಈ ರಸಋಷಿಯ  " ಮನದ ಬ್ಯಾಸರ ಕಳಿಯಕಾ, ಹಾಡ ನುಡಿ ಸಾಕ, ಹೆಚ್ಚಿಗೇನ ಬೇಕಾ, ಒಂದು ಹೂತ ಹುಣಸಿ ಸಾಕ" ಆಡು ನುಡಿಗಳೇ ಲಯಬದ್ಧವಾಗಿ ನಾದಲೀಲೆಯಾಗಿ ಪದ್ಯವಾಗಿ ಹೊರಹೊಮ್ಮುವ ಚಮತ್ಕಾರ ನನ್ನನ್ನು ಯಾವತ್ತೂ ಬೆರಗು ಗೊಳಿಸುತ್ತದೆ. ವೈದಿಕದಲ್ಲಿ ಜಾನಪದವನ್ನು ಹೇಳುವ, ಜಾನಪದದ ಮೂಲಕ ವೈದಿಕಕ್ಕೆ ಲಗ್ಗೆ ಹಾಕುವ ಬಗೆ ಅಂಬಿಕಾತನಯರಿಗಷ್ಟೆ ಗೊತ್ತೇನೋ. 'ಗೋವತ್ಸ ಲೀಲೆಯಷ್ಟೇ ಸುಲಲಿತವಾಗಿ 'ಕುರುಡು ಕಾಂಚಾಣವನ್ನು' ಬರೆಯಬಲ್ಲವರು ಮುಟ್ಟಬಲ್ಲವರು ಅವರು. ಅರವಿಂದರಿಂದ, ಜ್ಞಾನದೇವರಿಂದ ಗಾಢವಾಗಿ ಪ್ರಭಾವಿತರಾಗಿದ್ದ ಬೇಂದ್ರೆಯವರು ಸಂಸಾರದಲ್ಲಿದ್ದೂ ವಿರಕ್ತ, ವಿರಕ್ತನಾಗಿದ್ದೂ ಅನುರಕ್ತ.

ಇಷ್ಟು ವರ್ಷಗಳಿಂದ ಬೇಂದ್ರೆಯವರ ಕಾವ್ಯವನ್ನು ಅಭ್ಯಸಿಸುತ್ತಾ ಬಂದ ನನಗೆ ಅವರ ಕಾವ್ಯ ಮಾರ್ಗವನ್ನು, ಕಾವ್ಯದ ಕೇಂದ್ರ ಪ್ರಜ್ಞೆಯನ್ನು ಇಂದಿಗೂ ಗುರುತಿಸಲಾಗುತ್ತಿಲ್ಲ. ಹುಡುಕ ಹೊರಡುವ ನನ್ನನ್ನು ಪ್ರತಿಬಾರಿಯೂ ದಿಕ್ಕಾಪಾಲಾಗಿ ಎಳೆದೊಯ್ಯುತ್ತಾರೆ.  ಒಮ್ಮೆ ಮುಗಿಲಿಗೆ ಮತ್ತೊಮ್ಮೆ ನೆಲಕ್ಕೆ, ಒಮ್ಮೆ ಭಾವಕ್ಕೆ ಮತ್ತೊಮ್ಮೆ ಅನುಭಾವಕ್ಕೆ, ಒಮ್ಮೆ ವಿರಕ್ತಿಗೆ ಮತ್ತೊಮ್ಮೆ ಅನುರಕ್ತಿಗೆ, ಒಮ್ಮೆ ಶೃಂಗಾರಕ್ಕೆ ಮತ್ತೊಮ್ಮೆ ಸಂಸಾರದ ದಾರಿದ್ರ್ಯಕ್ಕೆ ಹೀಗೆ ನಿಷ್ಕರುಣೆಯಿಂದ ಕಟ್ಟಕಡೆಯದಾಗಿ ನನ್ನನ್ನು ಬಟ್ಟ ಬಯಲಿನಲ್ಲಿ, ಬಹು ದೊಡ್ಡ ಮೈದಾನದಲ್ಲಿ ನಿಲ್ಲಿಸಿಬಿಡುತ್ತಾರೆ. ಎತ್ತ ತಿರುಗಿದರೂ ಮಾರ್ಗಗಳಿಲ್ಲ, ಅಥವಾ ಎತ್ತ ನೋಡಿದರೂ ಮಾರ್ಗಗಳೇ.!!!!

ಗಂಡು ಹೆಣ್ಣನ್ನು ಸೊತ್ತು ಎಂದು ಭಾವಿಸಿದ್ದ ಕಾಲದಲ್ಲಿ, ಹೆಣ್ಣು ಗಂಡಿನ ತೊತ್ತಾಗಿದ್ದ ಕಾಲದಲ್ಲಿ, ಗಂಡ ಹೆಂಡಿರ ನಡುವೆ ಮಾತೆ ನಿಷಿದ್ದವೆನಿಸಿದ್ದ ಕಾಲದಲ್ಲಿ ಹೆಂಡತಿಯನ್ನು ಸಖಿ ಎಂದು ಕರೆಯುವ ಸಂಪ್ರದಾಯಕ್ಕೆ ನಾಂದಿ ಹಾಡಿದವರು ಬೇಂದ್ರೆ. ( ಮುದ್ದಣ ಮನೋರಮೆ ಹೊರತು ಪಡಿಸಿ). ಬೇಂದ್ರೆಯವರ ಜೀವನದ ಮೂಲ ಧ್ಯೇಯವೇ ಗೆಳತನದ ತತ್ವ. ಮಧುರ ಚೆನ್ನರ ಜೊತೆಗೂಡಿ ಅವರು ಕಟ್ಟಿದ್ದು ಗೆಳೆಯರ ಗುಂಪು.  ಎಲ್ಲವನ್ನೂ ಗೆಳೆತನದ ನೆರಳಲ್ಲೇ ನೋಡುತ್ತಿದ್ದ ಬೇಂದ್ರೆಯವರಿಗೆ ಹೆಂಡತಿಯೂ ಗೆಳತಿಯಾಗಿ ಕಂಡಳೆ?  ಹಾಗೆ ಕರೆದ ನಂತರವೂ ಅವರಲ್ಲಿ ದ್ವಂದ್ವ ಭಾವವಿತ್ತೇ?

ಅವರ ಮನದನ್ನೆ ಪದ್ಯವನ್ನು ನೋಡಿ.... ಮೊದಲಿಗೇ ಹೇಳಿಬಿಡುತ್ತಾರೆ..." ಆಡದಿರು ಮನದನ್ನೆ ಎನಗೆ ಇದಿರಾಡದಿರು" . ನನಗೆ ಇದಿರಾಡ ಬೇಡ ಎನ್ನುತ್ತಾ ಮುಂದುವರೆಯುವ ಕವಿ " ಹೇಳುತಿರೆ ಹೂಂ ಅನ್ನು", "ನಿನ್ನ ತಿಳಿವನು ಹಣಿಸು" ಎನ್ನುತ್ತಾರೆ. ಅವಳ ಅರಿವನ್ನು ಬದಿಗಿಟ್ಟು ಹೂಂ ಎನ್ನು ಎನ್ನುವ ಭಾವ ಅಲ್ಲಿ ಕಾಣುತ್ತದೆ.
" ಗಂಡು ದರ್ಪವ ಹರಿದು
ಬಿರುಸು ಬಿಂಕವ ತೊರೆದು
ತೋಳ ತೊಟ್ಟಿಲ ಮಗುವು ಆಗಿ ಬಂದೆ.
ಗೊಂಬೆಯಾಡಿಸಿದಂತೆ ಆಡಿಸೆಂದೆ.
ನಿನ್ನ ತಾಯ್ತನದ ಸೈರಣೆಯ ವಿತರಣೆ ಬೇಕು
ನಿನ್ನ ತಾಳ್ಮೆಯ ಸೈಪಿನೊಂದು ಕರುಣೆಯು ಸಾಕು"
ಓದುತ್ತಿದ್ದಂತೆಯೇ ಮನ ಆರ್ದ್ರವಾಗುತ್ತದೆ...ತನ್ನ ಬಿರುಸು ಬಿಂಕ , ದರ್ಪ ತೊರೆದು ಮಗುವಾಗಿ ಬರುವವನ ಮಾತಿಗೆಲ್ಲಾ 'ಹೂಂ' ಎಂದು ಸೋತು ಬಿಡುವ ಉತ್ಕಟ ಭಾವ ಆವರಿಸಿಬಿಡುತ್ತದೆ. ಗೊಂಬೆಯನ್ನು ನಾವು ಹೇಗೆ ಬೇಕಾದರೂ ಆಡಿಸಬಹುದು....ಆಡಿಸುವಾಗ ಅದಕ್ಕೆ ಹಾನಿಯಾದರೂ ಅದು ಉಸಿರೆತ್ತುವುದಿಲ್ಲವೆಂಬ ಧೈರ್ಯ ಆಡಿಸುವಾಕೆಯದು. ಮುಂದೆ ಓದಿ
" ಮಲಗಿರುವ ಹಾವನ್ನು ಕೆಣಕಬೇಡ
ಕಚ್ಚಿ ವಿಷ ಕಾರಿದರೆ ತಿಣುಕಬೇಡ"
ಮೊದಲು ಮೂಡಿದ ಉತ್ಕಟತೆ ಹಾಗೇ ಜರ್ರೆಂದು ಇಳಿದು ಹೋಗುತ್ತದೆ. ಒಂದೊಮ್ಮೆ ನಿನ್ನ ತಾಯ್ತನದ ಸೈರಣೆಯ ವಿತರಣೆ ನನಗೆ ದೊರೆಯದಿದ್ದರೆ, ನೀನು ನಾನು ಹೇಳಿದ್ದಕ್ಕೆ ಹೂಂ ಗುಡದಿದ್ದರೆ, ನಿನ್ನ ತಾಳ್ಮೆ ಇರದಿದ್ದರೆ ನಾನು ಮಲಗಿರುವ ಹಾವು ನೆನಪಿರಲಿ , ಕಚ್ಚದಿರಲಾರೆ ಎಂದು ಎಚ್ಚರಿಸುತ್ತಾರೆ. ' ಬಾಳನ್ನು ಮಾಡದಿರು ಬೇಳೆಯಂತೆ ಎನ್ನುವ ಕವಿ ನಾವಿಬ್ಬರೂ ಸೇರಿ ಮಾಡದಿರೋಣ ಬಾಳನ್ನು ಬೇಳೆಯಂತೆ ಎನ್ನುವುದಿಲ್ಲ... ಇಡಿಗಾಳು ಕೂಡಿರಲು ಇಬ್ಬರೂ ಬೇಕು ಎನ್ನುವುದಿಲ್ಲ. ಬಾಳನ್ನು ಹಸನು ಮಾಡುವುದು ಅವಳ ಕೈಯಲ್ಲಿದೆ, ಅವಳು ಎದಿರಡಾದೇ ಇರುವಲ್ಲಿದೆ, ಸುಮ್ಮನೆ ಹೂಂ ಗುಟ್ಟುವುದರಲ್ಲಿದೆ. ಇದು ಬೇಂದ್ರೆಯವರ ಸಖೀ ಭಾವದ ದ್ವಂದ್ವಕ್ಕೆ ಹಿಡಿದ ಸ್ಪಷ್ಟ ಕನ್ನಡಿಯಾಗಿದೆ. ಅವರ ಮೊದುಲ ದೀನತೆಯೂ ಸತ್ಯ, ನಂತರದ ದರ್ಪವೂ ಸತ್ಯ...ಅಲ್ಲಿರುವುದು ದ್ವಂದ್ವ..

ಬರುವುದೇನೆ ನೆಪ್ಪಿಗೆಯಲ್ಲಿ ಕೂಡ ಮೊದಲು ಎದೆಗೆ ಎದೆಯ ಅಪ್ಪಿಗೆ ಎನ್ನುವ ಕವಿ ನಂತರ ಕೂಡಿದೊಂದು ತಪ್ಪಿಗೆ ಎನ್ನುತ್ತಾರೆ, ಆಹಾ ಚೆಲುವ ಎಂದು ಕುಣಿದೆ ಮಿಕ್ಕ ಸಂಜೆ ಮಬ್ಬಿಗೆ ಎನ್ನುತ್ತಾರೆ. ಮಿಕ್ಕ ಸಂಜೆಯ ಮಬ್ಬೆಂದರೆ ಕತ್ತಲಲ್ಲವೇ? ಕತ್ತಲಲ್ಲಿ ಮಾತ್ರ ಚೆಲುವೆಯಾಗಿ ಕಂಡಳೆ ಮನದನ್ನೆ? ಮುಂದೆ ಬರುವ ಸಖೀಗೀತ ಅವರ ದ್ವಂದ್ವ ಭಾವವನ್ನು ಮತ್ತಷ್ಟು ಸ್ಪಷ್ಟವಾಗಿ ತೋರಿಸುತ್ತದೆ. ಹಾಗೆಂದರೆ ಅವರಲ್ಲಿ ಒಲವಿನ ಕೊರತೆ ಇದೆ ಎಂದಲ್ಲ, ಸಖೀ ಭಾವದ ಅನುಷ್ಟಾನದ ಬಗ್ಗೆಯಷ್ಟೇ ಈಗಿರುವ ಪ್ರಶ್ನೆ.. ಅವರ ಒಲವಿನ ಗೆಳೆತನದ ಸಾಲುಗಳು ಹೀಗಿವೆ.
" ನೀನು ದೊಡ್ದವಳಾದೆ ಮೈಸಲಿಗೆ ಬೆಳೆಸಿದೆ ಏಕಾಂತಕೆಳೆಸಿದೆ ಎಲೆ-ಕೆಳದಿಯೇ
ಏನು ಸಂಭ್ರಮವದು! ಹರೆಯದ ಹಬ್ಬವು ಕನಸು ಮನಸೂ ಹೆಣೆದು ಬೆಳೆಬೆಳೆದೆವೇ.

ಹೆರಳಿನ ಮಾಲೆಯು ಕಣ್ಣಿನ ಕಾಡಿಗೆ ತುಟಿಯ ತಂಬುಲ ಉಗುರ ಮದರಂಗಿಯೇ
ಕೊಳಲ ನುಡಿಸುತಿತ್ತು ರಾಗ ಮಿಗುತಲಿತ್ತು ನಿಂತ ನಿಲುವೆಲ್ಲವೂ ತ್ರಿಭಂಗಿಯೇ.

ಕಿವಿಮಾತ ಸೊಗಸೇನು ಆಡಿದ್ದಾಡುವುದೇನು ಹಳೆಸದ ಮುದ್ದಾಟ ಒಸಗುತಿರೆ
ಸವಿ ಬಂತು ಮುನಿಸಿಗೂ, ಕಳೆ ಬಂತು ಕನಸಿಗೂ ಮೋಹದ ಮಾಟವನೆಸಗುತಿರೆ"
ಈ ಒಲವಿನ ಶೃಂಗಾರದ ಆಟದಲ್ಲಿ, ಬೇಟದಲ್ಲಿ ಸಖೀ ಭಾವ ಬಹಳ ಸುಲಭ. ಒಬ್ಬರನ್ನೊಬ್ಬರು ಮೀರುವುದಿಲ್ಲ, ಮತ್ತೊಬ್ಬರನ್ನೊಬ್ಬರು ಧಿಕ್ಕರಿಸುವುದಿಲ್ಲ. ಸಖ್ಯ ಭಾವ ತಂತಾನೇ ಪೊರೆದುಕೊಳ್ಳುತ್ತದೆ. ಇದರ ಸತ್ವ ಪರೀಕ್ಷೆಯಾಗುವುದು ದುರ್ದಿನಗಳಲ್ಲೇ. ಮೋಹನದಾಸನ ಬಿರುಗಾಳಿ ದೇಶದಲ್ಲಷ್ಟೇ ಅಲ್ಲ ಇವರ ಮನೆಯಲ್ಲೂ ಬೀಸಿಬಿಡುತ್ತದೆ. ಇವರು ಬರೆದ ನರಬಲಿ ಪದ್ಯ ಉದ್ಯೋಗವನ್ನೇ ಬಲಿ ಪಡೆಯುತ್ತದೆ. ತಮ್ಮ ಸಂಸಾರ ಪರಾಶ್ರಯದಲ್ಲಿ ಬದುಕಬೇಕಾದ ಸ್ಥಿತಿ. ಸ್ವಾಭಿಮಾನಿ ಬೇಂದ್ರೆಯ ಜೀವನ ರೀತಿಯನ್ನೇ ಬದಲಿಸಿ ಬಿಡುತ್ತದೆ. ಸಂಸಾರವನ್ನು ಪೊರೆಯಲಶಕ್ತರಾದ ಬೇಂದ್ರೆ ಪತ್ನಿಯ ಕಣ್ಣು ತಪ್ಪಿಸಲಾರಂಭಿಸಿದರೇ?

ಪತಿಯ ರೀತಿಯಿಂದ ಕಂಗೆಟ್ಟ ಪತ್ನಿ ಪ್ರಶ್ನಿಸುವ ಪರಿ ನೋಡಿ.
" ನಿಮ್ಮ ಜೀವನ ಧ್ಯೇಯ ಗೌರೀಶಂಕರದಂತೆ ಶಿಖರವನೆತ್ತಿದೆ ಮುಗಿಲಿನೆಡೆ
ನನ್ನೆದೆ ತಿರುಗಿದೆ ಗಂಗೆಯು ಹರಿದಂತೆ ಜನರೀತಿಯಂತೆಯೇ ನೆಲದ ಕಡೆ.

ನಿಮ್ಮೆದೆ ಕರಗಿದರೆ ನನಗೆ ನೀರೆರೆವುದು ಚಳಿಗಾಳಿ ಬಂದಂತೆ ಕಲ್ಲಾಗಲು
ನಾ ತಣ್ಣಗಾಗುತ ನಡುಗುತ ಅಡಗಲು ಓದುವೆ ದಿಗ್ಡೇಶಕೆಲ್ಲಾದರೂ

ನಿಮ್ಮೆದೆ ಎತ್ತರಕೆ ನಾವೇನು ಬಂದೇವು ಕಲಿತವರ ಬೆಡಗಿಲ್ಲ ನಮ್ಮ ಕಡೆ
ನಿಮ್ಮ ಕಣ್ಮುಂದೆಯೇ ಕಣ್ಮುಚ್ಚಿದರೆ ಸಾಕು ಗೆದ್ದೆವು' ಎಂದೆ ನೀ ಕಣ್ಮುಚ್ಚಿಯೇ"
ಇಲ್ಲಿ ಸಖಿಯಾದವಳಿಗೆ ತಾನು ಸಖಿಯೆಂಬ ಭಾವವಿದ್ದಿದ್ದರೆ ಕಣ್ಮುಚ್ಚಿ ಒಂದೇ ಉಸುರಿಗೆ ಹೇಳಬೇಕಾದ ಅವಶ್ಯಕತೆಯೇ ಬರುತ್ತಿರಲಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ಕೇಳಬಹುದಿತ್ತು. ಮುಂದೆ ನೋಡಿ
"ಗೆಳೆಯರ ಕೂಡಾಡಿ ಬಂದಾಗ, ನಾ ನಿಮ್ಮ ಮುಖದಲುಕ್ಕುವ ಗೆಲುವ ಕಂಡಿಲ್ಲವೇ !
ಮನೆ ಬೆಳಕು ಮುಂದಿರೆ ಆ ಕಣ್ಣು ಕುಂದಿರೆ ನಾನೊಳಗೆ ನೊಂದಿರೇ ನೀವರಿಯರೇ.

ಏಕೆಂದು ಸಾಕೆಂದು ಬೇಕೆಂದು ನೂಕೆಂದು ರಮಿಸಾಡಿದಿರಲ್ಲ ನೀವು ನಿಮ್ಮಷ್ಟಕ್ಕೆ
ಗಂಗೆಯ ಕಷ್ಟವು ಗೌರಿಗೆ ತಿಳಿಯದು ಹೆಂಗಸಿನ ಕಷ್ಟವು ಗಂಡಸಿಗೆ.

ಎಂದಿಗೂ ತಿಳಿಯದು ಏತಕೆ ತಿಳಿಯೋದು ದು:ಖವು ನಮ್ಮದು ನಮಗೆ ಇದೆ"
ಇದು ಪತ್ನಿ ಶೋಕಿಸುವ ಪರಿ. ಇಲ್ಲೊಂದು ಅಂಶ ನೆನಪಿಡಲೇ ಬೇಕು, ಸಖೀ ಗೀತವನ್ನು ಬರೆದದ್ದು ಅವರ ಪತ್ನಿಯಲ್ಲ, ಸಾಕ್ಷಾತ್ ಬೇಂದ್ರೆಯೇ. ಅಂದರೆ ಆ ತೊಳಲಾಟಗಳು .... ಸಖಿಯೆಂಬ ಭಾವದ ನಿರ್ವಚನ ಅವರನ್ನೂ ಕಾಡಿತ್ತೆ?  ಸಖಿಯೆಂಬ ಭಾವ ಕರೆಯುವವನಿಗಷ್ಟೆ ಇದ್ದರೆ ಸಾಲದು, ಆ ಸಖಿಯ ಮನದಲ್ಲೂ ತಾನು ಸಖಿಯೆಂಬ ಭಾವದ ಅನಾವರಣವಾಗಬೇಕು . ಅದಾಗದ ತೀವ್ರತೆ ಬೇಂದ್ರೆಯವರನ್ನೂ ತಟ್ಟಿರಬಹುದೇ? ಪರಂಪರಾನುಗತ ಪುರುಷಾಹಾಂಕಾರದ ಶೃಂಖಲೆ ಬೇಂದ್ರೆಯವರಿಂದಲೂ ಬಿಡಿಸಿಕೊಳ್ಳಲಾಗಲಿಲ್ಲವೇ? ಅಥವಾ ಹೆಂಡತಿಯನ್ನು ಸಖಿ ಎಂದು ಕರೆದದ್ದೇ ಆತ್ಮವಂಚನೆಯೇ,  ಎಲ್ಲೂ ಹಾಗೆನ್ನಿಸುವುದಿಲ್ಲ, ಒಂದು ವೇಳೆ ಹೆಂಡತಿಯನ್ನು ದಾಸಿ ಎಂದು ಕರೆಯ ಬೇಕೆನಿಸಿದ್ದರೂ ಹಾಗೆ ಕರೆಯಬಹುದಾಗಿದ್ದ ನಿರ್ಭೀತ ವ್ಯಕ್ತಿತ್ವ , ಮನಸ್ಥಿತಿ ಬೇಂದ್ರೆಗಿತ್ತು. ಇಲ್ಲಿ  ಪ್ರಾಮಾಣಿಕತೆಯ ಕೊರತೆಯೋ, ಒಲವಿನ ಅಭಾವವೋ ಎಂದೂ ನನಗೆ ಕಂಡಿಲ್ಲ. ಪರಂಪರಾನುಗತ ಗಂಡಿನ ಮನೋಭಾವವನ್ನು ಒಂದು ಮಟ್ಟಿಗಷ್ಟೇ ಮೀರಲು ಬೇಂದ್ರೆ ಶಕ್ತರಾದರಾ? ಇಲ್ಲಿ ನನಗೆ ಕಾಣಿಸುತ್ತಿರುವುದು ಅಪ್ಪಟ ದ್ವಂದ್ವ ಮನಸ್ಥಿತಿ.

ಹೆಣ್ಣಿಗೇನು ಬೇಕೆಂದು ಬೇಂದ್ರೆಯವರಿಗೆ ಚೆನ್ನಾಗಿಯೇ ಗೊತ್ತಿತ್ತು, ಹೆಣ್ಣಾಗಿ ಬರೆದ " ನಾನು ಬಡವಿ" ಅದಕ್ಕೊಂದು ಸುಂದರ ಉದಾಹರಣೆ.
" ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು,
ತೋಳುಗಳಿಗೆ ತೋಳ ಬಂಧಿ ಕೆನ್ನೆ ತುಂಬ ಮುತ್ತು.
ಕುಂದುಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು 
ಹೊಟ್ಟೆಗಿತ್ತ ಜೀವ ಫಲವ ತುಟಿಗೆ ಹಾಲುಜೇನು"
ಕಡೆಯ ಸಾಲಿನಲ್ಲಿ ಸಾಕ್ಷಾತ್ ರಸಋಷಿಯೆ ಆಗಿ ವಿಜೃಂಭಿಸಿ ಬಿಡುವ, ಈ ಭಾವಗಳನ್ನು ಇಷ್ಟು ತೀವ್ರವಾಗಿ ಹೇಳಿದ ಕವಿಯನ್ನೂ ಕಾಡುತ್ತಿದ್ದ ಈ ದ್ವಂದ್ವ ಆ ಕಾಲದ ಜನರ ನಡಾವಳಿಗಳಿಂದ ಹುಟ್ಟಿದ್ದಾ? ಹೆಂಡತಿಯನ್ನು ಸಖಿಯೆಂದು ಕರೆಯಬೇಕೆಂಬ , ಸಖಿಯನ್ನಾಗಿಸಿ ಬಾಳ ಸಾಗಿಸುವ ಹಂಬಲ... ಹೆಣ್ಣನ್ನು ಆಳದಿದ್ದರೆ ತಮ್ಮ ಗಂಡುತನದ ಬಗ್ಗೆ ಅಂದಿನ ಸಂಪ್ರದಾಯಸ್ಥ ಸಮಾಜ ತೋರಿಸಬಹುದಿದ್ದ ತಿರಸ್ಕಾರ ಬೇಂದ್ರೆಯವರನ್ನು ಈ ದ್ವಂದ್ವಕ್ಕೆ ದೂಡಿತ್ತಾ?  ಅದೇನೇ ಇದ್ದರೂ ಪತ್ನಿಯನ್ನು ಸಖಿಯೆಂದು ಕರೆಯುವ ಸಂಪ್ರದಾಯಕ್ಕೆ ನಾಂದಿ ಹಾಡಿದವರು ಕನ್ನಡದ ಕಾವ್ಯ ಪರಂಪರೆಯಲ್ಲಿ ಬೇಂದ್ರೆ ಎಂಬುದನ್ನು ಮರೆಯಲಾಗದು.

ಸಂಪ್ರದಾಯ ಬಿಡದ, ಎಲ್ಲೆಯನ್ನು ಮೀರದ, ಹಾಗೆಂದು ಶೃಂಗಾರವನ್ನು ಕಡೆಗಣಿಸಿ ಬರಡು ಬದುಕು ಸಾಗಿಸದ, ಆತ್ಮ ವಂಚನೆ ಮಾಡಿಕೊಳ್ಳದ, ಹಾಗೆಂದು ಯಾರೂ ಕೇಳುವವರಿಲ್ಲವೆಂದು ಸ್ವೈರವೂ ಇಲ್ಲದ ಅಪ್ಪಟ ನಾದಮೂಲದ ಬೇಂದ್ರೆಯವರ ಕಾವ್ಯ ಈ ಎಲ್ಲ ದ್ವಂದ್ವಗಳನ್ನೂ ಮೀರಿ ನನ್ನೆದೆಯಲ್ಲಿ ಭದ್ರವಾಗಿ ಬೇರು ಬಿಟ್ಟಿದೆ....ಯಾವಾಗಲೋ ಒಮ್ಮೊಮ್ಮೆ ಬೇಸತ್ತು ಕುಳಿತಾಗ ಅಲ್ಲೆಲ್ಲೋ ದೂರದಲ್ಲಿ ಬೇಂದ್ರೆ ಹಾಡುತ್ತಿರುತ್ತಾರೆ.
"ಹುಸಿನಗುತ ಬಂದೇವ, ನಸುನಗುತ ಬಾಳೋಣ, ತುಸು ನಗುತ ತೆರಳೋಣ
ಬಡನೂರು ವರುಷಾನ ಹರುಷಾದಿ ಕಳೆಯೋಣ ಯಾಕಾರೆ ಕೆರಳೋಣ"
ನನ್ನ ತುಟಿಯಂಚಿನಲ್ಲಾಗ ನಸುನಗೆ..............