Sunday, 12 February 2017

ಬೇಂದ್ರೆ - ಯರ್ಮುಂಜ ಎರಡು ಪದ್ಯಗಳು

ಯಾಕೆ ಕಾಡುತ್ತವೆ ಈ ಕವನಗಳು? ಅರಳಿಸುತ್ತಾ, ಯೋಚನೆಗೆ ಹಚ್ಚುತ್ತಾ, ಮೈಮರೆಸುತ್ತಾ, ನೋಯಿಸುತ್ತಾ, ಬೇಯಿಸುತ್ತಾ.... ಕಾಡುತ್ತಲೇ ಕಾಡುತ್ತಲೇ...  ಇವುಗಳನ್ನು ನಾನು ಮತ್ತೆ  ಕೈಗೆತ್ತಿಕೊಳ್ಳುವಂತೆ ಮಾಡುತ್ತವೆ. ಮತ್ತೆ ಓದುತ್ತೇನೆ, ಮತ್ತೆ ಮತ್ತೆ ಓದುತ್ತೇನೆ. ಮಗು ಅದೆಷ್ಟೇ ಹಟ ಮಾಡಿದರೂ, ದಣಿಸಿದರೂ ಆಪ್ಯಾಯವಾಗಿ ಕೈಗೆತ್ತಿಕೊಳ್ಳುವ ಅಮ್ಮನಂತೆ, ಅಮ್ಮ ಎಷ್ಟೇ ಬೈದರೂ, ತಳ್ಳಿದರೂ ಮತ್ತೆ ಅಮ್ಮನನ್ನು ಅಪ್ಪುವ ಮಗುವಂತೆ.

ಉತ್ಕಟ ಪ್ರೀತಿಯ ಹುಡುಕಾಟದ ಪದ್ಯಗಳೆಷ್ಟಿರಬಹುದು. ಬಯಸಿದ ಜೀವ ದಕ್ಕದೇ ಹೋದದ್ದು .. ಒಲಿದ ಜೀವ ದೂರಾಗಿ ನಿಂತದ್ದು... ಅಭೇದ್ಯ ಎನ್ನಿಸಿದ ಸಂಬಂಧವಿದ್ದ ಜೀವ ಕಣ್ಮರೆಯಾಗಿ ಹೋದದ್ದು ..
ನೂರಾರು? ಸಾವಿರಾರು? ಲಕ್ಷಾಂತರ?
ಇರಬಹುದೇನೋ.. ಹುಡುಕಾಟವೇ ಹಾಗೆ.. ಅದರಲ್ಲೂ ಪ್ರೀತಿಯ..ಪ್ರೀತಿಸಿದವನ..ಪ್ರೀತಿಸಿದವಳ ಹುಡುಕಾಟ ಅನವರತ... ಯಾರ ವಿರೋಧವನ್ನೂ ಲೆಕ್ಕಿಸದೇ.. ಎಲ್ಲ ಕಟ್ಟುಪಾಡುಗಳನ್ನೂ ಮೀರಲೆತ್ನಿಸುತ್ತಾ..
ಮೀರಲಾಗದೇ.. ಮೀರದಿರಲಾಗದೇ..

ಬಾರದಿರುವ ಪ್ರೇಮಿಯನ್ನು ಹುಡುಕುವ ಪದ್ಯಗಳಲ್ಲಿ ಥಟ್ಟನೆ ನೆನಪಾಗುವ ಪದ್ಯವೆಂದರೆ ಬೇಂದ್ರೆಯವರ ಇನ್ನೂ ಯಾಕ ಬರಲಿಲ್ಲವ್ವ . ಅದೊಂದು ಗತಿಸಿಹೋದ ಪ್ರಿಯಕರನ ನೆನಪಲ್ಲಿ ಪ್ರೇಯಸಿಯೊಬ್ಬಳು ಮಾಡುವ ಆಕ್ರಂದನದಂತೆ ಒಂದು ನಾಟಕಕ್ಕಾಗಿ ಬರೆದಿದ್ದಾರೆಂದು,ವೇಶ್ಯೆಯೊಬ್ಬಳು ತನ್ನ ಶ್ರೀಮಂತ ಗಿರಾಕಿ ಕೈ ತಪ್ಪಿ ಹೋಗಿದ್ದಕ್ಕೆ ಚಿಂತಿಸುತ್ತಾ ಗೋಳಾಡುತ್ತಿರುವ ಪದ್ಯವೆಂದೂ  ಕೆಲವರು ವಾದಿಸುತ್ತಿದ್ದುದನ್ನು ಕೇಳುವ ಹೊತ್ತಿಗಾಗಲೇ ನಾನು ಕುರ್ತಕೋಟಿಯವರ ವಿಮರ್ಶೆ ಓದಿದ್ದೆ. ಎಷ್ಟೇ ಪ್ರಯತ್ನಿಸಿದರೂ ಇಂದಿಗೂ ಆ ಪದ್ಯವನ್ನು ಅವರ ವಿಮರ್ಶೆಯ ಪ್ರಭಾವದಿಂದ ತಪ್ಪಿಸಿಕೊಂಡು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಲು ನನಗೆ ಸಾಧ್ಯವೇ ಆಗಿಲ್ಲ.

ಆ ಕವನದಲ್ಲಿ ಎಲ್ಲವನ್ನೂ ಅವಳೇ ಹೇಳುತ್ತಾ ಹೋಗುತ್ತಾಳೆ. ಅವನ ಮೋಹ, ಅವಳ ಪ್ರೇಮ..ಈ ಕವನದ ಮೊದಲ ಸಾಲಲ್ಲೇ .. . ಅವನೊಬ್ಬ ಬಂದಿಲ್ಲ .. ಅವಳು ಅವನಿಗಾಗಿ ಕಾಯುತ್ತಿದ್ದಾಳೆ .. ಪ್ರಶ್ನಿಸುತ್ತಿದ್ದಾಳೆ .. ಇನ್ನೂ ಎಂಬ ಪದದಲ್ಲೇ ಅವನ ಬರುವಿಕೆಯ ಕುರಿತ ಅವಳ ತಳಮಳ ಕಾತುರ ಹಂಬಲದ ಸ್ಪಷ್ಟ ಚಿತ್ರಣ ..  ಅವನು ಮೊದಲು ಅಲ್ಲಿಗೆ ಬಂದವನು.. ಅವಳನ್ನು ಭೇಟಿ ಮಾಡಿದವನು, ಅವನ ಬರುವಿಕೆಗಾಗಿ ಅವಳನ್ನು ಕಾಯುವಂತೆ ಮಾಡಿದವನು.. ಅಷ್ಟೇ ಅಲ್ಲ ,

ಅವನು ಅವಳೂರಿನವನಲ್ಲ .. ಹುಬ್ಬಳ್ಳಿಯವನು. ಅವಳದ್ದೂ ಹುಬ್ಬಳ್ಳಿಯೇ ಆಗಿದ್ದರೆ ಅವಳು ಅವನನ್ನು ಹಾಗೆ ಕರೆಯುತ್ತಿರಲಿಲ್ಲ. ಅವಳೂರಿನವನಲ್ಲದವನಿಗಾಗಿ ಅವಳು ಕಾಯುತ್ತಿದ್ದಾಳೆ .. ಅವನು ಬರುತ್ತಾನೆಂಬ ನಿರೀಕ್ಷೆಯೇಕೆ? ಎರಡನೆಯ ಸಾಲು ಉತ್ತರವೀಯುತ್ತದೆ ... ಅವನು ಬರೀ ಒಮ್ಮೆ ಮಾತ್ರ ಸಿಕ್ಕವನಲ್ಲ ಅವಳಿಗೆ. ವಾರದಲ್ಲಿ ಮೂರು ಬಾರಿ ಇವಳಿದ್ದಲ್ಲಿಗೆ ಬಂದವನು !

ಮೊದಲ ಎರಡು ಸಾಲಿನಲ್ಲಿ ಹೀಗೆ ಬೇಂದ್ರೆ ಅದೆಷ್ಟು ವಿವರಗಳನ್ನು ಕಟ್ಟಿಕೊಡುತ್ತಾರೆ ನೋಡಿ. ಅವನು ಬೇರೆ ಊರಿನವನು.. ಮೊದಲು ಅವಳ ಬಳಿ ಬಂದು ಅವಳನ್ನು ಅವನಿಗಾಗಿ ಕಾಯುವಂತೆ ಮಾಡಿದವನು. ಅವನು ಅವಳವನಲ್ಲ.  ವಾರದಲ್ಲಿ ಮೂರು ಬಾರಿ ಮಾತ್ರ ಬರುವ ನಲ್ಲ. ಉಳಿದ ದಿನಗಳ ಬಗ್ಗೆ ಅವಳೇನೂ ಹೇಳುವುದಿಲ್ಲ. ಅವಳೊಂದಿಗೆ ಪ್ರತಿದಿನ ಇರುವವನಲ್ಲ, ಬದುಕು ಹಂಚಿಕೊಂಡವನಲ್ಲ,  ಅವನಿನ್ನೂ ಬಂದಿಲ್ಲ !
 ಅವನೊಬ್ಬ ರಸಿಕ, ಒಳ್ಳೆಯ ದಿರಿಸು ಧರಿಸಿದವ.. ತುಂಬು ಮೀಸೆಯ ಮೋಹನಾಂಗ.. ಮಾತು ಮಾತಿಗೂ ನಗಿಸಿದವ .. ಕಚಗುಳಿಯಿಟ್ಟಂತೆ ಏನೋ ಅಂದ ಮಾತಿಗೆ ಮತ್ತಿನ್ನೇನೋ ಕಟ್ಟಿ ಪುಳಕ ಗೊಳಿಸಿದವ..ರಮಿಸಿದವ ...ಅವಳಿಗಾಗಿ ಹಾಡುವವ ... ಇನ್ನೂ ಬಂದಿಲ್ಲ.

ಇವಳೊಬ್ಬ ಜೋಗತಿ . ದೇವರಿಗೆ ಬಿಟ್ಟವಳು..ಇವನು ಬಂದಿದ್ದಾನೆ .. ಇವನೂ ಕೇವಲ ಕತ್ತಲ ವ್ಯವಹಾರ ಬಯಸಿ ಬಂದವನಲ್ಲ.. ಅವಳ ಮೇಲೆ ಅವನಿಗೂ ಮೋಹ .. ಅವನಿಗೆ ಇವಳು ಮೊದಲನೆಯವಳಲ್ಲ .. ಇವಳಿಗೆ ಅವನು ? ಗೊತ್ತಿಲ್ಲ.. ಅವನು ಕಸಬಿಯರನ್ನು ಬಸವಿಯರನ್ನು ದಾಟಿ ಬಂದಿದ್ದಾನೆ.... ಆ ಪಯಣದಲ್ಲಿ ಇವಳು ಸಿಕ್ಕಿದ್ದಾಳೆ.. ಜೋಗತಿಯರಿಗೆ ಮೂಗುತಿಯಂತಹಾ ಅವಳು ಅವನಿಗಿಷ್ಟವಾಗಿದ್ದಾಳೆ.. ಹಾಗಾಗಿಯೇ ವಾರದಲ್ಲಿ ಮೂರು ಬಾರಿ ಬಂದಿದ್ದಾನೆ... ಈಗ ಬರುತ್ತಿಲ್ಲ..!

ಇರು ಎಂದರೆ ಎದ್ದು ಹೊರಟವನು .. ಇವಳ ಮೊಗ ಬಾಡಿದೊಡನೆ ಇದ್ದು ರಮಿಸಿದವನು .. ಬೆರಳಿಗುಂಗುರವಿಟ್ಟು ಮೂಗಿಗೆ ನತ್ತಿಟ್ಟವನು.. ಜನ್ಮಜನ್ಮಕ್ಕೂ ಗೆಳೆಯನಾಗಿ ಬರುತ್ತೇನೆಂದವನು .. ಹುಟ್ಟಿನಿಂದಲೇ ನಗುಮೊಗ ಹೊತ್ತವನು ಈ ಗೆಳತಿಯನ್ನು ಎದೆಯ ಮೇಲಿಟ್ಟುಕೊಂಡವನು.... ಬಂದಿಲ್ಲ.. ಬರುತ್ತಿಲ್ಲ..!

ಏಕೆ ಬರುತ್ತಾನೆ .. ಬರುವುದಿಲ್ಲ ಅವನು.. ಕಸಭೆಯರನ್ನು ಬಸವಿಯರನ್ನು ಬಿಟ್ಟು ಬಂದವನು ಇವಳನ್ನೂ ಬಿಟ್ಟು ಮುಂದೆ ಸಾಗಿದ್ದಾನೆ. ಇವಳು ಅವನ ಡೆಸ್ಟಿನೇಷನ್ ಅಲ್ಲ. ಪಯಣದ ಭಾಗ... ಪಯಣದಲ್ಲಿ ಸಿಕ್ಕ ರಮ್ಯತಾಣ.. ಇವಳ ರೀತಿ ಪ್ರೀತಿ ಅವನಿಗೂ ಇಷ್ಟವಾಗಿದೆ. ಅವಳಿಗೇನು ಬೇಕೆಂದೂ ಇವನಿಗರಿವಿದೆ. ಅದನ್ನೆಲ್ಲ ಬಹಳ ಚಾಣಾಕ್ಷತೆಯಿಂದ ಮಾಡಿದ್ದಾನೆ.ಅವಳಿಗೆ ಗರತಿಯಾಗುವ ಆಸೆಯಿತ್ತಾ . ಇವನ ಸತಿಯಾಗುವ ಬಯಕೆ?? ಬ್ಯಾಳಿ ಮಣಿ ಬೇಕೇ ಎಂದು ಕೇಳಿದ್ದಾನೆ. ಜೋಗತಿಯರ ಕೊರಳಲ್ಲಿ ತಾಳಿಮಣಿ ಮಾತ್ರವಿರುತ್ತದೆ..ಪತ್ನಿಗಿರುವ ಬ್ಯಾಳಿ ಮಣಿ ಇರುವುದಿಲ್ಲ.. ಹಿಡಿಯಲ್ಲಿ ರೊಕ್ಕ ತೆಗೆದು ಕೊಡುವವನಂತೆ ನಟಿಸಿದ್ದಾನೆ.. ಅವಳು ಕೈ ಚಾಚಿದಾಗ ಕೈ ಹಿಡಿದಿದ್ದಾನೆ.. ಅದನ್ನವಳು ದೂರೆಂಬಂತೆ ಹೇಳುತ್ತಿಲ್ಲ.. ರೊಕ್ಕ ಸಿಗದಿದ್ದರೆ ಬಗ್ಗೆ ಖೇದವಿಲ್ಲ. ಅವನು ಕೈ ಹಿಡಿದಿದ್ದರ ಬಗ್ಗೆ ಪುಳಕವಿದೆ .. ಅದೆಲ್ಲವನ್ನೂ ಅವಳು ಅವನೆಷ್ಟು ತನ್ನನ್ನು ಪ್ರೀತಿಸುತ್ತಿದ್ದ ಎಂಬ ಚಿತ್ರಣ ಕಟ್ಟಿಕೊಡಲು ಹೇಳುತ್ತಿದ್ದಾಳೆ. ಅವಳಿಗೆ ಅವನ ಪ್ರೀತಿಯ ಬಗ್ಗೆ ಅನುಮಾನವೇ ಇಲ್ಲ.. ಚಹಾದ ಜೋಡಿ ಚೂಡದಂಗ ಎಂಬ ಉಪಮೆ ಅವನ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅವನ ಬಳಿ ಚಹಾ ಇದೆ. ಇವಳು ಚೂಡಾ ಅಷ್ಟೇ. ಚಹಾಕ್ಕೆ ಚೂಡಾ ಇದ್ದರೆ ಸೊಗಸೇ .. ಇಲ್ಲದಿದ್ದರೂ ನಷ್ಟವೇನೂ ಇಲ್ಲ. ಅಗತ್ಯದ್ದಲ್ಲ . ಅನಿವಾರ್ಯವಲ್ಲ .. ಅಭೇದ್ಯವೂ ಅಲ್ಲ ! ..  ಆದರೆ ಅವಳಿಗೆ ಅವನು ಎದೆಯಲ್ಲಿ ನೆಟ್ಟುಬಿಟ್ಟಿದ್ದಾನೆ  ಕಣ್ಣಿರದೆ ಅಸ್ತಿತ್ವದಲ್ಲೇ ಇರದ ಕಣ್ಣಿನೊಳಗಿನ ಗೊಂಬೆಯಂತೆ!!!. ಬೆರಳಿಗೆ ಉಂಗುರವಿಟ್ಟವನು, ಮೂಗುಬೊಟ್ಟಿಟ್ಟವನು, ಜೋಗತೇರಿಗೆ ಮೂಗುತಿ ಇದ್ದಂತೆ ನನಗೆ ನೀನು ಅಂದವನು.. ಒಂದು ದಿನ ಬರುವುದನ್ನೇ ನಿಲ್ಲಿಸಿಬಿಡುತ್ತಾನೆ. ವಾರದಲ್ಲಿ ಮೂರು ದಿನ ಬರುತ್ತಿದ್ದವನಿಗೆ ಮತ್ತೆ ಬರುವ ಅಗತ್ಯ ಕಾಣುವುದಿಲ್ಲ. ಅಷ್ಟಕ್ಕೂ ಅವನು ಕಳೆದುಕೊಂಡದ್ದಾದರೂ ಏನು? ಉಂಗುರ, ಮೂಗುಬೊಟ್ಟು!!

ಇಲ್ಲಿ ಅವನು ಬರುವುದು ಯಾರಿಗೂ ಗೊತ್ತಿಲ್ಲದ್ದೇನಲ್ಲ.. ಅವಳು ಅನುಭವಿಸುವ ವೇದನೆ ಯಾರಿಂದಲೂ ಅವಳು ಮುಚ್ಚಿಡುತ್ತಲೂ ಇಲ್ಲ. ಅವಳಿಗಿದರ ಪರಿವೆಯೇ ಇಲ್ಲ. ಪ್ರೀತಿಯ ಪರಾಕಾಷ್ಟೆಯ ಅಮಲಿನಲ್ಲಿ ಅವಳಿಗೆ ಯಾರೂ ಕಾಣುತ್ತಿಲ್ಲ.
ಅವಳ ಆರ್ತತೆ ನೋವು..ಸಂಕಟ.. ಬಯಸಿ ಸಿಕ್ಕವನು... ಯಾಕೆ ಬರುತ್ತಿಲ್ಲ.ಎಂಬುದೂ ತಿಳಿಯದ ಹೆಣ್ಣು ಅವನನ್ನು ಹುಡುಕುತ್ತಾ ಬೀದಿಗಿಳಿಯುತ್ತಾಳೆ..ಗೆಳತಿಯರ ಬಳಿ ಅಂಗಲಾಚುತ್ತಾಳೆ.. ಎಲ್ಲಿದ್ದಾನೆ ..ಎಲ್ಲಿದ್ದಾನೆ ಎಂಬ ಹಾದಿಬೀದಿಗಿಳಿದು ಹುಡುಕುವ ಆರ್ತತೆ .. ಪದ್ಯ ಮುಗಿಸಿ ಕೆಳಗಿಡುವಾಗ ಕಣ್ಣಲ್ಲೆರಡು ಹನಿ.. ಹುಬ್ಬಳ್ಳಿಯವನನ್ನು ಎಳೆದೊಯ್ದು ಅವಳ ಮುಂದೆ ನಿಲ್ಲಿಸುವ ಹಂಬಲ.

 ಕಂಬನಿ ಆರುವ ಮುನ್ನ ಇಲ್ಲಿ ಇನ್ನೊಂದು ಪದ್ಯವಿದೆ ನೋಡಿ.

ಯಾರಿಲ್ಲಿಗೆ ಬಂದರು ಕಳೆದಿರುಳು
ಏ ಗಾಳಿ,
ಆ ಕಥೆಯನೊರೆದು ಮುಂದಕೆ ತೆರಳು

ಮೊದಲೇ ಕವಿ ಹೇಳಿಬಿಡುತ್ತಾನೆ.. ಇಲ್ಲೊಂದು ಕಥೆಯಿದೆ .. ಅದೂ ಅಂತಿಂಥಾ ಕಥೆಯಲ್ಲ.. ಹಿಂದಿನ ರಾತ್ರಿಯ ಕತೆ.. ರಾತ್ರಿಯಲ್ಲಿ ಯಾರೋ ಬಂದ ಕತೆ.. ಅವಳೊಂದಿಗಿದ್ದ ಕತೆ..
ಆ ಕತೆಯನ್ನು ಕೇಳಬೇಕಿದೆ.. ಹೇಳಬೇಕಾಗಿರುವುದು ಅವನೋ ಅವಳೋ ಇಬ್ಬರೂ ಅಲ್ಲ.. ಆ ಪ್ರಶ್ನೆ ಕೇಳುತ್ತಿರುವುದು ಅವಳಾ ... ಸ್ಪಷ್ಟವಿಲ್ಲ.. ಉತ್ತರಿಸಬೇಕಾಗಿರುವುದು ಗಾಳಿ.. ಅದೊಂದೇ ಹಿಂದಿನ ರಾತ್ರಿಯ ಎಲ್ಲಕ್ಕೂ ಸಾಕ್ಷಿಯಾಗಿರುವುದು. ಅದೊಂದೇ ಅವರಿಬ್ಬರನ್ನೂ ಬಳಸಿ..ಪ್ರತಿಕ್ಷಣದ ಮಿಡಿತವನ್ನು ಅನುಭವಿಸಿ ತಣ್ಣಗೆ ಮೌನವಾಗಿರುವುದು. ಅದೀಗ ತುಟಿಬಿಚ್ಚಬೇಕಿದೆ..ಮೌನ ಮುರಿಯಬೇಕಿದೆ. ಹಾಗೆಂದೇ ಕವಿ ಕೇಳುತ್ತಿದ್ದಾನೆ ಏ ಗಾಳಿ ಆ ಕಥೆಯನೊರೆದು ಮುಂದೆ ತೆರಳು.

ಅಲ್ಲಿ ನಸುಕಿನ ಬೆಳಕಿದೆ.... ಬಳಲಿಕೆಯಿದೆ..... ಅಲ್ಲಿ ಸಂಭ್ರಮವಿದೆ.. ಶೋಕವಿದೆ.. ತಲ್ಲಣ ಮಡುಗಟ್ಟಿದೆ... ಸುಪ್ತ ಪುಳಕವಿದೆ.. ಅಲ್ಲೀನಿದೆ ಏನಿಲ್ಲ? ಅಲ್ಲೇನಾಯಿತು.. ಅವನು ಬರಿದೇ ಬಂದು ಹೋದನಾ? ಯಾಕೆ ಬಂದ? ಬಂದವನು ಅವಳ ಕಿವಿಯಲ್ಲಿ ಪಿಸುಗುಟ್ಟಿದ್ದು ಮಾತ್ರವಾ? ಅದೊಂದಕ್ಕೇ ಅವಳನ್ನಿಷ್ಟು ಬೇಯಿಸುವ ಶಕ್ತಿಯಿದೆಯಾ?

ಮೈ ಗದಗುಟ್ಟುತ್ತಿದೆ..ಮುಖ ಕಣ್ಣೀರಿನಲ್ಲಿ ತೊಯ್ದಿದೆ.. ಹಾಗಿದ್ದರೆ ಅದು ಅವಳಿಗೆ ಯಾತನೆ ನೀಡಿದ ರಾತ್ರಿಯಾ? ಹಾಗೆಂದು ತೀರ್ಮಾನಿಸುವ ಮುನ್ನವೇ ಮುಂದಿನ ಸಾಲು. ಯಾರೂ ಕಾಣದ ಮರೆಯಲ್ಲಿ ಕುಲುಕುಲು ಎನುವ ಮೆಲುನಗೆಯ ನೊರೆ.. ಗುನುಗುನಿಸುತ್ತಲೆ ಇರುವ ನಿನ್ನೆಯ ಹಾಡಿನ ದನಿ!! ಅದೊಂದು ಮಧುರ ಯಾತನೆ.. ಯಾರೂ ಕಾಣದಂತೆ ಮುಚ್ಚಿಟ್ಟುಕೊಳ್ಳುವ ದಿವ್ಯ ಅನುಭವ. ಕಣ್ಣೀರು ಬರುತ್ತಿರುವುದು ಆ ರಾತ್ರಿ ಸಂಭವಿಸಿದ ಘಟನೆಗಾ? ಅಥವಾ ಆ ದಿವ್ಯ ರಾತ್ರಿ ಕಳೆದೇ ಹೋಯಿತೆಂಬ ತುಮುಲಕ್ಕಾ??

ಎಷ್ಟು ಪ್ರಶ್ನೆಗಳು.. ಉತ್ತರಿಸುವವರಾರು...ಕಂಡವರಾರು.. ಯಾರನ್ನು ಕೇಳುವುದು? ಅಲ್ಲಿ ನೋಡಿಯೂ ನೋಡದಂತೆ ಪರಸ್ಪರ ಕೂಕಾಟವಾಡುತ್ತಿರುವುದು ಮರಗಳು.. ಹಿಂದಿನ ರಾತ್ರಿ ಕಂಡದ್ದನ್ನು ನೆನೆದು ಒಂದನ್ನೊಂದು ನೋಡಿಕೊಳ್ಳಲೇ ಸಂಕೋಚ ಪಡುವಂತೆ  .  ಕಂಡ ಭೂಮಿಗೆ ಮೈಮರೆವು.. ಹಿಂದಿನ ದಿನದ ಗುಂಗಲ್ಲೇ ಮೈಮರೆತು ನಿಂತವು ಗಿಡಮರಗಳು. ಅಸಹಾಯಕ ಕವಿ ಯಾರನ್ನು ಕರೆಯುತ್ತಾನೆ? ಮೈ ಸವರಿದ ತಂಗಾಳಿಯ ನೇವರಿಕೆ ಅವನನ್ನು ಸಂತೈಸುತ್ತಿದೆ ಹಾಗಾಗಿಯೇ ಗಾಳಿಯನ್ನು ಕೇಳುತ್ತಿದ್ದಾನೆ.. ಏ ಗಾಳಿ ಆ ಕಥೆಯನೊರೆದು ಮುಂದೆ ತೆರಳು...

ಇದಿಷ್ಟೇ ಪ್ರಶ್ನೆಗಳಲ್ಲ.. ಅವನೊಬ್ಬ ಅಲ್ಲಿ ಬಂದಿದ್ದಾನೆ.. ರಾತ್ರಿಯ ಕತ್ತಲಲ್ಲಿ.. ಅದೂ ಪೂರ್ಣ ಕತ್ತಲಲ್ಲ ಅಲ್ಲಿ ಬೆಳದಿಂಗಳಿದೆ.. ತುಸು ತೋರುವ ತೋರದಂತಿರವ ಬೆಳದಿಂಗಳು.. ಅಲ್ಲೊಂದು ರಮ್ಯ ಲೋಕ ಸೃಷ್ಟಿಯಾಗಿದೆ.. ಅದು ಏಕ ಕಾಲಕ್ಕೆ ಅವಳಲ್ಲಿ ಮೆಲುನಗೆಯನ್ನೂ ಕಣ್ಣೀರನ್ನೂ ಸೃಷ್ಟಿಸಬಲ್ಲದ್ದಾಗಿದೆ. ಅಂಥಾ ಮಾರ್ದವ ಕಥೆಯನ್ನು ಯಾರಿಂದಾದರೂ ಕೇಳಬೇಕಿದೆ.. ಗಾಳಿಯಲ್ಲದೇ ಮತ್ತಾರು ಅದನ್ನು ಒರೆಯುವವರು?

ನೆನೆದು ನೆನೆದು ಪುಳಕಗೊಂಡಿದ್ದು ಅವನ ಮೈಯಾ ಅವಳದಾ? ಹೇಳಲಾರದೇ ದ್ವನಿ ನಡುಗುತ್ತಿರುವುದು ಯಾರದು? ತನ್ನದೇ ಅನುಭವವೆಂಬಂತೆ ಚಿತ್ರಿಸಿದ ಕವಿಯ ಸ್ವಂತ ಅನುಭವವಾ? ಏನಾಯಿತೆಂದು ನೆನಪಿದೆ.. ಏನಾಯಿತೆಂಬ ಪೂರ್ಣ ಅರಿವಿಲ್ಲದ ಸ್ಮೃತಿ ವಿಸ್ಮೃತಿ..... ಏನೂ ಅರಿಯದ ಮುಗ್ಧೆಯ ಕಿವಿಯಲ್ಲಿ ಪಿಸುನುಡಿದು ನಡೆದವನಾರು?

ಅವಳ ಕಿವಿಯಲ್ಲಿ ಪಿಸುಗುಟ್ಟಲು ಅವನು ರಾತ್ರಿಯನ್ನೇಕೆ ಆರಿಸಿಕೊಂಡ ? ಹಗಲು ಬರಬಹುದಿತ್ತಲ್ಲ. ಅವನು ಬಂದ ಮಾತ್ರಕ್ಕೆ ಅವಳು ಅವನನ್ನೇಕೆ ಭೇಟಿಯಾದಳು? ಅವಳು ಮನಸ್ಸು ಮಾಡದಿದ್ದರೆ ಅವಳನ್ನು ಅವನು ಆ ರಾತ್ರಿಯಲ್ಲಿ ಭೇಟಿ ಮಾಡಲು ಸಾಧ್ಯವಿಲ್ಲ.. ಅವಳಿಗೆ ಅವನು ಬರುವುದು ಗೊತ್ತಿರಬೇಕು.. ಅವಳಿಗೆ ಅವನು ಬರುವುದು ಬೇಕಿರಬೇಕು.. ಅವಳು ತಾನಿದ್ದ ಸ್ಥಳದಿಂದ ಅವನೆಡೆಗೆ  ಬರಬೇಕು. ಅವಳರಿವಿಲ್ಲದಂತೆ ಬಂದವನಲ್ಲ ಅವನು. ಹಾಗಾದರೆ ಬೆಳದಿಂಗಳ ರಾತ್ರಿಯಲ್ಲಿ ಅವಳನ್ನು ಭೇಟಿ ಮಾಡಿದವ ಹಗಲಲ್ಲಿ ಏಕೆ ಉಳಿಯಲಿಲ್ಲ?

ಅವರಿಗೆ ಬೇಕಿತ್ತೋ ಬೇಡವೋ ಬೆಳಕಾಗುತ್ತಿದೆ.. ಮೂಡಲದ ಹಣೆ ಕೆಂಪು ಕೆಂಪು. ಮೈ ಸವರುವ ತಂಗಾಳಿ.. ನಸುಕಿನ ಬೆಳಕು.. ಎಷ್ಟು ರಮ್ಯ.. ನಸುಕು ಎಂದಿಗೂ ಉತ್ಸಾಹದ ಹೊತ್ತು.. ಪ್ರಫುಲ್ಲತೆಯ ಹೊತ್ತು.. ನಿದ್ರೆ ಕಳೆದು ಮೈ ಹಗುರಾಗುವ ಹೊತ್ತು.. ಆದರೆ ಅಲ್ಲಿ?? ಬಳಲಿಕೆಯಿದೆ.. ಅವನೊಂದಿಗೆ ನಿದ್ರೆಯಿಲ್ಲದೆ ಆ ರಾತ್ರಿ ಕಳೆದಿದ್ದಕ್ಕೆ ಅವಳಿಗೆ ಬಳಲಿಕೆಯಾ? ಅವನು ಬಂದು ಹೋದ ನೆನಪು ಅವಳಲ್ಲಿ ಹುರುಪು ತುಂಬಬೇಕಿತ್ತು.. ಉಲ್ಲಾಸದ ಹೆಜ್ಜೆಯಿಡಿಸಬೇಕಿತ್ತು.. ಇಲ್ಲಿ ಅದನ್ನು ಕವಿ ಹೇಳುತ್ತಿಲ್ಲ. ಅಲ್ಲಿ ಬಳಲಿಕೆಯಿದೆ.. ಅಂದರೆ ಅಲ್ಲಿ ಆ ಬೆಳದಿಂಗಳ ರಾತ್ರಿಯಲ್ಲಿ ಅವರಿಬ್ಬರ ಸಮಾಗಮ ನಡೆದೇ ಹೋಯಿತಾ? ಅಲ್ಲಿ ಅವರಿಬ್ಬರೂ ಒಂದಾದರಾ? ಹಾಗಿದ್ದರೂ ಅದು ಅವಳಲ್ಲಿ ಪುಳಕದ ಜೊತೆಜೊತೆಗೆ ಕಣ್ಣೀರನ್ನೇಕೆ ತಂದಿದೆ.

ಅಥವಾ ಆ ನಸುಕಿನ ಬೆಳಕು ಮತ್ತೇನನ್ನೋ ಹೇಳುತ್ತಿದೆಯಾ? ಆ ಕತ್ತಲಿನ ರಾತ್ರಿ ಎಂಬುದು ಅವಳ ಬದುಕಿನ ಸ್ಥಿತಿಯನ್ನು ಬಿಂಬಿಸುತ್ತಿದೆಯಾ? ಅವಳ ಕತ್ತಲ ಬದುಕಿನಲ್ಲಿ ಅವನ ಆಗಮನ ಪಿಸುಗುಟ್ಟುವಿಕೆ ಬೆಳದಿಂಗಳು ಮೂಡಿಸಿತಾ? ಆ ಬೆಳದಿಂಗಳ ರಾತ್ರಿಯಲ್ಲಿ ಅವನು ಅವಳ ಹೃದಯಕ್ಕೆ ತಂಪೆರೆದನಾ? ಅವನ ಹೆಸರು ಕೊರೆದನಾ? ನಸುಗತ್ತಲಿನಲ್ಲಿ ಅವಳ ಕತ್ತಲ ಬದುಕಿನ ಅರೆಕೊರೆ ಕಳೆದನಾ? ಆ ಪ್ರೀತಿ ಬೆಳಗಾದ ಕೂಡಲೇ ಕಾಣಬಾರದ್ದಾ? ಬೆಳಗಾಗಿದ್ದೇ ಅವಳ ಬಳಲಿಕೆಗೆ ಕಾರಣವಾ? ಮೈ ಗದಗುಟ್ಟತೊಡಗಿದ್ದು ಬೆಳಕಿನ ದೈನಂದಿನ ಜೀವನದಲ್ಲಿ ಯಾರಿಗಾದರೂ ತಿಳಿದೀತೆಂಬ ಬೆದರಿಕೆಗಾ? ಯಾರೂ ಕಾಣದ ಮರೆಯೊಳಗೆ ಅವನ ನೆನಪು.. ನೆನಪು ತಂದ ಮೆಲುನಗೆಯ ನೊರೆ.. ಗುನುಗುನಿಸುವಂತೆ ಆವರಿಸಿದ ಅವನ ಪ್ರೀತಿ...

ಅದು ಪ್ರೀತಿಯೇ.. ಕಣ್ಣೀರು ಪುಳಕ ಎರಡನ್ನೂ ಒಟ್ಟೊಟ್ಟಿಗೆ ತಂದ ಪ್ರೀತಿ.. ಸುಪ್ತ..ಗುಪ್ತ ಪ್ರೀತಿ. ಇಷ್ಟೊಂದು ತಲ್ಲಣ ಇವಳು ಅನುಭವಿಸುತ್ತಿರುವ ಸಮಯದಲ್ಲಿ ಅವನೇನು ಮಾಡುತ್ತಿದ್ದಾನೆ? ಅವನೆಲ್ಲಿಗೆ ಹೋಗಿದ್ದಾನೆ? ದೂರದಲ್ಲಿ ನಿಂತು ಮೌನವಾಗಿ ಪ್ರೀತಿಸುತ್ತಿದ್ದಾನಾ? ಇವಳಿಗಾಗಿ ಹಂಬಲಿಸುತ್ತಿದ್ದಾನಾ? ಹಗಲಲ್ಲಿ ಬರಲಾಗದ.. ಅವಳ ಕಣ್ಣೊರೆಸಲಾಗದ ತನ್ನ ದುಸ್ಥಿತಿಗೆ ತಾನೇ ನೋಯುತ್ತಿದ್ದಾನಾ? ಯಾರೋ ಮೋಹನ ಯಾವ ರಾಧೆಗೊ ಎಂಬಂತೆ ಪರಿತಪಿಸುತ್ತಿದ್ದಾನಾ? ಅವನೇಕೆ ಬರಬಾರದೀಗ... ಗಾಳಿ ತುಟಿ ಬಿಚ್ಚುತ್ತಿಲ್ಲ....

ಆ ನಸುಕಿನ ಬೆಳಕು ಮತ್ತಿನ್ನೇನೇನೋ ಸೂಚಿಸುತ್ತಿದೆಯಾ.. ಹಿಂದಿನ ರಾತ್ರಿ ನಡೆದಿದ್ದು ನಡೆಯಬಾರದಿತ್ತು ಎಂದು ಅರಿವಾದ ಬೆಳಕಾ? ಅದಾಗಬಾರದಿತ್ತು ಎಂಬ ಕಾರಣಕ್ಕೆ ಬಳಲಿಕೆಯಾ? ನಡೆಯಬಾರದ್ದು ಆಗಬಾರದ್ದು ಎಂದರೆ ಅವನು ಅವಳಿಗೆ ಪರಪುರುಷನಾ? ಆ ಘಳಿಗೆ ಅವರಿಬ್ಬರ ಕೈ ಮೀರಿದ್ದಾ? ಆ ಘಳಿಗೆ ಅವಳ ಬರಡು ಬದುಕಿನಲ್ಲಿ ಅವಳು ವಿಧಿಯಿಂದ ಕಸಿದ ಸುವರ್ಣ ಘಳಿಗೆಯಾ? ಸಂಭವಿಸಬಾರದಿತ್ತು.. ಅವನು ಬರಬಾರದಿತ್ತು ಎಂಬಲ್ಲೇ ಅವನಿದ್ದ ಕ್ಷಣಗಳ ನೆನಪು ಗುನುಗುನಿಸುವ ಆವರಿಸಿದ ಸುಖದ ಅಮಲೂ ಇದೆಯಾ? ಹಾಗಾಗಿಯೇ ಈ ಪುಳಕ ನಡುಕಗಳೆರಡೂ ಒಟ್ಟೊಟ್ಟಿಗೆ ಕಾಡುತ್ತಿದೆಯಾ?

ಗಾಳಿಯ ಮುಂದೆ ಗೋಗರೆಯುವವನ ಸ್ಥಿತಿ ಓದುಗನದೂ ಆಗಿ ಬಿಡುತ್ತದೆ. ಆ ಗಾಳಿ ಬಂದು ಕಥೆ ಹೇಳಬಾರದೇ ಎಂದು ಹಂಬಲಿಸುತ್ತಾನೆ. ಎಷ್ಟೆಲ್ಲಾ ಪ್ರಶ್ನೆಗಳು.. ಪ್ರತೀ ಪ್ರಶ್ನೆಯಲ್ಲೂ ಎಷ್ಟೆಲ್ಲಾ ಮುಚ್ಚಿಟ್ಟ ವಿವರಗಳು.. ಉತ್ತರ ದೊರಕಿಯೂ ದೊರಕದಂತೆ.. ದೊರಕದೆಯೂ ದೊರಕಿದಂತೆ.. ಉತ್ತರವನ್ನು ಕವಿತೆಯಾಗಲೀ ಗಾಳಿಯಾಗಲೀ ಹೇಳುವುದೇ ಇಲ್ಲ...

(ಇನ್ನೊಂದು ರೀತಿಯಲ್ಲಿ ಈ ಕವನವನ್ನು ವಿಶ್ಲೇಷಿಸಿದ್ದು ಓದಿದ್ದೆ. ಕವಿ ಕ್ಷಯದಿಂದ ಬಳಲಿ ಅತೀ ಸಣ್ಣ ವಯಸ್ಸಿನಲ್ಲಿ ಮರಣವನ್ನಪ್ಪಿದ್ದರಿಂದ ಅವರಿಗೆ ದೊರೆತ ಸಾವಿನ ಮುನ್ಸೂಚನೆ ಈ ಪಿಸು ನುಡಿ . ಅದರ ಕುರಿತು ಈ ತೊಳಲಾಟ.. ಸಾವಿನ ಸಿದ್ಧತೆ... ನಸುಕಿನ ಬೆಳಕಿನಲ್ಲಿ ಬಳಲಿಕೆಯೆಂದರೆ ಬದುಕ ಮುಂಜಾವಿನಲ್ಲೇ ಸಾವಿನ ನೆರಳು....  ಇದ್ದಿರಬಹುದೇನೋ.. ಆದರೆ ನನಗೆ ಈ ಕಲ್ಪನೆ ಒಪ್ಪಿಗೆಯಾಗಲೇ ಇಲ್ಲ. ಸಾವಿನ ಮುನ್ಸೂಚನೆ ಕೊಡುವುದು ಶೋಕವನ್ನು ಅದರ ನಂತರ ನಿರ್ಲಿಪ್ತತೆಯನ್ನು.. ಪುಳಕವನ್ನಲ್ಲ.. ಗುನುಗುನಿಸುವಂತೆ ಮಾಡುವ ಮೆಲುನಗೆಯ ನೊರೆಯನ್ನಲ್ಲ.. ಎಷ್ಟೇ ಸಮಾಧಾನ ಚಿತ್ತದಿಂದ ಎದುರಿಸುತ್ತೇನೆಂದರೂ ಗುಟ್ಟಾಗಿ ಯಾರಿಗೂ ಕಾಣದಂತೆ ಮುಗುಳುನಗೆಯನ್ನು ಮೂಡಿಸುವುದಿಲ್ಲ.. ಹೀಗಾಗಿಯೇ ನನಗೆ ಈ ಪದ್ಯ ಸಾವಿನ ಕುರಿತಾದ್ದು ಎನ್ನಿಸಲಿಲ್ಲ )
ಜನ್ಮಜನ್ಮಕ್ಕೆ ಗೆಳೆಯನಾಗಿ ಬರುತ್ತೇನೆಂದವನು, ತಾಳಿ ಮಣಿಗೆ ಬ್ಯಾಳಿ ಮಣಿ ಬೇಕೇ ಎಂದು ರೇಗಿಸುವವನು ಈ ಜನ್ಮದಲ್ಲೇ ಬರುವುದನ್ನು ನಿಲ್ಲಿಸಿ ಬಿಟ್ಟಾಗ  ವಾರಕ್ಕೆ ಮೂರು ಬಾರಿ ಬರುತ್ತಿದ್ದ ನಲ್ಲನನ್ನು ಹುಡುಕಲು ಬೀದಿಗಿಳಿಯುವ ಬೇಂದ್ರೆಯವರ ಕವನದ ನಾಯಕಿ, ಯಾರೊಂದಿಗೂ ಗುಟ್ಟು ಹಂಚಿಕೊಳ್ಳಲಾಗದೆ ಮೌನವಾಗಿ ಕಣ್ಣೀರು ಮಿಡಿಯುತ್ತಾ ರೋಮಾಂಚನಗೊಳ್ಳುತ್ತಾ ನಡುಗುತ್ತಾ ಬೆದರುತ್ತಾ ಮರೆಯಲ್ಲಿ ಮೈ ಮರೆಯುವ ಯರ್ಮುಂಜರ ನಾಯಕಿ..

ಒಬ್ಬಳು ತನ್ನ ಪ್ರೀತಿಯ ಸಣ್ಣಪುಟ್ಟ ವಿವರಗಳನ್ನೂ ಮರೆಯದೆ ಕಡೆಗಣಿಸದೆ ಜೋಪಾನವಾಗಿ ಕಾಪಿಟ್ಟು ಒಂದೊಂದನ್ನೂ ಕಣ್ಣೀರಲ್ಲಿ ತೋಯಿಸುತ್ತಾ ಪುಳಕಗೊಳ್ಳುತ್ತಾ ತನ್ನ ಮಾಯೆಯೊಳಗೇ ತಾನು ಸಿಲುಕುವ ಪ್ರೇಮಿ, ಮತ್ತೊಬ್ಬಳು ನಡೆದುದಾವುದನ್ನೂ ನೆನಪಿಟ್ಟು ಕೊಳ್ಳಲೂ ಆಗದಷ್ಟು ಪರವಶಳಾಗಿ ಮುಂದೆಂದೂ ಅದು ಸಿಕ್ಕಲಾರದೇನೋ ಎಂಬ ಭಾವದಡಿಯಲ್ಲೂ  ತನ್ನನ್ನು ತಾನೇ ಮೈಮರೆಯಬಲ್ಲ ಪ್ರೇಮಿ.   ಅವಳದ್ದು ದ್ವೈತ .. ಇವಳು ಅದ್ವೈತ.....

ಕಾಡುತ್ತಲೇ ಇರುವ ವಿರಹದ ಎರಡು ಮುಖಗಳು. !!

Tuesday, 3 January 2017

ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು..


ಸುಮಾರು ೫೫ನೇ ಇಸವಿಯ ಒಂದು ಮಧ್ಯಾಹ್ನ ಒಂದು ಪುಟ್ಟ ಮನೆಯಲ್ಲಿ ಮನೆ ಮಂದಿಯೆಲ್ಲ ಊಟಕ್ಕೆ ಕುಳಿತಿದ್ದಾರೆ. ಕುಂಕುಮದ ಹಣೆಯಲ್ಲಿ ಬೆವರು,ಅವಸರದಲ್ಲಿ ಹೆಣೆದ ಸೊಟ್ಟ ಜಡೆ, ಜಡೆಯಲ್ಲಿದ್ದ ಮಲ್ಲಿಗೆಗೆ ಮುಡಿಯೇರಿದ ಉತ್ಸಾಹವಿಲ್ಲ. ಮುಡಿದವಳಿಗೆ ಮುಡಿಯಲೇಬೇಕೆಂಬ ಹಟವೂ ಇದ್ದಂತಿಲ್ಲ. ಬಳೆ ತೊಟ್ಟ ಕೈಗಳು ಬಡಿಸುವುದರಲ್ಲಿ ಮಗ್ನವಾಗಿವೆ. ಇಂತಿಪ್ಪ ಸಮಯದಲ್ಲೇ ಮನೆಯೊಡೆಯನ ಆರ್ಭಟ ಕೇಳಿಬರುತ್ತದೆ. " ಲೇ ಅಪಭ್ರಂಶು ಬಾರೆ ಇಲ್ಲಿ." ಮುಂದಾಗುವುದು ಮನೆಮಂದಿಗೆಲ್ಲ ವೇದ್ಯ. ಆಕೆ ಮೌನವಾಗಿ ಬಂದು ಪಂಕ್ತಿಯ ಮುಂದೆ ಕುಳಿತುಕೊಳ್ಳುತ್ತಾಳೆ. ಆಪೋಶನ ತೆಗೆದುಕೊಳ್ಳಲೂ ಪುರುಸೊತ್ತಿಲ್ಲದ ಮನೆಯೊಡೆಯ ಎದ್ದುಬಂದು ಅನಾಮತ್ತಾಗಿ ಹುಳಿಯ ಪಾತ್ರೆಯನ್ನೆತ್ತಿ ಅವಳ ಮೇಲೆ ಸುರಿಯುತ್ತಾನೆ. ಅವಳು ಮುಡಿದ ಮಲ್ಲಿಗೆ, ಇಟ್ಟ ಕುಂಕುಮ, ತೊಟ್ಟ ಬಳೆ,ಸುತ್ತಿಕೊಂಡ ಸೀರೆ ಎಲ್ಲವೂ ಮಾಯವಾಗಿ ಹುಳಿಯ ರಾಜ್ಯಭಾರ. ಇಷ್ಟಕ್ಕೂ ಅವಳು ಮಾಡಿದ ತಪ್ಪಾದರೂ ಏನು? ಹುಳಿಗೆ ಕೊಂಚ ಉಪ್ಪು ಹೆಚ್ಚು.ಅವಳ ಮುಖ ಬಾಡಿತ್ತಾ,ಮನ ನೊಂದಿತ್ತಾ ಕಂಡವರಾರು? ಕೇಳಿದವರಾರು?ಎದ್ದು ಬಚ್ಚಲಿಗೆ ನಡೆಯುತ್ತಾಳೆ. ಶುಚಿರ್ಭೂತಳಿಗೆ ಮತ್ತೆ ಅಡುಗೆ ಮಾಡುವ ಗಡಿಬಿಡಿಯಲ್ಲೂ ಸುರಿದ ಹುಳಿಯನ್ನುಸ್ವಚ್ಛಗೊಳಿಸುವ ಮನೆ ಒರೆಸುವ ಕಾಯಕ. ಇವರಿಗೆಲ್ಲಾ ಬಡಿಸಿ ಇವರ ಹೊಟ್ಟೆ ತುಂಬಿದ ನಂತರವೇ ಆಗಬೇಕಾದ ಅವಳ ಊಟದ ಬಗ್ಗೆ ಕೇಳುವವರಾರು?                                                                                ಘಟನೆ ೨
ಇದು ಇತ್ತೀಚಿನದು. ಮನೆಗೆ ನೆಂಟರು ಬಂದಿದ್ದಾರೆ. ಮನೆಯೊಡೆಯನಿಗೆ ಅವರನ್ನು ಸತ್ಕರಿಸುವ ಸಂಭ್ರಮ. ಪ್ರೇಕ್ಷಣೀಯ ಸ್ಥಳಗಳಿಗೆ ಹೆಸರುವಾಸಿ ಊರದು. ಬಂದ ನೆಂಟರು ತಿಂಡಿ ತಿಂದ ತಟ್ಟೆಯಲ್ಲೇ ಕೈ ತೊಳೆದು ಊರು ನೋಡ ಹೊರಡುತ್ತಾರೆ. ತಟ್ಟೆ ತೆಗೆಯ ಹೊರಟವರನ್ನು ಮನೆಯೊಡೆಯ ತಡೆಯುತ್ತಾನೆ. " ಊರು ನೋಡಲು ಸಮಯ ಬೇಕು. ನಿಮ್ಮ ಕೈಲಿ ಮಾಡಿಸುವುದೇ? ಅವಳು ಮಾಡ್ಕೋತಾಳೆ ಬಿಡಿ ಬಿಡಿ". ಸಮಯ ಮೀರಿದ ೮ಗಂಟೆಯ ಬೆಳಗಿನಲ್ಲಿ ನೆಂಟರು ಹೊರಡುತ್ತಾರೆ. ಎಲ್ಲ್ಲವನ್ನೂ ತೆಗೆದು ತೊಳೆದು ಬಟ್ಟೆಬರೆ ಒಗೆದು ಮನೆ ಶುಚಿಗೊಳಿಸಿದ ಗೃಹಿಣಿ ತಾನು ತಿಂಡಿ ತಿನ್ನಲೂ ಪುರುಸೊತ್ತಿಲ್ಲದೆ ಅಡುಗೆಗೆ ಕೂರುತ್ತಾಳೆ. ' ನೆಂಟರು ಒಂದು ಗಂಟೆಗೆಲ್ಲಾ ಊಟಕ್ಕೆ ಬರುತ್ತಾರೆ. ಅವರಿಗೆ ಔತಣವಾಗಬೇಕು.' ಗಂಡನ ಆಜ್ಞೆ. ಅಡುಗೆ ಮಾಡುತ್ತಾ ಅಡಿಗಡಿಗೆ ಗಂಡನಿಗೆ, ಮಕ್ಕಳಿಗೆ ಕಾಫಿ ಕಷಾಯಗಳನ್ನು ಪೂರೈಸುತ್ತಾ ಇನ್ನೇನು ಬೋಂಡಾ ಕರಿಯಲು ಬಾಣಳೆಯಿಡುತ್ತಿರುವ ಹೊತ್ತಿಗೆ ಅದೋ ನೆಂಟರು ಬಂದೇಬಿಟ್ಟರು. ಏಸೀ ಕಾರಿನಲ್ಲಿ ಕುಳಿತು ಯಾರೋ ಕಟ್ಟಿದ ಕೋಟೆಕೊತ್ತಲ ನೋಡಿಬಂದ ನೆಂಟರಿಗೆ ಊಟಕ್ಕೆ ತಡವಾದಾಗ ಮನೆಯೊಡೆಯನ ಮನ ಮಿಡಿಯುತ್ತದೆ. ಅವರ ಹಸಿವಿನ ಅರಿವಿಲ್ಲದೆ ಅಡುಗೆ ನಿಧಾನ ಮಾಡಿದ ಹೆಂಡತಿಗೆ ಶಿಕ್ಷೆ ಬೇಡವೇ? ಅಡುಗೆ ಮನೆಯ ಪಂಪ್ ಸ್ಟೋವ್ ಸದ್ದಿನಲ್ಲಿ ಗಂಡನ ಹೊಡೆತದ ಸದ್ದು ನೆಂಟರ ಕಿವಿ ಮುಟ್ಟುವುದಿಲ್ಲ. ಇಂಗಿನ ಒಗ್ಗರಣೆಯ ಘಮ ಅವರ ಮೂಗುಗಳನ್ನು ಆಡರುತ್ತಿದೆ. ಆ ಮನೆಯೊಡೆಯನ ವಯಸ್ಸು ೭೮. ಮನೆಯೊಡತಿ(?)ಗೆ ೬೬.!!!!
ಈ ಘಟನೆಗಳನ್ನು ಸಧ್ಯಕ್ಕೆ ಇಲ್ಲಿಯೇ ಬಿಟ್ಟು ಬಿಡೋಣ. ನನಗಾಗ ೧೫ರ ಹರೆಯ. ಮೊದಲ ಕಥೆ ಪ್ರಕಟವಾದ ಪುಳಕ ಪೊಗರು ಎರಡೂ ಮೈಗೆ ಅಡರಿದ್ದ ಕಾಲ. ಒಂದು ದಿನ ನನ್ನ ಕೈಗೆ ಸಿಕ್ಕ ಕವನವೊಂದರ ಮೊದಲ ಸಾಲನ್ನು ಓದಿ ಬಿದ್ದು ಬಿದ್ದು ನಕ್ಕು ಬಿಟ್ಟೆ. ಜಗಲಿಯಲ್ಲಿ ಕುಳಿತು ಏನೋ ಓದುತ್ತಿದ್ದ ಅಣ್ಣನ(ತಂದೆ) ಮುಂದೆ ನಿಂತು ಪದ್ಯದ ಮೊದಲ ಸಾಲನ್ನು ಓದಿದೆ 'ನವಿಲೂರಿನೊಳಗೆಲ್ಲ ನೀನೇ ಬಲು ಚೆಲುವೆ ಆದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ' "ಇದೆಂಥಾ ಕವನ ಅಣ್ಣಾ ನವಿಲೂರಿನೊಳಗೆಲ್ಲ ಅವಳೇ ಬಹಳ ಚೆಲುವೆಯಂತೆ ಅದಕ್ಕೆ ಇವರಿಗೆ ನಾಳೆಯೇ ಮದುವೆಯಂತೆ. ಊರಿನ ಚೆಲುವೆಯನ್ನೇ ಮದುವೆ ಮಾಡಿಕೊಳ್ಳಬೇಕೆಂದು ಇತರರೂ ಹಟ ಹಿಡಿದರೆ ಗತಿಯೇನು. ಅವಳು ಚೆಲುವೆಯಲ್ಲದಿದ್ದರೇ ಇವರು ಮದುವೆಯಾಗುತ್ತಿರಲಿಲ್ಲವೋ......." ಮುಂದುವರೆಯುತ್ತಿದ್ದ ನನ್ನ ಮಾತುಗಳನ್ನು ನನ್ನಣ್ಣನ ಮಾತುಗಳು ತುಂಡರಿಸಿದವು. "ನೀನು ಎರಡನೇ ಸಾಲನ್ನು ಓದಿ ನಂತರ ಮೊದಲ ಸಾಲನ್ನು ಓದು". ಅರ್ಥವಾಗದೆ ಅವರ ಮುಖ ನೋಡಿದೆ. ಅವರೇ ಬಿಡಿಸಿ ಹೇಳಬೇಕಾಯಿತು. " ಹಾಗಲ್ಲ, ಅವನಿಗೆ ನಾಳೆ ಮದುವೆ ಹಾಗೆಂದೇ ನವಿಲೂರಿನೊಳಗೆಲ್ಲ ಅವಳು ಚೆಲುವೆ. ಅವನು ಅವಳಲ್ಲಿ ಆ ಚೆಲುವನ್ನು ಹುಡುಕುತ್ತಿದ್ದಾನೆ..ಕಾಣುತ್ತಿದ್ದಾನೆ. ಆ ಪದ್ಯದ ಸರಳತೆ ನಿನ್ನ ದಿಕ್ಕು ತಪ್ಪಿಸುತ್ತಿದೆ. ಅದನ್ನು ಓದುವ ರೀತಿಯೇ ಬೇರೆ. ಅವರ ಕೆಲವು ಪದ್ಯಗಳನ್ನಾದರೂ ಓದಿಕೋ. ನಂತರ ಮಾತನಾಡೋಣ" ಎಂದೂ ಖಡಕ್ಕಾಗಿ ಮಾತನಾಡದ ನನ್ನ ಅಣ್ಣನ ಮಾತುಗಳು ತುಸು ಚುರುಕಾಗೆ ಇತ್ತು.

ಅಂದಿನಿಂದ ಆರಂಭವಾದ ನರಸಿಂಹ ಸ್ವಾಮಿಯವರ ಪದ್ಯಗಳ ಓದು ಇಂದಿನವರೆಗೂ ಸಾಗಿದೆ. ನಿಜ ಹೇಳಬೇಕೆಂದರೆ ಹೆಣ್ಣನ್ನು ನರಸಿಂಹ ಸ್ವಾಮಿಯಷ್ಟು ಗೌರವಿಸಿದ ಕವಿಗಳು ನಮ್ಮಲ್ಲಿ ಬಹಳ ಕಡಿಮೆ. (ಅಥವಾ ಹೆಂಡತಿಯನ್ನು) . ನೀನಿದ್ದರೆ ಕೋಟಿ ರೂಪಾಯಿ ನಿನ್ನೆದುರು ನಾನು ಸಿಪಾಯಿ ಎನ್ನುವ ಮೂಲಕ ಗಂಡಿನ ಸಹಜ ಹಕ್ಕೆನಿಸಿರುವ ಬಿಂಕ ಬಿಗುಮಾನಗಳನ್ನು ಮೂಲೆಗೆಸೆಯುತ್ತಾರೆ. ಶಿಕಾರಿಪುರದ ಹಳ್ಳಿಯೊಂದರ ಹಸಿರು ದಾರಿಯಲ್ಲಿ ನಡೆವಾಗ, ಹರಿಹರಪುರದ ಹೊಳೆಯ ದಂಡೆಯ ಮೇಲೆ ಕುಳಿತು ಹರಿವ ಹೊಳೆಯಲ್ಲಿ ಕಾಲು ಅಲ್ಲಾಡಿಸುವಾಗ ಪದೇ ಪದೇ ನನಗೆ ನೆನಪಾಗುತ್ತಿದ್ದುದು ಅವರ ಪದ್ಯಗಳೇ. ಮಾರುದ್ದದ ನನ್ನ ಜಡೆಯಲ್ಲಿ ಮಲ್ಲಿಗೆ ದಂಡೆ ಏರಿದಾಗ ಶಾನುಭೋಗರ ಮನೆಯ ಹುಡುಗಿಯೇ ಆಗಿಬಿಡುತ್ತಿದ್ದೆ. ( ಕಾಕತಾಳೀಯ ಎಂದರೆ ನನ್ನಜ್ಜನೂ ಶಾನುಭೋಗರೇ) . ಒಂದು ದಿನ ಕುತೂಹಲಕ್ಕೆಂಬಂತೆ ಪುಸ್ತಕ ತೆಗೆದು ಪ್ರಕಟಣೆಯ ವರ್ಷ ನೋಡಿದಾಗ ನಿಜಕ್ಕೂ ನಿಬ್ಬೆರಗಾಗಿದ್ದೆ. ೧೯೪೨!!!!! ನನ್ನ ತಂದೆಗಾಗ ೭ ವರ್ಷ..ನನ್ನಮ್ಮ ಹುಟ್ಟಿದ ವರ್ಷ. ಇದು ನನ್ನಲ್ಲಿ ಇಂದಿಗೂ ಬೆರಗು ಮೂಡಿಸುತ್ತದೆ. ಈ ಲೇಖನದ ಆರಂಭದಲ್ಲಿರುವ ಎರಡು ಘಟನೆಗಳೂ ೧೯೪೨ರ ನಂತರ ಸಂಭವಿಸಿದ್ದು. ಮೊದಲನೆಯದು ನಾನು ಕೇಳಿದ ನನ್ನ ಬಂಧುಗಳ ಮನೆಯೊಂದರಲ್ಲೇ ನಡೆದ ಘಟನೆ. ಎರಡನೆಯದು ನಾನು ಕಣ್ಣಾರೆ ಕಂಡಿದ್ದು, ನೆಂಟರ ಗುಂಪಿನಲ್ಲಿ ನಾನೂ ಒಬ್ಬಳಾಗಿದ್ದು. ಹೆಣ್ಣನ್ನು ದೈಹಿಕವಾಗಿ ಮಾನಸಿಕವಾಗಿ ವೃದ್ಧಾಪ್ಯದಲ್ಲೂ ಶೋಷಿಸುತ್ತಿದ್ದ, ಅದು ಶೋಷಣೆಯಲ್ಲದೆ ತಮ್ಮ ಕರ್ತವ್ಯವೆಂದು ಹೆಣ್ಣುಗಳೂ ಒಪ್ಪಿಕೊಳ್ಳುವಂತೆ ಮಾಡಿದ್ದ ಕಾಲದಲ್ಲಿ ನರಸಿಂಹಸ್ವಾಮಿಯವರು ' ನನ್ನವಳು ನನ್ನೆದೆಯ ಹೊನ್ನಡನಾಳುವಳು" ಎಂದು ಸಂಭ್ರಮಿಸಿದರು. ನವಿಲೂರಿನೊಳಗೆಲ್ಲ ನೀನೇ ಬಲು ಚೆಲುವೆ ಎಂದು ಪುಳಕಗೊಂಡರು. ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿದೆ ಎಂದು ನಂಬಿದರು. ತಮ್ಮ ಮೈಮನದ ಹಸಿವು ತೀರಿದೊಡನೆ ಮುಖ ತಿರಿಗಿಸಿ ನಡೆವ, ಕನಿಷ್ಟ ಹೆಂಡತಿಯ ಹೊಟ್ಟೆಯ ಬಗ್ಗೆಯೂ ಯೋಚಿಸದ, ಕಾಳಜಿ ವಹಿಸದ ಗಂಡುಗಳ ಮಧ್ಯೆ ' ನಿನ್ನ ತಟ್ಟೆಯ ತುಂಬಾ ನೊರೆ ಹಾಲು ' ತುಂಬಿಸುವ ಭರವಸೆ  ನೀಡಿದವರು, ಪ್ರತಿಯಾಗಿ ಪ್ರೀತಿಯೊಂದನ್ನೇ ಅವಳಿಂದ ಬೇಡಿದವರು..  ನರಸಿಂಹ ಸ್ವಾಮಿಯವರನ್ನು ಹೆಣ್ಣು ಕುಲ ಇಂದಿಗೂ ನೆನೆಯುವುದು ಇಂತಹಾ ಕಾರಣಗಳಿಗೆ.

ಹಾಗೆಂದು ನರಸಿಂಹ ಸ್ವಾಮಿಯವರ ಕವನಗಳ ಗಂಡು ಹೆಂಡತಿಯ ದಾಸನಲ್ಲ, ಹೇಡಿಯಲ್ಲ, ಕೋಪತಾಪಗಳಿಲ್ಲದ ಸಂತನೂ ಅಲ್ಲ. ಸಿಟ್ಟಿಗೆದ್ದರೆ ಹೆಂಡತಿಯ ಹೂ ಮೂಡಿಸುವ ಶಾಸ್ತ್ರಕ್ಕೂ ಚಕ್ಕರ್ ಹೊಡೆಯುವವ. ಬಳೆಗಾರ ಬಂದು ಇವನಿಗೆ ದಮ್ಮಯ್ಯಗುಡ್ಡೆ ಹಾಕಬೇಕು. ದುಂಡುಮಲ್ಲಿಗೆಯ ದಂಡೆಯವಳು ಎಂಬುದನ್ನು ನೆನಪಿಸಬೇಕು. ಹೆಂಡತಿ ತೌರಿಗೆ ಹೊರಟರೆ ಸಿಡಿಮಿಡಿ ಗೊಳ್ಳುವವನು. ಪದೇ ಪದೇ ಕರೆಯದಿರಿ ಎಂದು ಮಾವನಿಗೆ ತಾಕೀತು ಮಾಡುವವನು. 'ಹೋಗಿ ಬರುವುದಕೆ ಎಲ್ಲ ತೌರುಮನೆ ಬಲು ಸೊಗಸು ಆರದಿರಲಿ ಅದರ ಬೆಳಕು. ಹಾಗೆಂದು ಹಗಲೆಲ್ಲಾ ಹಿಂಡಿದರೆ ಕಳುಹೆಂದು ನಿಮ್ಮೂರ ದಾರಿ ಬಳಸು.' ಎಂದು ಮಾವನಿಗೆ ಎಚ್ಚರಿಕೆ ಕೊಡುವವನು..ಅಳಿಯನೇ ಬೇಡ ನಿಮಗೆಂದು ಮುನಿಯುವವನು. ಹೀಗಿದ್ದರೂ ಮಗಳಿಗೆ ಕೋಪವಿಲ್ಲ. ಒಬ್ಬಳನೆ ಕಳುಹುವಿರಾ ಎಂದು ಸೂಚ್ಯವಾಗಿ ಮುಡಿದ ಹೂವನ್ನು ಮುಟ್ಟಿ ತುಂಟ ನಗೆ ಚೆಲ್ಲುತ್ತಾಳೆ. ಅವನ ಮುನಿಸಿನ ಮೂಲ ಇವಳಿಗೂ ಪ್ರಿಯವೇ. ದಾಂಪತ್ಯಕ್ಕೆ ಬೇಕಾದ ಹುಸಿಮುನಿಸು, ನಸುನಗೆ ಇದ್ದರೇನೇ ಸೊಗಸೆಂದು ಇಬ್ಬರಿಗೂ ಗೊತ್ತು.

ಅವರ ಒಂದಿರುಳು ಕನಸಿನಲಿ ಪದ್ಯದಲ್ಲಿ ಬರುವ ಸಾಲುಗಳನ್ನೇ ನೋಡಿ. " ಮಲ್ಲಿಗೆಯ ಮೊಗ್ಗುಗಳು ಮುಳ್ಳು ಬೇಲಿಯ ವರಿಸಿ ಬಳುಕುತಿರೆ ಕಂಪ ಸೂಸಿ" ಅಲ್ಲಿ ಮಲ್ಲಿಗೆಯ ಮೊಗ್ಗುಗಳಿಗೆ ಮುಳ್ಳು ಬೇಲಿಯನ್ನು ವರಿಸುವ ಅನಿವಾರ್ಯತೆ..... ಎಲ್ಲಿಯ ಮುಳ್ಳು..ಎಲ್ಲಿಯ ಮಲ್ಲಿಗೆಯ ಮೊಗ್ಗು..ನವಿರು ಕುಲದ ಇನ್ನೂ ಪೂರ್ತಿಯಾಗಿ ಅರಳದ ಮಲ್ಲಿಗೆ ತನ್ನ ಸಹಜ ಕೋಮಲತೆಯೊಂದಿಗೆ ಮುಳ್ಳು ಬೇಲಿಯನ್ನು ಸುತ್ತಿಕೊಂಡಿದೆ. ತನ್ನ ಪರಿಸ್ಥಿತಿಗೆ ಅದು ನೋಯುತ್ತಿಲ್ಲ. ನಲುಗುತ್ತಿಲ್ಲ. ಬಾಗಿ ಬಳುಕಿ ನಲಿಯುತ್ತಿದೆ ಅದೂ ಹೇಗೆ...ಕಂಪಚೆಲ್ಲುವ ಮೂಲಕ. ಮೊಗ್ಗನ್ನು ವರಿಸಿದ ಮುಳ್ಳಿನ ರೀತಿಯಾದರೂ ಎಂತಹದ್ದು. ತನ್ನ ಮುಳ್ಳನ್ನು ಮೊಗ್ಗಿಗೆ ತಾಗದಂತೆ ಕಾಯುತ್ತಾ ಅದಕ್ಕಿನಿತೂ ನೋವಾಗದಂತೆ, ಅದು ಬಳುಕುವಂತೆ ಕಾಪಾಡುತ್ತಿದೆ. ಮೊಗ್ಗನ್ನು ಹೂವಾಗುವಂತೆ ಕಾಪಿಡುತ್ತಿದೆ. ಮೊಗ್ಗಿಗೆ ಮುಳ್ಳಿನ ಜೊತೆ ನಲಿಯುವ ಸಂಭ್ರಮ, ಮುಳ್ಳಿಗೆ ಅದರ ನಲಿವನ್ನು ಕಂಡ ಸಾರ್ಥಕತೆ. ಓದುತ್ತಿದ್ದಾಗ ಪದೇ ಪದೇ ನನಗೆ ನೆನಪಾಗುವುದು ಅವರು ಈ ಕವನಗಳನ್ನು ರಚಿಸಿದ ಕಾಲಘಟ್ಟ. ಆ ಕಾಲದಲ್ಲೇ ಮಲ್ಲಿಗೆಯ ವನ ಅವರ ಮನ.

(ಮೊದಲೇ ಹೇಳಿಬಿಡುತ್ತೇನೆ ನಾನು ಅಡಿಗರ ಅಭಿಮಾನಿಯೂ ಹೌದು. ಇಲ್ಲಿ ನಾನು ಸೂಚಿಸುವ ಸಾಲುಗಳು ಆ ಪದ್ಯಕ್ಕಷ್ಟೆ ಸೀಮಿತ) ಒಲುಮೆಯೊಳಗೊಂದುನಾವು ನಮಗಿಲ್ಲ ನೋವು ಸಾವು ಎನ್ನುವ ಕವಿಯನ್ನು ಯಾವ ಮೋಹನ ಮುರಳಿಯ ಕರೆಯು ಕರೆಯುವುದಿಲ್ಲ. ಗಂಡನ್ನು ಮಾತ್ರ ಕಾಡುವ ಮೋಹನ ಮುರಳಿ ಹೆಣ್ಣನ್ನೇಕೆ ಕಾಡುವುದಿಲ್ಲ? ಒಂದು ವೇಳೆ ಹೆಣ್ಣಿಗೆ ಕಾಡಿದರೆ ಗತಿಯೇನು?  ' ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನಗಳನ್ನು ತನ್ನ ಹಕ್ಕೆಂಬಂತೆ ಅನುಭವಿಸುವ ಗಂಡಿಗೆ ಅವೆಲ್ಲವನ್ನೂ ತೊರೆದು ಮೋಹನ ಮುರಳಿಯ ಕರೆಗೆ ಓಗೊಡುವುದು ಹೊರಡುವುದು ಹಳೆಬಟ್ಟೆ  ಕಳಚಿದಷ್ಟೆ ಸುಲಭ. ಹಾಗೆ ಹೊರಡುವಾಗ ಅವನಿಗೆ ಯಾವ ಜವಾಬ್ದಾರಿಯೂ ಬಾಧಿಸುವುದಿಲ್ಲ.'ಒಲಿದ ಮಿದುವಾದ ಎದೆಯನ್ನು ಮೈಯನ್ನು ರಕ್ತ ಮಾಂಸದ ಬೀಸಿಡು ಸೋಂಕಿನ ಪಂಜರ ಎಂದು ಬಣ್ಣಿಸುವವನಿಗೆ ತನ್ನ ಮೈಯ್ಯೂ ಅದೇ ಪಂಜರ ಎನ್ನುವುದು ನೆನಪಾಗುವುದಿಲ್ಲ. ಆ ಪಂಜರದೊಳಗಿನ ಹೆಣ್ಣು ಜೀವದ ತುಡಿತ ಅವನಿಗೆ ತಾಕುವುದೇ ಇಲ್ಲ. .ಬೇಲಿಯೊಳಗೆ ಕುಣಿಯುತ್ತಿರುವ ಬಯಕೆಗಳೆಲ್ಲಾ ತೀರಿದ ಮೇಲೆ ಎದುರಿಗಿದ್ದವಳ ಭಾವನೆಗಳನ್ನೂ ಗಮನಿಸದೆ ಗಂಡು ತನಗಿನ್ನುಇವೆಲ್ಲಾ ಸಾಕು ಎಂದು ಶಸ್ತ್ರಸನ್ಯಾಸ ತೆಗೆದು ಕೊಳ್ಳುತ್ತಾನೆ. ಎದುರಿದ್ದವಳಅಸಹಾಯಕ ಪ್ರಶ್ನೆ ಕಿವಿಗೆ ಬೀಳದವನಿಗೆ ಇನ್ನೂ ಹುಟ್ಟದ ಅಲೆಗಳ ಮೂಕ ಮರ್ಮರ ಕಾಡುತ್ತದೆ. ಸಪ್ತಸಾಗರದಾಚೆ ಕಣ್ಣು ಹಾಯಿಸುತ್ತಾನೆ. ಇದ್ದಕ್ಕಿದ್ದಂತೆ ಕರೆಯುವ ಮೋಹನ ಮುರಳಿ ..  ಚಾಚುವ ಮಿಂಚಿನ ಕೈ ಹೆಣ್ಣಿನ ಅನುಭವಕ್ಕೆ ಬರಲು ಸಾಧ್ಯವೇ? ಅವಳಿಗಿರುವುದು ತನ್ನ ಒಲವಿತ್ತ ಜವಾಬ್ದಾರಿಯನ್ನು ನಿಭಾಯಿಸುವುದು ಮಾತ್ರ.  ಅಡಿಗರ ಈ ಅತ್ಯಂತ ಸೊಗಸಾದ ಕವನ ಏಕಪಕ್ಷೀಯ ಎಂದು ಅಡಿಗರ ಉತ್ಕಟ ಅಭಿಮಾನಿಯೂ ಆದ ನನಗೆ ಯಾವಾಗಲೂ ಅನ್ನಿಸುತ್ತಿರುತ್ತದೆ.
ನನ್ನ ಹೆಣ್ತನ ನರಸಿಂಹಸ್ವಾಮಿಯವರನ್ನು ಒಪ್ಪಿಕೊಳ್ಳುವುದು ಈ ಕಾರಣಗಳಿಗಾಗಿಯೇ. ಅವರು ತಾವು ಮಾಗಲು ಹೆಣ್ಣನ್ನು ಮೆಟ್ಟಿಲಾಗಿ ಬಳಸುವುದಿಲ್ಲ. ಅವಳ ಜೊತೆ ಜೊತೆಗೆ ಮಾಗುತ್ತಾರೆ. ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ ಗಂಗೆ ಇವರಿದ್ದಲ್ಲಿಗೆ ಬರುತ್ತಾಳೆ..ಅವಳ ಒಲುಮೆಯಿಂದ ಬಾಳು ಬೆಳಕಾಗುವಂತೆ ಮಾಡುತ್ತಾಳೆ. ಹಾಗೆಂದೇ ಅವಳು ಚಂದ್ರಮುಖಿ.

ಒಮ್ಮೆ ಕಲ್ಪಿಸಿಕೊಳ್ಳಿ.. ನಿಮ್ಮ ಮನೆಯಲ್ಲಿ ರಾಗದಲ್ಲೇ ಚಂದ್ರನ ತರುವಷ್ಟು ಸಾಮರ್ಥ್ಯವಿರುವ ನಾಗರಕುಚ್ಚಿನ ನಿಡುಜಡೆಯವಳು ಓಡಾಡುತ್ತಿದ್ದಾಳೆ. ಅವಳು ಮುಡಿದ ಮಲ್ಲಿಗೆಯ ಘಮ ನಿಮ್ಮ ಮನೆಮನವನ್ನುತುಂಬಿದೆ. ಚಿಕ್ಕ ಮನೆಯಲ್ಲೂ ಅಕ್ಕರೆಯ ದನಿಯಲ್ಲಿ ಸಕ್ಕರೆಯ ಮಾತಾಡುತ್ತಿದ್ದಾಳೆ. ಒಲುಮೆ ಅವಳ ಮಾತಲ್ಲಿ ನಡೆಯಲ್ಲಿ ಉಕ್ಕುತ್ತಿದೆ. ಒಂದಿಷ್ಟು ಒಲುಮೆಯನ್ನು ನೀವಿತ್ತರೆ ಸಡಗರದಲ್ಲಿ ಒಂದಾಗಿ ಬಾಳಲು ರತ್ನನೌಕೆಯಂತೆ ತೇಲಿ ಬರುತ್ತಾಳೆ.
ನಿಮಗಾಗ ಯಾವ ಮೋಹನ ಮುರಳಿಯ ಕರೆಯೂ ಕೇಳುವುದಿಲ್ಲ.


Friday, 18 November 2016

ಗಾಳಿ ಹೆಜ್ಜಿ ಹಿಡಿದ ಸುಗಂಧ...


ಎಷ್ಟೋ ಬಾರಿ ನಕ್ಕು ಕಲೆತು
ಮತ್ತೆಷ್ಟೋ ಪ್ರಶ್ನೋತ್ತರಗಳು ಕುಳಿತು
ಜೊತೆಜೊತೆಗೆ ನಡೆವಾಗ
ಮಾತು ಮಾತಿಗೆ ಮಲೆತು
ಹಾಗೀಗೇ ಓಡಾಡಿಕೊಂಡಿದ್ದ
ಇವೆರಡು ಕಣ್ಣು
ಅವತ್ಯಾಕೋ 
ಎಚ್ಚರ ತಪ್ಪಿ ಬಿದ್ದೆದ್ದು
ನಿನ್ನ ಕಣ್ಣ ಕಾಳಜಿಯ
ಕೊಳದಲ್ಲಿ ಹೊಕ್ಕು
ಮತ್ತೆಂದೂ ತೊರೆಯದ ಹಾಗೆ...

ಮತ್ತೆ ಮತ್ತೆ ನೋಟದ ಕರೆಂಟು
ಹರಿದು.... 
ಫಿಲಮೆಂಟು ಉದುರಿದ ಬಲ್ಬಿನಲ್ಲೂ
ದೀಪ ಉರಿದ ಜಾದು

ಇವತ್ತು ನೀನು ರಾಗವಾಗಿ ಹಾಡುತ್ತೀ...
"ಪ್ರಣತಿ ಇದೆ. ಬತ್ತಿ ಇದೆ.
ಜ್ಯೋತಿ ಬೆಳಗುವೊಡೆ 
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ..." ಎಂದು..

(ಪ್ರಣತಿ ಇದೆ ಬತ್ತಿ ಇದೆ... ಇದು ಅಲ್ಲಮನ ವಚನ. ವೆಂಕಟೇಶ ಕುಮಾರರ ದನಿಯಲ್ಲಿ ಹರಿದ ಸುಧೆ.)